ಡೆತ್ ವ್ಯಾಲಿ, ಕ್ಯಾಲಿಫೋರ್ನಿಯ
ಹಲವಾರು ದಿನಗಳಿಂದ ಹೆಚ್ಚಾಗಿ ಬರೆಯಲಾಗುತ್ತಿರಲಿಲ್ಲ , ನನ್ನ ನಾಟಕ ಪುಟ್ಟ ಮಲ್ಲಿಗೆ ಎಸ್ಟೇಟ್ ಹೋದವಾರ ರಂಗದ ಮೇಲೆ ಪ್ರದರ್ಶನವಾದ ನಂತರ ಮೊದಲ ರೀತಿಯಲ್ಲೆ ಆಗಾಗ ಬರೆಯತೊಡಗಬಹುದು ಎಂದುಕೊಂಡಿದ್ದೇನೆ. ನಾಟಕ ಚೆನ್ನಾಗಿ ಆಯ್ತು ಅನ್ನೋದು ನನ್ನ ಮಟ್ಟಿಗೆ ಸಂತೋಷದ ವಿಷಯ.
ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಯಾವುದಾದರೊಂದು ಪ್ರಕೃತಿಯ ವಿಷಯದ ಬಗ್ಗೆ ಕಡೆಯ ಪಕ್ಷ ಐದು ಪದ್ಯಗಳಲ್ಲಿ ವರ್ಣಿಸಿ ಅನ್ನುವ ಪ್ರಶ್ನೆ ಕೊಟ್ಟಿದ್ದರು. ಬೇರೆ ಬೇರೆ ಕೆಲಸಗಳ ನಡುವೆ ಅದನ್ನು ಅಷ್ಟು ಗಮನಿಸಿರಲಿಲ್ಲ. ಈಗ ಸುಮಾರು ಎರಡು ವರ್ಷಗಳ ಹಿಂದೆ ಡೆತ್ ವ್ಯಾಲಿಗೆ ಹೋದಾಗ ಅದರ ಬಗ್ಗೆ ಎರಡು ಪದ್ಯಗಳನ್ನು ಕುಸುಮ ಷಟ್ಪದಿಯಲ್ಲಿ ಬರೆದಿದ್ದು ನೆನಪಾಯ್ತು. ಹಾಗಾಗಿ ಅದಕ್ಕೆ ಇನ್ನು ಮೂರು ಪದ್ಯ ಬರೆದು ಸೇರಿಸಿದ್ದಾಯ್ತು!
ಕೊನೆಯ ಸಾಲಿನ “ಸಾವಿನ ಕಣಿವೆ” ಅನ್ನುವುದನ್ನು ಗಮನಿಸಿ.
ಮರಳು ಕಾಡಿನ ಸೊಬಗ
ನರಿಯದೆಲೆ ಸುಮ್ಮನೆಯೆ
ಬರಿದೆ ಮಾತಲ್ಲದನು ಪೇಳ್ವುದೆಂತು
ತೆರೆದು ಕಣ್ಣನು ನೋಡಿ
ದರೆ ಹೊಳೆವ ಬಂಗಾರ
ದರಿವೆ ತೊಟ್ಟಿತೆ ಭೂಮಿಯೆನ್ನಿಸೀತು ॥೧॥
ಸುತ್ತ ಕಾಂಬುದು ಕೋಟೆ
ಕೊತ್ತಲಗಳನು ಮೀರಿ
ಎತ್ತರದ ಬೆಟ್ಟಗಳ ಚೆಲ್ವ ಸಾಲು
ಎತ್ತ ನೋಡಿದರಲ್ಲಿ
ಚಿತ್ತವನು ಸೆಳೆವುದೈ!
ಸುತ್ತ ನೋಡುವ ಕಣ್ಗೆ ಹಬ್ಬವಾಗಿ ॥೨॥
ಹರಳು ಗಟ್ಟಿರುವುಪ್ಪು
ಮರಳಿನಾ ಚಿತ್ತಾರ
ತಿರೆಯುಟ್ಟು ನಲಿಯುತಿಹ ಬಿಳಿಯ ಸೀರೆ
ಧರೆಗಿಂತ ತಾನೇಕೆ
ಕಿರಿಯವಳು ಎನ್ನುತಲಿ
ಮೆರೆವುದಾಗಸವಚ್ಚ ನೀಲಿಯುಟ್ಟು ॥೩॥
ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ! ॥೪॥
ಬೇಸರವ ಕಳೆಯಲಿಕೆ
ನೇಸರುದಯದ ಚಂದ
ಹಸನಾದ ನೋಟಗಳ ಸಾಲೆ ಇರಲು
ಹಸಿರು ಸಿಗದಿರಲೇನು?
ಬಿಸಿಲ ಧಗೆಯಿರಲೇನು?
ಹೆಸರು ಸಾವಿನಕಣಿವೆ ಸರಿಯಲ್ಲವು! ॥೫॥
-ಹಂಸಾನಂದಿ
ಕೊ: ಡೆತ್ ವ್ಯಾಲಿಯಲ್ಲಿ ರಾತ್ರಿಯ ಆಕಾಶ ಬಲು ಸೊಗಸು. ಯು ಎಸ್ ಎ ಯಲ್ಲಿ ಆಕಾಶ ನೋಡಲು ಅತ್ಯುತ್ತಮ ಸ್ಥಳಗಳಲ್ಲಿ ಡೆತ್ ವ್ಯಾಲಿ ಮುಂಚೂಣಿಯಲ್ಲಿದೆ. ರಾತ್ರಿಯಾಗಸ ಎಷ್ಟು ಕಪ್ಪಾಗಿರುತ್ತೆ ಎನ್ನುವುದನ್ನು ಸೂಚಿಸುವ ಬಾರ್ಟಲ್ ಸ್ಕೇಲ್ ನಲ್ಲಿ ಡೆತ್ ವ್ಯಾಲಿ ಮೊದಲ ಶ್ರೇಣಿಯಲ್ಲಿದೆ (Class 1 sky).
Comments
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯ
ಹಂಸಾನಂದಿಯವರೆ ನಮಸ್ಕಾರ. ನಾಟಕ ಚೆನ್ನಾಗಿ ಬಂದದ್ದು ಕೇಳಿ ಖುಷಿಯಾಯ್ತು - ಅಭಿನಂದನೆಗಳು. ಅದರ ತರುವಾಯದ ಸಾವಿನ ಕಣಿವೆಯ ಕುರಿತಾದ ಕವನ ಚೆನ್ನಾಗಿದೆ. ಸಾವಿನ ಕಣಿವೆಯ ಬದಲು (ಮರಳಿನ) 'ಬತ್ತದ ಚಿಲುಮೆ' - ಅನ್ನೊ ಹೆಸರು ಇಡೋದು ಸರಿಯೆಂದು ಕಾಣುತ್ತದೆ :-)
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯ
ಗೆಳೆಯರಿಗೆ ನಮಸ್ಕಾರ. ಡೆತ್ ವ್ಯಾಲಿ, ಕವನ ಚನ್ನಾಗಿ ಮೂಡಿದೆ. ನಮ್ಮೊಳಗೊಬ್ಬ ನಾಟಕಕಾರರೂ ಇದ್ದದ್ದು ತಿಳಿದು ಸಂತೋಷವಾಯಿತು.. ರಂಗಕಲೆಯ ಕುರಿತು ಅನುಭವಗಳನ್ನು ಹಂಚಿಕೊಂಡಲ್ಲಿ ಕೃತಜ್ಞ.ಧನ್ಯವಾದಗಳು
In reply to ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯ by lpitnal
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯ
ಧನ್ಯವಾದಗಳು ನಾಗೇಶ ಮತ್ತೆ ಲಕ್ಶ್ಹ್ಮೀಕಾಂತ ಅವರೆ.
ನಾಟಕವನ್ನು ಬರೆದು ಆಡಿಸಿದ್ದು ಬಹಳ ಒಳ್ಳೆಯ ಅನುಭವವೇ! ಅದರ ಬಗ್ಗೆ ಸ್ವಲ್ಪ ವಿವರವಾಗಿ ಮತ್ತೊಮ್ಮೆ ಬರೆಯುವೆ.
"ಪುಟ್ಟಮಲ್ಲಿಗೆ ಎಸ್ಟೇಟ್" ನ ಫೇಸ್ ಬುಕ್ ಪುಟ ಇಲ್ಲಿದೆ. ಇಲ್ಲಿ ನಾಟಕದ ಕೆಲವು ಚಿತ್ರಗಳಿವೆ ನೋಡಿ: https://www.facebook.com/PuttamalligeEstate