ತಿರುಕನ ಕನಸು
ಬರೆಯಲೆಂದು ಕುಳಿತೆ ಕವಿತೆಯೊಂದನು,
ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು?
ಓಡದು ಪೆನ್ನು ಸರಾಗವಾಗಿ ತಾನು,
ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು?
ಪ್ರಕೃತಿಯ ಕುರಿತು ಬರೆಯೋಣವೆಂದು
ಅಂತೆಣಿಸಿದ ನಾನು ಕಂಡೆ ಕನಸೊಂದು,
ಕನಸಲ್ಲೇ ರಚಿಸಿದೆನು ನೂರಾರು ಕವನವನು
ಕ್ಷಣದಲ್ಲೇ ಗಳಿಸಿದೆನು ಬಹು ಜನಪ್ರಿಯತೆಯನು!
ಹೊಗಳುತಿಹರು ಪ್ರತಿಷ್ಠಿತರು, ಸಭಾಸದರೆನ್ನ ಕುರಿತು,
ಕೇಳುತಿಹೆನು ಹೆಮ್ಮೆಯಲಿ ವೇದಿಕೆಯಲಿ ಕುಳಿತು!
ಹಾಕಿದರೊಂದು ಶ್ರೀಗಂಧದ ಹಾರ ಕೊರಳಿಗೆ,
ನೀಡಿದರು ಸುಂದರ ಬೊಕೆಯೊಂದ ಕೈಗೆ!
ಬಂದಿಹರು ನೂರಾರು ಜನ ಸಮಾರಂಭಕೆ,
ತಟ್ಟಿದರು ಚಪ್ಪಾಳೆ ಕಿವಿಗಡಚಿಕ್ಕುವಂತೆ!
ಬೆಚ್ಚಿ ಕಣ್ತೆರೆದಾಗ ಕಂಡಿತೆದುರಲ್ಲಿ ಖಾಲಿ ಪೇಪರು
ಓಹ್! ಎಂಥ ಸುಂದರ ಕನಸೆಂದು ಬಿಟ್ಟೆ ನಿಟ್ಟುಸಿರು!
Rating