ತಂಗಳು ಬದುಕಿನ ಮಳೆ
ಡಿ ಎಡಿಕ್ಷನ್ ಸೆಂಟರಿನಲ್ಲಿ ಕರೆದಾಗ ಹೋಗಿ, ಆತ ಕೌನ್ಸಿಲಿಂಗ್ ಮಾಡುತ್ತಿದ್ದ. ತುಂಬಾ ಬುದ್ಧಿವಂತ. ದಪ್ಪಗಿದ್ದ. ಬ್ಯಾಂಕರ್ ವ್ರತ್ತಿಯಿಂದ ಸ್ವಯಂ ನಿವ್ರತ್ತನಾಗಿದ್ದ. ಯಾವ ಪುಸ್ತಕದ ಹೆಸರು ಹೇಳಿದರೂ ಅವನಿಗೆ ಗೊತ್ತಿರುತ್ತಿತ್ತು. ಅವನು ತುಂಬಾ ಆತ್ಮ ವಿಶ್ವಾಸದಿಂದ ಮಾತನಾಡುತ್ತಿದ್ದ. ಫಿಲಾಸಫಿ ಅವನಿಗೆ ಇಷ್ಟ. ಏನೋ ಒಂದು ಹುಡುಕಾಟದಲ್ಲಿರುವ ಹಾಗೇ ಕಾಣಿಸುತ್ತಿದ್ದ. ಅವನ ವಯಸ್ಸು ಐವತ್ತೆಂಟಾದರೂ, ಹಾಗನಿಸುವುದಿಲ್ಲ. ಆರ್ಥಿಕ ಪರಿಸ್ಥಿತಿ ತುಂಬಾ ಸ್ಟ್ರಾಂಗಾಗಿತ್ತು. ಮಗಳಿಗೆ ಮದುವೆಯಾಗಿತ್ತು. ಅಳಿಯನೂ ಸಹ ಮಗಳು ಕೆಲಸ ಮಾಡುವ ಸಂಸ್ಥೆಯಲ್ಲಿಯೇ ಉದ್ಯೋಗದಲ್ಲಿದ್ದ. ಅವರದು ಪ್ರೇಮ ವಿವಾಹವಾಗಿತ್ತು. ಅವನ ಮಗನಿಗೂ ಮದುವೆಯ ವಯಸ್ಸಾಗಿದೆ. ಮದುವೆಯಾಗಿಲ್ಲ. ಪತ್ನಿಯೂ ಬ್ಯಾಂಕರ್ ಆಗಿದ್ದಾಳೆ. ಇನ್ನೂ ನಿವ್ರತ್ತಿಯಾಗಿಲ್ಲ. ಪ್ರತಿವಾರಕ್ಕೊಮ್ಮೆ ಅವನ ಸ್ನೇಹಿತರು ಸೇರುವ ಜಾಗದಲ್ಲಿ ಒಂದು ಘಂಟೆ ಅವನು ಯಾವುದಾದರೊಂದು ವಿಷಯದ ಮೇಲೆ ಮಾತನಾಡುತ್ತಾನೆ. ಅವರೆಲ್ಲರೂ ನಿವ್ರತ್ತರು. ಯೌವನದಲ್ಲಿ ಆತ ತುಂಬಾ ಸಿಡುಕಿನ ಮನುಷ್ಯನಾಗಿದ್ದ. ಹಾಗಂತ ಅವನೇ ಒಪ್ಪಿಕೊಂಡಿದ್ದ. ಎಲ್ಲದರಲ್ಲೂ ಬಿಗಿನೀತಿ ಅನುಸರಿಸುತ್ತಿದ್ದ. ಅವನು ಹೇಳಿದ್ದೇ ಸರಿ, ಅದರ ಹಾಗೇ ನಡೆಯಬೇಕು ಅಂಥ ಆಶಿಸುತ್ತಿದ್ದ. ಇದೆಲ್ಲಾ ವಿಷಯಗಳು ಅವನು ಮಾತನಾಡುವ ವಿಷಯದ ಮಧ್ಯೆ ಬರುತ್ತಿತ್ತು. ಉಳಿದವರು ಅಪರೂಪಕ್ಕೆ ಏನಾದರೂ ಹೆಚ್ಚಿನ ವಿವರ ಕೇಳಿದರೆ ಎಚ್ಚರಿಕೆಯಿಂದ ಜಾಣ್ಮೆಯ ಉತ್ತರ ಕೊಡುತ್ತಿದ್ದ. ಬೇಕಾದುದನ್ನು ಉಣ್ಣುವುದು, ಬೇಕಾದುದನ್ನು ಖರೀಧಿಸುವುದು, ಬೇಕಾದಲ್ಲಿ ಹೋಗುವುದು ಅವನಿಗೆ ಸಾಧ್ಯವಿತ್ತು. ಅದು ಅವನಿಗೆ ಜಾಣ್ಮೆಯಿದ್ದ ಕಾರಣ ಸಿಕ್ಕಿದೆ ಅಂಥ ಅವನಿಗೆ ಅನಿಸುತ್ತಿತ್ತು. ಒಂದು ಘಂಟೆಯ ಪ್ರವಚನದ ನಡುವೆ ಈ ಎಲ್ಲಾ ಮಾತುಗಳು ತೂರಿ ಬರುತ್ತಿದ್ದವು. ಡಿ ಎಡಿಕ್ಷನ್ ಸೆಂಟರಿನಲ್ಲಿ ಬರುವ ರೋಗಿಗಳ ಐಡೆಂಟಿಟಿಯನ್ನು ಬಿಚ್ಚದೆ ಅವರಿಗಿರುವ ಸಮಸ್ಯೆಗಳನ್ನು ತನ್ನ ಪ್ರವಚನದ ಗಟ್ಟಿಯಾಗುವಿಕೆಗೇ ಬಳಸುತ್ತಿದ್ದ. ಜೀನ್ಸ್ ಪ್ಯಾಂಟಿನಲ್ಲೇ ಹೆಚ್ಚಾಗಿ ಇರುತ್ತಿದ್ದ. ವಿಧವಿಧದ ಅಂಗಿ, ಬಣ್ಣದ ಟೀ ಶರ್ಟು ಧರಿಸುತ್ತಿದ್ದ. ಅತೀ ದುಬಾರಿಯ ಸೆಲ್ ಫೋನು ತರುತ್ತಿದ್ದ. ಮಾತು ಆರಂಭಿಸುವ ಮೊದಲು ಸ್ವಿಚ್ಚ್ ಆಫ್ ಮಾಡಿಕೊಳ್ಳುತ್ತಿದ್ದ. ಕೆಲವೊಮ್ಮೆ ಮರೆತು ಹೋಗುತ್ತಿದ್ದ. ಬಂದ ಕಾಲ್ ಸ್ವೀಕರಿಸಿ ಮತ್ತೆ ಕರೆ ಮಾಡಲು ತಿಳಿಸಿ ಸ್ವಿಚ್ಚ್ ಆಫ್ ಮಾಡಿ ಕ್ಷಮೆ ಯಾಚಿಸುತ್ತಿದ್ದ. ಫ್ಯಾಷನೇಬಲ್ ಚಷ್ಮಾ ಪುಸ್ತಕದ ವಾಕ್ಯಗಳನ್ನು ಓದುವಾಗ ಒಂದು ಕ್ಷಣಕ್ಕೆ ಧರಿಸಿ, ಓದಿಯಾದ ತಕ್ಷಣ ಎರಡು ಬೆರಳುಗಳಿಂದ ತೆಗೆದು ಹಿಡಿದುಕೊಳ್ಳುತ್ತಿದ್ದ. ಅವನ ಬಗ್ಗೆ ಅವನಿಗೆ ಹೆಮ್ಮೆ ಇರುವ ಹಾಗೇ ಕಾಣಿಸುತ್ತಿತ್ತು. ಅವನಿಗೆ ಹಾಗಸಿಸುತ್ತಿರಲಿಲ್ಲ. ಸಿಡುಕುತನ ಬಿಡುವ ಪ್ರಯತ್ನದಲ್ಲಿ ಪದೇ ಪದೇ ಸೋತು ಹೋಗುತ್ತಿದ್ದ. ಅಭ್ಯಾಸ ಬಲವೋ, ಅವನಿರುವುದೇ ಹಾಗೋ ಗೊತ್ತಾಗುತ್ತಿರಲಿಲ್ಲ. ಸಿಡುಕಿದ ನಂತರ ಅವನಿಗೆ ಹೊಳೆದು, ತಾನು ಸಿಡುಕಿ ನುಡಿದದ್ದಲ್ಲ ಅಂಥ ವಿವರಿಸಿ, ಬಾಡಿ ಲಾಂಗ್ವೇಜ್, ಟೋನ್, ಶಬ್ದ ಇತ್ಯಾದಿಗಳನ್ನು ಪರ್ಸಂಟೇಜುಗಳಲ್ಲಿ ವಿವರಿಸುತ್ತಾ ಕೇಳುಗರನ್ನು ದಾರಿ ತಪ್ಪಿಸುತ್ತಿದ್ದ. ಮಾತುಗಳನ್ನು ಇತರರು ಕೇಳಿಸಿಕೊಳ್ಳಬೇಕು ಎಂಬುದು ಅವನ ಇಚ್ಚೆಯಾಗಿರುತ್ತಿತ್ತು. ನಿವ್ರತ್ತ ಕಿವಿಯವರು ಕೇಳಿಸಿ ಕೊಳ್ಳುತ್ತಿದ್ದರು. ಎಲ್ಲದಕ್ಕೂ ಅವನು ಅತ್ಯಂತ ಪ್ರಖ್ಯಾತ ವ್ಯಕ್ತಿ, ಪುಸ್ತಕಗಳ ರೆಫರೆನ್ಸ್ ಕೊಡುತ್ತಿದ್ದ. ಒಂದು ಘಂಟೆ ಮೀರಿದರೂ, ಅವನ ವಿಷಯದ ಬುತ್ತಿ ಮುಗಿಯುತ್ತಿರಲಿಲ್ಲ. ಸ್ನೇಹಿತರ ಗುಂಪು ಪದೇ ಪದೇ ಸಮಯ ನೋಡುವಾಗ ಎಚ್ಚರಗೊಂಡು, ಕೊನೆಯ ಮಾತಿದು ಅನ್ನುತ್ತಲೇ, ಮುಗಿಸಲಾಗದೇ ಮುಗಿಸುತ್ತಿದ್ದ. ಎಲ್ಲಾ ಮನುಷ್ಯರು ಯೂನಿಕ್, ಎಲ್ಲವೂ ನಿಸ್ಸಂದೇಹವಾಗಿ ಸರಿಯಾಗಿಯೇ ನಡೆಯುತ್ತಿದೆ, ಪ್ರಕ್ರತಿಗೆ ನಮ್ಮಿಂದ ಏನೋ ಆಗಬೇಕಾಗಿದೆ ಹಾಗಾಗೇ ನಾವಿನ್ನು ಬದುಕಿದ್ದೇವೆ ಎಂಬುದು ಅವನ ಅಚಲ ನಂಬಿಕೆಯಾಗಿರುವ ಹಾಗೇ ಅವನ ಮಾತುಗಳು ಇರುತ್ತಿತ್ತು. ಅವನೇನೂ ಸಂತನಾಗಿರಲಿಲ್ಲ. ಅಪರೂಪಕ್ಕೆ ತುಂಬಾ ಗೊಂದಲಗಳು, ತುಂಬಾ ಒತ್ತಡಗಳು ಇರುವಾಗ ಮನೆಯಲ್ಲಿ ಕುಳಿತು ನೈಂಟಿ ಇಳಿಸುತ್ತಿದ್ದ. ಮಾತಿನಲ್ಲಿ ಗೊಂದಲವೆಂದರೆ ಗೊಂದಲವಲ್ಲ, ಒತ್ತಡವೆಂದರೆ ಒತ್ತಡವಲ್ಲ ಅಂಥ ಸಮಾಜಾಯಿಸಿ ನೀಡುತ್ತಿದ್ದ. ಹಾಗೇ ನೈಂಟಿ ಕುಡಿಯುತ್ತಿದ್ದಾಗ ಅಳಿಯ ಮಗಳು ಮನೆಗೆ ಬಂದದ್ದು, ಮಗಳು ಕುಡಿಯಬೇಡ ಅಂದದ್ದು, ಇವನು ಕುಡಿಯುವದನ್ನು ನಿಲ್ಲಿಸದೇ ಇದ್ದದ್ದು. ಮಗಳು ಸಿಟ್ಟಾಗಿ ಊಟ ಮಾಡದೆ ಅಳಿಯನ ಜೊತೆ ಹೋದದ್ದು ಅವನಿಗೆ ಗೊಂದಲ ಹುಟ್ಟಿಸಿತ್ತು. ಆದರೂ ಗೊಂದಲವಿಲ್ಲ ಅಂದದ್ದು, ಸದಸ್ಯರು ಕಿವಿಯಿಂದ ಬಾಯಿಯಾದದ್ದು, ಸರಿ ತಪ್ಪು ಪಟ್ಟಿಯಾದದ್ದು, ನಡೆದುಹೋಯಿತು. ಏನೂ ಹೇಳದೆ ಇದ್ದ ಕೇಳುಗ ಹಿರಿಯ, ಸಮಯ ಮೀರಿದುದರಿಂದ ಎದ್ದಿದ್ದ. ಕಳಚಿ ಇಟ್ಟಿದ್ದ ಚಪ್ಪಲಿ ಧರಿಸುವಾಗ ಏನೂ ಹೇಳದ ಮುದುಕನಿಗೂ ಎಲ್ಲಾ ಸರಿಯಾಗಿಯೇ ನಡೆಯುತ್ತಿದೆಯೆಂದನಿಸಿತು.
Comments
ಉ: ತಂಗಳು ಬದುಕಿನ ಮಳೆ