ತಾಳಗುಪ್ಪ ರೈಲು ಒಂದು ನೆನಪು:
ದಕ್ಷಿಣ ಭಾರತದಲ್ಲಿಯ ಕೊನೆಯ ರೈಲು ನಿಲ್ದಾಣ ಎಂಬ ಖ್ಯಾತಿ ಹೊಂದಿದ್ದ ತಾಳಗುಪ್ಪ ಮೀಟರ್ ಗೇಜ್ ರೈಲು ನಿಲ್ದಾಣ
ಸ್ವತಂತ್ರ ಪೂರ್ವದ ರೈಲು ನಿಲ್ದಾಣವೂ ಆಗಿದ್ದು, ಶರಾವತಿ ನದಿಗೆ ಕಟ್ಟಿದ ಮೊದಲ ಅಣೆ ಕಟ್ಟೆ ಮಡೆನೂರು ಡ್ಯಾಂ ಹಾಗೂ ಮಹತ್ಮಾ ಗಾಂಧಿ ವಿದ್ಯುದಾಗಾರ, ನಾಡಿನ ಹೆಮ್ಮೆಯ ಅತಿ ದೊಡ್ಡ ಜಲವಿದ್ಯುದಾಗಾರ ಜೋಗದ ಎ.ಬಿ.ಸೈಟ್ ಹಾಗೂ ಅದಕ್ಕೆ ನೀರುಣಿಸುವ ಲಿಂಗನ ಮಕ್ಕಿ ಜಲಾಶಯದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಹೆಗ್ಗಳಿಕೆಗೂ ಪಾತ್ರವಾದುದು ಈ ರೈಲು ನಿಲ್ದಾಣ.
ನಂತರದ ದಿನಗಳಲ್ಲಿ ನಿಲ್ದಾಣದ ಸಮೀಪದಲ್ಲಿಯೇ ಸ್ಥಾಪನೆಗೊಂಡಿದ್ದ ಪ್ಲೈವುಡ್ ಕಾರ್ಖಾನೆಗೆ ಕಚ್ಛಾ ಹಾಗೂ ತಯಾರಾದ ಮಾಲುಗಳ ಸಾಗಾಣಿಕೆ, ಸುತ್ತಲಿನ ಕಾಡಿನಲ್ಲಿ ದೊರೆಯುವ ಚಾರ್ಕೋಲ್ ಬಿದಿರು ಬೊಂಬು ಮೊದಲಾದ ಸರಕು ಸಾಗಾಣಿಕೆ ಹಾಗೂ ಜೋಗ ಜಲಪಾತ ವೀಕ್ಷಿಸಲು ಬರುವ
ಪ್ರವಾಸಿಗರ ಓಡಾಟಕ್ಕಷ್ಟೇ ಉಪಯೋಗವಾಗಿತ್ತು ಈ ರೈಲು ಸೇವೆ. ಕ್ರಮೇಣ ವಿವಿಧ ಕಾರಣಗಳಿಂದಾಗಿ ಸರಕು ಸಾಗಣೆಯೂ ನಿಂತುಹೋಗಿದ್ದಲ್ಲದೇ, ದಿನಕ್ಕೆರಡು ಬಾರಿ ಬೆಂಗಳೂರಿಗೆ ಸಂಚರಿಸುತ್ತದ್ದ ಪ್ಯಾಸೆಂಜರ್ ರೈಲು ಸಹ ದಿನಕ್ಕೊಂದಾಗಿ ಪರಿವರ್ತನೆ ಗೊಂಡಿತು.
ರೈಲಿನ ನಿಧಾನಗತಿ, ಸಾಕಷ್ಟು ಬಸ್ಸುಗಳ ಸೌಕರ್ಯ ಪಡೆದ ಕಾರಣದಿಂದಾಗಿ ಪ್ರಯಾಣಿಕರ ಸಂಖ್ಯೆಯೂ ಬೆರಳೆಣಿಕೆಯಷ್ಟಾಯಿತು. ಹೀಗಾಗಿ ಬಸ್ ನಷ್ಟೆ ದೊಡ್ಡದಾದ ರೈಲ್ವೆ ಕಾರ್ ಎಂದು ಕರೆಸಿಕೊಳ್ಳುತ್ತಿದ್ದ ಒಂದೇ ಬೋಗಿಯು ಶಿವಮೊಗ್ಗ ದಿಂದ ಬೆಳಿಗ್ಗೆ ಬಂದು ಪುನಃ ಸಂಜೆ ಶಿವಮೊಗ್ಗದ ವರೆಗೆ ಹೋಗಿ ಅಲ್ಲಿಂದ ಸಾಗುವ ಬೆಂಗಳೂರಿಗೆ ಹೋಗುವ ರೈಲಿಗೆ ಸಂಪರ್ಕ ನೀಡುತ್ತಿತ್ತು. ಮುಂದೆ ಈ ರೈಲು ಮಾರ್ಗವನ್ನು ಕೊಂಕಣ ರೈಲ್ವೆ ಯೊಂದಿಗೆ ಜೋಡಿಸಲಾಗುವುದೆಂದು ಸುದ್ದಿಯಾಗಿತ್ತು. ಹಾಗೂ ಶಿವಮೊಗ್ಗದ ವರೆಗೆ ರೈಲ್ವೆ ಮಾರ್ಗವೂ ಬ್ರಾಡ್ ಗೇಜಾಗಿ ಪರಿವರ್ತನೆ ಗೊಂಡಿತು. ಮತ್ತು ಇಲ್ಲಿಗೆ ಬರುತ್ತಿದ್ದ ರೈಲ್ ಕಾರ್ ಸಹ ನಿಂತು ಹೋಯಿತು.ಇದ್ದ ಮೀಟರ್ ಗೇಜ್ ಹಳಿಗಳನ್ನು ಕೀಳಲಾಯಿತು. ಕೊಂಕಣ ರೈಲ್ವೇಗೆ ಸೇರಿಸುವ ಪ್ರಸ್ತಾವನೆಯು ಕ್ಷೀಣಿಸತೊಡಗಿತು.
ಹೀಗೆ ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ದೊರಕುತ್ತಿದ್ದ ರೈಲ್ವೆ ಸೇವೆಯು ನಿಂತು ಹೋದಾಗ ಸಾಗರ ಹಾಗೂ ಸುತ್ತಮುತ್ತಲಿನ ಆಸಕ್ತರು ರೈಲ್ವೇ ಹೋರಾಟ ಸಮಿತಿಯನ್ನು ರಚಿಸಿಕೊಂಡು ರೈಲ್ವೆ ಸೇವೆ ಪುನರಾರಂಭಿಸಬೇಕೆಂದು ಪಟ್ಟು ಹಿಡಿದು ಸರ್ಕಾರದ ಮೇಲೆ ಒತ್ತಡ ಹೇರತೊಡಗಿದರು. ನಂತರದ ವರ್ಷಗಳಲ್ಲಿ ಶಿವಮೊಗ್ಗದಿಂದ ಅನಂತಪುರದ ವರೆಗೆ ಬ್ರಾಡ್ ಗೇಜ್ ಗೆ ಪರಿವರ್ತನೆ ಗೊಂಡಿತು- ತಾಳಗುಪ್ಪದ ವರೆಗೆ ಬರುವುದು ನೆನೆಗುದಿಗೆ ಬಿದ್ದು ಹೋಯಿತು. ಹಾಗಾಗಿ ರೈಲ್ವೇ ಹೋರಾಟ ಸಮಿತಿಯವರು ಎಲ್ಲ ದಿಕ್ಕಿನಿಂದಲೂ ಸರ್ಕಾರಗಳ ಮೇಲೆ ಒತ್ತಡ ಹೆಚ್ಚಿಸಿ ಕೊನೆಗೂ ಈ ಮಾರ್ಗವು ಪುನರಾರಂಭ ಗೊಳ್ಳುವ ಸಮಯ ಹತ್ತಿರ ಬಂದಿದೆ.
ಆದರೆ, ಅಂದು ನಾವು ನೋಡಿದ,ಮರದ ಸ್ಲೀಪರ್ ಗಳ ಮೇಲೆ ಉದ್ದನೆಯ ರೈಲು ಹಳಿಗಳು (ಸಾಗುವಾನಿ ಮರದ್ದೆಂದು ಹೇಳುತ್ತಿದ್ದರು), ರೈಲ್ವೇ ಸ್ಟೇಷನ್ ನಿಂದ ಸ್ವಲ್ಪ ದೂರದಲ್ಲಿದ್ದ ಕೈ ಮರಗಳು, (ರೈಲಿಗೆ ಸ್ಟೇಷನ್ ಗೆ ಬರಲು ಅನುಮತಿ ನೀಡುವ/ ನಿರಾಕರಿಸುವ ಎತ್ತರದ ಕಂಬದ ಮೇಲೆ ಸ್ಥಾಪಸಿದ ಕೆಂಪು/ ಹಸಿರು ಬಣ್ಣದ ಗಾಜನ್ನು ಹೊಂದಿದ ದೀಪಹಚ್ಚಿಡುವ ಸೂಚನಾ
ವ್ಯವಸ್ಥೆ) 10-12 ಡಬ್ಬಿಗಳುಳ್ಳ ರೈಲು, ಕಲ್ಲಿದ್ದಲಿನಿಂದ ನಡೆಯುವ ಉಗಿ ಬಂಡಿ, ಬೇಕಾಗುವ ಕಲ್ಲಿದ್ದಲಿನ ರಾಶಿ, ಬೂದಿಯ ರಾಶಿ, ಬಂಡಿಗೆ ನೀರುತುಂಬುವ ಟ್ಯಾಂಕ್, ನಂತರ ಬಂದ ಡೀಸೆಲ್ ಇಂಜಿನ್, ಹಾಗೂ ಬಸ್ ನಂತೆ ಕಾಣುತ್ತಿದ್ದ ರೈಲ್ ಕಾರ್, ಕೂ ಎನ್ನುವ ವಿಷಲ್, ಪಾಂ ಎಂದು ಕೂಗುವ ಸಪ್ಪಳ, ರೈಲು ಹೊರಡುವಾಗ ಅದರಿಂದ ಹೊರಡುವ ಚಿ..ಶ್ ಚಿ.. . ಶ್ ಸದ್ದು, ಹಿಂದೆ ಮುಂದೆ ಸರಿಯುವ ಬೆಳ್ಳಿ ಬಣ್ಣದ ಮಾರುದ್ದದ ಪಿಸ್ಟನ್ ರಾಡ್ ಗಳು, ರೈಲು ಹೊರಡುವ ಮತ್ತು ಬರುವ ಮುನ್ನ ಸಿಗ್ನಲ್ ತೋರಿಸಲು ಲಾಟಿನ್ ಹಿಡಿದು ಓಡುವ ಗ್ಯಾಂಗ್ಮನ್ ಗಳು, ಕೈ ಮರಗಳನ್ನು ಕೆಡಗುವ ಸಿಬ್ಬಂದಿಗಳು, ಹಸಿರು ಮತ್ತು ಕೆಂಪು ಬಾವುಟ ಹಿಡಿದ ರೈಲ್ವೆ ಸಿಬ್ಬಂದಿಗಳು, ಟೆನಿಸ್ ಬ್ಯಾಟ್
ನಂತೆ ಕಾಣುವ ದೊಡ್ಡದಾದ ಬೆತ್ತದಿಂದ ಮಾಡದ ಡ್ರೈವರ್ ಗಳಿಗೆ ಕೊಡುವ ಮತ್ತು ಅವರಿಂದ ತೆಗೆದುಕೊಳ್ಳುವ ರಿಂಗ್ ಗಳು, ಕಲ್ಲಿದ್ದಲನ್ನು ಸುರಿದು ಕುದುಕಿ ಉರಿ ದೊಡ್ಡದು ಮಾಡಿ ರೈಲು ನಡೆಸುವ ನೋಡಿದಾಕ್ಷಣವೆ ಗೊತ್ತಾಗುತ್ತಿದ್ದ ಕಪ್ಪು ಕಪ್ಪಾಗಿದ್ದ ರೈಲ್ವೇ ಡ್ರೈವರ್ ಗಳು,
ಟಿಟಿ. ಗಳು, ರೈಲಿನಿಂದಿಳಿದು ಬಂದ ಬಣ್ಣ ಬಣ್ಣದ ಪ್ರಯಾಣಿಕರು (ದೇಶೀ - ವಿದೇಶಿಯರೂ ಇರುತ್ತಿದ್ದರು), ಎಲ್ಲೆಲ್ಲಿಂದಲೋ ಬಂದ/ ಸಾಗಹಾಕಿದ ಕುರುಡರು, ಕುಂಟರು, ಹುಚ್ಚರು, ಭಿಕ್ಷುಕರು ಉದ್ದುದ್ದನೆಯ ಡಬ್ಬಿಗಳ ಸಾಲನ್ನು ಹೊಂದಿದ ಸಿಮೆಂಟ ತುಂಬಿದ ವ್ಯಾಗನ್ ಗಳು ಎಲ್ಲಿಗೋ ಸಾಗಣೆಗಾಗಿ ಕಾದು ಕುಳಿತ ಕಟ್ಟಿಗೆಯ ದೊಡ್ಡ ದೊಡ್ಡ ರಾಶಿಗಳು, ಸ್ಥಳೀಯ ಪ್ಲೈವುಡ್ ಫ್ಯಾಕ್ಟರಿಗಾಗಿ ಮಲೇಷಿಯಾದಿಂದಲೋ ಎಲ್ಲಿಂದಲೋ ಬಂದ ಒಂದಾಳೆತ್ತರಕ್ಕು ಹೆಚ್ಚು ದಪ್ಪನಾಗಿ ಅಡ್ಡ ಮಲಗಿದ ಮರದ ದಿಮ್ಮಿಗಳು, ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ತೆರೆದ ವ್ಯಾಗನ್ಗಳು, ಸಿಮೆಂಟ್ ಅನ್ ಲೋಡ್ ಮಾಡುವ ಸಿಮೆಂಟ್ ಬಣ್ಣ ಬಳಿದುಕೊಂಡ ಹಮಾಲಿಗಳ ಸಾಲು, ಐಸಾ
- ಐಸಾ ಎಂದು ಟಿಂಬರ್ ಲೋಡ್ - ಅನ್ ಲೋಡ್ ಮಾಡುವ ಹಾರೆ ಮೀಟುವ ಜನ, ಸಾಗಿಸುವ ತೆರೆದ ದೊಡ್ಡ ದೊಡ್ಡ ಲಾರಿಗಳು, ಜೋಗದಲ್ಲಿನ ಚಾನಲ್ ಗಳಿಗೆ ಅಳವಡಿಸಲು ತಂದ ಒಳಗಡೆ ಲಾರಿಯೇ ಸಂಚರಿಸಬಹುದಾದಷ್ಟು ದೊಡ್ಡ ದೊಡ್ಡ ಪೈಪ್ (ಹೂಮ್ ಪೈಪ್ ಗಳೆಂದು ಕರೆಯುತ್ತಿದ್ದರು) ಗಳ ರಾಶಿ, ಆ ಪೈಪ್ ಗಳನ್ನೆ ಮನೆಯಾಗಿಸಿಕೊಂಡು ಸಂಸಾರ ಹೂಡಿರುತ್ತಿದ್ದ ಅಲ್ಲಿನ ಕೆಲಸಗಾರರು, ಭಿಕ್ಷುಕರು, ತಮಗಿಂತಲೂ ದೊಡ್ಡದಾದ ಪೈಪ್ ಗಳನ್ನು ಹೇರಿಕೊಂಡು ಸಾಗುವ ಲಾರಿಗಳು, ಪೈಪ್ ಗಳನ್ನು ರೈಲಿನಿಂದ ಇಳಿಸಲು ಲಾರಿಗಳಿಗೆ ಹೇರಲು ಬಂದ ಕಪ್ಪಿಗಳೆಂದು ಕರೆಯುತ್ತಿದ್ದ
ವಿವಿಧ ಬಗೆಯ ಕ್ರೇನ್ ಗಳು, ಇವೆಲ್ಲವುಗಳಿಂದ ಸದಾ ಗಿಜಿ ಗುಡುತ್ತಿದ್ದ, ವಾಹನಗಳ ಓಡಾಟದಿಂದಾಗಿ ಮಳೆಗಾಲದಲ್ಲಿ ಸದಾ ಕೆಸರಿನಿಂದ ಕೊಚ್ಚೆಯಾಗಿ ರುವ ರೈಲ್ವೇ ಮೈದಾನ. ವಿಶಿಷ್ಟ ವಿನ್ಯಾಸದಿಂದ ಕೂಡಿದ ಗೋಪಿ ಬಣ್ಣದಿಂದ ಕಂಗೊಳಿಸುತ್ತಿದ್ದ ರೈಲ್ವೆ ಸ್ಟೇಷನ್, ರೈಲು ಇಂಜಿನನ್ನು ಇವೆಲ್ಲವುಗಳನ್ನು ನೋಡಿದ್ದೇನೆ. ಇವೆಲ್ಲಗಳ ನಡುವೆ ಅಲ್ಲಿದ್ದ ಸರಕುಗಳ ಗೋಡನ್ ಗಳೆ ಕಣ್ಣಿಗೆ ಕಾಣದಾಗಿದ್ದವು. ಆದರೆ ಅವೆಲ್ಲವುಗಳು ಸ್ಮೃತಿಯಲ್ಲಿ ಮಾತ್ರ ಇವೆ. ಆದರೂ ಅಂದು ದೊಡ್ಡ ದೊಡ್ಡ ಮರದ ದಿಮ್ಮಿ ಹಾಗೂ ಪೈಪ್ ಗಳನ್ನು ರೈಲ್ವೆ ವ್ಯಾಗನ್ ನಿಂದ ಇಳಿಸಿ, ಲಾರಿಗಳಿಗೆ ತುಂಬಲು ಬಳಸುತ್ತಿದ್ದ (HERBERT MORRIS LTD, LOUGHBOROUGH ENGLAND) ಇಂಗ್ಲೆಂಡ್ ನಲ್ಲಿ ತಯಾರಾದ ಬೃಹದಾಕಾರದ ಚೈನು
ಪುಲ್ಲಿ ಹಾಗೂ ಅದನ್ನು ಸ್ತಾಪಿಸಿದ ಗೋಪುರ, ರೈಲಿಗೆ ನೀರು ತುಂಬಲು ಮಾಡಿದ ನೀರಿನ ಟ್ಯಾಂಕ್ ನ್ನು ಸಧ್ಯ ನೋಡಬಹುದಾಗಿದೆ. ಹಾಗಾಗಿ ಈ ಬಾರಿ ನಡೆಯುತ್ತಿರುವ ಕಾಮಗಾರಿ ನಡೆಯುತ್ತಿರುವಾಗ ಬರಿ ನೋಡಿ ಬರದೆ ಕೆಲವನ್ನಾದರೂ ಕೆಮರಾದಲ್ಲಿ ಸೆರೆ ಹಿಡಿದು ಒಂದೆರಡನ್ನು ಹಂಚಿಕೊಂಡಿದ್ದೇನೆ
Comments
ಉ: ತಾಳಗುಪ್ಪ ರೈಲು ಒಂದು ನೆನಪು: