ತಾನೊಂದು ಬಗೆದರೆ

ತಾನೊಂದು ಬಗೆದರೆ

ರಘು ತನ್ನ ಆಫೀಸಿನಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ. ಅವನ ಬಳಿಗೆ ಬಂದ ಮುಕುಂದ ಲೋ ರಘು...ಏನೋ ಸಿಗದೇ ಸಿಗದೇ ನಿನಗೆ ಆನ್ಸೈಟ್ ಹೋಗುವ ಅವಕಾಶ ಸಿಕ್ಕಿದೆ. ಅದೂ ಲಾಂಗ್ ಟರ್ಮ್. ಎರಡು ವರ್ಷಕ್ಕೆ. ಒಳ್ಳೆ ಪಾರ್ಟಿ ಮೂಡಲ್ಲಿ ಇರೋದು ಬಿಟ್ಟು ಏನೋ ಒಳ್ಳೆ ಆಕಾಶಾನೆ ತಲೆ ಬಿದ್ದ ಹಾಗೆ ಕೂತಿದ್ದೀಯಲ್ಲೋ..


ಹ್ಮ್ಮ್...ಮುಕುಂದ ಈ ಆನ್ಸೈಟೇ ಕಣೋ ನನ್ನ ಈ ಚಿಂತೆಗೆ ಕಾರಣವಾಗಿರುವುದು.


ಏನೋ ರಘು ಹೀಗೆ ಮಾತಾಡುತ್ತಿದ್ದೀಯ? ಎರಡು ವರ್ಷದಿಂದ ಆನ್ಸೈಟ್ ಕಳಿಸಿಲ್ಲ ಕಳಿಸಿಲ್ಲ ಅಂತ ಒದ್ದಾಡುತ್ತಿದ್ದವನು ಈಗ ನೋಡಿದರೆ ಹೀಗೆ ಮಾತನಾಡುತ್ತಿದ್ದೀಯ? ಯಾಕೆ ಏನಾಯ್ತು?


ಅದೇನೋ ನಿಜ ಮುಕುಂದ ನಾನು ಎರಡು ವರ್ಷದಿಂದ ಆನ್ಸೈಟ್ ಗೆ ಹೋಗಬೇಕು ಅಂತಲೇ ಇದ್ದಿದ್ದು. ಆದರೆ, ಆ ಅವಕಾಶ ಈಗ ಬರಬಾರದಿತ್ತು...ನೋಡು ದೇವರು ಹೇಗೆಲ್ಲ ಪರೀಕ್ಷೆ ಮಾಡುತ್ತಾನೆ. ನಮಗೆ ಬೇಕು ಎಂದಾಗ ಏನೂ ಕೊಡಲ್ಲ..ಬೇಡ ಎಂದಾಗ ಎಲ್ಲ ಒಟ್ಟಿಗೆ ಕೊಡುತ್ತಾನೆ. ಯಾವುದು ಆರಿಸಿಕೊಳ್ಳುವುದು...ಯಾವುದು ಬಿಡುವುದು ಎಂಬ ಧರ್ಮಸಂಕಟಕ್ಕೆ ಸಿಲುಕಿಸಿಬಿಡುತ್ತಾನೆ


ಲೋ ರಘು...ಸುಮ್ಮನೆ ಒಗಟಾಗಿ ಮಾತಾಡಬೇಡ...ಅದೇನು ಅಂತ ಸರಿಯಾಗಿ ಬಿಡಿಸಿ ಹೇಳು.


ಹ್ಮ್ಮ್...ಬಾ ಕಾಫಿ ಕುಡಿಯುತ್ತ ಮಾತಾಡೋಣ.


ಮುಕುಂದ...ನನಗೆ ಚಿಕ್ಕಂದಿನಿಂದಲೂ ಸಿನೆಮಾ ಎಂದರೆ ಬಹಳ ಹುಚ್ಚು ಕಣೋ. ಮೊದಲಿಂದಲೂ ನನಗೆ ಅದೊಂದು ಮಾಯಾಪ್ರಪಂಚದ ಹಾಗೆ ಕಂಡಿತ್ತು. ಮೊದಮೊದಲು ನಾನೂ ಸಿನಿಮಾದಲ್ಲಿ ನಟಿಸಬೇಕು ದೊಡ್ಡ ಪರದೆಯ ಮೇಲೆ ಜನ ನನ್ನ ಅಭಿನಯ ನೋಡಿ ಸಂತೋಷ ಪಡಬೇಕು, ಶಿಳ್ಳೆ ಹಾಕಬೇಕು, ನನ್ನ ಕಟೌಟ್ ಗೆ ಹಾರ ಹಾಕಬೇಕು ಎಂದೆಲ್ಲ ಕನಸು ಕಟ್ಟಿದ್ದೆ.


ಬರಬರುತ್ತ ನನಗೆ ನಟನೆಯಲ್ಲಿದ್ದ ಆಸಕ್ತಿ ಸತ್ತು ಹೋಯಿತು. ಆದರೆ ಒಳ್ಳೆಯ ನಿರ್ದೇಶಕನಾಗಬೇಕೆಂಬ ಹಂಬಲ ಉಂಟಾಯಿತು. ಅದಕ್ಕಾಗಿ ಸಾಕಷ್ಟು ಶ್ರಮ, ಕಷ್ಟ,ನೋವು,ಅವಮಾನ,ತಿರಸ್ಕಾರ ಎಲ್ಲವನ್ನೂ ಅನುಭವಿಸಿದೆ. ಸ್ವಂತ ಅಪ್ಪ ಅಮ್ಮಂದಿರೆ ನನ್ನನ್ನು ಬೈಯ್ಯಲು ಶುರುಮಾಡಿದರು. ಒಳ್ಳೆ ಓದನ್ನು ಓದಿಕೊಂಡು ಯಾವುದಾದರೂ ಕೆಲಸ ಮಾಡುವುದು ಬಿಟ್ಟು ಇದೆಂಥದೋ ನಿನಗೆ ಹುಚ್ಚು. ಸಿನೆಮಾ ಅಂತೆ ಸಿನೆಮಾ..ಆ ಮಾಯಾಜಿಂಕೆಯ ಹಿಂದೆ ಹೋದವರಲ್ಲಿ ಉದ್ಧಾರ ಆದವರಿಗಿಂತ ಅಧಃಪತನ ಕಂಡವರೇ ಹೆಚ್ಚು.


ಅಲ್ಲಿ ಗೆಲುವಿನ ಅಂಕಿ ಅಂಶಕ್ಕಿಂತ ಸೋಲಿನ ಅಂಕಿ ಅಂಶವೇ ಹೆಚ್ಚು. ಸುಮ್ಮನೆ ಯಾವುದಾದರೂ ಕೆಲಸಕ್ಕೆಂದು ಹೋದರೆ ತಿಂಗಳಿಗಿಷ್ಟು ಎಂದು ನಿಗದಿತ ಸಂಬಳ ಬರುತ್ತದೆ. ಕಷ್ಟವೋ ಸುಖವೋ ಹೇಗೋ ಜೀವನ ಸಾಗಿ ಹೋಗುತ್ತದೆ. ಅದು ಬಿಟ್ಟು ಸಿನೆಮಾ ಅಂತೆ ಸಿನೆಮಾ...


ಮನೆಯವರೇ ನನ್ನ ಆಸೆಗೆ ತಣ್ಣೀರೆರೆಚಿದರೂ ನನ್ನ ಆಸೆಯನ್ನು ನಾನು ಸಾಯಲು ಬಿಡಲಿಲ್ಲ. ಅವರೆಲ್ಲರ ವಿರೋಧದ ನಡುವೆಯೇ ನಾನೊಂದು ನಿರ್ದೇಶನದ ಕೋರ್ಸ್ ಮಾಡಿದೆ. ನಾನೇ ಕಥೆಗಳನ್ನು ಬರೆಯಲು ಶುರು ಮಾಡಿದೆ. ಹೆಚ್ಚು ಹೆಚ್ಚು ಸಿನೆಮಾಗಳನ್ನು ನೋಡಿದೆ, ನಿರ್ದೇಶನದ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನಗಳನ್ನು ಮಾಡಿದೆ. ಯಾರ್ಯಾರದೋ ಕೈ ಕಾಲು ಹಿಡಿದು ಕೆಲವು ನಿರ್ದೇಶಕರನ್ನು ಭೇಟಿ ಮಾಡಿ ಅವರ ಅನುಭವಗಳನ್ನು ಕೇಳಿ ತಿಳಿದುಕೊಂಡೆ.


ನನಗೆ ನಾನು ನಿರ್ದೇಶನ ಮಾಡುವ ಮೊದಲ ಸಿನೆಮಾ ನಾನು ಬರೆದಿರುವ ಕಥೆಯದ್ದೇ ಆಗಿರಬೇಕೆಂದು ನನ್ನ ಅಭಿಲಾಷೆ ಆಗಿತ್ತು. ಆದರೆ ಸಿನೆಮಾ ರಂಗದಲ್ಲಿ ಎಲ್ಲವೂ ನಾನು ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ. ಕೆಲ ನಿರ್ಮಾಪಕರಿಗೆ ನನ್ನ ಕಥೆ ಇಷ್ಟವೇನೋ ಆಯಿತು. ಆದರೆ ಅವರು ಬೇರೆ ನಿರ್ದೇಶಕರನ್ನು ಹಾಕಿಕೊಂಡು ಸಿನೆಮಾ ಮಾಡುವುದಾಗಿ ಹೇಳಿದರು. ಇನ್ನು ಕೆಲ ನಿರ್ಮಾಪಕರು ಕಥೆ ನಾವು ಕೊಡುತ್ತೇವೆ ನೀನು ನಿರ್ದೇಶನ ಮಾಡು ಎಂದರು.


ಅದು ನನಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡೆ. ಆದರೆ ಅವರು ತಂದ ಕಥೆಗಳು ಬಿ ಗ್ರೇಡ್ ಕಥೆಗಳು. ಥೂ ಎಂದು ಅವರ ಮುಖಕ್ಕೆ ಉಗಿದು ಬಂದಿದ್ದೆ. ನಾನೇ ದುಡ್ಡು ಹಾಕಿ ಸಿನೆಮಾ ಮಾಡುವಷ್ಟು ಸಾಮರ್ಥ್ಯ ನನ್ನಲ್ಲಿರಲಿಲ್ಲ. ಹೀಗೆ ಬಹಳಷ್ಟು ಮಾನಸಿಕ ಹಿಂಸೆ ಅನುಭವಿಸಿದ ಮೇಲೆ ಇದರ ಸಹವಾಸವೇ ಸಾಕು. ಅಪ್ಪ ಅಮ್ಮನ ಮಾತು ನಿಜ ಎಂದುಕೊಂಡು ಈ ಕೆಲಸ ಹುಡುಕಿಕೊಂಡೆ.


ಇಲ್ಲಿ ಕೆಲಸಕ್ಕೆ ಸೇರಿದ ಮೇಲೆ ನಾನು ಪರಿಪೂರ್ಣವಾಗಿ ಇದರಲ್ಲಿ ತೊಡಗಿಕೊಂಡೆ. ಸಿನೆಮಾ ಆಲೋಚನೆಯನ್ನೇ ಕೈ ಬಿಟ್ಟೆ. ಹೇಗೋ ಜೀವನ ಸಾಗುತ್ತಿತ್ತು. ನನ್ನ ಕೆಲಸ ನೋಡಿ ಮ್ಯಾನೇಜರ್ ಗಳು ನನ್ನ ತಲೆಯಲ್ಲಿ ಇಲ್ಲದ ಆನ್ಸೈಟ್ ಆಸೆಯ ಬೀಜ ಬಿತ್ತಿದರು. ಆದರೆ ಅದನ್ನು ಸಾಕಾರ ಮಾಡಲು ಎರಡು ವರ್ಷ ತೆಗೆದುಕೊಂಡರು.


ಒಂದು ದೀರ್ಘ ನಿಟ್ಟುಸಿರು....


ಓಹ್!! ರಘು ಇಷ್ಟೆಲ್ಲಾ ಕಥೆ ಇದೆಯಾ? ಹೋಗಲಿ ಬಿಡು ಈಗ ಎಲ್ಲ ಒಳ್ಳೆಯದಾಯಿತಲ್ಲ....ಮತ್ತೇನು ನಿನ್ನ ಸಮಸ್ಯೆ?


ಅಲ್ಲೇ ಬಂದಿರುವುದು ಸಮಸ್ಯೆ ಮುಕುಂದ. ಹಿಂದೊಮ್ಮೆ ನಾನು ಕಥೆ  ಹೇಳಿದ್ದ ನಿರ್ಮಾಪಕರೊಬ್ಬರು ಮೊನ್ನೆ ಫೋನ್ ಮಾಡಿದ್ದರು. ಈಗ ಅವರು ನನ್ನ ಜೊತೆ ಸಿನೆಮಾ ಮಾಡಲು ಅದೂ ನನ್ನದೇ ಕಥೆ ನಾನೇ ನಿರ್ದೇಶಕನಾಗಿ, ಸಿದ್ಧರಿದ್ದಾರಂತೆ....


ಅದೂ ಒಳ್ಳೆಯದೇ ತಾನೇ? ಈಗ ನಿನ್ನ ಎರಡೂ ಕನಸೂ ನನಸಾದಂತೆ ಅಲ್ಲವ? ಇನ್ನೇನು ಚಿಂತೆ ನಿನಗೆ?


ಮುಕುಂದ...ನಾನು ನನ್ನ ಕೆಲಸದ ನಡುವೆ ಹೇಗೋ ಬಿಡುವು ಮಾಡಿಕೊಂಡು ದಿನದಲ್ಲಿ ಒಂದು ಐದು ಘಂಟೆ, ಮತ್ತು ವೀಕೆಂಡ್ ನಲ್ಲಿ ಪೂರ್ತಿ ದಿನ ಶೂಟಿಂಗ್ ಮಾಡಿ ಸಿನಿಮಾ ಮುಗಿಸಿಕೊಡುವೆ ಎಂದು ಹೇಳಿದ್ದೆ. ಅದಕ್ಕೆ ಹೇಗೋ ಕಷ್ಟಪಟ್ಟು ಒಪ್ಪಿದ್ದ. ಮುಂದಿನ ತಿಂಗಳು ಎರಡನೇ ವಾರದಿಂದ ಶೂಟಿಂಗ್ ಶುರು ಮಾಡಬೇಕು ಎಂದಿದ್ದ.


ಆದರೆ ಮುಂದಿನ ತಿಂಗಳು ಮೊದಲನೇ ವಾರದಿಂದ ನಾನು ಆನ್ಸೈಟ್ ಗೆ ಹೋಗಬೇಕಾಗಿದೆ. ಅದೇ ವಿಪರ್ಯಾಸ...


ಹ್ಮ್ಮ್ಮ್...ಮತ್ತೆ ಈಗ ಏನು ಮಾಡಬೇಕು ಎಂದು ಯೋಚಿಸಿದ್ದೀಯ?


ಏನು ಮಾಡಬೇಕೋ ಗೊತ್ತಾಗದೆ ಗೊಂದಲದಲ್ಲಿದ್ದೇನೆ ಕಣೋ. ಒಂದು ಕಡೆ ನನ್ನ ಬಹುವರ್ಷದ ಕನಸು ಸಿನೆಮಾ ನಿರ್ದೇಶಕನಾಗಲು ಅವಕಾಶ...ಮತ್ತೊಂದೆಡೆ ನನ್ನನ್ನೇ ನಂಬಿ ನನ್ನ ಮೇಲೆ ಭರವಸೆ ಇಟ್ಟು ಲಾಂಗ್ ಟರ್ಮ್ ಆನ್ಸೈಟ್ ಗೆ ಕಳಿಸುತ್ತಿರುವ ಕಂಪನಿ....ಏನು ಮಾಡಬೇಕೋ ಗೊತ್ತಾಗುತ್ತಿಲ್ಲ. ಇವತ್ತು ರಾತ್ರಿ ಪೂರ್ತಿ ಯೋಚನೆ ಮಾಡಿ ನಾಳೆ ನನ್ನ ನಿರ್ಧಾರ ತಿಳಿಸುತ್ತೇನೆ.


ಮರುದಿನ ಬೆಳಿಗ್ಗೆ...


ಹಾಯ್ ರಘು...ಏನು ನಿರ್ಧಾರ ಮಾಡಿದೆ.


ಮುಕುಂದ...ನಾನು ಆನ್ಸೈಟ್ ಗೆ ಹೋಗಲು ನಿರ್ಧಾರ ಮಾಡಿದ್ದೇನೆ ಕಣೋ. ಏಕೆಂದರೆ, ಸಿನಿಮಾ ಅದೃಷ್ಟದ ಮೇಲೆ ನಿಂತಿದೆ...ಒಂದು ವೇಳೆ ಸಿನೆಮಾ ಗೆದ್ದರೆ ನಾನು ಗೆದ್ದೆ...ಇಲ್ಲವಾದರೆ...ನಾನು ಸೋಲುತ್ತೇನೆ ಮುಂಚೆ ಒಂದು ರೀತಿ ಭಂಡ ಧೈರ್ಯ ಇತ್ತು. ಆದರೆ ಈಗ ಅಷ್ಟು ಧೈರ್ಯ ಇಲ್ಲ ಕಣೋ. ಏಕೆಂದರೆ ನನ್ನನ್ನೇ ನಂಬಿ ಕುಳಿತಿರುವ ಅಪ್ಪ ಅಮ್ಮ ಇದ್ದಾರೆ. ಅದಕ್ಕೆ ಈಗ ಸಧ್ಯಕ್ಕೆ ಆ ಆಲೋಚನೆ ಬಿಟ್ಟಿದ್ದೇನೆ. ಆ ನಿರ್ಮಾಪಕನಿಗೂ ಫೋನ್ ಮಾಡಿ ವಿಷಯ ತಿಳಿಸಿದೆ.


ಗುಡ್ ರಘು. ನಿನ್ನ ನಿರ್ಧಾರ ಒಳ್ಳೆಯದು. ನೀನು ಅಲ್ಲಿಂದ ಬಂದ ಮೇಲೆ ಬೇಕಾದರೆ ಮತ್ತೆ ನಿನ್ನ ಅದೃಷ್ಟ ಪರೀಕ್ಷೆ ಮಾಡಬಹುದು...


ಇಬ್ಬರೂ ನಗುತ್ತ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡರು

Rating
No votes yet

Comments

Submitted by kavinagaraj Tue, 01/22/2013 - 15:25

ವಾಸ್ತವತೆ ಮತ್ತು ಆದರ್ಶ - ಎರಡನ್ನೂ ಹೊಂದಿಸಿಕೊಂಡು ಹೋಗುವುದು ಎಲ್ಲರಿಗೂ ಆಗಲಾರದು ಎಂಬುದೇ ನೀತಿ!

Submitted by Prakash Narasimhaiya Wed, 01/23/2013 - 10:20

In reply to by kavinagaraj

ವಾಸ್ತವವನ್ನು ಅರಿತುಕೊಳ್ಳುವ ವಿವೇಕ ಸಂಪಾದನೆಯಾದರೆ ಜಗತ್ತಿನಲ್ಲಿ ನೆಮ್ಮದಿಯಿಂದ ಬಾಳಬಹುದು. ಸುಂದರ ಪ್ರಸ್ತುತಿ.

Submitted by ಗಣೇಶ Wed, 01/23/2013 - 23:23

>>ಹೇಗೋ ಬಿಡುವು ಮಾಡಿಕೊಂಡು ದಿನದಲ್ಲಿ ಒಂದು ಐದು ಘಂಟೆ, ಮತ್ತು ವೀಕೆಂಡ್ ನಲ್ಲಿ ಪೂರ್ತಿ ದಿನ ಶೂಟಿಂಗ್ ಮಾಡಿ ಸಿನಿಮಾ ಮುಗಿಸಿಕೊಡುವೆ ...ಸಾಧ್ಯಾನಾ? ರಘುನದ್ದು ಒಳ್ಳೆಯ ತೀರ್ಮಾನ.