ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?

ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?

2003 ರ ಆದಿಭಾಗದಲ್ಲಿ 48 ರೂಪಾಯಿಗೆ ಒಂದು ಅಮೇರಿಕನ್ ಡಾಲರ್ ಸಿಗುತ್ತಿತ್ತು. ಆದರೆ ಇವತ್ತು 40 ರೂಪಾಯಿಗೇ ಒಂದು ಡಾಲರ್ ಸಿಗುತ್ತಿದೆ. ಪೆಟ್ರೋಲಿಯಮ್ ತೈಲ, ಯಂತ್ರೋಪಕರಣಗಳು, ರಸಗೊಬ್ಬರ, ರಾಸಾಯನಿಕ, ಮುಂತಾದವುಗಳನ್ನು ವಿದೇಶಗಳಿಂದ ಕೊಳ್ಳುವ ಭಾರತಕ್ಕೆ ಈ ಲೆಕ್ಕಾಚಾರದಲ್ಲಿ ಉಳಿತಾಯವೆ ಆಗುತ್ತಿದೆ. ಇದು ಯಾವ ಲೆಕ್ಕಾಚಾರದಲ್ಲಿ ಉಳಿತಾಯ ಎಂದು ತಿಳಿದುಕೊಳ್ಳಬೇಕಾದರೆ ಬೆಲೆಯಲ್ಲಿ ಏರಿಳಿತಗಳನ್ನು ಕಂಡಿರುವ ಅಂತರರಾಷ್ಟ್ರೀಯ ಉತ್ಪನ್ನಗಳನ್ನು ಬಿಟ್ಟು ಏರಿಳಿತಗಳನ್ನು ಕಂಡಿರದ ಒಂದು ವಸ್ತುವಿನ ಮೇಲೆ ರೂಪಾಯಿಯ ಮೌಲ್ಯ ವೃದ್ಧಿಯನ್ನು ಅಳೆಯೋಣ. 2001 ರ ಕೊನೆಯಲ್ಲಿ ಬಿಡುಗಡೆಯಾದ ಮೈಕ್ರೊಸಾಫ್ಟ್ ಕಂಪನಿಯ ವಿಂಡೋಸ್ XP ಆಪರೇಟಿಂಗ್ ಸಿಸ್ಟಮ್‌ನ ಆವತ್ತಿನ ಬೆಲೆ 199 ಡಾಲರ್ ಆಗಿದ್ದರೆ, ಇವತ್ತಿನ ಬೆಲೆಯೂ 199 ಡಾಲರ್ರೆ. ಆದರೆ 2003 ರಲ್ಲಿ ಭಾರತದಲ್ಲಿ ಇದನ್ನು ಕೊಳ್ಳಲು 9500 ರೂಪಾಯಿ ಕೊಡಬೇಕಿದ್ದರೆ, ಇವತ್ತು ಅದನ್ನು ಕೊಳ್ಳಲು ನಾವು ತೆರಬೇಕಾದ ಬೆಲೆ ಕೇವಲ 8000 ರೂಪಾಯಿ ಅಷ್ಟೆ. ಹೀಗೆ, ಏರಿಳಿತ ಕಂಡಿರದ ವಿದೇಶಿ ವಸ್ತುಗಳು ಇವತ್ತು ಅಗ್ಗವಾಗಿವೆ. ಇನ್ನು ಅಗ್ಗವಾದ ವಸ್ತುಗಳು ಮತ್ತೂ ಅಗ್ಗವಾಗಿದ್ದರೆ, ತುಟ್ಟಿಯಾದ ವಸ್ತುಗಳು ಅಮೇರಿಕದವರಿಗೆ ಆಗಿರುವಷ್ಟು ಶೇಕಡಾವಾರು ಪ್ರಮಾಣದಲ್ಲಿ ನಮಗೆ ತುಟ್ಟಿಯಾಗಿಲ್ಲ.

ನಮ್ಮ ಮೌಲ್ಯ ಹೆಚ್ಚುತ್ತಿದೆ ಎನ್ನುವುದು ಯಾರಿಗೆ ಆಗಲಿ ಅಭಿಮಾನದ ವಿಚಾರ. ಅದೂ ದೇಶಕ್ಕೆ ಸಂಬಂಧಿಸಿದ ಇಂತಹ ವಿಚಾರಗಳಲ್ಲಿ ಬಹಳಷ್ಟು ಜನ ಭಾವುಕರಾಗಿ ಯೋಚಿಸುವುದೆ ಹೆಚ್ಚು. ಡಾಲರ್‌ಗೆ ಎದುರಾಗಿ ರೂಪಾಯಿಯ ಬೆಲೆ ಹೆಚ್ಚುತ್ತಿದೆ ಎಂದ ಮಾತ್ರಕ್ಕೆ ರೂಪಾಯಿಯ ಬೆಲೆ ಹೆಚ್ಚಾಯಿತು ಎಂದೇನೂ ಅಲ್ಲ. ಡಾಲರ್ ಅಪಮೌಲ್ಯಕ್ಕೊಳಗಾದರೂ ರೂಪಾಯಿಯ ಬೆಲೆ ಹೆಚ್ಚಾಗುತ್ತದೆ. ಈಗಿನ ಸದ್ಯದ ಸ್ಥಿತಿಯಲ್ಲಿ ಆಗಿರುವುದೂ ಇದೆ. ಯಾಕೆಂದರೆ, ಮತ್ತೊಂದು ಪ್ರಮುಖ ಜಾಗತಿಕ ಕರೆನ್ಸಿಯಾದ ಯೂರೊ ಲೆಕ್ಕದಲ್ಲಿ ರೂಪಾಯಿಯ ಮೌಲ್ಯ ಇಳಿಮುಖವಾಗಿದೆ. 2003 ರಲ್ಲಿ ಐವತ್ತು ರೂಪಾಯಿಗೆ ಒಂದು ಯೂರೊ ಸಿಗುತ್ತಿತ್ತು. ಆದರೆ ಇವತ್ತು ಒಂದು ಯೂರೊಗೆ ಐವತ್ತೈದೂವರೆ ರೂಪಾಯಿ ತೆರಬೇಕು.

ಕಳೆದ ಒಂದೆರಡು ವರ್ಷಗಳಲ್ಲಿ ಡಾಲರ್‌ನ ಎದುರು ರೂಪಾಯಿ ಮೌಲ್ಯ ಹೆಚ್ಚಾಗಿರುವುದರಿಂದ ಆಮದಿನ ವಿಚಾರದಲ್ಲಿ ದೇಶಕ್ಕೆ ಒಳ್ಳೆಯದೆ ಆಗಿದೆ. 2006 ರಲ್ಲಿ ಭಾರತ 112 ಶತಕೋಟಿ ಡಾಲರ್‌ಗಳಷ್ಟು ಉತ್ಪನ್ನಗಳನ್ನು ರಫ್ತು ಮಾಡಿದ್ದರೆ, 188 ಶತಕೋಟಿ ಡಾಲರ್‌ಗಳಷ್ಟು ಬೆಲೆಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದನ್ನೆ ಇವತ್ತಿನ ಲೆಕ್ಕಾಚಾರದಲ್ಲಿ ಲೆಕ್ಕ ಹಾಕಿದರೆ, ನಮ್ಮ ಆಮದಿನ ಪ್ರಮಾಣ ಜಾಸ್ತಿ ಇರುವುದರಿಂದ ನಾವು ಕಳೆದ ವರ್ಷ ಕೊಂಡುಕೊಂಡ ಸಾಮಾನುಗಳನ್ನು ಈ ವರ್ಷ ಇನ್ನೂ ಕಮ್ಮಿ ಬೆಲೆಗೆ ಕೊಳ್ಳಬಹುದು. ಹಾಗೆಯೆ ನಮ್ಮ ಆಮದು-ರಪ್ತು ಮಧ್ಯೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಅಂದರೆ ದೇಶದಿಂದ ಹೊರಗೆ ಹೋಗುವ ನಿವ್ವಳ ದುಡ್ಡಿನ ಪ್ರಮಾಣ ಕಮ್ಮಿಯಾಗುತ್ತದೆ.

ಆದರೆ, ಇದು ಮೇಲೆ ಹೇಳಿದಷ್ಟು ಸರಳ ಅಲ್ಲ. ಇಲ್ಲಿ ಸಮಸ್ಯೆಯೂ ಇದೆ. ಕಳೆದ ವರ್ಷ ನಮ್ಮ ಬೆಂಗಳೂರಿನ ಸುತ್ತಮುತ್ತಲ ಗಾರ್ಮೆಂಟ್ ಫ್ಯಾಕ್ಟರಿಯವರಿಗೆ ಐದು ಜೊತೆ ರೆಡಿಮೇಡ್ ಬಟ್ಟೆಗಳಿಗೆ 4600 ರೂಪಾಯಿ ಕೊಡುತ್ತಿದ್ದ ಅಮೇರಿಕದವರು ಈಗ ಕೊಡುವುದು 4000 ರೂಪಾಯಿ ಮಾತ್ರ. ಕಳೆದ ವರ್ಷ ಒಂದು ಸಾಫ್ಟ್‌‌ವೇರ್ ಪ್ರಾಜೆಕ್ಟ್‌ಗೆ 20 ಸಾವಿರ ಡಾಲರ್ ಎಂದಿದ್ದ ಅಮೇರಿಕನ್ ಕಂಪನಿಯೊಂದು ಪ್ರಾಜೆಕ್ಟ್ ಮುಗಿದ ನಂತರ ಯಾವುದೇ ಚೌಕಾಸಿ ಮಾಡದೆ 20 ಸಾವಿರ ಡಾಲರ್‌ಗೆ ಚೆಕ್ ಕೊಟ್ಟಿತು ಎಂದಿಟ್ಟುಕೊಳ್ಳೋಣ. ಆದರೆ ಸುಮಾರು ಒಂಬತ್ತು ಲಕ್ಷ ರೂಪಾಯಿ ಬರುತ್ತದೆ ಎಂದು ಲೆಕ್ಕ ಹಾಕಿದ್ದ ಭಾರತದ ಕಂಪನಿಗೆ ಈಗ ಬರುವುದು ಎಂಟು ಲಕ್ಷ ಮಾತ್ರವೆ. ಮೊದಲೆ ಹೇಳಿದಂತೆ ಇಲ್ಲಿ ಯಾರೂ ಬೆಲೆಯಲ್ಲಿ ಚೌಕಾಸಿ ಮಾಡಿಲ್ಲ. ಆಗಿರುವ ಚಮತ್ಕಾರವೆಲ್ಲ ಕರೆನ್ಸಿಯಲ್ಲಿಯ ಏರಿಳಿತದಲ್ಲಿ ಮಾತ್ರ.

ಇಂತಹ ಸ್ಥಿತಿಯಲ್ಲಿ ಹತ್ತಾರು ಲಕ್ಷ ಜನರಿಗೆ ಉದ್ಯೋಗ ನೀಡಿರುವ ಐಟಿ ಕಂಪನಿಗಳ ಮತ್ತು ಗಾರ್ಮೆಂಟ್ ಕಂಪನಿಗಳ ಸ್ಥಿತಿ ಏನಾಗುತ್ತದೆ ಎನ್ನುವುದೆ ಗಂಭೀರವಾದ ವಿಷಯ. ಲಾಭವೆ ಮುಖ್ಯವಾಗಿರುವ, ವರ್ಷಕ್ಕೆ ಶೇ.30 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವ ಐಟಿ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಸ್ಟಾಕ್‌ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುತ್ತಿರುವ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಸತ್ಯಂ, ಮುಂತಾದ ಕಂಪನಿಗಳು ಯಾವಾಗಲೂ ಗಣನೀಯ ಪ್ರಮಾಣದ ಲಾಭ ತೋರಿಸುತ್ತಿರಲೇ ಬೇಕು. ಇಲ್ಲದಿದ್ದರೆ ಅವುಗಳ ಷೇರಿನ ಬೆಲೆ ಇಳಿಯುತ್ತ ಹೋಗುತ್ತದೆ. ಹಾಗೆ ಆಗದೆ ಇರುವಂತೆ ಅವರು ನೋಡಿಕೊಳ್ಳಬೇಕಾದರೆ ತಮ್ಮ ಖರ್ಚುಗಳನ್ನು ಕಮ್ಮಿ ಮಾಡಿಕೊಳ್ಳಬೇಕು. ಪ್ರಾಜೆಕ್ಟ್ ಇಲ್ಲದಿದ್ದರೆ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳಲೇ ಬಾರದು. ಈಗಾಗಲೆ ಪ್ರಾಜೆಕ್ಟ್ ಇಲ್ಲದೆ ಕುಳಿತಿರುವ ತನ್ನ ನೌಕರರನ್ನು ಕೆಲಸದಿಂದ ತೆಗೆಯಬೇಕು. ತಾವು ಒಪ್ಪಿಕೊಂಡ ಕೆಲಸವನ್ನು ತಮಗಿಂತ ಕಮ್ಮಿಗೆ ಬೇರೆ ಯಾರಾದರೂ ಮಾಡಿದರೆ (ಹೊರದೇಶವಾದರೂ ಸರಿ) ಅವರಿಗೆ ಔಟ್‌ಸೋರ್ಸ್ ಮಾಡಬೇಕು. ತಮ್ಮಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ಥಿತಿ ಉತ್ತಮವಾಗುವ ತನಕ ಸಂಬಳ ಜಾಸ್ತಿ ಮಾಡಬಾರದು. ಅವರಿಗೆ ಕೊಡುತ್ತಿರುವ ಕೆಲವು ಸೌಲಭ್ಯಗಳನ್ನು ತೆಗೆಯಬೇಕು.

ನಮ್ಮ ಐಟಿ ಕಂಪನಿಗಳು ಇವೆಲ್ಲವನ್ನೂ ಮಾಡಿದರೆ ಮಾತ್ರ ಅವರ ಸ್ಟಾಕ್ ಬೆಲೆ ಹಾಗೆ ಇರುತ್ತದೆ. ಐಟಿ ಕಂಪನಿಗಳು ಅದನ್ನು ಮಾಡಿಯೂ ತೀರುತ್ತವೆ. ಐದಾರು ವರ್ಷದ ಹಿಂದೆ ಇಂತಹುದೆ ಸ್ಥಿತಿ ಬಂದಿದ್ದಾಗ ಭಾರತದ ಪ್ರಸಿದ್ಧ ಐಟಿ ಕಂಪನಿಯೊಂದು ಕಕ್ಕಸು ಕೋಣೆಯಲ್ಲಿ ಸುರುಳಿ ಒದಗಿಸುವುದನ್ನೆ ನಿಲ್ಲಿಸಿಬಿಟ್ಟಿತು. ಕಛೇರಿಯಲ್ಲಿ ಇರುವುದೆಲ್ಲ ಪಾಶ್ಚಾತ್ಯ ಮಾದರಿಯ ಕಮೋಡ್‌ಗಳು; ಒರೆಸಿಕೊಳ್ಳಲು ಕಾಗದವೆ ಇಲ್ಲ! ಆಗ ಆ ಕಂಪನಿಯೇನೂ ನಷ್ಟದಲ್ಲಿರಲಿಲ್ಲ. ಆಗಲೂ ನೂರಾರು ಕೋಟಿ ಲಾಭ ಮಾಡುತ್ತಿತ್ತು. ಅಷ್ಟಿದ್ದರೂ, ಕಾಗದಸುರುಳಿ ಕೊಡದೆ ಇರುವುದರಿಂದ ವರ್ಷಕ್ಕೆ ಎಷ್ಟೊಂದು ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ ಎಂಬ ಲೆಕ್ಕ ಬೇರೆ ಕೊಟ್ಟಿತು ಅದು ತನ್ನ ನೌಕರರಿಗೆ. ಸ್ಟಾಕ್ ಮಾರ್ಕೆಟ್ ಹೋದ ಕಾರಣದಿಂದಾಗಿ ನೂರಾರು ಕೋಟಿ ರೂಪಾಯಿಗಳ ನಗದು ಹಣ ಹೊಂದಿರುವ ಐಟಿ ಕಾರ್ಖಾನೆಗಳದೆ ಈ ಗತಿಯಾದರೆ ಇನ್ನು ಬಹುಪಾಲು ಕೌಟುಂಬಿಕ ಯಜಮಾನಿಕೆಗಳಲ್ಲಿಯೆ ನಡೆಯುವ ಗಾರ್ಮೆಂಟ್ ಕಾರ್ಖಾನೆಗಳ ಗತಿ ಏನಾಗಬಹುದು?

ರೂಪಾಯಿಯ ಮೌಲ್ಯ ಹೆಚ್ಚಾಗಿರುವುದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಐಟಿ ಕಂಪನಿಗಳು ತಮ್ಮ ವಿದೇಶಿ ಗ್ರಾಹಕರೊಡನೆ ಚೌಕಾಸಿಗೆ ಇಳಿಯಬಹುದು. ಅದರಲ್ಲೂ ಬಹುಮುಖ್ಯ ಪ್ರಾಜೆಕ್ಟ್‌ಗಳನ್ನು ಭಾರತಕ್ಕೆ ಔಟ್‌ಸೋರ್ಸ್ ಮಾಡಿರುವ ವಿದೇಶಿ ಕಂಪನಿಗಳು ಈ ಚೌಕಾಸಿಗೆ ಒಪ್ಪಿಕೊಳ್ಳಲೂ ಬಹುದು. ಯಾಕೆಂದರೆ ಅವರಿಗೆ ರಾತ್ರೊರಾತ್ರಿ ಇನ್ನೊಂದು ದೇಶಕ್ಕೆ ಈ ಪ್ರಾಜೆಕ್ಟ್‌ಗಳನ್ನು ಸಾಗಿಸಲು ಆಗುವುದಿಲ್ಲ. ಆದರೆ ಇದೇ ಮಾತನ್ನು ಗಾರ್ಮೆಂಟ್ ಕಾರ್ಖಾನೆಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ನಮಗಿಂತ ಕಮ್ಮಿ ಬೆಲೆಗೆ ಬಟ್ಟೆಬರೆ ಹೊಲಿದು ಕೊಡಲು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕ ಮುಂತಾದ ನಮ್ಮ ಅಕ್ಕಪಕ್ಕದ ದೇಶಗಳೆ ಇವೆ. ಇನ್ನು ಈ ಗಾರ್ಮೆಂಟ್ ಕಂಪನಿಗಳ ಲಾಭವೂ ಸಾಫ್ಟ್‌ವೇರ್ ಕಂಪನಿಗಳಿಗೆ ಇದ್ದಂತೆ ಶೇ. 30-40 ರ ರೇಂಜಿನಲ್ಲಿ ಇರುವುದು ಸಂಶಯ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಅವರಿಗೆ ಲಾಭದ ಪ್ರಮಾಣ ಕಡಿಮೆ ಆಗಿ, ಕೆಲವರಿಗೆ ಸರಿದೂಗಿಸಿಕೊಂಡು ಹೋಗುವುದೆ ಕಷ್ಟವಾಗಿ ಬಿಟ್ಟಿರಬಹುದು. ಈಗಾಗಲೆ ಕೆಲವೊಂದು ಕಡೆ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ನೌಕರರನ್ನು ತೆಗೆಯುತ್ತಿದ್ದಾರೆ ಎಂಬ ಸುದ್ದಿಗಳು ಬರಲು ಆರಂಭವಾಗಿವೆ. ಭಾರತೀಯ ಟೆಕ್ಸ್‌ಟೈಲ್ ಉದ್ಯಮದ ಒಕ್ಕೂಟ ಸಂಸ್ಥೆ ಏರಿರುವ ರೂಪಾಯಿಯಿಂದಾಗಿ ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ, ಇರುವವರಲ್ಲಿಯೆ 2.72 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುತ್ತಿದೆ. ಕೆಳಮಟ್ಟದಲ್ಲಿ, ಬಡವರಲ್ಲಿ, ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಜನವರ್ಗದಲ್ಲಿ ಸದ್ದಿಲ್ಲದ ಕ್ರಾಂತಿ ಉಂಟು ಮಾಡುತ್ತಿದ್ದ ಗಾರ್ಮೆಂಟ್ ಉದ್ಯಮಕ್ಕೆ ಬರಲಿರುವ ದಿನಗಳು ಅಷ್ಟೇನೂ ಚೆನ್ನಾಗಿಲ್ಲ. ರೂಪಾಯಿಯ ಮೌಲ್ಯ ಮತ್ತೆ ಕಮ್ಮಿಯಾಗಿ ನಮ್ಮ ರಫ್ತು ಉತ್ಪನ್ನಗಳು ಅಗ್ಗವಾದರೂ ಈ ಉದ್ಯಮಕ್ಕೆ ಹೊರಗಿನ ದೇಶಗಳಲ್ಲಿ ಪೈಪೋಟಿ ಇದ್ದೇ ಇದೆ.

ಹೀಗೆ, ರೂಪಾಯಿಯ ಬೆಲೆ ಹೆಚ್ಚಾಗಿದ್ದರಿಂದ ನಮ್ಮ ದೇಶದ ಉತ್ಪನ್ನಗಳು ಬೇರೆ ದೇಶದವರಿಗೆ ತುಟ್ಟಿಯಾಗುತ್ತವೆ, ಇಲ್ಲವೆ ಇನ್ನು ಮೇಲೆ ನಮ್ಮವರು ಬಹಳ ಕಮ್ಮಿ ಲಾಭಾಂಶ ಇಟ್ಟುಕೊಳ್ಳಬೇಕು. ಇಂತಹ ಸ್ಥಿತಿಯಲ್ಲಿ ಹೊಸ ಉದ್ಯೋಗಗಳು ಬೇಗ ಸೃಷ್ಟಿಯಾಗುವುದಿಲ್ಲ. ಇಂತಹ ಸ್ಥಿತಿ ಬರಬಾರದು ಎಂದೇ ಚೀನಾ ದೇಶ ತನ್ನ ಯೆನ್ ಮೌಲ್ಯ ಜಾಸ್ತಿ ಇದ್ದರೂ ಅದು ಕೃತಕವಾಗಿ ಕಮ್ಮಿಯಿರುವಂತೆ ನೋಡಿಕೊಂಡಿದ್ದರು. ಹಾಗಾಗಿಯೆ ಚೀನಾದ ಉತ್ಪನ್ನಗಳು ಹೊರಗಿನವರಿಗೆ ಯಾವಾಗಲೂ ಅಗ್ಗ.

ಈಗ ನಮ್ಮವರು ಅದೇ ದುಡ್ಡಿಗೆ ಹೆಚ್ಚು ಸಾಮಾನುಗಳನ್ನು ಹೊರದೇಶಗಳಿಂದ ಕೊಂಡುಕೊಳ್ಳಬಹುದು. ಇದು ಜೀವನಾವಶ್ಯಕ ವಸ್ತುಗಳ ವಿಚಾರಕ್ಕೆ ಆದರೆ ದೇಶಕ್ಕೆ ನಷ್ಟವೇನಿಲ್ಲ. ಆದರೆ ಲಕ್ಷುರಿ ಸಾಮಾನುಗಳನ್ನು ಆಮದು ಮಾಡಿಕೊಳ್ಳುತ್ತ ಹೋದರೆ, ವಿದೇಶಗಳಲ್ಲಿ ಮೋಜು ಉಡಾಯಿಸುವುದು ಅಗ್ಗ ಎಂದುಕೊಂಡು ಓಡುತ್ತಿದ್ದರೆ ಅದರಿಂದ ದೇಶಕ್ಕೆ ಅಪಾಯವೆ ಹೆಚ್ಚು. ಜಾಗತೀಕರಣ, ಬಡವರು-ಬಲ್ಲಿದರು, ಎಮ್.ಎನ್.ಸಿಗಳ ಶೋಷಣೆ ಎಂದೆಲ್ಲ ಬಾಯಿಬಡಿದುಕೊಳ್ಳುವವರೆ ಬೆಂಜ್ ಕಾರು ಕೊಳ್ಳುವ ದೇಶ ನಮ್ಮದು. ಹೀಗಿರುವಾಗ ನಮ್ಮಲ್ಲಿ ದುಡ್ಡಿರುವವರೆಲ್ಲ ಇನ್ನು ಮುಂದೆ ದೇಶದಲ್ಲಿ ತಯಾರಾಗುವ ಮಾರುತಿ, ಟಾಟಾ, ಬಿಪಿಎಲ್ ಬಿಟ್ಟು ಅದೇ ಬೆಲೆಗೆ ಸಿಗುವ ಬಿಎಮ್‌ಡಬ್ಲ್ಯು, ಮರ್ಸಿಡಿಸ್, ಸೋನಿ ಕೊಳ್ಳುತ್ತಾರೆ. ಇಂತಹ ಚಾಳಿ ಹೆಚ್ಚಾದರೆ ರೂಪಾಯಿಯ ಮೌಲ್ಯ ಹೆಚ್ಚಾಗಿದ್ದರಿಂದ ದೇಶಕ್ಕೆ ಯಾವ ರೀತಿಯಿಂದಲೂ ಒಳ್ಳೆಯದಾದಂತಾಗುವುದಿಲ್ಲ. ಇದರಿಂದ ನಮ್ಮ ದೇಶದ ಒಳಗಿನ ಜನರಿಗೆ ಉದ್ಯೋಗ ನಷ್ಟವಾಗುತ್ತ ಹೋಗುತ್ತದೆ.

ಲೇಖನದ ವಿಡಿಯೊ ಪ್ರಸ್ತುತಿ

ಆದರೆ, ಈ ಸ್ಥಿತಿ ಮತ್ತೊಂದು ತಿರುವಿಗೆ ಕಾರಣವಾದರೆ ಅದರಿಂದ ಒಳ್ಳೆಯದೂ ಆಗಬಹುದು. ವಿದೇಶದ ಜನರಿಗೆ ಬಟ್ಟೆ ಹೊಲಿಯುವುದರ ಬದಲು ನಮ್ಮವರು ದೇಶದೊಳಗಿನ ಜನರಿಗೇ ಬಟ್ಟೆ ಹೊಲಿದುಕೊಡಬಹುದು. ಉತ್ತಮ ಗುಣಮಟ್ಟದ ಬಟ್ಟೆ ಆಗ ಕಮ್ಮಿ ಬೆಲೆಗೆ ಸಿಗಬಹುದು. ಅಮೇರಿಕದ ಕಂಪನಿಗಳತ್ತ ಮುಖ ಮಾಡಿರುವ ಸಾಫ್ಟ್‌ವೇರ್ ಕಂಪನಿಗಳು ನಮ್ಮ ದೇಶಕ್ಕೆ ಅಗತ್ಯವಾದ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲು ಮುಂದಾಗಬಹುದು. ಹೊರಗಿನಿಂದ ಬರುವ/ಹೋಗುವ ಹಣದ ಪ್ರಮಾಣ ಕಮ್ಮಿಯಾಗಿ ಬಂಡವಾಳ ದೇಶದ ಒಳಗೇ ಹರಿಯುವ ಸಾಧ್ಯತೆ ಹೆಚ್ಚಾಗಬಹುದು. ಒಟ್ಟಿನಲ್ಲಿ ರಫ್ತು-ಆಮದು ಕೇಂದ್ರಿತ ಆರ್ಥ ವ್ಯವಸ್ಥೆಯ ಪರದೇಶಿ ಅವಲಂಬನೆ ಕಮ್ಮಿಯಾಗಬಹುದು. ಆದರೆ ಅದನ್ನು ಕಾಲವೆ ಹೇಳಬೇಕು.

ಒಟ್ಟಿನಲ್ಲಿ ಇದೊಂದು ರೀತಿಯ ವಿಚಿತ್ರ ಸ್ಥಿತಿ. ಕೆಲವರು ರೂಪಾಯಿಯ ಮೌಲ್ಯ ಹೆಚ್ಚಾಗಿದ್ದರಿಂದ ಒಳ್ಳೆಯದಾಯಿತು ಎನ್ನುತ್ತಿದ್ದರೆ ಮತ್ತೆ ಕೆಲವರು ಅದರಿಂದ ಕಷ್ಟದ ದಿನಗಳು ಬರಲಿವೆ ಎನ್ನುತ್ತಿದ್ದಾರೆ. ಹೆಚ್ಚಾಗಬೇಕು ಎಂದು ಬಯಸಿದರೆ ಕೆಲವೊಂದು ಉದ್ಯಮಗಳು ನಷ್ಟಕ್ಕೆ ಸಿಲುಕುತ್ತವೆ. ಅಲ್ಲಿ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಕಮ್ಮಿಯಾಗಲಿ ಎಂದು ಬಯಸಿದರೆ ಪೆಟ್ರೋಲ್‌ನಂತಹ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ವಿದೇಶಗಳ ಮೇಲಿನ ಅವಲಂಬನೆ ಜಾಸ್ತಿಯಾಗುತ್ತದೆ. ರೂಪಾಯಿ ಬೆಲೆ ಜಾಸ್ತಿಯಾಗಿದ್ದಕ್ಕೆ ಸಂತೋಷ ಪಡುತ್ತಿರುವವರ ಸಂತಸ ಸಕಾರಣ ಎನ್ನುವಂತಿಲ್ಲ. ಕಮ್ಮಿಯಾಗಲಿ ಎಂದು ಬಯಸುವವರನ್ನು ಸಂಶಯದ ದೃಷ್ಟಿಯಿಂದ ನೋಡದೆ ಇರಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಆರ್ಥಿಕ ವಿಚಾರಗಳು ಹೆಚ್ಚೆಚ್ಚು ಚರ್ಚೆಯಾಗುವುದಂತೂ ನಿಜ. ಆ ಸಮಯದಲ್ಲಿ ಏನೇ ಆಗಲಿ ಅದರಿಂದ ದೇಶಕ್ಕೆ ಒಳ್ಳೆಯದಾಗಲಿ ಎಂದು ಬಯಸುವುದಷ್ಟೆ ನಾವು ಜನಸಾಮಾನ್ಯರು ಮಾಡಬಹುದಾದದ್ದು.

ಅಥವ, ಇನ್ನೇನಾದರೂ ಮಾಡುವುದು ಇದೆಯೆ?

(ವಿಕ್ರಾಂತ ಕರ್ನಾಟಕ - ಅಕ್ಟೋಬರ್ 12/19, 2007 ರ ಸಂಚಿಕೆಯಲ್ಲಿನ ಬರಹ)

Rating
No votes yet