ಟೊರಾಂಟೋನಗರ ಪ್ರವಾಸ ನಿಜಕ್ಕೂ ಅದ್ಭುತವಾಗಿತ್ತು !
ಮೊನ್ನೆ, ೨೦೧೨ ರ, ಜೂನ್ ತಿಂಗಳಲ್ಲಿ ಮಾಡಿದ ನಮ್ಮ ಉತ್ತರ ಅಮೆರಿಕದ (ಕೆನಡಾದ ಟೊರಾಂಟೋ) ಪ್ರಯಾಣ ಎರಡನೆಯದು. ೨೦೦೮ ರಲ್ಲಿ ಅಮೆರಿಕದ ಪಶ್ಚಿಮದಿಂದ ಪೂರ್ವದುದ್ದಕ್ಕೂ (ಕ್ಯಾಲಿಫೋರ್ನಿಯದಿಂದ ಚಿಕಾಗೊವರೆಗೆ) ನೋಡಿಬಂದಿದ್ದೆವು. ಈ ಎರಡೂ ಪ್ರಯಾಣಗಳು ನಮಗೆ ಉತ್ತರ ಅಮೆರಿಕದ ಬಗ್ಗೆ ಸುಮಾರಾಗಿ ಮಾಹಿತಿಗಳನ್ನು ಒದಗಿಸಿವೆ. ಆದರೆ ನಾವು ಇವನ್ನು ಎಷ್ಟು ಸಮರ್ಥವಾಗಿ ಅರ್ಥಮಾಡಿಕೊಂಡೆವೋ ಗೊತ್ತಿಲ್ಲ...
ಇದುವರೆಗೆ ನಾನು ಓದಿದ 'ಕೆನೆಡಾದ ಇತಿಹಾಸ', ಮತ್ತು ಟೊರಾಂಟೋನಗರದ ಹೈಪಾರ್ಕ್, ಪಬ್ಲಿಕ್ ಲೈಬ್ರರಿಯಲ್ಲಿ ಅಭ್ಯಾಸಮಾಡಿದ ಮೇಲೆ ಗಳಿಸಿದ ತಿಳುವಳಿಕೆ :
ಆಗಿನ ಕಾಲದ ವಿಶ್ವದ ಆಗುಹೊಗುಗಳನ್ನು ಚಿಕ್ಕದಾಗಿ, ಬಹುಶಃ ಹೀಗೆ ಹೇಳಬಹುದು, ಅನ್ನಿಸುತ್ತೆ :
ಗಣೇಶ ಬಂದ, ಕಾಯ್ಕಡುಬು ತಿಂದ.
ಚಿಕ್ಕ ಕೆರೇಲಿ ಬಿದ್ದ; ದೊಡ್ಡ ಕೆರೇಲಿ ಎದ್ದ (ದೊಡ್ಡ ಕೆರೇಲಿ ಬಿದ್ದ..)
ಅದೇ ತರಹವೇ, ಹಿಂದೆ ಎಂದೋ ಕಥೆಗಳಲ್ಲಿ ಕೇಳಿದ್ದ ಭಾರತವನ್ನು, ಚೀನಾವನ್ನು ಕಾಣಲು, ಹೊಸ ವಿಶ್ವವನ್ನು ಅರಸಲು, ಸಾಹಸಿಗಳಾಗಿದ್ದ ಯುರೋಪಿಯನ್ನರಲ್ಲಿ ಅಗ್ರಸ್ಥಾನಗಳಲ್ಲಿದ್ದ ಬ್ರಿಟಿಷ್ ಜನ, ಮತ್ತು ಅಷ್ಟೇ ಮುಂದಿದ್ದ ಫ್ರೆಂಚ್ ಜನ, ಹೊರಟರು. ಆ ಅಗೋಚರ ಹಾಗು ದುರ್ಗಮ, ಮತ್ತು ಗೊತ್ತಿಲ್ಲದ ವಿಶ್ವದ ಹುಡುಕಾಟದಲ್ಲಿ ತಮಗೇ ಗೊತ್ತಿಲ್ಲದೇ ಇದೇ ಫ್ರೆಂಚ್ ಮತ್ತು ಬ್ರಿಟಿಷ್ ಜನ ಹೊಸವಿಶ್ವದಲ್ಲೂ ಭೇಟಿಯಾಗಿ, "ನಾನು ಮೊದಲು ಬಂದೆ, ಈ ಜಾಗ ನನ್ನದು", ಎಂದು ಕಾದಾಡಲು ಪ್ರಾರಂಭಿಸಿದರು. ಕೊನೆಯಲ್ಲಿ ಯಾರು ಪ್ರಬಲರೋ, ಅವರು ಜಯಶೀಲರಾಗುವುದು ನಿಯಮವಲ್ಲವೇ ! ಅದೇ ಕಾನುನು ಇಲ್ಲಿಯೂ ನಿಜವಾಯಿತು. ಕೊನೆಯಲ್ಲಿ ಬ್ರಿಟಿಷ್ ಸಾಮ್ರಾಜ್ಯ ಇದೇ ನಿಯಮದ ಆಧಾರದೆ ಮೇಲೆ ವಿಶ್ವದಾದ್ಯಂತ ತನ್ನ ಕೈ ಚಾಚಿತು. ಅನಾಯಕತ್ವ, ಅರಾಜಕತೆ, ಮತ್ತು ಒಗ್ಗಟ್ಟಿಲ್ಲದ ಭಾರತವನ್ನು ಅತ್ಯಂತ ಸುಲಭವಾಗಿ ಬ್ರಿಟಿಷ್, ಲಪಟಾಯಿಸಲು ನಮ್ಮ ಜನರೇ ಕಾರಣ ಎನ್ನುವುದಕ್ಕೆ ಕಾರಣ ಹುಡುಕುವುದು ಕಷ್ಟವೇನಲ್ಲ. ಅಮೇರಿಕದ ಕಥೆ ಇದಕ್ಕೆ ಸ್ವಲ್ಪ ಭಿನ್ನವಾಗಿತ್ತು. ಆದ್ದರಿಂದ ಅದನ್ನು ಅಷ್ಟು ಸುಲಭವಾಗಿ ತಮ್ಮದಾಗಿಸುವ ಕಾರ್ಯದಲ್ಲಿ ಬ್ರಿಟಿಷ್ ಜನರ ಕಾರ್ಯ ನೀತಿ ವಿಫಲವಾಯಿತು. ಬೇರೆ ಎಲ್ಲ ಕಡೆ ಅವರು ಗೆಲ್ಲುತ್ತಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋದರು ! ಮುಂದಿನ ಇತಿಹಾಸ ನಮಗೆ ಗೊತ್ತಿದೆ.
ಇತ್ತೀಚಿನ ೬೦೦ ವರ್ಷಗಳ ಇತಿಹಾಸವನ್ನು ಗಮನಿಸಿದರೆ, ಯುರೋಪಿಯನ್ ಜನಸಮುದಾಯದ ಸ್ಪಾನಿಷ್, ಪೋರ್ಚುಗೀಸ್, ಡಚ್, ವರ್ಗದ ವಲಸೆಗಾರರು ವಿಶ್ವವನ್ನು ಅರಿಯಲು ಸಾವಿರಾರು ಮೈಲಿಗಳ ಅತಿ ದುರ್ಗಮ ಪ್ರಯಾಣಕ್ಕೆ ಕೈಹಾಕಿ ಸಫಲತೆಯನ್ನು ಪಡೆದರು. ಮುಂದೆ ಅವರ ನೆರೆಹೊರಯಲ್ಲಿದ್ದ ಬಲಿಷ್ಠ ಇಂಗ್ಲೀಶ್, ಮತ್ತು ಫ್ರೆಂಚ್ ಜನ, ಬಲವಂತವಾಗಿ ಎಲ್ಲ ವಸಾಹತುಗಳನ್ನು ಅವರುಗಳಿಂದ ವಶಪಡಿಸಿಕೊಂಡರು. ಈ ಇಬ್ಬರಲ್ಲಿ ಅತಿ ಬಲಾಧ್ಯರಾದ ಬ್ರಿಟಿಷ್ ಸೈನ್ಯ, ಫ್ರೆಂಚ್ ಸೈನ್ಯವನ್ನು ಹಿಂದೆಟ್ಟಿ, ಅವರಿಂದ ಎಲ್ಲವನ್ನೂ ಕಿತ್ತುಕೊಂಡರು. ಇದೇರೀತಿಯ ನಡವಳಿಕೆಯನ್ನೂ ನಾವು, ಕೆನಡಾ, ಭಾರತ, ಅಮೆರಿಕಗಳಲ್ಲಿ ಕಾಣಬಹುದು. '೭ ವರ್ಷಗಳ ಯುದ್ಧ'ದನಂತರ, ಬ್ರಿಟಿಷ್, ಫ್ರೆಂಚರಿಂದ ಅವರು ಗಳಿಸಿಕೊಂಡಿದ್ದ ಎಲ್ಲಾ ವಸಾಹತುಗಳನ್ನು ಬಲವಂತದಿಂದ ಕಿತ್ತುಕೊಂಡರು. (ಭಾರತದಲ್ಲಿ ಮೈಸೂರ್ ಯುದ್ಧ). ಇದನ್ನೇ ನಾವು ಎಲ್ಲಾ ಪ್ರದೇಶಗಳಲ್ಲೂ ಕಾಣಬಹುದು. ಹೀಗಾಗಿ ಅಮೇರಿಕ ಸಂಯುಕ್ತ ಸಂಸ್ಥಾನವನ್ನು ಬಿಟ್ಟು, ಬೇರೆ ಎಲ್ಲ ಕಡೆ ಇಂಗ್ಲಿಷರಿಗೆ ಜಯವೇ ಲಭಿಸಿತು...
'ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,' ನಮ್ಮ ಮನೆಗೆ ಬಹು ಹತ್ತಿರ. ಒಂದು ಗಂಟೆಯಲ್ಲಿ ಮುಟ್ಟಿದೆವು.
'ಲುಫ್ತಾಂಜ' ಬಹಳ ಉತ್ತಮ ಹವಾಯಿ ಜಹಾಜ್...
ಟೊರಾಂಟೋನಗರದಲ್ಲಿ ಸೂರ್ಯಾಸ್ತ ನೋಡುವುದು ಬಹಳ ಕಠಿಣ. ಬೇಸಿಗೆಯಲ್ಲಿ ಕೆಲವೇ ಜಾಗಗಳಲ್ಲಿ ಮಾತ್ರ ನೋಡಬಹುದು. ರಾತ್ರಿ ೯-೩೦ ಕ್ಕೆ ಸೂರ್ಯ ಮುಳುಗುವುದು.. ನಾನು ಕುಳಿತ ವಿಮಾನದ ಕಿಟಕಿಯಿಂದ ತೆಗೆದ ಚಿತ್ರ !
ಸೆಪ್ಟೆಂಬರ್ ೩ ರಂದು, ಹೈಪಾರ್ಕ್ ನಲ್ಲಿ ನಡೆಸಿದ 'ಏರ್ ಷೋ ' ಚಿತ್ರ ನನಗೆ ಈಗ ಸಿಕ್ಕಿತು. ಅದನ್ನು ಸಂಪದಿಯರಿಗೆ ತೋರಿಸಲು ಹರ್ಷಿಸುತ್ತೇನೆ !
'ನಮ್ಮ ೯೦ ದಿನಗಳ ಟೊರಾಂಟೋನಗರದ ಪ್ರವಾಸ'ದ ಬಳಿಕ ನಾವು ಸೆಪ್ಟೆಂಬರ್ ತಿಂಗಳ ೨ ನೆ ತಾರೀಖು ರಾತ್ರಿ ೧ ಗಂಟೆಗೆ 'ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ'ಲ್ಲಿ ಬಂದಿಳಿದೆವು. ಅಲ್ಲಿನ ಎಲ್ಲಾ ನೋಡಲೇ ಬೇಕಾದ ಸ್ಥಳಗಳನ್ನು ನಮ್ಮ ಮಗ ತೋರಿಸಿದ. ಅವುಗಳಲ್ಲಿ ಪ್ರಮುಖವಾದವುಗಳು, ಸಿ.ಏನ್. ಟವರ್, ನಯಾಗರ ಫಾಲ್ಸ್, ಶ್ರೀ. ಶ್ರೀ. ರವಿಶಂಕರ್ ರವರ ಆರ್ಟ್ ಆಪ್ಹ್ ಲಿವಿಂಗ್ ಸಂಸ್ಥೆ, ಆಮ್ತೆರಿಯೋ ಸೈನ್ಸ್ ಸೆಂಟರ್, ಮ್ಯೂಸಿಯೆಮ್, ಹೈಪಾರ್ಕ್, ಪಬ್ಲಿಕ್ ಲೈಬ್ರರಿ, ಪ್ರಾಣಿ ಸಂಗ್ರಹಾಲಯ, ಇಸ್ಕಾನ್ ಟೆಂಪಲ್, ಬಾಪ್ಸ್ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಮಂದಿರ್, ಪ್ರಾರ್ಥನಾ ಸಮಾಜ್ ಮಂದಿರ್, ಶೇಕ್ಸ್ ಪಿಯರ್ ನಾಟಕ, 'ಮಿಡ್ ಸಮ್ಮರ್ ನೈಟ್ಸ್ ಡ್ರೀಂ', ಇತ್ಯಾದಿ, ಇತ್ಯಾದಿ. ಈ ನಾಟಕವನ್ನು ಆಗಸ್ಟ್ ೨೮ ರ ರಾತ್ರಿ ಎಂಟು ಗಂಟೆಗೆ, ಪಾರ್ಕ್ ನ 'ಆಂಫಿ ಥಿಯೇಟರ್' ನಲ್ಲಿ ಪ್ರದರ್ಶಿಸ ಲಾಯಿತು. ಹೈಪಾರ್ಕ್ ನಲ್ಲಿ ಸುಮಾರು ೩೦ವರ್ಷಗಳ ಹಿಂದೆ ಇದೇ ನಾಟಕವನ್ನು ಮೊಟ್ಟಮೊದಲು ಪ್ರದರ್ಶಿಸಲಾಗಿತ್ತು. ನಂತರ, ಟೆಂಪೆಸ್ಟ್, ಆಸ್ ಯು ಲೈಕ್ ಇಟ್, ಮೊದಲಾದ ನಾಟಕಗಳ ಪ್ರಯೋಗ ನಡೆದಿತ್ತು. ಇಲ್ಲಿನ ಜನ ಇಂತಹ ನಾಟಕಗಳನ್ನು ಬಹಳವಾಗಿ ಇಷ್ಟಪಡುತ್ತಾರೆ. ೯೦ ನಿಮಿಷಗಳ ಮಧ್ಯೆ ವಿರಾಮವಿಲ್ಲದ, ಈ ನಾಟಕವನ್ನು ವೀಕ್ಷಿಸಲು ನೂರಾರು ಜನ ಮೊದಲೇ ಬಂದು, ಹುಲ್ಲಿನಮೇಲೆ ಜಮಖಾನ, ಚಾಪೆ,ಹಾಸಿ ಅಲ್ಲಿ ಕುಳಿತು ಕಾಯುತ್ತಿದ್ದರು. ನಾವು ಕಲ್ಲಿನಮೇಲೆ ಕುಳಿತು ನಾಟಕದ ಸವಿ ಉಂಡೆವು. ಗಟ್ಟಿ ಮರದ ಹಲಿಗೆಗಳಿಂದ ರಚಿಸಿದ ಈ ವೇದಿಕೆಯಲ್ಲಿ ದೃಶ್ಯಗಳನ್ನು ತರುವುದು ಎಷ್ಟು ಸುಲಭವೆನ್ನುವುದನ್ನು ಈ ನಾಟಕ ನೋಡಿ ಕಲಿಯಬಹುದು. ಉದಾಹರಣೆಗೆ ರಾತ್ರಿಯ ಚಂದ್ರ, ಗೋಡೆ, ಉದ್ಯಾನವನ, ಇತ್ಯಾದಿ ಇತ್ಯಾದಿಗಳು. ಬೆಳಕಿನ ಸಂಯೋಜನೆ, ಶಬ್ದ ಸಂಯೋಜನೆ, ಅತ್ಯಂತ ಸುಂದರವಾಗಿತ್ತು. ಕೆಲವು ಅತಿ ಹೆಚ್ಚು ನಾಟಕೀಯ ದೃಶ್ಯಗಳನ್ನು ಬಿಟ್ಟರೆ, ನಿಜಕ್ಕೂ ಈ ತರಹದ 'ಬಯಲುನಾಟಕ' ಬಹಳ ಮುದಕೊಟ್ಟ ಜನಪ್ರಿಯ ನಾಟಕ !
ಟೊರಾಂಟೋನಗರದ ಸಾರಿಗೆ ವ್ಯವಸ್ಥೆಗಳು, ಶುಚಿತ್ವ, ಹಾಗು ಅತ್ಯುತ್ತಮ ರಸ್ತೆಗಳು, ಪಾರ್ಕ್ ಗಳು, ಸರೋವರಗಳು, ಮಾಲ್ ಗಳು, ಹಾಗು ಪರಿಸರ, ಹವಾಮಾನ, ಮೇಲಾಗಿ ಅಲ್ಲಿನ ನಗೆಮೊಗದ ನೂರಾರು ರಾಷ್ಟ್ರಗಳ ಜನಸಮುದಾಯಗಳು, ಮೊದಲಾದವುಗಳು, ಮತ್ತು ಅವರ ಹೊಂದಾಣಿಕೆಯ ವರ್ತನೆಗಳು, ನಮಗೆ ಭಾರಿ ಮುದಕೊಟ್ಟಿತು. ಚೀನಾ, ಯುರೋಪಿಯನ್, ಭಾರತಿಯ, ಆಫ್ರಿಕ, ಆಸ್ಟ್ರೆಲಿಯಾ, ನ್ಯುಜಿಲೆಂಡ್, ಶ್ರೀಲಂಕ, ಬಾಂಗ್ಲಾದೇಶ್, ಪಾಕಿಸ್ತಾನ್, ರಶ್ಯಾ, ದಕ್ಷಿಣ ಅಮೇರಿಕ, ಮೊದಲಾದ ಜನ ಹೊಂದಿಕೊಂಡು ಉನ್ನತ ಮಟ್ಟದ ಸಹಬಾಳ್ವೆ ನಡೆಸುತ್ತಿದ್ದಾರೆ. ಭಾರತಿಯ ಉದ್ಯೋಗಪತಿಗಳು ಹೆಚ್ಚಾಗಿ ಪಟೇಲ್, ಮತ್ತು ಪಂಜಾಬಿ ಸಮುದಾಯಗಳು. ದಕ್ಷಿಣ ಭಾರತಿಯರಲ್ಲಿ ಹೆಚ್ಚು ಜನ ತಮಿಳರು, ಕೇರಳ ಮತ್ತು ಆಂಧ್ರದವರು. ಕನ್ನಡದವರು ಕಡಿಮೆ. ಟೊರಾಂಟೋ ಕನ್ನಡ ಸಂಘ ಒಳ್ಳೆಯ ಕೆಲಸಮಾಡುತ್ತಿದೆ. ನಮಗೆ ಹೋಗಲು ಸಮಯವಿರಲಿಲ್ಲ.
ಅತಿ ಹೆಚ್ಚು ಬಿಸಿಲು ಇರಲಿಲ್ಲ. ಹೊರಗಡೆ ಗಾಳಿ, ಚಳಿ ವಾತಾವರಣ ಇತ್ತು. ಜನ ಹೊರಗೆ ಹೋಗುವಾಗ ಇಂಟರ್ನೆಟ್ ನಲ್ಲಿ ಹವಾಮಾನ ನೋಡಿಕೊಂಡು ಹೋಗುತ್ತಾರೆ. ಸುಮಾರು ಒಂದು ವಾರದ ಹವಾಮಾನ ಟೆಲಿವಿಶನ್ ನಲ್ಲಿ ಬಿತ್ತರವಾಗುತ್ತವೆ, ಮತ್ತು ಅವು ನಂಬಲರ್ಹವಾದ ವಿವರಗಳು ಸಹಿತ ! ಟೆಲೆವಿಶನ್ ನಲ್ಲಿ ಮತ್ತೊಂದು ವಿಷಯ ನಮಗೆ ಬಹಳ ಹಿಡಿಸಿತು. ಅದೇನೆಂದರೆ, ರಸ್ತೆಗಳಲ್ಲಿ ವಾಹನ ಸಂಚಾರದ ಬಗ್ಗೆ ಮಾಹಿತಿ. ಯಾವ ರಸ್ತೆಯಲ್ಲಿ ಅತಿ ಹೆಚ್ಚು ಟ್ರಾಫಿಕ್ ಇದೆ. ಇತ್ಯಾದಿ.
ಆಗಸ್ಟ್ ೩೦ ರಿಂದ 'ಏರ್ ಷೋ ಪ್ರದರ್ಶನ' ದ ಅಭ್ಯಾಸವಿತ್ತು. ನಮಗೆ ನಮ್ಮ ಮನೆಯ ಹತ್ತಿರವೇ ವಿಮಾನಗಳ ಹಾರಾಟದ ತರಪೇತಿ, ನೋಡಲು ಸಿಕ್ಕಿತು. 'ಟೊರಾಂಟೋ ದ್ವೀಪ'ದಲ್ಲಿ '೪೦ ವರ್ಷದ ಇಂಡಿಯಾ ಷೋ ಸಮಾರಂಭ'ದಲ್ಲಿ 'ಇಸ್ಕಾಂ ದೇವಾಲಯ'ದವರು ಆಯೋಜಿಸಿದ 'ರಥ ಯಾತ್ರೆ' ಮತ್ತು ಕಲೆ, ಸಂಸ್ಕತಿ ನೃತ್ಯ ಕಾರ್ಯಕ್ರಮಗಳು ಸೊಗಸಾಗಿದ್ದವು. ನಮ್ಮ ಭಾರತದ ಹೆಮ್ಮೆಯ ಲಕ್ಷ್ಮೀಮಿತ್ತಲ್, 'ಲಂಡನ್ ಒಲಂಪಿಕ್ಸ ಸಭಾಂಗಣ'ದ ಬಳಿಯಲ್ಲಿ ನಿರ್ಮಿಸಿದ 'ಭಾರಿ ಗಾತ್ರದ ಸ್ಟೀಲ್ ಅಟ್ಟಳಿಕೆ'ಯ ವೆಚ್ಚವನ್ನು ವಹಿಸಿಕೊಂಡಿದ್ದಾರೆ. ಅದರ ನಿರ್ಮಾಣಕಾರ್ಯದಲ್ಲಿ, ಬ್ರಿಟಿಷ್ ಅಭಿಯಂತರ ಜೊತೆ, ಭಾರತಿಯ,'ಕಪೂರ್' ಎನ್ನುವ ಅಭಿಯಂತರಿದ್ದಾರೆ.
-ಶುಭಮಸ್ತು.....
-ಚಿತ್ರಗಳು ಹಾಗೂ, ವರದಿ :
-ಹೊರಂಲವೆಂ.
-ಮುಂಬೈ,
೨೦೧೨ ರ, ಸೆಪ್ಟೆಂಬರ್, ೪, ಮಂಗಳವಾರ.
Comments
ಉ: ಟೊರಾಂಟೋನಗರ ಪ್ರವಾಸ ನಿಜಕ್ಕೂ ಸುಂದರವಾಗಿತ್ತು !
In reply to ಉ: ಟೊರಾಂಟೋನಗರ ಪ್ರವಾಸ ನಿಜಕ್ಕೂ ಸುಂದರವಾಗಿತ್ತು ! by makara
ಉ: ಟೊರಾಂಟೋನಗರ ಪ್ರವಾಸ ನಿಜಕ್ಕೂ ಸುಂದರವಾಗಿತ್ತು !