ತುಂಗಭದ್ರೆಯಲ್ಲಿ ಮಂತ್ರಾಲಯ
(೨೦೦೯ ಅಕ್ಟೋಬರ್ ೨ ರಂದು ಮಂತ್ರಾಲಯದಲ್ಲಿ ಬಂದ ಪ್ರವಾಹದ ಬಗ್ಗೆ ತಿಳಿದೇ ಇದೆ. ಆದರೆ ಆ ಸಂದರ್ಭದಲ್ಲಿ ಅಲ್ಲೇ ಇದ್ದು ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿದರೆ ಹೇಗಿರುತ್ತದೆ. ಆ ಅಗಾಧ ಪ್ರಮಾಣದ ನೀರು, ಸಾವು ನೋವು, ಕಷ್ಟ ನಷ್ಟ, ಹಸಿವು, ಕತ್ತಲು ಎಲ್ಲವನ್ನೂ ಪ್ರತ್ಯಕ್ಷವಾಗಿ ಅನುಭವಿಸಿದ ನನ್ನ ಮಡದಿಯ ಮಾತುಗಳನ್ನು ಬರವಣಿಗೆಯ ರೂಪದಲ್ಲಿ ಇಳಿಸಿದ್ದೇನೆ.)
ಅಂದು ಅಕ್ಟೋಬರ್ ೨ ೨೦೦೯. ವರ್ಷದಲ್ಲಿ ಮುಕ್ಕಾಲು ಭಾಗ ಬಿಸಿಲಲ್ಲೇ ಬೇಯುವ ಮಂತ್ರಾಲಯ ಸೆಪ್ಟೆಂಬರ್ ಕೊನೆಯ ವಾರದಿಂದ ಪ್ರತಿದಿನ ಮಳೆ ಕಾಣುತ್ತಿತ್ತು. ಕೆಲವೊಮ್ಮೆ ಅಣೆಕಟ್ಟಿನಿಂದ ನೀರು ಬಿಟ್ಟಾಗ ಹೊರ ಹರಿವು ಹೆಚ್ಚಾಗಿ ತುಂಗಾ ಭದ್ರಾ ತುಂಬಿ ನದಿಯ ನೀರು ಊರ ಹೊರಗಿನ ದರ್ಗಾ ದ ವರೆಗೂ ಬರುತ್ತಿತ್ತು. ಅಂದು ಸಂಜೆ ಆರರ ಸಮಯಕ್ಕೆ ನೀರು ಆ ದರ್ಗಾದವರೆಗೂ ಬಂದಿರುವುದಾಗಿ ಅಕ್ಕಪಕ್ಕದವರ ಮಾತಿನಿಂದ ತಿಳಿದು ಬಂದಿತ್ತು.
ಎಂಟು ಗಂಟೆಯ ಹೊತ್ತಿಗೆ ಹಾಲಿನ ಪುಡಿ ತರಲೆಂದು ಛತ್ರಿ ಹಿಡಿದು ಆಚೆ ಬಂದಾಗ ಮಳೆ ಸ್ವಲ್ಪ ಜೋರಾಗೆ ಬರುತ್ತಿತ್ತು. ಹಾಲಿನ ಪುಡಿ ತೆಗೆದುಕೊಂಡು ವಾಪಸ್ ಮನೆಗೆ ಬರುತ್ತಿದ್ದಾಗ ಪಕ್ಕದ ಮನೆಯ ಹೆಂಗಸರು ಏನಮ್ಮ ಹೋಗಿದ್ಯ ನೀರು ನೋಡಲು ಪೆಟ್ರೋಲ್ ಬಂಕ್ ವರೆಗೂ ಬಂದಿದೆ ಎಂದು ಕೇಳಿದಾಗ. ಓಹೋ !! ಅಲ್ಲಿಯವರೆಗೂ ಬಂದಿದೆಯ ನಾವು ಬೆಳಿಗ್ಗೆ ಹೋಗಿ ನೋಡಿ ಬರುತ್ತೇವೆ ಎಂದು ಮನೆಗೆ ಬಂದು ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆ.
ಮಳೆ ಸತತವಾಗಿ ಬರುತ್ತಲೇ ಇತ್ತು. ೯ ಗಂಟೆಯ ಸುಮಾರಿಗೆ ಕರೆಂಟ್ ಹೋಯಿತು. ಕತ್ತಲಲ್ಲಿ ಹೇಗೆ ಊಟ ಮಾಡುವುದು ಕರೆಂಟ್ ಬಂದ ಮೇಲೆ ಮಾಡೋಣ ಎಂದು ಕಾಯುತ್ತಲೇ ಇದ್ದೆವು. ಸುಮಾರು ಒಂದು ಗಂಟೆಯ ನಂತರ ಕರೆಂಟ್ ಬಂದಿತು. ಊಟ ಮಾಡಿ ಹನ್ನೊಂದು ಗಂಟೆಯ ಸುಮಾರಿಗೆ ಮಲಗಿದೆವು.
ಆಚೆ ಮಳೆ ಬಿಡುವು ಕೊಡದೆ ಸುರಿಯುತ್ತಲೇ ಇತ್ತು. ಅದೇನೋ ಗೊತ್ತಿಲ್ಲ ಯಾಕೋ ಮನಸಿಗೆ ಸಮಾಧಾನವೇ ಇರಲಿಲ್ಲ. ಯಾಕೋ ನಿದ್ದೆ ಹತ್ತಲಿಲ್ಲ. ಹಾಗೆ ಅಮ್ಮನ ಬಳಿ ಬೆಳಿಗ್ಗೆ ಹೋಗಿ ನೀರು ನೋಡಿ ಬರೋಣ ಎಂದು ಮಾತಾಡುತ್ತ ಹಾಗೆ ಕಣ್ಣು ಮುಚ್ಚಿದೆ. ಸುಮಾರು ಒಂದೆರಡು ಗಂಟೆ ಮಲಗಿರಬಹುದು. ಅಷ್ಟರಲ್ಲಿ ದನಕರುಗಳು ಜೋರಾಗಿ ಕೂಗುವ ಸದ್ದು ಕೇಳಿತು. ಪ್ರತಿದಿನ ರಾತ್ರಿಯ ಹೊತ್ತು ಅದು ಹಸಿವಾದಾಗ ಕೂಗುವುದು ಅಭ್ಯಾಸವಾಗಿದ್ದರೂ ಈ ದಿನ ಅವು ಹಸಿವಿನಿಂದಲ್ಲದೆ ಭಯದಿಂದ ಕೂಗುವಂತೆ ಕೇಳುತ್ತಿತ್ತು. ಜೊತೆಯಲ್ಲಿ ಜೋರಾಗಿ ನೀರು ಹರಿಯುವ ಸದ್ದು ಕೇಳುತ್ತಿತ್ತು. ನದಿಯಿಂದ ನಮ್ಮ ಮನೆಗೆ ಸುಮಾರು ಅರ್ಧ ಮುಕ್ಕಾಲು ಕಿಮೀ ದೂರ ಇದೆ. ಹಾಗಿದ್ದರೆ ನೀರಿನ ಸದ್ದು ಎಲ್ಲಿಂದ ಬರುತ್ತಿದೆ ಎಂದು ಆಶ್ಚರ್ಯವಾಯಿತು.
ಸಮಯ ನೋಡಿದರೆ ಮಧ್ಯ ರಾತ್ರಿ ಮೂರು ಗಂಟೆ. ಅಪ್ಪ ಅಮ್ಮ ಇಬ್ಬರೂ ಒಳ್ಳೆ ನಿದ್ದೆಯಲ್ಲಿದ್ದರು. ನಾನು ಎದ್ದು ಕಿಟಕಿಯಿಂದ ನೋಡಿದರೆ ಮಳೆ ಬೀಳುತ್ತಲೇ ಇತ್ತು. ಹೊರಗಿನ ದೀಪ ಹಾಕಿ ಛತ್ರಿ ಹಿಡಿದು ಆಚೆ ಬಂದು ನೋಡಿದರೆ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. ಊರೊಳಗೆ ನೀರು ನುಗ್ಗಿಬಿಟ್ಟಿತ್ತು. ನಮ್ಮ ಮನೆ ಇದ್ದದ್ದು ಮೂರನೇ ಅಂತಸ್ತಿನಲ್ಲಿ. ಆಗ ನೀರು ನೆಲದಿಂದ ಒಂದು ಅಡಿಯಷ್ಟು ಬಂದಿತ್ತು. ನನಗೆ ಗಾಭರಿ ಆಗಿ ಮನೆ ಒಳಗೆ ಹೋಗಿ ಅಪ್ಪ ಅಮ್ಮನನ್ನು ಎಬ್ಬಿಸಿ ಆಚೆ ಕರೆದುಕೊಂಡು ಬಂದೆ.
ಅಷ್ಟರಲ್ಲಿ ಅಕ್ಕಪಕ್ಕದ ಜನರು ಎಚ್ಚರಗೊಂಡಿದ್ದರು. ಎಲ್ಲಿ ನೋಡಿದರೂ ಜನರ ಕೂಗಾಟ, ದನಕರುಗಳ ಕೂಗಾಟ...
ಗಂಟೆ ಗಂಟೆಗೂ ನೀರಿನ ಪ್ರಮಾಣ ಜಾಸ್ತಿ ಆಗುತ್ತಿದೆ. ಮಳೆ ಸತತವಾಗಿ ಸುರಿಯುತ್ತಲೇ ಇದೆ. ಸಮಯ ಬೆಳಿಗ್ಗೆ ಆರು ಗಂಟೆ. ನೀರಿನ ಪ್ರಮಾಣ ನೆಲದಿಂದ ಐದರಿಂದ ಆರು ಅಡಿವರೆಗೂ ಬಂದಿತ್ತು. ಜನರೆಲ್ಲಾ ನೆಲ ಮಹಡಿಯಿಂದ ಎತ್ತರದ ಮಹಡಿಗಳಿಗೆ ತಲುಪಿದ್ದರು. ಇಡೀ ಮಂತ್ರಾಲಯದಲ್ಲಿ ಕರೆಂಟ್ ಇರಲಿಲ್ಲ. ಮೋಟಾರ್ ಗಳು ಕೆಲಸ ಮಾಡುತ್ತಿಲ್ಲ. ನೀರಿನ ಟ್ಯಾಂಕ್ ಗಳಲ್ಲಿ ನೀರು ಖಾಲಿ ಆಗಿದೆ. ಟಾಯ್ಲೇಟ ಗಳು ಕೆಟ್ಟ ವಾಸನೆ ಬರಲು ಶುರುವಾಯಿತು. ಚಾರ್ಜ್ ಇಲ್ಲದೆ ಮೊಬೈಲ್ ಗಳು ಆಫ್ ಆಗುವ ಹಂತಕ್ಕೆ ಬಂದಿದ್ದು. ಎಲ್ಲರ ಮುಖದಲ್ಲೂ ಭಯ ಮನೆ ಮಾಡಿತ್ತು....ಹೊಟ್ಟೆಯಲ್ಲಿ ಹಸಿವೆ ಕಾಡುತ್ತಿತ್ತು.
ಸಮಯ ಬೆಳಿಗ್ಗೆ ಹತ್ತು ಗಂಟೆ ನೀರಿನ ಮಟ್ಟ ಹತ್ತು ಅಡಿಗೆ ತಲುಪಿತ್ತು. ಮೊದಲನೇ ಅಂತಸ್ತಿನವರು, ಎರಡನೆಯ ಅಂತಸ್ತಿನವರು ಎಲ್ಲರೂ ನಮ್ಮ ಮಹಡಿಗೆ ಬಂದಿದ್ದರು. ಇದ್ದಿದ್ದರಲ್ಲೇ ಎಲ್ಲರಿಗೂ ತಿಂಡಿ, ಊಟದ ವ್ಯವಸ್ಥೆ ಮಾಡಿದೆವು. ಅಷ್ಟರಲ್ಲಿ ಎಲ್ಲೆಡೆ ಸುದ್ದಿ ಹರಡಿ ಬೇರೆ ಬೇರೆ ಊರುಗಳಿಂದ ಸಂಬಂಧಿಕರಿಂದ ಫೋನ್ ಗಳು ಬರಲು ಶುರುವಾಯಿತು. ಎಲ್ಲರೂ ಟಿವಿಯಲ್ಲಿ ಇಲ್ಲಿನ ಪರಿಸ್ಥಿತಿ ನೋಡಿ ಗಾಭರಿ ಆಗಿದ್ದರು. ಕೆಲವರ ಮೊಬೈಲ್ ಆಫ್ ಆಗಿ ನನ್ನ ನಂಬರ್ ಅವರಿಗೆ ಕೊಟ್ಟು ಅವರ ಕರೆಗಳು ನನ್ನ ಮೊಬೈಲ್ ಬರಲು ಆರಂಭಿಸಿದವು.
ಅಕ್ಕಪಕ್ಕದ ಮಹಡಿಯವರಿಗೆ ಮನೆಯಲ್ಲಿದ್ದ ಕುಡಿಯುವ ನೀರನ್ನು ಒಬ್ಬರ ಮೂಲಕ ಇನ್ನೊಬ್ಬರಿಗೆ ಹಂಚಿಕೊಳ್ಳುವುದು ಸಾಮಾನ್ಯವಾಗಿ ಹೋಗಿತ್ತು. ಎಲ್ಲರಿಗೂ ಮುಂದೇನು ಆಗುವುದೋ ಎಂಬ ಭಯ ಕಾಡುತ್ತಿತ್ತು. ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ ಹದಿನೈದು ಅಡಿಗೆ ತಲುಪಿತ್ತು. ನೀರಿನ ಮಟ್ಟ ಇನ್ನೂ ಹೆಚ್ಚಾಗಿ ಇಡೀ ಮಂತ್ರಾಲಯವೇ ಕೊಚ್ಚಿ ಹೋಗುತ್ತದೇನೋ ಎನಿಸಿಬಿಟ್ಟಿತು. ಅಷ್ಟರಲ್ಲಿ ಅಮ್ಮ ಹುಬ್ಬಳ್ಳಿಯಲ್ಲಿದ್ದ ನನ್ನ ಅಕ್ಕನಿಗೆ ಕರೆ ಮಾಡಿ ನೋಡಮ್ಮ ಸಧ್ಯದ ಪರಿಸ್ಥಿತಿ ಹೀಗಿದೆ ನಾಳೆ ಹೊತ್ತಿಗೆ ನಾವು ಇರುತ್ತೀವೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುತ್ತಿದ್ದರು. ಅಷ್ಟರಲ್ಲಿ ಅಪ್ಪ ಒಳಗಿಂದ ಬಂದು, ನೋಡು ರಾಯರೇ ಮುಳುಗಿದ್ದಾರೆ ಇನ್ನು ನಾವು ಯಾವ ಲೆಕ್ಕ. ಅವರ ಇಚ್ಛೆ ಹೇಗಿದ್ದರೆ ಹಾಗೆ ಆಗುತ್ತದೆ ಏಕೆ ಚಿಂತಿಸುತ್ತೀರಾ ಎಂದು ಹೇಳಿದರು.
ಎಲ್ಲಿ ನೋಡಿದರು ನೀರು,
ಮುಕ್ಕಾಲು ಮಂತ್ರಾಲಯ ನೀರಿನ ಪಾಲಾಗಿತ್ತು. ನೀರಿನಲ್ಲಿ ಕೊಚ್ಚಿ ಬರುತ್ತಿರುವ ಪ್ರಾಣಿಗಳ ಶವಗಳು, ಮನೆಯ ಪರಿಕರಗಳು, ಬೆಲೆ ಬಾಳುವ ವಸ್ತುಗಳು ಎಲ್ಲವನ್ನೂ ನೋಡಿ ಮನಸು ಚುರುಗುಟ್ಟುತ್ತಿತ್ತು. ಟ್ಯಾಂಕ್ ನಲ್ಲಿ ನೀರು ಖಾಲಿ ಆಗಿ ಕೈ ಕಾಲು ತೊಳೆಯಲು, ಹಿತ್ತಲಿಗೆ ಬಳಸಲು ಜನ ಅದೇ ನೀರನ್ನು ತುಂಬಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ಆರರ ವೇಳೆಗೆ ನೀರು ಅದೇ ಮಟ್ಟದಲ್ಲಿ ಹರಿಯುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯಲ್ಲಿದ್ದ ಪಂಡಿತರಿಗೆ ಮೈಸೂರಿನಿ೦ದ ಕರೆ ಮಾಡಿದ ಒಬ್ಬರು ಮೊದಲು ನೀರಿಗೆ ಬಾಗಿನ ಸಮರ್ಪಿಸಿ ನಂತರ ಒಂದು ಒನಕೆಗೆ ಪೂಜೆ ಮಾಡಿ ಜೊತೆಯಲ್ಲಿ ಒಂದು ರೂಪಾಯಿ ಇಟ್ಟು ಆ ಒನಕೆಯನ್ನು ನೀರಿನಲ್ಲಿ ಬಿಟ್ಟು ಬಿಡಿ. ನೀರಿನ ಪ್ರಮಾಣ ಕಡಿಮೆ ಆಗುತ್ತದೆ ಎಂದು ಸಲಹೆ ಕೊಟ್ಟರು. ಅದರಂತೆ ಪೂಜೆ ಮಾಡಿ ಒನಕೆಯನ್ನು ನೀರಿನಲ್ಲಿ ಬಿಟ್ಟರು.
ಆಶ್ಚರ್ಯಕರವಾಗಿ ಎರಡು ಗಂಟೆಯ ನಂತರ ನೋಡ ನೋಡುತ್ತಿದ್ದಂತೆ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದು ಗಮನಕ್ಕೆ ಬಂದಿತು. ರಾತ್ರಿ ಒಂಭತ್ತರ ಸಮಯಕ್ಕೆ ಇನ್ನೂ ಕಡಿಮೆ ಆಗಿತ್ತು. ಮನಸಿಗೆ ಸ್ವಲ್ಪ ಸಮಾಧಾನವಾಯಿತು. ಆದರೂ ಏನೋ ಕಳವಳ, ಭಯದಿಂದಲೇ ಮಲಗಿದೆವು. ಬೆಳಿಗ್ಗೆ ಎದ್ದು ಆಚೆ ಬಂದು ನೋಡಿದರೆ ಮಳೆ ಸಂಪೂರ್ಣವಾಗಿ ನಿಂತಿತ್ತು. ನೀರಿನ ಹರಿವು ಸಂಪೂರ್ಣವಾಗಿ ನಿಂತು ಎಲ್ಲೆಡೆ ಬರೀ ಕೆಸರು ತುಂಬಿತ್ತು. ಎಲ್ಲೆಡೆ ಕೆಟ್ಟ ವಾಸನೆ ತುಂಬಿತ್ತು. ಆಚೆ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಕಾಲಿಟ್ಟರೆ ಜಾರುತ್ತಿತ್ತು. ಎಲ್ಲರೂ ಅವರವರ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು. ಅಪಾರ ಆಸ್ತಿ ನಷ್ಟವಾಗಿತ್ತು. ಹದಿನೈದು ಅಡಿಗಿಂತ ಎತ್ತರದ ಪ್ರದೇಶಕ್ಕೆ ನೀರು ನುಗ್ಗಿರಲಿಲ್ಲ ಅಷ್ಟೇ. ಅಲ್ಲಿನ ಪ್ರದೇಶದಲ್ಲಿ ಮಾತ್ರ ಯಾವುದೇ ಹಾನಿ ಆಗಿರಲಿಲ್ಲ. ಇನ್ನುಳಿದಂತೆ ಎಲ್ಲ ಪ್ರದೇಶದಲ್ಲೂ ವಿಪರೀತ ನಷ್ಟ ಉಂಟಾಗಿತ್ತು.
ಮಧ್ಯಾಹ್ನದ ವೇಳೆಗೆ ಬಿಸಿಲು ಬಂದು ನೆಲ ಒಣಗಲು ಶುರುವಾಯಿತು. ಅಷ್ಟರಲ್ಲಿ ಆಗಮಿಸಿದ ಪೊಲೀಸರು ಯಾವ ಖಾಯಿಲೆಯೂ ಬರದಿರಲೆಂದು ಮುಂಜಾಗ್ರತ ಕ್ರಮವಾಗಿ ಪ್ರತಿಯೊಂದು ಮನೆಗೂ ಹೋಗಿ ಎಲ್ಲರನ್ನೂ ಊರು ಬಿಡುವಂತೆ ತಿಳಿಸುತ್ತಿದ್ದರು. ನಾವು ಹತ್ತು ದಿನಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ತುಂಬಿಕೊಂಡು ಬಸ್ ನಿಲ್ದಾಣದ ಬಳಿ ಬಂದರೆ. ಇಡೀ ಮಂತ್ರಾಲಯದ ಜನವೇ ಅಲ್ಲಿ ತುಂಬಿ ಹೋಗಿದ್ದರು. ಬಸ್ಸುಗಳು ಇರಲಿಲ್ಲ. ಇದ್ದ ಬದ್ದ ಖಾಸಗಿ ವಾಹನಗಳಲ್ಲೇ ಎಲ್ಲರೂ ತೆರಳುತ್ತಿದ್ದರು. ನಾನೂ ಅಪ್ಪ ಅಮ್ಮ ಮೂವರು ಯಾವುದೊ ಒಂದು ಟ್ರಾಕ್ಟರ್ ನಲ್ಲಿ ಜಾಗ ಮಾಡಿಕೊಂಡು ಅನಂತಪುರಂ ನಲ್ಲಿ ಇದ್ದ ಸಂಬಂಧಿಕರ ಮನೆಗೆ ಬಂದೆವು.
ವಾರದ ನಂತರ ಮತ್ತೆ ಮಂತ್ರಾಲಯಕ್ಕೆ ಹೋದೆವು. ಇನ್ನು ಆಗಷ್ಟೇ ಜನ ಮರಳಿ ಬರುತ್ತಿದ್ದರು. ಇನ್ನೂ ಆ ಕೆಟ್ಟ ವಾಸನೆ ಹೋಗಿರಲಿಲ್ಲ. ಬಿದ್ದು ಹೋದ ಮನೆಗಳು, ರಸ್ತೆಯಲ್ಲೇ ಬಿದ್ದಿದ್ದ ಅಂಗಡಿಯ ಸಾಮಗ್ರಿಗಳು, ಉರುಳಿಬಿದ್ದ ಲೈಟ್ ಕಂಬಗಳು, ಮರಗಿಡಗಳು, ಪ್ರವಾಹದಲ್ಲಿ ಕೊಚ್ಚಿ ಬ೦ದಿದ್ದ ಪೆಟ್ರೋಲ್ ಬಂಕ್ ನ ಟ್ಯಾಂಕರ್ ಎಲ್ಲವನ್ನೂ ನೋಡಿ ದುಃಖ ಉಮ್ಮಳಿಸಿ ಬಂತು. ಒಬ್ಬೊಬ್ಬರೇ ಬಂದು ಒಂದೊಂದು ವಿಷಯಗಳನ್ನು ತಿಳಿಸುತ್ತಿದ್ದರು. ಮಂತ್ರಾಲಯ - ರಾಯಚೂರು ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯ ಐದು ಪಿಲ್ಲರ್ ಗಳು ಬಿದ್ದು ಹೋಗಿದ್ದು ಸಂಪರ್ಕ ಕಡಿದು ಹೋಗಿತ್ತು. ಮಠದಲ್ಲಿ ಸ್ವಚ್ಚತಾ ಕಾರ್ಯ ಇನ್ನೂ ನಡೆಯುತ್ತಲೇ ಇತ್ತು. ಸ್ವಯಂ ಸೇವಕರಾಗಿ ಬಂದ ಎಷ್ಟೋ ಜನ ಆ ವಾಸನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಹಿಂತಿರುಗಿ ಹೋಗುತ್ತಿದ್ದರು. ಹುಂಡಿ ಮತ್ತಿತರ ಜಾಗದಲ್ಲಿ ಸೇರಿದ್ದ ಜೀವಂತ ಹಾವುಗಳು, ಹೀಗೆ ಇನ್ನೂ ಅನೇಕ ವಿಚಾರಗಳು ಕೇಳಿ ಬರುತ್ತಲೇ ಇದ್ದವು. ಮತ್ತೆ ಮಾಮೂಲಿನ ಜನ ಜೀವನ ಮರಳಲು ತಿ೦ಗಳುಗಳೇ ಹಿಡಿದವು.
(ಮಠದಲ್ಲಿ ನೀರಿನ ಮಟ್ಟ ಏರುತ್ತಿದ್ದಾಗ ಬೃಂದಾವನದ ಮೇಲಿರುವ ನರಸಿಂಹ ದೇವರ ವಿಗ್ರಹವನ್ನು ತೆಗೆದು ಬಿಡೋಣ ಎಂದು ಅರ್ಚಕರು ನಿರ್ಧರಿಸಿದರು. ಆದರೆ ಯಾರಿಗೂ ಅದನ್ನು ತೆಗೆಯಲು ಧೈರ್ಯ ಹಾಗೂ ಮನಸು ಬರಲಿಲ್ಲ. ನಂತರ ದೇವರ ಮೇಲೆ ಭಾರ ಹಾಕಿ ಆ ವಿಗ್ರಹವನ್ನು ಅಲ್ಲೇ ಬಿಟ್ಟರು. ಆಶ್ಚರ್ಯಕರ ರೀತಿಯಲ್ಲಿ ಇಡೀ ಬೃಂದಾವನವೇ ಮುಳುಗಿ ಹೋದರು ಆ ವಿಗ್ರಹ ಮಾತ್ರ ಯಥಾಸ್ಥಿಯಲ್ಲಿ ಹಾಗೆಯೇ ಇತ್ತು)
Comments
ಉ: ತುಂಗಭದ್ರೆಯಲ್ಲಿ ಮಂತ್ರಾಲಯ
In reply to ಉ: ತುಂಗಭದ್ರೆಯಲ್ಲಿ ಮಂತ್ರಾಲಯ by pkumar
ಉ: ತುಂಗಭದ್ರೆಯಲ್ಲಿ ಮಂತ್ರಾಲಯ
In reply to ಉ: ತುಂಗಭದ್ರೆಯಲ್ಲಿ ಮಂತ್ರಾಲಯ by pkumar
ಉ: ತುಂಗಭದ್ರೆಯಲ್ಲಿ ಮಂತ್ರಾಲಯ
ಉ: ತುಂಗಭದ್ರೆಯಲ್ಲಿ ಮಂತ್ರಾಲಯ :ಜಲ-ಜೀವ-ಉಳಿಸ(ತೆಗೆಯ)ಲುಬಹುದು-..!!
In reply to ಉ: ತುಂಗಭದ್ರೆಯಲ್ಲಿ ಮಂತ್ರಾಲಯ :ಜಲ-ಜೀವ-ಉಳಿಸ(ತೆಗೆಯ)ಲುಬಹುದು-..!! by venkatb83
ಉ: ತುಂಗಭದ್ರೆಯಲ್ಲಿ ಮಂತ್ರಾಲಯ :ಜಲ-ಜೀವ-ಉಳಿಸ(ತೆಗೆಯ)ಲುಬಹುದು-..!!
ಉ: ತುಂಗಭದ್ರೆಯಲ್ಲಿ ಮಂತ್ರಾಲಯ
In reply to ಉ: ತುಂಗಭದ್ರೆಯಲ್ಲಿ ಮಂತ್ರಾಲಯ by H A Patil
ಉ: ತುಂಗಭದ್ರೆಯಲ್ಲಿ ಮಂತ್ರಾಲಯ
ಉ: ತುಂಗಭದ್ರೆಯಲ್ಲಿ ಮಂತ್ರಾಲಯ
In reply to ಉ: ತುಂಗಭದ್ರೆಯಲ್ಲಿ ಮಂತ್ರಾಲಯ by Chikku123
ಉ: ತುಂಗಭದ್ರೆಯಲ್ಲಿ ಮಂತ್ರಾಲಯ