ಟೋಪಿವಾಲ ಚಿತ್ರದ ವಿಮರ್ಶೆ

ಟೋಪಿವಾಲ ಚಿತ್ರದ ವಿಮರ್ಶೆ

ಚಿತ್ರ
ಉಪೇಂದ್ರ ನಿರ್ದೇಶಿಸದಿದ್ದರೂ ಅವರೇ ಸ್ವತಃ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದರಿಂದ ಟೋಪಿವಾಲ ಚಿತ್ರ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ, ಟೋಪಿವಾಲ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ.
 
ಹೌದು, ಏನು ಟೋಪಿವಾಲನ ಕಥೆ?
 
ಹೆಸರೇ ಹೇಳುವಂತೆ ಇದು ಟೋಪಿ ಹಾಕುವ, ಟೋಪಿ ಹಾಕಿಸಿಕೊಳ್ಳುವ ಕಥೆ! ಚಿತ್ರದ ಆರಂಭದಿಂದ ಕೊನೆಯವರೆಗೂ ಒಬ್ಬರು ಇನ್ನೊಬ್ಬರಿಗೆ ಟೋಪಿ ಹಾಕುತ್ತಲೇ ಹೋಗುತ್ತಾರೆ! ಬಣ್ಣ ಬಣ್ಣದ ಟೋಪಿ. ನಾಯಕನ ಹೆಸರು ಬಸಕ್. ಆತ ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಹೋಗುತ್ತಾನೆ. ಪೋಲಿಸರು ಇವನನ್ನು ಹಿಡಿಯಲು ಏನೆಲ್ಲಾ ಕಸರತ್ತು ಮಾಡುತ್ತಾರೋ  ಅದಕ್ಕೆಲ್ಲ ನಾಯಕ ಪ್ರತಿತಂತ್ರ ಹೂಡುತ್ತಲೇ ಹೋಗುತ್ತಾನೆ. ಅವರು ಚಾಪೆ ಕೆಳಗೆ ನುಗ್ಗಿದರೆ ಈತ ರಂಗೋಲಿ ಕೆಳಗೆ ನುಗ್ಗುವಷ್ಟು ನಿಪುಣ. ಪೋಲಿಸರು ಕಳ್ಳರ ವೇಷ ಧರಿಸಿದರೆ ಇವನು ಪೋಲೀಸರ ವೇಷ ಧರಿಸಿ ಅವರನ್ನು ಯಾಮಾರಿಸುತ್ತಾನೆ. ಮಧ್ಯಂತರದ ವರೆಗೂ ಸಾಗುವ ಈ ಕಳ್ಳ ಪೋಲೀಸ್ ಆಟ ನಂತರ ಕುತೂಹಲಕರ ಘಟ್ಟಕ್ಕೆ ಬರುತ್ತದೆ. ಕೊನೆಯ 40 ನಿಮಿಷದಲ್ಲಿ ಚಿತ್ರದ ನಿಜವಾದ ಕಥೆ, ಆಶಯ ಬಿಚ್ಚಿಕೊಳ್ಳುತ್ತದೆ.
ಸರಿ, ಚಿತ್ರದ ಒಳ್ಳೆಯ ಅಂಶಗಳು ಯಾವುವು?
 
ರಾಜಕೀಯ ದೊಂಬರಾಟವನ್ನು ವಿಡಂಬನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಉಪೇಂದ್ರ. ಚಿತ್ರಕಥೆಯಲ್ಲಿ ಕೊಂಚ ವಿಭಿನ್ನತೆಯಿದೆ. ಉಪೇಂದ್ರ ಅವರು ತಮ್ಮ ಎಂದಿನ ಶೈಲಿಯಂತೆ ಪ್ಲ್ಯಾಷ್ ಬ್ಯಾಕ್ ತಂತ್ರಕ್ಕೆ ಇಲ್ಲಿ ಮೊರೆ ಹೋಗದೆ ಚಿತ್ರವನ್ನು ನೇರವಾಗಿ ನಿರೂಪಿಸಿದ್ದಾರೆ.  ರಾಜಕಾರಣಿಗಳ ಬಣ್ಣ ಬಯಲು  ಮಾಡುವ ಕೆಲಸವನ್ನು ಮಾತ್ರ ಹಾಸ್ಯ ಮಿಶ್ರಿತವಾಗಿ ಸೊಗಸಾಗಿ ಮಾಡಿದ್ದಾರೆ. ಇಂದಿನ ನಮ್ಮ ರಾಜಕೀಯ ಸ್ಥಿತಿಗತಿಗಳ ನೈಜ ಚಿತ್ರಣವನ್ನು ಹಾಸ್ಯ ಪಾತ್ರಗಳ ಮೂಲಕ ಹೇಳಿರುವ ವಿಧಾನ ನಿಜಕ್ಕೂ ಶ್ಲಾಘನೀಯ. ಸರ್ಕಾರವೇ ಇಲ್ಲೊಂದು ಪಾತ್ರವಾಗುತ್ತದೆ. ಆ ಸರ್ಕಾರ ಹೇಗೆ ದೇಶದ ಜನರ ಸಂಪತ್ತನ್ನು ಲೂಟಿ ಹೊಡೆಯುತ್ತದೆ, ಅದನ್ನು ತಡೆಯಲು ಪ್ರಯತ್ನಿಸುವ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಹೇಗೆ ಕತ್ತರಿಸುತ್ತದೆ, ಮತ್ತು ಚುನಾವಣೆ ಬಂದಾಗ ಜಾತಿ, ಹೆಂಡ, ಹಣಗಳಿಂದ ಜನರನ್ನು ಯಾಮಾರಿಸಿ ಹೇಗೆ ಮತ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಪಾತ್ರಗಳ ಮೂಲಕ ಉಪೇಂದ್ರ ಮಾತ್ರ ಹೇಳಲು ಸಾಧ್ಯ!
 
ಹಾಗಾದ್ರೆ ಚಿತ್ರದಲ್ಲಿ ಎಲ್ಲವೂ “ಸೂಪರ್” ಆ?
 
ಇಲ್ಲ.. ಚಿತ್ರವನ್ನು ಇನ್ನಷ್ಟು ಸೊಗಸಾಗಿಸಬಹುದಿತ್ತು! ಕೆಲವೊಂದು ಹಾಸ್ಯ ತೀರಾ ಬಾಲಿಶ ಎನಿಸದಿರದು. ರಂಗಾಯಣ ರಘು ಅಭಿನಯ ಹಲವೆಡೆ ಅತಿರೇಕ ಎನಿಸಿ ಕಿರಿಕಿರಿಯಾಗಬಹುದು. ಹಾಡುಗಳು ಅಷ್ಟಕಷ್ಟೇ. ಆದರೂ ನಗುವಿಗೇನೂ ಕೊರತೆಯಿಲ್ಲ. ಹಾಸ್ಯ ಪ್ರಧಾನ ನಿರೂಪಣೆಯೇ ಚಿತ್ರದ ಜೀವಾಳ.
ಅಭಿನಯದ ವಿಷಯಕ್ಕೆ ಬಂದರೆ?
 
ಉಪೇಂದ್ರ ಸೂಪರ್! ನಾಯಕಿ ಭಾವನಾ ಪರವಾಗಿಲ್ಲ. ರಂಗಾಯಣ ರಘು ಹತ್ತು ರೂಪಾಯಿಗೆ ಹತ್ತೇ ರೂಪಾಯಿಯ ಅಭಿನಯ ಮಾಡಿದರೆ ಒಳಿತು. ನೂರು ರೂಪಾಯಿಯ ಅಭಿನಯದ ಅವಶ್ಯಕತೆ ಇರಲಿಲ್ಲ. ಬೀರಾದಾರ್, ರಾಜು ತಾಳಿಕೋಟೆ, ರವಿಶಂಕರ್ ತಮ್ಮ ಸಹಜಾಭಿನಯದಿಂದ ನ್ಯಾಯ ಸಲ್ಲಿಸಿದ್ದಾರೆ.
ಹಾಗಾದ್ರೆ ನಿಜವಾದ ಟೋಪಿವಾಲ ಯಾರು?
 
ಟೋಪಿವಾಲ ಅಂದ್ರೆ ಟೋಪಿ ಹಾಕುವವನಾ ಅಥವಾ ಟೋಪಿ ಹಾಕಿಸಿಕೊಳ್ಳೋನಾ? ನಿಜವಾದ ಟೋಪಿವಾಲ ಯಾರು? ಈ ಪ್ರಶ್ನೆಗೆ ಉತ್ತರ ಚಿತ್ರದ ಕೊನೆಯಲ್ಲಿ ಉಪೇಂದ್ರ ಕೊಡುತ್ತಾರೆ! ನೋಡಿ. ಒಂದು ಸಲ ನೋಡೋಕೆ ಅಡ್ಡಿ ಇಲ್ಲ, ಕೊನೆಯ ನಲವತ್ತು ನಿಮಿಷಗಳಿಗಾದ್ರೂ ಚಿತ್ರವನ್ನು ಒಮ್ಮೆ ನೋಡಿ. ಹೇಗಿದೆ ಅಂತ ನಮ್ ಜೊತೆ ಹಂಚೊಳ್ಳಿ.
ಮತ್ತೊಂದು ಸಿನಿಮಾ ವಿಮರ್ಶೆ ಜೊತೆ ಪುನಃ ಸಿಗೋಣ,
 
ತಮ್ಮ,
ಗಂಧದಗುಡಿ
 
ತಾಜಾ ಕನ್ನಡ ಸಿನಿಮಾ ಸುದ್ದಿಗಾಗಿ ನಮ್ಮನ್ನು ಹಿಂಬಾಲಿಸಿ:
http://twitter.com/gandhadagudi
http://facebook.com/gandhadagudi 
 
Rating
No votes yet