ಜೋರುಗಾಳಿಯೂ ಹಾಗೂ ಮರಗಳ ಉರುಳುವಿಕೆಯೂ...........

ಜೋರುಗಾಳಿಯೂ ಹಾಗೂ ಮರಗಳ ಉರುಳುವಿಕೆಯೂ...........

  • ದಿನಾಂಕ ೨೧.೦೪.೨೦೧೦ ರ ಮಧ್ಯಾಹ್ನ ೩.೦೦ ಗಂಟೆಯ ಹೊತ್ತಿಗೆ, ಬೆಂಗಳೂರಿನ ಇತ್ತೀಚಿನ ದಿನಗಳಲ್ಲಿ ಅಪರೂಪ ಎನ್ನಬಹುದಾದ ಜೋರುಗಾಳಿ ಬೀಸಿತು. ಅದರ ಫಲವಾಗಿ ಸುಮಾರು ೮೦ ಮರಗಳು ಬುಡಮೇಲಾದವು. ವಾಹನಗಳಿಗೆ ಜಖಂ ಆಯಿತು. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾದವು. ಸಂಚಾರ ವ್ಯವಸ್ಥೆ ಸುಮಾರು ಹೊತ್ತು ಸ್ಥಗಿತಗೊಂಡಿತು.
  • ಇದಕ್ಕೆ ಎರಡು ಕಾರಣಗಳಿವೆ.

೧. ನೆಲದ ಮೇಲ್ಮಟ್ಟದಲ್ಲಿ ಬೇರನ್ನು ಹರಡುವ ಮರಗಳನ್ನು ಬೆಳೆಸುತ್ತಿರುವುದು.

೨. ರೋಗಗ್ರಸ್ತ / ದುರ್ಬಲ ಮರಗಳನ್ನು ಮಾನ್ಸೂನ್ ಪೂರ್ವವೇ ಗುರುತಿಸಿ, ಅವುಗಳನ್ನು ನಿಗ್ರಹಿಸುವ ಸಮಗ್ರ ಯೋಜನೆಯ ಕೊರತೆಯಿರುವುದು.

  • ನನ್ನ ಬಾಲ್ಯದ ಬೆಂಗಳೂರು ನಗರದ ರಸ್ತೆಯ ಇಕ್ಕೆಲಗಳಲ್ಲಿ ಹುಣಸೆ, ಮಾವು, ಬೇವು, ಸಂಪಿಗೆ, ನೇರಳೆ ಮರಗಳನ್ನು ಬೆಳೆದಿದ್ದರು. ವಿಶಾಲವಾಗಿರುವ ಸ್ಥಳದಲ್ಲಿ ಆಲ/ಅರಳಿ/ಅತ್ತಿ ಇತ್ಯಾದಿ ಬೃಹತ್ ಮರಗಳನ್ನು ಬೆಳೆದಿದ್ದರು.
  • ನಗರಾಭಿವೃದ್ಧಿಯ ಹೆಸರಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹುಣಸೆ, ಮಾವು, ಬೇವು, ಸಂಪಿಗೆ, ನೇರಳೆಗಳನ್ನು ಕಡಿಯಲಾಗಿದೆ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಒಂದೇ ಒಂದು ಸಂಪಿಗೆ ಮರವಿಲ್ಲ. ಬೇವಿನ ಮರದ ರಸ್ತೆಯಲ್ಲಿ ಒಂದು ಬೇವಿನ ಎಸಳೂ ದೊರೆಯುವುದಿಲ್ಲ. ನಾನು ಅಭಿವೃದ್ಧಿಯ ವಿರೋಧಿಯಲ್ಲ. ರಸ್ತೆಯನ್ನು ಅಗಲ ಮಾಡುವಾಗ ತೋರುವ ಮುತುವರ್ಜಿಯನ್ನು, ಮರಗಳನ್ನು ಮತ್ತೆ ಬೆಳೆಸುವುದರಲ್ಲಿ ತೋರದೇ ಇರುವುದು ನನಗೆ ಜುಗುಪ್ಸೆಯನ್ನು ಉಂಟುಮಾಡಿದೆ.
  • ಹಿಂದೆ ಜನರು ತಮ್ಮ ಮನೆಯ ಅಂಗಳದಲ್ಲಿ ಮಾವು, ಸೀಬೆ, ನೆಲ್ಲಿ, ತೆಂಗು, ಮಲ್ಲಿಗೆ, ಸಂಪಿಗೆಗಳನ್ನು ಬೆಳೆಯುತ್ತಿದ್ದರು. ಈಗ ಅಂಗಳಗಳು ಮಾಯವಾಗಿವೆ. ಅವುಗಳ ಜೊತೆಯಲ್ಲಿ ಮರಗಳೂ ಕೂಡ. ಕಾಂಕ್ರೀಟ್ ಕಟ್ಟಡಗಳು ತಲೆಯೆತ್ತಿವೆ.
  •  ೮೦-೯೦ ರ ದಿನಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗುಲ್ ಮೋಹರ್, ಗೋಲ್ಡ್ ಮೋಹರ್, ಜಕರಾಂಡ, ತಬೂಬಿಯ, ಖಸ್ ಖಸ್ ಮರಗಳನ್ನು ಕೆಲವೆಡೆ ಬೆಳೆದಿರುವರು. ಈ ಮರಗಳಲ್ಲಿ ಹೆಚ್ಚಿನವು (ಮುಖ್ಯವಾಗಿ ಗುಲ್ ಮೋಹರ್) ಮಣ್ಣಿನ ಮೇಲ್ಪದರಲ್ಲಿ ಬೇರನ್ನು ಬಿಡುತ್ತವೆ. ಹಾಗಾಗಿ ಇವು ಮಧ್ಯಮ ಪ್ರಮಾಣ ಗಾಳಿಯನ್ನು ತಡೆದುಕೊಳ್ಳದೆ ಉರುಳುತ್ತವೆ.
  • ಸ್ವದೇಶಿ ಮೂಲದ ಮಾವು, ಬೇವು, ನೇರಳೆಗಳನ್ನು ಬಿಟ್ಟು ವಿದೇಶಿ ಮೂಲದ ತಬೂಬಿಯ, ಜಕರಾಂಡ ಮುಂತಾದವನ್ನು ಬೆಳೆಯುವುದರಿಂದ ಪರಿಸರಕ್ಕೆ ಮಾರಕ ಹಾಗೂ ಮನುಷ್ಯನ ಆರೋಗ್ಯಕ್ಕೂ ತೊಂದರೆಯಾಗುತ್ತದೆ ಎಂಬ ತಿಳಿವಳಿಕೆ ನಗರಪಾಲಿಕೆಯವರಿಗೆ ಏಕಿಲ್ಲವೋ ತಿಳಿಯದು. ಒಂದು ಮರವೆಂದರೆ, ಮರ ಮಾತ್ರವಲ್ಲ. ಒಂದು ಮರವನ್ನೇ ನಂಬಿ ಹಲವು ಹಕ್ಕಿಗಳು, ಕೀಟಗಳು, ಬ್ಯಾಕ್ಟೀರಿಯ, ವೈರಸ್ ಮುಂತಾದ ಜೀವರಾಶಿಗಳು ಬದುಕಿರುತ್ತವೆ. ಆ ಮರ ನಾಶವಾದರೆ, ಅದರೊಡನೆ, ಅವನ್ನು ಆಶ್ರಯಿಸಿಕೊಂಡಿರುವ ಜೀವರಾಶಿಗಳೂ ನಾಶವಾಗುವ ಸಾಧ್ಯತೆಯಿರುತ್ತದೆ. ಅವು ಹೊಸ ಮರವನ್ನು ಆಶ್ರಯಿಸಿ ಬದುಕಲಾರವು. ಹಾಗೆಯೇ ನಮಗೂ ಹಾಗೂ ನಮ್ಮ ಹಿಂದಿನ ತಲೆಮಾರುಗಳಿಗೂ ಅಪರಿಚಿತವಾದ ಮರವನ್ನು ಬೆಳೆಸಿದಾಗ, ಆ ಮರದ ಹೂವುಗಳಿಂದ ಹೊರಡುವ ಪರಾಗಕಣಗಳು ನಮಗೆ ಹೊಸದಾಗಿರುವ ಕಾರಣ, ನಮ್ಮಲ್ಲಿ ಅಲರ್ಜಿಯನ್ನು ಉಂಟು ಮಾಡಬಲ್ಲವು (ಉದಾ: ಪಾರ್ಥೇನಿಯಂ). ಭೀಷ್ಮನೆಗಡಿ, ಅಸ್ತಮ ಮುಂತಾದವು ತಲೆದೋರಬಹುದು. ಹಾಗಾಗಿ ಒಂದು ವಿದೇಶಿ ಮರವನ್ನು ನಮ್ಮಲ್ಲಿ ನೆಡುವ ಮೊದಲು ನೂರು ಬಾರಿ ಯೋಚಿಸಬೇಕು. ಅಂತಹ ವಿಚಾರ ಬೆಂಗಳೂರಿನಲ್ಲಿ ತಬೂಬಿಯಾದಿಗಳನ್ನು ನೆಡುವ ಮೊದಲು ನಡೆದಿತ್ತೇ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ.
  • ನನ್ನ ಪ್ರಾರ್ಥನೆ ಇಷ್ಟೆ. ಬೆಂಗಳೂರಿನ ದೊಡ್ಡ ದೊಡ್ಡ ಮರಗಳನ್ನು ಕಡಿದಾಗಿದೆ. ಮರಗಳನ್ನು ನೆಡುವ ಕಾರ್ಯಕ್ರಮವು ಒಂದು ಚಳುವಳಿಯ ರೂಪದಲ್ಲಿ ಆರಂಭವಾಗಬೇಕಿದೆ. ಒಂದು ವೇಳೆ ಆ ಚಳುವಳಿ ಆರಂಭವಾದರೆ, ಆಗ ನಾವು ನಮ್ಮ ಸ್ಥಳೀಯ ಮರಗಳಾದ ಮಾವು, ಬೇವು, ಹುಣಸೇ, ನೇರಳೆ ಇತ್ಯಾದಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನೆಡುವುದು ಒಳ್ಳೆಯದ್ದು. ನೀವೇನು ಹೇಳುತ್ತೀರಿ?

-ನಾಸೋ

Rating
No votes yet