" ಟಿಬೇಟಿನ ಪೂರ್ವಾಪರ (ಭಾಗ-1) "

" ಟಿಬೇಟಿನ ಪೂರ್ವಾಪರ (ಭಾಗ-1) "

ಚಿತ್ರ

 
                                 
      ಅದು 2008 ನೇ ಇಸವಿಯ ಮಾರ್ಚ ತಿಂಗಳ ಎರಡನೆ ವಾರದ ಒಂದು ದಿನ ಟಿಬೇಟಿಯನ್ನರ ಮೇಲೆ ಲಾಸಾದಲ್ಲಿ ನಡೆದ ಪೋಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆ ಕುರಿತಂತೆ ಟೆಲಿವಿಜನ್ ಜಾಲಗಳಲ್ಲಿ ಸುದ್ದಿಯ ತುಣುಕೊಂದು ಬಿತ್ತರಗೊಳ್ಳುತ್ತಿದ್ದಂತೆ ನೇಪಾಳದ ಕಠ್ಮಂಡು ಭಾರತದ ನವದೆಹಲಿ ಮತ್ತು ಧರ್ಮಶಾಲಾ ಅಮೇರಿಕಾದ ಲಾಸ್ ಏಂಜಲಿಸ್ ಮತ್ತು ನ್ಯೂಯಾರ್ಕ, ಇಂಗ್ಲಂಡಿನ ಲಂಡನ್ ಹಾಗೂ ಫ್ರಾನ್ಸ್ ದೇಶದ ಪ್ಯಾರಿಸ್ ಮುಂತಾದ ಜಗತ್ತಿನ ಪ್ರಮುಖ ನಗರಗಳಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತ ಟಿಬೇಟಿಯನ್ನರು ಅಲ್ಲಲ್ಲಿನ ಚೈನಾ ರಾಯಭಾರಿ ಕಛೇರಿಗಳ ಮುಂದೆ ಪ್ರತಿಭಟನೆ ಮಾಡಿ ತಮ್ಮ ಅಸಹನೆಯನ್ನು ವ್ಯಕ್ತ ಪಡಿಸಿದ್ದಾರೆ. ಈ ಪ್ರತಿಭಟನೆ ಜಗತ್ತಿನ ಸಾಮಾನ್ಯ ಜನರ ಓದುಗರ ಮತ್ತು ದೂರದರ್ಶನ ನೋಡುಗರ ಕುತೂಹಲ ಕೆರಳಿಸಿರಲು ಸಾಕು. ಸಾಮಾನ್ಯವಾಗಿ ನಮಗೆ ಟಿಬೇಟಿಯನ್ನರೆಂದರೆ ನಮಗೆ ಕರ್ನಾಟಕದ ಬೆಂಗಳೂರು ಬೈಲುಕುಪ್ಪೆ ಕೊಳ್ಳೆಗಾಲ ಹುಣಸೂರು ಮತ್ತು ಮುಂಡಗೋಡುಗಳಲ್ಲಿ ಆಸರೆ ಪಡೆದ ದೇಹಾಕೃತಿಯಲ್ಲಿ ನಮಗಿಂತ ಭಿನ್ನರಾದ ಅಗಲಮುಖ ಚಪ್ಪಟೆ ಮೂಗು ಮತ್ತು ವರ್ಣ ಭಿನ್ನತೆಯುಳ್ಳ ಒಟ್ಟಾರೆಯಾಗಿ ಸ್ಥೂಲವಾಗಿ ಚೀನಿ ಮತ್ತು ಮಂಗೋಲಿಯನ್ ಚಹರೆಗೆ ಹತ್ತಿರವಿರುವ ಒಂದು ವಿಶಿಷ್ಟ ಜನಾಂಗವೆನಿಸುತ್ತದೆ. ಇವರು ತಾವು ವಾಸಿಸುವ ಪರಿಸರದ ಸುತ್ತ ಮುತ್ತಲಿನ ಸಣ್ಣ ದೊಡ್ಡ ಪಟ್ಟಣಗಳಲ್ಲಿ ಉಣ್ಣೆಯ ಸ್ವೆಟರ್ ಮತ್ತು ಟೊಪ್ಪಿಗಳನ್ನು ಮಾರುವ ಕುತೂಹಲ ಹುಟ್ಟಿಸುವ ವ್ಯಕ್ತಿಗಳಾಗಿರುತ್ತಾರೆ. ಅವರು ಇಲ್ಲಿಗೆ ವಲಸೆ ಬಂದಾಗ ತಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಪರಿಚಯವಿರಲಿಲ್ಲ ನಂತರದ ಕಾಲದಲ್ಲಿ ಹರಕು ಮುರುಕಾಗಿ ಇಲ್ಲಿನ ಪ್ರಾದೇಶಿಕ ಭಾಷೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವ್ಯವಹರಿಸಲು ತೊಡಗಿದ ಒಂದು ನಿರುಪದ್ರವಿ ಜನಾಂಗ. ಅವರಲ್ಲಿ ಆಗಿನ ತಲೆಮಾರಿನವರು ತಮ್ಮ ಪ್ರಾದೇಶಿಕ ವೇಷ ಭೂಷಗಳನ್ನು ಧರಿಸುತ್ತ ಬಂದಿದ್ದು ನಂತರದ ಯುವ ಪೀಳಿಗೆ ಆಧುನಿಕ ಪಾಶ್ಚಾತ್ಯ ಉಡುಗೆ ತೊಡುಗೆಗಳಿಗೆ ಮೊರೆ ಹೋಗಿದ್ದಾರೆ. ನಮ್ಮಲ್ಲಿ ಬೆರಳೆಣಿಕೆಯ ಹಲವರನ್ನು ಬಿಟ್ಟರೆ ಉಳಿದವರಿಗೆ ಅವರ ದೇಶಭ್ರಷ್ಟತೆ ಚೀನಿಯರ ದಬ್ಬಾಳಿಕೆ ಮತ್ತು ಪರ ರಾಷ್ಟ್ರಗಳ ಹಂಗಿನಲ್ಲಿ ಬಾಳಬೇಕಾಗಿ ಬಂದ ಅವರ ಅಸಹಾಯಕತೆಯ ಬಗೆಗೆ ಏನೂ ತಿಳಿದಿಲ್ಲವೆನ್ನಬಹುದು. ಈ ಟಿಬೇಟಿಯನ್ನರು ಮೂಲತಃ ಶಾಂತಿಪ್ರಿಯರು ಸರಳ ಬದುಕನ್ನು ಇಷ್ಟ ಪಡುವ ಅಹಿಂಸಾವಾದಿಗಳು. ಇಂತಹ ಜನಾಂಗದ ಯುವ ಪೀಳಿಗೆ ಏಕೆ ಈ ರೀತಿಯ ಪ್ರತಿಭಟನೆಗೆÀ ಮುಂದಾಗಿದೆ ಎಂದು ಆಲೋಚಿಸಿದರೆ ಅವರು ಅರ್ಧ ಶತಮಾನದ ಕಾಲಕ್ಕೂ ಮಿಕ್ಕಿ ಬದುಕುತ್ತ ಬಂದಿರುವ ಅವರ ದಾರುಣ ಬದುಕು ಬಿಚ್ಚಿ ಕೊಳ್ಳುತ್ತದೆ.
 
     ಚೀನಿಯರ ಈ ದೌರ್ಜನ್ಯ ಖಂಡಿಸಿ ಹಲವು ರಾಷ್ಟ್ರಗಳು ಕ್ಷೀಣ ಸ್ವರದಲ್ಲಿ ಖಂಡಿಸಿವೆ, ವಿಶ್ವ ಸಂಸ್ಥೆಯೂ ಅದೇ ರೀತಿ ತನ್ನ ಅಸಹನೆಯನ್ನು ವ್ಯಕ್ತ ಪಡಿಸಿದೆ. ಲಾಸಾದ ಘಟನೆ ಕುರಿತಂತೆ ಮಧ್ಯ ಏಸಿಯಾದಲ್ಲಿ ಅದರಲ್ಲಿಯೂ ಭಾರತ ಪಾಕಿಸ್ಥಾನ ನೇಪಾಳ ಶ್ರೀಲಂಕಾ ಮತ್ತು ಬರ್ಮಾ ಮುಂತಾದ ರಾಷ್ಟ್ರಗಳು ಅಳೆದು ಸುರಿದು ಕ್ಷೀಣ ಸ್ವರದಲ್ಲಿ ಈ ದೌರ್ಜನ್ಯದ ಘಟನೆಯನ್ನು ಖಂಡಿಸಿವೆ. ನಮ್ಮ ದೇಶದ ಪ್ರಮುಖ ವಿರೋಧಿ ಪಕ್ಷಗಳು ಗಟ್ಟಿದನಿಯಲ್ಲಿ ಅರ್ಧ ಶತಮಾನಕ್ಕೂ ಮಿಕ್ಕಿ ಆಡಳಿತ ನಡೆಸಿದ ಆಡಳಿತ ಪಕ್ಷವನ್ನು ಅದರ ಬೆಂಬಲಿತ ಪಕ್ಷಗಳನ್ನು ಟೀಕಿಸಿವೆ. ಪೀಕಿಂಗ್‍ನಲ್ಲಿ ಚಳಿ ಬಿದ್ದರೆ ಇಲ್ಲಿ ಸೀನುವ ಮಾವೋ ಅನುಯಾಯಿಗಳು ಟಿಬೇಟ್ ಚೀನಾದ ಅವಿಭಾಜ್ಯ ಅಂಗ ಆದರೂ ಟಿಬೇಟಿಯನ್ನರ ಮೇಲಿನ ದೌರ್ಜನ್ಯವನ್ನು ನಿಲ್ಲಿಸ ಬೇಕೆಂದು ಫರ್ಮಾನು ಹೊರಡಿಸಿದ್ದಾರೆ. ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಅಭಿಪ್ರಾಯಗಳನ್ನು ಪರಿಗಣಿಸಿ ಚೈನಾ ಸರ್ಕಾರ ಭಾರತ ಸರ್ಕಾರಕ್ಕೆ ಟಿಬೇಟಿಯನ್ ನಿರಾಶ್ರಿತರು ಭಾರತಕ್ಕೆ ಬಾರದಂತೆ ತನ್ನ ಗಡಿ ಕಾವಲನ್ನು ಬಿಗಿ ಗೊಳಿಸಬೇಕೆಂದು ತಾಕೀತು ಮಾಡಿದೆ. ನಮ್ಮ ಉಪ ರಾಷ್ಟ್ರಪತಿಗಳು ಸಿಕ್ಕಿಂ ಭೇಟಿಗೆ ಚೀನಿ ಸರ್ಕಾರ ಆಕ್ಷೇಪ ವ್ಯಕ್ತ ಪಡಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಟಿಬೇಟ್ ಚೀನಾದ ಅವಿಭಾಜ್ಯ ಅಂಗವೆಂದು ಚೀನಿ ಸರ್ಕಾರವನ್ನು ಸಂತೋಷಗೊಳಿಸುವ ರೀತಿಯಲ್ಲಿ ಉತ್ತರಿಸಿದ್ದು ಇದನ್ನು ಚೀನಿ
ಸರ್ಕಾರ ಪ್ರಚುರ ಪಡಿಸಿದೆ. ಟಿಬೇಟ್ ಚೈನಾದ ಒಂದು ಅಂಗವೆಂದು ಒಪ್ಪಿಕೊಂಡರೆ ಟಿಬೇಟಿಯನ್ನರು ಚೈನಾದ ಪ್ರಜೆಗಳಾಗುತ್ತಾರೆ, ಹಾಗಿದ್ದ ಮೇಲೆ ಅವರು ದೇಶ ಭ್ರಷ್ಟರಾಗಿ ವಿದೇಶಗಳಲ್ಲಿ ಆಶ್ರಯ ಪಡೆದುದೇಕೆ ? ಭಾರತದಲ್ಲಿ ಐದು ವಿಭಿನ್ನ ಪ್ರದೇಶಗಳಲ್ಲಿ ನೆಲೆ ಕಂಡು ಕೊಂಡಿರುವ ಟಿಬೇಟಿಯನ್ನರಿಗೆ ಅಂದಿನ ಭಾರತ ಸರ್ಕಾರ ಆಶ್ರಯ ನೀಡಿತೇಕೆ? ದೇಶ ಭ್ರಷ್ಟ ಟಿಬೇಟಿಯನ್ನರ ಸರ್ಕಾರ ಧರ್ಮಶಾಲಾದಲ್ಲಿ ಅಸ್ತಿತ್ವದಲ್ಲಿರುವುದೇಕೆ? ಟಿಬೇಟಿಯನ್ನರು ತಮ್ಮ ಧರ್ಮ ಗುರುವೆಂದು ಆರಾಧಿಸುವ ದಲಾಯಿಲಾಮಾರಿಗೆ ಆಶ್ರಯ ನೀಡಿರುವುದೇಕೆ? ಎನ್ನುವ ಸರಣಿ ಪ್ರಶ್ನೆಗಳು ಧುತ್ತೆಂದು ನಮ್ಮ ಎದುರು ನಿಲ್ಲುತ್ತವೆ. ಆದರೂ ಚೀನಾ ಸರ್ಕಾರ ಹೊಟ್ಟೆಯಲ್ಲಿ ದ್ವೇಷ ತುಂಬಿಕೊಂಡು ಪ್ರಸಂಗ ಬಂದಾಗ ದ್ವೇಷ ಕಾರಿಕೊಳ್ಳುತ್ತಿರುವುದೇಕೆ? ವಿಷಯ ಅಷ್ಟು ಸರಳವಾಗಿಲ್ಲ. ಹಿಂದೊಮ್ಮೆ ಹೀಗೆ ಚೀನಾ ಟಿಬೇಟನ್ನು ಆಕ್ರಮಿಸಿ ನರವಧೆ ಪ್ರಾರಂಭಿಸಿದ ಸಂಧರ್ಭದಲ್ಲಿ ಟಿಬೇಟಿಯನ್ನರು ನೇಪಾಳ ದೇಶದ ಗಡಿಗೆ ಓಡಿ ಬಂದಾಗ ಚೀನಾದ ಬೆದರಿಕೆಗೆ ಮಣಿದ ನೇಪಾಳ ಸರ್ಕಾರ ಟಿಬೇಟ್ ನಿರಾಶ್ರಿತರ ಗುಂಪನ್ನು ಚೈನಾಕ್ಕೆ ಒಪ್ಪಿಸಿದಾಗ ಆ ನಿಲುವನ್ನು ಕುರಿತು ಸಂಯುಕ್ತ ರಾಷ್ಟ್ರ ಸಂಸ್ಥೆ ತೀವ್ರ ಖಂಡನೆಯನ್ನು ವ್ಯಕ್ತ ಪಡಿಸಿತ್ತು. ಹೀಗೆಯೆ ಅಂದಿನಿಂದ ಇಂದಿನ ವರೆಗೂ ಘಟನೆಗಳ ವಿವರವನ್ನು ನೀಡುತ್ತ ಹೊದರೆ ಈ ಲೇಖನ ಬೃಹದಾಕಾರವಾಗಿ ಬೆಳೆಯುತ್ತ ಹೋಗುತ್ತದೆ. ವಿಷಯ ಇಷ್ಟು ಸಂಕೀರ್ಣವಾಗಿರುತ್ತ ಟಿಬೇಟ್ ಅಂದರೆ ಯಾವ ದೇಶ ಅದು ಎಲ್ಲಿದೆ ಅದರ ಅಸ್ತ್ತಿತ್ವ ಮತ್ತು ಮಹತ್ವವೇನು ಚೈನಾ ಏಕೆ ಅದನ್ನು ಆಕ್ರಮಸಿದೆ ಆ ಆಕ್ರಮಣದ ಉದ್ದೇಶವೇನು? ಎಂಬ ಪ್ರಶ್ನೆಗಳು ಸಾಲು ಸಾಲಾಗಿ ಎದುರಾಗುತ್ತವೆ. ಭಾರತ ತನ್ನದೆ ಆದ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಏಳುತ್ತಿದ್ದಿರಬೇಕಾದರೆ ಟಿಬೇಟಿಯನ್ ನಿರಾಶ್ರಿತರಿಗೆ ಆಶ್ರಯ ನೀಡಿ ಚೀನಾದ ದ್ವೇಷ ಕಟ್ಟಿಕೊಂಡಿರುವುದೇಕೆ ಎಂಬ ವಿಷಯಗಳನ್ನು ತಿಳಿಯ ಬೇಕೆಂದರೆ ಟಿಬೇಟಿನ ಸ್ಥೂಲ ಪರಿಚಯ ಮುಖ್ಯವಾಗುತ್ತದೆ.
 
     ಭೌಗೋಳಿಕವಾಗಿ ಟಿಬೇಟ್ ಸಮುದ್ರ ಮಟ್ಟದಿಂದ 11000 ಅಡಿಗಳ ಮೇಲೆ ಹಿಮಾಲಯದ ಪರ್ವತ ಶ್ರೇಣಿಯಲ್ಲಿ ಅಸ್ತಿತ್ವದಲ್ಲಿರುವ ಒಂದು ಎತ್ತರದ ಭೂ ಪ್ರದೇಶ. ಈ ಬೃಹತ್ತಾದ ಟಿಬೇಟಿನ ಪೂರ್ವಕ್ಕೆ ಚೀನಾದ ತಪ್ಪಲು ಪ್ರದೇಶವಿದೆ, ಪಶ್ಚಿಮಕ್ಕೆ ಭಾರತ ಪಾಕಿಸ್ಥಾನ ಅಫಗಾನಿಸ್ಥಾನ ದೇಶಗಳ ಗಡಿಗಳಿದ್ದರೆ ದಕ್ಷಿಣಕ್ಕೆ ನೇಪಾಳ ದೇಶ ಮತ್ತು ಹಿಮಾಲಯದ ಪರ್ವತ ಶ್ರೇಣಿಗಳಿವೆ, ಉತ್ತರಕ್ಕೆ ಪೂರ್ವ ತುರ್ಕಸ್ಥಾನವಿದೆ. ಈ ಪ್ರದೇಶವನ್ನೆ ಚೈನಾ ಆಕ್ರಮಿಸಿದ್ದು ಅದರ ಈಗಿನ ಹೆಸರು ಕ್ಸಿನ್‍ಜಿಯಾಂಗ್. ಇರಾವತಿ ಯಾಂಗತ್ಸಿಕ್ಯಾಂಗ್ ಸಲ್ವಿನ್ ಮತ್ತು ತಿಸ್ತಾಗಳು ಟಿಬೇಟಿನ ಪ್ರಮುಖ ನದಿಗಳಾಗಿದ್ದು ಇವು ಚೀನಾದ ಬಯಲು ಪ್ರದೇಶ ಮತ್ತು ಆಗ್ನೇಯ ಏಷ್ಯಾದ ಕಡೆಗೆ ಭೋರ್ಗರೆಯುತ್ತ ಹರಿಯುತ್ತಿರುವ ಬೃಹತ್ತ ನದಿಗಳು. ಇದು ಈ ಪ್ರದೇಶದ ಭಿನ್ನತೆಯನ್ನು ತೋರಿಸುವಂತಹುದು. ನೇಪಾಳ ಟಿಬೇಟ್ ಸಿಕ್ಕಿಂ ಭೂತಾನ ಅರುಣಾಚಲಪ್ರದೇಶ ಆಸಾಮ ಬರ್ಮಾ ಮಣಿಪುರ ಮತ್ತು ಮೇಘಾಲಯದ ಜನರು ಚೀನಿಯರ ಮುಖ ಚರ್ಯೆಗಳನ್ನು ಹೊಂದಿರುವರೆಂಬ ಸಾಮಾನ್ಯ ತೀರ್ಮಾನಕ್ಕೆ ನಾವು ಬಂದು ಬಿಡುತ್ತೇವೆ. ಆದರೆ ಈ ಎಲ್ಲ ಪ್ರದೇಶಗಳ ಜನರು ಭಿನ್ನ ಪರಂಪರೆ ಚಹರೆ ಮತ್ತು ಆಚರಣೆಗಳನ್ನು ಹೊಂದಿರುವರೆಂಬುದನ್ನು ನಾವು ಪ್ರಮುಖವಾಗಿ ಮನಗಾಣಬೇಕು. ಟಿಬೇಟ್ ಜನಾಂಗ ಚೀನಿ ಜನಾಂಗವಲ್ಲ ಅದೇ ಒಂದು ಪ್ರತ್ಯೇಕ ಜನಾಂಗ ಅಂದರೆ ಅದೊಂದು ಮಿಶ್ರ ಜನಾಂಗ ಅವರ ಮುಖಚರ್ಯೆ ಪೂರ್ವ ಕಾಲದ ಅಲೆಮಾರಿ ತುರ್ಕರನ್ನು ಮತ್ತು ಮಂಗೋಲಿಯನ್ನರನ್ನು ಹೋಲುತ್ತದೆ. ಇನ್ನು ಭಾಷೆಯ ವಿಷಯಕ್ಕೆ ಬರುವುದಾದರೆ ಟಿಬೇಟಿಯನ್ನರ ಲಿಪಿ ಮಧ್ಯಕಾಲೀನ ಸಂಸ್ಕ್ರತಕ್ಕೆ ಹತ್ತಿರವಾಗಿದೆ. ಮೇಲಾಗಿ ಟಿಬೇಟಿಯನ್ ಭಾಷೆಗೂ ಚೀನಿ ಭಾಷೆಗೂ ಹೆಚ್ಚಿನ ಸಾಮ್ಯವಿಲ್ಲ. ಟಿಬೇಟಿಯನ್ ಭಾಷೆಯಲ್ಲಿ ವ್ಯಂಜನಗಳಿಗಿಂತ ಸ್ವರಗಳ ಬಳಕೆ ಹೆಚ್ಚಾಗಿದೆ.
 
     ಟಿಬೇಟನ್ನು ಯುತ್ಸಾಂಗ್ ಖಾಂ ಮತ್ತು ಆಮ್ಡೊ ಪ್ರದೇಶಗಳೆಂದು ವಿಭಾಗಿಸಿದ್ದು ಯುತ್ಸಾಂಗ್ ಟಿಬೇಟಿಯನ್ನರು ಚೀನಿಯರಿಗಿಂತಲೂ ಎತ್ತರವಾಗಿದ್ದರೂ ಖಾಂ ಮತ್ತು ಆಮ್ಡೋ ಪ್ರದೇಶದ ಟಿಬೇಟಿಯನ್ನರಿಗಿಂತ ಸ್ವಲ್ಪ ಕುಳ್ಳಗಿದ್ದಾರೆ. ಯುತ್ಸಾಂಗ್ ವಾಸಿಗಳು ದುಂಡನೆಯ ತಲೆ ಚಪ್ಪಟೆ ಮೂಗು ಎತ್ತರವಾದ ಕೆನ್ನೆ ಮೂಳೆಯವರಾಗಿದ್ದು ಸಣ್ಣ ತಲೆಗಳನ್ನು ಹೊಂದಿದ್ದು ತಲೆಯಲ್ಲಿ ಮತ್ತು ದೇಹದ ಇತರೆ ಭಾಗಗಳಲ್ಲಿ ಕಡಿಮೆ ಕೂದಲನ್ನು ಹೊಂದಿರುತ್ತಾರೆ. ಆದರೆ ಖಾಂ ಮತ್ತು ಆಮ್ಡೋ ಪ್ರದೇಶದವರು ಎತ್ತರದ ನಿಲುವಿನ ವಿಶಾಲಭುಜ ಮತ್ತು ಉದ್ದನೆಯ ತಲೆ ಹೊಂದಿವರಾಗಿದ್ದಾರೆ. ಅವರು ಶತ ಶತಮಾನಗಳ ಕಾಲದಿಂದ ಪ್ರಕೃತಿಯ ಪ್ರತಿಕೂಲ ಪರಿಸ್ಥಿತಿಯಲ್ಲಿಯೆ ಹುಟ್ಟಿ ಬಾಳಿ ಬದುಕಿ ಬಂದ ಜನಾಂಗ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಟಿಬೇಟಿಯನ್ನರ ಜನಸಂಖ್ಯೆ ಸುಮಾರು ಅರವತ್ತೈದು ಲಕ್ಷ. ಇವರ ಪೈಕಿ ಅರ್ಧದಷ್ಟು ಜನರು ಅಲೆಮಾರಿಗಳು ಯಾಕ್ ಪರಿಪಾಲನೆ ಇವರ ಪ್ರಧಾನ ಕಸುಬು. ಮಿಕ್ಕವರು ದಕ್ಷಿಣ ಟಿಬೇಟ್‍ನಲ್ಲಿ ಹರಿಯುವ ಬ್ರಹ್ಮಪುತ್ರ ನದಿ ತೀರದಲ್ಲಿ ಮತ್ತು ಪೂರ್ವದ ಖಾಂ ಪ್ರದೇಶದಲ್ಲಿ ವ್ಯವಸಾಯ ನಿರತರಾದವರು. ಇವರ ಪ್ರಮುಖ ಬೆಳೆ ಬಾರ್ಲಿ ಅಪರೂಪವಾಗಿ ಅಲೂಗಡ್ಡೆ ಮೂಲಂಗಿ ಹೂಕೋಸು ಮತ್ತು ಬಟಾಣಿ ಬೆಳೆಯುತ್ತಿದ್ದರು. ಅಪರೂಪವಾಗಿ ಯಾಕ್ ಪಶುವಿನ ಮಾಂಸ ಮತ್ತು ಬೆಣ್ಣೆ ಉಪಯೋಗಿಸುತ್ತಿದ್ದರು. ಸಾಂಬಾರು ಪದಾರ್ಥಗಳನ್ನು ತನ್ನ ನೆರೆಯ ದೇಶಗಳಾದ ಭಾರತ ನೇಪಾಳ ತುರ್ಕಸ್ಥಾನ ಭೂತಾನ ಕಾಶ್ಮೀರ ಪಾಕಿಸ್ಥಾನ ಚೀನಾ ಮತ್ತು ಸಿಕ್ಕಿಂ ಗಳಿಂದ ಪಡೆಯುತ್ತಿದ್ದು ವಿನಿಮಯ ರೂಪದಲ್ಲಿ ಯಾಕ್ ಪಶುವಿನ ಉಣ್ಣೆಯನ್ನು ರವಾನಿಸುತ್ತಿದ್ದರು.
 
    ಟಿಬೇಟಿಯನ್ನರ ಬದುಕಿನಲ್ಲಿ ಬೌದ್ಧ ಧರ್ಮ ಹಾಸು ಹೊಕ್ಕಾಗಿದ್ದು ಗಂಡಸರಲ್ಲಿ ಶೇಕಡಾ ಇಪ್ಪತ್ತೈದಕ್ಕೂ ಹೆಚ್ಚು ಜನ ಬ್ರಹ್ಮಚಾರಿಗಳು ಅಲ್ಲಿ ಬಹು ಪತ್ನಿತ್ವ ಮಾನ್ಯತೆ ಪಡೆದಿತ್ತು. ಇವರಲ್ಲಿ ಧರ್ಮಾಚರಣೆ ಕೇವಲ ಹುಟ್ಟು ಸಾವು ಮದುವೆ ಮುಂತಾದ ಸಮಾರಂಭಗಳಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರ ಬದುಕಿನ ಗಳಿಗೆಯನ್ನು ಆವರಿಸಿರುವ ವಿಶಿಷ್ಟ ಜೀವನ ಶೈಲಿ ಅವರದಾಗಿತ್ತು. ಅವರ ಬದುಕಿನಿಂದ ಬೌದ್ಧ ಧರ್ಮವನ್ನು ಬೇರ್ಪಡಿಸಲು ಸಾಧ್ಯವೆ ಇಲ್ಲದಂತಹ ಜೀವನ ಧರ್ಮ ಅವರದಾಗಿತ್ತು. ಅಲ್ಲಿ ಪ್ರತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರಮುಖ ಧಾರ್ಮಿಕ ಕೇಂದ್ರ ಧರ್ಮಶಾಲೆ ವಿಹಾರಗಳು ಮತ್ತು ಅಧ್ಯಯನ ಕೇಂದ್ರಗಳು ಅಸಂಖ್ಯವಾಗಿದ್ದು ಅಲೆಮಾರಿ ಟಿಬೇಟಿಯನ್ನರೂ ಸಹ ಬೌದ್ಧ ಧರ್ಮದಲ್ಲಿ ಪರಮ ನಿಷ್ಟೆಯನ್ನು ಹೊಂದಿದವರಾಗಿದ್ದರು. ಟಿಬೇಟಿನ ರಾಜಧಾನಿ ಲಾಸಾದಲ್ಲಿ ಡ್ರೆಮಂಗ್ ಸೆರಾ ಮತ್ತು ಗಾಂಡೇನ್ ಎಂಬ ಮೂರು ಪ್ರಮುಖ ವಿಹಾರಗಳಿದ್ದು ಇವು ಮೂರೂ ಅಂತರಾಷ್ಟ್ರೀಯ ಮನ್ನಣೆ ಮತ್ತು ಖ್ಯಾತಿಯನ್ನು ಗಳಿಸಿದ್ದ ಅತ್ಯುನ್ನತ ಅಧ್ಯಯನ ಕೇಂದ್ರಗಳಾಗಿದ್ದವು. ಇವು ಟಿಬೇಟಿನ ಪರಂಪರೆ ಭಾಷೆ ಸಂಸ್ಕ್ರತಿ ಕಲೆ ಸಂಗೀತ ಔಷಧಿ ಶಾಸ್ತ್ರಗಳನ್ನು ಉಳಿಸಿ ಬೆಳೆಸುತ್ತ ಬಂದ ಪ್ರಮುಖ ವಿಶ್ವ ವಿದ್ಯಾಲಯಗಳಾಗಿದ್ದವು.
 
     ಇನ್ನು ಇವರ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಸ್ಥೂಲವಾಗಿ ಅವಲೋಕಿಸುವುದಾದಲ್ಲಿ ಟಿಬೇಟಿನಲ್ಲಿ ಲಾಮಾಗಳ ಸಂಖ್ಯೆ ಅಧಿಕ. ಲಾಮಾ ಎಂದರೆ ಗುರು ಎಂದು ಅರ್ಥ. ಲಾಮಾಗಳಿಗಿಂತ ಉನ್ನತ ಧರ್ಮಜ್ಞಾನ ಅಧ್ಯಯನ ಉಳ್ಳವರನ್ನು ಬಿಕ್ಕುಗಳು ಎಂದು ಕರೆಯುತ್ತಿದ್ದರು ಅವರಲ್ಲಿಯ ಹಿರಿಯರನ್ನು ತುಲ್ಕುಗಳೆಂದು ಕರೆಯುತ್ತಿದ್ದು ಪರಮ ಪೂಜ್ಯರನ್ನು ಬೋಧಿಸತ್ವರೆಂದು ಕರೆಯುತ್ತಿದ್ದರು. ಟಿಬೇಟಿನ ಪಾಲಿಗೆ ಇವರು ಒಬ್ಬರೆ ಆಗಿದ್ದು ಅವರೆ ಈಗಿನ ದೇಶಭ್ರಷ್ಟರಾಗಿರುವ ಪರಮ ಪೂಜ್ಯ ದಲಾಯಿ ಲಾಮಾ. ಇವರು ಟಿಬೇಟಿನ ಪಾಲಿಗೆ ಧರ್ಮಗುರುವೂ ಹೌದು ಜೊತೆಗೆ ಆ ದೇಶದ ಸವೋಚ್ಚ ರಾಷ್ಟ್ರೀಯ ನಾಯಕರೂ ಹೌದು ಅವರ ಪರಮದೈವ ಚೆನ್‍ಸಿಂಗ್‍ನ ಅವತಾರವೆಂದು ಟಿಬೇಟಿಯನ್ನರು ಗಾಢವಾಗಿ ನಂಬಿದ್ದರು. ಈ ದೇಶದ ಪ್ರಮುಖ ಮೂರು ಪ್ರದೇಶಗಳಿಂದ ತಲಾ ಹತ್ತರಂತೆ ಮೂವತ್ತು ಲಾಮಾಗಳನ್ನು ತಲಾ ಒಬ್ಬೊಬ್ಬರಂತೆ ಮೂರು ತುಲ್ಕರನ್ನು ಉಳಿದಂತೆ ಗಣ್ಯ ನಾಗರಿಕರನ್ನು ನೇಮಿಸಿ ಒಟ್ಟು ಅರವತ್ಮೂರು ಜನರಿರುವ ರಾಷ್ಟ್ರೀಯ ಶಾಸನಸಭೆಯನ್ನು ಹೊಂದಿದ್ದು ಅದರ ಪರಮೋಚ್ಚರು ದಲಾಯಿಲಾಮಾ ಆಗಿದ್ದರು. ಇವರು ಧರ್ಮ ಮತ್ತು ರಾಷ್ಟ್ರಾಡಳಿತದ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತಿದ್ದರು. ಟಿಬೇಟಿನಲ್ಲಿ ಕ್ರಮವಾಗಿ ಧರ್ಮ ರಾಜಕಾರಣ ಮತ್ತು ಆರ್ಥಿಕತೆಗೆ ಪ್ರಾಧಾನ್ಯತೆ ಕೊಡುತ್ತ ಬಂದದ್ದಾಗಿತ್ತು. ಇಲ್ಲಿನ ಭೂ ಮಾಲಿಕತ್ವ ಪ್ರಭುತ್ವದ್ದಾಗಿದ್ದು ಭೂಮಿಯ ಕೆಲ ಭಾಗಗಳನ್ನು ಕೆಲವು ಸಮುದಾಯಗಳಿಗೆ ಉಳುಮೆಗೆ ನೀಡಲಾಗುತ್ತಿತ್ತು. ಅಲ್ಲಿ ಅಸ್ತಿತ್ವದಲ್ಲಿದ್ದದ್ದು ಒಂದು ರೀತಿಯ ಪಾಳೆಗಾರಿಕೆ ಪ್ರವೃತ್ತಿ. ಧಾರ್ಮಿಕ ಕೇಂದ್ರ ಭೂ ಹಿಡುವಳಿ ಮತ್ತು ರಾಜಕೀಯ ಪ್ರಭುತ್ವ ಕೆಲವೊಂದು ಸಮುದಾಯದ ಒಡೆತನದಲ್ಲಿ ಮಾತ್ರ ಇದ್ದವು. ಅಲೆಮಾರಿಗಳು ಕೃಷಿಕರು ಕುಶಲಕರ್ಮಿಗಳು ಮತ್ತು ಸೇವಾ ವರ್ಗದವರು ಮೇಲ್ಕಂಡ ವ್ಯವಸ್ಥೆಗೆ ಆಧಿನರಾಗಿದ್ದರು. ಅಲ್ಲಿ ಬಡತನವಿತ್ತು ಗುಲಾಮಿಗಿರಿಯಿತ್ತು ಜೀವನ ಕಠಿಣವಾಗಿತ್ತು, ಆದರೆ ಚೀನಾ ಆಕ್ರಮಣ ಮಾಡಿದಾಗ ಚೀನಾ ಹೇಳಿದಷ್ಟು ಟಿಬೇಟಿಯನ್ನರ ಜೀವನ ಅಷ್ಟು ಘನ ಘೋರವಾಗಿರಲಿಲ್ಲ. ಹಸಿವಿನ ಸಾವುಗಳು ಇರಲಿಲ್ಲ ದೌರ್ಜನ್ಯ ಬಲಾತ್ಕಾರಗಳಿರಲಿಲ್ಲ ಅಸಮಾನತೆಯಿರಲಿಲ್ಲ. ಧಾರ್ಮಿಕ ಸ್ವಾತಂತ್ರವಿತ್ತು ಉತ್ಸವ ಮತ್ತು ವಿಶೇಷ ಆಚರಣೆಗಳಲ್ಲಿ ಎಲ್ಲ ವರ್ಗಗಳ ಟಿಬೇಟಿಯನ್ನರು ಸಂತೋಷ ಮತ್ತು ಸಂಭ್ರಮಗಳಿಂದ ಪಾಲ್ಗೊಳ್ಳುತ್ತಿದ್ದರು. ಅವರ ಸಾಮಾಜಿಕ ಜೀವನ ಪರಿಪೂರ್ಣ ಸಮಾನ ವಾಗಿರದಿದ್ದರೂ ದೌರ್ಜನ್ಯ ಬಲಾತ್ಕಾರ ಮತ್ತು ದಮನಕಾರಿ ಆಡಳಿತವಿರಲಿಲ್ಲ.
ಚಿತ್ರ ಕೃಪೆ : ಅಂತರ್ ಜಾಲದಿಂದ
 
                                                                                                                                      (ಮುಂದುವರಿಯುವುದು)

Rating
No votes yet