ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೨ - ಉತ್ತೇಜನ ಕ್ರಾಂತಿಯನ್ನು ಉಂಟು ಮಾಡಬಲ್ಲುದು

ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ ೨ - ಉತ್ತೇಜನ ಕ್ರಾಂತಿಯನ್ನು ಉಂಟು ಮಾಡಬಲ್ಲುದು

                          ಉತ್ತೇಜನ ಕ್ರಾಂತಿಯನ್ನು ಉಂಟು ಮಾಡಬಲ್ಲುದು

 
) ನೀವು, “ಮಕ್ಕಳು ದೇಶದ ಆಸ್ತಿ” ಎಂದು ಹೇಳಿದ್ದೀರ. ಆದರೆ ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾಗಿರುವುದರ ಮೇಲೆ ಒತ್ತಡ ಬೀಳುತ್ತದಲ್ಲವೇ? ಹಾಗಾಗಿ ಈ ಹೊರೆಯೆನಿಸುವ ಬೆಳವಣಿಗೆಯನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಬಗೆ ಹೇಗೆ?
 
ದೇಶದ ಲಕ್ಷ್ಯ ಮತ್ತು ಅದನ್ನು ಸಾಧಿಸುವ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡರೆ ಜನಸಂಖ್ಯೆಯ ನಿಯಮಿತ ಹೆಚ್ಚಳ ದೇಶಕ್ಕೆ ಆಸ್ತಿಯಾಗುತ್ತದೆ.
 
ಭಾರತಕ್ಕೆ ಮೂರು ರೀತಿಯ ವಿಶೇಷವಾದ ಸಂಪನ್ಮೂಲಗಳಿವೆ: ನೈಸರ್ಗಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಮತ್ತು ಪಾರಂಪರಿಕ ಮೌಲ್ಯಗಳ ಸಂಪನ್ಮೂಲ. ಇವುಗಳಲ್ಲಿ ಮೊದಲೆರಡನ್ನು ನಾನು “ಪ್ರಜ್ವಲಿತ ಮನಸ್ಸುಗಳು” ಭಾಗದಲ್ಲಿ ತಿಳಿಯಪಡಿಸುತ್ತೇನೆ. ಕರಕುಶಲ ಕರ್ಮಿಗಳಿಗೆ ಮತ್ತು ಕುಟೀರ ಪರಿಶ್ರಮಿಕರಿಗೆ ತಾಂತ್ರಿಕತೆಯ ಸಹಾಯ ಒದಗಿಸಿದರೆ ಅವರ ಕುಶಲತೆಯು ಇನ್ನಷ್ಟು ಅರಳುವುದರಲ್ಲಿ ಸಂಶಯವಿಲ್ಲ ಹಾಗೂ ವಿವಿಧ ರಂಗಗಳಲ್ಲಿ ಕುಶಲತೆಯನ್ನು ಪಡೆದಿರುವವರು ಕೌಶಲ್ಯವಿಲ್ಲದವರಿಗೆ ಅವನ್ನು ಕಲಿಸಿಕೊಡುವುದು, ಇಂದಿನ ಪೀಳಿಗೆಯ ಅವಶ್ಯಕತೆಯಾಗಿದೆ ಎನ್ನುತ್ತಾರೆ ಪರಿಣಿತರು.
 
ಕೌಶಲ್ಯವುಳ್ಳವರ ಪಡೆಯು ದೇಶದ ಆರ್ಥಿಕತೆಯ ರೂವಾರಿಗಳಾಗುವುದಷ್ಟೇ ಅಲ್ಲ ಅವರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಲಾಭಗಳಿಸುವ ವ್ಯವಸ್ಥೆಯಾಗಿ ಮಾರ್ಪಡಬೇಕು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತವು ಇತ್ತೀಚೆಗೆ ಸಾಧಿಸಿರುವ ಪ್ರಗತಿ ಇದಕ್ಕೊಂದು ಉದಾಹರಣೆ. ಇದಲ್ಲದೆ ಬೋಧನೆ ಮತ್ತು ಕಲಿಕಾ ಕ್ಷೇತ್ರಗಳಲ್ಲೂ ಕೂಡಾ ಇದರಿಂದ ಬೇಡಿಕೆ ಮತ್ತು ಚಲನ ಶೀಲತೆ ಉಂಟಾಗುತ್ತದೆ.
 
) ನಿಮ್ಮ ಪುಸ್ತಕವು ಮಾದರಿ ವ್ಯಕ್ತಿಗಳ ಬಗ್ಗೆ ಒತ್ತಿ ಹೇಳುತ್ತದೆ. ಕ್ರೀಡಾ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿರುವ ವ್ಯಕ್ತಿಗಳು ಎಳೆಯ ಮಕ್ಕಳಲ್ಲಿ ತಪ್ಪು ಸಂದೇಶಗಳನ್ನು ಬಿತ್ತುವುದರಿಂದ ಸಾಧನೆಯ ಹಾದಿಯಿಂದ ಈ ಮಕ್ಕಳು ದೂರ ಉಳಿಯುತ್ತಿದ್ದಾರೆಯೇ?
 
          ನನ್ನ ಪುಸ್ತಕದಲ್ಲಿ ಹೇಳಿರುವಂತೆ ೧೫ ವರ್ಷದವರೆಗಿನ ಮಕ್ಕಳಿಗೆ ಅತ್ಯುತ್ತಮ ಮಾದರಿ ವ್ಯಕ್ತಿಗಳೆಂದರೆ ತಾಯಿ, ತಂದೆ, ಅವರ ಪ್ರಾಥಮಿಕ ಶಾಲಾ ಮತ್ತು ಹೈಸ್ಕೂಲಿನ ಶಿಕ್ಷಕರು. ಈ ಹಂತದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳ ಪೋಷಣೆಗೆ ಸಮಯವನ್ನು ಕೊಡುವುದು ಬಹಳ ಮುಖ್ಯ. ಇದಲ್ಲದೆ ಮಗಿವಿನ ಜ್ಞಾನವನ್ನು ಅರಳಿಸುವ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಕೊಡುವ ಶಿಕ್ಷಕರೂ ಅತೀ ಮುಖ್ಯ. ಈ ಸಮಯದಲ್ಲಿ ಮಗುವಿಗೆ ಸರಿಯಾದ ಮೌಲ್ಯಾಧಾರಿತ ಶಿಕ್ಷಣ ದೊರೆಯದಿದ್ದಲ್ಲಿ, ಯಾವುದೆ ವಿಧವಾದ ಕಾನೂನು ಅಥವಾ ಸಲಹೆಗಳು ಮಗುವಿನ ವ್ಯಕ್ತಿತ್ವವನ್ನು ರೂಪಿಸಲು ಸಹಾಯಕ್ಕೆ ಬರಲಾರವು. ಆದ್ದರಿಂದ ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲುಗಳಲ್ಲಿ ಅತ್ಯುತ್ತಮ ಶಿಕ್ಷಕರನ್ನು ತಯಾರು ಮಾಡುವುದು ಮಹತ್ವದ ವಿಷಯವಾಗಿದೆ.
 
) ಈಗಿರುವ ಮೌಲ್ಯದಂತೆ ಸರ್ಕಾರಿ ನೌಕರಿಯನ್ನು ಪಡೆಯುವುದು ಅಥವಾ ಸಣ್ಣ ಹಿಡುವಳಿಗಳ ವ್ಯವಸಾಯವನ್ನು ಅವಲಂಬಿಸಿ ಜೀವನ ನಡೆಸುವುದನ್ನು ಹೇಗೆ ಬದಲಾಯಿಸ ಬಹುದು?
 
          ಆಲೋಚನೆ ಪ್ರಗತಿಯನ್ನು ಹುಟ್ಟುಹಾಕುತ್ತದೆ. ಅಲೋಚನೆ ಮಾಡದೇ ಇರುವುದು ಒಬ್ಬ ವ್ಯಕ್ತಿಯನ್ನು, ಸಮಾಜವನ್ನು ಮತ್ತು ಒಟ್ಟಾರೆಯಾಗಿ ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತದೆ. ದೇಶವು ಒಂದು ಗುರಿಯನ್ನು ಮುಂದಿರಿಸಿಕೊಳ್ಳಬೇಕು; ಅದೆಂದರೆ ಎರಡು ದಶಕಗಳಲ್ಲಿ ನಾವು ’ಅಭಿವೃದ್ಧಿಗೊಂಡ ಭಾರತ’ವಾಗಬೇಕು. ಈ ರೀತಿಯಾದ ಲಕ್ಷ್ಯ ಮತ್ತು ಅದನ್ನು ಸಾಧಿಸಲು ಸರಿಯಾದ ರೂಪುರೇಷೆಗಳನ್ನು ಆಯೋಜಿಸಿದಲ್ಲಿ ಅದು ವ್ಯಕ್ತಿಗಳೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹಾಕುತ್ತದೆ. ಒಮ್ಮೆ ನಾವು ಕಾರ್ಯಪ್ರವೃತ್ತರಾದರೆ ಹಲವಾರು ಅವಕಾಶಗಳು ಹುಡಿಕಿಕೊಂಡು ಬರುತ್ತವೆ.
 
) ನೀವು ನಿರ್ಧಿಷ್ಠ ಗುರಿ ಹೊಂದಿರುವ ಯೋಜನೆಗಳಿಂದ ದೇಶವು ಪ್ರಗತಿಯನ್ನು ಸಾಧಿಸಬಹುದೆನ್ನುವುದಕ್ಕೆ ಒತ್ತು ಕೊಟ್ಟಿದ್ದೀರಿ. ನಿಜವಾದ ವೈಜ್ಞಾನಿಕ ಮತ್ತು ತಾಂತ್ರಿಕ ಕೋನದಿಂದ ಅನುಷ್ಠಾನಗೊಂಡ ಕಾರ್ಯಕ್ರಮಗಳು ಈಗಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಸರಿಪಡಿಸಬಹುದೇ?
 
          ನಿರ್ಧಿಷ್ಠ ಗುರಿ ಉದ್ದೇಶಿತ ಯೋಜನೆಗಳು ಹಳ್ಳಿಗಳಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆಯನ್ನು ಸಮನ್ವಯಗೊಳಿಸಿಕೊಂಡು ಸಂಕೀರ್ಣ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ. ಉದಾಹರಣೆಗೆ ನಾನು ’ಪುರಾ’ PURA (Providing Urban amenities to Rural Areas) ಯೋಜನೆಯನ್ನು ವಿವರಿಸಿದ್ದೇನೆ. ಈ ಯೋಜನೆಯ ಮೂಲಕ, ಉತ್ತಮ ರಸ್ತೆಗಳ ನಿರ್ಮಾಣ ಮಾಡಿ ಅದರ ಮೂಲಕ ಗ್ರಾಮ ಗ್ರಾಮಗಳ ಮಧ್ಯೆ ಸಂಪರ್ಕವೇರ್ಪಡಿಸುವುದು, ಸಂವಹನ ಮತ್ತು ಮಾಹಿತಿ ಸಂಪರ್ಕ ಕ್ಷೇತ್ರಗಳಲ್ಲಿ ತಾಂತ್ರಿಕತೆಯನ್ನು ಬಳಸಿ ಹಳ್ಳಿಗಳನ್ನು ಬೆಸೆಯುವುದು, ಇದಲ್ಲದೆ ಜ್ಞಾನವನ್ನು ಒದಗಿಸುವ ಕೊಂಡಿಗಳನ್ನು ಮತ್ತು ಆರ್ಥಿಕ ಅಭಿವೃದ್ಧಿಯ ಸಂಪರ್ಕದ ಕೊಂಡಿಗಳನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಗ್ರಾಮಗಳು ತಾಂತ್ರಿಕತೆಯ ಲಾಭವನ್ನು ಪಡೆದು ಸ್ವಾವಲಂಬನೆಯನ್ನು ಪಡೆಯುತ್ತವೆ.
 
) ನಿಮ್ಮ ಪುಸ್ತಕದಲ್ಲಿ ಭಾರತೀಯರು ತಮ್ಮ ಸಾಧನೆಯ ಕುರಿತಾಗಿ ಕೀಳರಿಮೆಯ ಪ್ರವೃತ್ತಿ ಹೊಂದಿರುವುದನ್ನು ಪ್ರಸ್ತಾಪಿಸಿದ್ದೀರ!
 
          ಕೆಲವೊಮ್ಮೆ, ನಮ್ಮಷ್ಟಕ್ಕೆ ನಾವು ಸರ್ವನಾಶ ಹೊಂದುವ ಪ್ರವರ್ಗದವರಂತೆ ನಡೆದುಕೊಳ್ಳುತ್ತೇವೆ. ಬಹಳಷ್ಟು ಬಾರಿ ಪಟ್ಟಣ ಪ್ರಾಂತ್ಯಗಳ ತಾಜಾ ಸುದ್ದಿಗಳು ಮಾತ್ರ ಪ್ರಸಾರ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತವೆ. ಆದರೆ ವಿಪರ್ಯಾಸವೆಂದರೆ ನಮ್ಮ ಶೇಖಡಾ ೭೦ರಷ್ಟು ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತದೆ. ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಗಳಿಸಲು ಸಹಾಯಕನಾದ ರೈತರ ಯಶಸ್ಸನ್ನು ಸಂಭ್ರಮದಿಂದ ಆಚರಿಸಬೇಕು; ಸರಿಯಾದ ಸಂಪರ್ಕ ಜಾಲಗಳು ಲಭ್ಯವಿಲ್ಲದ ಹಿಂದುಳಿದ ಪ್ರದೇಶಗಳಲ್ಲಿ ವಿದ್ಯುನ್ಮಾನ ಆಡಳಿತ (e –governance) ಯಶಸ್ವಿಯಾಗುವುದಕ್ಕಾಗಿ ಶ್ರಮಿಸಿ ಮಾಹಿತಿ ತಂತ್ರಜ್ಞಾನದ ಗಳಿಕೆಗೆ (ಆದಾಯಕ್ಕೆ) ಕಾರಣರಾಗಿರುವ ಗ್ರಾಮಾಂತರ ತಂತ್ರಜ್ಞರು (ಅಭಿಯಂತರರು/ಇಂಜಿನಿಯರುಗಳು) ಕೂಡಾ ಅಭಿನಂದರಾರ್ಹರಲ್ಲವೇ? ಇನ್ನೂ ಎಷ್ಟೋ ಎಲೆ ಮರೆಯ ಕಾಯಿಯಂತಿರುವ ’ನಿಜ ಜೀವನದ ನಾಯಕ’ರಿರುತ್ತಾರೆ. ನಾವು ಇವರೆಲ್ಲರ ಶ್ರಮವನ್ನು ಗುರುತಿಸಿ ಸರಿಯಾದ ಪುರಸ್ಕಾರ ಮತ್ತು ವಾತಾವರಣವನ್ನು ಸೃಷ್ಟಿಸಿದಲ್ಲಿ ಅವರು ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮೆರೆಯುತ್ತಾರೆ.
 
) ನಿಮ್ಮ ಪುಸ್ತಕದಲ್ಲಿ ಆಧ್ಯಾತ್ಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೀರ. ಅಧ್ಯಾತ್ಮವನ್ನು ನೀವು ಸುಧಾರಣೆಗೆ ಒಂದು ಕೀಲಿ ಕೈ ಎಂದು ಭಾವಿಸುತ್ತೀರ?
 
          ದೇಶದ ಅಭಿವೃದ್ಧಿಯು ತಾಂತ್ರಿಕತೆ ಮತ್ತು ಪಾರಂಪರಿಕ ಮೌಲ್ಯಗಳ ಸಮನ್ವಯದಿಂದ ಉಂಟಾಗುತ್ತದೆ ಮತ್ತು ಶಾಂತಿ, ಅಭ್ಯುದಯ ಹಾಗೂ ಸಂತೋಷಗಳು ಇದರಿಂದ ಉಂಟಾಗುತ್ತವೆ ಎನ್ನುವುದು ನನ್ನ ದೃಢವಾದ ನಂಬಿಕೆ. ನಾನು ನಿಮಗೆ ವರ್ನರ್ ಹೀಸೆನ್‍ಬರ್ಗ್ ಅವರ ಹೇಳಿಕೆಯೊಂದನ್ನು ವಿವರಿಸಿದ್ದೇನೆ, “ನಾವು ಪಶ್ಚಿಮದಲ್ಲಿ ಒಂದು ಬಹು ದೊಡ್ಡ ಹಡುಗನ್ನು ನಿರ್ಮಿಸಿದ್ದೇವೆ, ಅದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ; ಆದರೆ ಅದರಲ್ಲಿ ಒಂದೇ ಒಂದು ವಸ್ತು ಇಲ್ಲ; ಅದೆಂದರೆ ಅದರಲ್ಲಿ ದಿಕ್ಸೂಚಿ (Compass) ಇಲ್ಲ; ಆದ್ದರಿಂದ ಯಾವ ಕಡೆ ಹೋಗಬೇಕೆನ್ನುವುದು ತಿಳಿಯುತ್ತಿಲ್ಲ. ಟ್ಯಾಗೂರ್ ಮತ್ತು ಗಾಂಧೀಜಿಯಂತಹವರ ತತ್ವಗಳನ್ನು ಪ್ರತಿಪಾದಿಸಿದ ಅವರ ಆಧ್ಯಾತ್ಮಿಕ ಪೂರ್ವಜರು ಈ ದಿಕ್ಸೂಚಿಯನ್ನು ಕಂಡು ಹಿಡಿದಿರುವರು. ಈ ದಿಕ್ಸೂಚಿಯನ್ನು ನಮ್ಮ ಮಾನವ ಹಡಗಿನಲ್ಲೇಕೆ ಅಳವಡಿಸಿಕೊಳ್ಳಬಾರದು; ಇದರಿಂದ ದೇಶ, ವ್ಯಕ್ತಿ ಇಬ್ಬರ ಉದ್ದೇಶಗಳೂ ಇಡೇರುವುದಿಲ್ಲವೇ?”
 
          ಆರ್ಥಿಕ ಅಭಿವೃದ್ಧಿಯೊಂದಿಗೆ ಪಾರಂಪರಿಕ ಮೌಲ್ಯಗಳ ಜೋಡಣೆಯಾದರೆ ಮಾತ್ರ ’ನವ ಭಾರತ’ದ ಉಗಮವಾಗುತ್ತದೆ. ಆಗ ಅದು ಹಲವಾರು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೊಟ್ಟೆಕಿಚ್ಚುಂಟು ಮಾಡುವ ವಿಷಯವಾಗಬಹುದು. ಅದಕ್ಕಾಗಿ ನಾವು ಬೆವರಿಳಿಸಬೇಕಾಗುತ್ತದೆ.
                                                                                                                  
) ’ಪ್ರಜ್ವಲಿತ ಮನಸ್ಸು’ಗಳಿಗೆ ಉಪಮೆಯಾಗಿ ರಾಕೆಟನ್ನು ಬಳಸಿದ್ದೀರ, ಇದು ಕೇವಲ ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ?
 
          ಉದ್ದೇಶಪೂರ್ವಕವೆನ್ನುವುದು ಸತ್ಯವಾಗಿರಬಹುದು, ’ಪ್ರಜ್ವಲಿತ ಮನಸ್ಸುಗಳು’ ಯುವ ಪೀಳಿಗೆಯ ಮನಸ್ಸನ್ನು ಆಕರ್ಷಿಸುತ್ತದೆ. ಮಾನವ ನಾಗರೀಕತೆಯು ಹುಟ್ಟಿದ್ದು ಅದು ಬೆಂಕಿಯನ್ನು ಕಂಡುಹಿಡಿದ ಮೇಲೆ. ಆದ್ದರಿಂದ ಪ್ರಜ್ವಲನೆ(ಉತ್ತೇಜನ) ಕ್ರಾಂತಿಯನ್ನು ಹುಟ್ಟುಹಾಕಬಲ್ಲುದು.
 
) ಆ ಪುಸ್ತಕದಲ್ಲಿ ನೀವು ಇಂದಿನ ಸಮಾಜವು ಭಾರತದ ಪೂರ್ವ ಪರಂಪರೆಯಿಂದ ದೂರ ಸರಿದಿದೆ ಎಂದು ಅಲವತ್ತುಕೊಂಡಿದ್ದೀರ!
 
          ಹೌದು, ನನ್ನ ತಂದೆ ಝೈನುಲಾಬ್ದೀನ್ ಮಾರಕಾಯರ್ ಮತ್ತು ರಾಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಲಕ್ಷ್ಮಣ ಶಾಸ್ತ್ರಿಗಳು ನಮ್ಮ ಮನೆಗಳಲ್ಲಿ ಕುಳಿತು ಭಗವದ್ಗೀತೆ ಮತ್ತು ಪವಿತ್ರ ಕುರಾನ್‍ಗಳ ಬಗ್ಗೆ ಚರ್ಚಿಸುತ್ತಿದ್ದರು. ಇಂತಹ ವಾತಾವರಣದಲ್ಲಿ ನಾನು ಬೆಳೆದಿದ್ದು. ನಾನು ಹಲವಾರು ಬಾರಿ ಹೇಳಿದ್ದೇನೆ ಹೇಗೆ ಒಂದು ಚರ್ಚು(ದೇವಾಲಯ) ತಾಂತ್ರಿಕ ಪ್ರಯೋಗಶಾಲೆಯಾಗಿ ಬದಲಾಯಿತೆಂದು ಮತ್ತು ಅದು ಹೇಗೆ ದೇಶದ ರಾಕೆಟ್ ತಾಂತ್ರಿಕತೆಯ ಜನ್ಮಸ್ಥಳವಾಯಿತೆಂದು. ಅದು ಎರಡು ಉನ್ನತ ಮನಸ್ಸುಗಳ ತಾಂತ್ರಿಕತೆ ಮತ್ತು ಆಧ್ಯಾತ್ಮದ ಸಮ್ಮಿಲನದಿಂದ ಉಂಟಾದ ಪರಿಣಾಮ. ಇದೇ ರೀತಿಯ ಸಂಯೋಗವು ಎಲ್ಲಾ ರಂಗಗಳಲ್ಲಿಯೂ ನಿರಂತರವಾಗಿ ನಡೆಯಬೇಕೆನ್ನುವುದೇ ನನ್ನ ಅಭಿಲಾಷೆ.
 
) ನೀವು ನಿರಂತರವಾಗಿ ಶಾಲಾ ಮಕ್ಕಳೊಂದಿಗೆ ಮಾತುಕತೆಯಲ್ಲಿ ಭಾಗವಹಿಸುತ್ತಿದ್ದೀರ, ನಿಮಗೆ ನಮ್ಮ ಶಿಕ್ಷಣ ಪದ್ಧತಿ ಎಳೆಯ ಮನಸ್ಸುಗಳನ್ನು ಬೆಳಗಿಸುವಲ್ಲಿ ಸಾಫಲ್ಯತೆಯಿಂದ ಕೂಡಿದೆ ಎನಿಸುವುದೇ?
 
          ನಮ್ಮ ವಿದ್ಯಾಭ್ಯಾಸ ಕ್ರಮವು ಸ್ವಂತವಾಗಿ ಆಲೋಚಿಸಲು ಪ್ರೇರಕವಾಗಿರಬೇಕು. ವಿದ್ಯಾಭ್ಯಾಸವು ಎಳೆಯರ ಮನಸ್ಸಿನಲ್ಲಿರುವ ಅತ್ಯುತ್ತಮವಾದುದ್ದನ್ನು ಹೊರಹೊಮ್ಮಿಸುವಂತಿರಬೇಕು. ನಮ್ಮ ಪಠ್ಯ ಕ್ರಮವು ಹೆಚ್ಚುತ್ತಿರುವ ಸವಾಲುಗಳಿಗೆ ಪೂರಕವಾಗಿ ವೇಗವರ್ಧಿತವಾಗಬೇಕು. ಅದೇ ರೀತಿ ಪಠ್ಯ ಕ್ರಮವು ನಮ್ಮ ದೇಶದ ಗುರಿಯ ಬಗ್ಗೆ ತಿಳುವಳಿಕೆಯನ್ನು ಹುಟ್ಟುಹಾಕಬೇಕು ಹಾಗೂ ಎಳೆಯರಿಗೆ ಆ ಉದ್ದೇಶಿತ ಗುರಿಯನ್ನು ಮುಟ್ಟಲು ತಾವು ನಿರ್ವಹಿಸಬೇಕಾದ ಕಾರ್ಯವನ್ನು ಗುರುತಿಸಲು ಸಹಾಯಕವಾಗುವಂತಿರಬೇಕು.
 
೧೦) ನೀವು ಇನ್ನು ಮುಂದೆ ದೇಶದ ಅತ್ಯುನ್ನತ ಸಾಂವಿಧಾನಿಕ ಜವಾಬ್ದಾರಿಯನ್ನು ಹೊರಲಿದ್ದೀರಿ. ಈ ಅವಕಾಶವನ್ನು ನೀವು ಮನಸ್ಸುಗಳನ್ನು ಪ್ರಜ್ವಲಿಸಲು ಹೇಗೆ ಉಪಯೋಗಿಸಿಕೊಳ್ಳುತ್ತೀರಿ?
 

          ನಾನು ಸಂವಿಧಾನವನ್ನು ಓದಿದ್ದೇನೆ. ಅದು ಎಲ್ಲಾ ನಾಗರೀಕರಿಗೂ ಸಮಾನವಾದ ಅವಕಾಶವನ್ನು ಒದಗಿಸುವುದು ಮತ್ತು ಬಡತನ ರಾಹಿತ್ಯ ದೇಶವನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಆದ್ದರಿಂದ ಸಹಜವಾಗಿಯೇ ಉತ್ತೇಜನಗೊಂಡ ಎಳೆಯ ಮನಸ್ಸುಗಳು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಶಕ್ತಿಯುತ ಸಂಪನ್ಮೂಲಗಳಾಗುವುದರಲ್ಲಿ ಸಂದೇಹವಿಲ್ಲ. ಮಕ್ಕಳೊಂದಿಗೆ ನನ್ನ ಮಾತುಕತೆಗಳು ನಾನು ಎಲ್ಲೆಲ್ಲಿ ಇರುತ್ತೇನೆಯೋ ಅಲ್ಲೆಲ್ಲಾ ಮುಂದುವರೆಯುತ್ತವೆ.
 
           “ದೇಶದ ಅಭಿವೃದ್ಧಿಯನ್ನು ಸಾಧಿಸಲು ತಾಂತ್ರಿಕತೆ ಮತ್ತು ಪಾರಂಪರಿಕೆ ಮೌಲ್ಯ ಪದ್ಧತಿಗಳ ಸಮನ್ವಯಗೊಂಡ ಮಾರ್ಗವನ್ನು ಅನುಸರಿಸಬೇಕು; ಆಗ ಮಾತ್ರವೇ ಅಭ್ಯುದಯವು ಉಂಟಾಗುತ್ತದೆ.”
*****
ಚಿತ್ರಕೃಪೆ: ವಿಕಿಪೀಡಿಯ
https://www.google.co.in/imgres?imgurl=http://upload.wikimedia.org/wikipedia/commons/thumb/1/1c/AbdulKalam.JPG/220px-AbdulKalam.JPG&imgrefurl=http://en.wikipedia.org/wiki/A._P._J._Abdul_Kalam&h=174&w=116&sz=8&tbnid=LhQCtNHFZ4-b6M&tbnh=0&tbnw=0&zoom=1&usg=__JuftCiaDJhMiDie75LSyzfyaArM=&docid=93m6hKgLPQnZ_M&sa=X&ei=SdZGUOKIMInIrQfQx4HYCw&ved=0CJYBENUX
 
ವಿ.ಸೂ.: ಈ ಲೇಖನವು,ಡಾll ಅಬ್ದುಲ್ ಕಲಾಂ ಅವರು ನಿಮ್ಮೊಂದಿಗೆ ಮಾತನಾಡುತ್ತಾರೆ – ಒಂದು ಸಂಗ್ರಹ ಗ್ರಂಥ (Dr. Abdul Kalam Speaks to you – A Compilation),  ಪ್ರಕಟಣೆ: ಶ್ರೀಸಂತ್ಗಜಾನನ್ಮಹರಾಜ್ತಾಂತ್ರಿಕಮಹಾವಿದ್ಯಾಲಯ, ಶೇಗಾಂವ್೪೪೪೨೦೩, ಬುಲ್ಡಾನಾಜಿಲ್ಲೆ, ಮಹರಾಷ್ಟ್ರರಾಜ್ಯ; ಆಂಗ್ಲಭಾಷೆಯಪುಸ್ತಕದ೩ರಿಂದ ೧೧ನೇ ಪುಟಗಳಅನುವಾದದಭಾಗ
 
Rating
No votes yet

Comments