ತಂಗಳು ಬದುಕಿನ ಮಳೆ
ಫೇಸ್ ಬುಕ್ಕಿನ ಮೂಲಕ ಇಬ್ಬರು ಗೆಳತಿಯರಿಗೆ ಒಂದೇ ನಗರದಲ್ಲಿ ಇರುವುದು ತಿಳಿಯಿತು. ಇಬ್ಬರೂ ಊಟಕ್ಕೆ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗುವುದಕ್ಕೆ ನಿರ್ಧರಿಸಿದ್ದರು. ಬಹಳ ಹೊತ್ತು ತಮ್ಮ ಈಗೀನ ಸ್ಥಿತಿಗತಿಗಳನ್ನು ಹೇಳಿಕೊಂಡರು ಇಬ್ಬರಿಗೂ ಇಪ್ಪತ್ತಾರರ ವಯಸ್ಸು. ಒಬ್ಬಾಕೆಗೆ ಮದುವೆಯಾಗಿತ್ತು. ಅವಳಿಗೆ ಉದ್ಯೋಗವಿರಲಿಲ್ಲ. ಮನೆಯಲ್ಲಿ ಗಂಡ, ಅತ್ತೆ, ಮಾವ, ಮೈದುನರಿದ್ದರು. ಅವರಿಗೆ ಬೇಕಾಗುವ ಅಡುಗೆ ತಯಾರಿಸಿ, ಮನೆ ಸ್ವಚ್ಚ ಮಾಡಿ, ಟಿವಿ ನೋಡುತ್ತಾ ಇರುವುದು ಅವಳ ದಿನಚರಿಯಾಗಿತ್ತು. ಟಿವಿ ಬೋರಾದರೆ ಹೊರಗೆ ತೋಟದಲ್ಲಿ ಮಣ್ಣು ಒಕ್ಕುವುದು, ಗಿಡಗಳ ಗೆಲ್ಲು ಕತ್ತರಿಸುವುದು ಮಾಡುತ್ತಿದ್ದಳು. ರಾತ್ರಿ ಮಲಗುವುದಕ್ಕೆ ಮುನ್ನ ಒಂದಿಷ್ಟು ಪುಸ್ತಕ, ಇಂಟರ್ ನೆಟ್ ನೋಡುತ್ತಿದ್ದಳು. ಫೇಸ್ ಬುಕ್ಕಿನಲ್ಲಿ ಪರಸ್ಪರ ಭೇಟಿಯಾದ ಇನ್ನೊಬ್ಬಳಿಗೆ ಮದುವೆಯಾಗಿರಲಿಲ್ಲ. ಅವಳು ಅದೇ ನಗರದಲ್ಲಿ ಉದ್ದಿಮೆಯೊಂದರ ರಿಸಪ್ಶನಿಷ್ಟ ಕೌಂಟರಿನಲ್ಲಿ ಕೆಲಸ ಮಾಡುತ್ತಿದ್ದಳು. ಹಾಸ್ಟೇಲಿನಲ್ಲಿ ವಾಸಿಸುತ್ತಿದ್ದಳು. ಕೆಲಸದ ಒತ್ತಡ ತುಂಬಾ ಇರುತ್ತಿತ್ತು. ಸಂಜೆ ಕೆಲಸ ಮುಗಿಸಿ ಹಾಸ್ಟೇಲಿಗೆ ಬಂದರೆ ಅವಳಿಗೆ ಹಾಯಾಗುತ್ತಿತ್ತು. ಕೌಂಟರ್ ಖಾಲಿಯಿದ್ದಾಗ ಅಪರೂಪಕ್ಕೆ ಫೇಸ್ ಬುಕ್ಕ್ ಜಾಲಾಡುತ್ತಿದ್ದಳು. ಹಾಗೆ ಅವರ ಭೇಟಿ ನಿಶ್ಚಯವಾಗಿತ್ತು. ಊಟ ಸಾಗಿತ್ತು. ಇಬ್ಬರಿಗೂ ಭೇಟಿಯಾದುದಕ್ಕೆ ಖುಷಿಯಾಗಿತ್ತು. ಮಾತು ಮಾತಿನಲ್ಲಿ ಬಾಲ್ಯಕ್ಕೆ ಇಳಿದಿದ್ದರು. ಒಬ್ಬೊಬ್ಬರನ್ನೇ ನೆನೆಪಿಸಿಕೊಂಡರು. ದೋಣಿ ದುರಂತದಲ್ಲಿ ಸತ್ತ ಸಹಪಾಟಿಗಳನ್ನು ನೆನೆದು ಮಂಕಾದರು. ಉದ್ಯೋಗದಲ್ಲಿರುವ ಯುವತಿಯೂ ದುರಂತಕ್ಕೆ ಒಳಪಟ್ಟ ದೋಣಿಯಲ್ಲೇ ಕುಳಿತಿದ್ದಳು. ಶಾಲಾಪ್ರವಾಸದಲ್ಲಿ, ವಿಹಾರಕ್ಕೆಂದು ಹೋದ ಹನ್ನೆರಡು ಪುಟ್ಟ ಹುಡುಗಿಯರು ಕುಳಿತ್ತಿದ್ದ ದೋಣಿ ಮಗುಚಿತ್ತು. ಬೇರೆ ದೋಣಿಯಲ್ಲಿದ್ದ ಹುಡುಗಿಯರ ಕಿರುಚಾಟ, ಆಳು, ವಿಹಾರಕ್ಕೆ ಬಂದಿದ್ದ ಇತರ ಪ್ರವಾಸಿಗರ ಅಸಹಾಯಕತೆ, ಪ್ರವಾಸಿ ತಾಣದ ಆಡಳಿತ ಸಿಬ್ಬಂದಿಯ ದಿಗ್ಬ್ರಮೆಯಲ್ಲಿ ಬದುಕು ಅಲ್ಲೋಲ ಕಲ್ಲೋಲವಾಗಿತ್ತು. ಹನ್ನೆರಡು ಪುಟ್ಟ ಹುಡುಗಿಯರು ದೇಹದ ಎಲ್ಲಾ ರಂಧ್ರಗಳಲ್ಲು ಉಸಿರಿಗಾಗಿ ಚಡಪಡಿಸಿ ನೀರನ್ನೇ ಕುಡಿಯುತ್ತಿದ್ದರು. ನೀರು ಕುಡಿಯುತ್ತಲೇ ತಮ್ಮ ಪುಟ್ಟ ದೇಹ ಸೆಟೆಸಿ ಏನಾದರೂ ಆಸರೆ ದೊರೆಯುತ್ತದೆಯೋ ಅನ್ನುವ ಹಾಗೇ ನೀರಿನ ಮೇಲಂಚಿಗೆ ಚಿಮ್ಮಿ ಬರುತ್ತಿದ್ದರು. ಮಗುಚಿದ ದೋಣಿ ಅಲ್ಲೇ ಇದ್ದಿತ್ತು. ತುಂಬಾ ಆಳವಿಲ್ಲದ ಸಣ್ಣ ಸರೋವರವಾಗಿತ್ತು ಮಗುಚಿಕೊಂಡು ಅಲ್ಲೇ ತೇಲುತ್ತಿದ್ದ ದೋಣಿಯ ಅಂಚನ್ನು ಅದು ಹ್ಯಾಗೋ ಹಿಡಿದು ನೀರಲ್ಲಿ ತೇಲಿದ್ದು ಒಂಭತ್ತು, ಮುಳುಗಿ ಸಮಾಧಿಯಾದದ್ದು ಮೂರು. ಮದುವೆಯಾಗಿದ್ದ ಗೆಳತಿ ದುರಂತಕ್ಕೆ ಒಳಗಾದ ದೋಣಿಯಲ್ಲಿ ಕುಳಿತಿರಲಿಲ್ಲ. ಯಾವುದೋ ಕಾರಣಕ್ಕೆ ಹಿಂದಿನ ಸರಧಿಯಲ್ಲಿ ಉಳಿದಿದ್ದಳು. ಮುಳುಗುತ್ತಿರುವಾಗ, ಸಾಯುವ ಹೆದರಿಕೆಯುಂಟಾಗಿರಬೇಕಲ್ಲ ? ಅಂಥ ಉದ್ಯೋಗದಲ್ಲಿದ್ದ ಗೆಳತಿಯನ್ನು ಪ್ರಶ್ನಿಸಿದ್ದಳು. ಒಂದು ಕ್ಷಣ ಆಕೆ ಮೌನವಾಗಿದ್ದಳು. ತಿನ್ನುತ್ತಿದ್ದ ಐಸ್ ಕ್ರೀಂ ನುಂಗಿ, ನಿಧಾನವಾಗಿ ನುಡಿದಿದ್ದಳು. ಸಾಯುವುದು ಅಂದರೇನು ಗೊತ್ತಿರಲಿಲ್ಲ. ನೀರು ಎಲ್ಲಾ ಕಡೆಯಲ್ಲೂ ನುಗ್ಗಿ ಬರುತ್ತಿತ್ತು. ಉಸಿರು ಸಿಕ್ಕಲೀ ಅಂಥ ನೀರೇ ಕುಡಿಯುತ್ತಿದ್ದೆ. ಕೈಗೆ ದೋಣಿಯ ಅಂಚು ಸಿಕ್ಕಾಗ ಹೊಟ್ಟೆ ತುಂಬಾ ನೀರಿತ್ತು. ಉಸಿರಿಗೆ ಜಾಗವೇ ಇಲ್ಲದಷ್ಟು ನೀರು ಹೊಟ್ಟೆಯೊಳಗಿತ್ತು. ಕಾರಿಕೊಳ್ಳಲು ಆಗದಷ್ಟು ನಿಶ್ಚಕ್ತಿಯಿತ್ತು. ಆಗಲೂ ಸಾವಿನ ಭಯವಾಗಿರಲಿಲ್ಲ. ಅಸ್ವಸ್ಥಳಾದದ್ದು ಮಾತ್ರ ಗೊತ್ತಾಗಿತ್ತು. ಅದು ಆಟದ ಒಂದು ಭಾಗವೇನೋ ಅನ್ನುವ ನಿರಾಳತೆಯಿತ್ತು. ಸಾಯುವುದು ಎಂದರೇನು? ಎಂಬ ಕಲ್ಪನೆಯೇ ಇರಲಿಲ್ಲ. ಈಗ ಇಷ್ಟು ದೊಡ್ಡವರಾದ ಮೇಲೆ ವಿನಾ ಕಾರಣ ಸಾವಿನ ಭಯವಾಗುತ್ತಿದೆ. ಈಗಲೂ ಸಾವು ಅಂದರೇನೆಂದು ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ, ಕಾಣದ ಯಾವುದೋ ಭಯಕ್ಕೆ ಜೀವ ಬೆಚ್ಚಿ ಬೀಳುತ್ತಿದೆ. ಮತ್ತು ಈಗಷ್ಟೇ ಇದನ್ನು ವಿವರಿಸುವಾಗ ಅದು ಹೊಳೆಯುತ್ತಿದೆ ಅಂದಿದ್ದಳು.