ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

ಆಕೆಗೆ ಹೆಚ್ಚೆಂದರೆ ಇಪ್ಪತ್ತೇಳು, ಇಪ್ಪತ್ತೆಂಟು ವಯಸ್ಸಾಗಿರಬಹುದು. ತುಂಬಾ ಲಕ್ಷಣವಾಗಿದ್ದಳು. ಹೂ ಮುಡಿದು, ಸಿಂಗರಿಸಿಕೊಂಡು ಸಂಜೆಯಾಗುವಾಗ ನಶ್ಯದಂಗಡಿಯ ಬದಿಯ ತಿರುವಿನಲ್ಲಿ ನಿಲ್ಲುತ್ತಿದ್ದಳು. ಮುಖ್ಯ ರಸ್ತೆಗೆ ಹತ್ತಿರವಿದ್ದರೂ, ತಿರುವಿನಲ್ಲಿದ್ದ ಕಾರಣ, ಕಣ್ಣಿಗೆ ಏಕಾಏಕೀ ಕಾಣಿಸುತ್ತಿರಲಿಲ್ಲ. ಈಕೆ ಬಂದು ನಿಲ್ಲುವ, ನಶ್ಯದಂಗಡಿಯ ಈ ಬದಿಗೂ ಬಾಗಿಲಿತ್ತು. ಅಲ್ಲಿ ಆತ ನಶ್ಯ ಕುಟ್ಟುತ್ತಾ ಇರುತ್ತಿದ್ದ. ಅವನ ಬೆನ್ನು ಗೂನವಾಗಿತ್ತು. ನಡೆಯುವಾಗ ಎಡಬದಿಯ ಗೂನಿನಿಂದಾಗಿ ಕುತ್ತಿಗೆ ನೆಟ್ಟಗಿದ್ದರೂ ಬಾಗಿ ನಡೆಯುತ್ತಿದ್ದಾನೇನೊ ಅನಿಸುತ್ತಿತ್ತು. ಅವನ ಹಲ್ಲುಗಳು ಅವನ ಬಾಯಿಗಿಂತ ವಿಪರೀತ ದೊಡ್ಡದಾಗಿದ್ದವು. ಹಲ್ಲುಗಳು ಹೊರಚಾಚಿಕೊಂಡೇ ಇರುತ್ತಿದ್ದವು. ಅವನು ತೊಡೆಯ ತನಕ ಬರುವ ಚಡ್ಡಿ ಧರಿಸುತ್ತಿದ್ದ. ಉದ್ದ ತೋಳಿನ ಶರ್ಟು ಧರಿಸುತ್ತಿದ್ದ. ಶರ್ಟು ಗೆರೆಗೆರೆಯಾದಾಗಿರುತ್ತಿತ್ತು. ಮೊಣಗಂಟಿನ ತನಕ   ಶರ್ಟು ಮಡಚಿರುತ್ತಿತ್ತು. ಐವತ್ತರ ಗಡಿ ತಲುಪುತ್ತಿದ್ದ.  ಅವನ ಇಡೀ ದೇಹ ಯಾವಾಗಲೂ ನಶ್ಯದ ಮೂರಿ ಹೊಡೆಯುತ್ತಿತ್ತು. ತುಂಬಾ ಕುರೂಪಿಗೆ ಅವನು ಸರಿಯಾದ ಉದಾಹರಣೆಯಾಗಿದ್ದ. ಅವನಿಗೆ ಹಣದ ಅಡಚಣೆ ಇರಲಿಲ್ಲ. ಅವನ ಕುತ್ತಿಗೆಯಲ್ಲಿ ಒಂದೆಳೆಯ ಚಿನ್ನದ ಸರವಿರುತ್ತಿತ್ತು. ನಶ್ಯದ ಅಂಗಡಿ ಮಾಲೀಕರ ದೂರದ ಸಂಭಂದವೂ ಅವನಿಗಿತ್ತು. ಮದುವೆಯಾಗಿರಲಿಲ್ಲ. ಯಾವ ಹೆಣ್ಣು ಅವನನ್ನು ಎಷ್ಟು ಮಾತ್ರಕ್ಕೂ ಒಪ್ಪದೇ ಇರುವ ಹಾಗೇ ಅವನಿದ್ದ. ಅವಳು ಸಂಜೆಯ ವೇಳೆಗೆ ಬಂದು ಅಲ್ಲಿ ನಿಂತ ನಂತರ ಆಟೋರಿಕ್ಷಾಗಳು ಅವಳನ್ನು ಹತ್ತಿಸಿಕೊಂಡು ಹೋಗುತ್ತಿದ್ದವು. ಒಂದು ತಾಸು ಅವಧಿಯಲ್ಲಿ ಬೇರೆ ಆಟೋರಿಕ್ಷಾದಲ್ಲಿ ಅವಳು ಹಿಂದೆ ಬರುತ್ತಿದ್ದಳು. ಮತ್ತೆ ಅಲ್ಲಿ ನಶ್ಯದಂಗಡಿ ತಿರುವಿನಲ್ಲಿ ನಿಲ್ಲುತ್ತಿದ್ದಳು. ಮತ್ತೆ ಬೇರೆ ಆಟೋರಿಕ್ಷಾ ಬರುತ್ತಿತ್ತು. ಹತ್ತಿಸಿಕೊಂಡು ಹೋಗುತ್ತಿತ್ತು. ಬೇರೆ ರಿಕ್ಷಾದಲ್ಲಿ ಅವಳು ಬಂದು ಇಳಿದು, ಅಲ್ಲಿ ಮತ್ತೆ ನಿಲ್ಲುತ್ತಿದ್ದಳು. ತುಂಬಾ ಚಟುವಟಿಕೆಯ ಪೇಟೆ ಬೀದಿ,  ರಾತ್ರಿ ಜನದಟ್ಟನೆ ಕಡಿಮೆಯಾಗುವಾಗ ನಶ್ಯದಂಗಡಿ ಮುಚ್ಚುತ್ತಿತ್ತು. ಮುಚ್ಚುವಷ್ಟು ಹೊತ್ತು ಅವಳು ರಿಕ್ಷಾ ಹತ್ತಿ ರಿಕ್ಷಾ ಇಳಿಯುತ್ತಿದ್ದಳು. ನಶ್ಯದಂಗಡಿ ಬಾಗಿಲು ಮುಚ್ಚಲು ತೊಡಗಿದಾಗ ಅವಳು ರಸ್ತೆಯಲ್ಲಿ ಖಾಲಿ ಹೋಗುವ ಆಟೋ ನಿಲ್ಲಿಸಿ ಹೊರಟು ಹೋಗುತ್ತಿದ್ದಳು. ಮತ್ತೆ ಮರುದಿನ ಸಂಜೆ ಸಿಂಗರಿಸಿಕೊಂಡು ಬರುತ್ತಿದ್ದಳು. ಸಂಜೆ ಬಂದು ನಿಲ್ಲುವ ಮುನ್ನ ಗೂನನನ್ನು ಕಂಡು ಒಂದು ಸಣ್ಣ ಮುಗುಳು ನಗೆ ಚೆಲ್ಲುತ್ತಿದ್ದಳು. ಗೂನನೂ  ಸಹ ಕಂಡು ಕಾಣದ ನಗು ಚೆಲ್ಲುತ್ತಿದ್ದ. ಉಬ್ಬಿರುತ್ತಿದ್ದ ಉದ್ದದ ಹಲ್ಲು ಸಾಲು ಇದ್ದುದರಿಂದ, ಅವನು ನಗದಿದ್ದರೂ ನಗುತ್ತಿರುವ ಹಾಗೇ ಕಾಣಿಸುತ್ತಿತ್ತು. ಅವಳು ಬಸುರಿಯಾಗಿದ್ದಳು. ರಿಕ್ಷಾದವರು ಅನುಮಾನಿಸಿ ಅನುಮಾನಿಸಿ ಅವಳನ್ನು ಹತ್ತಿಸಿಕೊಳ್ಳುತ್ತಿದ್ದರು. ಹಿಂತಿರುಗಿ ಬರುವ ರಿಕ್ಷಾದಲ್ಲಿ ಅವಳು ಇಳಿಯುವಾಗ ಅವಳಿಗೆ ತಡೆಯಲಾಗದ ಸುಸ್ತು ಇರುತ್ತಿತ್ತು. ಗೂನ ನಶ್ಯ ಕುಟ್ಟುತ್ತಲೇ ಇರುತ್ತಿದ್ದ. ಏನೋ ಕೇಳಬೇಕು ಅನ್ನುವ ಹಾಗೇ ಒಮ್ಮೆ ತಲೆ ಎತ್ತುತ್ತಿದ್ದ. ಕೇಳಲಾಗದ ಹಾಗೇ ಸೋತು ಹೋಗಿ ನಶ್ಯ ಕುಟ್ಟುವುದನ್ನು ಮುಂದುವರಿಸುತ್ತಿದ್ದ. ಅವಳಿಗೆ ದಿನ ತುಂಬುತ್ತಿತ್ತು. ಆದರೂ ಅವಳು ಬರುತ್ತಿದ್ದಳು. ಕಾಯುತ್ತಿದ್ದಳು. ಹೀಗೆ ಬಂದು ನಿಂತ ನಂತರ, ಅವಳು ನಿಂತಲ್ಲಿಯೇ ಕುಸಿದು ಕುಳಿತದ್ದು, ಗೂನನಿಗೆ ಕಾಣಿಸಿತ್ತು. ಕುಟ್ಟುತ್ತಿದ್ದ ನಶ್ಯದ ಕುಟಾಣಿಯನ್ನು ಗೂನ ಪಕ್ಕಕ್ಕೆ ಸರಿಸಿ, ಅಂಗಡಿಯಿಂದ ಹೊರ ಹಾರಿದ್ದು, ರಿಕ್ಷಾವೊಂದನ್ನು ಕೈ ಬೀಸಿ ಕರೆದು ನಿಲ್ಲಿಸಿದ್ದು, ಆಟೋ ಡ್ರೈವರನ ಸಹಾಯ ಯಾಚಿಸಿ ರಿಕ್ಷಾ ಹತ್ತಿಸಿ, ತಾನು ರಿಕ್ಷಾದಲ್ಲಿ ಕುಳಿತು ಆಸ್ಪತ್ರೆಗೆ ಅವಳನ್ನು ದಾಖಲಿಸಿದ್ದು ಕನಸೇನೋ ಅನ್ನುವ ರೀತಿಯಲ್ಲಿ ನಡೆದು ಹೋಗಿತ್ತು. ಸ್ವಲ್ಪ ದಿನ ಅವಳು ಕಾಣಿಸಲಿಲ್ಲ. ಅದರ ನಂತರದ್ದು, ಇನ್ನೂ ಒಂದು ಸುಂದರ ಕನಸಿನ ಹಾಗಿತ್ತು. ಅವಳು ತಾಳಿ ಇರುವ ಕರಿಮಣೀ ಸರ ಧರಿಸಿದ್ದಳು. ಮಗುವೊಂದನ್ನು ಭುಜದ ಮೇಲೆ ತಟ್ಟಿ ಮಲಗಿರುವ ಹಾಗೇ ಎತ್ತಿಕೊಂಡಿದ್ದಳು. ನಶ್ಯದ ಅಂಗಡಿ ಮುಚ್ಚುವ ಸಮಯದಲ್ಲಿ ಬಂದಳು. ಗೂನ ಸಿದ್ಧನಾಗಿದ್ದ. ಅವಳ ಜೊತೆ ಹೊರಟ ಗೂನ, ತರಕಾರಿ, ಹೂ, ಹಣ್ಣು ಹಾಲು ಜೊತೆಗೂಡಿ ಖರೀಧಿಸಿದ್ದ. ಹಿಂದೆ ಸಂಜೆಯ ವೇಳೆ ಅವಳನ್ನು ಸಾಗಿಸುತ್ತಿದ್ದ ರಿಕ್ಷಾವನ್ನೇ ಕೈ ತೋರಿಸಿ ನಿಲ್ಲಿಸಿದ್ದ ಗೂನ. ನಶ್ಯಮೂರಿಯ ಕುರೂಪಿ ಗೂನ ತನ್ನ ಮನೆಗೆ ಅವಳನ್ನು ಪತ್ನಿಯಾಗಿ ಕರೆದುಕೊಂಡಿದ್ದ.  ರಿಕ್ಷಾದವನ ಮುಖದಲ್ಲಿ ಸಣ್ಣ ನಾಚಿಕೆಯಿತ್ತು. ಗೂನನ ಉದಾತ್ತತೆಗೆ ಮೆಚ್ಚುಗೆಯಿತ್ತು.

Rating
No votes yet