ತಿರುಚುವಿಕೆಯೇ ವರದಿಗಾರಿಕೆ

ತಿರುಚುವಿಕೆಯೇ ವರದಿಗಾರಿಕೆ

ರೋಚಕವಾಗಿ ವರದಿ ಮಾಡಲು ಹೋಗಿ ಬೇಸ್ತು ಬೀಳುವುದಕ್ಕೆ ಉತ್ತಮ ಉದಾಹರಣೆ ಇವತ್ತಿನ ಕನ್ನಡಪ್ರಭ ದಿನಪತ್ರಿಕೆಯ ಮುಖಪುಟದ ಮುಖ್ಯ ಸುದ್ದಿ. ’ಅಮೆರಿಕದಲ್ಲಿ ಕೆಲಸ ಗಿಟ್ಟಿಸಲು ಕನ್ನಡವೂ ಗೊತ್ತಿರಬೇಕು!’ ಎಂಬ ಸುದ್ದಿಯನ್ನು (http://www.kannadaprabha.com/NewsItems.asp?ID=KPH20090215125117&Title=Headlines&lTitle=%C1%DBd%C0+%C8%DB%7D%E6%25&Topic=0&ndate=2/16/2009&Dist=0) ಯಾವ ಪುಣ್ಯಾತ್ಮ ಹೆಕ್ಕಿದನೋ, ಅದನ್ನು ಮುಖಪುಟಕ್ಕೆ ತರುವಂತೆ ಇನ್ಯಾವ ಪ್ರತಿಭಾವಂತ ಶಿಫಾರಸು ಮಾಡಿದನೋ, ಒಟ್ಟಿನಲ್ಲಿ ಅತಿ ಸಾಮಾನ್ಯ ಅನಿಸುವ ವಿಷಯವೊಂದಕ್ಕೆ ರೋಚಕತೆಯ ಪಟ್ಟಿ ಕಟ್ಟಿ ಮುಖಪುಟದಲ್ಲಿ ಹಾಕಲಾಗಿದೆ.

ವಿಷಯ ಸರಳ. ಕನ್ನಡಕ್ಕೆ ಮನ್ನಣೆ ನೀಡಲು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಮುಂದಾಗಿದ್ದಾರೆ ಎನ್ನುತ್ತದೆ ಕನ್ನಡಪ್ರಭ ವರದಿ. ಅದಕ್ಕೆ ಬೆಂಬಲವಾಗಿ ಪತ್ರಿಕೆ ಉಲ್ಲೇಖಿಸುವ ದಾಖಲೆ ಎಂದರೆ, ’ಒಬಾಮಾ ಅಡಿ ಕೆಲಸ ಮಾಡಲು ೯,೦೦೦ ರಾಜಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿ ಫಾರ್ಮಿನಲ್ಲಿ ’ನಿಮಗೆ ಕನ್ನಡವೂ ಗೊತ್ತೆ?’ ಎಂಬ ಪ್ರಶ್ನೆಯೂ ಇದೆ. ಅಂತರ್‌ರಾಷ್ಟ್ರೀಯ ಅನುಭವ ಕಾಲಂನಲ್ಲಿ ಹಲವಾರು ರಾಷ್ಟ್ರಗಳ ೧೦೧ ಭಾಷೆಗಳನ್ನು ನಮೂದಿಸಲಾಗಿದ್ದು, ಅದರಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ೨೦ ಭಾಷೆಗಳು ಇವೆ...’- ಹೀಗೇ ವಿವರ ಸಾಗುತ್ತದೆ.

ಇಂಟರ್‌ನೆಟ್‌ನಲ್ಲಿ ಅಥವಾ ಕಂಪ್ಯೂಟರ್‌ನ ಬಹುತೇಕ ಕಡತಗಳಲ್ಲಿ ಅಂತರ್‌ರಾಷ್ಟ್ರೀಯ ಮಾಹಿತಿ ನೀಡುವಾಗ, ಆಯಾ ದೇಶದ ಪ್ರಮುಖ ಭಾಷೆಗಳು ತಂತಾನೆ ಕಾಣಿಸುತ್ತವೆ. ದೇಶದ ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದಾಗಿರುವಾಗ ಅದು ಅರ್ಜಿ ಫಾರ್ಮ‌ನ ನಿಗದಿತ ಕಾಲಂನಲ್ಲಿ ಕಾಣಿಸಿಕೊಂಡರೆ ಅದನ್ನು ವಿಶೇಷ ಎಂದು ಪರಿಗಣಿಸಬೇಕಿಲ್ಲ. ಒಂದು ವೇಳೆ ಅಧ್ಯಕ್ಷ ಒಬಾಮಾ ಅಥವಾ ಅವರ ಸರ್ಕಾರಕ್ಕೆ ಸಂಬಂಧಿಸಿದ ಯಾರಾದರೂ ವಿಶೇಷ ಕಾಳಜಿಯಿಂದ ಕನ್ನಡವನ್ನು ಅಲ್ಲಿ ಕೂಡಿಸಿದ್ದರೆ ಖಂಡಿತವಾಗಿ ಕನ್ನಡಪ್ರಭ ಅಪರೂಪದ ಸುದ್ದಿ ಹೆಕ್ಕಿದೆ ಎಂದು ಹೆಮ್ಮೆಪಡಬಹುದಿತ್ತು. ತಾಂತ್ರಿಕವಾಗಿ ಸೇರಲ್ಪಟ್ಟ ಮಾಹಿತಿಯೊಂದನ್ನು, ಅಧ್ಯಕ್ಷ ಒಬಾಮಾ ಅವರೇ ಸೇರಿಸಿದರೋ ಎಂಬಂತೆ ಬಿಂಬಿಸುವುದು ಸುದ್ದಿಯ ಮೂಲ ಆಶಯವನ್ನೇ ತಿರುಚಿದಂತೆ.

ಸಾಧಾರಣ ಅಥವಾ ಸಹಜ ವಿಷಯಗಳು ವಿಪರೀತಾರ್ಥ ಪಡೆಯುವುದು ಇಂಥ ಧೋರಣೆಯಿಂದಾಗಿ. ಹೀಗಾಗಿ, ಇಲಿ ಹೋಯಿತು ಎಂಬುದು ತಿರುಚುವಿಕೆಯ ಭರದಲ್ಲಿ ಹುಲಿ ಹೋಯಿತು ಎಂಬಂತಾಗುತ್ತದೆ.

- ಚಾಮರಾಜ ಸವಡಿ

Rating
No votes yet

Comments