ತಗೋಬೇಕು ಟಿಕೇಟು
ಉದ್ಯಾನ ನಗರಿ ಬೆಂಗಳೂರು,
ಇಲ್ಲಿ ಹೈದರಾಲಿ ಕಟ್ಸಿದ್ ಲಾಲ್ಬಾಗು
ಕಬ್ಬನ್ ಸಾಹೇಬ್ರ ಹೆಸ್ರಲ್ಲೊಂದು ಪಾರ್ಕು.
ತಣ್ಣಗಿರಲಿ ಅಂತ ಬೆಂಗ್ಳೂರು
ಮಾಡಿಟ್ಟು ಹೋದ್ರು ದೊಡ್ಡೋರು
ಕೆಲ್ಸ ಸಿಕ್ಕದ್ ಕೆಲ್ಸದೋರು,
ಪ್ರೇಮಿ ಕಳ್ಕೊಂಡ್ ವಿರಹಿಗಳು,
ಬೈಸಿಕೊಂಡ್ ಮನೆ ಬಿಟ್ ಓಡ್ ಬಂದೋರು,
ಕಾಸಿಲ್ಲದೆ ಬಿದ್ರೂ ಬೆಂಗಳೂರು,
ತಂಪಾಗ್ ಮಲ್ಗಕ್ಕೆ ಇತ್ತು ಪಾರ್ಕುಗಳು.
ಕೋಳೀಕೆ ರಂಗ ಬಂದಿದ್ದ
ಲಾಲ್ಬಾಗ್ ತೋಟದಲ್ ನಡ್ದಿದ್ದ
ಹುಲಿ ಕಂಡ್ ಬೆಕ್ಕಂತ ತಿಳಿದಿದ್ದ.
ಐಟಿ, ಬಿಟಿ ಬಂತಂತೆ
ಬೆಂಗಳೂರು ಬೆಳೀತಂತೆ
ಜನ ಓಡಾಡಕ್ ರೈಲಂತೆ
ಲಾಲ್ಬಾಗ್ ತೋಟದ ಮರ
ಮೆಟ್ರೋ ರೈಲಿಗ್ ತಲೆ ಕೊಡ್ತಂತೆ,
ಶಾಸಕರಿಗೆ ಉಳ್ಕೋಳೋಕಂತೆ,
ಕಬ್ಬನ್ ಪಾರ್ಕ್ ನಲ್ಲಿ ಮನೆ ಕಟ್ತಾರಂತೆ,
ಮರ ಕಡೀದಿದ್ರೆ ಆಗೊಲ್ಲವಂತೆ.
ಯಾರೋ ಹೇಳಿದ್ರಂತೆ,
ಪಾರ್ಕ ನಲ್ಲಿ ನಡೆಯೋದು
ಅನಾಗರಿಕ ಕೆಲಸ ಅಂತ,
ಅದಕ್ಕೆ ಇನ್ಯಾರೋ ಹೇಳಿದ್ರಂತೆ
ನಾಗರಿಕರನ್ನು ಮಾತ್ರ ಒಳಕ್ಕೆ ಬಿಟ್ರೆ
ಇರೋದಿಲ್ಲ ತಕರಾರು ತಂಟೆ.
ನಾಗರಿಕರಂದ್ರೆ ಯಾರನ್ಕೊಂಡ್ರಿ..?
ಜೋಬಲ್ಲಿರ್ಬೇಕು ಕಾಂಚಾಣ.
ಇಲ್ಲಾಂದ್ರೆ ಬದುಕಿರೋ ಹೆಣ.
ದುಡ್ಡು ಕೊಟ್ ಮಾಡಿಸ್ಕೋಬೇಕ್ ಐಡಿ,
ಇಲ್ಲಾಂದ್ರೆ ಒಳಕ್ಕೆ ಬಿಡ್ ಬೇಡಿ.
ಇನ್ನು ಮುಂದೆ ಇಲ್ಲಿ
ಉದ್ಯಾನನಗರಿ ಬೆಂಗಳೂರಲ್ಲಿ
ಉದ್ಯಾನಕ್ಕೆ ಹೋಗೋಕು
ತಗೋಬೇಕು ಟಿಕೇಟು.
ಮೊದ್ಮಣಿ.