ತಲುಪುವುದಕ್ಕಲ್ಲ

ತಲುಪುವುದಕ್ಕಲ್ಲ

ಪಯಣಗಳಿಂದು ತಲುಪುವುದಕ್ಕಲ್ಲ.
ತಲುಪಿದರೂ ಮತ್ತೆ ಹೊರಡುವುದಕ್ಕೆ
ತಂಗುದಾಣಗಳೇ ಎಲ್ಲ ಚಣ ನಿಂತು
ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.
ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿ
ಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ.

ಇಲ್ಲಿರುವರಿಗೆ ಅಲ್ಲಿರುವ ಕನಸು, ಅಲ್ಲಿರುವರಿಗೆ ಇನ್ನೆಲ್ಲಿಯೋ ಕಣ್ಣು
ತಲುಪಿದರೂ ಗೊತ್ತಿರದೆ ಇರಬೇಕಾದ್ದು ಇನ್ನೆಲ್ಲೋ
ಅನ್ನಿಸುವ ಗಗನಚಿತ್ರದ ಹಾಗೆ;
ಜತೆಯಲ್ಲೇ ನಡೆದೂ ಬೇರೆಲ್ಲೋ ಮುಟ್ಟುವ ಬಗೆಗೆ
ಆತಂಕ ಯಾಕೆ?
ಅವರವರ ಭಾವಕ್ಕೆ ಎಂಬುದೇ ಸರಿಯಲ್ಲವೇ ಸನ್ನಿವೇಶಕ್ಕೆ?

ಅಲ್ಲಿ ಮುಟ್ಟುವ ಬಯಕೆ ಇದ್ದರೂ
ಮುಟ್ಟಿಸುವುದೆ ನೆಚ್ಚಿರುವ ದಾರಿ?
ಚಪ್ಪಲಿ ಸವೆದರೂ ಸವೆದೀತೆ
ದಿಕ್ಕುದೆಶೆ ಆಶೆಗಳ ಅವಶೇಷಗಳ ದಾರಿ?
ಮುರಿದು ಬಿದ್ದಿದೆ ಬೆಳಕು
ಕಂಡು ಕಾಣದ ಹೊಳಪು
ತಬ್ಬಲಿ ಪಯಣಿಗನ ಸಂಗಾತಿಯೆಲ್ಲಿ?

ಕೈಗಂಬ ಎದೆ ಸೆಟೆಸಿ ನಿಂತಿದ್ದ
ಕವಲು ದಾರಿಯ ಮೂಲೆ ಖಾಲಿ;
ನಿನ್ನ ಅಂಗೈಗೇ ಬಂದು ಹುಗಿದು ನಿಂತಿದೆ ಕಂಬ
ಬೇಕಾದತ್ತ ತಿರುಗಿಸಿಕೊ; ಹುಮ್ಮಸ್ಸು
ಕಡಿಮೆಯಾಗದ ಹಾಗೆ ನೋಡಿಕೋ
ಅಲ್ಲಿ ತಲುಪುವ ಆಸೆ ಬಿಟ್ಟು.
ನೀನು ಅಗ್ರೇಸರನಲ್ಲ, ವಿದೂಷಕನೂ ಅಲ್ಲ,
ಎದುರಾಳಿಯ ಎದೆಗಾರಿಕೆ ಮೊದಲೇ ಇಲ್ಲ
ಹಾಗೆಂದು ಅಳಬೇಡ, ತಲುಪದಿದ್ದರೂ ನೆನಪಿಡು
ಪಯಣ ಬಿಡಬೇಡ.
ಬೇರೆಲ್ಲ ಮರೆತರೂ
ಇದು ಮರೆಯತಕ್ಕದ್ದಲ್ಲ-
ಪಯಣಗಳಿಂದು ತಲುಪುವುದಕ್ಕಲ್ಲ.

Rating
No votes yet