ಝಾನ್ಸಿಯ ರಾಣಿ, ಮಡಿವಾಳದ ರಾಜ

ಝಾನ್ಸಿಯ ರಾಣಿ, ಮಡಿವಾಳದ ರಾಜ

ಇತ್ತೀಚಿಗೆ ಝಾನ್ಸಿಯ ರಾಣಿ ಕತೆಯೂ ಹಿಂದಿವಾಹಿನಿಯೊಂದರಲ್ಲಿ ದೈನಂದಿಕ ಧಾರಾವಾಹಿಯಾಗಿ ಬರುತ್ತಿದೆ. ಆ ಲಕ್ಷ್ಮೀಬಾಯಿಯ ಕತೆ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಆದ್ದರಿಂದ ಈ ಧಾರಾವಾಹಿಯನ್ನು ನಾನು ತಪ್ಪದೇ ವೀಕ್ಷಿಸುತ್ತಿದ್ದೆ. ಈ ಧಾರವಾಹಿಯು ಸೋಮವಾರದಿಂದ-ಶುಕ್ರವಾರದವರೆಗೆ ಪ್ರತಿರಾತ್ರಿಯೂ ಭಿತ್ತರಿಸಲ್ಪಡುತ್ತದೆ. ಇದೇ ದಿನಗಳಲ್ಲಿ, ಇಂಟರನೆಟ್ ನಲ್ಲಿ ಅವಳ ಬಗ್ಗೆ ಓದಿ ತಿಳಿದುಕೊಳ್ಳುತ್ತಿರುವೆನು ಸಹ. ಝಾನ್ಸಿ, ರಾಣಿ ಲಕ್ಷ್ಮೀಬಾಯಿಯ ಗಂಡನ ರಾಜ್ಯ ; ಮಹಾನ್ ಯೋಧಳ ನಾಡು.


ಮಾರ್ಚ್ ೧೮೫೮ ರಲ್ಲಿ ಬ್ರಿಟಿಷರು ಝಾನ್ಸಿಯ ಮೇಲೆ ಯುದ್ದವನ್ನು ಘೋಷಿಸಿದರು. ಶರಣಾಗಲು ಒಪ್ಪದ ರಾಣಿ ತನ್ನ ಸೈನೆಯೊಂದಿಗೆ ಘೋರ ಕದನವನ್ನೇ ನಡೆಸಿದಳು. ಇತಿಹಾಸದ ಆ ಕಪ್ಪು ದಿನದಂದು, ಝಾನ್ಸಿಯ ಭದ್ರಕೋಟೆಯನ್ನು ಬ್ರಿಟಿಷ್‍ರು ಭೇದಿಸಿ ಒಳಹೊಕ್ಕರು. ಅರಮನೆಯಲ್ಲಿ ತನ್ನ ಕಂದ ದಾಮೋದರ ರಾವ್‍ನನ್ನು ಇಡುವ ಹಾಗಿಲ್ಲ. ಇತ್ತ, ಆ ಬ್ರಿಟಿಷ್‍ರಿಗೆ ಶರಣಾಗುವ ಮಾತು ಇಲ್ಲವೇ ಇಲ್ಲ. ತನ್ನ ಕಂದನನ್ನು ಯುದ್ದಕ್ಕೆ ಕರೆದುಕೊಂಡು ಹೋಗಲೇಬೇಕು. ಧೈರ್ಯಗುಂದದ ರಾಣಿ, ಗಂಡಸಿನ ವೇಷ ಧರಿಸಿ, ತನ್ನ ಕಂದನನ್ನು ಬೆನ್ನ ಹಿಂದೆ ಕಟ್ಟಿಕೊಂಡು, ಬ್ರಿಟಿಷ್‍ರ ಮೇಲೆ ಮುಗಿಬಿದ್ದಳು. ಆ ಮಹಾನ್ ಯೋಧಳಿಗೆ ತನ್ನ ಕಂದನನ್ನು ರಣರಂಗಕ್ಕೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ಹುಟ್ಟಿರಬೇಕಾದಲ್ಲಿ ಆ ತಾಯಿಯ ಕರಳು ಅದೆಷ್ಟು ನೋಂದಿತ್ತೊ! ಅವಳು ವೀರವನಿತೆ, ಸ್ವಾತಂತ್ರ್ಯದ ಹರಿಕಾರೆ ಇವೆಲ್ಲವೂ ಹೌದು, ನಿಜ. ಇನ್ನೊಂದೆಡೇ ನೊಂದ ಆ ತಾಯಿಯ ಕರಳು, ತೊಯ್ದ ಆ ಕಣ್ ರೆಪ್ಪೆಗಳು, ಅತ್ತ ಆ ಜೀವ, ನೆನೆಸಿಕೊಂಡರೆ ಒಂದು ರೀತಿಯ ಸಂಕಟವಾಗುತ್ತದೆ. ಇದು ನನ್ನ ಭಾರತ ಮಾತೆ ಹೆತ್ತ ಮಹಾನ್ ಪುತ್ರಿಯ ಕತೆ.

ಮಧ್ಯಾಹ್ನ ೩-೪ ಗಂಟೆಯ ಸಮಯ. ನಾನು ಮಡಿವಾಳದ ಮೂಲಕ ಜಯನಗರಕ್ಕೆ ಹೋಗುತ್ತಿದ್ದೆ. ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಇಲ್ಲಿಯೂ( ಮಡಿವಾಳ) ಒಂದು ಸಂಭವಿಸಿತ್ತು. ಅದು ಮಡಿವಾಳದ ಮಾರುಕಟ್ಟೆಯ ಮುಖ್ಯ ರಸ್ತೆ. ರಸ್ತೆಯ ಬಲಗಡೆಗೆ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ, ಎಡಗಡೆಗೆ ಪೋಲಿಸ್ ಮೈದಾನ. ಆ ಮೈದಾನದ ಉದ್ದಕ್ಕೂ ಕಾಂಪೋಂಡ್ ಗೋಡೆ ಚಾಚಿತ್ತು. ರಸ್ತೆಯ ಅಗಲವನ್ನು ಹೆಚ್ಚಿಸುವ ಕಾಮಗಾರಿ ನಡೆದಿತ್ತಾದ್ದರಿಂದ ಟ್ರಾಫಿಕ್ ಮೆಲ್ಲಗೆ ಹೋಗುತ್ತಿತ್ತು. ನಾನು ಎರಡೂ ಕಡೆಗೂ ನೋಡುತ್ತಾ ಗಾಡಿಯನ್ನು ರಸ್ತೆಯ ಎಡ ಮಗುಲಿನಲ್ಲಿ ಓಡಿಸುತ್ತಿದ್ದೆ. ರಸ್ತೆಯ ಎಡ ಮಗ್ಗುಲಿಗಿದ್ದ ಫುಟ್ಪಾತಲ್ಲಿ ಜನರು ನಡೆದುಕೊಂಡು ಹೋಗುತ್ತಿದ್ದರು. ಜನ ಸಂಗುಳಿ ಸಾಮಾನ್ಯ ಮಟ್ಟಕ್ಕಿತ್ತು. ಕೆಲವರು ಬಿ.ಎಮ್.ಟಿ.ಸಿ. ಬಸ್ಸ್‍ಗಳಿಗಾಗಿ ಕಾಯುತ್ತಿದ್ದರು, ಕೆಲವೆಡೇ ಹಸಿತರಕಾರಿ, ಹಣ್ಣು-ಹಂಪಲುಗಳ ಮಾರಾಟ, ಜನರ ಮಾತು-ಗಾಡಿನ ಸದ್ದುಗಳ ಸಂಗಮ, ಎರಡು ಮರಗಳಿಗೆ ಕಟ್ಟಿಹಾಕಿ ನೇತಾಡುತಿದ್ದ ರಾಜಕಾರಣಿಗಳ ಶುಭಹಾರೈಕೆಯ ಭಿತ್ತಿಪತ್ರಗಳು, ರಸ್ತೆಯಲ್ಲಿ ಬಿದ್ದಿದ್ದ ಕೆಟ್ಟ ತರಕಾರಿ ಇದು ಅಲ್ಲಿಯ ದೃಶಾವಳಿಯಾಗಿತ್ತು.

ಹಿಂದಿನ ದಿನ ರಾತ್ರಿ ನೋಡಿದ ಝಾನ್ಸಿಯ ರಾಣಿಯ ಧಾರವಾಹಿಯಿಂದಾಗಿ, ನಾನು ಓದಿದ ಅವಳ ಜೀವನದ ಕೆಲವೂ ಪ್ರಮುಖ ಘಟನೆಗಳು ನನ್ನಲ್ಲಿ ಮರುಕಳಿಸುತ್ತಿದ್ದವು - ಅವಳ ಧೈರ್ಯ , ಎಲ್ಲರನ್ನೂ ಒಗ್ಗೂಡಿಸಿ ಬ್ರಿಟಿಷ್‍ರ ವಿರುದ್ದ ಹೋರಾಟ ಮಾಡಬೇಕೆನ್ನುವ ಅವಳ ಮನೋಭಾವ, ಬೆನ್ನ ಹಿಂದೆ ತನ್ನ ಕಂದನನ್ನು ಕಟ್ಟಿಕೊಂಡು ಹೋರಾಡಿದ್ದು, ಇವೇ ನೆನಪುಗಳು ನನ್ನ ತಲೆಯಲ್ಲಿ ಓಡುತ್ತಿದ್ದವು. ಹೀಗೆ ನನ್ನೊಳಗೆ ಸಂಭವಿಸುತ್ತಿದ್ದ ಐತಿಹಾಸಿಕ ಯೋಚನೆಗಳ ಲಹರಿ, ನನ್ನ ಹೊರಗೆ ಸಂಭವಿಸುತ್ತಿದ್ದ ವರ್ತಮಾನದ ಘಟನಾವಳಿಗಳು - ಇವೆರಡರ ಜೊತೆಗೆ ತಾವು ಒಂದಾಗಿ ನಾನು, ನನ್ನ ಗಾಡಿ ಮತ್ತು ನನ್ನ ಕಣ್ಣುಗಳು ಚಲಿಸುತ್ತಿದ್ದವು. ನೆತ್ತಿಯಿಂದ ಸ್ವಲ್ಪ ಮಟ್ಟಿಗೆ ಇಳಿದ ರವಿಯ ತಾಳಿಕೊಳ್ಳಬಹುದಾದ ಪ್ರಕರತೆಯಲ್ಲಿ ಕ್ಷಣ-ಕ್ಷಣಕೂ ಮುಂಬರುತ್ತಿದ್ದ ದೃಶ್ಯಾವಳಿಗಳು ಅನಾವರಣಗೊಳುತ್ತಿದ್ದವು.

ಅನಾವರಣಗೊಳ್ಳುತ್ತಿದ್ದ ಆ ಘಟನೆಗಳಲ್ಲೊಂದು ಮನ-ಮಿಡಿದ ಘಟನೆಯಿತ್ತು. ಆ ಒಂದು ಕ್ಷಣ, ಅದೊಂದು ದೃಶ್ಯ - ಚಲಿಸುತ್ತಿದ್ದ ನಾನು, ನನ್ನ ಗಾಡಿ ತಮ್ಮ ಚಲನೆಯಲ್ಲೇ ಮುಂದುವರೆದಿದ್ದವು, ಆದರೆ, ನನ್ನ ಕಣ್ಣು ಮಾತ್ರ ಅಚಲಿತವಾಗಿಬಿಟಿತು. ಅಲ್ಲಿಯೇ ನೆಟ್ಟಿತ್ತು! "ಛೇ...ಛೇ...ಇದು ನಿಜವೇ?" ಎಂದು ನನ್ನೊಳಗೆ ನನಗೆ ಒಂದು ಯಕ್ಷ ಪ್ರಶ್ನೆ. ಕಣ್ ರೆಪ್ಪೆಗಳನ್ನೊಮ್ಮೆ ಪಿಳುಕಿಸಿ ಮತ್ತೊಮ್ಮೆ ನೋಡಿದೆ. ಅದು ನಿಜವೇ ಆಗಿತ್ತು. ಅಲ್ಲಿ ನಡೆಯುತ್ತಿದ್ದುದ್ದು: ಒಬ್ಬ ವ್ಯಕ್ತಿ ತನ್ನ ಸುಮಾರು ೪-೫ ವರ್ಷದ ಮಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಏನೋ ಮಾಡುತ್ತಿದ್ದ. ಝಾನ್ಸಿಯ ಇತಿಹಾಸದ ಪುಟಗಳು ನನ್ನೇದುರಿಗೆ ಪರ್ರನೆ ಹಾರಿ ಹೋದಂತಾಯಿತು. ಆ ಲಕ್ಷ್ಮೀಬಾಯಿ ತನ್ನ ಕಂದನನ್ನು ಬೆನ್ನ ಮೇಲೇರಿಸಿ ಹೋರಾಟ ಮಾಡಿದ ಪರಿ, ಅದಕ್ಕಾಗಿ ನೊಂದ ಆ ತಾಯಿಯ ಒಡಲು, ಮತ್ತದೇ ಯೋಚನೆಗಳ ಲಹರಿ. ಆದರೆ ಈ ಮಡಿವಾಳದ ಮಹಾರಾಜನ ವಿಷಯದಲ್ಲೊಂದು ವ್ಯತ್ಯಾಸವಿತ್ತು. ಬೆನ್ನ ಮೇಲೆ ಮಗಳನ್ನು ಹೆತ್ತುಕೊಂಡ ಅವನು ಆ ಪೋಲಿಸ್ ಮೈದಾನದ ಕಾಂಪೋಂಡ್ ಮೇಲೆ ಮೂತ್ರ ವಿಸರ್ಜಿಸುತ್ತಿದ್ದ!! ಅಲ್ಲಿಗೆ ನನ್ನ ಯೋಚನೆಗಳು ತಟಸ್ಥ, ನನ್ನೊಳಗೆ ಒಂದು ರೀತಿಯ ಮೌನ. ಕೆಲವೇ ಕ್ಷಣಗಳಲ್ಲಿ ನಾನು ಅಲ್ಲಿಂದ ಬಹಳ ಮುಂದೆ ಬಂದು ಬಿಟ್ಟಿದ್ದೆ.

ಇಂದಿಗೂ, ನಾನು ಝಾನ್ಸಿಯ ರಾಣಿಯ ಬಗ್ಗೆ ಯೋಚಿಸಿದಾಗ, ಮಡಿವಾಳದ ಆ ರಾಜನ ನೆನಪು ಒಮ್ಮೆ ನುಸಳಿ ಹೋಗಿಯೇ ಇರುತ್ತದೆ. ಇಲ್ಲಿ ನನ್ನ ಮಾತು ಸರಿ-ತಪ್ಪುಗಳದ್ದಲ್ಲ. ಆ ವ್ಯಕ್ತಿಗೆ ಅದೇನು ಅನಿವಾರ್ಯವಿತ್ತೊ ಏನೋ? ಆದರೆ, ನನಗೆ ಅಚ್ಚರಿಗೊಳಿಸಿದ್ದು - ಹೊಂದಾಣಿಕೆಗೆಂದೆ ನನಗೆ ವಿಧಿ ಕಾಣಿಸಿದ ಘಟನೆಗಳ ಪರಿ; ಇತಿಹಾಸದ ದುರ್ಭಾಗ್ಯ ಹಾಗೂ ವರ್ತಮಾನದ ಸಂಭವಗಳ ಭಾವ ಮಿಶ್ರಣ. ಅಷ್ಟೇ

Rating
No votes yet

Comments