ತಿಂಗಳ ಬೆಳ್ದಿಂಗಳು..!

ತಿಂಗಳ ಬೆಳ್ದಿಂಗಳು..!

ಕೆನೆ ಹಾಲಿನ ಬೆಣ್ಣೆ ಮುದ್ದೆ
ಮೈಗೆಲ್ಲಾ ಹಚ್ಚಿಕೊಂಡು
ಚಿನ್ನಾರಿಯ ಚಿತ್ತಾರವನು
ಸುತ್ತಲು ಬರೆದುಕೊಂಡು
ಕಡಲಲೆಯ ಸೆಳೆಯುವಂಥ
ಶಕ್ತಿಯನು ತುಂಬಿಕೊಂಡು
ಎಟುಕದೆ ಮೇಲಿದ್ದರು
ದೃಷ್ಟಿಬೊಟ್ಟು ನಿನಗ್ಯಾಕೋ!

ಅಪ್ಸರೆಗೆ ಅಸೂಯೆ ತರುವ
ಚೆಲುವೆಲ್ಲಾ ತುಂಬಿದ್ದರೂ
ಉದ್ಯಾನದ ಕೊಳವೊಂದು
ಕನ್ನಡಿಯ ಹಿಡಿದಿದ್ದರು
ಚಕೋರಿಯು ನಿನಗೆಂದೇ
ಕಾದು ಕುಳಿತಿದ್ದರು
ನವ ಪ್ರೇಮಿಗಳ ಸರಸವನು
ಇಣುಕುವಾಸೆ ನಿನಗ್ಯಾಕೋ!

ಹಾಸಿದ ಕರಿಯ ಕಂಬಳಿಗೆ
ಬೊಟ್ಟನೊಂದು ಇಟ್ಟಂತೆ
ಬೆಳ್ಳಿಯ ಪ್ರತಿಫಲನ
ಧರೆಗಿಂದು ತೋರಲೆಂದೆ
ಎಲ್ಲಿಗೆ ಹೊರಟರು
ಹಿಂದೆಯೆ ನೀ ನಿಂತೆ
ಮಾಸಕೊಮ್ಮೆಯೇ ಬರುವಂಥ
ನಿಯಮವದು ನಿನಗ್ಯಾಕೋ!

ಮುತ್ತಿನ ಚಿಪ್ಪೊಂದನು
ಅಲೆಯದೆ ತರುವಂತೆ
ಸ್ವಾತಿಯು ತಾನಾಗೆ
ಬಕದ ಬಾಯಿ ಹೊಕ್ಕುವಂತೆ
ಬಿಳಿ ನೈದಿಲೆ ದಳವೊಂದು
ಕಚಗುಳಿಯ ಕೊಡುವಂತೆ
ಮಲಗಿದ್ದ ತಿಳಿಮನವ
ಕಲಕಿದ್ದು ಹಿಂಗ್ಯಾಕೋ!

Rating
No votes yet