ತಂಗಳು ಬದುಕಿನ ಮಳೆ
ಪ್ರತೀ ಸಾಲಿಗೂ ಇಪ್ಪತ್ತರಂತೆ ಅಂಗಡಿಗಳು ಇದ್ದ, ಪ್ರತಿಯೊಂದಕ್ಕೆ ಒಂದು ಮಹಡಿಯೂ ಇದ್ದ ಇಪ್ಪತ್ತು ಇಪ್ಪತ್ತರ ನಾಲ್ಕು ಸಾಲು ಅಂಗಡಿಗಳು. ಪೂರ್ವದಿಂದ ಪಶ್ಚಿಮಕ್ಕೆ ಉದ್ದವಾಗಿದ್ದವು. ಈ ನಾಲ್ಕೂ ಸಾಲುಗಳಲ್ಲಿ ಮಧ್ಯದ ಎರಡು ಸಾಲು ಅಂಗಡಿಗಳು ಮಾರ್ಗಕ್ಕೆ ಕಾಣಿಸದ ಹಾಗೆ, ಪೂರ್ವದಲ್ಲಿ ಅಡ್ಡಕ್ಕೆ ಮೂರು ಮಹಡಿಯ ಹತ್ತು ಅಂಗಡಿಗಳು ಇರುವ ಕಟ್ಟಡವಿತ್ತು. ಹಿಂಬದಿಯ ನಾಲ್ಕು ಸಾಲು ಅಂಗಡಿಗಳಿಗೆ ಸೇರುವ ಹಾಗೇ ಇತ್ತು. ಹಂಚು ಹೊದೆಸಿರುವ ಪುರಾತನ ಶಾಪಿಂಗ್ ಮಾಲ್ ಆದಾಗಿತ್ತು. ಮಧ್ಯದ ಸಾಲಿನಲ್ಲಿ ಮಹಡಿ ಹತ್ತುವ ಮೆಟ್ಟಿಲಿತ್ತು. ಮಾಲ್ ಆರಂಭವಾಗುವಾಗ ಉಧ್ಘಾಟನೆಗೆ ರಾಷ್ಟ್ರಪತಿಯೇ ಬಂದಿದ್ದರು. ಈ ಐದು ಕಟ್ಟಡಕ್ಕೆ ಒಂದಕ್ಕೊಂದಕ್ಕೆ ಸಂಪರ್ಕವಿರುವ ಹಾಗೆ ಮರದ ಹಲಗೆ ಜೋಡಿಸಿದ ಸೇತುವೆ ಇತ್ತು. ಮಧ್ಯದ ಸಾಲಿನ ಮೆಟ್ಟಿಲುಗಳ ಹಾಗೆ ಪೂರ್ವದ ಅಡ್ಡ ಕಟ್ಟಡದ ಹಿಂಬದಿಯಲ್ಲಿಯೂ ಮೆಟ್ಟಿಲಿತ್ತು. ಮಧ್ಯದ ಮೆಟ್ಟಿಲಿನ ಅಡಿಯ ಇಳಿಜಾರಿನಲ್ಲಿ ಹಲಗೆ ಹೊಡೆದು ಮೆಟ್ಟಿಲುಗಳ ಅಗಲದಷ್ಟೇ ಇದ್ದ ಸಪೂರ ಅಂಗಡಿಯಲ್ಲಿ ಅವನ ಟೈಲರಿಂಗ್ ಅಂಗಡಿಯಿತ್ತು. ಆ ಕಾಲದಲ್ಲಿ ರಾಷ್ಟ್ರಪತಿಯಿಂದ ಉಧ್ಘಾಟನೆಯಾಗಿದ್ದ ಕಟ್ಟಡ, ಈಗ ನಿಸ್ತೇಜವಾಗಿತ್ತು. ಅಲ್ಲಿ ವ್ಯಾಪಾರ ನಿಂತು ಹೋಗಿತ್ತು. ಪೂರ್ವದ ಅಡ್ಡ ಕಟ್ಟಡ ಜನರು ಓಡಾಡುವ ರಸ್ತೆಗೆ ಮುಖ ಮಾಡಿದ್ದ ಕಾರಣ, ಹಳೆಯ ಕಮಾನುಗಳು ಇದ್ದ ಬಾಗಿಲುಗಳನ್ನು, ಕಿತ್ತು ಗಾಜುಗಳ ಶೋಕೇಸುಗಳನ್ನು ಈಗೀನ ಪೀಳಿಗೆಯ ಅಭಿರುಚಿಗೆ ಹೊಂದುವಂತೆ ಅಳವಡಿಸಿ ನವೀಕರಿಸಿದ, ಕೆಲವರು ವ್ಯಾಪರ ಮುಂದುವರಿಸಿದ್ದರು. ಇದರ ಹಿಂದೆ ಟೈಲರ್ ಅಂಗಡಿ ಇದೆಯೆಂದು ಯಾರಿಗೂ ಕಾಣಿಸುತ್ತಿರಲಿಲ್ಲ. ಮಧ್ಯದ ಸಾಲಿನಲ್ಲಿ ವೈನ್ ಶಾಪೊಂದಿತ್ತು. ಅದೂ ಸಹ ಯಾರ ಕಣ್ಣಿಗೂ ಬೀಳುವುದಿಲ್ಲ. ಕುಡುಕರಿಗದು ಇಷ್ಟದ ಅಂಗಡಿಯಾಗಿತ್ತು. ಬೇರೆ ವೈನ್ ಶಾಪಿಗಿಂತ ಹತ್ತು ಪಟ್ಟು ಜಾಸ್ತಿ ವ್ಯಾಪಾರವಿತ್ತು. ಕುಡುಕರ ಅಡ್ಡೆಯ ಹಾಗೆ ಆ ಮಾಲ್ ದುಸ್ಥಿತಿಗೆ ತಲುಪಿತ್ತು. ಎಲ್ಲಾ ಅಂಗಡಿಗಳೂ ಹಳೆಯ ವ್ಯಾಪಾರಿಗಳ ಕೈಯ್ಯಲ್ಲಿಯೇ ಇತ್ತು. ಅವರೆಲ್ಲ ಅಕ್ಕಪಕ್ಕ ಆಗಿರುವ ಹೊಸ ಕಟ್ಟಡಗಳಲ್ಲಿ ಅಂಗಡಿ ತೆರೆದಿದ್ದರು. ಹಳೆಯ ಮಾಲ್ ನಲ್ಲಿದ್ದ ಅಂಗಡಿಗಳನ್ನು ಗೋದಾಮಿನಂತೆ ಉಪಯೋಗಿಸುತ್ತಿದ್ದರು. ಹಾಗಾಗಿ ಎಲ್ಲಾ ಅಂಗಡಿಗಳು ಮುಚ್ಚಿಯೇ ಇರುತ್ತಿತ್ತು. ಟೈಲರಿಗೆ, ಹೊಸ ಬಟ್ಟೆಗಳನ್ನು ಹೊಲಿಸಿಕೊಳ್ಳುವ ಯಾವ ಗಿರಾಕಿಗಳೂ ಇಲ್ಲ. ಸುತ್ತ ಮುತ್ತ ಇರುವ ರೆಡಿಮೇಡ್ ಅಂಗಡಿಯಲ್ಲಿ ಗಿರಾಕಿಗಳು ಕೊಂಡುಕೊಂಡ ಬಟ್ಟೆಯನ್ನು ಬಿಡಿಸಿ ಸ್ವಲ್ಪ ಉದ್ದಗೊಳಿಸುವುದು, ಉದ್ದವಿದ್ದುದ್ದನ್ನು ಕತ್ತರಿಸಿ ಗಿಡ್ಡಗೊಳಿಸುವುದು, ಹಳೆತಲೆಮಾರಿನ ಕೆಲವರ ಹಳೆಬಟ್ಟೆಗಳನ್ನು ಹೊಲಿಗೆ ಬಿಟ್ಟಲ್ಲಿ ಹೊಲಿದು ಕೊಡುವುದರಲ್ಲಿ ಅವನ ಬೆಳಗು ಕಳೆದು ಸಂಜೆಯಾಗುತ್ತಿತ್ತು. ಮದುವೆಯಾಗಿರಲಿಲ್ಲ. ಅವನ ಎರಡೂ ಕಾಲುಗಳೂ ಪೋಲಿಯೋದಿಂದ ಸಪೂರವಾಗಿತ್ತು. ಕಾಲಿನ ಎರಡೂ ಪಾದಗಳೂ ಒಳಬದಿಗೆ ತಿರುಚಿಕೊಂಡಿತ್ತು. ಅವನು ಮೋಚಿಯಿಂದ ಹೊಲಿಸಿದ ಬೂಟು ಅಲ್ಲದ, ಚಪ್ಪಲಿಯೂ ಅಲ್ಲದ ಕಟ್ಟಿಬಿಚ್ಚುವ ಹಾಗೆ ಅನುಕೂಲವಿರುವ ವಿಚಿತ್ರ ಪಾದರಕ್ಷೆಯನ್ನು ಧರಿಸುತ್ತಿದ್ದ. ನಿಧಾನಕ್ಕೆ ನಡೆಯುತ್ತಿದ್ದ. ತಬಲಾದ ನಿಧಾನ ಹೊಡೆತಕ್ಕೆ ಸರಿಯಾಗಿ ಕುಣಿಯುತ್ತಾ ಬರುತ್ತಿದ್ದಾನೆ ಅನಿಸುವ ಹಾಗೆ ಅವನ ನಡಿಗೆಯಿರುತ್ತಿತ್ತು. ಬಿಳಿ ಪಂಚೆ ಧರಿಸುತ್ತಿದ್ದ. ಉದ್ದ ತೋಳಿನ ಬಿಳಿ ಬಟ್ಟೆಯ ಅಂಗಿ ಧರಿಸುತ್ತಿದ್ದ. ಅಂಗಿ ತೋಳನ್ನು ಮೊಣಕೈವರೆಗೆ ಸಪೂರವಾಗಿ ಮಡಚಿರುತ್ತಿದ್ದ. ಮುಂಡು ಉದ್ದಕ್ಕೆ ಬಿಟ್ಟು ನಡೆಯುತ್ತಿದ್ದ. ನಡೆಯುವಾಗ ಮುಂಡು ಇಬ್ಭಾಗವಾಗಿರುವ ಕಡೆಯಿಂದ ಅವನು ತೊಟ್ಟ ಬಿಳಿ ಚಡ್ಡಿ ಕಾಣಿಸುತ್ತಿತ್ತು. ಎರಡುಬದಿ ಕಿಸೆಗಳಿರುವ ಮೊಣಕಾಲಿನ ತನಕ ಇರುವ ಚಡ್ಡಿ ಧರಿಸುತ್ತಿದ್ದ. ಒಂದು ಕಿಸೆಯಲ್ಲಿ ನಶ್ಯ ತುಂಬಿದ ಡಬ್ಬಿ, ನಶ್ಯ ಸೇದಿ ಮುಖವೊರೆಸಲು ಬಿಳಿ ಬಟ್ಟೆಯ ರುಮಾಲು ಇಟ್ಟಿರುತ್ತಿದ್ದ. ಇನ್ನೊಂದು ಕಿಸೆಯಲ್ಲಿ ಹಣ ಇಡುವ ಚರ್ಮದ ಕರಿಬಣ್ಣದ ಪರ್ಸಿರುತ್ತಿತ್ತು. ಕುಳ್ಳಗಿದ್ದ. ಪೋಲಿಯೋ ಪೀಡಿತ ಕಾಲಿನಿಂದ ಹೊಲಿಗೆ ಯಂತ್ರ ತುಳಿಯಲು ಪ್ರಯಾಸ ಪಡುತ್ತಿದ್ದ. ಸಣ್ಣ ಮಕ್ಕಳ ಹಾಗೇ ಅವನ ಮುಖ ಚಹರೆಯಿತ್ತು. ಗಡ್ಡ ಮೀಸೆ ಅವನ ಮುಖದಲ್ಲಿ ಹುಟ್ಟುತ್ತಲೇ ಇರಲಿಲ್ಲ. ತಲೆಕೂದಲೂ ಅಲ್ಲೊಂದು ಇಲ್ಲೊಂದು ಮಾತ್ರವಿತ್ತು. ಅವನನ್ನು ಕಂಡವರಿಗೆ ಕನಿಕರ ತನ್ನಿಂದ ತಾನೇ ಹುಟ್ಟುತ್ತಿತ್ತು. ಕುಡಿಯಲು ಬಂದ ಎಲ್ಲರ ಪರಿಚಯ ಅವನಿಗಿರುತ್ತಿತ್ತು. ಕುಡುಕರು ಅವನೊಡನೆ ಸಿಗರೇಟು, ಹುರಿದ ಗೇರುಬೀಜ, ಮಸಾಲೆ ಕಡಲೆ, ಚಿಕನ್ ಸುಕ್ಕ, ಹುರಿದ ಮೀನು, ಕೆಲವೊಮ್ಮೆ ಸ್ವಲ್ಪ ವಿಸ್ಕಿ, ರಮ್ಮುಗಳನ್ನು, ಹಂಚಿಕೊಳ್ಳುತ್ತಿದ್ದರು. ಹರಟುತ್ತಿದ್ದರು. ಅವನೆಂದರೆ ಅವರಿಗೆಲ್ಲ ತುಂಬಾ ಪ್ರೀತಿಯಿತ್ತು. ಕುಡಿಯಲು ಬಂದವರು ಮಾತನಾಡಿಸಿಯೇ ಹೋಗುತ್ತಿದ್ದರು. ಕುಡುಕರು ಮುಚ್ಚಿಯೇ ಇರುತ್ತಿದ್ದ ಗೋದಾಮುಗಳ ಬಾಗಿಲುಗಳ ಬದಿಯ ಗೋಡೆಗೆ ಉಚ್ಚೆ ಹೊಯ್ಯುತ್ತಿದ್ದರು ಇಡೀ ಬಜಾರ್ ನಲ್ಲಿ ಮೂತ್ರದ ಮೂರಿ ಬರುತ್ತಿತ್ತು. ನಡು ರಾತ್ರಿಯ ತನಕ ಕುಡುಕರ ಜಾತ್ರೆಯೇ ಇರುತ್ತಿತ್ತು. ರಾತ್ರಿ ಕೆಲವೊಮ್ಮೆ ಹೊಟ್ಟೆ ಕೆಟ್ಟ ಕುಡುಕರು, ಮುಚ್ಚಿರುತ್ತಿದ್ದ ಗೋದಾಮುಗಳ ಗೋಡೆಯ ಬದಿಯಲ್ಲಿ ವಿಸರ್ಜನೆಯನ್ನು ಮಾಡಿರುತ್ತಿದ್ದರು. ಟೈಲರ್ ಅಂಗಡಿಯ ಅಕ್ಕ ಪಕ್ಕ ಯಾರೂ ಗಲೀಜು ಮಾಡುತ್ತಿರಲಿಲ್ಲ. ಈಗ ಕೆಲವು ದಿನಗಳಿಂದ ಅವನ ಅಂಗಡಿಯ ಬದಿಯಲ್ಲೇ ಯಾರೋ ವಿಸರ್ಜಿಸುತ್ತಿದ್ದರು. ಅವನನ್ನು ಮಾತನಾಡಿಸಲು ಬರುವವರ ಮುಂದೆ ಇದನ್ನು ಹೇಳುತ್ತಲೂ ಇದ್ದ. ಯಾರಿರಬಹುದು? ಅಂಥ ಗೊತ್ತಿದ್ದರೆ, ನುಜ್ಜುಗುಜ್ಜು ಮಾಡುವ ಮಾತನ್ನೂ ಅವರೆಲ್ಲರೂ ಆಡುತ್ತಿದ್ದರು. ಟೈಲರ್ ದಿನಾ ಬೆಳಗ್ಗೆ ಅಂಗಡಿ ಗುಡಿಸಿ, ವಿಸರ್ಜನೆಯ ಮೇಲೆ ಮರದ ಹುಡಿ, ಮಣ್ಣು ಸುರಿದು ವಾಸನೆ ಬಾರದ ಹಾಗೇ ಮಾಡಿಕೊಳ್ಳುತ್ತಿದ್ದ. ಅಸಾಹಯಕತೆಯಿಂದ ಕುದಿಯುತ್ತಿದ್ದ. ಅವನು ಅವನಣ್ಣನ ಮನೆಯಲ್ಲಿಯೇ ಇರುತ್ತಿದ್ದ. ಊಟ ತಿಂಡಿ ಎಲ್ಲವನ್ನು ಹೊರಗಿನಿಂದಲೇ ಪೂರೈಸಿಕೊಳ್ಳುತ್ತಿದ್ದ. ಈ ದಿನ ಅವನು ಹೊಸ ಹಾಸ್ಟೆಲ್ ಒಂದಕ್ಕೆ ಬೇಕಾದ ಇಪ್ಪತ್ತು ಸೊಳ್ಳೆ ಪರದೆ ಹೊಲಿದು ಕೊಡಬೇಕಿತ್ತು. ಹಾಗಾಗೀ ಎಂದಿಗಿಂತ ಮುಂಚೆ ಅಂಗಡಿ ತೆರೆದಿದ್ದ. ಹೊಸ ವಿಸರ್ಜನೆಯ ಕುರುಹು ಇರಲಿಲ್ಲ. ಖುಷಿಯಾಗಿದ್ದ. ಅಂಗಡಿ ಗುಡಿಸಿದ್ದ. ಅವನ ಕುಲದೈವದ ಚಿತ್ರದ ಎದುರು ದೀಪ ಹಚ್ಚುತ್ತಿದ್ದ. ತಂದಿದ್ದ ಹೊಸ ಹೂವಿನ ಹಾರವನ್ನು ಚಿತ್ರದ ಮೇಲೆ ಇಡುತ್ತಾ ಇದ್ದ. ಆಕೆ ಪ್ಲಾಸ್ಟಿಕ್ ಚೂರು ಹೆಕ್ಕುತ್ತಾ ಬರುತ್ತಿದ್ದಳು. ಬೆನ್ನಿಗೆ ಅವಳು ಹಳೆಯ ಬಟ್ಟೆಯೊಂದರಿಂದ ಸಣ್ಣ ಮಗುವನ್ನು ಬಿಗಿಯಾಗಿ ಕಟ್ಟಿರುತ್ತಿದ್ದಳು. ಗುಜುರಿ ಸಂಗ್ರಹಿಸಿ ಮಾರುವ ಅಂಗಡಿ ಟೈಲರ್ ಇರುವ ಅಂಗಡಿಯದೇ ಸಾಲಿನಲ್ಲಿ ಇಪ್ಪತ್ತು ಅಂಗಡಿಯ ನಂತರ, ಇನ್ನೊಂದು ಕೊನೆಯಲ್ಲಿತ್ತು. ಆಕೆ ಟೈಲರ್ ಅಂಗಡಿ ತೆರೆದಿರುವುದನ್ನು ನೋಡುತ್ತಾ ಟೈಲರ್ ಅಂಗಡಿಯ ತಿರುವಿನಲ್ಲಿ ಗೋಣಿಚೀಲ ಇಟ್ಟಿದ್ದಳು. ಗೋಣಿಚೀಲದ ಮರೆಯಲ್ಲಿ ಕ್ಷಣ ಮಾತ್ರದಲ್ಲಿ ಕುಳಿತು ಮೆಲೇದ್ದಿದ್ದಳು. ವಿಸರ್ಜನೆಯಾಗಿತ್ತು. ಅವಳು ಗೋಣಿಚೀಲ ಎತ್ತಿ ಹೆಗಲ ಮೇಲೆ ಇಟ್ಟುಕೊಳ್ಳುತ್ತಿದ್ದಳು. ನಿನ್ನೆ ಮುಡಿಸಿದ್ದ ಒಣ ಹೂವನ್ನು ಎಸೆಯಲಿಕ್ಕೆಂದು ಟೈಲರ್ ಅಂಗಡಿಯಿಂದ ಹೊರಗೆ ಬಂದಿದ್ದ. ಆಕೆ ಗೋಣಿಚೀಲ ಹೆಗಲಿಗೇರಿಸುವುದು ಕಂಡಿತ್ತು. ಹೊಚ್ಚ ಹೊಸ ವಿಸರ್ಜನೆಯೂ ಕಾಣಿಸಿತ್ತು. ಟೈಲರ್ ದಂಗುಬಡಿದು ಹೋಗಿದ್ದ. ಒಣ ಹೂವನ್ನು ಎಸೆಯುವುದಕ್ಕೆ ಬಂದಿರುವುದನ್ನು ಮರೆತವನ ಹಾಗೇ ನಿಂತಿದ್ದ. ಆಕೆ ಅಲ್ಲಿಂದ ಹೋದ ಮೇಲೆ, ಅವನು ಅಂಗಡಿಯೊಳಗಿನಿಂದ ಮರದ ಹುಡಿ ತಂದು ಚಿಮಿಕಿಸಿದ, ಒಂದಷ್ಟು ಮಣ್ಣು ಗೋರಿ ವಿಸರ್ಜನೆ ಕಾಣದ ಹಾಗೇ, ವಾಸನೆ ಬಡಿಯದ ಹಾಗೇ ಮಾಡಿದ. ಈಗ ಅವನನ್ನು ಮಾತನಾಡಿಸಲು ಬರುವ ಯಾವ ಕುಡುಕರ ಬಳಿಯೂ ಅವನು ವಿಸರ್ಜನೆಯ ಬಗ್ಗೆ ದೂರು ಹೇಳುತ್ತಿರಲಿಲ್ಲ.