ತರ್ಲೆ ಮಂಜನ ಗೇಲಿ ಸ್ವಭಾವ ....
ಮಂಜನ ಮಡದಿಯಿಂದ ನನಗೆ ಮತ್ತು ಮನೋಜನಿಗೆ ರಾಖಿ ಕಟ್ಟಿಸಿಕೊಳ್ಳಲು ಆಹ್ವಾನ ಬಂದಿತ್ತು. ಮನೋಜ ಮೊದಲೇ ಹಾಜರ್ ಆಗಿ, ಪೇಪರ್ ಓದುತ್ತ ಕುಳಿತಿದ್ದ. ಕೆಳಗೆ ಇರುವ ಸುಖಮಯ ದಾಂಪತ್ಯಕ್ಕೆ ಉಪಯೋಗಿಸಿ ಎಂದು ಸುಂದರ ತರುಣಿಯ ಜಾಹಿರಾತು ರಾರಾಜಿಸುತ್ತಿತ್ತು. ಮಂಜ ಏನಪ್ಪಾ? ನಿನಗೂ ಔಷಧಿ ಬೇಕಾ? ಎಂದು ಗೇಲಿ ಮಾಡಿದ. ಮನೋಜ ಲೇ.. ನಾನು ಮೇಲಿನ ಸುದ್ದಿ ಓದುತ್ತಿರುವೆ ಎಂದ. ಈ ಸುಂದರ ತರುಣಿಯನ್ನು ನೋಡಿದರೆ ಸಾಕು ಸುಖಮಯ ಆಗಬೇಕು. ಆದರೂ ಆಗಿಲ್ಲಾ ಎಂದರೆ, ಅದನ್ನು ಉಪಯೋಗಿಸಿದ ಮೇಲೆ ಆಗುತ್ತಾ? ಗೊತ್ತಿಲ್ಲ. ನನಗಂತೂ ಅದರ ಅಗತ್ಯ ಬಿದ್ದಿಲ್ಲಾ, ನಿನಗೆ ಏನೋ ಬೇಕಾಗಿರಬೇಕು ಎಂದು ಮಂಜನಿಗೆ ಡೈಲಾಗ್ ಹೊಡೆದ. ಅಷ್ಟರಲ್ಲಿ ಮಂಜನ ಮಡದಿ ಅಡುಗೆ ಮನೆಯಿಂದ ಬಂದಿದ್ದರಿಂದ ಎಲ್ಲರು ಸುಮ್ಮನಾದೆವು.
ಮಂಜನ ಮಡದಿ ಇಬ್ಬರಿಗೂ ರಾಖಿ ಕಟ್ಟಿದಳು. ನಾನು ಮನೋಜನಿಗೆ ಏನಪ್ಪಾ? ಒಂದೇ ಒಂದು ರಾಖಿ ಎಂದೆ. ಅದಕ್ಕೆ ಕಾರಣ ಇತ್ತು. ಶಾಲೆಗೆ ಹೋಗುವ ಸಮಯದಲ್ಲಿ ಮನೋಜನ ಕೈ ತುಂಬಾ ರಾಖಿಗಳು ಇರುತ್ತಿದ್ದವು. ಆದರೆ, ಈಗ ಒಂದೇ ಒಂದು. ಅದಕ್ಕೆ ರಾಖಿ ಹಬ್ಬ ಬಂತು ಎಂದು ದುಡ್ಡನ್ನು ಖರ್ಚು ಮಾಡದೇ ಕೂಡಿಸಿ ಇಡುತ್ತಿದ್ದ. ಅದಕ್ಕೆ ಮನೋಜ ಮಾತನಾಡದೆ, ಮಂಜನ ಮುಖ ನೋಡಿದ. ಮಂಜ ಇವನಿಗೆ ಅಷ್ಟೊಂದು ಅಕ್ಕ-ತಂಗಿಯರು ಇದ್ದರು ಎಂದು ಗೇಲಿ ಮಾಡಿ ನಗಹತ್ತಿದ. ಅವನಿಗೆ ಯಾರಾದರು ಶಾಲೆಯಲ್ಲಿ, ಹುಡುಗಿಯರು ಕಟ್ಟುತ್ತಾರೆ ಎಂಬ ಭಯದಿಂದ, ಅವನೇ ಅಷ್ಟು ರಾಖಿ ಖರೀದಿಸಿ ನನ್ನ ಕೈಯಲ್ಲೇ ಕಟ್ಟಿಸಿಕೊಳ್ಳುತ್ತಿದ್ದ ಎಂದ. ನನಗೆ ೫೦ ರುಪಾಯಿ ಫಾಯಿದೆ ಆಗುತಿತ್ತು, ಅದಕ್ಕೆ ಯಾರಿಗೂ ಹೇಳಿರಲಿಲ್ಲ ಎಂದ. ನನಗೂ ಮನೋಜನ ಚಿದಂಬರ ರಹಸ್ಯ ಕೇಳಿ ನಗು ಬಂತು. ಕಡೆಗೆ ಮಂಜನ ಮಡದಿಗೆ ದುಡ್ಡು ಕೊಟ್ಟು, ತಿಂಡಿ ಮುಗಿಸಿ ಸುಬ್ಬನ ಮನೆಗೆ ಹೊರಟೆವು.
ಸುಬ್ಬನಿಗೆ ಯಾರು ರಾಖಿ ಕಟ್ಟಿರಲಿಲ್ಲ. ಅದಕ್ಕೆ, ಮಂಜ ಎಲ್ಲಿ ನಿನ್ನ ರಾಖಿ ಎಂದ. ಏಕೆಂದರೆ ಕಳೆದ ಬಾರಿ ಅವನಿಗೆ ಅವನ ತಂಗಿ ರಾಖಿ ಕಟ್ಟಿದ್ದಳು. ಆದರೆ ಈ ಬಾರಿ ಅವಳು ಅಮೇರಿಕಾಕ್ಕೆ ಹೋಗಿದ್ದರಿಂದ ಕಟ್ಟಿರಲಿಲ್ಲ. ನನಗೆ ಯಾರು ಕಟ್ಟುತ್ತಾರೆ ರಾಖಿ ಎಂದ. ಅದಕ್ಕೆ ಮಂಜ ನಿನ್ನ ಮಡದಿ ಎಂದು ಗೇಲಿ ಮಾಡಿದ, ಏಕೆಂದರೆ ಕಳೆದ ಬಾರಿ ರಾಖಿ ಧಾರ ಸಡಿಲು ಆಗಿತ್ತೆಂದು, ಮಡದಿ ಕೈಯಲ್ಲಿ ಬಿಗಿ ಮಾಡುವ ಸಮಯದಲ್ಲಿ ನಾವು ಹಾಜರ್ ಆಗಿದ್ದೆವು. ಮಂಜ ತನ್ನ ಗೇಲಿ ಮಾಡುವ ಬುದ್ಧಿ ಮಾತ್ರ ಯಾವತ್ತು ಬಿಟ್ಟಿಲ್ಲ, ಒಮ್ಮೆ ನಾನು ನನ್ನ ಲೇಖನ ಓದುತ್ತ ನಾನೇ ನಗುತ್ತಾ ಇದ್ದೆ. ಮಂಜ ಬಂದು ಅದನ್ನು ನೋಡಿ, ಬೇರೆ ಯಾರು ಓದಿ ನಗುವುದಿಲ್ಲಾ, ನೀನಾದರು ನಗಲೇ ಬೇಕು ಎಂದು ಗೇಲಿ ಮಾಡಿದ್ದ.
ಒಮ್ಮೆ ಒಬ್ಬ ಸಂಬಂದಿಕರ ಹೊಸ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದೆವು. ಅವರ ಮನೆ ಹೆಸರು ಮಾತಾಶ್ರೀ ಎಂದು ಇತ್ತು. ಎಲ್ಲಿ? ನಿಮ್ಮ ಪಿತಾಶ್ರೀ ಎನುತ್ತ ಒಳಗಡೆ ಹೋದ. ಅವರು ಪಾಪ ಅವರ ತಂದೆಯ ಕಡೆಗೆ ಕರೆದುಕೊಂಡು ಹೋದರು. ಅವರನ್ನು ಮಾತನಾಡಿಸಿ, ಆನಂತರ ಊಟ ಮುಗಿಸಿ ಬಂದೆವು. ಮಂಜ ಮನೆಯಿಂದ ಹೊರಗಡೆ ಬಂದ ಮೇಲೆ, ನಮಗೆ ಅವರ ಮನೆ ಹೆಸರು ಮಾತಾಶ್ರೀ ಎಂದು ಏಕೆ? ಇದೆ ಹೇಳು ಎಂದ. ನಾನು ತಾಯಿ ಮೇಲೆ ಪ್ರೀತಿಯಿಂದ ಇಟ್ಟಿದ್ದಾರೆ ಎಂದೆ. ಅದು ನಿಜ ಆದರೆ ಪಿತಾಶ್ರೀ ಎಂದು ಏಕೆ? ಇಡಲಿಲ್ಲ ಗೊತ್ತ, ಅವರು ಪಿತಾಶ್ರೀ ಆಗಿರದೆ ಪೀತಾಶ್ರೀ(ಕುಡಿಯುತ್ತಿದ್ದರು) ಆಗಿದ್ದರು. ಹೀಗಾಗಿ ಶ್ರೀ ಅವರ ಬಳಿ ಇರಲಿಲ್ಲ ಎಂದ.
ಒಮ್ಮೆ ಮಂಜನ ಮನೆಗೆ ಹೋಗಿದ್ದಾಗ, ಬರಿ ಚಡ್ಡಿ ಮೇಲೆ "ಚೆಲುವೆ ಎಲ್ಲಿರುವೆ...." ಎಂದು ಹಾಡುತ್ತಿದ್ದ. ನಾನು ಹೋಗಿರುವ ಸಮಯ ಸರಿಯಿಲ್ಲ ಎಂದು ಹೋಗುತ್ತಿದ್ದೆ. ಅಷ್ಟರಲ್ಲಿ, "ಮಾನ ಕಾಪಾಡುವ ರೂಪಸಿಯೇ..." ಎನ್ನುತ್ತಾ ತನ್ನ ಪ್ಯಾಂಟ್ ಹಾಕಿಕೊಂಡು ಬಂದು ನನ್ನನ್ನು ತಡೆದ. ಅವನು ಅವನ ಹೆಂಡತಿಗೆ ಗೇಲಿ ಮಾಡುತ್ತ, ಈ ಹಾಡು ತಿರುಚಿ ಕಾಡಿಸುತ್ತಿದ್ದ, ಅವರಿಬ್ಬರ ನಡುವೆ ಸ್ವಲ್ಪ ಜಗಳ ಬಂದಿತ್ತು. ಮತ್ತೆ ಮಾತನಾಡುತ್ತ, ನನ್ನ ಹೆಂಡತಿ ಎರಡು ಗಂಡನನ್ನು ಕಟ್ಟಿಕೊಂಡಿದ್ದಾಳೆ ಎಂದ. ನಾನು ಅವನು ಹೇಳುವ ಮಾತು ಕೇಳಿ ದಂಗಾಗಿದ್ದೆ. ಒಂದು ಗಳಗಂಡ - ಇನ್ನೊಂದು ಭೋಳೆ ಗಂಡ ನಾನು ಎಂದು ನಗಿಸಿದ್ದ. ಆದರೂ, ಅವನ ಹೆಂಡತಿ ಮಾತ್ರ ಕೋಪ ಇಳಿದಿರಲಿಲ್ಲ. ಕಾಫಿ ಲೋಟ ಟೇಬಲ್ ಮೇಲೆ ಕುಕ್ಕಿ, ಸಿಟ್ಟಿನಿಂದ ಒಳಗಡೆ ಹೋದಳು. ಮತ್ತೆ ಕಾಫಿ ಮುಗಿಸಿದ ಮೇಲೆ, ಹೆಂಡತಿ ಹಳೆ ಆದ ಮೇಲೆ ಇಷ್ಟ ನೋಡಪ್ಪ, ಗೇಲಿ ಮಾಡೋ ವಸ್ತು ಆಗುತ್ತಾಳೆ. ನೀನು ನಿನ್ನ ಹೆಂಡತಿಗೆ ಹೀಗೆ ಮಾತನಾಡುತ್ತೀಯಾ? ಎಂದು ಪ್ರಶ್ನೆ ಹಾಕಿದಳು. ನಾನು ಏನು? ಹೇಳಬೇಕೋ ತಿಳಿಯದೆ ಒದ್ದಾಡಿದೆ. ಅಷ್ಟರಲ್ಲಿ ಮಂಜ ಹಳೆ ಹೆಂಡತಿ ಮತ್ತು ಹಳೆ ಹೆಂಡ ಎರಡು ಮಸ್ತ ಇರುತ್ತವೆ. ಏಕೆಂದರೆ ಎರಡು ಕಿಕ್ಕ್ ಕೊಡುತ್ತವೆ ಎಂದ. ಮಂಜನ ಮಡದಿಯ ಮುಖದಲ್ಲೂ ಮಂದಹಾಸ ಬಿರಿತು. ನಿಮ್ಮ ಗೆಳೆಯ ಎಂದು ಸುಧಾರಿಸುವುದಿಲ್ಲ ಎನ್ನುತ್ತಾ ಅಡುಗೆ ಮನೆಗೆ ಹೊರಟು ಹೋದಳು.
ಮದುವೆ ಆದ ಹೊಸತರಲ್ಲಿ, ಒಮ್ಮೆ ಮಂಜನ ಮನೆಗೆ ಅತಿಥಿಗಳು ಬಂದಿದ್ದರು. ಅವರು ತುಂಬಾ ದಿನಗಳು ಆದರೂ, ಹೋಗುವ ಮಾತೆ ಎತ್ತಲಿಲ್ಲ. ಅವನಿಗೆ ನುಂಗಲಾರದ ತುತ್ತಾಗಿತ್ತು. ಮೊದಲೇ ಮಡದಿಯ ಸಂಬಂದಿ. ಕಡೆಗೆ ತಲೆ ಕೆಟ್ಟ ಹೋಗಿತ್ತು. ಒಮ್ಮೆ ಮಂಜನ ಮನೆಗೆ ಪೊಲೀಸರು ಬಂದು, ಅದೇ ಅತಿಥಿಯ ಫೋಟೋ ತೋರಿಸಿ, ಇವರನ್ನು ಕಿಡ್ನಾಪ್ ಮಾಡಿದ್ದೀರಾ? ಎಂದು ಮನೆಗೆ ಬಂದ ಅತಿಥಿಯನ್ನು ತೋರಿಸಿದರು. ರೀ ... ನಾವೇನು ಮಾಡಿಲ್ಲ, ಬೇಕಾದರೆ ನೀವೇ ಕೇಳಿ ಎಂದು ಅತಿಥಿಗಳನ್ನು ಕೇಳಿದರು. ಅವರು ಇವರ ಉಪಚಾರ ಎಲ್ಲವನ್ನು ವಿವರಿಸಿದರು. ಅವರು ಬಂದಿದ್ದು ಪಕ್ಕದ ಬೀದಿಯಲ್ಲಿ ಇರುವ ಇನ್ನೊಬ್ಬ ಸಾವಿತ್ರಿಯನ್ನು ಹುಡುಕಿಕೊಂಡು, ಆದರೆ ಅಲ್ಲೇ ಎರಡು ತಿಂಗಳು ಝಾ೦ಡ ಹೂಡಿದ್ದರು. ಅವರ ಮನೆಯವರು ನೆಂಟರ ಮನೆಗೆ ತಲುಪಿಲ್ಲ ಎಂದು ಪೋಲಿಸ ಕಂಪ್ಲೈಂಟ್ ಕೊಟ್ಟಿದ್ದರು. ಹೀಗಾಗಿ ಮಂಜ "ಅ-ತಿಥಿ ದೇವೋ ಭಯ" ಎಂದು ಹೆಂಡತಿಯ ಯಾರೇ ಅತಿಥಿಗಳು ಬಂದರು ಗೇಲಿ ಮಾಡುತ್ತಿರುತ್ತಾನೆ.
ಒಮ್ಮೆ ಮನೋಜನ ಮನೆಗೆ ನಾನು ಮತ್ತು ಮಂಜ ಹೋಗಿದ್ದೆವು. ಅಲ್ಲಿ ಒಬ್ಬರು ತಮ್ಮ ಮಗನ ಮದುವೆಗೆ ಜಾತಕ ಹೊಂದಾಣಿಕೆ ಮಾಡಿಸಲು ಬಂದಿದ್ದರು. ನಮ್ಮ ಜೊತೆ ಹಾಗೆ ಮಾತನಾಡುತ್ತ, ಏನು? ಮಾಡೋದು ಸರ್, ತುಂಬಾ ದಿನದಿಂದ ನನ್ನ ಮಗನ ಮದುವೆ ಆಗವಲ್ಲದು, ಮೊನ್ನೆ ನೋಡಿದರೆ ಗೋತ್ರ ಹೊಂದಾಣಿಕೆ ಆಗಲಿಲ್ಲ ಎಂದರು. ಅದಕ್ಕೆ ಸುಮ್ಮನೆ ಇರದೇ, ನಮ್ಮ ಮಂಜ ಗೋತ್ರ ಹೊಂದಾಣಿಕೆ ಆಗದಿದ್ದರೆ ಏನಂತೆ? ಗಾತ್ರ ಹೊಂದಾಣಿಕೆ ಆದರೆ ಸಾಕು ಎಂದರು. ಎಲ್ಲರು ನಗೆ ಗಡಲಿನಲ್ಲಿ ತೇಲಿದ್ದೆವು. ಹಾಗೆ ಮಾತನಾಡಿಸುತ್ತ, ಕುಂಡಲಿ ಮತ್ತೆ ಹೊಂದಾಣಿಕೆ ಆಗಲಿಲ್ಲ ಎಂದು ಬೇಜಾರಿನಲ್ಲಿ, ಮನೋಜನ ಫೀಸ್ ಕೊಡದೆ ಹಾಗೆ ಹೋಗಿದ್ದರು. ಮನೋಜ ಮಾತ್ರ ಮಂಜನ ಮೇಲೆ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ.