" ಟಿಬೇಟಿನ ಪೂರ್ವಾಪರ (ಭಾಗ-2)"
ಇನ್ನು ಇಲ್ಲಿಯ ಬೌದ್ಧ ಧರ್ಮದ ವಿಷಯಕ್ಕೆ ಬರುವುದಾದರೆ ಅದಕ್ಕು ಮೊದಲು ಅಲ್ಲಿ ಬಾನ್ ಧರ್ಮವಿತ್ತು. ಏಳನೆಯ ಶತಮಾನದಲ್ಲಿ ಭಾರತೀಯ ಬೌದ್ಧ ಬಿಕ್ಕುಗಳು ಮಹಾಯಾನ್ ಬೌದ್ಧ ಧರ್ಮವನ್ನು ಮಧ್ಯ ಟಿಬೇಟಿಗೆ ಪರಿಚಯಿಸಿದರು. ಅಲ್ಲಿಂದ ಬೌದ್ಧ ಧರ್ಮ ಚೀನಾ ದೇಶವನ್ನು ಪ್ರವೇಶಿಸಿತು. ರಾಜಕೀಯ ವಿಷಯಕ್ಕೆ ಬರುವುದಾದರೆ ಕ್ರಿ.ಶ.720 ರ ಸುಮಾರಿಗೆ ಟಿಬೇಟ ಮತ್ತು ಚೀನಾ ನಡುವೆ ಒಪ್ಪಂದವಾಗಿ ಉಭಯತ್ರರೂ ಅವರವರ ಆಡಳಿತ ವಿಷಯ ವನ್ನು ವಿಸ್ತರಿಸಬಾರದೆಂದು ಒಪ್ಪಂದ ಮಾಡಿಕೊಂಡದ್ದು ಇದಕ್ಕೆ ಮೂಲ ಪ್ರೇರಣೆ ಇಬ್ಬರಿಗೂ ಒಪ್ಪಿತ ಬೌದ್ಧ ಧರ್ಮವೆಂದು ಹೇಳಬಹುದು. ಬೌದ್ಧ ಧರ್ಮದ ಪ್ರಭಾವ ಒಂಭತ್ತನೆಯ ಶತಮಾನದ ವರೆಗೆ ಟಿಬೇಟ್ನಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಆ ದೇಶದ ದೊರೆ ಲಾಗ್ಡಾರ್ಮಾ ಮಿಲಿಟರಿ ಬಲದಿಂದ ಬೌದ್ಧ ಧರ್ಮವನ್ನು ಹತ್ತಿಕ್ಕಿದ. ಆದರೆ ಕ್ರಿ.ಶ. 1040 ರ ಸುಮಾರಿಗೆ ಟಿಬೇಟಿಗೆ ಬಂದ ಭಾರತೀಯ ಬೌದ್ಧ ಬಿಕ್ಕು ಅತೀಶ್ ಬೌದ್ಧ ಧರ್ಮದ ಉನ್ನತಿಗೆ ಸುಮಾರು ಮೂವತ್ತು ವರ್ಷಗಳ ಕಾಲ ಶ್ರಮಿಸಿ ಬೌದ್ಧ ಧರ್ಮ ಬೇರು ಮಟ್ಟದಲ್ಲಿ ನೆಲೆ ನಿಲ್ಲುವಂತೆ ಮಾಡಿದ. ನಂತರ ಮೂರು ಶತಮಾನದ ಬಳಿಕ ಕ್ರಿ.ಶ. 1370 ರ ಸುಮಾರಿಗೆ ಮಂಗೋಲಿಯ ಸೈನ್ಯದ ಪಡೆ ಚೆಂಗೀಜ್ಖಾನ್ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ಆಕ್ರಮಣ ಟಿಬೇಟ್ ಮೇಲೆ ಆಯಿತು. ಆದಾಗ್ಯೂ ಬೌದ್ಧ ಬಿಕ್ಕುಗಳು ದಾಳಿಕಾರರಿಗೆ ಬೌದ್ಧ ಧರ್ಮದ ಸಂದೇಶ ನೀಡಿ ತಮ್ಮ ನೆಲದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಅಬಾಧಿತವಾಗಿ ನಡೆಸಿಕೊಂಡು ಹೋಗುವ ಮೂಲಭೂತ ಹಕ್ಕನ್ನು ಉಳಿಸಿಕೊಂಡಿದ್ದರು. ನಂತರದಲ್ಲಿ ಆಗಿ ಹೋದ ಮಂಗೋಲಿಯನ್ ದೊರೆ ಕುಬ್ಲಾಯ್ಖಾನ್ ಬೌದ್ಧ ಧರ್ಮವನ್ನು ಒಪ್ಪಿ ಅದರ ಅನುಯಾಯಿಯಾದ. ಮುಂದೆ ಕ್ರಮೇಣ ಮಂಗೋಲಿಯಾದ ಹಿಡಿತ ಸಡಿಲವಾಗಿ ಟಿಬೆಟ್ ಸ್ವತಂತ್ರ ರಾಷ್ಟ್ರವಾಯಿತು. ಮಂಗೋಲಿಯಾದ ಹಿಡಿತದಿಂದ ಚೀನಾ ಹೊರ ಬಂದದ್ದು ಅನಂತರದಲ್ಲಿ. ಅಂದಿನಿಂದ ಇಂದಿನವರೆಗೆ ಟಿಬೇಟ್ನಲ್ಲಿ ಪ್ರಚಲಿತದಲ್ಲಿರುವ ದಲಾಯಿಲಾಮಾ ಎಂಬ ಶಬ್ದ ಮೂಲತಃ ಮಂಗೋಲಿಯನ್ ಶಬ್ದ ಅಂದರೆ ವಿವೇಕ ಸಾಗರವೆಂದು ಅದರ ಅರ್ಥ. ಇದಕ್ಕೆ ಟಿಬೆಟ್ ಭಾಷೆಯಲ್ಲಿರುವ ಸಮಾನಾರ್ಥಕ ಶಬ್ದ ಗ್ಯಾತ್ಸೋ. ಆ ಕಾಲದಲ್ಲಿ ಇದೊಂದು ಪದವಿಯಾಗಿದ್ದು ಅದನ್ನು ಮೊದಲ ಬಾರಿಗೆ ಕ್ರಿ.ಶ. 1578 ರಲ್ಲಿ ಬೌದ್ಧ ಬಿಕ್ಕು ಸೋನಂ ಗ್ಯಾತ್ಸೊಗೆ ನೀಡಿದ್ದು ಮಂಗೋಲಿಯಾದ ದೊರೆ ಅಲ್ತಾಫ್ಖಾನ್. ಸೋರ್ನ ಗ್ಯಾತ್ಸೋ ಡ್ರೆಮಂಗ್ ಬೌದ್ಧ ವಿಹಾರದಲ್ಲಿ ಗೆಲ್ಗುಪಾ ಪಂಗಡದ ಮುಖ್ಯಸ್ಥರಾಗಿದ್ದರು. ಕ್ರಿಶ. 1682 ರಲ್ಲಿ ಬಂದ ಐದನೆಯ ದಲಾಯಿ ಲಾಮಾ ಲಾಸಾದಲ್ಲಿ ನೆಲೆಸುವ ನಿರ್ಧಾರ ಮಾಡಿ ಟಿಬೇಟಿನ ಪೂರ್ವ ಭಾಗಕ್ಕೆ ಇನ್ನೊಬ್ಬ ಲಾಮಾರ ಅಗತ್ಯತೆಯನ್ನು ಮನಗಂಡು ಶಿಗಾತ್ಸಿಯ ಮುಖ್ಯ ಬೌದ್ಧ ವಿಹಾರ ತಾಷಿತ್ಹುನ್ಫೋದ ಪ್ರಧಾನ ಬೌದ್ಧ ಬಿಕ್ಕುವನ್ನು ಆ ಪರಂಪರೆಯ ಮೊದಲಿನ ಪಾಂಚೇನ್ ಲಾಮಾ ಎಂದು ಹೆಸರಿಸಿದರು. ದೇಶದ ಅಖಂಡತೆಯನ್ನು ಕಾಪಾಡಿ ಕೊಳ್ಳುವುದು ಐದನೆಯ ದಲಾಯಿಲಾಮಾರ ಉದ್ದೇಶವಾಗಿತ್ತು. ಕ್ರಿ.ಶ. 1640 ರಲ್ಲಿ ಚೀನಾದ ಮಾಂತು ದೊರೆಗಳು ದಲಾಯಿಲಾಮಾರನ್ನು ಆಹ್ವಾನಿಸಿ ತಮಗೆ ಗುರುಗಳಾಗಲು ಕೋರಿದರು. ಕ್ರಿ.ಶ. 1720 ರಲ್ಲಿ ಮಂಗೋಲಿಯಾದ ದೊರೆ ಮತ್ತು ಕ್ರಿ.ಶ. 1790 ರ ಲ್ಲಿ ನೇಪಾಳದ ಗೂರ್ಖಾ ದೊರೆಗಳು ಆಕ್ರಮಣ ಮಾಡಿದಾಗ ಟಿಬೆಟ್ ನೆರವಿಗೆ ಬಂದವರು ಚೀನಾದ ಮಾಂತು ದೊರೆಗಳು. ಇದರಿಂದಾಗಿ ಟಿಬೆಟ್ ಸ್ವಾತಂತ್ರವನ್ನು ಉಳಿಸಿ ಕೊಂಡಿತು. ಮುನ್ನೆಚ್ಚರಿಕೆಯ ಕ್ರಮವಾಗಿ ಮಾಂಚು ದೊರೆ ಟಿಬೇಟಿನಲ್ಲಿ ಎರಡು ಜನ ಜನಪ್ರತಿನಿಧಿಗಳನ್ನು ನೆಲೆಗೊಳಿಸಲು ಟಿಬೆಟ್ ವಿಶ್ವಾಸದಿಂದ ಒಪ್ಪಿಕೊಂಡಿತು. ಮಾಂಚು ದೊರೆಗಳ ಸಹಾಯವನ್ನು ನೆನಪಿಸಿಕೊಂಡು ಅವರ ಸಲಹೆಯನ್ನು ಸಂದೇಹಿಸಲಿಲ್ಲ. ಹತ್ತೊಂಭತ್ತನೆಯ ಶತಮಾನದ ಪ್ರಾರಂಭಿಕ ಕಾಲದಲ್ಲಿ ಚೀನಾದಲ್ಲಿ ಮಾಂಚು ದೊರೆಗಳ ಪ್ರಭಾವ ಇಳಿಮುಖವಾಗ ತೊಡಗಿತ್ತು. ಭಾರತದ ಈಶಾನ್ಯ ಭಾಗದಲ್ಲಿ ಬ್ರಿಟೀಶರ ಪ್ರಭಾವ ಹೆಚ್ಚಾಗ ತೊಡಗಿತ್ತು. ವ್ಯಾಪಾರಕ್ಕಾಗಿ ಭಾರತಕ್ಕೆ ಬಂದಿದ್ದ ಬ್ರಿಟೀಶರು ಚೀನಾದೊಂದಿಗೂ ವ್ಯಾಪಾರ ಮುಂದುವರಿಸಿದರು. ಭಾರತ ಚೀನಾ ಮಾರ್ಗದಲ್ಲಿದ್ದ ಟಿಬೇಟ್ ಮೇಲೆ ಬ್ರಿಟೀಶರ ದೃಷ್ಟಿ ಬಿದ್ದದ್ದು ಸಹಜವಾಗಿತ್ತು. ಟಿಬೇಟ್ ಚೀನಾದ ಭಾಗವಲ್ಲ ಎಂಬುದನ್ನು ಆಗ ಮನಗಂಡಿದ್ದ ಭಾರತದಲ್ಲಿ ಬ್ರಿಟಿಶ್ ವ್ಹಾಯಿಸರಾಯ್ ಆಗಿದ್ದ ಲಾರ್ಡ ಕರ್ಜನ್ ಕ್ರಿ.ಶ. 1899-1903 ರ ಕಾಲಾವಧಿಯಲ್ಲಿ ಈ ಬಗ್ಗೆ ಬ್ರಿಟನ್ಗೆ ಹಲವು ಬಾರಿ ವರದಿ ಮಾಡಿದ್ದ. ರಶಿಯಾದ ಝಾರ್ ಅರಸರ ಕಣ್ಣು ಟಿಬೇಟ್ ಮೇಲೆ ಬೀಳಬಾರದು ಎಂಬುದು ಬ್ರಿಟನ್ನಿನ ಒತ್ತಾಸೆಯಾಗಿತ್ತು. ಮಧ್ಯ ಏಸಿಯಾದ ಮೇಲೆ ಹತೋಟಿ ಹೊಂದುವ ವಿಚಾರದಲ್ಲಿ ರಶಿಯಾ ಮತ್ತು ಬ್ರಿಟನ್ನಿನ ನಡುವೆ ಪೈಪೋಟಿಯಿತ್ತು. ಕ್ರಿ.ಶ. 1904 ರಲ್ಲಿ ರಶಿಯಾದ ಸೇನೆ ಮಧ್ಯ ಏಸಿಯಾದಲ್ಲಿ ಕಾಲಿಟ್ಟಾಗ ಬ್ರಿಟನ್ ಸೇನೆಯೂ ಟಿಬೇಟ್ ನೆಲವನ್ನು ಆಕ್ರಮಿಸಿತು. ರಶಿಯಾ ಮತ್ತು ಬ್ರಿಟನ್ಗಳ ಕ್ರಮವನ್ನು ಟಿಬೇಟ್ ಖಂಡಿಸಿತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬ್ರಿಟನ್ನನ್ನು ಟಿಬೇಟ್ ಎದುರಿಸಲು ಆಗಲಿಲ್ಲ. ಆದರೆ ಬ್ರಿಟನ್ನಿಗೆ ಟಿಬೇಟನ್ನು ಆಕ್ರಮಿಸುವ ಉದ್ದೇಶವಿರಲಿಲ್ಲ ರಶಿಯಾಕ್ಕೆ ಎಚ್ಚರಿಕೆಯನ್ನು ನೀಡುವುದಷ್ಟೆ ಅದರ ಉದ್ದೇಶವಾಗಿತ್ತು.. ಟಿಬೇಟಿನ ಶರಣಾಗತಿಯ ಬಳಿಕ ಬ್ರಿಟಿಶ್ ಆಡಳಿತ ಅಲ್ಲಿ ತನ್ನ ಎರಡು ಸೇನಾ ತುಕಡಿಗಳನ್ನು ಟಿಬೇಟ್ನಲ್ಲಿ ಬಿಟ್ಟು ಬ್ರಿಟಿಶ್ ಸೈನ್ಯ ಹಿಂದೆ ಸರಿಯಿತು. ಟಿಬೇಟ್ ಬ್ರಿಟನ್ನಿಗೆ ಶರಣಾಗುವ ಮುನ್ನ ಉತ್ತರದ ಕಡೆಯಿಂದ ಚೀನಾ ಟಿಬೇಟಿನ ಮೇಲೆ ದಾಳಿ ಮಾಡಿತು. ಈ ಮೂರು ರಾಷ್ಟ್ರಗಳ ಪೈಪೋಟಿ ಸಂಧರ್ಭದಲ್ಲಿ ಹದಿಮೂರನೆ ದಲಾಯಿಲಾಮಾ ಮತ್ತು ಟಿಬೇಟಿನ ಆಡಳಿತ ವ್ಯವಸ್ಥೆ ಮಂಗೋಲಿಯಾದ ಆಶ್ರಯವನ್ನು ಪಡೆದರು. ರಶಿಯಾ ಮತ್ತು ಚೀನಾ ಸೇನೆಗಳು ಹಿಮ್ಮೆಟ್ಟಿದವು. ಆದರೆ ಚೀನಾ ಪೂರ್ವ ಟಿಬೇಟಿನ ಕೆಲ ಪ್ರದೇಶವನ್ನು ಆಕ್ರಮಿಸಿ ಕೊಂಡಿದ್ದನ್ನು ಬಿಟ್ಟು ಕೊಡಲೆ ಇಲ್ಲ. ಮೂರು ಭಲಾಢ್ಯ ರಾಷ್ಟ್ರಗಳ ಆಕ್ರಮಣವನ್ನು ತನ್ನದೆ ಆದ ಮಿತಿಯಲ್ಲಿ ಟಿಬೆಟ್ ಪ್ರತಿಭಟಿಸಿತು ಕಡೆಯಲ್ಲಿ ಸೋಲೊಪ್ಪಿ ತಾಂತ್ರಿಕವಾಗಿ ಬ್ರಿಟನ್ನಿನ ನೆಲೆಯಾಗಿ ಉಳಿಯಿತು.
ರಶಿಯಾ ಚೀನಾಗಳನ್ನು ಹಿಮ್ಮೆಟ್ಟಿಸಿದರೂ ಬ್ರಿಟನ್ನಿಗೆ ತನ್ನ ನೆಲೆಯನ್ನು ವಿಸ್ತರಿಸಿ ಕೊಳ್ಳುವಷ್ಟು ವ್ಯವಧಾನವಿರಲಿಲ್ಲ, ಅದರ ಇಬ್ಬರು ಪ್ರತಿನಿಧಿಗಳು ಅಲ್ಲಿ ನಾಮ ಮಾತ್ರರಾಗಿ ಉಳಿದಿದ್ದರು. ಕ್ರಿ.ಶ. 1908 ರ ಹೊತ್ತಿಗೆ ಟಿಬೇಟಿನಲ್ಲಿ ಕೊಂಚ ಶಾಂತಿ ನೆಲೆಸಿತ್ತು, ಮಂಗೋಲಿಯನ್ನರ ಆಶ್ರಯವನ್ನರಸಿ ಹೋಗಿದ್ದ ಹದಿಮೂರನೆ ದಲಾಯಿಲಾಮಾ ನೇತೃತ್ವದ ಟಿಬೇಟಿನ ಆಡಳಿತ ಯಂತ್ರ ಹಿಂದಿರುಗಿತ್ತು. ಟಿಬೇಟಿನ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಿ ಕೊಂಡಿತ್ತು. ಆದರೆ ಕ್ರಿ.ಶ 1910 ರಲ್ಲಿ ಟಿಬೇಟಿನ ಲಾಸಾ ಕಡೆಯಿಂದ ಮತ್ತೆ ಚೀನಾ ಆಕ್ರಮಣ ನಡೆಸಿತು ದಲಾಯಿಲಾಮಾ ಮತ್ತೆ ತಲೆಮರೆಸಿಕೊಂಡರು. ಅವರನ್ನು ಮುಂದಿಟ್ಟುಕೊಂಡು ಟಿಬೇಟಿನ ಮೇಲೆ ತನ್ನ ಹತೋಟಿಯನ್ನು ಹೊಂದುವುದು ಚೀನಾದ ಇರಾದೆಯಾಗಿತ್ತು. ಆದರೆ ಅವರು ಈ ಬಾರಿ ಮಂಗೋಲಿಯಾಗೆ ಹೋಗದೆ ಹಿಮಾಲಯದ ತಪ್ಪಲಿನ ಕಲಪಾಂಗ್ನಲ್ಲಿ (ಈಗಿನ ಸಿಕ್ಕಿಂ) ಆಶ್ರಯ ಪಡೆದರು. ಆಗ ಈ ಪ್ರಾಂತ ಬ್ರಟೀಶರ ಆಧೀನದಲ್ಲಿತ್ತು ಆಗ ದಲಾಯಿಲಾಮಾ ಬ್ರಿಟನ್ನಿನ ನೆರವು ಕೋರಿದರು. ಬ್ರಿಟನ್ ಅವರ ನೆರವಿಗೆ ಚಾಲ್ರ್ಸಬೆಟ್ ಎಂಬ ಸೇನಾಧಿಕಾರಿಯನ್ನು ನಿಯಮಿಸಿತು. ಆಗ ಪೀಕಿಂಗ್ನಲ್ಲಿ ಚೀನಾದ ಮಾಂಚು ದೊರೆಗಳ ವಿರುದ್ಧ ಡಾ. ಸುನ್ ಯಾತ್ಸೇನ್ ನೇತೃತ್ವದಲ್ಲಿ ಚೀನಾ ಕ್ರಾಂತಿ ನಡೆದು ಯಶಸ್ಸು ಪಡೆದಿತ್ತು. ಸೇನೆ ಮತ್ತು ಆಡಳಿತದ ವಿರುದ್ಧ ದಂಗೆಯೆದ್ದಿತ್ತು. ಅರಸೊತ್ತಿಗೆ ಸೇನೆ ಮತ್ತು ಆಡಳಿತದ ವಿರುದ್ಧ ದಂಗೆಯೆದ್ದಿತ್ತು. ಅರಸೊತ್ತಿಗೆ ಸೇನೆ ಮತ್ತು ಕ್ರಾಂತಿಕಾರರ ಮಧ್ಯೆ ಘರ್ಷಣೆ ನಡೆದು ಹಿಂಸಾಚಾರ ಮುಗಿಲು ಮುಟ್ಟಿತ್ತು. ಈ ಗೊಂದಲ ಟಿಬೆಟಿನಲ್ಲಿ ನೆಲೆ ಗೊಂಡಿದ್ದ ಸೇನೆಯಲ್ಲೂ ಗೊಂದಲ ಮೂಡಿಸಿತ್ತು. ಪರಿಸ್ಥಿತಿಯ ಲಾಭದಿಂದ ಟಿಬೇಟಿಯನ್ನರು ಚೀನಿಯರನ್ನು ಯಾಂಗತ್ಸಿ ವರೆಗೆ ಹಿಮ್ಮೆಟ್ಟಿಸಿದರು. ದಲಾಯಿಲಾಮಾ ಮತ್ತೆ ಟಿಬೇಟಿಗೆ ಮರಳಿದರು. ಪೀಕಿಂಗ್ನಲ್ಲಿ ಮಾಂಚು ದೊರೆಗಳ ಆಡಳಿತ ಕೊನೆಗೊಂಡು ಅವರ ಸೇನೆಯ ಬಂಡಾಯವನ್ನು ಹತ್ತಿಕ್ಕಿ ಡಾ. ಸುನ್ ಯಾತ್ಸೇನ್ರ ಆಡಳಿತ ಚೀನಾದಲ್ಲಿ ಸ್ಥಾಪಿತಗೊಂಡಿತು. ಅದು ಟಿಬೇಟಿಗೆ ಸಂದೇಶವೊಂದನ್ನು ರವಾನಿಸಿ ತಮ್ಮೆರಡು ದೇಶಗಳ ಮಧ್ಯೆ ‘ಪೋಷಕ ಪುರೋಹಿತ’ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಆಶಯ ವ್ಯಕ್ತ ಪಡಿಸಿದರು. ಆದರೆ ವಿದೇಶಿ ದಾಳಿಗಳ ಹಿನ್ನೆಲೆಯಲ್ಲಿ ಕರಾಳ ಕಹಿ ಅನುಭವಗಳನ್ನು ಹೊಂದಿದ್ದ ಟಿಬೆಟ್ ದಲಾಯಿಲಾಮಾರ ನೇತೃತ್ವದಲ್ಲಿ ಸ್ವತಂತ್ರವಾಗಿರಲು ಬಯಸಿತು. ಇದರಿಂದ ಚೀನಾ ಮತ್ತೆ ಆಕ್ರೋಶಗೊಂಡು ಸಿಮ್ಲಾದಲ್ಲಿ ಏರ್ಪಟ್ಟ ಚೀನಾ ಟಬೇಟ್ ಮತ್ತು ಬ್ರಿಟನ್ನಗಳ ತಿಪಕ್ಷೀಯ ಮಾತುಕತೆಯ ಸಂಧರ್ಭದಲ್ಲಿ ಚೀನಾ ಮೊಟ್ಟ ಮೊದಲ ಬಾರಿಗೆ ಟಿಬೇಟ್ ಕಳೆದ ಸಾವಿರ ವರ್ಷಗಳಿಂದ ತನ್ನ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸ ತೊಡಗಿತು. ಆದರೆ ಬ್ರಿಟನ್ ಮತ್ತು ಟಿಬೇಟ್ ಚೀನಾದ ಈ ನಿಲುವನ್ನು ಪ್ರಬಲವಾಗಿ ಖಂಡಿಸಿದವು. ಆದರೂ ಚೀನಾದ ವಿತಂಡವಾದ ಮುಂದುವರೆದಾಗ ಕ್ರಿ.ಶ. 1914 ರಲ್ಲಿ ತಿಪಕ್ಷೀಯ ಒಪ್ಪಂದ ಪತ್ರ ಸಿದ್ಧಗೊಂಡಿತು. ಅದರಲ್ಲಿ ಚೀನಾ ಟಿಬೇಟ್ ಪಾಲಿಗೆ ಸಾಂಕೇತಿಕ ರಕ್ಷಕ ರಾಷ್ಟ್ರದ ಪಾತ್ರವನ್ನು ಮಾತ್ರ ವಹಿಸಬೇಕೆಂದು ಒತ್ತು ಕೊಡಲಾಗಿದ್ದು ಇದಕ್ಕೆ ಮೂರೂ ರಾಷ್ಟ್ರಗಳು ಒಪ್ಪಿಗೆ ನೀಡಿದ್ದವು. ಕೆಲ ಕಾಲಾ ನಂತರ ಚೀನಿ ಆಡಳಿತ ಈ ಒಪ್ಪಂದ ತನಗೆ ಮಾನ್ಯವಿಲ್ಲವೆಂದು ಪ್ರಕಟಿಸಿತು. ಆ ಒಪ್ಪಂದದಲ್ಲಿ ಟಿಬೇಟ್ ಸ್ವಾಯತ್ತತೆಯನ್ನು ಚೀನಾ ಗೌರವಿಸಬೇಕು ಮತ್ತು ಆಂತರಿಕ ವ್ಯವಹಾರಗಳಲ್ಲಿ ಚೀನಾದ ಹಸ್ತಕ್ಷೇಪ ಸಲ್ಲದೆಂಬ ಅಂಶದ ಸ್ಪಷ್ಟ ದಾಖಲೆಯಿತ್ತು. ಹೀಗಾಗಿ ಈ ಅಂಶಗಳನ್ನು ಚೀನಾ ಮಾನ್ಯ ಮಾಡದೆ ತನ್ನಮ ಸರ್ವಾಧಿಕಾರಿ ಧೋರಣೆಯನ್ನು ಪ್ರಚುರ ಪಡಿಸಿತು. ಆದರೆ ಟಿಬೇಟ್ ಕ್ರಿ.ಶ 1914 ರಲ್ಲಿ ತಾನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ ಕೊಂಡಿತು. ಆದರೆ ವ್ಯಾವಹಾರಿಕವಾಗಿ ಈ ಅಂಶವನ್ನು ಧೃಡ ಪಡಿಸಿಕೊಳ್ಳುವ ಯಾವುದೆ ಪ್ರಯತ್ನವನ್ನು ಟಿಬೇಟ್ ಮಾಡಲಿಲ್ಲ. ಓಬೇಟ್ ತಾನೊಂದು ಸ್ವತಂತ್ರ ರಾಷ್ಟ್ರವಾಗಿ ವಿಶ್ವದ ಇತರೆ ರಾಷ್ಟ್ರಗಳೊಡನೆ ಸಂಬಂಧಗಳನ್ನು ಹೊಂದುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಮುಂದೆ ಸುಮಾರು 40 ವರ್ಷಗಳ ಬಳಿಕ ಚೀನಾ ಟಿಬೆಟ್ನ್ನು ಆಕ್ರಮಿಸಿ ಕೊಂಡಾಗ ಟಿಬೆಟ್ ಪರ ಧೃಡವಾದ ಅಭಿಪ್ರಾಯ ವಿಶ್ವದಲ್ಲಿ ಕೇಳಿ ಬರಲು ಸಾಧ್ಯವಾಗಲಿಲ್ಲ. ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡ ಟಿಬೇಟ್ ‘ಲೀಗ್ ಆಫ್ ನೇಶನ್ಸ್’ ಒಕ್ಕೂಟ ಸೇರಲು ಪ್ರಯತ್ನಿಸಿತು. ಆದರೆ ಒಂದು ಷರತ್ತನ್ನು ಟಿಬೇಟ್ ಮುಂದಿಟ್ಟಿತು. ಅದೇನೆಂದರೆ ತನ್ನ ದೇಶದ ಮೇಲೆ ಚೀನಾದಿಂದ ದಾಳಿ ನಡೆದ ಪಕ್ಷದಲ್ಲಿ ತನ್ನ ನೆರವಿಗೆ ಬರುವ ಭರವಸೆಯನ್ನು ಒಕ್ಕೂಟ ನೀಡಬೇಕೆಂದು ಕೇಳಿತು, ಆದರೆ ಒಕ್ಕೂಟ ಇದನ್ನು ಒಪ್ಪದೆ ಹೋದಾಗ ಟಿಬೇಟ್ ನಿರಾಸಕ್ತಿ ತಾಳಿತು. ತನ್ನ ಧರ್ಮ ಪರಂಪರೆ ಮತ್ತು ಸಂಸ್ಕøತಿಗಳನ್ನು ಜಪಿಸುತ್ತ ಹಿಮಾಲಯ ಪ್ರಾಂತದಲ್ಲಿ ಏಕಾಂಗಿಯಾಗುಳಿಯಿತು.
ಆದರೆ ಚೀನಾ ತನ್ನ ಆಂತರಿಕ ಬಿಕ್ಕಟ್ಟಿನ ಕಾರಣದಿಂದಾಗಿ ಟಿಬೇಟಿನ ಮೇಲೆ ದಾಳಿ ಮಾಡಲಿಲ್ಲ. ಡಾ. ಯಾತ್ಸೇನ್ ನೇತೃತ್ವದ ರಾಷ್ಟ್ರೀಯ ಸರ್ಕಾರವನ್ನು ಚಿಯಾಂಗ್ ಕೈಸೇಕರು ವಹಿಸಿ ಕೊಂಡರು. ಆ ಸರ್ಕಾರ ಮತ್ತು ಮಾವೋತ್ಸೆತುಂಗರ ನೇತೃತ್ವದ ಕಮ್ಯನಿಷ್ಟ್ ಗೆರಿಲ್ಲಾಗಳ ನಡುವಿನ ಸಂಘರ್ಷ ಕ್ರಿ.ಶ. 1920 ರಲ್ಲಿ ತೀವ್ರಗೊಂಡು ಕಮ್ಯುನಿಷ್ಟ್ ಗೆರಿಲ್ಲ ಪಡೆಗಳಿಗೆ ಜಯ ಸಿಕ್ಕ ನಂತರ ಚೀನಾ ವಿಮೋಚನಾ ಸೇನೆ ಟಿಬೇಟಿನ ಮೇಲೆ ತನ್ನ ಕಣ್ಣು ಹಾಕಿತು. ಇಲ್ಲಿಯ ವರೆಗೆ ಚೀನಾದ ಮಾಂಚು ದೊರೆಗಳ ರಾಷ್ಟ್ರೀಯವಾದಿಗಳು ನಂತರದ ಕಮ್ಯುನಿಷ್ಟ್ರು ಯಾರೊಬ್ಬರೂ ಟಿಬೇಟಿನ ಬಗೆಗೆ ಭಿನ್ನ ನಿಲುವು ತಳೆಯಲಿಲ್ಲ, ಎಲ್ಲರೂ ಟಿಬೇಟ್ ತನ್ನ ವಸಾಹತು ಎನ್ನುವ ತೀರ್ಮಾನಕ್ಕೆ ಬಂದಾಗಿತ್ತು. ಈ ಎಲ್ಲರದೂ ಏಕ ರೂಪದ ವಿಚಾರವಾಗಿದ್ದುದು ಒಂದು ಚೊದ್ಯದ ಸಂಗತಿ. ‘ಚೀನಾ ವಿಶ್ವದ ವಿಶಾಲ ಕೇಂದ್ರ ಬಿಂದು ಮತ್ತು ಸಮಸ್ತ ಸಂಸ್ಕ್ರತಿಗಳ ತವರು ಹಾಗೂ ಚೀನಾದ ಆಡಳಿತ ವಿಶ್ವ ವ್ಯಾಪಿ’ ಎಂಬ ಹಳೆಯ ಕನ್ಫ್ಯೂಷಿಯನ್ ದೃಷ್ಟಿಕೋನವನ್ನು ಮುಂದುವರೆಸಿಕೊಂಡು ಬಂದ ಚೀನಾ ಟಿಬೇಟಿನ ನೆಲ ಆಕ್ರಮಿಸಿ ದಾಳಿ ಮಾಡಿದ್ದಕ್ಕೆ ವ್ಯಾವಹಾರಿಕ ಕಾರಣ ವಿಶ್ವದಲ್ಲಿ ತನ್ನ ಮಹತ್ವವನ್ನು ಉಳಿಸಿ ಕೊಳ್ಳಲು ಮತ್ತು ತಾನೊಂದು ಬಲಿಷ್ಟ ಶಕ್ತಿ ಕೇಂದ್ರವಾಗಲು ಟಿಬೇಟಿನ ನೆಲ ಅದಕ್ಕೆ ಬೇಕಿತ್ತು. ಹಿಂದೆ ಚೀನಾ ಮಂಗೋಲಿಯಾ ಮಂಚೂರಿಯಾ ಮತ್ತು ಪೂರ್ವ ತುರ್ಕಸ್ಥಾನ ನೆಲಗಳನ್ನು ವಶ ಪಡಿಸಿಕೊಂಡಿತ್ತು, ಇಪ್ಪತ್ತನೆಯ ಶತಮಾನದಲ್ಲಿ ಅದಕ್ಕೆ ಟಿಬೇಟಿನ ನೆಲ ಅಗತ್ಯವೆಂದು ಕಂಡು ಬಂದು ಉತ್ತರ ಮತ್ತು ಪಶ್ಚಿಮ ಟಿಬೇಟಿನ ಮೂಲಕ ಮಧ್ಯ ಏಷಿಯಾ ಪ್ರದೇಶದ ಮೇಲೆ ಪ್ರಭುತ್ವ ಹೊಂದಲು ಭಾರತ ಮಧ್ಯ ಪೂರ್ವ ಮತ್ತು ಐರೋಪ್ಯ ರಾಷ್ಟ್ರಗಳೊಂದಿಗೆ ನೇರ ಸಂಪರ್ಕ ಹೊಂದಲು ಮತ್ತು ಅಲ್ಲಿ ತನ್ನ ಗಡಿ ಗುರುತಿಸಿಕೊಳ್ಳುವ ಸ್ಪಷ್ಟ ಚಿಂತನೆ ಚೀನಾದ್ದು ಅಗಿತ್ತು. ಇದು ಪ್ರಚಂಢ ಮಹತ್ವಾಕಾಂಕ್ಷೆಯ ಲೆಖ್ಖಾಚಾರ ಮತ್ತು ವಿಸ್ತಾರವಾದಿ ಚಿಂತನೆಯ ಹುನ್ನಾರವಾಗಿದ್ದುದು ಸ್ಪಷ್ಟ.
ಹದಿಮೂರನೆಯ ದಲಾಯಿಲಾಮಾರ ಕಾಲ ಕ್ರಿ.ಶ.1895-1933 ಅವರು ಮರಣ ಹೊಂದಿದಾಗ ಶೋಕ ಸಂದೇಶ ನೀಡಲು ಲಾಸಾಕ್ಕೆ ಬಂದ ತಂಡದ ತನ್ನ ಇಬ್ಬರು ಸದಸ್ಯರನ್ನು ಅಲ್ಲಿಯೆ ನೆಲೆಗೊಳಿಸಿತು. ಕ್ರಿ.ಶ. 1931 ರಲ್ಲಿ ಚೀನಾದ ರಾಷ್ಟ್ರೀಯವಾದಿ ಸರ್ಕಾರ ಜಪಾನಿನ ಜೊತೆಗೆ ಯುದ್ಧ ನಡೆಸಿದಾಗ ಟಿಬೇಟ್ ಚೀನಾವನ್ನು ಬೆಂಬಲಿಸಿರಲಿಲ್ಲ. ಎರಡನೆಯ ಮಹಾ ಯುದ್ಧದ ಸಂಧರ್ಭದಲ್ಲಿ ಟಿಬೇಟ್ ಆಲಿಪ್ತವಾಗಿತ್ತು. ಪಶ್ಚಿಮ ಟಿಬೇಟಿನಲ್ಲಿ ರಸ್ತೆ ಮಾಡಿ ಯುದ್ಧ ಸಾಮಗ್ರಿ ಸಾಗಣಿಕೆಗೆ ಚೀನಾ ಪ್ರಯತ್ನಿಸಿದಾಗ ಟೆಬೇಟ್ ಅನುಮತಿ ನೀಡಿರಲಿಲ್ಲ. ಚೀನಾದಲ್ಲಿ ಕಮ್ಯೂನಿಷ್ಟರು ಆಡಳಿತಕ್ಕೆ ಬರುತ್ತಲೆ ರೇಡಿಯೋ ಮೂಲಕ ‘ಟಿಬೇಟ್ ಚೀನಾದ ಒಂದು ಭಾಗ’ ಅಲ್ಲಿ ಜನತೆಯ ಗಣ ರಾಜ್ಯ ಸ್ಥಾಪಿಸುತ್ತೇವೆಂದು ಕ್ರಿ.ಶ. 1950 ರಲ್ಲಿ ಮೂವತ್ತು ಸಾವಿರ ಸಂಖ್ಯೆಯ ಸೇನಾ ಪಡೆಯನ್ನು ಕಳುಹಿಸಿ ಟಿಬೇಟಿನ ಮೇಲೆ ಆಕ್ರಮಣ ನಡೆಸಿತು. ಆಗ ಟಿಬೇಟ್ ದೇಶ ಅಮೇರಿಕಾ ಬ್ರಿಟನ್ ಭಾರತ ಮತ್ತು ನೇಪಾಳ ದೇಶಗಳನ್ನು ಸಹಾಯಕ್ಕಾಗಿ ಕೋರಿತು. ಆಗ ಟಿಬೇಟ್ ಬಳಿ ಇದ್ದ ಸೈನ್ಯದ ಸಂಖ್ಯೆ ಬರಿ ನಾಲ್ಕು ಸಾವಿರ ಅದೊಂದು ಅಸಮ ಬಲದ ಹೋರಾಟವಾಗಿತ್ತು. ಭಾರತಕ್ಕೆ ತನ್ನದೇ ಆದ ಸಮಸ್ಯೆಗಳಿದ್ದವು. ಭಾರತ ಸೇನೆಯೂ ಸಾಕಷ್ಟು ಬಲಶಾಲಿಯಾಗಿರಲಿಲ್ಲ. ನೇಪಾಳವಂತೂ ಅತಿ ಚಿಕ್ಕ ರಾಷ್ಟ್ರ ಚೀನಾದ ನೆಲದಾಹ ಬಲಿಷ್ಟತೆ ಮತ್ತು ದುಷ್ಟತನಗಳ ಮುಂದೆ ಯಾರೂ ಏನೂ ಮಾಡುವಂತಿರಲಿಲ್ಲ. ಬ್ರಿಟನ್ನಿಗೆ ಈ ವಿದ್ಯಮಾನ ಕುರಿತು ಎಲ್ಲ ಅರಿವು ಇದ್ದರೂ ಅದು ನೇರವಾಗಿ ಚೀನಾದ ಜೊತೆಗೆ ವ್ಯವಹರಿಸಲು ಸಾಧ್ಯವಿರಲಿಲ್ಲ ಯಾಕೆಂದರೆ ಅದು ತನ್ನ ಭಾರತೀಯ ಉಪಖಂಡದ ವಸಾಹತನ್ನು ಬಿಟ್ಟು ತನ್ನ ನೆಲಕ್ಕೆ ಮರಳಿಯಾಗಿತ್ತು. ಇನ್ನು ಬಲಿಷ್ಟ ಅಮೇರಿಕಾ ಈ ವಿಷಯವಾಗಿ ಅಷ್ಟು ತಲೆ ಕೆಡಿಸಿ ಕೊಳ್ಳಲು ತಯಾರಿರಲಿಲ್ಲ ಏಕೆಂದರೆ ಅದಕ್ಕೆ ಈ ಸಮಸ್ಯೆ ಬಗೆ ಹರಿಸುವಲ್ಲಿ ಅದಕ್ಕೆ ಏನೂ ಲಾಬವಿರಲಿಲ್ಲ. ಇನ್ನು ಸಂಯುಕ್ತ ರಾಷ್ಟ್ರ ಸಂಸ್ಥೆ ಸಹ ಗಟ್ಟಿ ದನಿಯಲ್ಲಿ ಚೀನಾದ ಆಕ್ರಮಣವನ್ನು ಖಂಡಿಸಲು ಆಗಲಿಲ್ಲ ಈ ಎಲ್ಲ ಪರಿಸ್ಥಿತಿಗಳ ಲಾಭ ಪಡೆದ ಚೀನಾ ಟಬೇಟ್ ನೆಲವನ್ನು ಆಕ್ರಮಿಸಿಕೊಂಡು ಕುಳಿತಿತು. ಮಾನವೀಯ ಭಾಷೆ ಅದಕ್ಕೆ ಅರ್ಥವಾಗುವುದಿಲ್ಲ. ಟಿಬೇಟಿನಿಂದ ಪಲಾಯನ ಮಾಡಿದ ಅಲ್ಲಿನ ಪ್ರಜೆಗಳು ಅಲ್ಲಲ್ಲಿ ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಚೀನಾ ದಮನಕಾರಿ ನೀತಿ ಅನುಸರಿಸಿ ಟಿಬೇಟಿನಲ್ಲಿರುವ ಅಲ್ಲಿನ ಮೂಲ ನಿವಾಸಿ ಟಿಬೇಟಿಯನ್ನರ ಸೊಲ್ಲಡಗಿಸಿದೆ. ದೇಶ ಭ್ರಷ್ಟರಾಗಿರುವ ಈಗಿನ ದಲಾಯಿಲಾಮಾ ಇಳಿ ವಯಸ್ಸಿನೆಡೆಗೆ ಸಾಗಿದ್ದಾರೆ. ಟಿಬೇಟಿಯನ್ನರ ಸ್ವತಂತ್ರ ರಾಷ್ಟ್ರದ ಕನಸು ಕನಸಾಗಿಯೆ ಉಳಿದಿದೆ. ಚೀನಾದ ಕಪಿ ಮುಷ್ಟಿಯಲ್ಲಿ ಸಿಲುಕಿ ಟಿಬೇಟ್ ನರಳುತ್ತಿದೆ, ಇದರ ವಿಮೋಚನೆ ಹೇಗೆ? ಇದೊಂದು ಬಗೆಹರಿಸಲಾಗದ ಇಂದಿಗೂ ಕಗ್ಗಂಟಿನ ಪ್ರಶ್ನೆಯಾಗಿಯೆ ಉಳಿದಿದೆ.
ಚಿತ್ರ ಕೃಪೆ: ಅಂತರ್ ಜಾಲ
(ಮುಗಿಯಿತು)
Comments
ಉ: " ಟಿಬೇಟಿನ ಪೂರ್ವಾಪರ (ಭಾಗ-2)"
ಉತ್ತಮ ಮಾಹಿತಿಗಳನ್ನು ಸಂಗ್ರಹಿಸಿ ಕೊಟ್ಟಿರುವಿರಿ, ಪಾಟೀಲರೇ. ಅಭಿನಂದನೆಗಳು. ಈಗಾಗಲೇ ಭಾರತದ ಭೂಪ್ರದೇಶಗಳನ್ನೂ ಚೀನಾ ಆಕ್ರಮಿಸಿದೆ, ಆಕ್ರಮಿಸುತ್ತಿದೆ. ಪಾಕ್ ಮೂಲಕವಾಗಿ ಹಾಗೂ ಸ್ವತಃ ಕಾಶ್ಮೀರದ ಗಣನೀಯ ಭೂಪ್ರದೇಶ ಚೀನಾ ಪಾಲಾಗಿದೆ. ಇದರ ವಿರುದ್ಧ ಧ್ವನಿ ಎತ್ತುವವರ ಸದ್ದು ಕ್ಷೀಣವಾಗಿದೆ. :(