ತುಪ್ಪ , ಚಾರ್ವಾಕ ಮತ್ತು ಲೋಕಾಯತ ಪಂಥ

ತುಪ್ಪ , ಚಾರ್ವಾಕ ಮತ್ತು ಲೋಕಾಯತ ಪಂಥ

(ಹಿಂದೊಮ್ಮೆ ಈ ಬಗ್ಗೆ ಬರೆದಿದ್ದೆ ; ಅದೇಕೋ ಅಲ್ಲಿ ತಲೆಬರಹ ಅಷ್ಟೇ ಉಳಿದಿದೆ . ಸಂಬಂಧ ಪಟ್ಟ ಪುಸ್ತಕ ಊರಲ್ಲಿತ್ತು ; ಈ ಸಲ ತಂದು ಮತ್ತೊಮ್ಮೆ ಕುಟ್ಟಿರುವೆ . ಹೇಗೂ ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ; ಮತ್ತು ತುಪ್ಪ ಮತ್ತು ಚಾರ್ವಾಕ ಬಗ್ಗೆ ಹಂಸಾನಂದಿ ಅವರ ಅನುವಾದ ಕುರಿತು ಟಿಪ್ಪಣಿ ಮತ್ತು ಮರುಟಿಪ್ಪಣಿಗಳು ನಡೆದಿವೆ)
ಪುಸ್ತಕ :- ಲೋಕ ಚಾರುವಾಕ , ಬರೆದವರು ಡಾ. ಎಚ್. ಎನ್. ಮಂಜುರಾಜ್ . ಇದು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಕಿರುಹೊತ್ತಗೆ . ಅಲ್ಲಿಂದ ಒಟ್ಟುಮಾಡಿದ ವಿಷಯ ಇಲ್ಲಿದೆ.

ನಮ್ಮ ಇತಿಹಾಸದಲ್ಲಿ ಗೌತಮ ಬುದ್ಧ ಪ್ರಬಲ ಮತ್ತು ವಿಚಾರಶೀಲ ವ್ಯಕ್ತಿ . ದೇವರು-ಗೀವರ ಬಗ್ಗೆ ತಲೆಕೆಡಿಸಿಕೊಳ್ಳದೇ ಮನುಷ್ಯನ ಬದುಕಿನ ಬಗ್ಗೆ ಚಿಂತಿಸಿದವನು ಅವನು . ಅವನಿಗಿಂತ ಮೊದಲೇ , ಮೂರುಸಾವಿರ ವರ್ಷಗಳ ಹಿಂದೆಯೇ ನಮ್ಮ ಅಂಥ ಸಂಪ್ರದಾಯಗಳನ್ನು ಕಂದಾಚಾರಗಳನ್ನು ಪ್ರಶ್ನಿಸಿದ ಒಂದು ವಿಚಾರವಾದೀ ಪಂಥ ಹುಟ್ಟಿಕೊಂಡಿತು. ಆ ಪಂಥವೇ ಲೋಕಾಯತ ಪಂಥ . ಭೌತಿಕವಾದಿಗಳಾದ ಚಾರುವಾಕರು ದೇವರ ಅಸ್ತಿತ್ವವನ್ನು ಕುರಿತು ವ್ಯರ್ಥ ಜಿಜ್ಞಾಸೆಯಲ್ಲಿ ತೊಡಗದೇ ದೇವರ ಹೆಸರಿನಲ್ಲಿ ನಡೆವ ಶೋಷಣೆ, , ನಿರರ್ಥಕವಾದ ಯಜ್ಞ ಯಾಗಾದಿಗಳು , ಮನುಷ್ಯರ ನಡುವೆ ತಾರತಮ್ಯ ಕಲ್ಪಿಸುವ ಅಮಾನವೀಯ ನಡತೆ , ಕಾಲ , ಹಣ , ಶ್ರಮಗಳ ಅನಗತ್ಯ ದುಂದು ಇವನ್ನೆಲ್ಲ ವಿರೋಧಿಸಿದ್ದು ಮತ್ತು ದೈವ ನಂಬಿಕೆಗಿಂತ ಮನುಷ್ಯನ ನಂಬಿಕೆಗೆ ಒತ್ತು ಕೊಟ್ಟಿದ್ದು ಈ ಪಂಥದ ಮುಖ್ಯ ನಿಲುವು . ಭಾರತದಲ್ಲಿ ೩೦೦೦ ವರ್ಷ ಹಿಂದೆಯೇ ವಿಚಾರಕ್ರಾಂತಿಯ ಬೀಜ ನೆಟ್ಟವರಿವರು. ಈ ಪಂಥವನ್ನು ಕುರಿತು ಅಧಿಕೃತವಾದ ಗ್ರಂಥಗಳು ಯಾವುವೂ ಇಲ್ಲ .

ಚಾರುವಾಕರು ಕಟ್ಟಾ ನಾಸ್ತಿಕರು , ಹುಟ್ಟಾ ಚಿಂತಕರು. ಭೌತಿಕವಾದಿಗಳು.
ನಾಸ್ತಿಕವಾದವು ವಿದೇಶದಿಂದ ಆಮದಾದದ್ದಲ್ಲ .
ಬುದ್ಧನು ಬಹಳಷ್ಟು ಸಂಗತಿಗಳಲ್ಲಿ ಚಾರ್ವಾಕರಿಂದ ಪ್ರೇರಿತನಾಗಿದ್ದಾನೆ.
ಚಾರುವಾಕರ ಸಿದ್ಧಾಂತವು ಭಾರತದ ಮೊಟ್ಟಮೊದಲ ಪ್ರಗತಿಪರ ವಿಚಾರಧಾರೆ.
ಉಳಿದೆಲ್ಲ ಸಿದ್ಧಾಂತಗಳು ದರ್ಶನಗಳು ಆಧ್ಯಾತ್ಮ ಮತ್ತು ಆಸ್ತಿಕತೆಯೊಂದಿಗೆ ರಾಜಿಮಾಡಿಕೊಂಡವು .
ಈ ಶಾಸ್ತ್ರವನ್ನು ಧ್ವಂಸಮಾಡಲಾಯಿತು.
ಈ ದರ್ಶನದ ಮೇಲೆ - ಗ್ರಂಥಕರ್ತ, ಕೃತಿ , ಮತ್ತು ವಿಚಾರಧಾರೆಯ ಮೇಲೆ ವ್ಯವಸ್ಥಿತ ಹಲ್ಲೆ ನಡೆದಿದೆ. ಅದನ್ನು ಖಂಡಿಸಿ ಬರೆದ ಟೀಕೆ, ಗ್ರಂಥಗಳಿಂದಷ್ಟೇ ನಮಗೆ ಈ ಸಿದ್ಧಾಂತದ ಬಗ್ಗೆ ತಿಳಿಯುವುದು.
'ಬದುಕಿರುವವರೆಗೂ ಸುಖವಾಗಿ ಬಾಳಬೇಕು. ಶರೀರವು ಸುಟ್ಟು ಬೂದಿಯಾದ ಮೇಲೆ ಮತ್ತೆ ಹಿಂತಿರುಗಿ ಬರುವುದಿಲ್ಲ . ಸುಖವನ್ನು ಅನುಭವಿಸುತ್ತ ದುಃಖವಾದುದ್ದನ್ನು ಬಿಡಬೇಕು. ಸುಖವು ದುಃಖಮಿಶ್ರಿತ ಎಂದು ಸುಖವನ್ನೇ ಬಿಟ್ಟುಬಿಡುವುದು ಸರಿಯಲ್ಲ. ಯಜ್ಞಯಾಗಾದಿಗಳು ಹೊಟ್ಟೆಹೊರೆವ ಸಾಧನಗಳು , ಕೇವಲ ಮೋಸ . ಸ್ವರ್ಗ, ಮೋಕ್ಷ , ಪರಲೋಕ ಆತ್ಮ ಇವಾವುವೂ ಇಲ್ಲ . ಸನ್ಯಾಸ , ಭಸ್ಮಲೇಪ , ಕಾಷಾಯವಸ್ತ್ರ ಧಾರಣೆ - ಇವು ಬುದ್ಧಿ ಮತ್ತು ಪೌರುಷ ಇಲ್ಲದೆ ಇರುವವರ ಹೊಟ್ಟೆ ಹೊರೆವ ಸಾಧನಗಳು . ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು . ( ಈ ವಾಕ್ಯದ ಬಗ್ಗೆ ಹೆಚ್ಚಿನ ವಿವೇಚನೆಯೂ ಮುಂದೆ ಇದೆ)' ಇದು ಈ ದರ್ಶನದ ಸಾರಾಂಶ .
ಚಾರ್ವಾಕರಿಗೆ ಪ್ರತ್ಯಕ್ಷ್ಯವೇ ಪ್ರಮಾಣ . ಊಹೆ, ಕಲ್ಪನೆ, ಅನುಮಾನಗಳಿಗೆ ಎಡೆಯಿಲ್ಲ .
ಚಾರುವಾಕ- ಮನಸ್ಸಿಗೆ ಹಿಡಿಸುವ ಮಾತು. ಲೋಕಾಯತ , ಲೋಕಾಯತಕ, ಲೌಕಾಯ ಎಂಬ ಹೆಸರೂ ಇವೆ.
ಚಾರುವಾಕದರ್ಶನದ ಗುರಿ ಆತ್ಮಜ್ಞಾನವನುಂಟುಮಾಡುವುದಲ್ಲ ; ಆತ್ಮರಹಿತ ಅಸ್ತಿತ್ವವನ್ನು ಸಾರುವುದೇ ಆಗಿದೆ.
ಚಾರುವಾಕನು ಫ್ರಾಯ್ಡನಿಗೂ ಎರಡು ಸಾವಿರ ವರ್ಷ ಮೊದಲೇ ಚಾರುವಾಕನು ಕಾಮವು ಮಾನವನ ಪ್ರಥಮ ಅಲ್ಲ , ಏಕಮೇವ ಪುರುಷಾರ್ಥ ಅಂದು ಸಾರಿದನು. ಇಲ್ಲಿ ಕಾಮವೆಂದರೆ ಮನುಷ್ಯನ ಆಸೆ ಆಕಾಂಕ್ಷೆ ತುಷ್ಟಿಗುಣಗಳ ಒಟ್ಟು ಮೊತ್ತ ವೆಂದು ತಿಳಿಯಬೇಕು.
ಚಾರುವಾಕ ದರ್ಶನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಬಂಡಾಯ! ಇವರು ಅಲ್ಪಸಂಖ್ಯಾತರಾಗಿದ್ದರಿಂದ ಬಹುಸಂಖ್ಯಾತ ಹಿಂದೂ ಧರ್ಮೀಯರು ಈ ದರ್ಶನದ ಮೇಲೆ ಹಲ್ಲೆ ನಡೆಸಿದರು. ಚಾರುವಾಕರ ಕೃತಿಗಳು ನಾಶವಾದವು. ಲೋಕಾಯತರ ಯಾವ ಗ್ರಂಥಗಳೂ ಇಂದು ಸಿಗುವುದಿಲ್ಲ. ಅವರನ್ನು ಖಂಡಿಸಿ , ಬೈದು ಬರೆದ ಗ್ರಂಥಗಳಿಂದ ಅವರ ಹೇಳಿಕೆಗಳನ್ನು ಪುನರ್ರಚಿಸಿಕೊಳ್ಳಬೇಕಿದೆ.
ಲೋಕಾಯತ ಎಂದರೆ ಸಾಮಾನ್ಯ ಜನರ ವಿಚಾರಸರಣಿ ಎಂದು ಒಂದು ಅರ್ಥ . ಕೇವಲ ಈ ಲೋಕವನ್ನು ಸತ್ಯವೆಂದು ತಿಳಿಯುವವರು ಲೋಕಾಯತರು ಎಂದು ಇನ್ನೊಂದು ಅರ್ಥ . ಬದುಕಿರುವವರೆಗೆ ಚೆನ್ನಾಗಿ ಬದುಕು. ಅದಕ್ಕೆ ತಕ್ಕ ಪರಿಸರ ನಿರ್ಮಿಸಿಕೊಂಡು ಬದುಕು ಎಂದು ಈ ಪಂಥ ಹೇಳುವದು.
ಒಂದು ರೀತಿಯಲ್ಲಿ ಚಾರುವಾಕದರ್ಶನವನ್ನು ಆಧಾರವಾಗಿಟ್ಟುಕೊಂಡು ನಾವು ಅಂದೇ ಬದುಕತೊಡಗಿದ್ದಲ್ಲಿ ಇಷ್ಟು ಹೊತ್ತಿಗೆ ವಿಜ್ಞಾನ , ವಿಚಾರ , ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಳಿದ ದೇಶಗಳನ್ನು ಹಿಮ್ಮೆಟ್ಟಿಸುವಷ್ಟು ಸಾಧನೆ ಮಾಡಬಹುದಿತ್ತು.

ಈ ಪುಸ್ತಕದ ಒಂದು ಪ್ರತ್ಯೇಕ ಅಧ್ಯಾಯವಾಗಿ 'ಸಾಲ ಮಾಡಿಯಾದರೂ ತುಪ್ಪ ಕುಡಿ' ಎಂಬುದರ ವಿವೇಚನೆ ಇದೆ. ಚಾರ್ವಾಕರ ಮೇಲಿನ ಗಂಭೀರ ಆಪಾದನೆ ಎಂದರೆ ' ಸುಖವನ್ನು ಅನುಭವಿಸು; ನೀತಿ ಮತ್ತು ಮೌಲ್ಯಗಳನ್ನು ಬಿಟ್ಟಾದರೂ ಸರಿ , ಸುಖಪಡು' ಅಂತ ಹೇಳಿದರು ಅಂತ. ಚಾರ್ವಾಕರ ವಿರೋಧಿಗಳು ಈ ಒಂದು ಮಾತನ್ನೇ ಹಿಡಿದು ಹಿಗ್ಗಾಮುಗ್ಗಾ ಎಳೆದಾಡಿದರು. ಈಗಲೂ ಕೂಡ ಚಾರ್ವಾಕರೆಂದರೆ ಸಾಕು ಈ ಮಾತು ಅಲ್ಪಸ್ವಲ್ಪ ಓದಿದ ತಿಳಿವಳಿಕಸ್ಥರಿಗೆ ನೆನಪಾಗುವುದು. ಈ ವಿಚಾರ ಅಷ್ಟು ಜನಪ್ರಿಯವಾಗಿದೆ . ತುಪ್ಪ ಕುಡಿ ಎಂದರೆ ಸುಖಪಡು ಎಂದರ್ಥ . ಸುಖಪಡುವುದರಲ್ಲಿ ತಪ್ಪೇನು ? ಮೋಸ, ಕಳವು , ಲೂಟಿ , ಸುಲಿಗೆ ಮಾಡಿ ಸುಖಪಡಿರಿ ಅಂತ ಏನೂ ಹೇಳಿಲ್ಲವಲ್ಲ ? ಸಾಲ ಮಾಡಿಯಾದರೂ ಅಂತ ಹೇಳಿದ್ದಷ್ಟೇ ಹೊರತು ಸಾಲ ಮುಳುಗಿಸಿ, ಕೊಟ್ಟವರಿಗೆ ಹಿಂತಿರುಗಿಸಬೇಡಿ ಅಂತ ಏನೂ ಹೇಳಿಲ್ಲವಲ್ಲ ? ( ವಿಷ್ಣುಪುರಾಣದಲ್ಲಿ ಕಳವುಮಾಡಿ ತಂದಾದರೂ ಶ್ರಾದ್ಧವನ್ನು ಮಾಡಬೇಕು' ಅಂತ ಹೇಳಿದೆ. ವಿದ್ವಾಂಸರು ಈ ಮಾತನ್ನು ಏಕೆ ಖಂಡಿಸುವುದಿಲ್ಲ ? )

ಮೌಲ್ಯವಿವೇಕ ಎಂಬ ಅಧ್ಯಾಯದಲ್ಲಿ ಹೀಗೆ ಹೇಳಿದ್ದಾರೆ .
ಧರ್ಮ,ದೈವಗಳಲಿ ನಂಬಿಕೆ ಇಡುವುದು ಸನಾತನ ನಂಬಿಕೆ. ನೇರವಾಗಿ ಮೌಲ್ಯಗಳಲ್ಲಿ ನಂಬಿಕೆ ಇಡುವುದು ವಿಚಾರವಾದೀ ಮಾರ್ಗ . ಬುದ್ಧನು ಈ ಎರಡನೇ ಸಾಲಿಗೆ ಸೇರಿದವನು . ಇವನಿಗೆ ಪ್ರೇರಣೆ ಚಾರ್ವಾಕ. ಚಾರ್ವಾಕದರ್ಶನವು ಧರ್ಮ,ಆಧ್ಯಾತ್ಮಗಳನ್ನು ಜೀವನಮೌಲ್ಯಗಳೆಂದು ಪರಿಗಣಿಸದೆ ಅದರ ಸ್ಥಳದಲ್ಲಿ ಸುಖ, ಸಂತೋಷ, ನೀತಿ, ನ್ಯಾಯಗಳನ್ನು ಮೌಲ್ಯವೆಂದು ತಿಳಿಯುತ್ತಾರೆ . ಚಾರ್ವಾಕರಾಗಲಿ , ಭೌತಿಕವಾದವನ್ನು ಇಷ್ಟಪಡುವ ನಾಸ್ತಿಕರಾಗಲಿ ಮೌಲ್ಯಗಳನ್ನು ಧಿಕ್ಕರಿಸುವುದಿಲ್ಲ . ಸ್ವರ್ಗನರಕ , ಪಾಪಪುಣ್ಯಗಳಿಲ್ಲವೆಂದು ಸ್ವಚ್ಛಂದವಾಗಿ ಬದುಕುವುದಿಲ್ಲ , ಹಾಗೆ ಬದುಕಬಾರದು. 'ತಾನು ಒಳ್ಳೆಯವನಾಗಿರಬೇಕಾದ್ದು ತನ್ನ ಮತ್ತು ಸಮಾಜದ ಹಿತಕ್ಕೆ ' ಎಂಬುದು ಚಾರ್ವಾಕರ ನಂಬಿಕೆ. ಒಟ್ಟು ತತ್ವಶಾಸ್ತ್ರದಲ್ಲೇ ಮೌಲ್ಯವಿವೇಕ ಮೂಡಿಸಿದ ಮೊದಲ ಹೆಗ್ಗಳಿಕೆ ಚಾರುವಾಕದರ್ಶನದ್ದಾಗಿದೆ.

Rating
Average: 5 (1 vote)

Comments