ಟಾಲ್ಸ್‌ಟಾಯ್: ಕ್ರೂಟ್ಸರ್‌ ಸೊನಾಟಾ: ಅಧ್ಯಾಯ ಐದು

ಟಾಲ್ಸ್‌ಟಾಯ್: ಕ್ರೂಟ್ಸರ್‌ ಸೊನಾಟಾ: ಅಧ್ಯಾಯ ಐದು

“ಹೌದು. ಕಾಮುಕತನದಲ್ಲಿ ತುಂಬ ದೂರ ಹೋದೆ. ಎಲ್ಲಾ ವೆರೈಟಿಗಳನ್ನೂ ಅನುಭವಿಸಿದೆ. ದೇವರೇ! ಅವೆಲ್ಲ ಹೇಡಿ, ಹೀನ ಕೃತ್ಯಗಳನ್ನು ಈಗ ನೆನೆದುಕೊಂಡರೆ ಭಯವಾಗುತ್ತದೆ. ಆದರೂ ಆ ಕಾಲದ ‘ನಾನು’ ಗೆಳೆಯರೆಲ್ಲರ ಪಾಲಿಗೆ ಬರಿಯ ಮುಗ್ಧ ಎಂಬ ಲೇವಡಿಗೆ ಒಳಗಾಗಿದ್ದೆ.
“ನಾವು, ಜನ ಬಂಗಾರದಂಥ ಯುವಕರು ಎಂದು ಕರೆಯುವಂಥವರು, ಆಫೀಸರುಗಳು, ಪ್ಯಾರಿಸಿನ ಶೋಕಿಲಾಲರು, ಸಭ್ಯರು, ನನ್ನಂಥವರು, ಹೆಣ್ಣುಗಳ ಮೇಲೆ ನೂರಾರು ಬಗೆಯ ಅತ್ಯಾಚಾರಮಾಡಿ, ಬಗೆಬಗೆಯ ಅಪರಾಧಗಳ ಭಾರವನ್ನು ಮನಸ್ಸಿನಲ್ಲಿ ಹೊತ್ತವರು, ಮೂವತ್ತರ ಅಂಚಿನಲ್ಲಿರುವವರು, ಪಾರ್ಟಿಗೆ ಹೋದಾಗ, ಅಚ್ಚುಕಟ್ಟಾಗಿ ಸ್ನಾನಮಾಡಿಕೊಂಡು, ಕ್ಲೀನಾಗಿ ಶೇವು ಮಾಡಿಕೊಂಡು, ಪರ್‌ಫ್ಯೂಮು ಹಚ್ಚಿಕೊಂಡು, ಅಚ್ಚ ಬಿಳಿಯ ಡ್ರೆಸ್ಸು ತೊಟ್ಟು, ಅಥವ ಸೂಟು ಧರಿಸಿ, ಇಲ್ಲ ಯೂನಿಫಾರಂ ಹಾಕಿಕೊಂಡು ಪ್ರತ್ಯಕ್ಷರಾದಾಗ ಶುಭ್ರತೆ, ಸ್ವಚ್ಛತೆ, ಪರಿಶುದ್ಧತೆಗಳ ಸಂಕೇತವೆಂಬಂತೆ ಇರುತ್ತೇವೆ. ಥೂ, ಅಸಹ್ಯ!
“ನಾವು ಹೇಗಿರಬೇಕು, ಹೇಗಿದ್ದೇವೆ ನೋಡಿ! ನಮ್ಮ ಸಮಾಜದಲ್ಲಿ ಇಂಥ ಒಬ್ಬ ಜಂಟಲ್‌ಮ್ಯಾನು ನನ್ನ ತಂಗಿಯನ್ನೋ ಮಗಳನ್ನೋ ನೋಡಲು ಬಂದರೆ, ಅವನು ಎಂಥವನು ಅಂತ ಗೊತ್ತಿರುವುದರಿಂದ, ನಾನು ಅವನ ಹತ್ತಿರ ಹೋಗಿ, ಸ್ವಲ್ಪ ಪಕ್ಕಕ್ಕೆ ಕರೆದು, ‘ನೋಡಿ, ನೀವು ಎಂಥಾವರು ಅಂತ ಗೊತ್ತಿದೆ, ರಾತ್ರಿಗಳನ್ನು ಎಲ್ಲಿ ಕಳೆಯುತ್ತೀರಿ ಅಂತ ಗೊತ್ತಿದೆ. ಇದು ನೀವು ಬರಬಹುದಾದ ಜಾಗ ಅಲ್ಲ; ಇಲ್ಲಿ ಮುಗ್ಧವಾದ ಹೆಣ್ಣುಮಕ್ಕಳಿದ್ದಾರೆ, ದಯವಿಟ್ಟು ಹೊರಟು ಹೋಗಿ’ ಅನ್ನಬೇಕು. ಆದರೆ ಏನಾಗುತ್ತದೆ ಅಂದರೆ ಅಂಥವರು ಪಾರ್ಟಿಗಳಿಗೆ ಬರುತ್ತಾರೆ, ನನ್ನ ಮಗಳನ್ನೋ ತಂಗಿಯನ್ನೋ ಅಪ್ಪಿಕೊಂಡು ಡ್ಯಾನ್ಸು ಮಾಡುತ್ತಾರೆ, ಇಂಥಾ ಶ್ರೀಮಂತ, ಇಷ್ಟು ಒಳ್ಳೊಳ್ಳೆಯ ಇನ್ಫ್ಲುಯೆನ್ಸು ಇರುವವನು ನಮ್ಮ ಮನೆಗೆ ಬಂದಿದ್ದಾನೆ. ನಮ್ಮ ಹುಡುಗಿಯನ್ನು ರಿಗೊಲ್‌ಬೊಷೆಗೆ ಕರೆದುಕೊಂಡು ಹೋದರೂ ಹೋಗಬಹುದು ಅಂದುಕೊಳ್ಳುತ್ತೇವೆ. ರೋಗದ ಚಿಂತೆ ಬೇಡ, ಅವನ್ನೆಲ್ಲ ವಾಸಿಮಾಡುವ ಜಾಣತನ ನಮಗೀಗ ಗೊತ್ತಿದೆ. ನಮ್ಮ ಉನ್ನತ ಸಮಾಜದ ಜನ ಇಂಥ ಕಾಯಿಲೆ ಮನುಷ್ಯರಿಗೆ ಉತ್ಸಾಹದಿಂದ ಹೆಣ್ಣು ಕೊಟ್ಟು ಮದುವೆಮಾಡಿದ್ದು ಗೊತ್ತಿದೆ. ಅಸಹ್ಯ! ಥೂ! ಖಂಡಿತ ಒಂದು ಕಾಲ ಬರುತ್ತದೆ, ಒಂದು ಯುಗ ಬರುತ್ತದೆ, ಆಗ ಇಂಥ ಬದುಕಿನ ಹೇಡಿತನದ ಮುಸುಕು ಕಳಚಿಹೋಗುತ್ತದೆ!”
ಅವನು ವಿಚಿತ್ರವಾದ ಸದ್ದು ಮಾಡುತ್ತಾ ಮತ್ತೆ ಟೀ ಕುಡಿದ. ಬಹಳ ಸ್ಟ್ರಾಂಗಾಗಿತ್ತು. ನಾನು ಕುಡಿದ ಎರಡು ಲೋಟ ಟೀ ಒಂದು ಥರ ಮತ್ತು ಬರಿಸಿತ್ತು ನನಗೆ. ಅವನ ತಲೆಗೂ ಏರಿತ್ತು ಎಂದು ಕಾಣುತ್ತದೆ. ಅವನ ಉದ್ವೇಗ ಹೆಚ್ಚಾಯಿತು. ಅವನ ಧ್ವನಿ ಮೃದುವಾಗುತ್ತಹೋಯಿತು. ಭಾವತುಂಬಿದವನ ಹಾಗೆ ಮಾತಾಡುತ್ತಿದ್ದ. ಮತ್ತೆ ಮತ್ತೆ ಕೂತಿದ್ದ ಭಂಗಿ ಬದಲಾಯಿಸುತ್ತಿದ್ದ. ಟೋಪಿ ತೆಗೆಯುತ್ತಿದ್ದ, ಹಾಕಿಕೊಳ್ಳುತ್ತಿದ್ದ. ರೈಲು ಬೋಗಿಯ ಅರೆಕತ್ತಲಲ್ಲಿ ಅವನ ಮುಖ ವಿಚಿತ್ರವಾಗಿ ಹೊಳೆಯುತ್ತಿತ್ತು.
“ಹೀಗೇ ನಾನು ಮೂವತ್ತನೆಯ ವಯಸ್ಸಿನವರೆಗೂ ಬದುಕಿದೆ. ಆದರೆ ಮದುವೆಯಾಗಿ ಉನ್ನತಮಟ್ಟದ ಕೌಟುಂಬಿಕ ಜೀವನ ಸಾಗಿಸಬೇಕೆಂಬ ಕನಸು ಒಂದೇ ಒಂದು ಕ್ಷಣದ ಮಟ್ಟಿಗಾದರೂ ಮಾಯವಾಗಿರಲಿಲ್ಲ. ಇದೇ ಉದ್ದೇಶದಿಂದ ಎದುರಾದ ಎಲ್ಲ ಹುಡುಗಿಯರನ್ನೂ ಗಮನವಿಟ್ಟು ನೋಡುತ್ತಿದ್ದೆ. ನಾನು ಕೊಳೆತಿದ್ದೆ. ಆದರೆ ನನಗೆ ಯೋಗ್ಯಳಾದ ಅಪ್ಪಟ, ಪರಿಶುದ್ಧ ಕನ್ಯೆಗಾಗಿ ಹುಡುಕುತ್ತಿದ್ದೆ. ಎಷ್ಟೋ ಜನ ಹುಡುಗಿಯರನ್ನು ತಿರಸ್ಕಾರಮಾಡಿದೆ, ಅವರು ನನಗೆ ತಕ್ಕವರಲ್ಲ, ಪರಿಶುದ್ಧರಲ್ಲ ಎಂದು!
“ಕೊನೆಗೆ ನನಗೆ ತಕ್ಕವಳೊಬ್ಬಳು ದೊರೆತಳು. ಪೆನ್ಝಾದ ಜಮೀನುದಾರನ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು. ಒಂದು ಕಾಲದಲ್ಲಿ ಬಹಳ ಶ್ರೀಮಂತರಾಗಿದ್ದು, ಈಗ ಕಷ್ಟಕ್ಕೆ ಸಿಕ್ಕಿರುವವರು. ಜಂಬವಿಲ್ಲದೆ ನಿಜ ಹೇಳಬೇಕೆಂದರೆ ಹೆಣ್ಣಿನ ಮನೆಯವರೇ ನನ್ನ ಬೆನ್ನು ಹತ್ತಿ ವಶಮಾಡಿಕೊಂಡರು. ತಂದೆ ದೂರ ದೇಶಕ್ಕೆ ಹೋಗಿದ್ದರಿಂದ ಹುಡುಗಿಯ ತಾಯಿಯೇ ನನ್ನನ್ನು ವಶಮಾಡಿಕೊಳ್ಳುವುದಕ್ಕೆ ಬಗೆ ಬಗೆಯ ಬಲೆಗಳನ್ನು ಒಡ್ಡಿದಳು. ಅವುಗಳಲ್ಲಿ ಒಂದು ಬೋಟಿಂಗ್‌ ಬಲೆ. ಅದೇ ನನ್ನ ಭವಿಷ್ಯವನ್ನು ನಿರ್ಧರಿಸಿತು.
“ಒಂದು ದಿನ ರಾತ್ರಿ, ಬೆಳುದಿಂಗಳಲ್ಲಿ ಬೋಟಿಂಗ್‌ ಮುಗಿಸಿ ಮನೆಗೆ ವಾಪಸ್ಸುಬರುತ್ತಿದ್ದೆವು. ಅವಳ ಪಕ್ಕದಲ್ಲಿ ಕೂತಿದ್ದೆ. ಅವಳ ತೆಳ್ಳನೆಯ ಮೈಕಟ್ಟು, ಗುಂಗುರು ಕೂದಲು, ತೊಟ್ಟಿದ್ದ ಟೈಟಾದ ಜೆರ್ಸಿ ಮೆಚ್ಚಿಕೊಳ್ಳುತ್ತಾ ಕೂತಿದ್ದೆ. ತಟ್ಟನೆ ‘ಇವಳೇ ಅವಳು’ ಎಂದು ಡಿಸೈಡುಮಾಡಿಬಿಟ್ಟೆ! ಆ ಸುಂದರವಾದ ಸಂಜೆಯಲ್ಲಿ ‘ಇವಳು ನನ್ನ ಎಲ್ಲ ಆಲೋಚನೆಗಳನ್ನೂ ಫೀಲಿಂಗುಗಳನ್ನೂ ಅರ್ಥಮಾಡಿಕೊಳ್ಳುತ್ತಾಳೆ’ ಅನ್ನಿಸಿಬಿಟ್ಟಿತು. ಆಗ ನನ್ನ ಮನಸ್ಸಿನಲ್ಲಿ ಉನ್ನತವಾದ ಭಾವಗಳಿದ್ದವು. ನಿಜವಾಗಿಯೂ ಅವಳಿಗೆ ಒಪ್ಪುತ್ತ ಇದ್ದದ್ದು ಜೆರ್ಸಿ ಮತ್ತೆ ಗುಂಗುರು ಕೂದಲು ಮಾತ್ರವೇ. ಇಡೀ ದಿನ ಅವಳ ಪಕ್ಕದಲ್ಲೆ ಕಾಲ ಕಳೆದಿದ್ದೆ. ಅವಳೊಡನೆ ನಿಕಟವಾದ ಸಂಬಂಧ ಬೇಕು ಅನ್ನುವ ಆಸೆ ಹುಟ್ಟಿತ್ತು.
“ನೆನೆದರೆ ಆಶ್ಚರ್ಯವಾಗುತ್ತದೆ. ಸುಂದರವಾದದ್ದೆಲ್ಲ ಒಳ್ಳೆಯದೇ ಎಂಬ ಭ್ರಮೆ ಎಷ್ಟೊಂದು ಅಮರಿಕೊಳ್ಳುತ್ತದೆ. ಸುಂದರವಾದ ಹುಡುಗಿ ನಾನ್‌ಸೆನ್ಸ್ ಮಾತಾಡಿದರೂ ನಮಗೆ ಅವಳ ಮಾತಿನಲ್ಲಿ ಎಷ್ಟೊಂದು ಜಾಣತನ ಇದೆ ಅನ್ನಿಸುತ್ತದೆ. ಕೆಟ್ಟ, ಅಸಹ್ಯ ಕೆಲಸಗಳನ್ನು ಮಾಡಿದರೂ ಅವಳ ಚೆಲುವಷ್ಟೇ ಕಾಣುತ್ತಿರುತ್ತದೆ. ಅಕಸ್ಮಾತ್ತಾಗಿ ಆ ಸುಂದರ ಹುಡುಗಿ ಪೆದ್ದು ಮಾತಾಡದಿದ್ದರೆ, ಮುಟ್ಠಾಳ ಕೆಲಸ ಮಾಡದಿದ್ದರೆ, ಅವಳು ಎಷ್ಟು ವಿವೇಕಿ, ಒಳ್ಳೆಯವಳು, ನೀತಿವಂತೆ ಅಂದುಕೊಳ್ಳುತ್ತೇವೆ.
“ಉತ್ಸಾಹದಿಂದ ಮನೆಗೆ ವಾಪಸ್ಸು ಬಂದೆ. ಅವಳು ಪರಿಪೂರ್ಣಳಾದ ಹೆಣ್ಣು, ನೈತಿಕತೆಯ ಉತ್ತುಂಗ ಶಿಖರ ಏರಿರುವವಳು, ನನ್ನ ಹೆಂಡತಿಯಾಗಲು ಯೋಗ್ಯಳು ಅವಳೇ ಅಂತ ನನ್ನನ್ನೆ ನಂಬಿಸಿಕೊಂಡೆ. ಮಾರನೆಯ ದಿನ ಅವರಲ್ಲಿಗೆ ಹೋಗಿ ಮದುವೆಯ ಇಚ್ಛೆ ಹೇಳಿಕೊಂಡೆ.
“ನೀವು ಏನು ಬೇಕಾದರೂ ಹೇಳಿ. ನಾವು ಎಂಥ ಸುಳ್ಳಿನ ಕೂಪದಲ್ಲಿ ಬದುಕುತ್ತಾ ಇದ್ದೇವೆ. ನಮ್ಮ ತಲೆಗೆ ದೊಡ್ಡ ಪೆಟ್ಟು ಬೀಳದಹೊರತು ಎಚ್ಚರವಾಗುವುದೇ ಇಲ್ಲ. ಎಂಥಾ ಕನಫ್ಯೂಶನ್ನು! ನಮ್ಮಂಥ ಶ್ರೀಮಂತರಲ್ಲಿ ಮಾತ್ರವಲ್ಲ, ಎಲ್ಲರಲ್ಲೂ ಇದೆ ಇದು. ಮದುವೆಗೆ ಮೊದಲೇ ಹತ್ತಾದರೂ ಮದುವೆ ಆಗಿರದ ಗಂಡಸು ಒಬ್ಬನೂ ಇಲ್ಲ. ಡಾನ್‌ ಜುಆನ್‌ನಂತೆ ನೂರು, ಸಾವಿರ ಮದುವೆ ಆಗಿದ್ದವರೂ ಇದ್ದಾರೆ. ಇದು ಜೋಕಲ್ಲ ಎಂದು ತಿಳಿಯುವ ಶುದ್ಧವಾದ ಕೆಲವರಾದರೂ ಯುವಕರು ಇದ್ದಾರೆ ಎಂದು ಕೇಳಿದ್ದೇನೆ. ದೇವರು ಅವರನ್ನು ಕಾಪಾಡಲಿ! ನಮ್ಮ ಕಾಲದಲ್ಲಿ ಮದುವೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡವರು ಹತ್ತುಸಾವಿರಕ್ಕೆ ಒಬ್ಬರೂ ಇರಲಿಲ್ಲ.
“ಎಲ್ಲರಿಗೂ ಇದು ಗೊತ್ತು. ಆದರೆ ಗೊತ್ತಿಲ್ಲದವರಹಾಗೆ ನಟನೆ ಮಾಡುತ್ತಾರೆ. ನಮ್ಮ ಕಾದಂಬರಿಗಳು ಎಷ್ಟೊಂದು ವಿವರವಾಗಿ ನಾಯಕ ನಾಯಕಿಯರ ಭಾವನೆಗಳನ್ನು ಚಿತ್ರಿಸುತ್ತವಲ್ಲಾ, ಯಾವ ಕೊಳದ ಹತ್ತಿರ, ಯಾವ ಪೊದೆಯ ಸಮೀಪ, ಎಂಥ ಮರದ ಕೆಳಗೆ ಅವರಲ್ಲಿ ಎಂತೆಂಥ ಭಾವನೆ ಮೂಡಿವು ಎಂದು ಹೇಳುತ್ತವಲ್ಲಾ, ಅವು ನಾಯಕ ನಾಯಕಿಯರ ಗ್ರೇಟ್ ಲವ್ ಅನ್ನು ವಿವರಿಸಿದರೂ, ಅವನು, ನಾಯಕ, ಹೀಗೆ ಪ್ರೀತಿಸುವ ಮೊದಲು ಏನು ಮಾಡಿದ್ದ, ಎಂತೆಂಥ ಮನೆಗಳಿಗೆ ಕದ್ದು ಹೋಗಿದ್ದ, ಕೆಲಸದವಳು, ಅಡಿಗೆಯವಳು, ಮತ್ತೆ ಬೇರೆಯವರ ಹೆಂಡಿರೊಡನೆ ಹೇಗಿದ್ದ ಅಂತ ಒಂದು ಮಾತೂ ಹೇಳುವುದಿಲ್ಲ.
“ಅಕಸ್ಮಾತ್ತಾಗಿ ಯಾವುದಾದರೂ ಕಾದಂಬರಿ ಅದೆಲ್ಲ ಹೇಳಿದರೆ ಅವು ಹೆಣ್ಣು ಮಕ್ಕಳು ಓದಬಾರದ ಅಯೋಗ್ಯ ಬುಕ್ಕುಗಳು ಅಂತ ಅವರ ಕೈಗೆ ಸಿಗದ ಹಾಗೆ ಮಾಡುತ್ತೇವೆ. ಹೆಂಗಸರು ಎದುರಿಗೆ ಇರುವಾಗ ಎಲ್ಲರೂ ಅನುಭವಿಸುವ ಇಂಥ ಭ್ರಷ್ಟ ಖುಷಿಗಳು ಜಗತ್ತಿನಲ್ಲಿ ಇಲ್ಲವೇ ಇಲ್ಲ, ಇದ್ದರೂ ಅಪರೂಪ ಎಂಬಂತೆ ಗಂಡಸರು ನಟಿನೆ ಮಾಡುತ್ತಾರೆ. ಎಷ್ಟು ಚೆನ್ನಾಗಿ ಅಂದರೆ ಅದು ನಿಜ ಅಂತಲೇ ನಂಬಿಬಿಡುತ್ತಾರೆ. ಬಡಪಾಯಿ ಹೆಣ್ಣುಮಕ್ಕಳು ಕೂಡ ಭ್ರಷ್ಟ ಖುಷಿಗಳು ಜಗತ್ತಿನಲ್ಲಿ ಇಲ್ಲ ಅಂತಲೇ ತಿಳಿಯುತ್ತಾರೆ. ನನ್ನ ಹೆಂಡತಿಯೂ ಹಾಗೆಯೇ ನಂಬಿದ್ದಳು.
“ಜ್ಞಾಪಕ ಇದೆ. ನಮ್ಮ ಮದುವೆ ನಿಶ್ಚಯವಾದಮೇಲೆ ಅವಳಿಗೆ ನನ್ನ ಡೈರಿಯನ್ನು ತೋರಿಸಿದೆ. ನನ್ನ ಬದುಕು ಹೇಗಿತ್ತೆಂದು ಅದರಿಂದ ಅವಳು ತಿಳಿಯಲಿ ಅನ್ನುವ ಆಸೆ. ವಿಶೇಷವಾಗಿ ಆಗ ನಾನು ನಡೆಸಿದ್ದ ಅಫೇರ್‌ನ ವಿವರಗಳೂ ಇದ್ದವು. ಬಹುಶಃ ಆ ಬಗ್ಗೆ ಅವಳು ಯಾರೋ ಮಾತಾಡುವುದನ್ನು ಕೇಳಿದ್ದಿರಬಹುದು. ಹಾಗೆ ಕೇಳಿದ್ದಿರಬಹುದು ಅಂತ ಅನಿಸಿದ್ದರಿಂದಲೇ ಡೈರಿಯನ್ನು ಅವಳಿಗೆ ತೋರಿಸಿದೆ. ಅವಳಿಗೆ ಭಯವಾಗಿ, ಹತಾಶೆಯಾಗಿ, ದಿಗ್ಭ್ರಾಂತಿಯಾಗಿ, ತಬ್ಬಿಬ್ಬಾದ್ದು ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಮದುವೆ ಕ್ಯಾನ್ಸಲ್ ಮಾಡಬೇಕು ಎಂದು ಕೂಡ ಅವಳಿಗೆ ಅನಿಸಿತ್ತು. ಹಾಗಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!”
ಪಾಸ್‌ಡ್ನಿಚೆಫ್ ಕೊಂಚ ಹೊತ್ತು ಸುಮ್ಮನೆ ಇದ್ದ. ಮತ್ತೆ ವಿಚಿತ್ರವಾಗಿ ಸದ್ದುಮಾಡಿದ. ಮತ್ತೆರಡು ಗುಟುಕು ಟೀ ಹೀರಿದ.
(ಮುಂದುವರೆಯುವುದು)

Rating
No votes yet