ತಲೆಯಿಂದ ರಕ್ತ ಇಳಿಯುತ್ತಿದ್ದರೂ ದೂರದರ್ಶನದಲ್ಲಿ ಮುಂದುವರೆದ ವ್ಯಾಯಾಮ?
ಇವತ್ತು (ರವಿವಾರ-೨೩-ಜನವರಿ-೨೦೧೧ ) ಬೆಳಿಗ್ಗೆ ಆರೂ ಮುಕ್ಕಾಲರ ಹೊತ್ತಿಗೆ ಟೀವಿಯಲ್ಲಿ ಚಾನೆಲ್ ಬದಲಿಸುತ್ತ 'ಚಂದನ'ಕ್ಕೆ ಬಂದೆ . ಅಲ್ಲಿ ವ್ಯಾಯಾಮ ಕಾರ್ಯಕ್ರಮ ಬರುತ್ತಾ ಇತ್ತು. ವ್ಯಾಯಾಮ ಮಾಡದಿದ್ದರೂ ನೋಡಿಯಾದರೂ ನೋಡೋಣವಲ್ಲ? ಅಂತ ನೋಡತೊಡಗಿದೆ. ವ್ಯಾಯಾಮ ನೋಡಿದರೂ ದೇಹಕ್ಕೆ ಲಾಭ ಅಂತ ಎಲ್ಲೋ ಓದಿದ್ದೆ ಬೇರೆ!
ಒಟ್ಟು ಇದ್ದದ್ದು ನಾಲ್ಕು ಜನ , ಒಬ್ಬ ಹೇಳಿಕೊಡುವವ. ಹಿಂದೆ ಗೋಡೆಗುಂಟ ಕನ್ನಡಿ ಇಟ್ಟದ್ದಕ್ಕೆ ಹೆಚ್ಚು ಜನ ಅಂತ ಅನಿಸ್ತಿತ್ತು. ಕಲಿಯುವವರು ಕರೀ ಟೀಷರ್ಟ್, ಬಣ್ಣ ಬಣ್ಣದ ಪ್ಯಾಂಟ್ ಹಾಕಿಕೊಂಡಿದ್ದರು . ಕೈಯಲ್ಲಿ ಡಂಬೆಲ್ಸ್ ಹಿಡಿದುಕೊಂಡಿದ್ದರು. ನೋಡುತ್ತಿದ್ದಂತೆ ಕೊನೆಗೆ ಇರುವವಳ ಮುಖದಲ್ಲೇನೋ ಕೆಂಪು ಬಣ್ಣವು ಹಣೆಯ ಭಾಗದಲ್ಲಿ ತಲೆಯಿಂದ ಹಣೆಗಿಳಿದ ಹಾಗೆ ಕಂಡಿತು. ಕುಂಕುಮ ಇರಬಹುದೇನೋ ಅಂದುಕೊಂಡೆ. ಇಲ್ಲಿರುವವರು ನಾಲ್ಕೈದೇ ಜನ ಆದ್ದರಿಂದ ಕ್ಯಾಮೆರಮನ್ ಅವರುಗಳ ಮುಖವನ್ನು ಕ್ಲೋಸಪ್ ನಲ್ಲಿ ತೋರಿಸುವದು ಅನಿವಾರ್ಯ ವಾಗಿತ್ತು. ಹಾಗೇ ನೋಡುಗನಾದ ನನ್ನಲ್ಲಿನ ಹಾಗೇ ಅವನಿಗೂ ಇದೇನು ಎಂಬ ಸಹಜ ಕುತೂಹಲ ಇದ್ದಿರಬಹುದು. ಅದು ರಕ್ತವೇ ಇದ್ದಿರಬೇಕು. ಇಳಿದು ಇಳಿದು ಕಣ್ಣಿಗೂ ಇಳಿಯಿತು. ಅವಳಿಗೆ ಕಣ್ಣು ತೆರೆದಿಡುವುದು ಸ್ವಲ್ಪ ಕಷ್ಟವಾಯಿತು. ಪಾಪ , ವ್ಯಾಯಾಮ ಮಾಡುತ್ತಲೇ ಒಂದು ಬಾರಿ ತೋಳಿನಿಂದ ಒರೆಸಿಕೊಂಡಳು ಕೂಡ. ವ್ಯಾಯಾಮ, ಅದರ ಬಗ್ಗೆ ಸೂಚನೆ ಸತತವಾಗಿ ನಡೆದೇ ಇತ್ತು. ಕಾರ್ಯಕ್ರಮದ ಚಿತ್ರೀಕರಣವನ್ನು ಯಾವುದೇ ಸಂಕಲನ ಮಾಡಿಲ್ಲ . ಇನ್ನೊಂದ್ ಸಾರಿ ಕ್ಯಾಮೆರಾ ದೂರದಿಂದಲೇ ಅವಳನ್ನು ತೋರಿಸಿದಾಗ ಹಣೆಯಲ್ಲಿ ಇಳಿದ ರಕ್ತ ಕಾಣಲಿಲ್ಲ. ಕ್ಯಾಮೆರಾ ಬೇರೆ ಬೇರೆಯವರನ್ನು ತೋರಿಸತೊಡಗಿತು. ಮತ್ತೆ ಅವಳತ್ತ ಒಂದೆರಡು ನಿಮಿಷಗಳ ನಂತರ ಕ್ಯಾಮೆರಾ ತಿರುಗಿದಾಗ ಮತ್ತೆ ರಕ್ತ ಇಳಿದಿತ್ತು. ಒಂದೆರಡು ಬಾರಿ ನಗುಮುಖವನ್ನೂ ತೋರಿದಳು!.
ರಕ್ತ ಇಳಿಯುತ್ತಿದ್ದರೂ ಅವಳು ಏಕೆ ಮುಂದುವರೆಸಿದಳೋ ? ವ್ಯಾಯಾಮ, ಚಿತ್ರೀಕರಣ ಹಾಳಾಗಲಿ , ತನ್ನ ತೊಂದರೆಯನ್ನೇಕೆ ಹೇಳಲಿಲ್ಲ ? ನಾಲ್ಕೇ ಜನಕ್ಕೆ ವ್ಯಾಯಾಮ ಹೇಳಿಕೊಡುವಾತನಿಗೆ ಇದು ಕಾಣಲಿಲ್ಲವೇ? ಕಾರ್ಯಕ್ರಮದ ಶೂಟಿಂಗೇ ಅವನಿಗೆ ಮುಖ್ಯವಾಯಿತೇ ? ಕ್ಯಾಮೆರಾಮನ್ ಏಕೆ ಸುಮ್ಮನಿದ್ದ? ತನ್ನ ಕೆಲ್ಸ ಚಿತ್ರೀಕರಣ ಅಷ್ಟೇ , ಉಳಿದದ್ದು ತನಗೆ ಸಂಬಂಧವಿಲ್ಲ ಅಂದುಕೊಂಡನೋ ? ಮೂವರಲ್ಲ್ಲಿ ಯಾರಾದರೂ ಕಾರ್ಯಕ್ರಮ ನಿಲ್ಲಿಸಿ ಅವಳತ್ತ ಗಮನ ಹರಿಸಿ , ಆಮೇಲೆ ಮರುಚಿತ್ರೀಕರಣ ಮಾಡಬಹುದಿತ್ತಲ್ಲ ? ದೂರದರ್ಶನದಲ್ಲಿ ಪ್ರಸಾರದ ಮೊದಲು ಯಾರೂ ಕಾರ್ಯಕ್ರಮವನ್ನು ನೋಡುವದೇ ಇಲ್ಲವೇ?