ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ
(ಈ ದಿನ ಪುರಂದರ ದಾಸರ ಆರಾಧನೆ, ಪುಷ್ಯ ಬಹುಳ ಅಮಾವಾಸ್ಯೆ - ಆ ಸಂದರ್ಭಕ್ಕೆಂದು ಹಿಂದೆ ಬರೆದಿದ್ದ ಈ ಕಿರುಕಾವ್ಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ)
ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ
ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ
ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧||
ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು ||
ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು
ಸಾನುರಾಗದಿ ಚಿಣ್ಣರಿಗೆ ಸಂಗೀತವಿದ್ಯೆಯ ಪೇಳ್ವನು
ಕಾನುಮಲೆಯ ಕ್ಷೇಮಪುರದಲ್ಲವನೆ ಬಲುಸಿರಿವಂತನು ||೨||
ಶ್ರೀನಿವಾಸನ ಮಡದಿ ಸರಸತಿ ಸಾಧ್ವಿಯವಳು ನಿಚ್ಚದಿ
ಮಾನಿನಿಯು ತಾನೆಂದು ಗಂಡನ ಮಾತ ಮೀರಲು ಹೋಗಳು
ತಾನು ಮಾಡಿದ ಭಾಗ್ಯ ತನ್ನಯ ಗಂಡ ಮಕ್ಕಳ ಕಾವುದು
ಏನೊ ಎಂತೋ ದೈವ ನೀಡಿದುದಲ್ಲೆ ಶಾಂತಿಯ ಕಾಂಬಳು ||೩||
ಒಂದು ಶ್ರಾವಣ ತಂಪು ಹಗಲಲಿ ಶ್ರೀನಿವಾಸನ ಮಳಿಗೆಗೆ
ಬಂದು ನಿಂತನು ವೃದ್ಧ ಬ್ರಾಹ್ಮಣನೊಬ್ಬ ಬೇಡುತ ಹಣವನು
ಕಂದ ಮೊಮ್ಮೊಗನಿಹನು ಮನೆಯಲಿ ಮಾಡಬೇಕಿದೆ ಮುಂಜಿಯ
ಒಂದು ಹೊನ್ನನು ಕೊಟ್ಟರಾಯಿತು ಧನ್ಯನಾಗುವೆ ಎಂದನು ||೪||
ಎಂದು ದಾನವ ಮಾಡದಂತಹ ಶ್ರೀನಿವಾಸನು ಯೋಚಿಸಿ
ಇಂದು ಈತನ ಸಾಗಿಹಾಕಿದರಾಯಿತೆನ್ನುತ ಭಾವಿಸಿ
ಮುಂದೆ ಬಾಗಿಲಿನಿಂದ ಆಚೆಯೆ ವೃದ್ಧನಾತನ ಕಳುಹಿಸಿ
ಬಂದು ನೋಡೆಲೆ ವಾರವಾಗಲಿ ಆಗ ಕೊಡಬಹುದೆಂದನು ||೫||
ಹೀಗೆ ವಾರವು ಮತ್ತೆ ವಾರವು ತಿಂಗಳುಗಳೇ ಸಂದವು
ಯೋಗಿಯಂದದಿ ಮುದುಕ ಹಾರುವ ಬೇಸರಿಲ್ಲದೆ ಬರುವನು
ಬಾಗಿ ನಿಲ್ಲುವ ಮತ್ತೆ ಬೇಡುತ ಒಂದು ಹೊನ್ನಿನ ಕಾಸನು
ರೇಗು ಹತ್ತಿದ ಶ್ರೀನಿವಾಸನು ಕಿಲುಬು ನಾಣ್ಯವ ಕೊಟ್ಟನು ||೬||
ಕೆಟ್ಟ ನಾಣ್ಯವ ಕೊಟ್ಟರೂ ಅವ ಕೈಯ ಮುಗಿಯುತ ಹೊರಟನು
ಕೆಟ್ಟು ಹೋಗಿರೆ ಹಣೆಯ ಬರಹವು ಹೊಣೆಯು ಯಾರದಕೆಂದನು
ಪಟ್ಟು ಬಿಡದಿರುವುದೊಳಿತೆಂದವ ಮನದಿ ಯೋಚನೆ ಮಾಡುತ
ನೆಟ್ಟ ನೇರದಿ ಹೋಗಿ ಸರಸತಿ ಮನೆಯ ಬಾಗಿಲ ಬಡಿದನು ||೭||
ತಂದೆಯಂತಿಹ ಮುದುಕ ಹೇಳಿದ ಕಥೆಯ ಸರಸತಿ ಕೇಳಿ ತಾ
ನೊಂದು ನವೆಯುತ ಏನ ತಾನೇ ಮಾಡಬಲ್ಲೇನೆಂದಿರೆ
ತಂದೆ ತಾಯಿಯು ಕೊಟ್ಟ ಮುತ್ತಿನ ನತ್ತು ನೆನಪಿಗೆ ಬಂದಿತು
ಚೆಂದವಾಗಿರುವೊಡವೆಯೊಂದಿದೆ ಕೊಳ್ಳಿರೀಗಲೆ ಎಂದಳು ||೮||
ತರುಣಿ ಕೊಟ್ಟಿಹ ಹೊಳೆವ ಮೂಗುತಿ ನೋಡಿ ಹಿಗ್ಗಿದ ಬ್ರಾಹ್ಮಣ
ಸಿರಿನಿವಾಸನ ಬಳಿಗೆ ವೇಗದಿ ಧಾವಿಸುತ್ತಲೆ ಹೋದನು
ಇರುಳ ದೀಪದ ಸೊಬಗಿನಾಮುತ್ತಿಹುದು ನನ್ನಲಿ ನೋಡಿರಿ
ಸರಿಯ ಬೆಲೆಯನು ನೀವೆ ಕಟ್ಟಿರಿ ಹಣವ ನೀಡಿರಿ ಎಂದನು ||೯||
ಹೊಳೆವ ಮೂಗುತಿ ಸೊಬಗ ಕಂಡು ಶಂಕೆಗೊಂಡನು ನಾಯಕ
ಬೆಳಕಿನಾ ಖನಿಯಿದನು ಕಂಡಿಹೆ ಮೊದಲೆ ತಾನೆಂದೆನಿಸಲು
ಹೊಳೆಯಿತವನಿಗೆ ಮಡದಿ ಸರಸತಿ ಹಾಕಿಕೊಳ್ಳುವ ಮೂಗುತಿ
ಸೆಳೆದು ತಂದಿಹನೇನೊ ಎನ್ನುವ ಭಯವು ಕಾಡಿತು ಮನಸಲಿ ||೧೦||
ಮಡದಿ ಸರಸತಿ ಏನು ಮಾಡಿದಳೆಂದು ಅರಿಯುವ ಕಾರಣ
ಒಡನೆ ಎದ್ದು ಹೊರಟ ಮನೆಕಡೆ ಶ್ರೀನಿವಾಸ ನಾಯಕ
ಕೊಡುವೆ ಹಣವನು ಹೊರಗೆ ಕುಳ್ಳಿರು ಬೇಗ ಮರಳುವೆ ಎನ್ನುತ
ಹಿಡಿದ ನತ್ತನು ಪೆಟ್ಟಿಗೆಯಲೇ ಇಟ್ಟು ಬೀಗವ ಹಾಕಿದ || ೧೧||
ಮಳಿಗೆ ಹಿಂದಿನ ಕೋಣೆಯಲ್ಲಿ ಇದ್ದ ಬಾಲಕ ಮಧ್ವಪ
ಕುಳಿತು ಚಿತ್ರವ ಬಿಡಿಸುತಿದ್ದವ ಅಪ್ಪ ಹೋದುದ ಕಾಣುತ
ಒಳಗಿನಿಂದ ಹೊರಗೆ ಬಂದು ನೋಡಿ ಮುಚ್ಚಿದ ಪೆಟ್ಟಿಗೆ
ಒಳಗೆ ನೋಡುವೆನೆಂದು ಬೀಗವ ತೆರೆಯೆ ಮೂಗುತಿ ಕಂಡಿತು ||೧೨||
ಅರರೆ ಅಮ್ಮನ ಮೂಗುತಿಯಿದು ಇಲ್ಲಿಗೇತಕೆ ಬಂದಿತು?
ಮುರಿದು ಹೋದುದೆ? ಸರಿಗೆ ಕಡಿದುದೆ? ಇಲ್ಲ ಬಣ್ಣವು ಕೆಟ್ಟುದೆ?
ಇರುವ ವಿಷಯವದೇನೋ ತಿಳಿಯದು ಮುದುಕನೇನಿದ ತಂದನು?
ಸರಿಯಿದನ್ನು ನೋಡಿ ತಂದೆಯದೇಕೆ ಮನೆಕಡೆ ನಡೆದನು? ||೧೩||
ಅತ್ತ ನಾಯಕ ಮನೆಗೆ ಹೋಗಿ ಬಳಿಗೆ ಮಡದಿಯ ಕರೆಯುತ
ಮುತ್ತು ಮೂಗುತಿ ಕಾಣದೆಲ್ಲಿಗೆ ಹೋಯಿತೆನ್ನುತ ಕೇಳಲು
ಎತ್ತಿ ಇಟ್ಟಿಹೆ ತಂದು ತೋರುವೆನೆಂದು ನುಡಿದೊಳಹೋದಳು;
ಇತ್ತ ಕಡೆಯಲಿ ಬಾಲಕನು ಭಯದಿಂದ ಮನೆಗೋಡುತಲಿರ್ದನು ||೧೪ ||
ನುಡಿದೆ ಹುಸಿಯನು ಗಂಡನಲಿ ನಾನೆಂತು ಮೂಗುತಿ ತೋರಲಿ?
ಬಿಡದೆ ನಿನ್ನಯ ಪಾದವೆಂದಿಗು ನಂಬಿದವಳನು ಪಾಲಿಸೋ
ಕಡುಪರೀಕ್ಷೆಯ ಸಮಯ ಬಂದಿದೆ ನೀನೆ ದಾರಿಯ ತೋರ್ವುದು
ಎಡದ ಹೂವಲಿ ಪ್ರಾಣ ನೀಗುವೆ ಬಲದಿ ಕೊಟ್ಟರೆ ಬಾಳುವೆ ||೧೫||
ಹೀಗೆ ನೆನೆಯುತ ಸರಸತಿಯು ತಾ ಹೂವನಿಟ್ಟಳು ವಿಠಲಗೆ
ಬೇಗ ಬಾರೆನ್ನುತಲಿ ಹೊರಗಡೆ ಪತಿಯು ಕೂಗುತಲಿದ್ದಿರೆ
ಆಗಬಾರದುದೇನೊ ನಡೆಯುವ ಭಯವು ಹೆಚ್ಚುತ ಹೋಗುತ
ಹೇಗೊ ದಾರಿಯ ಓಡಿ ಮುಗಿಸಿದ ಹುಡುಗ ಮನೆಬಳಿ ಬಂದನು ||೧೬||
ಹೊರಗಡೆಯಲೇ ಅಪ್ಪ ನಿಂತಿಹ ಮುಖದಲೇನೋ ಕೋಪವು
ಮರುಳುಗೆಟ್ಟನೊ? ಕನಸ ಕಂಡನೊ? ಏಕೆ ಈಪರಿ ನೋಟವು?
ಇರಲಿ ಮೊದಲಿಗೆ ತಾಯ ಕಾಣುವೆ ಮತ್ತೆ ಮೂಗುತಿ ನೀಡುವೆ
ಸರಸರನೆ ಹೀಗೆನಿಸಿ ಮಧ್ವಪ ಮನೆಯ ಪಕ್ಕದಿ ಓಡಿದ ||೧೭||
ಮುಚ್ಚಿರುವಕಂಗಳನು ಸರಸತಿ ಕೈಯ ಮುಗಿದೇ ತೆರೆಯಲು
ನಿಚ್ಚದಲಿ ಬಿದ್ದಿತ್ತು ಎಡಗಡೆಯಿಂದಲೊಂದು ಕುಸುಮವು
ಅಚ್ಚಕೆಂಪನೆ ಹೂವದನ್ನು ನೋಡಿ ಕಸಿವಿಸಿಗೊಳ್ಳುತ
ಪಚ್ಚೆವಜ್ರದ ಕಿವಿಯ ಓಲೆಯ ತೆಗೆದು ಪುಡಿಪುಡಿಗೈದಳು ||೧೮||
ಹಿಂದುಗಡೆಯಲಿ ಓಡುವಾಗಲೆ ಕಿಟಕಿಯಲ್ಲೇ ಕಂಡಿತು
ಮಂಗಳದ ಕುರುಹಲ್ಲ ತಾಯಿಯ ಕಣ್ಣ ತುಂಬಿದ ಹನಿಗಳು
ನುಂಗಹೊರಟಿಹಳೇನೊ ಕಾಣದು ಬಾಲಕನು ಭಯಗೊಳ್ಳುತ
ಮುಂದಕೇನೂ ತೋರದೇ ಅವ ನತ್ತು ಕಿಟಕಿಯೊಳೆಸೆದನು ||೧೯||
ಕಣ್ಣ ಮುಚ್ಚಿ ವಿಷವ ಸೇವಿಸ ಹೊರಟ ಸರಸತಿ ಬೆಚ್ಚುತ
ಕಣ್ಣ ಬಿಟ್ಟಳು ಏನೋ ಬಿದ್ದಿರಲಾಗ ಕೈಯಲಿ ಒಮ್ಮೆಗೆ
ಕಣ್ಣನೇ ತಾ ನಂಬಲಾರಳು ಕೈಯಲಿರುವುದು ಮೂಗುತಿ
ಬಣ್ಣಗೆಟ್ಟಿಹ ಅವಳ ಮೊಗದಲಿ ಮತ್ತೆ ಮರಳಿತು ಜೀವವು || ೨೦||
ಏನು ಯೋಚಿಸದೇನೆ ಸರಸತಿ ಹೋಗಿ ಹೊರಗಡೆ ಗಂಡಗೆ
ತಾನು ಕೈಯಲಿ ಹಿಡಿದ ಮೂಗುತಿ ಮಾತನಾಡದೆ ಕೊಟ್ಟಳು
ಏನಿಹುದವಳೆಡಗೈಲಿ ಬಟ್ಟಲು ಕಿವಿಯ ವಜ್ರವು ಕಾಣದೇ
ತಾನೆ ವಿಷಯವ ಅರಿತು ಬಟ್ಟಲ ವಿಷವ ನೆಲದಲಿ ಚೆಲ್ಲಿದ ||೨೧||
ನಡೆದ ನಾಯಕ ಅದೇ ನಿಮಿಷದಿ ಬೇಗ ತನ್ನಯ ಮಳಿಗೆಗೆ
ಅಡಗಿ ಹೋಗಿತ್ತವನ ಮನದಲಿ ಬೀಡು ಬಿಟ್ಟಿಹ ಕೃಪಣತೆ
ಉಡುಗಿ ಹೋಗುವುದಿತ್ತು ಒಂದೂ ತಪ್ಪುಮಾಡದ ಜೀವವು!
ಮಡದಿಗಿಂತಲು ಮಿಗಿಲು ಆಪುದೆ ಬರಿಯ ಧನಕನಕಾದಿಯು? ||೨೨||
ಶ್ರೀನಿವಾಸನು ಕಾಣಲಿಲ್ಲ ಅಂಗಡಿಯಲಿ ಮುದುಕನ
ಏನುಮಾಡಲು ಬೇಕು ಎಂಬುದನಾಗ ಮನದಲಿ ಯೋಚಿಸಿ
ತಾನೆ ಕೂಡಲೆ ಮಾಡಿಬಿಟ್ಟನು ಹಿರಿಯದೊಂದು ಮುಡಿವನು
ದಾನ ಮಾಡುವೆ ದಾಸನಾಗುವೆ ವಿಜಯನಗರವ ಸೇರುವೆ ||೨೩||
ಮನೆಗೆ ಮರಳಿದ ಶ್ರೀನಿವಾಸನು ಮುಡಿವ ಮಡದಿಗೆ ಹೇಳಿದ
ತನಗೆ ಭಾಗ್ಯವದಾಯಿತೆನ್ನುತ ಸರಸತಿಯು ಮರು ನುಡಿದಳು
ಜನವ ಕರೆಯುತ ಸಕಲ ಸಿರಿಯನು ಅಲ್ಲೆ ದಾನವ ಮಾಡುತ
ಮನೆಮಠಗಳನು ತೊರೆದು ಹೆಂಡತಿ ಮಕ್ಕಳೊಟ್ಟಿಗೆ ಹೊರಟರು ||೨೪||
ಹೋದ ದಿನಗಳ ಮರೆತು ಬಿಟ್ಟರು ಮತ್ತೆ ದಂಡಿಗೆ* ಹಿಡಿದರು
ವೇದ ವೇದ್ಯನ ಭಾವ ಗಮ್ಯನ ನಾಮ ಸಾಸಿರ ನುಡಿಯುತ
ಆದರದಿ ದಾಸನೆನಿಸುತ್ತಲಿ ಪುರಂದರನಾ ಹೆಸರಲಿ
ಆದುದೆಲ್ಲಾ ಒಳಿತೆ* ಎನ್ನುತ ರಾಮಕ್ರಿಯೆ*ಯಲಿ ಪಾಡುತ || ೨೫||
-ಹಂಸಾನಂದಿ
ಕೊ: ಇದು ಪುರಂದರ ದಾಸರ ಸುಪರಿಚಿತ ಕಥೆಯ ಪದ್ಯ ರೂಪ, ನನ್ನ ಕಲ್ಪನೆಯಂತೆ ನೀವು ಕೇಳಿರುವ ಕಥೆಗಿಂತ ಸ್ವಲ್ಪ ಬೇರೆ ರೀತಿಯಾಗಿದೆ. ಪದ್ಯಗಳು ಮತ್ತಕೋಕಿಲ/ಮಲ್ಲಿಕಾ ಮಾಲೆಯ ಚೌಪದಿ ರೂಪದಲ್ಲಿವೆ.
ಕೊ.ಕೊ. ಕ್ಷೇಮಪುರವೆಂಬುದು ಮಲೆನಾಡಿನ ಗೇರುಸೊಪ್ಪೆಯ ಬಳಿಯಿದ್ದಿತು. ಪುರಂದರ ದಾಸರು ದಾಸರಾಗುವ ಮೊದಲು, ಇಲ್ಲಿ ವರ್ತಕರಾಗಿದ್ದರೆಂದು ತಿಳಿಯಲು ಬಹಳಷ್ಟು ಆಧಾರಗಳಿವೆ. ಎಷ್ಟೋ ಜನ ನಂಬಿರುವಂತೆ, ಅವರು ಪುರಂದರಗಡದಿಂದ ಬಂದವರಲ್ಲ!
ಕೊ.ಕೊ.ಕೊ: ಪುರಂದರದಾಸರು, ರಾಮಕ್ರಿಯ (ಈಗ ಪಂತುವರಾಳಿ, ಕಾಮವರ್ಧಿನಿ ಎಂಬ ಹೆಸರುಗಳಲ್ಲಿ ಪ್ರಸಿದ್ಧವಾಗಿದೆ) ರಾಗದ ರಚನೆಯೊಂದರಲ್ಲಿ ತಮ್ಮ ಮನದ ಪರಿವರ್ತನೆಗೆ ಕಾರಣವಾದ ತಮ್ಮ ಹೆಂಡತಿಯನ್ನು ನೆನೆದಿದ್ದಾರೆ. ಅದರಲ್ಲಿ "ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಚಿ ನಾಚುತ್ತಿದ್ದೆ, ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ಎಂದು ಹೇಳುತ್ತಾರೆ". ದಂಡಿಗೆಯೆಂದರೆ ಶ್ರುತಿಗೆಂದು ಬಳಸುತ್ತಿದ್ದ, ತಂಬೂರಿಗಿಂತ ಚಿಕ್ಕದಾದ, ಸರಳವಾದ ವಾದ್ಯ.
Comments
ಉ: ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ
ಪದ್ಯ ಚೆನ್ನಗಿದೆ. ಸಳವಾದ ಬಾಷೆ. ಒಳ್ಳೆಯ ಲಯಗಾರಿಕೆ. ಕ್ಷೇಮಪುರವೆ0ಬುದು ಗೇರುಸೊಪ್ಪೆಗಿದ್ದ ಇನ್ನೊ0ದು ಹೆಸರು. ಅಷ್ಟು ದುರದಲ್ಲಿದ್ದೂ ಕನ್ನಡದ ಹಪಹಪಿಕೆಯನ್ನು ಕಾಪಾಡಿಕೊ0ಡಿರುವ ನಿಮ್ಮ0ಥವರೇ ನಿಜವಾದ ಕನ್ನಡಿಗರೆನ್ನಿಸುತ್ತೆ.
In reply to ಉ: ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ by DR.S P Padmaprasad
ಉ: ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ
ಧನ್ಯವಾದಗಳು!