ಜ್ಞಾನೋದಯ...
ನಿನ್ನೆ ಜ್ಞಾನೋದಯವಾಯ್ತು.
ಜ್ಞಾನೋದಯವಾದ ಮೇಲೆ ಗೊತ್ತಾಯ್ತು, ಹೌದಲ್ಲಾ ಇದು ಇಷ್ಟೆ, ಯಾಕೆ ಗೊತ್ತಾಗ್ಲಿಲ್ಲ ಅಂತ.
ಬಹುಶ: ಎಲ್ಲರಿಗೂ ಜ್ಞಾನೋದಯವಾದ ಮೇಲೆ ಹೀಗೆಯೆ ಅನ್ನಿಸುತ್ತೆ ಅನ್ಸುತ್ತೆ. ಯಾಕೆಂದರೆ, ಜ್ಞಾನೋದಯವಾದಾಗ ಗೊತ್ತಾಗೋ ವಿಷಯಗಳು ತುಂಬಾ ಸರಳವಾದವುಗಳು ಆಗಿರುತ್ತವೆ. ಆಮೇಲೆ ಅದು ನಮಗೆ ಇದುವರೆಗೂ ಗೊತ್ತಿದ್ದ ವಿಷಯವೇ ಆಗಿರುತ್ತೆ ಅನ್ನೋದು ವಿಪರ್ಯಾಸ. ಈ ಜ್ಞಾನೋದಯ ಎಲ್ಲಿ, ಏನು, ಎತ್ತ ಅಂತ ಹೊರಟರೆ, ಸಿಗುವ ಮೂಲ ಕಾರಣ ಕಳೆದವಾರ ಕೈಗೊಂಡ ವಿಶ್ರಾಂತಿಯಿಲ್ಲದ ಪ್ರಯಾಣಗಳು. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಗಿದ್ದರೆ, ನನಗೆ ಸಿಮೆಂಟಿನ ಟೆರ್ರೇಸಿನ ಕೆಳಗೆ ಅಂದರೆ ನಮ್ಮ ಬಾಡಿಗೆ ಮನೆಯೊಳಗೇ ಆಗಿದ್ದು. ಅಚ್ಚರಿ ಅನ್ನಿಸಿದರೂ ಇದು ಸತ್ಯಾ ರೀ! ಹೀಗೂ ಉಂಟು! ಬಾಡಿಗೆ ಮನೆಯಲ್ಲಿ ಜ್ಞಾನೋದಯ!
ಶುಕ್ರವಾರ ರಾತ್ರಿಯಿಂದ ಬಸ್ಸು, ರೈಲು, ಕಾರು ಅಂತ ವಿವಿಧ ವಾಹನಗಳಲ್ಲಿ ಸೋಮವಾರ ಬೆಳಿಗ್ಗೆಯವರೆಗೆ ನಿದ್ದೆಗೆಟ್ಟು ಕೈಗೊಂಡ ಪ್ರಯಾಣದಿಂದ ಸುಸ್ತಾಗಿದ್ದರೂ ಬೆಂಬಿಡದ ಕೆಲಸದ ನಿಮಿತ್ತ ಕಛೇರಿಗೆ ಬಂದವನಿಗೆ ಸುಸ್ತು ವಿಪರೀತ ಆವರಿಸಿತ್ತು. ಮಧ್ಯಾಹ್ನ ಊಟವಾದ ಮೇಲೆ ನಮ್ಮ ಮ್ಯಾನೇಜರ್ಗೆ, ಸುಸ್ತಾಗಿದೆ ಮನೆಗೆ ಹೋಗ್ತೀನಿ ಅಂತ ಹೇಳಿದ್ದ ನಾನು, ಕಾಲ್ಮೇಲೆತ್ತಿದರೂ ಸುತ್ತಿಕೊಳ್ಳುವ ಹಾವಿನ ಹಾಗೆ ಹೋಗಲು ಆಗದ ಪರಿಸ್ಥಿತಿಯನ್ನು ಕೆಲಸ ಎಂದಿನಂತೆ ತಂದಿತ್ತು. ಅದೇ ಸುಸ್ತಿನಲ್ಲಿ ಕೆಲಸ ಮಾಡಿ, ಏಳು ಮೂವತ್ತಕ್ಕೆ ಮನೆಗೆ ಬಂದವನೆ ನನ್ನನ್ನೆ ಕಾಯುತ್ತಿದ್ದಂತಿದ್ದ ಹಾಸಿಗೆಯ ನೋಡುತ್ತಲೇ ದಣಿದಿದ್ದ ಮೈಯನ್ನು ಚೆಲ್ಲಿ ಮಲಗಿದವ, ಕಣ್ಬಿಟ್ಟಾಗ ಮುಂಜಾನೆ ನಾಲ್ಕು ಘಂಟೆಯಾಗಿತ್ತು. ಅರಿವಿಲ್ಲದೆ ವರಾಂಡದ ಲೈಟು, ಬೆಡ್ಡು ರೂಮಿನ ಲೈಟು ಹಾಕಿಕೊಂಡು, ತಲಬಾಗಿಲಿನ ಒಂದೇ ಒಂದು ಚಿಲಕಹಾಕಿಕೊಂಡು ನಿದ್ದೆ ಹೋಗಿದ್ದೆ. ಎದ್ದು ಎಲ್ಲಾ ಲೈಟ್ಸ್ ಕಳೆದು ಊಟ ಮಾಡದೆ ಮಲಗಿದ ಪರಿಣಾಮ ಬಂದಿದ್ದ ಹಸಿವನ್ನು ಲೆಕ್ಕಿಸದೆ ಮತ್ತೆ ಮಲಗಿದವ ಕಣ್ಬಿಟ್ಟಿದ್ದು ಕೆಲಸದವಳು ಒಂದೇ ಸಮನೆ ಬಾಗಿಲು ಬಡೆದಾಗ, ಅದೂ ೭.೩೦ಕ್ಕೆ. ನನಗೂ ನಂಬಲು ಸಾಧ್ಯವಾಗಲಿಲ್ಲ, ಎಷ್ಟೊಂದು ವರುಷಗಳಾಗಿದ್ದವು ಈ ತರಹ ೧೨ ಘಂಟೆಗಳ ಕಾಲ ಒಂದೇ ಸಮನೆ ನಿದ್ದೆ ಮಾಡಿ. ಹಲವಾರು ದಿನಗಳ ಹಗಲು-ರಾತ್ರಿ ಕೆಲಸ, ಜೊತೆಗೆ ಈ ವಾರದ ದೂರದ ಪ್ರಯಾಣ ದೇಹವನ್ನು ದಣಿವಿಗೆ ಸೋಲುವಂತೆ ಮಾಡಿತ್ತು.
ಸೋತು ಗೆದ್ದವನಂತೆ ಸುಖವಾದ ನಿದ್ರೆಯಿಂದ ಎದ್ದಿದ್ದ ನನಗೆ ಮನದಲ್ಲಿ ಒಂದು ರೀತಿ ಸಮಾಧಾನವಿತ್ತು. ದೇಹಕ್ಕೆ ಒಳ್ಳೆಯ ವಿಶ್ರಾಂತಿ ತುಂಬಾ ದಿನಗಳಾದ ಮೇಲೆ ಸಿಕ್ಕಂತಾಗಿತ್ತು. ಅದೇ ಖುಷಿಯಲ್ಲಿದ್ದ ನನ್ನ ಮನಕೆ ಬಂದಂತಹ ಹಲವಾರು ಯೋಚನೆಗಳಲ್ಲಿ ಒಂದು ತುಂಬಾನೆ ಪ್ರಮುಖವಾದದ್ದಾಗಿತ್ತು. ಅದೇ ಬರವಣಿಗೆಯ ಬಗ್ಗೆ. ಇಷ್ಟುದಿನ ಹೆಂಡತಿ ಮತ್ತು ಮಗಳು ಇಲ್ಲಿ ಇದ್ದಾಗ, ಬರೆಯಲು ಸಮಯ ಸಿಗ್ತಾಯಿಲ್ಲ, ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲ್ಸ, ಮನೆಗೆ ಹೋದ್ಮೇಲೆ ಮಗಳು ಕೈಬಿಡಲ್ಲ. ಹಾಗಾಗಿ ಒಂದೂ ಬರಹ ಬರೆಯಲು ಆಗ್ತಾಯಿಲ್ಲ ಅಂತ ನನ್ನಷ್ಟಕ್ಕೆ ನಾನೆ ಸಮಜಾಯಿಷಿ ಇದುವರೆಗೂ ಕೊಡ್ತಾಯಿದ್ದೆ. ಇದರಿಂದ ನನಗೆ ನಾನೇ ಮೋಸಮಾಡಿಕೊಳ್ತಾಯಿದ್ದೆ ಅಂತ ಈವತ್ತಿನವರೆಗೂ ಗೊತ್ತಾಗಿರಲಿಲ್ಲ. ಯಾಕೆಂದರೆ ನಾನು ಕೊಡುತ್ತಿದ್ದ ಸಮಜಾಯಿಷಿಗೆ ಉತ್ತರ ಕೊಡಲಾಗದ ಪರಿಸ್ಥಿತಿಯನ್ನ ನಾನೇ ತಂದುಕೊಂಡಿದ್ದೆ. ಹೆಂಡತಿ ಮತ್ತು ಮಗಳನ್ನು ಅವರ ತವರು ಮನೆಗೆ ಕಳುಹಿಸಿ ಬಂದು ಒಂದು ವಾರದ ಮೇಲೆಯಾಗಿದ್ದರೂ ಒಂದೇ ಒಂದು ಬರಹ ನನ್ನಿಂದ ಮೂಡಿಬಂದಿಲ್ಲ! ತಲೆಯಲ್ಲಿ ಮಿಂಚಂತೆ ಬಂದಿದ್ದ ಆಲೋಚನೆಗಳಿಗೆ ಪದರೂಪ ಕೊಡಲು ನನ್ನಿಂದಾಗಿರಲಿಲ್ಲ.
ಹಾಗಾದ್ರೆ ಎಲ್ಲಿ ಸಮಸ್ಯೆ, ಏನು ಸಮಸ್ಯೆ?
ಸಮಸ್ಯೆ ನಾನೇ! ಹೌದು, ನಾನೇ ಸಮಯವನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಲಾಗದೆ ಕಾರಣಗಳನ್ನು ಹುಡುಕಿ, ಅದನ್ನೇ ಕೇಳಿದವರಿಗೆ ಹೇಳಿ, ಕೇಳಿದ ನನ್ನ ಮನಸ್ಸಿಗೂ ಹೇಳಿ ನನಗೇ ನಾನೆ ಸಮಾಧಾನ ಪಡಿಸಿಕೊಳ್ತಾಯಿದ್ದೆ. ಸರಿಯಾಗಿ ಸಮಯ ವಿನಿಯೋಗಿಸಿಕೊಳ್ಳುವುದು ಹೇಗೆ ಅಭ್ಯಾಸವೋ, ಹಾಗೆಯೇ ಸರಿಯಾಗಿ ಸಮಯ ವಿನಿಯೋಗಿಸಿಕೊಳ್ಳದೇ ಇರುವುದು ಸಹ ಒಂದು ಅಭ್ಯಾಸ. ಈ ಅಭ್ಯಾಸ ನನಗೆ ನಾನೆ ಅಭಾಸಗೊಳ್ಳುವಂತೆ ಮಾಡಿದೆ.
ಇದರಿಂದ ಹೊರಬರಲು ಮಾಡಿದ ಪ್ರಯತ್ನವೇ ಈ "ಜ್ಞಾನೋದಯ"
ಕೊನೆಯಲ್ಲಿ "“Knowing is not enough, we must APPLY. Willing is not enough, we must DO.”
"ವಿಷಯ ಗೊತ್ತಿದ್ರೆ ಸಾಲದು, ಅದನ್ನು ಪಾಲಿಸ ಬೇಕು; ಮಾಡಬೇಕೆಂಬ ಅಭಿಲಾಷೆ ಇದ್ರೆ ಸಾಲದು ಮಾಡಬೇಕು".
~ಅಮ(ಬ)ರ(ಹ)