ಡಾ. ಯು.ಬಿ.ರಾವ್- ಒಂದು ಸವಿನೆನಪು !
ಡಾ. ಯು.ಬಿ.ರಾವ್- ಒಂದು ಸವಿನೆನಪು !
ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ; ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ. ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ 'ಪೇನಲ್ ಡಾಕ್ಟರ್'. ಮುಂಬೈ ನ ಮಾಟುಂಗಾದಲ್ಲೇ ಬಹಳ ಜನಪ್ರಿಯ ವೈದ್ಯರು !
ಒಮ್ಮೆ ನಾನು ನನ್ನ ಹೆಂಡತಿ, ನಮ್ಮ ಮಗು ರವಿ ಯನ್ನು ಅವರಬಳಿ ತೋರಿಸಲೆಂದು ಕರೆದುಕೊಂಡು ಹೋಗಿದ್ದೆವು. ರವಿ, ಸ್ಪಲ್ಪ ಸಪೂರಾಗಿದ್ದ. ಆದರೆ ಆಟ ಆಡಿಕೊಂದಿದ್ದ; ಗೆಲುವಾಗಿದ್ದ. ನಮ್ಮಪಡೋಸಿ, 'ಓಜಾ' ರವರು ಅವನನ್ನು ಕಂಡಾಗಲೆಲ್ಲಾ 'ಕಿತನ ಪತಲ ಹೈ, ಕುಚ್ ಅಚ್ಛ ಖಿಲಾವ್ ಪಿಲಾವ್' ಎಂದು ಹೇಳುತ್ತಲೇ ನಮ್ಮಿಬ್ಬರನ್ನು ಪೇಚಿಗೆ ಸಿಲುಕಿಸುತ್ತಿದ್ದರು. ನಮ್ಮ ತಾಯಿಯವರ ಪ್ರಕಾರ, 'ಕೆಲವು ಮಕ್ಕಳು ಚಿಕ್ಕವಯಸ್ಸಿನಲ್ಲಿ ಹಾಗೆ ಇರುತ್ತಾರೆ. ಕ್ರಮೇಣ ಎಲ್ಲಾ ಸರಿಹೋಗುತ್ತೆ' ಎಂದು ಹೇಳಿದ್ದು ತಲೆಗೆ ನಾಟಲಿಲ್ಲ. ಮೊದಲು ರವಿಯನ್ನು ಟೇಬಲ್ ಮೇಲೆ ಮಲಗಿಸಿ, ಎಲ್ಲಾ ತಪಾಸ್ ಮಾಡಿದರು. ಅವರಿಗೇನು ಹೆಚ್ಚಿಗೆ ಸಮಸ್ಯೆ ಇದೆ ಎಂದು ತೋರಲಿಲ್ಲ, ಎನ್ನುವುದು ಅವರ ಮುಖ ಭಾವ ದಿಂದ ಸ್ಪಷ್ಟವಾಗಿ ತಿಳಿಯಿತು. ನಾವು ಹೊರಗೆ ಬಂದು, ಅವರ ಕೆಲಸದ ಟೇಬಲ್ ಬಳಿ ಕುಳಿತುಕೊಂಡ ಮೇಲೆ 'ಏನ್ರಿ, ಸಮಸ್ಯೆ ' ಎಂದು ಡಾ. ರಾವ್ ಕೇಳಿದಾಗ, ನಾನು, ಅವಳು, ಉಸುರು ಸಿಕ್ಕಿಹಾಕಿ ಕೊಂಡವರಂತೆ ಒಮ್ಮೆಲೇ, ' ತಟ್ಟೆಯಲ್ಲಿ ಕಲಸಿದ ಅನ್ನ ಪೂರ್ತಿ ತಿನ್ನಲ್ಲ, ಬೆಳಿಗ್ಯೆ ಮದ್ಯಾನ್ಹ, ರಾತ್ರಿ ಕೊಟ್ಟ ಕಾಂಪ್ಲಾನ್ ಬಿಟ್ಟು, ಚಿಕ್ಕು, ಬಾಳೇಹಣ್ಣು ತಿಂತಾನೆ. ಆಪಲ್, ದ್ರಾಕ್ಷಿ ತಿನ್ನಲ್ಲ. 'ಥ್ರೆಪ್ಟಿನ್ ಬಿಸ್ಕೆಟ್' ಒಂದು ಚೂರು ತಿಂತಾನೆ, ಅಷ್ಟೆ, ಇತ್ಯಾದಿ. ತಕ್ಷಣ ಗ್ರಹಿಸಿದ ರಾವ್, 'ಸ್ವಲ್ಪ ಸುಮ್ನಿರಿ' ಅಲ್ಹೋಗ್ ಕೂತ್ಕೊಳ್ಳಿ'ಎಂದು ಪಕ್ಕದ ಬೆಂಚ್ ತೋರ್ಸಿದರು. ನಂತರ, ಅವರು ತಮ್ಮ ಪೇಷೆಂಟ್ ಗಳಾದ, ಶಾರದಾ ಬೆನ್, ಗಾಯ್ತೊಂಡೆ, ನಿತಿನ್, ಪೋಟ್ದುಖೆ, ಮೋಹಿತೆ, ಸುಮಿತ್ರ ಬೆನ್ ಮತ್ತು ಯಾರ್ಯಾರ್ನೊ ಕರೆದು, ಅವ್ರಿಗೆ ಸಲ್ಹೆ ಉಪ್ದೇಶ್ಗಳನ್ನು ಕೊಡ್ತಿದ್ರು. ನಮ್ಮನ್ ಮರ್ತ್ರೇನೋ ಅನ್ನುವಹಾಗಿತ್ತು !
ಸ್ವಲ್ಪಸಮಯದ ನಂತರ, 'ಬನ್ನಿ' ಎಂದು ನಮ್ಮನ್ನು ಆಹ್ವಾನಿಸಿದರು. ಅವ್ರು, 'ಏನು ಹೇಳಿ' ? ಎಂದಾಗ ನಾವು ತಬ್ಬಿಬ್ಬಾಗಿ ಏನ್ ಹೇಳ್ತಿದ್ವಿ, ಏನ್ ಬಾಕಿ ಇದೆ, ಎನ್ನುವ ಗೊಂದಲದಿಂದ ಮುಕ್ತರಾಗುತ್ತಿದ್ದಂತೆ,ಮುಗುಳ್ನಕ್ಕ ರಾವ್, ತಮ್ಮ ಟೇಬಲ್ ಮೇಲೆ ಒಟ್ಟಿದ್ದ ಪುಸ್ತಕಗಳ ರಾಶಿಯಿಂದ ಒಂದು ಪುಸ್ತಕ ತೆಗೆದು ಅದರ ಒಳಗಿನ ಪುಟವೊಂದರಿಂದ, ಏನೋ ಓದಿ, ಚೀಟಿಯಲ್ಲಿ ಬರೆದು ನನ್ನ ಕೈಗೆ ಕೊಟ್ಟರು. 'ಇದನ್ನು ನೀವಿಬ್ರೂ ಓದಿ, ಒಂದು ತಿಂಗಳಾದ್ ಮೇಲೆ ನನ್ಬಂದು ನೋಡಿ' ಎಂದರು. ದವಾಖಾನೆ ಯಿಂದ ಹೊರಗೆ ನಾವು ನೊಡಿದಾಗ 'ಹವ್ ಟು ಫೀಡ್ ಯೆ ಬೇಬಿ-ಬೈ- ಕ.ಗ.ದ. ಓದಿ ಇಬ್ಬರಿಗೂ ನಿರಾಶೆ.
ಅದಾದ ಕೆಲವು ದಿನಗಳ ನಂತರ, ಒಮ್ಮೆ ನಾನು ಅವರನ್ನು ದಾರಿಯಲ್ಲಿ ಕಂಡಾಗ, ಅವರೇ ಕಾರ್ ನಿಲ್ಲಿಸಿ, ಯೋಗಕ್ಷೇಮ ವಿಚಾರಿಸಿದರು. 'ಅಲ್ರೀ,ಮಗು,ಚೂಟಿಯಾಗಿದೆ, ಗೆಲುವಾಗಿ ಆಡ್ಕೊಂಡಿದೆ, ಅಂತ ನೀವೆ ಹೇಳ್ತೀರಿ. ಈಗಿನ ಕಾಲದ ಮಕ್ಳೆ ಹಾಗೆ, ಎನ್ಕೊಟ್ರು ಒಮ್ಮೆಲೇ, ನನ್ನ ಮೊಮ್ಮಗಾನೂ ತಿನ್ನಲ್ಲ, ಅವನು ಕೇಳೋ ಹಣ್ಣನ್ನು ಸ್ವಲ್ಪ ಸ್ವಲ್ಪ ನಿಧಾನವಾಗಿ ತಿನ್ನಿಸಿ. ಹಣ್ಣಿನ ರುಚಿ ಮಗುಗಲ್ವಾ ಬೇಕಾಗಿರೋದು ! ಎಲ್ಲಾ ಸರಿ ಇದೆ. ನಿಮ್ಹೆಂಡ್ತೀಗೂ ಭರವಸೆ ಕೊಡಿ' ಹೋಗಿ, ಎಂದು ಬೆನ್ನು ತಟ್ಟಿದಾಗ ಬೆಟ್ಟದಷ್ಟು ಭಾರ ಬೆನ್ನಿನಿಂದ ಇಳಿಸಿದಂತಾಗಿತ್ತು !
ಯು.ಬಿ.ರಾವ್ ತೀರಿ ಹೋಗಿ ಹಲವು ವರ್ಷಗಳೇ ಆಗಿವೆ. ಅವರು ಇನ್ನೂ ನಮ್ಮ ಹೃದಯದಲ್ಲಿ 'ಅಮರ 'ವಾಗಿದ್ದಾರೆ !