ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ

ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ

ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.

 

ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ :) ನನ್ನ ಉದ್ದೇಶವೇ ಬೇರೆ. ಎಲ್ಲ ನದಿಗಳೂ ಸಾಮಾನ್ಯ ಸಮುದ್ರ ಸೇರುವ ಬಳಿ ಕವಲೊಡೆದು, ಹಲವು ಭಾಗಗಳಾಗುತ್ತವೆ. ಕಾವೇರಿಯೂ ಇದಕ್ಕೆ ಹೊರತಲ್ಲ. ತಮಿಳುನಾಡಿನ ತಿರುಚ್ಚಿರಾಪಳ್ಳಿಯ ಬಳಿ ಕಾವೇರಿ ಐದು ಭಾಗಗಳಾಗಿ ಒಡೆಯುತ್ತಾಳೆ. ಈ ಶಾಖೆಗಳಿಗೆ ಕಾವೇರಿ, ವೆಣ್ಣಾರ್, ವೆಟ್ಟಾರ್, ಕೊಡಮುರುಟಿ ಮತ್ತು ಕೊಲ್ಲಿಡಮ್ ಎಂದು ಹೆಸರಾಗುತ್ತದೆ. ಇಲ್ಲಿ ಒಂದು ವಿಷಯ ಹೇಳಬೇಕು. ವೆಣ್ಣಾರ್, ವೆಟ್ಟಾರ್ ಎಂಬಲ್ಲಿ ಬರುವ ರ ಕಾರ, ಹಳೆಗನ್ನಡದ ಶಕಟರೇಫ; (ನನಗೆ ಅದನ್ನು ಇಲ್ಲಿ ಬರೆಯಬೇಕೆಂದು ತಿಳಿಯದು). ಮತ್ತೆ, ಈ ಪದಗಳು ರ್ ಎನ್ನುವ ವ್ಯಂಜನದಿಂದ ಕೊನೆಯಾಗಿಲ್ಲ. ಬದಲಿಗೆ, ಅರ್ಧ ಉಕಾರದಲ್ಲಿ ಮುಗಿಯುತ್ತವೆ. (ಈ ರೀತಿಯ ಉಕಾರ ಇರುವ ಪದ ನೆನಪಿಗೆ ಬರುತ್ತಿಲ್ಲ). ಕನ್ನಡದ ಆರು, ಮಗು, ನಗು ಮೊದಲಾದ ಪದಗಳಲ್ಲಿ ಬರುವ ಪೂರ್ಣ ಉಕಾರವನ್ನು ಉಪಯೋಗಿಸದೇ ಹೇಳಿದರೆ ಹೇಗಿರುತ್ತೋ ಆ ರೀತಿ ಇರಬೇಕು ತಮಿಳಿನಲ್ಲಿ ಪದದ ಕೊನೆಗೆ ಬರುವ ಉಕಾರಗಳ ಉಚ್ಚಾರ. ಇನ್ನೂ ಹೇಳಬೇಕೆಂದರೆ ವೆಣ್ಣಾರು ಅನ್ನುವ ಪದವನ್ನು ವೆಣ್ಣಾಋ ಎನ್ನುವ ರೀತಿಯಲ್ಲಿ ಉಚ್ಚರಿಸಿದರೆ, ಮೂಲಕ್ಕೆ ಹತ್ತಿರವಾಗುತ್ತದೆ.

 

ಆರು (ಅಥವ ಆಋ) ಎಂದರೆ, ನೀರು, ನದಿ ಎಂದರ್ಥ. ನಮ್ಮ ನಂದಿದುರ್ಗದಲ್ಲಿಯೂ ಪಾಲಾರ್, ಪೆನ್ನಾರ್ (ಪಿನಾಕಿನಿ) ಅನ್ನುವ ನದಿಗಳು ಹುಟ್ಟುತ್ತವಲ್ಲ, ಅದರಲ್ಲಿ ಬರುವ ಆರ್ ಎನ್ನುವುದೂ ಈ ನೀರಿನ ಸೂಚಕ ಪದವೇ.

 

ತಿರುಚ್ಚಿರಾಪಳ್ಳಿಯಿಂದ ಸುಮಾರು ೫೦-೬೦ ಕಿ.ಮೀ. ಪೂರ್ವದಲ್ಲಿ, ತಂಜಾವೂರಿನಿಂದ ಸುಮಾರು ೧೫-೨೦ ಕಿ.ಮೀ. ಉತ್ತರದಲ್ಲಿ ಕಾವೇರಿಯ ಐದು ಭಾಗಗಳನ್ನು ನೆನಪಿಸುವ ಒಂದು ಊರಿದೆ. ಅದೇ ತಿರುವೈಯ್ಯಾರು. ಇದು ಇರುವುದು ಕಾವೇರಿಯ ಮುಖ್ಯ ಕಾವೇರಿ ಕವಲಿನ ಮೇಲೆ. ತಿರು ಎನ್ನುವುದು ತಮಿಳಿನಲ್ಲಿ ಗೌರವಾರ್ಥವಾಗಿ ಉಪಯೋಗಿಸುವ ಪದ. ತಿರು+ಐ+ಆಋ ಅಂದರೆ, ಪವಿತ್ರವಾದ ಐದು ನದಿಗಳು (ಅಥವ , ಅವುಗಳ ನಡುವೆ ಇರುವ ಸ್ಥಳ) ಎಂದು ಅರ್ಥ ಮಾಡಿಕೊಳ್ಳಬಹುದು. ಈ ಊರಿನಲ್ಲಿ ಚೋಳರ ಕಾಲದ ಪಂಚನದೀಶ್ವರನ ದೇವಾಲಯವಿದೆ. ಇವನನ್ನು ಐಯಾರಪ್ಪರ್ ಅಂತಲೂ ಕರೆಯುತ್ತಾರೆ. (ಎರಡೂ ನೋಡಿ ಅದೇ ಅರ್ಥ - ಪಂಚ = ಐದು, ನದಿಗಳ ಒಡೆಯ ನಾದ ಶಿವ). ಶಿವನ ರೂಪಕ್ಕೆ ಮನೆಯೊಡತಿಯಾಗಿ ಧರ್ಮಸಂವರ್ಧಿನಿ ದೇವಿಯಿದ್ದಾಳೆ.

 

ಈ ಚೋಳಸೀಮೆಯಲ್ಲಿ ಭಾರೀ ದೇಗುಲಗಳಿಗೇನೂ ಕೊರತೆ ಇಲ್ಲ. ಹಾಗಿದ್ದರೆ ತಿರುವೈಯ್ಯಾರೆಂಬ ಈ ಚಿಕ್ಕ ಊರು ನಮಗೆ ಏಕೆ ಮುಖ್ಯವಾಗುತ್ತದೆ? ಅದಕ್ಕೆ ಮೂಲ ಕಾರಣ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರು. ಇವರು ಇದೇ ಊರಿನಲ್ಲಿ ಬದುಕಿದವರು. ಹತ್ತಿರದ ತಿರುವಾರೂರಿನಲ್ಲು ೧೭೬೭ರಲ್ಲಿ ಜನಿಸಿದ ತ್ಯಾಗರಾಜರು ಸಂಗೀತದಲ್ಲಿ ಅಪರಿಮಿತ ಮೇಧಾವಿ. ತಮ್ಮ ತಾಯಿ ಹಾಡುತ್ತಿದ್ದ ಪುರಂದರ ದಾಸರ ರಚನೆಗಳಿಂದ ಇವರು ಬಹಳಷ್ಟು ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ.

(ಮುಂದುವರೆಯುವುದು)

Rating
No votes yet

Comments