ತಾಟಕಿ ಸಂಹಾರ ಮತ್ತು ಮಲ್ಲಿನಾಥನ ಪುರಾಣ

ತಾಟಕಿ ಸಂಹಾರ ಮತ್ತು ಮಲ್ಲಿನಾಥನ ಪುರಾಣ

ಸಮಾಜದಲ್ಲಿ ಈಗ ಗುರಿತಿಸಲ್ಪಟ್ಟು ಚರ್ಚೆಗೆ ಪ್ರಾಸವಾಗುತ್ತಿರುವ ಅನೇಕ ಹೀನ ಪದ್ಧತಿಗಳು ಮತ್ತು ನ್ಯೂನತೆಗಳು ಹಿಂದಿನ ಕಾಲದಲ್ಲಿಯೂ ಇದ್ದವು. ಆದರೆ ಈಗಿನಂತೆ, ದೃಶ್ಯಮಾಧ್ಯಮ, ಮತ್ತು ಮುದ್ರಣ ಮಾಧ್ಯಮಗಳಿಂದ ಬಿತ್ತರಿಸಲ್ಪಟ್ಟು ಚರ್ಚೆಗೆ ಗುರಿಯಾಗುತ್ತಿದ್ದ ಸಂಭವಗಳು ಅತೀ ಕಡಿಮೆ ಎಂದೇ ಹೇಳಬೇಕು.

ಇಂಥ ಹೀನ ಪದ್ಧತಿಗಳಲ್ಲಿ ಒಂದಾದ, ಅನಾದಿಯಿಂದಲೂ ಬಂದ ಅನೈತಿಕ ಸಂಬಂಧಗಳ ವಿಚಾರಕ್ಕೆ ಬರೋಣ. ಬಹುಪಾಲು ಸಂದರ್ಭಗಳಲ್ಲಿ ಬ್ರಾಹ್ಮಣ ವರ್ಗಕ್ಕೆ ಸೇರಿದ ಪುರುಷನು ಕೆಳವರ್ಗದ ಹೆಂಗಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸಂಗತಿಗಳೇ ಹೆಚ್ಚು ವರದಿಯಾಗಿವೆ. ಇನ್ನು ಕೆಳವರ್ಗ / ಜಾತಿಯ ಪುರುಷನೊಂದಿಗೆ ಮೇಲ್ವರ್ಗದ ಹೆಂಗಸು ಅನೈತಿಕ ಸಂಬಂಧ ಹೊಂದಿದ್ದ ಸಂಗತಿಳು ಅಷ್ಟು ಹೆಚ್ಚಾಗಿ ಬಹಿರಂಗವಾದದ್ದು ಕಡಿಮೆ. ಇಲ್ಲಿ ಯಾವ ವರ್ಗವನ್ನೂ ನೈತಿಕವಗಿ ಮೇಲು ಅಥವಾ ಕೀಳು ಎಂದು ಚಿತ್ರಿಸುವ ಪ್ರಯತ್ನ ಮಾಡಿಲ್ಲ. ನನ್ನ ಗಮನಕ್ಕೆ ಮತ್ತು ಅರಿವಿಗೆ ಬಂದ ಸಂಗತಿಯನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ ಅಷ್ಟೆ.

ನೈತಿಕವಾಗಿ ಅಧಃಪತನ ಹೊಂದಿದ ವ್ಯಕ್ತಿಯನ್ನೂ ಮತ್ತು ನೈತಿಕವಾಗಿ, ನಿಷ್ಠುರವಾಗಿ ತನ್ನ ವೈಯಕ್ತಿಕ ಬದುಕನ್ನು ನಿರ್ಮಲವಾಗಿರುವಂತೆ ನೋಡಿ ಕೊಂಡವರನ್ನೂ ಸಮಾಜ ಯಾವ ರೀತಿ ನಡೆಸಿಕೊಳ್ಳುತ್ತದೆ ಎಂಬ ವಿಚಾರವನ್ನು ನನ್ನ ಬದುಕಿನಲ್ಲಿ, ಚಿಕ್ಕಂದಿನಲ್ಲಿ ನಾನು ಕಂಡ ಎರಡು ಘಟನೆಗಳು, ಮುಂದೆ ನಾನು ಬೆಳೆದು ದೊಡ್ಡವನಾದಾಗ ನನ್ನ ಬದುಕನ್ನು ರೂಪಿಸಿಕೊಳ್ಳಲು ಬಹುವಾಗಿ ಪ್ರಭಾವ ಬೀರಿದವು. ಈ ಎರಡೂ ಘಟನೆಗಳಲ್ಲಿಯೂ ಪ್ರಧಾನ ಪಾತ್ರ ನನ್ನ ಅಪ್ಪನದಾಗಿತ್ತು.

ನನ್ನ ಅಪ್ಪ ಕೊಳ್ಳೇಗಾಲ ಎಂಬ ಊರಿನಲ್ಲಿ ಮಾಸ್ತರಾಗಿ ಕೆಲಸ ಮಾಡುತ್ತಿದ್ದ ಸಮಯ. ತನ್ನ ವರಮಾನಕ್ಕೆ ತಕ್ಕಂತೆ ಒಂದು ಸಣ್ಣ ಮನೆಯನ್ನು ಬಾಡಿಗೆ ಪಡೆದು ಅದರಲ್ಲಿ ಸಂಸಾರ ನಡೆಸುತ್ತಿದ್ದರು. ಆ ಚಿಕ್ಕ ಮನೆಯಲ್ಲಿಯೇ ನಮ್ಮ ಸಂಸಾರ ಸಾಗುತ್ತಿತ್ತು. ಆ ಮನೆ ಈಗಿನ ಕಾಲಕ್ಕೆ ಹೋಲಿಸಿದರೆ ಸಾಕಷ್ಟು ವಿಶಾಲವಾಗಿಯೇ ಇತ್ತು. ಅಂದಿನ ವಿನ್ಯಾಸಕ್ಕೆ ತಕ್ಕಂತೆ ಅದೂ ಒಂದು ತೊಟ್ಟಿ ಮನೆ. ಮನೆಯ ಮಧ್ಯದಲ್ಲಿ ತೊಟ್ಟಿ. ಅದರ ಸುತ್ತಲೂ ಚೌಕಾಕಾರದಲ್ಲಿದ್ದ ಹೆಂಚು ಹೊದೆಸಿದ್ದ ಸೂರು. ಇದನ್ನು ದಾಟಿಕೊಂಡು ಮುಂದೆ ಹೋದರೆ ಹಜಾರ ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಅಡುಗೆ ಕೋಣೆ. ಹಿತ್ತಲಬಾಗಿಲಿನಿಂದ ಹಿತ್ತಲಿಗೆ ಬಂದರೆ ಅಲ್ಲಿ ಸ್ನಾನದ ಮನೆ ಅದರಿಂದ ಸಾಕಷ್ಟು ದೂರದಲ್ಲಿ ಪಾಯಿಖಾನೆ- ಹೀಗಿತ್ತು ಅಂದಿನ ಮನೆಗಳ ವಿನ್ಯಾಸ.

ಹಜಾರದಲ್ಲಿಯೇ ಮನೆಯವರೆಲ್ಲ ಮಲಗುತ್ತಿದ್ದರು. ಈಗಿನಂತೆ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ಪ್ರತ್ಯೇಕ ಕೋಣೆ ಅದಕ್ಕೆ ಅಟ್ಯಾಚ್ ಬಾತ್‍ರೂಂ ಎಂಬ ವ್ಯವಸ್ಥೆ ಇರಲಿಲ್ಲ. ಶ್ರೀಮಂತರ ಮನೆಗಳಲ್ಲಿ ಇದ್ದಿರಬೇಕು. ಆದರೆ ಸಾಮಾನ್ಯ ಅಂದರೆ ನನ್ನಂಥವರು ಯಾವ ಶ್ರೀಮಂತನ ಮನೆಯನ್ನೂ ಕಂಡಿರಲಿಲ್ಲ. ಅದರ ಅವಶ್ಯಕತೆ ಸಹ ನಮಗೆ ಇರಲಿಲ್ಲ. ವಾಸಿಸಲು ಇಷ್ಟೆಲ್ಲ ಸೌಲಭ್ಯಗಳು ಇರಬೇಕು, ಹೀಗೆಯೇ ವಾಸಿಸಬೇಕು ಎಂದೆಲ್ಲ ಯಾವ ಕಲ್ಪನೆಯೂ ಸಹಾ ಬಾಲ್ಯದಲ್ಲಿ ನನಗಿರಲಿಲ್ಲ. ಇಷ್ಟೆಲ್ಲಾ ಅನುಕೂಲಗಳನ್ನು ಹೊಂದಿಸಿಕೊಂಡು ಅತ್ಯಂತ ಸೌಖ್ಯದಿಂದ ದೈನಂದಿನ ಬದುಕನ್ನು ಸಾಗಿಸಬಹುದು ಎಂದು ಯೋಚಿಸಿದವರಲ್ಲ ನನ್ನಂಥವರು.

ಹಣಕಾಸಿನ ಸೌಕರ್ಯ ಇದ್ದವರೂ ಸಹ ವಾಸದ ಮನೆಗಳನ್ನು ಅಂದಿನ ಕಾಲಕ್ಕೆ ಲಭ್ಯವಿರುವ ಸೌಕರ್ಯಗಳನ್ನು ಅಳವಡಿಸಿಕೊಂಡು, ಏಕೆ ಸುಖವಾಗಿಬಾಳಲು ಪ್ರಯತ್ನಿಸಲೇ ಇಲ್ಲ ಎಂದು ಈಗ ಅನಿಸುತ್ತದೆ. ಕೆಲವು ಕನಿಷ್ಠ ಸೌಲಭ್ಯಗಳನ್ನಾದರೂ ಮಾಡಿಕೊಳ್ಳಬಹುದಾಗಿತ್ತು ಎಂದೆನಿಸುತ್ತದೆ. ಇರಲಿ ಈಗ ಅದನ್ನು ಚಿಂತಿಸಿ ಫಲವಿಲ್ಲ. ಕೊಳ್ಳೇಗಾಲಕ್ಕೆ ನಮ್ಮಪ್ಪನಿಗೆ ವರ್ಗವಾಗಿ ಮಾಸ್ತರಿಕೆ ಮಾಡಲು ಬಂದಾಗ ಮೇಲೆ ಹೇಳಿದ ಮನೆಯಲ್ಲಿದ್ದರು.

ಆ ಮನೆಯನ್ನು ನಮಗೆ ಬಾಡಿಗೆಗೆ ಕೊಟ್ಟಿದ್ದ ಮನೆ ಮಾಲೀಕ ಸಹ ಒಬ್ಬ ಮಾಸ್ತರೇ. ಅವನೂ ಸಹ ನಮ್ಮಪ್ಪ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿಯೇ ಮಾಸ್ತರನಾಗಿದ್ದ. ಸ್ವಲ್ಪ ಅನುಕೂಲದ ಕುಳ. ಎರಡು ಮೂರು ಮನೆಯ ಮಾಲೀಕನಾದ ಅವನು ಅವುಗಳನ್ನು ಬಾಡಿಗೆಗೆ ಕೊಟ್ಟು ಆ ಬೀದಿಗೆ ಹೆಚ್ಚು ಶ್ರೀಮಂತನಾದ ಕುಳನಾಗಿದ್ದ. ಶ್ರೀಮಂತನೆಂದರೆ ಶ್ರೀಮಂತಿಕೆಯೊಂದಿಗೆ ಕೆಲವು ಚಟಗಳು ಅಂಟಿಕೊಳ್ಳುವುದು ಸಹಜ. ಇವನೂ ಸಹ ಅದಕ್ಕೆ ಹೊರತಾದವನಲ್ಲ. ಅಲ್ಲಿಯೇ ಹತ್ತಿರದ ಪರಿವಾರದ ಕೇರಿಯ ಒಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ಅವಳ ನಡವಳಿಕೆ ಮಿಕ್ಕವರೊಡನೆ ವರ್ತಿಸುತ್ತಿದ ರೀತಿ ಅವಳ ಪ್ರವೃತ್ತಿ ಇವೆಲ್ಲವನ್ನೂ ನೋಡಿದರೆ ಅವಳು ರಾಮಾಯಣದ ತಾಟಕಾಸುರಿಯನ್ನೇ ನೆನಪಿಗೆ ತರುವಂತಿದ್ದಳು. ಈ ವಿಷಯ ಇವನ ಮನೆಯವರಿಗೂ ತಿಳಿದಿತ್ತು. ಅಷ್ಟೇಕೆ ಆ ಊರಿಗೇ ತಿಳಿದ ವಿಷಯ ಇದಾಗಿತ್ತು. ಅವನ ಮನೆಯವರು ಈ ವಿಷಯವನ್ನು ಹೆಚ್ಚು ಮಾಡದೆ ಹೇಗೋ ಬಾಳು ಸಾಗಿಸುತ್ತಿದ್ದರು. ಮನಸ್ಸಲ್ಲಿ ಎಷ್ಟು ಸಂಕಟ, ವ್ಯಥೆ ಇದ್ದರೂ, ಹೊರಗೆ ತೋರ್ಪಡಿಸದೇ ಮೌನವಾಗಿ ಸಹಿಸಿಕೊಂಡಿದ್ದರು.

ಆ ಮಹಿಳೆಯು ಅತ್ಯಂತ ಧೃಢಕಾಯದ ಮಹಿಳೆ. ಕಪ್ಪಗೆ ಭಾರೀ ಆಕಾರದ ಹೆಂಗಸು. ಜತೆಗೆ ವಿಪರೀತವಾದ ಉದ್ಧಟತನ ಬೇರೆ. ಇಡೀ ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತ, ಹೆಂಗಸರಿರಲಿ, ಗಂಡಸರನ್ನೂ ಸಹ ಬೆದರಿಸಿ ಗಂಡುಬೀರಿಯಂತೆ ತಿರುಗಾಡುತ್ತಿದ್ದಳು. ಅವಳ ಗಂಡುಬೀರಿತನಕ್ಕೆ ಹೆದರಿ ಅಲ್ಲಿದ್ದ ಸುತ್ತಮುತ್ತಲಿನವರಾರೂ ಅವಳ ತಂಟೆಗೆ ಬರುತ್ತಿರಲಿಲ್ಲ. ಈ ತಾಟಕಿಯು ಬೀದಿಯಲ್ಲಿ ಬಂದರೆ ಎಲ್ಲರ ಮನೆ ಬಾಗಿಲೂ ಬಂದ್. ಅವಳು ಯಾರ ಮನೆಯಲ್ಲಿ ಏನು ಕೇಳಿದರೂ ತಕ್ಷಣ ಕೊಟ್ಟುಕಳುಹಿಸಿ ಬಿಡುತ್ತಿದ್ದರು. ಅವಳೊಂದಿಗೆ ಯಾರೂ ಮಾತಿಗೆ ಇಳಿಯುತ್ತಿರಲಿಲ್ಲ. ಅಷ್ಟಲ್ಲದೇ ಅವಳು ಆ ಮಾಸ್ತರನ ಮನೆಯ ಹಿಂದೆಯೇ ಇದ್ದ ಮತ್ತೊಂದು ಮನೆಯ್ಲಲ್ಲಿಯೇ ಬಂದು ತಂಗಿದ್ದಳು. ತನ್ನ ಕೇರಿಯಲ್ಲಿದ್ದ ಅವಳ ಮನೆಯಲ್ಲಿರಲಿಲ್ಲ. ಅವಳ ಬೈಯ್ಗಳ ಹೊಯಿಲಿಗೆ ಮರುದನಿಕೊಡುವ ಧೈರ್ಯ ಯಾರಿಗೂ ಇರಲಿಲ್ಲ.

ನನ್ನ ಅಪ್ಪ ಈ ವಿಚಾರದ ಕಡೆ ಹೆಚ್ಚು ಗಮನ ಕೊಡದೆ ತನ್ನ ಪಾಡಿಗೆ ತನ್ನ ಕೆಲಸದಲ್ಲಿ ಮಗ್ನರಾಗಿದ್ದರು. ನಾನು ಕಂಡ ಹಾಗೆ ನನ್ನ ಅಪ್ಪನ ಗುಣ ಅಂದರೆ, ತಾನಾಗಿ ಕೆಣಕಿ ಯಾರ ತಂಟೆಗೂ ಹೋದವರಲ್ಲ. ಆದರೆ ಯಾರಾದರೂ ಕೆಣಕಿ ಕಿರಿಕಿರಿ ಮಾಡಿದರೆ ಅಂಥವರನ್ನು ಸುಮ್ಮನೇ ಬಾಯಿ ಮಾತಿನಲ್ಲೇ ಬೆದರಿಸಿಬಿಟ್ಟವರೇ ಅಲ್ಲ, ಎರಡು ಬಾರಿಸಿ ಬುದ್ಧಿ ಕಲಿಸದೇ ಬಿಡುತ್ತಿರಲಿಲ್ಲ. ಶಾಲೆಯಿಂದ ಬಂದ ಮೇಲೆ ಹಜಾರದ ಕೆಳಗೆ, ತೊಟ್ಟಿಯ ಹತ್ತಿರ ಹಾಕಿರುತ್ತಿದ್ದ ಒಂದು ಈಸಿಛೇರ್ ಮೇಲೆ ಒರಗಿ ಕುಳಿತು ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳುವುದು ನನ್ನ ಅಪ್ಪನ ಅಭ್ಯಾಸ. ಏನಾದರೂ ಗಹನವಾಗಿ ಓದಬೇಕಾದರೂ ಈಸಿಛೇರ್ ಮೇಲೆ ಒರಗಿಕೊಂಡೇ ಓದುತ್ತಿದ್ದರು.

ಒಂದು ಭಾನುವಾರದ ದಿನ ಶಾಲೆಗೆ ರಜ ಅಂದು ಮನೆಯಲ್ಲಿ ನನ್ನ ಅಪ್ಪನದೇ ಅಡುಗೆ. ಏಕೆಂದರೆ ನನ್ನ ತಾಯಿ ಎರಡು ದಿನದ ಹಿಂದೆಯೇ ನನ್ನ ತಾತನ ಮನೆಗೆ ಹೋಗಿದ್ದರು. ಅವರು ಹಿಂದಿರುಗಿ ಬರಲು ಇನ್ನೂ ಒಂದು ವಾರಬೇಕು. ಆ ಭಾನುವಾರದ ಮಧ್ಯಾಹ್ನ ವಿಪರೀತ ಸೆಕೆ. ಸುಡು ಬೇಸಗೆ ಬೇರೆ. ಅಡುಗೆ ಕೆಲಸ ಮುಗಿಸಿ ಎಂದಿನಂತೆ ತಮ್ಮ ನೆಚ್ಚಿನ ಈಸಿ ಛೇರ್‍ನಲ್ಲಿ ಒರಗಿಕೊಂಡು ಏನನ್ನೋ ಓದುತ್ತಿದ್ದರು ನಮ್ಮಪ್ಪ. ಸೆಕೆ ಕಾಲವಾದ್ದರಿಂದ ದಟ್ಟಿಪಂಚೆಮಾತ್ರ ಉಟ್ಟಿದ್ದರೇ ವಿನಃ ಸೊಂಟದ ಮೇಲಕ್ಕಕೆ ಏನನ್ನೂ ಧರಿಸಿರಲಿಲ್ಲ. ಅಡುಗೆ ಮಾಡಿ ಹರಿಯುತ್ತಿದ್ದ ಬೆವರನ್ನೂ ಒರಸಿಕೊಳ್ಳಲು ಒಂದು ತುಂಡು ಟವಲ್ ಮಾತ್ರ ಹೆಗಲ ಮೇಲೆ ಹಾಕಿಕೊಂಡಿದ್ದರು.

ಮಟ ಮಟ ಮಧ್ಯಾಹ್ನ, ಭಾನುವಾರವದ್ದರಿಂದ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದವು. ಆ ವಯಸ್ಸಿಗೆ ಸಹಜವಾಗಿ ಒಬ್ಬರನ್ನೊಬ್ಬರು ಓಡಿಸಿಕೊಂಡು ಹೋಗುವುದು, ಕೈಗೆ ಸಿಗದಂತೆ ಬಚ್ಚಿಟ್ಟುಕೊಳ್ಳುವುದು ಹೀಗೆ ಹಲವಾರು ರೀತಿಯ ಚೇಷ್ಟೆ ಮತ್ತು ಪುಂಡಾಟಗಳಲ್ಲಿ ತೊಡಗಿದ್ದವು.

ನನ್ನ ಅಣ್ಣ ಸಹ ತನ್ನ ಓರಗೆಯ ಹುಡಗರೊಂದಿಗೆ ಆಟ ಆಡುತ್ತಿದ್ದ. ಆಡುತ್ತ ಆಡುತ್ತಾ ಈ ತಾಟಕಾಸುರಿಯು ಇದ್ದ ಮನೆಯ ಒಳಗೆ ನುಗ್ಗಿದ. ಯಾವುದೋ ಹುಡುಗ ಬಾರಿಸಿದ ಚೆಂಡು ಆ ಮನೆಯೊಳಕ್ಕೆ ಬಿದ್ದಿತು. ಅದನ್ನೆತ್ತಿಕೊಳ್ಳುವ ಆತುರದಲ್ಲಿ ಹುಡುಗಾಟಿಕೆಯಿಂದ ಒಳಗೆ ನುಗ್ಗಿದ. ಇದನ್ನು ಕಂಡ ತಾಟಕಿ ಚೆಂಡನ್ನು ತಾನು ಎತ್ತಿಕೊಂಡು, ಹೀನಾಮಾನವಾಗಿ ವಾಚಾಮಗೋಚರವಾಗಿ ಬಯ್ಯುತ್ತಾ, ನನ್ನ ಅಣ್ಣನನನ್ನು ಅಟ್ಟಿಸಿಕೊಂಡು ಬಂದಳು. ಇವಳಿಂದ ರಕ್ಷಣೆ ಪಡೆಯಲು ಬೇರೇನೂ ದಾರಿ ತೊರದೆ ಪಕ್ಕದಲ್ಲಿಯೇ ಇದ್ದ ನಮ್ಮ ಮನೆಗೆ ಓಡಿಬಂದು ಓದುತ್ತಾ ಕುಳಿತಿದ್ದ ನನ್ನ ಅಪ್ಪನ ಹಿಂದೆ ನಿಂತ.

ಮಹಾ ಬಜಾರಿಯಾದ ತಾಟಕಿ ಮನೆಯಲ್ಲಿ ನನ್ನ ಅಪ್ಪ, ಅದೂ ಒಬ್ಬರು ಪಾಠ ಹೇಳುವ ಮೇಷ್ಟ್ರು ಇದ್ದಾರೆ ಅವರು ಮನೆ ಯಜಮಾನ ಎಂದೂ ನೋಡದೆ ನನ್ನ ಮನೆಯೊಳಕ್ಕೆ ನನ್ನ ಅಪ್ಪನ ಹಿಂದೆ ಅವಿತಿದ್ದ ನನ್ನಣ್ಣನನ್ನು ಹಿಡಿಯಲು ಸೀದಾ ನುಗ್ಗಿಯೇ ಬಿಟ್ಟಳು. ಇದನ್ನು ಕಂಡ ನನ್ನಪ್ಪ ಎದ್ದು ನಿಂತು, “ಏಯ್ ಏನದು, ಯಾಕೆ ನುಗ್ತೀಯ, ನಿಲ್ಲು” ಎಂದು ಗದರಿಸಿದರು.

ಈ ರಾಕ್ಷಸಿಗೆ ಈ ರೀತಿ ಯಾರಾದರೂ ಅವಳನ್ನು ಎದುರಿಸಿ ಮಾತನಾಡಿದ್ದನ್ನು ಕಂಡಿದ್ದೇ ಇಲ್ಲ. ಅವಳ ನಿರಂಕುಶ ಪ್ರಭುತ್ವಕ್ಕೆ ಧಕ್ಕೆ ಬಂದಿದ್ದೇ ಇಲ್ಲ. ಇದೇನಿದು ಇವನಾರೋ ತನಗೆ ಎದುರಾಡುತ್ತಾನಲ್ಲ ಎಂದು ತಿಳಿದಳು. ಅದಲ್ಲದೆ ಸುಸಂಸ್ಕೃತ ರೀತಿಯಲ್ಲಿ ವ್ಯವಹರಿಸುವ ಅಭ್ಯಾಸವೇ ಅವಳಿಗಿರಲಿಲ್ಲ. ಅವಳದು ಅಪ್ಪಟ ರಾಕ್ಷಸೀ ಪ್ರವೃತ್ತಿ. ಅಂಥವಳಿಂದ ಮಾನವ ಸಹಜವಾದ ಪ್ರತಿಕ್ರಿಯೆ ಎದುರು ನೋಡುವುದು ಮುಟ್ಠಾಳತನ.

ಯಾವಾಗ ನನ್ನಪ್ಪ ಎದ್ದುನಿಂತು ನನ್ನಣ್ಣನನ್ನು ಹಿಡಿಯುವ ಪ್ರಯತ್ನವನ್ನು ತಡೆದರೋ, ತಕ್ಷಣ ಬಹಳ ಕೋಪಬಂತು ಆ ತಾಟಕಿಗೆ. ಮಿಕ್ಕ ಹೆಂಗಸರುಗಳಾಗಿದ್ದರೆ, ಸ್ತ್ರೀಸಹಜವಾಗಿ, ಮನೆಒಳಕ್ಕೆ ಗಂಡು ಬೀರಿಯಂತೆ ನುಗ್ಗುತ್ತಿರಲಿಲ್ಲ. ಹಾಗೆ ಬಂದಿದ್ದರೂ ಮನೆ ಯಜಮಾನ ಇದ್ದಾನಲ್ಲ ಎಂದು ಹಿಂಜರಿದು, ನಡೆದ ವಿಷಯವನ್ನು ತಿಳಿಸಿ ತಾನು ಯಾಕೆ ಮನೆಯೊಳಗೆ ಬಂದೆ ಎಂದು ಹೇಳುತ್ತಿದ್ದರೋ ಏನೋ. ಅಂತೂ ಈ ತಾಟಕಿ ಹಾಗೆ ಸುತರಾಂ ಯಾರೂ ನಡೆದುಕೊಳ್ಳುತ್ತಿರಲಿಲ್ಲ. ಆದರೆ ಮಾನವ ಸಹಜವಾದ ನಡವಳಿಕೆಯೇ ಇಲ್ಲದ, ಈ ಅನಾಗರೀಕ ಹೆಂಗಸಿನಿಂದ ನಯವಾದ ನಡವಳಿಕೆಯನ್ನು ಹೇಗೆ ಎದುರು ನೋಡುವುದು.

ನನ್ನಪ್ಪ ಎದ್ದುನಿಂತು ಅವಳು ಮುಂದೆ ಬರದಂತೆ ತಡೆದರೋ, ಕೋಪದಿಂದ ಆ ಹೆಂಗಸು ಏನು ಮಾಡಿದಳು ಗೊತ್ತೆ. ಸೀದ ನನ್ನಪ್ಪನ ನಡುವಿಗೆ ಕೈ ಹಾಕಿ ಅವರು ಉಟ್ಟಿದ್ದ ಧೋತರವನ್ನೇ ಸೆಳೆದು ಬಿಡಲು ಮುಂದಾಗಿ ಬಿಟ್ಟಳು. ಈ ಅನಿರೀಕ್ಷಿತ ಧಾಳಿಯಿಂದ ಸ್ವಲ್ಪ ಸಾವರಿಸಿಕೊಂಡು ಒಂದು ಕೈಯಿಂದ ನಡುವಿನಲ್ಲಿ ಉಟ್ಟಿದ್ದ ಪಂಚೆಯನ್ನು ಬಲವಾಗಿ ಹಿಡಿದು ತನ್ನ ಎಡದ ಕಾಲೆತ್ತಿ ಆ ತಾಟಕಿಯ ಎದೆಗೆ ಝಾಡಿಸಿ ಒದ್ದರು. ಗರಡಿ ಸಾಮು ಮಾಡಿ ಲಾಘವವಾದ ದೇಹಧಾರ್ಡ್ಯ ಹೊಂದಿದ್ದ ನನ್ನಪ್ಪನ ಒದೆ, ಅದೂ ಎದೆಗೆ ಬಿದ್ದ ಆ ಒದೆಯು ಎಷ್ಟು ಜೋರಾಗಿತ್ತೆಂದರೆ ಆ ರಾಕ್ಷಿಸಿ ನಿಂತ ಜಾಗದಿಂದ ಚೆಂಡಿನಂತೆ ಎಗರಿ ಮೂರು ಉರುಳು ಉರುಳಿ ತೊಟ್ಟಿಯ ಮಧ್ಯಕ್ಕೆ ಹೋಗಿ ಧೊಪ್ಪೆಂದು ಬಿದ್ದಳು. ಮಿಕ್ಕ ಯಾರಾಗಿದ್ದರೂ ಆ ಒದೆತಕ್ಕೆ ಅಲ್ಲಿಯೇ ಪ್ರಾಣ ಬಿಡುತ್ತಿದ್ದರೋ ಏನೋ. ಆದರೆ ಈ ಹೆಂಗಸು ಸ್ವಲ್ಪ ಸಮಯ ದಲ್ಲಿಯೇ ಸಾವರಿಸಿಕೊಂಡು ಮೇಲಕ್ಕೆ ಎದ್ದು, ಸೀದ ಅಲ್ಲಿಂದ ಹೊರಟು ಹೋಯಿತು. ಆ ಊರಿನ ಎಲ್ಲರನ್ನೂ ಕಾಡುತ್ತಿದ್ದ ಆ ಮಾರಿಯ ಅಹಂಕಾರ ಅಂದು ಅಡಗಿ ಹೋಯಿತು. ರಾಮಾಯಣದಲ್ಲಿ ರಾಮನು ತಾಟಕಾಸುರಿಯೆಂಬ ರಾಕ್ಷಸಿಯ ಸಂಹಾರ ಮಾಡಿದ್ದನ್ನು ಓದಿದ್ದೇವೆ. ಈ ಸಂಭವವು ಆ ರಾಮಾಯಣದ ತಾಟಕಾಸಂಹಾರದ ನೆನಪು ತರುವಂತಿತ್ತು.

ಇವೆಲ್ಲಾ ಕಣ್ಣುಮುಚ್ಚಿ ತೆಗೆಯುವುದರೊಳಗೆ ನಡೆದು ಹೋಯಿತು. ನನ್ನ ಅಪ್ಪ ಅಂಗಿ ತೊಟ್ಟು ಸರಸರನೇ ಹೊರಕ್ಕೆ ನಡೆದರು. ಇವರೆಲ್ಲಿಗೆ ಹೋಗುತ್ತಾರೆ ಎಂದು ತಿಳಿಯದ ನಾವು ಅವರಿಂದೆಯೇ ಅವರಿಗೆ ಕಾಣದಂತೆ ಹಿಂಬಾಲಿಸಿದಾಗ ಅವರು ಹೋದದ್ದು ಆ ಊರಿನ ಪೋಲಿಸ್ ಸಬ್‍ಇನ್ಸ್‌ಪೆಕ್ಟರ್‌ ಮನೆಗೆ. ಆ ಸಬ್‍ಇನ್ಸ್‌ಪೆಕ್ಟರ್‌ ತಮಿಳ, ನನ್ನಪ್ಪ ತಮಿಳು ಚೆನ್ನಾಗಿ ಮಾತನಾಡುತ್ತಿದ್ದರು. ಅದರಿಂದ ಅವನೂ ತಮಿಳು ಭಾಷೆಯಲ್ಲಿ ಸಂಭಾಷಿಸಲು ನಮ್ಮಪ್ಪನ ಸ್ನೇಹ ಮಾಡಿದ್ದ.

ಸೀದಾ ಹೋದವರೆ ಆ ಸಬ್‍ಇನ್ಸ್‌ಪೆಕ್ಟರಿಗೆ ನಡೆದೆಲ್ಲವನ್ನು ತಿಳಿಸಿ ಒಂದು ಕಂಪ್ಲೇಂಟ್ ಕೊಟ್ಟರು. ಸಬ್‍ಇನ್ಸ್‌ಪೆಕ್ಟರ್‌ ಅಲ್ಲಿಯೇ ಇದ್ದ ಒಬ್ಬ ಪೇದೆಯನ್ನು ಕರೆದು ಅವಳನ್ನು ಕರೆತರುವಂತೆ ಅಪ್ಪಣೆ ಮಾಡಿದ. ಸರಿ ತಾಟಕಿಯನ್ನು ಕರೆತರಲು ಪೇದೆ ಹೊರಟ. ಸ್ವಲ್ಪ ಸಮಯದ ನಂತರ ಹಿಂದಿರುಗಿ ಬಂದ ಆ ಪೇದೆ ಆ ಹೆಂಗಸು ಅವಳ ಮನೆಯಲ್ಲಿ ಇಲ್ಲ. ಈಗ ಎಲ್ಲಿದ್ದಾಳೋ ಗೊತ್ತಿಲ್ಲ ಎಂದು ವರದಿ ಮಾಡಿದ. ಇದು ಹೀಗೇ ಆಗಬಹುದು ಎಂದು ನಿರೀಕ್ಷಿಸಿದ್ದ ನನ್ನ ಅಪ್ಪ, ಅವಳ ಪ್ರಿಯಕರ ಆ ಮಾಸ್ತರ ಅವಳನ್ನು ಅಡಗಿಸಿ ಇಟ್ಟಿರಬಹುದು ಎಂಬ ಸೂಕ್ಷ್ಮವನ್ನು ಸಬ್‍ಇನ್ಸ್‌ಪೆಕ್ಟರಿಗೆ ತಿಳಿಸಿದರು.

ಇದರಿಂದ ಕೋಪಗೊಂಡ ಸಬ್‍ಇನ್ಸ್‌ಪೆಕ್ಟರ್‌ ತಕ್ಷಣ “ಆ ಮಾಸ್ತರನ್ನೇ ಎಳೆದುಕೊಂಡು ಬಾ” ಎಂದು ಪೇದೆಗೆ ಅಪ್ಪಣೆ ಮಾಡಿಬಿಟ್ಟ.

ಇಷ್ಟರಲ್ಲಿ ನಾವು ತಂಗಿದ್ದ ವಠಾರ ಅದರ ಹಿಂದಿನ ಮುಂದಿನ ಬೀದಿ ಜನರಿಗೆಲ್ಲ ಈ ಘಟನೆ ತಿಳಿದು ಅಲ್ಲಲ್ಲಿ ನಿಂತು ಇದರ ಬಗ್ಗೆಯೇ ಗುಸು ಗುಸು ಮಾತನಾಡುತ್ತಿದ್ದರು. ತಾಟಕಿಯನ್ನು ಪೋಲೀಸರು ಹುಡುಕುತ್ತಿರುವುದು, ಅವಳನ್ನು ಈ ಮಾಸ್ತರು ಅಡಗಿಸಿಟ್ಟಿದ್ದು ಈ ಎಲ್ಲ ವಿಷಯ ಅವರ ಮಾತಿನ ಗ್ರಾಸವಾಗಿತ್ತು.  ಆ ತಾಟಕಿಯ ಜೋರಿಗೆ ಹೆದರಿ ಸುಮ್ಮನಿದ್ದವರೆಲ್ಲ ಈಗ ಅವಳ ಗರ್ವಭಂಗವಾಗಿ ಅವಳು ಪೋಲೀಸರ ಅತಿಥಿಯಾಗುವ ಸಮಯ ಬಂದಾಗ, ಬಹಳ ನಿರಾಳವಾಗಿ ಉಸಿರಾಡುವಂತಾಯಿತು. ಎಲ್ಲಡೆಯೂ ಒಂದು ರೀತಿ ಸಂಭ್ರಮದ ವಾತಾವರಣ. ಯಾವುದೋ ಒಂದು ಪೀಡೆ ತೊಲಗಿದಂತೆ ಎಲ್ಲರೂ ಸಡಗರದಿಂದ ಓಡಾಡುತ್ತಿದ್ದರು. ಎಲ್ಲರ ಬಾಯಲ್ಲೂ ಇದೇ ಮಾತು. ಪೋಲೀಸರು ತನ್ನನ್ನೇ ಎಳೆದುಕೊಂಡು ಹೋಗಲು ಬರುತ್ತಿದ್ದಾರೆ ಎಂದು ತಿಳಿದ ಆ ಮಾಸ್ತರು ನನ್ನಪ್ಪನ ಬಳಿಗೆ ಓಡಿ ಬಂದು ಕಾಲಿಗೆ ಬಿದ್ದು ಬೇಡಿಕೊಂಡ. ಹೇಗಾದರೂ ಮಾಡಿ ತನ್ನನ್ನು ಪೋಲೀಸರ ಬಂಧಿಸದಂತೆ ಕಾಪಾಡಬೇಕು. ಇದಕ್ಕಾಗಿ ತಾನು ಏನು ಹೇಳಿದರೂ ಮಾಡಲು ತಯಾರು ಎಂದು ಅಂಗಲಾಚತೊಡಗಿದ. ಅಷ್ಟರವರೆಗೂ ನಡೆದ ಘಟನೆಯಿಂದ ವ್ಯಗ್ರರಾಗಿದ್ದ ನನ್ನ ಅಪ್ಪ ಆಗ ಸ್ವಲ್ಪ ಶಾಂತರಾಗಿದ್ದರು. ಅದಲ್ಲದೆ ಸುತ್ತ ನೆರೆದಿದ್ದವರೂ ಸಹ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು. ಆ ಮಾಸ್ತರಿಗೆ “ಇನ್ನುಮುಂದೆ ಈ ತಾಟಕಿ ಆ ವಠಾರದಲ್ಲಿರಕೂಡದು ಮತ್ತು ಅವಳು ಅಲ್ಲಿರುವ ಯಾರ ತಂಟೆಗೂ ಬರಬಾರದು.” ಈ ಷರತ್ತಿಗೆ ಒಪ್ಪಿದರೆ ನನ್ನ ಅಪ್ಪನ ಮನ ಒಲಿಸಿ ಕಂಪ್ಲೇಂಟು ಹಿಂದಕ್ಕೆ ಪಡೆಯುವಂತೆ ಮಾಡುವುದಾಗಿ ತಾಕೀತು ಮಾಡಿದರು.

ಭಯದಿಂದ ದೈನ್ಯನಾಗಿದ್ದ ಆ ಕಾಮುಕ ಮಾಸ್ತರು ಎಲ್ಲಾ ಷರತ್ತಿಗೂ ಒಪ್ಪಿ ಅಂಗಲಾಚತೊಡಗಿದ. ಸರಿ ಅಲ್ಲಿದ್ದವರ ಮಾತಿಗೂ ಒಂದು ಮರ್ಯಾದೆ ಆ ಕೊಡಬೇಕಲ್ಲ ಎಂದು ನನ್ನ ಅಪ್ಪ ಆ ಮಾಸ್ತರನ್ನು ಕರೆದುಕೊಂಡು ಸಬ್‍ಇನ್ಸ್‌ಪೆಕ್ಟರಿನ ಹತ್ತಿರ ಹೋಗಿ ನಡೆದುದೆಲ್ಲ ಪುನಃ ಹೇಳಿ. “ಒಳ್ಳೆಯ ನಡೆತೆಗೆ ಒಂದು ಅವಕಾಶ ಕೊಡೋಣ, ಈ ವಿಷಯ ಇಲ್ಲಿಗೇ ಬಿಟ್ಟು ಬಿಡಿ” ಎಂದರು. ಆ ಸಬ್‍ಇನ್ಸ್‌ಪೆಕ್ಟರ್‌ ಈ ಮಾತಿಗೆ ಒಪ್ಪಿದ ಆದರೆ ಅದಕ್ಕೆ ಮುಂಚೆ ಮಾಸ್ತರಿಗೆ ಪೋಲೀಸು ಭಾಷೆಯಲ್ಲಿ ಒಂದು ಸಹಸ್ರನಾಮಾರ್ಚನೆ ಮಾಡಿ ನಂತರ ಬಿಟ್ಟ.

ಅನೀತಿ ಎಷ್ಟೇ ವಿಜೃಂಭಿಸಿದರೂ ಕಡೆಗೆ ಅದು ಅಂತ್ಯವಾಗಲೇಬೇಕು. ಅನಿವಾರ್ಯಕಾರಣಗಳಿಂದ ಜನರು ಸಹಿಸಬಹುದು ಸುಮ್ಮನಿರಬಹುದು. ಆದರೆ ಅದರ ವಿರುದ್ಧ ಅವರ ಮನಸ್ಸಿನಲ್ಲಿ ವಿರೋಧ ಇದ್ದೇ ಇರುತ್ತದೆ. ಅದು ಗುಪ್ತಗಾಮಿನಿಯಾಗಿ ಜನರ ಮನಸ್ಸಿನಲ್ಲಿ ಹರಿಯುತ್ತಲೇ ಇರುತ್ತದೆ. ಪ್ರಕಟಗೊಳ್ಳಲು ಒಂದು ಪ್ರಚೋದನೆ ಬೇಕು ಅಷ್ಟೆ. ಅಂದು ನನ್ನ ಅಪ್ಪ ನೈತಿಕವಾಗಿ ಎಷ್ಟು ಎತ್ತರದಲ್ಲಿದ್ದರು ಅವರನ್ನು ಸುತ್ತ ಇದ್ದವರು ಎಷ್ಟು ಮರ್ಯಾದೆಯಿಂದ ಕಾಣುತ್ತಿದ್ದರು ಎಂಬುದೆಲ್ಲವನ್ನೂ ನೆನಸಿಕೊಂಡರೆ ನನ್ನಪ್ಪನ ಬಗ್ಗೆ ಇರುವ ಗೌರವ ನನ್ನ ಮನಸ್ಸಿನಲ್ಲಿ ಇಮ್ಮಡಿಯಾಗುತ್ತದೆ. ಸಾತ್ವಿಕತೆ ಮತ್ತು ರಾಕ್ಷಸೀ ಪ್ರವೃತ್ತಿಯ ನಡುವೆ ನಡೆದ ಈ ಹೋರಾಟದಲ್ಲಿ ಸಾತ್ವಿಕವು ಜಯಿಸಿದ್ದನ್ನು ನಾನು ಈಗ ನೆನಪಿಸಿಕೊಂಡು ಹೆಮ್ಮೆ ಪಡುತ್ತೇನೆ.

ಈ ಅಧ್ಯಾಯದ ಶೀರ್ಷಿಕೆಯಲ್ಲಿ ಮಲ್ಲಿನಾಥನ ಪುರಾಣ ಎಂದಿದೆ. ಕನ್ನಡದ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ಮಲ್ಲಿನಾಥಪುರಾಣದ ಬಗ್ಗೆ ಏನಾದರೂ ಬರೆದಿದ್ದೇನೆಂದು ತಿಳಿಯಬೇಕಿಲ್ಲ. ಆ ಪುರಾಣಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಈ ವಿಷಯದ ಕಥಾನಾಯಕಿಯ ಹೆಸರನ್ನು ವಿಂಡಂಬನಾತ್ಮಕವಾಗಿ ಹೀಗೆ ಅಳವಡಿಸಿಕೊಳ್ಳಲಾಗಿದೆ ಅಷ್ಟೆ. ಈ ಅಧ್ಯಾಯದ ಕಥಾನಾಯಕಿಯ ಹೆಸರು ಮಲ್ಲಿ ಮತ್ತು ಅವಳ ಪ್ರಿಯಕರ ಮಲ್ಲಿನಾಥ – ಅದರಿಂದ ಮಲ್ಲಿನಾಥನ ಪುರಾಣ ಅಷ್ಟೆ.

ನನ್ನೂರಿನ ಹತ್ತಿರದಲ್ಲಿ ಮತ್ತೊಂದು ಹಳ್ಳಿ ಇತ್ತು. ಆ ಹಳ್ಳಿಯ ಹೆಸರಿನ ಪ್ರಸ್ತಾಪ ಇಲ್ಲಿ ಬೇಡ. ಹಳ್ಳಿಯ ಶಾನುಭೋಗನ ಅವಾಂತರದ ಕಥೆ ಇಲ್ಲಿದೆ. ಎಂದಿನಂತೆ ಇದೂ ಸಹ ಒಂದು ಅನೈತಿಕ ಸಂಬಂಧದ ಕತೆಯೇ. ಈ ಶಾನುಭೋಗ ಆ ಪ್ರದೇಶದಲ್ಲಿ ಹೆಚ್ಚು ಶ್ರೀಮಂತ. ತೋಟತುಡಿಕೆ ಮನೆ ಎಲ್ಲ ಇತ್ತು ಇವನಿಗೆ. ಅದರಿಂದ ಆ ಪ್ರದೇಶದ ಹೆಚ್ಚು ಪ್ರಭಾವಶಾಲೀ ಮನುಷ್ಯರಲ್ಲಿ ಒಬ್ಬನಾಗಿದ್ದ. ಈ ಕಾರಣಗಳಿಂದಾಗಿ ಇವನ ಪ್ರತಾಪ ಸ್ವಲ್ಪ ಹೆಚ್ಚಾಗಿತ್ತು. ಅಮಾಯಕರನ್ನು ಗೋಳು ಹುಯ್ದುಕೊಳ್ಳುತ್ತಿದ್ದ ಮತ್ತು ಸ್ವಲ್ಪ ಮೆತ್ತನೆಯ ವ್ಯಕ್ತಿಗಳ ಮೇಲೆ ಬಹಳ ದರ್ಬಾರು ಮಾಡುತ್ತಿದ್ದ. ಇವನ ಬಗ್ಗೆ ಅನೇಕರಿಗೆ ಒಳಗೊಳಗೇ ಅಸಮಾಧಾನ ಇದ್ದರೂ ಮೇಲೆ ತೋರ್ಪಡಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದರು. ಈ ಜೋರಿನ ಮನುಷ್ಯ ಇಷ್ಟಕ್ಕೆ ಸುಮ್ಮನಿರಲಿಲ್ಲ. ನಮ್ಮೂರಿನ ಒಂದು ಕೇರಿಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಸಹ ಹೊಂದಿದ್ದ. ಇದು ಎಲ್ಲರಿಗೂ ತಿಳಿದಿದ್ದರೂ ಅಂದಿನ ಸಮಾಜದ ವ್ಯವಸ್ಥೆಯಂತೆ ಅದನ್ನು ಒಪ್ಪಿಕೊಂಡು ಸುಮ್ಮನಿದ್ದರು. ಇವನ ವರ್ತನೆ ಇವರಿಗೆ ಸರಿಬೀಳದಿದ್ದರೂ ಅವನ ಶಾನುಭೋಗಿಕೆ ಮತ್ತು ಶ್ರೀಮಂತಿಕೆಯ ದರ್ಪಕ್ಕೆ ಹೆದರಿ ಸಹಿಸಿಕೊಳ್ಳುತ್ತಿದ್ದರು.

ಈ ವ್ಯಕ್ತಿ ಒಂದು ಸಲ ನನ್ನ ಅಪ್ಪನೊಂದಿಗೆ ಜಗಳ ತಗಾದೆ ತೆಗೆದು ಸಾಕಷ್ಟು ಘರ್ಷಣೆ ಉಂಟುಮಾಡಿದ್ದ. ಆದರೆ ನನ್ನ ಅಪ್ಪನಿಗೆ ಇದ್ದ ನೈತಿಕ ಬಲ ಇವನಿಗಿರಲಿಲ್ಲ. ಆದ್ದರಿಂದ ಹೆಚ್ಚು ಗಲಾಟೆ ಮಾಡಿ ಪರಿಸ್ಥಿತಿ ವಿಕೋಪಕ್ಕೆ ಹೋದರೆ, ನನ್ನ ಅಪ್ಪನಿಂದ ಹೊಡೆತ ತಿನ್ನಬೇಕಾಗುತ್ತದೆ ಎಂದು ಅವನಿಗೂ ತಿಳಿದಿತ್ತು. ಒಟ್ಟಿನಲ್ಲಿ ಎಲ್ಲರೊಂದಿಗೂ ಸಾಮರಸ್ಯದಿಂದ ವರ್ತಿಸುವ ಬುದ್ಧಿ ಇವನಿಗೆ ಇರಲೇ ಇಲ್ಲ.

ನನ್ನೂರಿನಿಂದ ಸುಮಾರು 8 ಮೈಲು ದೂರದ ಕಾಡಂಚಿನ ಊರಿನ ಹತ್ತಿರ ಸ್ವಲ್ಪ ಜಮೀನು ಖರೀದಿಸಿ ಸಾಗುವಳಿ ಮಾಡಲು ಆ ಜಮೀನನ್ನು ಸಿದ್ಧಪಡಿಸುತ್ತಿದ್ದರು. ನನ್ನ ಅಪ್ಪ. ಈ ಕೆಲಸಕ್ಕಾಗಿ ದಿನಾ ಬೆಳಿಗ್ಗೆ ಸೈಕಲ್ಲಿನ ಮೇಲೆ ಆ ಜಮೀನಿಗೆ ಹೋಗುತ್ತಿದ್ದರು. ಈ ಶಾನುಭೋಗನ ಊರಿನಿಂದ ನನ್ನ ಅಪ್ಪ ಹೋಗುತ್ತಿದ್ದ ಜಮೀನಿನ ಮುಖ್ಯ ರಸ್ತೆಗೆ ಒಂದು ಕಾಲುದಾರಿ ಬಂದು ಸೇರುತ್ತಿತ್ತು. ಹಳ್ಳಿಯಿಂದ ಬೇರೆಲ್ಲಿಗೆ ಹೋಗಬೇಕಾದರೂ ಆ ಕಾಲುದಾರಿಯ ಮೂಲಕವೇ ಬಂದು ಮುಖ್ಯ ರಸ್ತೆಯನ್ನು ಸೇರಿಕೊಳ್ಳಬೇಕು. ಅಲ್ಲಿಂದ ಮುಂದಿನ ದಾರಿ. ಆ ದಾರಿ ಬಂದು ಮುಖ್ಯರಸ್ತೆಗೆ ಸೇರುವ ಜಾಗದಲ್ಲಿ ಒಂದು ಭಾರಿ ಆಲದಮರ ಅದರ ಕೆಳಗೆ ಜನರು ಕೂರಲು, ವಿಶ್ರಮಿಸಿಕೊಳ್ಳಲು ಒಂದೆರಡು ಕಲ್ಲಿನ ಆಸನಗಳಿದ್ದವು. ಕೆಲಸವಿಲ್ಲದೆ ಹಳ್ಳಿಗರು ಅದರ ಮೇಲೆ ಕುಳಿತು ಬೀಡಿಸೇದುತ್ತ ಹರಟೆ ಹೊಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಾಣಿಸುತ್ತಿತ್ತು. ದಿನಾಲು ನನ್ನ ಅಪ್ಪ ಆ ದಾರಿಯಲ್ಲಿಯೇ ಸೈಕಲ್ ತುಳಿದುಕೊಂಡು ಜಮೀನಿಗೆ ಹೋಗುತ್ತಿದ್ದರು. ಒಂದು ದಿನ ಹೀಗೆ ಯಥಾಪ್ರಕಾರ ಸೈಕಲ್ಲಿನಲ್ಲಿ ನನ್ನ ಅಪ್ಪ ಎಂದಿನಂತೆ ಜಮೀನಿಗೆ ಹೊರಟರು. ಶಾನುಭೋಗನ ಊರಿನ ದಾರಿ ಬಂದು ಸೇರುವ ಜಾಗಕ್ಕೆ ಬಂದಿದ್ದಾರೆ. ಅಲ್ಲಿಂದ ಮುಂದೆ ಸುಮಾರು ದೂರ ರಸ್ತೆ ಬೋರೆಯಾಗಿ ಸೈಕಲ್ ತುಳಿಯಲು ಸ್ವಲ್ಪ ಶ್ರಮವಾಗುತ್ತಿತ್ತು. ಆದ್ದರಿಂದ ಸಾಮಾನ್ಯವಾಗಿ ಎಲ್ಲರೂ ಅಲ್ಲಿ ಸೈಕಲ್‍ನಿಂದ ಇಳಿದು ಬೋರೆ ಮುಗಿಯುವವರೆಗೂ ಸೈಕಲ್ ತಳ್ಳಿಕೊಂಡು ಹೋಗಿ, ಮುಂದೆ ಬರುವ ಇಳಿಜಾರಿನಲ್ಲಿ ಮುಂದಕ್ಕೆ ಹೋಗುತ್ತಿದ್ದರು. ಇದರಿಂದ ಶ್ರಮವೂ ಕಡಿಮೆ ಆಗಿ ದೇಹದ ಶಕ್ತಿಯ ವ್ಯಯವೂ ಆಗುತ್ತಿರಲಿಲ್ಲ.

ನನ್ನ ಅಪ್ಪ ಸಹ ಈ ಪದ್ಧತಿಯನ್ನೇ ಅನುಸರಿಸುತ್ತಿದ್ದರು. ಆ ದಿವಸ ಈ ಕಾಲುದಾರಿಯು ಬಂದು ಸೇರುವ ಜಾಗದಲ್ಲಿ ಎಂದಿನಂತೆ ಸೈಕಲ್‍ನಿಂದ ಇಳಿದು ನಿಧಾನವಾಗಿ ಸೈಕಲ್ ತಳ್ಳಿಕೊಂಡು ಮುಂದೆ ಹೋಗುತ್ತಿದ್ದಾರೆ. ಆಗ ದೀಢೀರನೆ ಎಲ್ಲಿಂದಲೋ, “ಸ್ವಾಮಿ ಅಯ್ಯಂಗಾರ್ರೇ, ನಿಲ್ಲಿ ನಿಲ್ಲಿ” ಎಂಬ ಒಂದು ಆರ್ತಧ್ವನಿ ಕೇಳಿಸಿತು. ಇದೇನಪ್ಪ ಈ ಜಾಗದಲ್ಲಿ ನನ್ನನ್ನು ಯಾರು ಕರೆಯುತ್ತಿದ್ದಾರೆ ಎಂದು ತಿಳಿಯದೇ ನಡೆಯುತ್ತಿದ್ದ ನನ್ನ ಅಪ್ಪ ಅಲ್ಲಿಯೇ ನಿಂತರು. ನಿಂತವರೇ ಧ್ವನಿ ಎಲ್ಲಿಂದ ಬಂತು ಎಂದು ತಿಳಿಯಲು ಸುತ್ತಲೂ ತಮ್ಮ ದೃಷ್ಟಿ ಬೀರಿದರು. ಆಗ ಶಾನುಭೋಗನು ತನ್ನೂರಿನ ಕಾಲುದಾರಿಯಲ್ಲಿ ಸತ್ತೆನೋ ಕೆಟ್ಟೆನೋ ಎಂಬಂತೆ ಓಡಿ ಬರುತ್ತಿರುವುದು ಕಾಣಿಸಿತು. ಸರಿ ಇದೇನು ಗ್ರಹಚಾರ, ಇವನ್ಯಾಕೆ ಹೀಗೆ ಭಯದಿಂದ ಓಡಿಬರುತ್ತಿದ್ದಾನೆ. ಏನ್ ಬಂತೋ ಇವನಿಗೆ ಎಂದು ಅವನು ಮುಖ್ಯರಸ್ತೆಗೆ ಬಂದು ಸೇರುವವರೆಗೂ ನಿಂತಲ್ಲಿಯೇ ನಿಂತು ಅವನು ಬರಲಿ ಎಂದು ಕಾದರು.

ಅವನು ಬಂದವನೇ ನನ್ನ ಅಪ್ಪನ ಕಾಲಿಗೆ ಬಿದ್ದು,  “ಅಯ್ಯಂಗಾರ್ರೇ ಕಾಪಾಡಿ ಕಾಪಾಡಿ” ಎಂದು ಅಂಗಲಾಚುತ್ತಿದ್ದಾನೆ. ವಿಷಯ ಏನೆಂದು ತಿಳಿಯದ ನನ್ನ ಅಪ್ಪ “ಏಳಿ ಶಾನುಭೋಗರೇ ಇದೇನಿದು ವಿಪರೀತ. ಏನಾಯ್ತು? ಯಾಕೆ ಗಾಬರಿಯಾಗಿದ್ದೀರಿ?” ಎಂದರು.

“ಅಯ್ಯೋ ಅಯ್ಯಂಗಾರ್ರೆ ನೋಡಿ ಅಲ್ಲಿ” ಎಂದು ತನ್ನೂರಿನ ದಾರಿಯ ಕಡೆ ತೋರಿಸಿದ. ಆ ಕಡೆ ನೋಡಿದರೆ ಇವನ ಪ್ರಿಯಕರಿ, ಇವನ್ನನು ಊರಿನಿಂದ ಓಡಿಸಿಕೊಂಡು ಬಂದದ್ದು ತಿಳಿಯಿತು. ಓಡಿಬರುತ್ತಿದ್ದ ಅವಳು, ಶಾನುಭೋಗ ನನ್ನಪ್ಪನ ಜತೆಗೆ ಇದ್ದದ್ದನ್ನು ಕಂಡು ಮುಂದೆ ಬರದೆ ಆ ದಾರಿಯಲ್ಲಿಯೇ ಮರೆಯಾಗಿಬಿಟ್ಟಳು. ಆ ಊರಿನಲ್ಲಿ ಯಾರೇ ಆಗಲಿ ನನ್ನ ಅಪ್ಪನ ಮುಂದೆ ಉದ್ಧಟತನದಿಂದ ವರ್ತಿಸುತ್ತಿರಲಿಲ್ಲ. ಹಾಗಿತ್ತು ನನ್ನಪ್ಪನ ವರ್ಚಸ್ಸು ಮತ್ತು ಅವರ ನಡೆನುಡಿ ಎಲ್ಲ. ನೇರ ನುಡಿ, ಸಚ್ಚಾರಿತ್ರ್ಯ, ನ್ಯಾಯಪರತೆ ಇವೆಲ್ಲ ಸದ್ಗುಣಗಳಿಂದ ವರ್ತಿಸುತ್ತಿದ್ದ ನನ್ನಪ್ಪನ ಮುಂದೆ ಈ ರೀತಿಯಾದ ಹೀನವರ್ತನೆಗೆ ಆಸ್ಪದವಿರಲಿಲ್ಲ. ಈ ಶಾನುಭೋಗನನ್ನು ಅವನ ಊರಿನಿಂದಲೇ ಅಟ್ಟಿಸಿಕೊಂಡು ಬರುತ್ತಿದ್ದಳು ಅವಳು. ಇವನು ಮುಖ್ಯದಾರಿಯಲ್ಲಿ ತಪ್ಪಿಸಿಕೊಳ್ಳದಂತೆ ಅವಳ ಇಬ್ಬರು ತಮ್ಮಂದಿರು ದಾರಿಸೇರುವ ಜಾಗದಲ್ಲಿ ಇವನಿಗಾಗಿ ಕಾಯುತ್ತಿದ್ದರು. ಈ ಸಮಯಕ್ಕೆ ಸರಿಯಾಗಿ ಅಲ್ಲಿ ಸೈಕಲ್ ತಳ್ಳಿಕೊಂಡು ಬರುತ್ತಿದ್ದ ನನ್ನಪ್ಪನನ್ನು ಕಂಡು ಶಾನುಭೋಗ ಅವರಿಗೆ ಶರಣಾದ. ನನ್ನ ಅಪ್ಪ ಅಲ್ಲಿಯೇ ನಿಂತಿದ್ದು ಕಂಡ ಅವರು ನನ್ನಪ್ಪನ ಎದುರಿಗೆ ಬರಲಾಗದೇ ಇದ್ದಲ್ಲಿಂದ ಜಾಗ ಖಾಲಿ ಮಾಡಿ ಹೊರಟು ಹೋದರು. ಶಾನುಭೋಗನ ಈ ಅವಸ್ಥೆ ಕಂಡು ಕನಿಕರ ಪಟ್ಟ ನನ್ನ ಅಪ್ಪ ಅವನಿಗೆ ತಾನು ಜಮೀನಿಗೆ ತೆಗೆದುಕೊಂಡು ಹೋಗುತ್ತಿದ್ದ ತಂಬಿಗೆಯಿಂದ  ಕುಡಿಯಲು ನೀರು ಕೊಟ್ಟು ಅಲ್ಲಿಯೇ ಇದ್ದ ಕ್ಲಲಿನ ಹಾಸಿನ ಮೇಲೆ ಕುಳ್ಳಿರಿಸಿ ಶೈತ್ಯೋಪಚಾರ ಮಾಡಿದರು.

ನಂತರ ಸಾವಕಾಶವಾಗಿ “ಇದೇನು ನಿನ್ನ ಅವಸ್ಥೆ” ಎಂದು ಕೇಳಿದಾಗ ಅವನುಹೇಳಿದ್ದು. ತನ್ನ ಪ್ರಿಯಕರಿಗೆ ಕೇಳಿದಾಗಲೆಲ್ಲಾ ಸಾಕಷ್ಟು ಹಣ ಕೊಡುತ್ತಿದ್ದೆ. ಆದರೆ ಕೆಲದಿನದಿಂದ ಅವಳು ತನಗೆ 5 ಎಕರೆ ಜಮೀನು ಬರೆದುಕೊಡುವಂತೆ ಪೀಡಿಸುತ್ತಿದ್ದಳು. ಕೊಡಲು ಇಷ್ಟವಿಲ್ಲದ ಇವನು ಏನೋನೋ ಕಾರಣಗಳನ್ನು ಹೇಳಿ ಮುಂದೂಡಿಕೊಂಡು ಬರುತ್ತಲೇ ಇದ್ದ. ಆದರೆ ಇಂದು ಇವನ ಊರಿಗೆ ಹೋಗಿ ತನ್ನ ಬೇಡಿಕೆಯನ್ನು ಮುಂದುವರೆಸಿದ್ದಾಳೆ. ಎಂದಿನಂತೆ ಇವನು ಸಬೂಬು ಹೇಳಿದ್ದಾನೆ. ಏನಾದರಾಗಲೀ ಇಂದು ಒಂದು ತೀರ್ಮಾನ ಮಾಡಿಯೇ ಬಿಡಬೇಕೆಂದು ಇವನನ್ನು ಪೀಡಿಸಿದ್ದಾಳೆ. ಆಗ ಅಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಅವಳು ಇವನನ್ನು ಓಡಿಸಿಕೊಂಡು ಬಂದಿದ್ದಾಳೆ. ಇಷ್ಟು ಅಂದು ನಡೆದ ರಾದ್ಧಾಂತದ ವಿವರ.

ಇದನ್ನು ಕೇಳಿದ ನನ್ನಪ್ಪ ಆ ಶಾನುಭೋಗನಿಗೆ, ಸರಿಯಾಗಿ ಬುದ್ದಿ ಹೇಳಿ, ಅನೈತಿಕ ನಡವಳಿಕೆಯಿಂದಾಗುವ ಪರಿಣಾಮ, ಅದರಿಂದಾಗುವ ಮಾನನಷ್ಟ, ಜನರ ಮುಂದೆ ಕೇವಲವಾಗಿ ಅವಮಾನಿತವಾಗಬೇಕಾಗುವ ಅವಸ್ಥೆ ಎಲ್ಲ ತಿಳಿಯಿತೇ ಎಂದು ಹೇಳಿ. ಅವನನ್ನು ಮನೆಗೆ ಕರೆತಂದರು. ಬೆಳಿಗ್ಗೆ ಜಮೀನಿಗೆ ಹೋದರೆ ಮತ್ತೆ ನನ್ನಪ್ಪ ಸಂಜೆಗೇ ಬರುವುದು ವಾಡಿಕೆ. ಶಾಲೆಯಿಂದ ಬಂದ ನಾನು ನನ್ನಪ್ಪ ಜಗುಲಿಯ ಮೇಲೆ ಕುಳಿತದ್ದನ್ನು ಕಂಡು ಒಳಗೆ ಅಮ್ಮನ ಬಳಿಗೆ ಹೋಗಿ “ಇದೇನು ಅಪ್ಪ ಜಮೀನಿಗೆ ಹೋಗದೆ ಇಲ್ಲಿಯೇ ಇದ್ದಾರಲ್ಲ” ಎಂದು ಕೇಳಿದಾಗ. “ಅದೇನೋಪ್ಪ ಒಂದೂ ತಿಳಿಯದೂ ತಡಿ ಈಗಲೇ ಅಧೀಕಪ್ರಸಂಗಿಯಂತೆ ಹೋಗಿ ಕೇಳಿಬಿಡಬೇಡ, ಹೊಡೆತ ತಿನ್ನುತ್ತೀಯ, ಸಂಜೆಯ ವೇಳೆಗೆ ಎಲ್ಲ ತಿಳಿಯುತ್ತೆ” ಎಂದರು. ಇದನ್ನು ಕೇಳಿದ ನಾನು ನನ್ನ ಕುತೂಹಲಕ್ಕೆ ಕಾರಣ ತಿಳಿಯುವ ವಿಚಾರವನ್ನು ಸಂಜೆಯವರೆಗೂ ಮುಂದೂಡಬೇಕಾದ ನಿರ್ಬಂಧಕ್ಕೆ ಸಿಲುಕಿದೆ.

ನನ್ನಪ್ಪ ಮಧ್ಯಾಹ್ನ ಶಾನುಭೋಗನಿಗೆ ಮನೆಯ್ಲಲಿಯೇ ಊಟ ಮಾಡಿಸಿ ಸೂರ್ಯಮುಳುಗುವುದರ ಒಳಗೆ ಅವನ ಊರಿಗೆ ತಲುಪಿಸಿದರು.

ನಂತರ ಸಾವಕಾಶವಾಗಿ ಈ ಘಟನೆಯ ವಿವರಣೆಯನ್ನು ನನ್ನ ತಾಯಿಗೆ ಅವರು ತಿಳಿಸಿದ್ದನ್ನು ನಾನು ಕೇಳಿಸಿಕೊಂಡೆ. ಆದರೂ ಆ ಚಿಕ್ಕ ವಯಸ್ಸಿನಲ್ಲಿ ಈ ನೀತಿ ಅನೀತಿಯ ಬಗ್ಗೆ ಅರಿವಿರದ ಕಾರಣ ಏನೋ ಯಾರೋ ಒಂದು ಹೆಂಗಸು ಶಾನುಭೋಗನನ್ನು ಓಡಿಸಿಕೊಂಡು ಹೋದಳು ಅವನನ್ನು ನನ್ನಪ್ಪ ಕಾಪಾಡಿದರು ಎಂದಷ್ಟೇ ಅರ್ಥಮಾಡಿಕೊಂಡೆ.

ಆ ಘಟನೆಯ ಹಿಂದೆ ಅಡಗಿದ್ದ ನೀತಿಯ ಪಾಠ ನಾನು ಬೆಳೆದು ಪ್ರಬುದ್ಧನಾದ ಮೇಲೆ, ನನ್ನ ಮನಃಪಟಲದ ಮೇಲೆ ಅನಾವರಣಗೊಂಡಿತು. ಇದೇ ಆ ಮಲ್ಲಿನಾಥನ ಪುರಾಣ.

Rating
No votes yet

Comments