ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

ವಸತಿ ಶಾಲೆಯಲ್ಲಿ, ಅಧ್ಯಾಪಕ. ಅರ್ಥಶಾಸ್ತ್ರದಲ್ಲಿ ಅವನು ಪದವೀಧರನಾಗಿದ್ದ. ಸೌಮ್ಯ ಮುಖವಿತ್ತು. ಗೌರವ ಹುಟ್ಟಿಸುವ ಏನೋ ಅವನಲ್ಲಿ ಸಹಜವಾಗಿತ್ತು.ಒಂಟಿಯಾಗಿದ್ದ, ವಯಸ್ಸು ಐವತ್ತನ್ನು ತಲುಪಿತ್ತು. ಜೀನ್ಸು ಅವನಿಗೆ ಇಷ್ಟ. ಹತ್ತಿಯ ಸರಳ ಅಂಗಿ ಇಲ್ಲವೇ ಟೀ ಶರ್ಟು ಧರಿಸುತ್ತಿದ್ದ. ಓದುವಾಗ ಸಪೂರ ಫ್ರೇಮುಳ್ಳ ಚಶ್ಮಾ ಏರಿಸುತ್ತಿದ್ದ. ಸಣ್ಣ ಮುಗುಳ್ನಗು ಅವನ ಮುಖಕ್ಕೆ ಅಸಾಧರಣ ಚೆಲುವು ನೀಡಿತ್ತು. ಓದುವುದು ಅವನಿಗೆ ಪ್ರೀತಿ. ಸಂಭಂಧಿಕರು ಇರಲೇ ಇಲ್ಲವೋ, ಗೊತ್ತಿಲ್ಲ. ಅದರ ಬಗ್ಗೆ ಮಾತೇ ಬರುವುದಿಲ್ಲ. ರಜದಲ್ಲೂ ಮನೆಗೆ ಹೋಗುವ ಪರಿಪಾಟವೇ ಇಲ್ಲ. ಅಧ್ಯಯಯನಕ್ಕಾಗಿ ಓಡಾಟವಿರುತ್ತಿತ್ತು. ವಸತಿ ಶಾಲೆಯ ಮಕ್ಕಳ ಮೆಸ್ಸಿನಲ್ಲಿ ಮಕ್ಕಳ ಜೊತೆಯೇ ಕುಳಿತು ಉಣ್ಣುತ್ತಿದ್ದ. ಮಕ್ಕಳು ಅವನನ್ನು ತುಂಬಾ ಪ್ರೀತಿಸುತ್ತಿದ್ದರು. ಬಟ್ಟೆಯನ್ನು ಮಕ್ಕಳ ಜೊತೆಯಲ್ಲಿ ಒಗೆದು ಕೊಳ್ಳುತ್ತಿದ್ದ. ಅಲ್ಲಿರುವ ಹೆಚ್ಚಿನ ಅಧ್ಯಾಪಕರು ಇದೇ ತರಹ ಇರುತ್ತಿದ್ದರು. ಕೆಲವು ಅಧ್ಯಾಪಕರಿಗೆ ಕುಟುಂಬವಿರುತ್ತಿತ್ತು. ಇಡೀ ಕುಟುಂಬದ ಊಟ ಉಪಚಾರ ಶಾಲೆಯದೇ ಹೊಣೆಯಾಗಿತ್ತು. ದುಬಾರಿ ಅನಿಸುವ ದರ ವಸತಿ ಶಾಲೆ ವಿಧಿಸುತ್ತಿತ್ತು. ಮಕ್ಕಳ ಪೋಷಕರು ಬೇಸರವೇ ಇಲ್ಲದೆ ಭರಿಸುತ್ತಿದ್ದರು. ಲಾಭ ಗಳಿಸುವ ಉದ್ದೇಶವಿರಲಿಲ್ಲ. ಖಾಸಗಿಯಾಗಿ ಯಾರನ್ನೂ ಕಾಯದೇ, ಮಕ್ಕಳ ಖುಷಿಯಾದ ಕಲಿಯುವಿಕೆಗೆ ತಂದೆ ತಾಯಿಯ ತರಹದ್ದೇ ಪ್ರೀತಿಗೆ, ಶಾಲೆ ಇರುತ್ತಿತ್ತು.  ಶಾಲೆಯ ಮಕ್ಕಳಿಗೆ ರಜವಿತ್ತು. ಮಕ್ಕಳು ಮನೆಗೆ ತೆರಳಿದ್ದರು. ವಸತಿ ಶಾಲೆಯ ಮಕ್ಕಳಿಗೆ ರಜವಿದ್ದಾಗ, ಶಾಲೆಯ ಟ್ರಷ್ಟಿಗಳ ವಾರ್ಷಿಕ ಮಿಲನವಿರುತ್ತಿತ್ತು.  ಪರಿಸರ ಅವರ ಜೀವನದ ಭಾಗವಾಗಿತ್ತು. ಪರಿಸರದೊಡನೇ ಮಕ್ಕಳು ಬೆಳೆಯಬೇಕು, ಶಾಲೆಯ ಆಟ ಪಾಠಗಳೂ ಪರಿಸರದ ಮಿತಬಳಕೆಯ ತತ್ವದ ಮೇಲೆ ಇರುತ್ತಿತ್ತು. ಶಾಲೆಯನ್ನು ಆರಂಭಿಸಲು ಕಾರಣನಾಗಿದ್ದ ಚಿಂತಕ ಪರಿಸರದ ವೀಕ್ಷಕನಾಗಿದ್ದ. ಪ್ರತಿಕ್ಷಣವನ್ನೂ ಗಮನಿಸುತ್ತಿದ್ದ. ತನ್ನನ್ನು ಗಮನಿಸುತ್ತಿದ್ದ. ಅವನ ಮೇಲೆ ಒಲವಿರುವವರನ್ನು ಟ್ರಷ್ಟಿಗಳು ಮಿಲನ ಕೂಟಕ್ಕೆ ಆಹ್ವಾನಿಸುತ್ತಿದ್ದರು. ಚಿಂತಕ ಭೂಮಿಯ ಮೇಲೆ ಇಲ್ಲ. ಅವನು ಆಲೋಚಿಸಿದ ವಿಷಯಗಳು ಇವೆ. ಅಧ್ಯಾಪಕನಿಗೆ ಈ ಆಲೋಚನೆಗಳು ಇಷ್ಟವಾಗಿತ್ತು. ಸಂಬಳ ಕಡಿಮೆಯಿತ್ತು. ಟ್ರಷ್ಟ್ ಲಾಭವೂ ಇಲ್ಲ ನಷ್ಟವೂ ಇಲ್ಲ ತತ್ವದ ಮೇಲೆ ಕೆಲಸ ಮಾಡುತ್ತಿತ್ತು. ಹಾಗಾಗಿ ಖರ್ಚಿಗೆ ಸಾಲುವಷ್ಟು ಸಂಬಳ ಬದುಕಲಿಕ್ಕೆ ಬೇಕಾದಷ್ಟು ಶುಚಿ ರುಚಿಯ ಮೂಲಸೌಕರ್ಯ ಒದಗಿಸುತ್ತಿತ್ತು. ಪರಿಸರದಲ್ಲಿರಲಿಕ್ಕೆ ಅವಕಾಶವಿರುವ, ಸ್ವಾತಂತ್ರ್ಯ, ಶೋಧನೆಗೆ ಅವಕಾಶ, ಅಧ್ಯಯನಕ್ಕೆ ಪ್ರೋತ್ಸಾಹ, ಮಕ್ಕಳ ಜೊತೆ ಬೆಳವಣಿಗೆ ಶಾಲೆಯ ಆಕರ್ಷಣೆಯಾಗಿತ್ತು. ಅಧ್ಯಾಪಕನಿಗೆ ತುಂಬಾ ಸೂಕ್ಷದ ವಿಷಯಗಳು ಹೊಳೆಯುತ್ತಿದ್ದವು. ಪರೀಕ್ಷಿಸುತ್ತಿದ್ದ. ಅವನಾಗಿ ಯಾವುದನ್ನು ಚರ್ಚಿಸುತ್ತಿರಲಿಲ್ಲ. ಹೀಗೆ ಸಭೆ ಸೇರುವಾಗ ಯಾವುದೋ ಒಂದು ಸಮಸ್ಯೆಯೊಂದರ ಮೇಲೆ ಮಾತನಾಡಲು ಟ್ರಷ್ಟಿಗಳು ಆಹ್ವಾನಿಸುತ್ತಿದ್ದರು. ಅವನು ಈ ಬಾರಿ ಪ್ರಖ್ಯಾತ ಉದ್ದಿಮೆಯೊಂದರ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ವಿವರಿಸಿ ಮಾತನಾಡಿದ. ಉದ್ದಿಮೆ ಪರಿಸರ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿ, ಅದಕ್ಕಾಗಿ ಲಾಭದ ಹಣದಲ್ಲಿ ವಿಪರೀತ ಖರ್ಚು ಮಾಡುತ್ತಿರುವುದನ್ನು, ಶೇರುದಾರರು ತಮಗೆ ಬರಬೇಕಾದ ಲಾಭ ಪರಿಸರದ ರಕ್ಷಣೆಗೆ ಖಾಲಿಯಾಗುವುದನ್ನು ವೀರೊಧಿಸುವುದನ್ನೂ, ವಿವರಿಸಿದ. ಅಂಕಿ ಅಂಶಗಳನ್ನೂ ನೀಡಿದ.ಕೊನೆಗೊಂದು ಪ್ರಶ್ನೆ ಇಟ್ಟ. ಉದ್ದಿಮೆ ಪರಿಸರವನ್ನು ರಕ್ಷಿಸುವುದಕ್ಕೆ ಖರ್ಚು ಮಾಡುವುದೇಕೆ? ಉಳಿಸಲು ಅದು ಮಾಡುತ್ತಿರುವ ಪ್ರಯತ್ನಕ್ಕಿಂತಲೂ, ಪರಿಸರ ನಾಶಕ್ಕೆ ಸಾವಿರ ಪಟ್ಟು ವೇಗದಲ್ಲಿ, ಅದೇ ಪರಿಸರಕ್ಕೆ ,ಅದೇ ಉದ್ದಿಮೆ ಪ್ರತಿದಿನ ಸೇರಿಸುತ್ತಿರುವ ಮಲೀನತೆಯನ್ನು ನಿಲ್ಲಿಸಿದರೆ ಸಾಕಲ್ಲವೇ? ನಾಶವಾದುದನ್ನು, ನಾಶವಾಗುತ್ತಿರುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದ. ಅವನ ಬಳಿ ಉತ್ತರವಿರಲಿಲ್ಲ. ಪ್ರಶ್ನೆಯಿತ್ತು. ಮಾತನಾಡಿಯಾದ ನಂತರ ಊಟದ ಸಮಯವಾಗಿತ್ತು. ಅವನೂ ಊಟ ಮಾಡಿದ. ಉಳಿದವರು ಊಟ ಮಾಡಿದರು. ಚರ್ಚೆಗೆ ಅವನಿರಲಿಲ್ಲ. ಊಟದ ಎಲ್ಲಾ ಮೇಜುಗಳಲ್ಲಿ ಚರ್ಚೆಯಿತ್ತು. ಊಟ ಮುಗಿಸಿದ ಅವನು ಕೋಣೆಯ ಸಮೀಪ ಬಿದ್ದಿದ್ದ ತರಗೆಲೆಗಳನ್ನು ಹೆಕ್ಕಿದ. ಮರವೊಂದರ ಬುಡಕ್ಕೆ ಅವನು ಕಟ್ಟಿದ್ದ ಮಣ್ಣಿನ ಕಟ್ಟೆಯೊಳಗೆ, ಹೆಕ್ಕಿದ್ದ ತರಗೆಲೆಯನ್ನು ಸೇರಿಸಿದ.

 

Rating
No votes yet

Comments