ತಂದೆಯವರ ನೆನಪುಗಳು - ಭಾಗ ೨

ತಂದೆಯವರ ನೆನಪುಗಳು - ಭಾಗ ೨

http://www.sampada.net/blog/shamala/30/03/2009/18470 - ಭಾಗ - ೧

ಅಪ್ಪನಿಗೆ ಸೊಗಸಾಗಿ ಅಡುಗೆ ಮಾಡಲು ಕೂಡ ಬರುತ್ತಿತ್ತು. ತಿಂಗಳಿಗೆ ಮೂರು ದಿನ ಅಪ್ಪ ನನಗೆ ಸ್ನಾನ ಮಾಡಿಸಿ, ಲಕ್ಷಣವಾಗಿ ಎರಡು ಜಡೆ ಹೆಣೆದು, ಶಾಲೆಗೆ ಕಳುಹಿಸುತ್ತಿದ್ದರು. ೧೨ ಘಂಟೆಗೆ ಶಾಲೆಯಿಂದ ಮರಳುವ ವೇಳೆಗೆ ಸೊಗಸಾದ ಅನ್ನ, ಹುಳಿ / ಸಾರು ಎಲ್ಲಾ ತಯಾರಾಗಿರುತ್ತಿತ್ತು. ಅಪ್ಪ ಸಾರು ಕುದಿಸುತ್ತಿದ್ದರೆ, ಅದರ ಘಮ ರಸ್ತೆಯವರೆಗೂ (ನಮ್ಮನೆ ಉದ್ದಕ್ಕೆ, ಅಡಿಗೆ ಮನೆ ರಸ್ತೆಯಿಂದ ದೂರದಲ್ಲಿತ್ತು) ಬರುತ್ತಿತ್ತು. ಮನೆಯಲ್ಲಿ ಅಮ್ಮ ಬೆಳಗಿನ ತಿಂಡಿಗೆ ಉಪ್ಪಿಟ್ಟು ಮಾಡಿದಾಗಲ್ಲೆಲ್ಲಾ, ಅಪ್ಪನಿಗೆ ತಕ್ಷಣ ಯಾವುದಾದರೂ ತುರ್ತು ಸಭೆಯ ಕರೆ ಬಂದು, ಅವಸರದಲ್ಲಿ ನಂಗೆ ತಿಂಡಿ ಬೇಡ ಕಣೆ ಎಂದು ಹೊರಟುಬಿಡುತ್ತಿದ್ದರು ! ಪ್ರತಿ ಹಬ್ಬದ ದಿನವೂ, ಊಟ ಜಾಸ್ತಿಯಾಗಿರತ್ತೆ ಅಂತ, ನಮಗೆಲ್ಲಾ "ಬೀಡಾ" ತರಿಸಿಕೊಡುವುದನ್ನು ಮರೆಯುತ್ತಿರಲಿಲ್ಲ. ಮಧ್ಯಾನ್ಹದ ಊಟವಾದ ನಂತರ, ನಾವೆಲ್ಲಾ ಸೇರಿ ಕೇರಂ ಆಡುತ್ತಿದ್ದೆವು. ಅಪ್ಪ ಆಟ ಶುರುಮಾಡಿದರೆ ಸಾಕು, ನಾಲಕ್ಕೂ ಕಡೆ ಕಾಯಿ ಹೋಗುತ್ತಿತ್ತು. ಆದ್ದರಿಂದ ನಾನ್ಯಾವಾಗಲೂ ಅಪ್ಪನ ಜೊತೆ. ನೇರವಾಗಿ ಹೇಗೆ ಗುರಿ ಇಡಬೇಕೆಂದು ನನಗೆ ಅಪ್ಪನೇ ಹೇಳಿಕೊಟ್ಟಿದ್ದು. ಕೇರಂ ಬೇಜಾರಾದರೆ, ೧೩ ಎಲೆ ಹಾಕಿಕೊಂಡು ರಮ್ಮಿ ಆಡುತ್ತಿದ್ದೆವು. ಹೆಣ್ಣು ಮಕ್ಕಳಿಗೆ ಇಸ್ಪೀಟು ಕಲಿಸುತ್ತೀರ ಎಂದು ನಮಗಾಗಿ ಅಪ್ಪ ಅದೆಷ್ಟು ಸಲ ಬೈಗುಳ ತಿಂದಿದ್ದರೋ.... ಸಿನಿಮಾ ಟಾಕೀಸಿನ ಮ್ಯಾನೇಜರ್ ಅಪ್ಪನ ಸ್ನೇಹಿತರೇ.. ಸರಿ ಅಪ್ಪ ಬಂದು ಸಿನೆಮಾ ಚೆನ್ನಾಗಿದ್ಯಂತೆ, ಆನಂದ್ ಹೇಳಿದ್ರು, ಹೋಗ್ರೇ ಎಂದು ದುಡ್ಡು ಕೊಟ್ಟು ನನ್ನನ್ನೂ ನನ್ನ ಎರಡನೆಯ ಅಕ್ಕನನ್ನೂ ಕಳುಹಿಸುತ್ತಿದ್ದರು... ವಾಪಸ್ಸು ಬಂದಮೇಲೆ ಕೋಪದಿಂದ ಅಮ್ಮ ಕಾಫಿ ಕೊಡದಿದ್ದಾಗ, ಅಪ್ಪ ನಾವು ಸಿನೆಮಾ ನೋಡಿ ಬರುವವರೆಗೂ ಕಾಯುತ್ತಿದ್ದು, ಕಾಫಿ ಮಾಡಿಸಿ, ನಮಗೂ ಕೊಡಿಸಿ, ತಾವೂ ಕುಡಿಯುತ್ತಿದ್ದರು! ಇಂತಹ ಚಿಕ್ಕ ಚಿಕ್ಕ ನೆನಪುಗಳು ನೂರಾರು.. ಅದೆಷ್ಟೊಂದು ಹಿತವಾಗಿವೆ ಅಲ್ವಾ ? ಧ್ವನಿ ಏರಿಸಿ ಯಾವತ್ತಿಗೂ ಅಪ್ಪ ನಮ್ಮನ್ನು ಖಂಡಿಸಿದ ನೆನಪೇ ನನಗಿಲ್ಲ. ಬೇಸಿಗೆ ರಜದಲ್ಲಿ, ಮಧ್ಯಾನ್ಹದ ಬಿಸಿಲಲ್ಲಿ, ನಮಗಾಗಿ ಐಸ್ ಕ್ಯಾಂಡಿ ಫ್ಯಾಕ್ಟರಿಗೆ ಹೋಗಿ ಸ್ಟೀಲ್ ಕ್ಯಾರಿಯರ್ ನಲ್ಲಿ ಐಸ್ ಕ್ಯಾಂಡಿ ತಂದು ಕೊಟ್ಟಿದ್ದನ್ನು ನಾ ಹೇಗೆ ತಾನೇ ಮರೆಯಲಿ ? ಬಿ ಹೆಚ್ ರಸ್ತೆಯಲ್ಲಿ ಹೋಗುವಾಗ, ಸೀರೆ ಅಂಗಡಿ ಬೊಂಬೆಗೆ ಉಡಿಸಿದ್ದ ಸೀರೆ ಚೆನ್ನಾಗಿತ್ತೆಂದು, ನಮ್ಮನ್ನು ಅಂಗಡಿಗೆ ಸೀರೆ ಕೊಳ್ಳಲು ಕಳುಹಿಸಿದ್ದರು ಅಪ್ಪ...

ಅಮ್ಮ ಊರಿಗೆ ಹೋದಾಗ ಮನೆ ಖರ್ಚಿಗೆ ಕೊಟ್ಟು ಹೋಗುತ್ತಿದ್ದ ದುಡ್ದಿಗೆ ನಾವು ಸರಿಯಾಗಿ ಲೆಖ್ಕ ಬರೆದಿಡಬೇಕಿತ್ತು, ಆದರೆ ನಾವು ಸಿನಿಮಾ ನೋಡಲು ಖರ್ಚು ಮಾಡಿದರೆ ಅಮ್ಮನಿಗೆ ಸಿಟ್ಟು ಬರುತ್ತಿತ್ತು. ನಾವು ಅದೆಲ್ಲವನ್ನೂ "ಮಿಸೆಲೇನಿಯಸ್" ಎಂದು ಬರೆಯುತ್ತಿದ್ದೆವು (ಅಮ್ಮ, ಅಪ್ಪ ಇಬ್ಬರೂ ಇಲ್ಲದಿದ್ದರೆ, ನಾನೂ ನನ್ನ ಅಕ್ಕ ಇಬ್ಬರೂ ಬೆಳಗಿನ ಆಟ, ಮ್ಯಾಟಿನಿ, ಅಂತ ನಮ್ಮೂರಲ್ಲಿ ಇದ್ದ ೪ ಸಿನೆಮಾ ಟಾಕೀಸಿನಲ್ಲೂ ಸಿನೆಮಾ ನೋಡುತ್ತಿದ್ದೆವು :-) ) ಅಮ್ಮ ಕೋಪಿಸಿಕೊಂಡರೆ, ಅಪ್ಪ ಬಿಡೇ ಪಾಪ ಮಕ್ಕಳು ಸಿನೆಮಾ ನೋಡಿರ್ತಾವೆ ಅಷ್ಟೇ ತಾನೆ ಎಂದು ನಮ್ಮನ್ನು ವಹಿಸಿಕೊಳ್ಳುತ್ತಿದ್ದರು.. ಇಂಥಾ ಸಹ್ರುದಯರು ನನ್ನ ಅಪ್ಪ .......

ಮುಂದುವರೆಯುವುದು...
http://www.sampada.net/blog/shamala/11/04/2009/18979 ಭಾಗ - ೩

Rating
No votes yet

Comments