ಡೈರಿಯ ಕೆಲವು ಹಾಳೆಗಳು - ಭಾಗ ೫

ಡೈರಿಯ ಕೆಲವು ಹಾಳೆಗಳು - ಭಾಗ ೫

ದಿನಾಂಕ: ೨೫-ಜನವರಿ
ಅವನು: ಕಳೆದ ಕೆಲವು ದಿನಗಳಿಂದ ಯಾವುದೇ ಅನಪೇಕ್ಷಿತ ಅಥವಾ ವಿಶೇಷವಾದ ಘಟನೆಗಳು ನಡೆದಿಲ್ಲ ಅಂತಾನೆ ಹೇಳಬಹುದು. ಆದ್ರೆ ಇವತ್ತು ಒಂದು ವಿಶೇಷ ನಡೆಯಬಹುದು ಅಂತ ಅನ್ನಿಸುತ್ತಿದೆ. ಬಸ್ಸು ಇನ್ನೇನು ವಾಪಸ್ಸು ಮನೆಗೆ ಹೊರಡುವ ಸಮಯ. ಅವಳು ಮತ್ತು ಅವಳ ಗೆಳತಿ ಓಡುತ್ತಾ ಬಂದು ಬಸ್ಸು ಹತ್ತಿದರು. ಅವ್ರು ಕುಳಿತುಕೊಳ್ಳುವುದಕ್ಕೆ ಜಾಗ ಹುಡುಕುತ್ತಿದ್ದರು. ನಾನು ಮೂರುಜನ ಕೂಡುವ ಸೀಟಿನಲ್ಲಿ ಒಬ್ಬನೇ ಕುಳಿತಿದ್ದೆ. ಅವಳು ಬಂದು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಬಹುದು ಅನ್ನೋ ಕಲ್ಪನೆನೆ ನನ್ನ ಮೈಯಲ್ಲಿ ರೋಮಾಂಚನಗೊಳ್ಳುವಂತೆ ಮಾಡಿತು. ಅವಳು ನನ್ನ ಸೀಟಿನ ಮುಂದೆ ಕ್ಷಣ ಕಾಲ ನಿಂತು, ಅವಳ ಗೆಳತಿಯ ಕಡೆ ನೋಡುತ್ತಾ ಹೊರತು ಹೋದಳು. ಅವಳು ಹೋಗಿ ಕುಳಿತುಕೊಂಡಿದ್ದು ಕೊನೆಯ ಸೀಟಿನಲ್ಲಿ. ನನಗೆ ಅವಳ ಮುಖದ ಭಾವನೆಗಳನ್ನು ಗಮನಿಸಲಾಗಲಿಲ್ಲ. ಆದ್ರೆ ನಾನು ಕ್ಷಣ ಕಾಲ ಅವಳನ್ನ ದಿಟ್ಟಿಸಿದಾಗ ನನಗೆ ಅವಳ ಮುಖದಲ್ಲಿ ಅಸಹ್ಯ ಅಥವಾ ಅದೇ ತರಹದ ಭಾವನೆಗಳು ಕಂಡು ಬಂದಿತು. ಅವಳ ಮನಸಿನಲ್ಲಿ ನಿಜವಾಗಲೂ ನನ್ನ ಬಗ್ಗೆ ತುಚ್ಛ ಭಾವನೆನೆ ಇರಬೇಕು ಅನ್ನಿಸುತ್ತೆ. ಈ ಹೇಡಿಯ ಜೊತೆ ನಾನು ಕುಳಿತುಕೊಳ್ಳಬೇಕಾ ಅನ್ನೋ ಪ್ರಶ್ನೆ ಅವಳ ಮುಖದ ಮೇಲೆ ಇತ್ತು ಅನ್ನಿಸುತ್ತೆ. ಈ ಕ್ಷಣದಲ್ಲಿ ನಿಜಕ್ಕೂ ನನ್ನ ಮನಸ್ಸಿಗೆ ಘಾಸಿ ಆಯಿತು. ನನ್ನ ಜೀವನದಲ್ಲೇ ಇಷ್ಟು ದೊಡ್ಡ ಅವಮಾನ ನಾನು ಅನುಭವಿಸಿರಲಿಲ್ಲ. ನಾನು ಅಷ್ಟೊಂದು ನಿಸ್ಸಹಾಯಕ ಆಗಿದ್ದೇನಾ?

Rating
No votes yet

Comments