ತಾಳಿಕೋಟಿ

ತಾಳಿಕೋಟಿ

ತಾಳಿಕೋಟಿ - ಒಂದು ಪಕ್ಷಿನೋಟ
*ಶೇಷಾಚಲ ಹವಾಲ್ದಾರ
*ಚಂದ್ರಗೌಡ ಕುಲಕರ್ಣಿ

ವಿಜಾಪುರ ಜಿಲ್ಲೆ ಭವ್ಯ ಐತಿಹಾಸಿಕ ಪರಂಪರೆಯುಳ್ಳ ಪ್ರದೇಶ. ಅದರ ಒಂದು ಅಂಗ ತಾಳಿಕೋಟಿ. ಹೆಸರು ಹೇಳಿದಾಕ್ಷಣ ನಮ್ಮ ನೆನಪಿನ ಭಿತ್ತಿಯ ಮೇಲೆ ಹಾಯುವದು ಕ್ರಿ. ಶ. ೧೫೬೫ ರ ತಾಳಿಕೋಟಿಯ ಯುದ್ಧ. ವಿಜಯನಗರ ಸರ್ವ ನಾಶದ ಘಟನೆ. ಆದರೆ ಅದಕ್ಕೂ ಮುನ್ನ ಮತ್ತು ಅನಂತರ ತಾಳಿಕೋಟಿ ಹೇಗಿತ್ತು? ಕುತೂಹಲ ಇದೆಯಲ್ಲವೆ!

ಈ ಭಾಗದಲ್ಲಿ ಧಾರಾಳವಾಗಿ ಸಿಗುವ ಚಕಮಕಿ ಕಲ್ಲಿನ ಚೂರುಗಳು (ಬೆಂಕಿ ಹೊತ್ತಿಸಲು ಬಳಸುವಂತಹದು) ಪ್ರಾಚೀನ ಕಾಲದಲ್ಲಿ ಇಲ್ಲಿ ಜನಜೀವನ ಇದ್ದ ಬಗ್ಗೆ, ಶಿಲಾಯುಗಕಾಲೀನ ವಸತಿ ಇದ್ದುದರ ಬಗ್ಗೆ ಕುರುಹಾಗಿದೆ. ಪಕ್ಕದ ಹುಣಸಗಿ ಬಳಿಯ ಬೂದಿಹಾಳ ಗ್ರಾಮದಲ್ಲಿನ ಭೂ-ಶೋಧನೆ ಕ್ರಿ. ಪೂ. ಕಾಲದ ನಾಗರಿಕತೆಯ ಬಗ್ಗೆ ಪುರಾವೆಯನ್ನೊದಗಿಸುತ್ತದೆ. ( ಡಾ. ಪದ್ದಣ್ಣ ಅವರ ಪ್ರಬಂಧ.) ರಾಜನ ಕೋಳೂರಿನಲ್ಲಿರುವ ನೂರಾರು ಬೃಹತ್ ಶಿಲಾ ಸಮಾಧಿಗಳು ( ಬುಡ್ಡರ / ಗಿಡ್ದರ ಮನೆ ಎಂದು ಸ್ಥಳಿಯರು ಕರೆಯುತ್ತಾರೆ.) ತಮ್ಮ ನಿಗೂಢವನ್ನು ಇನ್ನೂ ಬಿಟ್ಟಿಲ್ಲ. ಅಂತೆಯೇ ಪಕ್ಕದ ಹಗರಟಗಿ ಗ್ರಾಮದಲ್ಲಿ ದೊರಕುವ ದೊಡ್ದ ದೊಡ್ದ ಇಟ್ಟಿಗೆಗಳಬಗ್ಗೆಯೂ ಸಂಶೋಧನೆ ಆಗಬೇಕಾಗಿದೆ. ಇವೆಲ್ಲವು ತಾಳಿಕೋಟಿಯ ಸುತ್ತಮುತ್ತಲಿನ ಐತಿಹಾಸಿಕ ತಾಣಗಳು.

ತಾಳಿಕೋಟಿ ದ್ರೋಣಾನದಿ ಎಡದಂಡೆಯ ಮೇಲಿದೆ. ದ್ರೋಣಾ (ಡೋಣಿ ಎಂದು ಜನರು ಕರೆಯುತಾರೆ.) ನದಿ ದಂಡೆಯ ಉತ್ತರಕ್ಕಿರುವ ರಾಮಲಿಂಗೇಶ್ವರ ದೇವಾಲಯದಲ್ಲಿ ೧೨ ನೆಯ ಶತಮಾನದ ಶಾಸನ ಕಳಚೂರ್ಯ ಬಿಜ್ಜಳನ ಅನಂತ ರದ ರಾಜರನ್ನು ಉ‌ಅಲ್ಲೇಖಿಸುತ್ತದೆ. ಈ ಊರು ಆ ಕಾಲದಲ್ಲಿ ಹಗರಟಗಿ-೩೦೦ ರ ಆಡಳಿತಕ್ಕೆ ಒಳಪಟ್ಟಿದ್ದೆಂದು ತಿಳಿಸುತ್ತದೆ.

ತಾಳಿಕೋಟಿ -ಹೆಸರಿನ ನಿಷ್ಪತ್ತಿ ವಿದ್ವಾಂಸರನ್ನು ಗೊಂದಲಕ್ಕೀಡು ಮಾಡಿದೆ. ತಳಕೋಟಿ, ತಾಳಿಯಂತೆ ಮಂಗಳಕರವಾಗಿರುವ ಕೋಟಿ, ತಾಳಿಕೊಳ್ಳುವ ತಾಕತ್ತಿರುವ ಕೋಟಿ -ಹೀಗೆ ನಾನಾ ರೀತಿಯಲ್ಲಿ ಅರ್ಥೈಯಿಸಲ್ಪಟ್ಟಿದೆ. ಮೂಲ ಏನೇ ಇದ್ದರೂ ಬಸವೇಶ್ವರರ ಕಾಲಕ್ಕೆ ಈ ಊರಿನಲ್ಲಿ ವಿರುಪರಸ ಎಂಬ ಐತಿಹಾಸಿಕ ವ್ಯಕ್ತಿಯ ಉಲ್ಲೇಖ ಬರುತ್ತದೆ. ( ಆಧಾರ-ಕಲ್ಯಾಣೇಶ್ವರ ಕಥಾಸೂತ್ರ- ಬಿ ಪುಟ್ಟಸ್ವಾಮಯ್ಯ) ಊರಿನ ಹೆಸರನ್ನು ಆಗ ತಾಳಿಕೋಟಿ ಎಂದೇ ನಮೂದಿಸಲಾಗಿದೆ.

ಊರಿನ ಸುತ್ತಲೂ ಬೃಹತ್ ಕೋಟೆ ಇದ್ದು, ವಿವಿಧ ಆಡಳಿತಗಾರರ ಕೈಯಲ್ಲಿ ಅದಕ್ಕೆ ವಿವಿಧ ಭಾಗಗಳು ಸೇರ್ಪಡೆಯಾದ ದಾಖಲೆಗಳಿವೆ. ಈಗ ಈ ಕೋಟೆಯ ಅವಶೇಷ ಮಾತ್ರ ಉಳಿದಿದೆ. ನಗರದ ಪೂರ್ವಕ್ಕೆ ಮೈಲೇಶ್ವರ, ಪಶ್ಚಿಮಕ್ಕೆ ಮಿಣಜಗಿ, ಬಸವನ ಬಾಗೇವಾಡಿ , ಉತ್ತರಕ್ಕೆ ಬೊಮ್ಮನಹಳ್ಳಿ ಹಾಗೂ ದಕ್ಷಿಣಕ್ಕೆ ಕಲ್ಲದೇವನ ಹಳ್ಳಿ ಇವೆ. ತಾಳಿಕೋಟಿ ದಕ್ಷಿಣಕ್ಕೆ ಹರಿಯುವ ಡೋಣಿ ನದಿಯ ನೀರು ಸಿಹಿಯಲ್ಲ. ಉಪ್ಪು ಸೌಳು. ಇಲ್ಲಿನ ಭೂಮಿ ಕಪ್ಪು ಎರೆ ಜಮೀನು. ತುಂಬಾ ಫಲವತ್ತಾದದ್ದು. ಈ ಭಾಗ ದಖನ್ ಪ್ರಸ್ತ ಭೂಮಿಯ ಬಹುಮುಖ್ಯ ಪ್ರದೇಶ. ಈ ಭೂಮಿಯ ಕೆಲವೇ ಅಡಿಗಳಷ್ಟು ಕೆಳಗೆ ಕಲ್ಲು ,ಪದರುಕಲ್ಲು ದೊರಕುತ್ತವೆ.

ತಾಳಿಕೋಟಿ ಇತಿಹಾಸ ಅರಿಯಲು ಆಧಾರಗಳ ಕೊರತೆ ಇದೆಯಾದರೂ ಎರಡು ಶಾಸನಗಳು ಅಂಬಾಭವಾನಿಯ ದೇವಾಲಯದ ಮುಂದಿರುವ ಕೆತ್ತನೆಯ ಕಂಬಗಳ ಮೇಲಿವೆ. ಡೋಣಿ ನದಿ ದಂಡೆಯ ಮೇಲಿರುವ ರಾಮಲಿಂಗೇಶ್ವರ ದೇವಾಲಯ ( ಇಲ್ಲಿಯೂ ಒಂದು ಶಾಸನವಿದೆ. ) ಆದರ ಪಕ್ಕದಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯ , ಡೋಣಿರಾಜ (ಆಂಜನೇಯ) ದೇವಾಲಯ, ಅದರ ಆವರಣದಲ್ಲಿರುವ ವೀರುಗಲ್ಲು, ಸಮೀಪದ ಮುರುಕು ಮಂಟಪ ಕೋಟೆ -ಬುರುಜು -ಬತೇರಿ ಸಿಡಿಗುಂಡಿನಿಂದಾದ ಗುರುತುಗಳು, ವಾಡೆಯ ಹೆಬ್ಬಾಗಿಲ ಹತ್ತಿರವಿರುವ ವೀರಗಲ್ಲು , ಗಚ್ಚಿನಮಠ, ಸ್ಥಳೀಯ ಶ್ರೀ ಖಾಸ್ಗತ ವಿರಕ್ತ ಮಠದ ಪರಂಪರೆಯಲ್ಲಿ ಬರುವ ಭಿಕ್ಷಪ್ಪಯ್ಯನ ಗದ್ದುಗೆ ,ನಗರೇಶ್ವರ ದೇವಾಲಯ, ಶರಣ ಮುತ್ತ್ಯಾನ ಸಮಾಧಿ, ನಮಾಜ ಕಟ್ಟಿ, ಶ್ರೀ ಖಾಸ್ಗತ ಶಿವಯೋಗಿ ತಪಸ್ಸು ಮಾಡಿದ ಕೊಠಡಿ ಇವು ತಾಳಿಕೋಟಿ ಯನ್ನು ಅಂದಿನಿಂದ ಇಂದಿನವರೆಗೆ ಪರಿಚಯಿಸುವ ಕುರುಹುಗಳು. ಭೀಮನ ಬಾವಿ, ಭಾವನ್ನಮಠದ ಬಾವಿ,ವಾಡೆಯಲ್ಲಿ ಪಾಳು ಬಿದ್ದಿರುವ ಹಿಂದೂ ದೇವಾಲಯ, ಅಲ್ಲಿನ ಸುಂದರ ಕೆತ್ತನೆಗಳು,ಪಂಚ ಷಹೀದ್ ದರಗಾ ಇವು ಇನ್ನಷ್ಟು ಮಾಹಿತಿ ನೀಡುವ ಕೇಂದ್ರಗಳು. ಹದಿನಾಲ್ಕು ತಲೆಮಾರಿನಿಂದ ನಿರಂತಾರವಾಗಿ ಈ ಭಾಗದ ಆಧ್ಯಾತ್ಮಿಕ ಅಗತ್ಯಗಳನ್ನು ನೋಡಿಕೊಂ ಡು ಬರುತ್ತಿರುವ ವಿರಕ್ತ ಪರಂಪರೆಯ ಶ್ರೀ ಖಾಸ್ಗತೇಶ ಮಠ ಇವೆಲ್ಲ ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತಲಿವೆ.

ಈ ಸ್ಥಳದ ಮತ್ತೊಂದು ಐತಿಹ್ಯ ತಾಳಿಕೋಟಿ ದ್ಯಾಮವ್ವನ ವೃತ್ತಾಂತ. ಆಕೆ ಬಳಸುತ್ತಿದ್ದಳೆಂದು ಹೇಳುವ ಬೃಹತ್ ಬೀಸುವ ಕಲ್ಲು, ದೀಪದ ಕಿಂಡಿಯನ್ನು ರಾಜವಾಡೆ ಜನ ಈಗಲೂ ತೋರಿಸುತ್ತಾರೆ. ಈ ಕುರಿತು ಡಾ. ಅರವಿಂದ ಮಾಲಗತ್ತಿ ಅವ ರು ಕಿರು ಸಂಶೋಧನ ಲೇಖನ ಪ್ರಕಟಿಸಿದ್ದಾರೆ.

ತಾಳಿಕೋಟಿಯ ಕುಖ್ಯಾತಗೊಂಡದ್ದು ವಿಜಯ ನಗರದ ಪತನಕ್ಕೆ ಕಾರಣವಾದ ನಿರ್ಣಾಯಕ ಯುದ್ಧದಿಂದಾಗಿ. ಅದು ನಡೆ ದದ್ದು ಕ್ರಿ.ಶ. ೧೫೬೫ ಜನೆವರಿ ೨೩ ರಂದು. ನಿಜ ಹೇಳಬೇಕೆಂದರೆ ಯುದ್ಧ ನಡೆದದ್ದು ಕೆಲವು ಗಂಟೆಗಳಷ್ಟು ಅವಧಿ ಮಾತ್ರ. ಅದು ನಡೆದದ್ದು ರಕ್ಕಸಗಿ ತಂಗಡಗಿ ಯಲ್ಲಿ ಕೃಷ್ಣಾ ನದಿ ದಂಡೆಯಲ್ಲಿ. ಇಲ್ಲಿ ತಾಳಿಕೋಟಿಯಲ್ಲಿ ಷಾಹಿ ಸುಲ್ತಾನರ ದಂಡು ಸಮಾವೇಶಗೊಂಡು ಮುಂದೆ ಸಾಗಿತ್ತು ಅಷ್ಟೇ. ಮೇಲಾಗಿ ಯುದ್ಧ ನಡೆಯಲು ಬೇಕಾದ ಸಿಹಿ ನೀರಿನ ಸೌಲಭ್ಯ ಇಲ್ಲಿ ಇಲ್ಲವೇ ಇಲ್ಲ. ವಿಜಯನಗರದ ಪತನದ ಅನಂತರ ತಾಳಿಕೋಟಿ ಮುಂದೆ ಕಾಲಾಂತರದಲ್ಲಿ ಪೇಶ್ವಗಳ ಆಳ್ವಿಕೆಗೊಳಪಟ್ಟು ಅವರ ಪ್ರತಿ ನಿಧಿಗಳಾದ ರಾಸ್ತೆಯವರ ಉಸ್ತುವಾರಿಕೆಗೆ ವಹಿಸಲ್ಪಟ್ಟಿತು. ರಾಸ್ತೆಯವರ ಆಳ್ವಿಕೆಯ ಕುರುಹಾಗಿ ರಾಜವಾಡೆ ಅಳಿದುಳಿದ ಸ್ಥಿತಿ ಯಲ್ಲಿದೆ.

ಮೊದಲಿನಂತೆ ತಾಳಿಕೋಟಿ ಈಗಲೂ ಒಂದು ಪ್ರಮುಖ ವಾಣಿಜ್ಯ ಕೇಂದ್ರ. ಶೇಂಗಾ, ಗೋದಿ, ಜೋಳ, ಕುಸುಬಿ ಇವು ಪ್ರಮು ಖ ಬೆಳೆಗಳು. ಒಂದು ಕಾಲಕ್ಕೆ ಹತ್ತಿ ಬೆಳೆಗೆ ಪ್ರಸಿದ್ಧವಾಗಿದ್ದ ಈ ನಾಡಿನಲ್ಲಿ ಈಗ ಹಣದ ಹೊಳೆ ಹರಿಸುವ ಸೂರ್ಯಕಾಂತಿ ಮುಂ. ಆರ್ಥಿಕ ಬೆಳೆ ಬೆಳೆಯಲಾಗುತ್ತದೆ. ಭೂಮಿ ಫಲವತ್ತಾಗಿದ್ದರೂ ಇಲ್ಲಿ ನೀರಾವರಿ ಸೌಕರ್ಯ ಇಲ್ಲದ್ದೊಂದು ದೊಡ್ಡ ಕೊರತೆ. ಮಳೆ ಬಂದರೆ ಮಾತ್ರ ತುಂಬಿ ಹರಿಯುವ ಡೋಣಿ, ಒಮ್ಮೊಮ್ಮೆ ಓಣಿ ತುಂಬ ಜೋಳದ ರಾಶಿಯ ನಿಟ್ಟನ್ನೇ ಹಚ್ಚಿಸ ಬಲ್ಲದು. ಸುತ್ತ ಮುತ್ತಲಿನ ಗ್ರಾಮದ ರೈತರಿಗೆ ಫಸಲನ್ನು ತಂದು ಮಾರಲು ಇರುವ ಏಕೈಕ ವ್ಯಾಪಾರದ ಪಡಮೂಲೆಯ ಸ್ಥಳ ತಾಳಿಕೋಟಿ.

ಈ ಪುಟ್ಟನಗರದಲ್ಲಿ ಎರಡು ರಾಷ್ಟ್ರೀಕೃತ ಬ್ಯಾಂಕಗಳಿವೆ. ( ಸಿಂಡಿಕೇಟ ಮತ್ತು ಮೈಸೂರ ಬ್ಯಾಂಕ ) ಕರ್ನಾಟಕ ಬ್ಯಾಂಕ, ತಾಳಿಕೋಟಿ ಸಹಕಾರಿ ಬ್ಯಾಂಕ, ವಿಜಪುರ ಜಿಲ್ಲಾ ಸಹಕಾರಿ ಬ್ಯಾಂಕ,ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ ಹಾಗೂ ಮುಸ್ಲಿಮ ಸಹಕಾರಿ ಬ್ಯಾಂಕುಗಳು ಇಲ್ಲಿವೆ. ಇವು ಸ್ಥಳೀಯ ಗ್ರಾಹಕರ ಆರ್ಥಿಕ ಅಭಿಲಾಷೆ, ವ್ಯವಹಾರ ನಿಭಾಯಿಸುವ ಕೇಂದ್ರಗಳಾಗಿವೆ. ಮಹಿಳೆಯರ ಸ್ವಾವಲಂಬನೆಯ ಪ್ರತೀಕವಾಗಿ ಶಾರದಾ ಸಹಕಾರಿ ಸೊಸೈಟಿಯೂ ಅಸ್ಥಿತ್ವದಲ್ಲಿದೆ.

ಶೈಕ್ಷಣಿಕವಾಗಿ ಸರಕಾರಿ ಶಾಲೆಗಳಲ್ಲದೆ ಸ್ಥಳಿಯ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಮಹಾವಿ ದ್ಯಾಲಯ, ಶ್ರೀಖಾಸ್ಗತೇಶ ಪ. ಪೂ. ಮಹಾವಿದ್ಯಾಲಯ , ಶ್ರೀ ಖಾಸ್ಗತೇಶ ಪ್ರೌಢ ಶಾಲೆ, ಮಾತೋಶ್ರೀ ಗಂಗಮ್ಮ ಮುದಗಲ್ಲ ಬಾಲಕಿಯರ ಪ್ರೌಢ ಶಾಲೆ, ಶ್ರೀ ನಿಂಗಪ್ಪ ಬೋಳಶೆಟ್ಟಿ ಔದ್ಯೋಗಿಕ ತರಬೇತಿ ಕೇಂದ್ರ, ವೃತ್ತಿಪರ ತರಬೇತಿ ಕೇಂದ್ರಗಳಿವೆ. ಬಾಲ ಮಂದಿರ ಪ್ರಾಥಮಿಕ ಶಾಲೆ, ವಿದ್ಯಾಭಾರತಿ ಪ್ರೌಢ ಶಾಲೆ , ಸಂಗಮೇಶ್ವರ ಪ್ರೌಢಶಾಲೆ, ಅಂಜುಮನ್ ಸಂಸ್ಥೆಯ ಪ. ಪೂ. ಮಹಾ ವಿದ್ಯಾಲಯ , ಅರಾಬಿಕ್ ಶಾಲೆಗಳು ಶೈಕ್ಷಣಿಕ ಪ್ರಗತಿಯ ನಿದರ್ಶನಗಳಾಗಿವೆ. ಲಲಿತ ಕಲೆ ಸಂಗೀತ ವಿದ್ಯಾಲಯವೂ ಇಲ್ಲಿದೆ.

ಕಂಪೂಟರ್ ಕಲಿಸುವ ಜೋಶಿ ಕಂಪೂಟರ್ ಅಕಾಡೆಮಿ ,ಗ್ಲೋಬಲ್ ಕಂಪೂಟರ್ ಅಕಾಡೆಮಿ, ಪ್ರೊಲೈನ್ ಇನ್ಸ್ಟಿಟೂಟ್ ಆಫ಼್ ಟೆಕ್ನಾಲಜಿ , ಎಸ್ ಕೆ. ಕಂಪೂಸಾಪ್ಟ್ ಕಲಿಕಾ ಸಂಸ್ಥೆಗಳೂ ಇಲ್ಲಿ ಆರಂಭವಾಗಿವೆ.
ಸಾಹಿತ್ಯ ಕ್ರಿಡೆ, ಮನೋಲ್ಲಾಸ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಧ್ಯೇಯೋದ್ದೇಶಗಳನ್ನು ಹೊಂದಿದ ಅನೇಕ ಸಂಘ ಸಂಸ್ಥೆಗಳು ಅಸ್ತಿತ್ವದಲ್ಲಿದ್ದು ಸಾಂದರ್ಭಿಕವಾಗಿ ಔಚಿತ್ಯಪೂರ್ಣವಾದ ಕಾರ್ಯಕ್ರಮಗಳನ್ನು ನಡೆಸುತ್ತಾ, ಸ್ಪಂದಿಸುತ್ತಾ ಜಾಗೃತ ಕಳಕಳಿಯನ್ನು ವ್ಯಕ್ತ ಮಾಡುತ್ತಲಿವೆ.

ಸ್ಥಳೀಯ ಅಧಿದೈವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ , ಶ್ರೀ ಶರಣ ಮುತ್ಯಾನ ಜಾತ್ರೆ, ಅದೇ ಸಂದರ್ಭದಲ್ಲಿ ನಡೆಯುವ ದನಗಳ ಜಾತ್ರೆ, ಜನಪದ ಆಟ-ಬಯಲಾಟ, ಕಲಾಪ್ರದರ್ಶನ, ಬಂಡಿ ಬಸಪ್ಪನ ಜಾತ್ರೆ, ಮೂರು ವರ್ಷಕ್ಕೊಮ್ಮೆ ಜರುಗುವ ದ್ಯಾಮವ್ವನ ಜಾತ್ರೆ, ಇವು ಈ ಊರಿನ ಧಾರ್ಮಿಕ ಸಾಂಸ್ಕೃತಿಕ ಪರ್ವ ವಿಶೇಷಗಳು. ಸಾರ್ವತ್ರಿಕವಾಗಿ ಆಚರಿಸಲ್ಪಡುವ ಗಣೇಶ- ಉತ್ಸವದ ವಿಜೃಂಭಣೆ ಇಡೀ ತಾಳಿಕೋಟೆಗೆ ಜೀವ ಮೂಡಿಸುವ ಹಬ್ಬವಾಗಿದೆ.

ಸಾಹಿತಿಗಳು ,ನಾಟಕಕಾರರು, ಕವಿಗಳು, ಕಥೆಗಾರರು, ಕಲಾಕಾರರು ಇಲ್ಲಿರುವರು . ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ ಪುರಸ್ಕೃತ ಲಿಂ. ಪ್ರಭುದೇವ ಸಾಲಿಮಠ ಗವಾಯಿಗಳು ಇಲ್ಲಿಯವರು. ತಾಳಿಕೋಟಿ ತುಪ್ಪಕ್ಕೂ ಪ್ರಸಿದ್ಧವಾದ ಊರಾಗಿತ್ತು.

ಇದಿಷ್ಟು ತೀರಾ ಸ್ಥೂಲವೂ ಅಲ್ಲದ, ತೀರಾ ಸೂಕ್ಷ್ಮವೂ ಅಲ್ಲದ ಮೇಲ್ನೋಟದ ಒಳವಿವರಗಳ ತಾಳಿಕೋಟಿಯ ಒಂದು ಚಿತ್ರ ಮಾತ್ರ.

Rating
No votes yet