ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎರಡು

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎರಡು

ಮುದುಕ ಆ ಕಡೆ ಹೋಗುತ್ತಿದ್ದ ಹಾಗೆಯೇ ಇಲ್ಲಿ ಒಟ್ಟಿಗೆ ಬೇರೆ ಬೇರೆ ಥರದ ಮಾತು ಹುಟ್ಟಿದವು.
“ಹಳೇ ಜಮಾನಾದ ಮುದುಕ!” ಎಂದ ಕ್ಲಾರ್ಕು.
“ಇವಾನ್ ದಿ ಟೆರಿಬಲ್ ಕಾಲದ ಮದುವೆ ನಿಯಮಗಳನ್ನೇ ಫಾಲೊ ಮಾಡಬೇಕು ಅನ್ನುವವನು ಇವನು. ಹೆಂಗಸರ ಬಗ್ಗೆ, ಮದುವೆಯ ಬಗ್ಗೆ ಎಂಥ ಹಾರಿಬಲ್ ಒಪಿನಿಯನ್ನು!” ಎಂದಳು ಹೆಂಗಸು.
“ಹೌದು. ಯೂರೋಪಿನಲ್ಲಿರುವಂಥ ಮದುವೆಯ ಐಡಿಯಾಗಳು ನಮ್ಮಲ್ಲಿ ಬರುವುದಕ್ಕೆ ಇನ್ನೂ ಬಹಳ ಕಾಲ ಬೇಕು” ಎಂದ ಲಾಯರು.
“ಇಂಥಾ ಜನಕ್ಕೆ ಅರ್ಥವಾಗುವುದೇ ಇಲ್ಲ. ಪ್ರೀತಿ ಇಲ್ಲದ ಮದುವೆ ಮದುವೆನೇ ಅಲ್ಲ. ಪ್ರೀತಿ ಇದ್ದರಷ್ಟೆ ಮದುವೆಗೆ ಪಾವಿತ್ರ್ಯ” ಎಂದಳು ಹೆಂಗಸು.
ಮುಂದೆ ಕೆಲಸಕ್ಕೆ ಬಂದೀತೆಂದು ತಾನು ಕೇಳಿದ ಜಾಣ ಮಾತುಗಳನ್ನೆಲ್ಲ ನೆನಪಿಟ್ಟುಕೊಳ್ಳುವವನ ಹಾಗೆ ಅವಳ ಮಾತು ಕೇಳುತ್ತ ಕ್ಲಾರ್ಕು ಮುಗುಳ್ನಕ್ಕ.
ಆ ಹೆಂಗಸಿನ ಮಾತಿನ ನಡುವೆ ನನ್ನ ಬೆನ್ನ ಹಿಂದೆ ಯಾರೋ ಕಷ್ಟಪಟ್ಟು ಬಿಕ್ಕಳಿಕೆ ತಡೆದುಕೊಂಡ ಹಾಗೆ ಅಥವಾ ನಗು ತಡೆದುಕೊಂಡ ಹಾಗೆ ಶಬ್ದ ಕೇಳಿಸಿತು. ತಿರುಗಿ ನೋಡಿದೆ. ಅವನೇ, ಹೊಳಪು ಕಣ್ಣಿನ, ನೆರೆಗೂದಲ ಒಂಟಿ ಪ್ರಯಾಣಿಕ. ಮಾತಿನಲ್ಲಿ ಮೈಮರೆತ ನಮಗೆ ಗೊತ್ತೇ ಆಗದಂತೆ ಹತ್ತಿರಕ್ಕೆ ಸರಿದಿದ್ದ. ನಮ್ಮ ಮಾತಿನಲ್ಲಿ ಅವನಿಗೆ ಆಸಕ್ತಿ ಹುಟ್ಟಿತ್ತು. ಕೇಳಿದ: “ಅದೇನದು, ಪ್ರೀತಿ ಮತ್ತೆ ಪಾವಿತ್ರ್ಯದ ಮಾತು?”
ಸೀಟಿನ ಮೇಲೆ ಕೈಯೂರಿ ನಿಂತಿದ್ದ. ಮನಸ್ಸಿನಲ್ಲಿ ಗೊಂದಲವಿತ್ತು. ಮುಖ ಕೆಂಪಾಗಿತ್ತು. ಹಣೆಯ ನರವೊಂದು ಉಬ್ಬಿತ್ತು. ಕೆನ್ನೆಗಳು ಅದುರುತ್ತಿದ್ದವು.
“ಮದುವೆಗೆ ಪಾವಿತ್ರ್ಯ ತಂದುಕೊಡುವ ಪ್ರೀತಿ, ಯಾವುದದು?” ತಡವರಿಸುತ್ತಾ ಕೇಳಿದ.

ಅವನ ಸ್ಥಿತಿಯನ್ನು ಗಮನಿಸಿದ ಹೆಂಗಸು ಮೃದುವಾಗಿ, ಆದರೆ ಗಂಭೀರವಾಗಿ “ಯಾವ ಪ್ರೀತಿ? ಮತ್ತೆ ಇನ್ಯಾವುದು? ಗಂಡ ಹೆಂಡತಿಯರ ನಡುವೆ ಇರುವ ನಿಜವಾದ ಪ್ರೀತಿ” ಅಂದಳು.
“ನಿಜವಾದ ಪ್ರೀತಿಯನ್ನ ಹೇಗೆ ಅರ್ಥಮಾಡಿಕೊಳ್ಳುವುದು?” ಅವನ ಕಣ್ಣು ಹೊಳೆಯುತ್ತಿದ್ದವು. ತಪ್ತನಾಗಿದ್ದ. ಸಣ್ಣ ದನಿಯಲ್ಲಿ ಮಾತಾಡುತ್ತಿದ್ದ. ಮುಖದ ಮೇಲೆ ವಿಚಿತ್ರವಾದ ನಗುವಿತ್ತು.
“ಹೇಗೆ ಅಂದರೆ...ನಿಜವಾದ ಪ್ರೀತಿ ಏನೆಂದು ಎಲ್ಲರಿಗೂ ಗೊತ್ತು” ಎಂದಳು. ಅವನೊಡನೆ ಮಾತು ನಿಲ್ಲಿಸಬೇಕು ಅನ್ನಿಸಿದಹಾಗಿತ್ತು ಅವಳಿಗೆ.
“ನನಗೆ ಗೊತ್ತಿಲ್ಲ. ಪ್ರೀತಿ ಅಂದರೆ ನೀವು ಹೇಗೆ ವಿವರಿಸುತ್ತೀರೋ ಹೇಳಿ.”
“ಹೇಗೆ? ತುಂಬ ಸುಲಭ, ಸಿಂಪಲ್ಲು” ಎಂದಳು. ಮಾತು ನಿಲ್ಲಿಸಿದಳು. ಯೋಚನೆಮಾಡಿದಳು. ಆಮೇಲೆ “ಪ್ರೀತಿ...ಪ್ರೀತಿ...ಮಿಕ್ಕ ಎಲ್ಲರನ್ನೂ ಬಿಟ್ಟು ಈ ಒಬ್ಬ ಗಂಡಸು, ಈ ಒಬ್ಬ ಹೆಂಗಸು ಬೇಕು ಅನ್ನುವ ಅಪೇಕ್ಷೆ, ಆಸೆ...”
“ಹಾಗೆ ಬೇಕು ಅನ್ನುವುದು ಎಷ್ಟು ಕಾಲ?...ಒಂದು ತಿಂಗಳು, ಎರಡು ದಿನ, ಅಥವಾ ಅರ್ಧ ಗಂಟೆ?” ಅವನು ನಗುತ್ತಿದ್ದರೂ ರೇಗಿದ ಹಾಗಿತ್ತು.
“ಇಲ್ಲಾ, ನೀವು ಅಂದುಕೊಂಡಿರುವುದೇ ಬೇರೆ, ನಾನು ಹೇಳುತ್ತಿರುವುದೇ ಬೇರೆ.”
“ಇಲ್ಲ. ನಾನೂ ಅದೇ ಹೇಳುತ್ತಿದ್ದೇನೆ.”
“ಇವರು ಹೇಳುವುದೇನೆಂದರೆ” ಹೆಂಗಸಿನ ಕಡೆಗೆ ಕೈತೋರುತ್ತಾ ಲಾಯರು ಹೇಳಿದ, “ಮೊದಲು ಅಟ್ಯಾಚ್‌ಮೆಂಟು ಇರಬೇಕು, ಅಥವಾ ಪ್ರೀತಿ ಇರಬೇಕು ಅನ್ನಿ. ಪ್ರೀತಿ ಇದ್ದರೆ, ಪ್ರೀತಿ ಇದ್ದಾಗ ಮಾತ್ರವೇ, ಮದುವೆ ಅನ್ನುವುದು ಪವಿತ್ರ ಬಂಧನವಾಗಿರುತ್ತದೆ. ನಿಜವಾದ ಪ್ರೀತಿ ಇಲ್ಲದೆ ಆದ ಮದುವೆಗಳು ನೈತಿಕವಾದ ಮದುವೆಗಳಲ್ಲ. ಇದು ನಿಮ್ಮ ಅಭಿಪ್ರಾಯ ಅಲ್ಲವೇ?” ಎಂದು ಆಕೆಯನ್ನು ಕೇಳಿದ.
ಹೆಂಗಸು ತಲೆದೂಗುತ್ತಾ ತನ್ನ ಆಲೋಚನೆಗಳನ್ನು ಲಾಯರು ಹೇಳಿದ ರೀತಿಗೆ ಒಪ್ಪಿಗೆ ತೋರಿದಳು.
“ಆದ್ದರಿಂದ..” ಲಾಯರು ಮಾತು ಮುಂದುವರೆಸಿದ. ನೆರೆಗೂದಲ ಪ್ರಯಾಣಿಕ ನಡುವೆಯೇ ಅವನ ಮಾತು ಕತ್ತರಿಸಿದ. ಅವನ ಕಣ್ಣು ಕೆಂಡದ ಉಂಡೆಗಳಾಗಿದ್ದವು. ಸಂಭಾಳಿಸಿಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದ.
“ನಾನೂ ಹೇಳುತ್ತಿರುವುದೂ ಅದೇ. ಬೇರೆ ಎಲ್ಲರನ್ನೂ ಬಿಟ್ಟು ಈ ಗಂಡಸು ಅಥವಾ ಈ ಹೆಂಗಸು ಮಾತ್ರ ಬೇಕು ಅನ್ನುವ ಆಸೆ, ಅಪೇಕ್ಷೆ. ಅದು ಎಷ್ಟು ಕಾಲ ಇರುತ್ತದೆ?”
“ಎಷ್ಟು ಕಾಲವೆಂದರೆ? ದೀರ್ಘಕಾಲ, ಜೀವಮಾನ ಪರ್ಯಂತ ಇರುತ್ತದೆ.” ಹೆಂಗಸು ಭುಜ ಹಾರಿಸುತ್ತಾ ಹೇಳಿದಳು.
“ಅದೆಲ್ಲ ಏನಿದ್ದರೂ ಕಾದಂಬರಿಗಳಲ್ಲಿ. ಜೀವನದಲ್ಲಿ ಯಾವತ್ತೂ ಇಲ್ಲ. ಬೇರೆ ಎಲ್ಲರನ್ನೂ ಬಿಟ್ಟು ಈ ವ್ಯಕ್ತಿ ಮಾತ್ರ ಬೇಕು ಅನ್ನುವ ಅಪೇಕ್ಷೆ ಬದುಕಿನಲ್ಲಿ ತೀರ ಅಪರೂಪಕ್ಕೆ ಕೆಲವು ವರ್ಷ ಇರಬಹುದು, ಸಾಮಾನ್ಯವಾಗಿ ಕೆಲವು ತಿಂಗಳು, ಅಥವಾ ವಾರ, ದಿನ, ಕೆಲವು ಗಂಟೆಗಳು ಮಾತ್ರ ಇದ್ದೀತು...” ಅವನ ಮಾತಿನಿಂದ ನಮಗೆಲ್ಲ ಶಾಕ್‌ ಆಯಿತು. ಅದು ಅವನಿಗೂ ಗೊತ್ತಾಯಿತು. ಅದರಿಂದ ಸಂತೋಷವೂ ಆದಹಾಗಿತ್ತು.
“ಸಾರ್”, “ಅಲ್ಲಾ..” “ಇಲ್ಲಿ ನೋಡಿ”--ನಾವು ಮೂವರೂ ಒಟ್ಟಿಗೆ ಮಾತಾಡಿದೆವು. ಕ್ಲಾರ್ಕು ಜೋರಾಗಿ ತಲೆ ಆಡಿಸುತ್ತಾ ನೋ ಅಂದ. “ನನಗೆ ಗೊತ್ತು,” ಆತ ನಮ್ಮೆಲ್ಲರಿಗಿಂತ ಗಟ್ಟಿಯಾಗಿ ಹೇಳಿದ, “ನನಗೆ ಗೊತ್ತು, ಪ್ರೀತಿ ಹೇಗಿರಬೇಕು ಅಂತ ಅಂದುಕೊಂಡಿದ್ದೀರೋ ಅದರ ಬಗ್ಗೆ ಹೇಳುತ್ತಿದ್ದೀರಿ ನೀವು. ಪ್ರೀತಿ ಅನ್ನುವುದು ನಿಜವಾಗಿ ಹೇಗಿದೆ ಅನ್ನುವುದನ್ನ ಹೇಳುತ್ತಿದ್ದೇನೆ ನಾನು. ನೀವು ಪ್ರೀತಿ ಅನ್ನುತ್ತೀರಲ್ಲ ಅದು ಕಣ್ಣಿಗೆ ಕಂಡ ಪ್ರತಿ ಸುಂದರ ಹೆಂಗಸಿನ ಬಗೆಗೂ ಗಂಡಸಿನ ಮನಸ್ಸಿನಲ್ಲಿ ಹುಟ್ಟುತ್ತದೆ. ಆದರೆ ಹೆಂಡತಿಯ ಬಗ್ಗೆ ಮಾತ್ರ ಹುಟ್ಟುವುದೇ ಇಲ್ಲ. ಅದಕ್ಕೇ ‘ಬೇರೆಯವರ ಹೆಂಡತಿ ಹಂಸ, ನನ್ನ ಹೆಂಡತಿ ಕಾಗೆ’ ಅನ್ನುವ ಗಾದೆ ಹುಟ್ಟಿದ್ದು.”
“ಹಾರಿಬಲ್! ಪ್ರೀತಿ ಎಂದು ಕರೆಯುವ ಫೀಲಿಂಗು ಮನುಷ್ಯರಲ್ಲಿ ಇದ್ದೇ ಇರುತ್ತದೆ. ಅದು ಕೇವಲ ತಿಂಗಳು, ವರ್ಷ ಅಲ್ಲ, ಜೀವನ ಪರ್ಯಂತ ಇದ್ದೇ ಇರುತ್ತದೆ.”
“ಇಲ್ಲ. ಇರುವುದಿಲ್ಲ. ಮೆನುಲಾಸನು ಜೀವನ ಪರ್ಯಂತ ಹೆಲನಳನ್ನು ಇಷ್ಟಪಟ್ಟ ಎಂದು ಒಪ್ಪಿಕೊಂಡರೂ ಹೆಲನಳಿಗೆ ಜೀವನ ಪರ್ಯಂತ ಪ್ಯಾರಿಸ್ ಇಷ್ಟವಿದ್ದಿರಬಹುದು. ಇದ್ದದ್ದೂ ಹಾಗೇ, ಯಾವಾಗಲೂ ಇರುವುದೂ ಹಾಗೇ. ಬೇರೆ ಥರ ಇರಲು ಸಾಧ್ಯವೇ ಇಲ್ಲ”. ಅವನು ಸಿಗರೇಟು ಹಚ್ಚಿಕೊಂಡ.
“ಆದರೆ ಪರಸ್ಪರ ಫೀಲಿಂಗು ಇರುತ್ತದೆ” ಎಂದ ಲಾಯರು.
“ಇಲ್ಲ. ಒಂದು ರಾಶಿ ಬಟಾಣಿ ಕಾಳಿನಲ್ಲಿ ಸ್ಪೆಶಲ್ಲಾಗಿರುವ ಎರಡು ಬಟಾಣಿಗಳು ಮಾತ್ರ ಪಕ್ಕ ಪಕ್ಕ ಬಿದ್ದು ಜೊತೆಯಾಗಿರುತ್ತವೆ ಅನ್ನುವುದು ಅಸಾಧ್ಯ. ಅಸಾಧ್ಯ ಅಷ್ಟೇ ಅಲ್ಲ. ಆಸೆ ತೃಪ್ತಿಯಾದಮೇಲೆ ಆಗುವ ಬೇಜಾರಿನ ಹಾಗೇನೆ ಅನಿವಾರ್ಯ. ಒಬ್ಬರಿಗೆ ಬೇಗ ಹಾಗನ್ನಿಸಬಹುದು, ಇನ್ನೊಬ್ಬರಿಗೆ ಲೇಟಾಗಿ ಅನಿಸಬಹುದು. ಮೂರ್ಖ ಕಾದಂಬರಿಗಳು ಮಾತ್ರ ‘ಅವರು ಜೀವಮಾನ ಪರ್ಯಂತ ಪ್ರೀತಿಸುತ್ತಾ ಸುಖವಾಗಿದ್ದರು’ ಅನ್ನುತ್ತವೆ. ಏನೂ ಗೊತ್ತಿಲ್ಲದ ಮಕ್ಕಳು ಮಾತ್ರ ಅದನ್ನು ನಂಬುತ್ತಾರೆ. ಗಂಡಸೇ ಆಗಲಿ, ಹೆಂಗಸೇ ಆಗಲಿ ಜೀವಮಾನ ಪರ್ಯಂತ ಪ್ರೀತಿಸುತ್ತಾರೆ ಅನ್ನುವುದೂ ಒಂದೇ ಇವತ್ತು ಹಚ್ಚಿಟ್ಟಿರುವ ಮೋಂಬತ್ತಿ ಯಾವಾಗಲೂ ಉರಿಯುತ್ತಲೇ ಇರುತ್ತದೆ ಅನ್ನುವುದೂ ಒಂದೇ”. ಅವನು ಜೋರಾಗಿ ಸಿಗರೇಟಿನ ಹೊಗೆಯನ್ನು ಎಳೆದುಕೊಳ್ಳುತ್ತಿದ್ದ.
“ನೀವು ದೈಹಿಕವಾದ ಪ್ರೀತಿಯ ಬಗ್ಗೆ ಹೇಳುತ್ತಿದ್ದೀರಿ. ಆದರ್ಶಗಳನ್ನು ಆಧಾರವಾಗಿಟ್ಟುಕೊಂಡ ಪ್ರೀತಿ, ಆಧ್ಯಾತ್ಮಿಕ ಪ್ರೀತಿ, ಆತ್ಮ ಸಂಗಾತ ಅನ್ನುವುದು ಇರಬಹುದು. ಅಲ್ಲವೇ?”
“ಆದರ್ಶ! ಆತ್ಮ ಸಂಗಾತ! ಆಧ್ಯಾತ್ಮಿಕ ಪ್ರೀತಿ!” ವಿಚಿತ್ರವಾಗಿ ಸದ್ದುಮಾಡುತ್ತ ಮಾತನಾಡಿದ. “ಹಾಗಿದ್ದರೆ ಮದುವೆಯಾಗಿ ಮಕ್ಕಳನ್ನು ಹೆರುವುದೇಕೆ? ಸಾರಿ. ಮಾತು ಒರಟಾಯಿತೋ ಏನೋ. ಆಧ್ಯಾತ್ಮಿಕ ಆದರ್ಶಕ್ಕಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರಾ? ಈ ಆದರ್ಶಗಳ ಸಾಮರಸ್ಯದ ಮಾತು ಸುಂದರವಾದ ಯುವಕ ಯುವತಿಯರು ಆಡುತ್ತಾರೆ ಅಷ್ಟೇ. ವಯಸ್ಸಾದವರಲ್ಲ” ಅನ್ನುತ್ತಾ, ನಮ್ಮ ಮಾತು ಒಪ್ಪದೆ, ನರ್ವಸ್ ‌ಆಗಿ ನಗತೊಡಗಿದ. “ನಿಜ. ಪ್ರೀತಿ, ನಿಜವಾದ ಪ್ರೀತಿಯಿಂದ, ನಾವಂದುಕೊಂಡಂತೆ ಮದುವೆ ಸಕ್ಸಸ್ ಆಗುವುದಿಲ್ಲ, ಹಾಳಾಗುತ್ತದೆ.”
“ಆದರೆ, ಸ್ವಾಮೀ, ವಾಸ್ತವ ಸಂಗತಿಗಳು ನಿಮ್ಮ ವಾದಕ್ಕೆ ವಿರುದ್ಧವಾಗಿವೆ. ಮದುವೆಗಳು ಆಗುತ್ತಲೇ ಇವೆ. ಮನುಷ್ಯ ಕುಲ, ಅಥವ ಮನುಷ್ಯರಲ್ಲಿ ಹೆಚ್ಚಿನವರು ಒಟ್ಟಾಗಿ ಬದುಕುತ್ತಲೇ ಇದ್ದಾರೆ, ಎಷ್ಟೋ ಗಂಡ ಹೆಂಡಿರು ಕೊನೆಯವರೆಗೂ ಪ್ರಾಮಾಣಿಕವಾಗಿ, ಗೌರವದಿಂದ ಒಟ್ಟಿಗೆ ಬದುಕುತ್ತಾರೆ” ಎಂದ ಲಾಯರು.
ನೆರೆಗೂದಲ ಮನುಷ್ಯ ಒಂದು ಥರಾ ನಕ್ಕ.
“ಅಲ್ಲಾ! ಮೊದಲು ನೀವು ಪ್ರೀತಿಯೇ ಮದುವೆಗೆ ಆಧಾರ ಅಂದಿರಿ. ದೇಹದ ಪ್ರೀತಿ ಬಿಟ್ಟರೆ ಬೇರೇನೂ ಇರಲಾರದೋ ಏನೋ ಎಂದು ನಾನು ಅನುಮಾನ ಪಟ್ಟಾಗ ಮದುವೆಯ ಆಧಾರದಿಂದ ಪ್ರೀತಿ ಅನ್ನುವುದು ಇದೆ ಎಂದು ಹೇಳುತ್ತಿದ್ದೀರಿ. ಆದರೆ, ನಮ್ಮ ಕಾಲದಲ್ಲಂತೂ ಮದುವೆಯೆಂದರೆ ಬರೀ ಹಿಂಸ, ಬರೀ ಮೋಸ.”
“ಸಾರಿ. ಅಲ್ಲ. ನಾನು ಹೇಳಿದ್ದು ಮದುವೆಗಳು ಇದ್ದವು, ಇದ್ದೇ ಇರುತ್ತವೆ ಅಂತ” ಎಂದ ಲಾಯರು.
“ನಿಜ, ಇವೆ. ಯಾಕೆ ಇವೆ ಹೇಳಿ? ಯಾಕೆ ಅಂದರೆ ಜನ ಮದುವೆ ಅಂದರೆ ಪವಿತ್ರ ಎಂದು ತಿಳಿದಿದ್ದಾರೆ. ಮದುವೆ ಅಂದರೆ ದೇವರ ಸಾಕ್ಷಿಯಾಗಿ ನಡೆಯುವ ಪವಿತ್ರ ಕಾರ್ಯ ಅಂದುಕೊಂಡಿದ್ದಾರೆ. ಅಂಥವರ ಪಾಲಿಗೆ ಮದುವೆಗಳು ಇರುತ್ತವೆ. ಆದರೆ ಸಮಾಜದಲ್ಲಿ ನಮ್ಮ ವರ್ಗದರಿಗೆ, ಮದುವೆ ಅಂದರೆ ಬರೀ ಸಂಭೋಗ. ಆದ್ದರಿಂದಲೇ ಮದುವೆಯೆಂದರೆ ಬರೀ ಮೋಸ ಅಥವಾ ಬರೀ ಹಿಂಸೆ. ಮೋಸವಾಗಿದ್ದರೆ ಎಷ್ಟೋ ಪರವಾಗಿಲ್ಲ. ಗಂಡ ಹೆಂಡತಿಯರು ನಾವು ಸಾಚಾ ಅಂತ ಹೇಳಿಕೊಂಡು ಹಲವು ಸಂಬಂಧ ಇಟ್ಟುಕೊಳ್ಳಬಹುದು. ತಪ್ಪು, ಆದರೂ ವಾಸಿ. ಆದರೆ ಸಾಮಾನ್ಯವಾಗಿ ಏನಾಗುತ್ತದೆ ನೋಡಿ. ಸಾಯುವವರೆಗೂ ಒಟ್ಟಿಗೆ ಇರುವ ಪ್ರತಿಜ್ಞೆ ಮಾಡಿದ ಗಂಡ ಹೆಂಡಿರು ಒಂದು ತಿಂಗಳಾಗುವಷ್ಟರಲ್ಲಿ ಒಬ್ಬರನ್ನ ಒಬ್ಬರು ದ್ವೇಷ ಮಾಡಲು ಶುರುಮಾಡುತ್ತಾರೆ, ಆದರೂ ಒಟ್ಟಿಗೆ ಇರುತ್ತಾರೆ, ಬಲವಂತವಾಗಿ. ಬದುಕು ನರಕ ಆಗುತ್ತದೆ. ಮೈಮರೆಯುವಷ್ಟು ಕುಡಿಯಬೇಕು ಅನಿಸುತ್ತದೆ, ಕೊಲ್ಲುವ ಅಸೆ ಹುಟ್ಟುತ್ತದೆ, ಶೂಟ್‌ಮಾಡಬೇಕು ಅಥವಾ ನಾನೇ ಶೂಟ್ ಮಾಡಿಕೋಬೇಕು ಅನಿಸುತ್ತದೆ, ವಿಷ ಹಾಕಬೇಕು ಅಥವಾ ನಾನೇ ವಿಷಕುಡೀಬೇಕು ಅನಿಸುತ್ತದೆ. ಹಾಗಂತಲೇ ಮುಕ್ತ ಪ್ರೀತಿ, ಫ್ರೀ ಲವ್ ಅಂತ ಏನೇನೋ ಉಪದೇಶಮಾಡುತ್ತೇವೆ. ಮುಕ್ತ ಪ್ರೀತಿಯ ಬಗ್ಗೆ ಮಾತನಾಡುವುದು ಅಂದರೆ ಗಂಡು ಹೆಣ್ಣುಗಳಲ್ಲಿ ಲಪಂಟತನವನ್ನು ಬೆಳೆಸುವುದು ಅಷ್ಟೆ. ಮನೆಯ ಹಳೆಯ ತಳಪಾಯವೇ ಕುಸಿದಿದೆ. ಹೊಸದನ್ನು ಕಟ್ಟಿಕೊಳ್ಳಬೇಕಾಗಿದೆ. ಆದರೆ ಹಾಗಂತ ಲಂಪಟತನವನ್ನು ಹೇಳಬಾರದು ನಾವು.” ಅವನು ಕಾವೇರಿದ್ದ. ಯಾರಾದರೂ ಮಾತಾಡಿ ಅಡ್ಡಿ ಮಾಡುತ್ತಾರೋ ಎಂದು ಆತಂಕಗೊಂಡವನಹಾಗೆ ಒಂದೇ ಉಸಿರಿಗೆ ಮಾತಾಡುತ್ತಿದ್ದ. ನಾವೆಲ್ಲ ಸುಮ್ಮನಾಗಿಬಿಟ್ಟೆವು. ಆಶ್ಚರ್ಯದಿಂದ ಅವನನ್ನೇ ನೋಡುತ್ತಿದ್ದೆವು. ವಿಚಿತ್ರವಾದ ಮೌನ ಇತ್ತು.
“ನಿಜ. ಮ್ಯಾರೀಡ್‌ ಲೈಫಿನಲ್ಲಿ ಇಂಥ ಬಿಕ್ಕಟ್ಟಿನ ಗಳಿಗೆಗಳು ಬರುತ್ತವೆ. ಉದಾಹರಣಗೆ ಪಾಸ್‌ಡ್ನಿಶೆವ್ ನ ಕೇಸನ್ನೇ ನೋಡಿ” ಎಂದ ಲಾಯರು. ಉದ್ರೇಕಕಾರಿಯಾದ ವಿಷಯವನ್ನು, ಕಸಿವಿಸಿ ಹುಟ್ಟಿಸುವ ಮಾತನ್ನು ಬದಲಾಯಿಸುವ ಆಸೆ ಅವನಿಗೆ. “ಅವನು ಅಸೂಯೆಯಿಂದ ಹೆಂಡತಿಯನ್ನು ಹೇಗೆ ಕೊಂದ ನೋಡಿ. ಓದಿದ್ದೀರಲ್ಲವೇ?”
ಹೆಂಗಸು ನಾನು ಓದಿಲ್ಲ ಅಂದಳು. ನರ್ವಸ್ ಆಗಿದ್ದ ಮನುಷ್ಯ ಏನೂ ಹೇಳಲಿಲ್ಲ. ಅವನ ಮುಖದ ಬಣ್ಣ ಬದಲಾಯಿಸಿತು.
“ನಾನು ಯಾರು ಎಂದು ನಿಮಗೆ ಗೊತ್ತಾಗಿರಬೇಕು” ತೋರಿಕೆಯ ಸಮಾಧಾನದಲ್ಲಿ, ತೋರಿಕೆಯ ಮೃದು ದನಿಯಲ್ಲಿ ತಟ್ಟನೆ ಹೇಳಿದ ಅವನು.
“ನಿಮ್ಮ ಪರಿಚಯ ಭಾಗ್ಯವಿಲ್ಲ ನನಗೆ” ಎಂದ ಲಾಯರು.
“ನನ್ನ ಪರಿಚಯದಿಂದ ಯಾವ ಭಾಗ್ಯವೂ ಇಲ್ಲ. ನಾನು ಪಾಸ್‌ಡ್ನಿಶೆವ್. ನೀವು ಹೇಳಿದಂಥ ಬಿಕ್ಕಟ್ಟು ನನ್ನ ಲೈಫಿನಲ್ಲೂ ಬಂತು. ನನ್ನ ಹೆಂಡತಿಯನ್ನು ಕೊಂದುಬಿಟ್ಟೆ” ಅನ್ನುತ್ತಾ ನಮ್ಮೆಲ್ಲರನ್ನೂ ನೋಡಿದ.
ಏನು ಹೇಳಬೇಕೆಂದು ತಿಳಿಯದೆ ಎಲ್ಲರೂ ಸುಮ್ಮನಿದ್ದೆವು.
ಅವನ ಮುಖ ಕೆಂಪಾಯಿತು. ಮತ್ತೆ ಬೆಳ್ಳಗಾಯಿತು.
“ನಾನು ಯಾರಾದರೇನು? ಎಕ್ಸ್‌ಕ್ಯೂಸ್ ಮಿ. ನಿಮಗೆ ಡಿಸ್ಟರ್ಬ್ ಮಾಡಲು ಇಷ್ಟವಿಲ್ಲ.:
“ಇಲ್ಲ, ಹಾಗೇನಿಲ್ಲ. ಏನೆಂದರೆ...” ಲಾಯರು ಹೇಳಿದ. ‘ಆದರೆ ಏನೆಂದರೆ’ ಎಂಬುದು ಏನೆಂದು ಅವನಿಗೂ ತಿಳಿಯದೆ ಸುಮ್ಮನಾಗಿಬಿಟ್ಟ.
ಪಾಸ್‌ಡ್ನಿಶೆವ್ ಅವನ ಮಾತು ಕೇಳಿಸಿಕೊಳ್ಳದೆ ತಟ್ಟನೆ ತಿರುಗಿ ತನ್ನ ಮೊದಲಿನ ಜಾಗಕ್ಕೆ ಹೋಗಿ ಕುಳಿತುಬಿಟ್ಟ. ಲಾಯರು ಮತ್ತು ಹೆಂಗಸು ಏನೋ ಪಿಸುಮಾತಾಡಿಕೊಂಡರು. ನಾನು ಪಾಸ್‌ಡ್ನಿಶೆವ್ ನ ಪಕ್ಕದಲ್ಲಿ ಮಾತಾಡದೆ ಕೂತುಕೊಂಡೆ. ಏನು ಹೇಳಬೇಕೆಂದು ಹೊಳೆಯಲಿಲ್ಲ. ಏನಾದರೂ ಓದೋಣವೆಂದರೆ ಬೆಳಕು ಕಡಮೆ ಇತ್ತು. ಕಣ್ಣು ಮುಚ್ಚಿಕೊಂಡು ನಿದ್ದೆ ಬಂದವನಹಾಗೆ ಸುಮ್ಮನಿದ್ದುಬಿಟ್ಟೆ. ಮುಂದಿನ ಸ್ಟೇಷನ್ನಿನವರೆಗೂ ಹೀಗೆಯೇ ಇದ್ದೆವು.
ಸ್ಟೇಷನ್ನು ಬಂದಾಗ ಲಾಯರು ಮತ್ತು ಹೆಂಗಸು ಟಿಟಿಯೊಡನೆ ಮಾತಾಡಿ ಬೇರೆ ಬೋಗಿಗೆ ಹೋದರು. ಕ್ಲಾರ್ಕು ಉದ್ದಕ್ಕೆ ಮೈಚಾಚಿ ಮಲಗಿಬಿಟ್ಟ. ಪಾಸ್‌ಡ್ನಿಶೆವ್ ಒಂದಾದಮೇಲೆ ಒಂದು ಸಿಗರೇಟು ಸೇದುತ್ತಾ, ಹಿಂದಿನ ಸ್ಟೇಷನ್ನಿನಲ್ಲಿ ಮಾಡಿಕೊಂಡಿದ್ದ ಟೀ ಕುಡಿಯುತ್ತಾ ಕೂತಿದ್ದ.
ನಾನು ಕಣ್ಣು ತೆರೆದು ಅವನತ್ತ ನೋಡಿದಾಗ ರೇಗಿಕೊಂಡ ದನಿಯಲ್ಲಿ, “ನಾನು ಯಾರು ಎಂದು ಗೊತ್ತಾದಮೇಲೆ ನನ್ನ ಜೊತೆ ಕೂತಿರುವುದಕ್ಕೆ ನಿಮಗೆ ಕಷ್ಟವಾಗಬಹುದು. ಹಾಗಿದ್ದರೆ ಬೇರೆ ಕಡೆಗೆ ಹೋಗುತ್ತೇನೆ” ಎಂದ.
“ಇಲ್ಲ, ಇಲ್ಲ. ಹಾಗೇನೂ ಇಲ್ಲ” ಎಂದೆ.
“ಹಾಗಿದ್ದರೆ ಸ್ವಲ್ಪ ಟೀ ಕೊಡಲೇ? ತುಂಬಾ ಸ್ಟ್ರಾಂಗಾಗಿದೆ.”
ಲೋಟಕ್ಕೆ ಟೀ ಬಗ್ಗಿಸಿ ಕೊಟ್ಟ.
ಅವನು ಮುಂದೆ ಬಗ್ಗಿ, ಮೊಳಕಾಲುಗಳ ಮೇಲೆ ಮೊಳಕೈ ಇಟ್ಟುಕೊಂಡು, ತಲೆಯನ್ನು ಎರಡೂ ಕೈಗಳಲ್ಲಿ ಒತ್ತಿಕೊಂಡ.
“ಮಾತು, ಮಾತು. ಬರೀ ಮಾತು. ಎಲ್ಲಾ ಸುಳ್ಳು...” ಎಂದ.
“ಯಾವ ವಿಚಾರಕ್ಕೆ ಹೇಳುತ್ತಿದ್ದೀರಿ?” ಎಂದೆ.
“ಪ್ರೀತಿಯ ಬಗ್ಗೆ ಏನೇನೋ ಹೇಳುತ್ತಿದ್ದರಲ್ಲಾ, ಅದೇ ವಿಚಾರ! ಪ್ರೀತಿ, ಮದುವೆ, ಫ್ಯಾಮಿಲಿ-ಎಲ್ಲಾ ಸುಳ್ಳು, ಸುಳ್ಳು, ಸುಳ್ಳು.” ಸ್ವಲ್ಪ ಹೊತ್ತು ಸುಮ್ಮನಿದ್ದು “ನಿದ್ರೆ ಬರುತ್ತಿಲ್ಲವೇ?” ಅಂದ.
“ಇಲ್ಲ.”
“ಹಾಗಿದ್ದರೆ ಪ್ರೀತಿಯ ಕಾರಣದಿಂದಲೇ ಹೇಗೆ ಇಂಥ ಕೆಲಸ ಮಾಡಿದೆ ಹೇಳಲೆ? ಕೇಳುತ್ತೀರಾ?”
“ನಿಮ್ಮ ಮನಸ್ಸಿಗೆ ನೋವಾಗುತ್ತದೇನೋ?”
“ಇಲ್ಲ. ಮಾತಾಡದೆ ಸುಮ್ಮನಿದ್ದರೆ ನೋವಾಗುತ್ತದೆ. ಟೀ ಕುಡಿಯಿರಿ. ತುಂಬಾ ಸ್ಟ್ರಾಂಗಾಗಿದೆಯಾ?”
ಬಿಯರ್‌ನಷ್ಟು ಕಹಿಯಾಗಿತ್ತು ಟೀ. ಆದರೂ ಒಂದು ಲೋಟ ಪೂರ್ತಿ ಕುಡಿದೆ. ಆಗ ಟಿಟಿ ನಮ್ಮ ಪಕ್ಕದಲ್ಲಿ ಹಾದು ಹೋದ. ಅವನು ಮಾತು ನಿಲ್ಲಿಸಿದ. ಟಿಟಿ ಹೋದ ದಿಕ್ಕಿನಲ್ಲೇ ಕೆಕ್ಕರಿಸಿಕೊಂಡು ನೋಡುತ್ತಿದ್ದ. ಟಿಟಿ ವಾಪಸ್ಸು ಬಂದು ನಮ್ಮನ್ನು ದಾಟಿ ಹೋಗುವವರೆಗೂ ಸುಮ್ಮನೆ ನೋಡುತ್ತಲೇ ಇದ್ದ. ಆಮೇಲೆ ಒಮ್ಮೆ ಶುರುಮಾಡಿದವನು ಕಥೆ ಮುಗಿಯುವವರೆಗೆ ಎಲ್ಲೂ ಮಾತು ನಿಲ್ಲಿಸಲಿಲ್ಲ. ಹೊಸ ಪ್ರಯಾಣಿಕರು ಬಂದರೂ ಅದು ಅವನ ಮಾತಿಗೆ ಅಡ್ಡಿಯಾಗಲಿಲ್ಲ.
ಕಥೆ ಹೇಳುತ್ತ ಹೇಳುತ್ತ ಅವನ ಮುಖ ಅದೆಷ್ಟೋ ಬಾರಿ ಪೂರಾ ಎಂದರೆ ಪೂರಾ ಬದಲಾಯಿತು, ಮೊದಲು ಕಂಡದ್ದಕ್ಕೂ ಈಗ ಕಾಣುತ್ತಿರುವುದಕ್ಕೂ ಸಂಬಂಧವೇ ಇಲ್ಲವೇನೋ ಅನ್ನುವಹಾಗೆ. ಅವನ ಕಣ್ಣು, ಬಾಯಿ, ಮೀಸೆ, ಗಡ್ಡ ಕೂಡ ಹೊಸದಾದಹಾಗೆ ಅನ್ನಿಸುತ್ತಿತ್ತು. ಅದೆಲ್ಲ ಛಾಯಾಮಾತ್ರವೆಂಬಂತೆ, ಐದು ನಿಮಿಷಗಳ ಕಾಲ ನನಗೆ ಕಂಡ ಮುಖ ಐದು ನಿಮಿಷದ ಹಿಂದೆ ನಾನು ಕಂಡ ಮುಖವೇ ಅಲ್ಲ ಅನಿಸಿಬಿಡುತ್ತಿತ್ತು. ಹೇಗಾಗುತ್ತಿತ್ತೊ ಏನೋ ಮತ್ತೆ ಬದಲಾಗುತ್ತಿತ್ತು. ಗುರುತೇ ಸಿಕ್ಕುತ್ತಿರಲಿಲ್ಲ.
(ಮುಂದುವರೆಯುವುದು)

Rating
No votes yet

Comments