ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು
ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು.
ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ.
ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು.
ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ.
ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕಲೆಕ್ಟರನೇ ಆಗಿದ್ದನಂತೆ. ಬಾಬಾಸಾಹೇಬನ ಬದಲಾಗಿ ಬೇರಾರನ್ನೋ ಗಲ್ಲಿಗೇರಿಸಿ , ಇವನನ್ನು ದಕ್ಷಿಣ ಭಾರತಲ್ಲಿ ಇರಬೇಡ ಎಂದು ಹೇಳಿ ಕಳುಹಿಸಿಬಿಟ್ಟಿದ್ದನಂತೆ! ಆ ಬಾಬಾಸಾಹೇಬನು ಉತ್ತರದಲ್ಲೆಲ್ಲೋ ಓಡಾಡಿ ಕಾಶಿಯಲ್ಲಿ ನರಗುಂದದ ಒಬ್ಬಾಕೆಯನ್ನು ಕಂಡು ಆಕೆಯ ಮಗಳನ್ನು ಮದುವೆಯಾಗಿ ಮುಂಬೈಯ ಬೈಕುಲ್ಲಾದಲ್ಲಿ ವಾಸವಾಗಿದ್ದನಂತೆ . ಆತನ ಮಕ್ಕಳು ಮೊಮ್ಮಕ್ಕಳು ಭಾವೆ ಎಂಬ ಮನೆತನದ ಹೆಸರನ್ನು ಮರೆಮಾಚಿ ಬದುಕಿದರಂತೆ, ಅವರು ಬಾಬಾಸಾಹೇಬನಿಗೆ ಶ್ರಾದ್ಧಕರ್ಮಗಳನ್ನು ಮಾಡುತ್ತಿದ್ದರಂತೆ . ಈ ರೋಚಕ ಸಂಗತಿಯೂ ಅಲ್ಲಿಯೇ ಸಿಕ್ಕಿತು.
ಇನ್ನೊಂದರ ಪುಸ್ತಕವಿಭಾಗದಲ್ಲಿ 'ಅಲ್ಲಿಗೆ ಹೋದರೂ ಇಲ್ಲಿಯ ಚಿಂತೆ' ಎಂಬ ಪ್ರಕಟವಾಗಲಿರುವ ಪ್ರವಾಸಕಥನದ ಭಾಗಗಳು - ಲಂಡನ್ ಭೆಟ್ಟಿಯ ಕುರಿತಾದವು ಓದಿ ಸಂತೋಷವಾಯಿತು. ವಿದೇಶಪ್ರವಾಸ ಮಾಡುವಾಗ ಲೇಖಕರು ನಮ್ಮಲ್ಲಿನ ಸಂಗತಿಯನ್ನು ಮನದಲ್ಲಿಟ್ಟುಕೊಂಡೇ ಎರಡನ್ನೂ ಹೋಲಿಕೆ ಮಾಡುತ್ತಿದ್ದಾರೆ. ಪುಸ್ತಕ ಪ್ರಕಟನೆಯನ್ನು ಎದುರು ನೋಡುವಂತೆ ಮಾಡಿತು. ಒಟ್ಟಿನಲ್ಲಿ ಕಸ್ತೂರಿ ಮಯೂರ ಇಂತಹ ಪತ್ರಿಕೆಗಳನ್ನು ತಕ್ಷಣ ಓದಲಾಗದಿದ್ದರೂ ಕೊಂಡಾದರೂ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಓದುವ ಸುಖದಿಂದ ವಂಚಿತರಾಗುತ್ತೇವೆ ಎನ್ನಿಸಿತು. ನೀವೇನಂತೀರಿ? ನೀವು ಕಸ್ತೂರಿ ಕೊಳ್ಳುತ್ತಿದ್ದೀರಿ ತಾನೆ?
Comments
ಉ: ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು
ನಿಮ್ಮ ಅನಿಸಿಕೆ ಸರಿಯಾಗಿದೆ.
ಉ: ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು
ಮರೆತ ಸಂಗತಿ - ಸುಪ್ರಸಿದ್ಧ ಕಾದಂಬರಿ “ಮಾವೋಸ್ ಲಾಸ್ಟ್ ಡಾನ್ಸರ್” ( ಕನ್ನಡದಲ್ಲಿ “ಮಾವೋನ ಕೊನೆಯ ನರ್ತಕ” ಎಂಬ ಹೆಸರಿನಲ್ಲಿ ಪ್ರಕಟವಾಗಿದೆ) ಯ ಸವಿಸ್ತಾರವಾದ ಪರಿಚಯವೂ ಒಂದು ಸಂಚಿಕೆಯಲ್ಲಿ ಇದೆ.