ತ್ಯಾಂಪಿಯ ಕಾರು ಕಲಿವಾಟ
ಒಮ್ಮೆ ತ್ಯಾಂಪ ತ್ಯಾಂಪಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು, ಆಗಲೇ ಮಹಿಳಾ ವಿಶೇಷವಾಹನವೊಂದು ಅವರನ್ನು ದಾಟಿ ಮುಂದೆ ಹೋಯ್ತು.
" ನಾನು ಗಮನಿಸಲೇ ಇಲ್ಲ...ಕಂಡಕ್ಟ್ರೇನೋ" ಅಂದ ತ್ಯಾಂಪ, ನಾಲ್ಕೈದು ಜನರಿದ್ದಾರಲ್ಲ" ತ್ಯಾಂಪಿ.
"ಯಾಕೆ ನಾಲ್ಕೈದು ಜನರು ಇರಬಾರದಾ" ತ್ಯಾಂಪ.
"ಅವರಿಗೆ ಮಹಿಳೆಯರ ಬಸ್ಸೇ ಬೇಕಾಯ್ತಾ. ."ತ್ಯಾಂಪಿ.
" ಪುರುಷರು ಎಂದೂ ಹೀಗೆ ಕುಟುಕುವುದಿಲ್ಲ, ಪುರುಷರಿಗೆಂದೇ ಮೀಸಲಾದ ವಾಹನದಲ್ಲೂ ಮಹಿಳೆಯರು ಕೂರ್ತಾರೆ ಗೊತ್ತಾ." ತ್ಯಾಂಪ.
"ನೀವೆಲ್ಲಾ ಒಂದೇ....ಎಂದಳು ತ್ಯಾಂಪಿ.
"ತ್ಯಾಂಪಿ.. ನೋಡು ನೀನು ಗಮನಿಸಿದ್ದೂ ಪುರುಷರನ್ನು ಮಾತ್ರ, ಅದೇ ನನ್ನನ್ನು ಯಾಕೆ ಗದರುತ್ತೀಯಾ..?"
ಎಂದಿದ್ದ ತ್ಯಾಂಪ ಅವಳಿಗೆ ಮಾತ್ರ ಕೇಳುವಂತೆ.
ಅಂದೇ ತ್ಯಾಂಪಿಗೆ ವಾಹನ ಚಾಲನೆಯ ವಿಷಯ ಹೊಳೆದದ್ದು.
ಅವಳ ಮೊದಲ ದಿನದ ಕಲಿಕೆ ಆರಂಭವಾಗಿದ್ದುದು ಹೇಗೆ ಅಂತಾನಾ..??
ಅವಳು ಕಲಿಯಬೇಕಾದ ಕಾರು ಹಳದಿ ಬಣ್ಣದ ಸ್ಯಾಂಟ್ರೋ, ಅದನ್ನೇ ಕೆಲವೊಮ್ಮೆ ಆಲ್ಟ್ರೋ ಅಂತಾನೂ ಹೇಳುತ್ತಿದ್ದುದ್ದಿದೆ , ಅವಳು.
ಅದಕ್ಕೇ ಮೊದಲೇ ೮ ನೇ ಕ್ರಾಸಿಗೆ ಹೋಗಿ ಹಳದಿ ಚೂಡಿದಾರ, ಅದಕ್ಕೆ ಸರಿ ಹೊಂದುವ ಬಳೆಗಳು ಚಪ್ಪಲ್, ಚುನ್ನೀ, ಎಲ್ಲಾ ತಂದಿದ್ದಳು, ಇದೆಲ್ಲಾ ಏನೂ ಅಲ್ಲ.... ಬಿಡಿ, ಹಳದಿಗೆ ಸರಿಹೊಂದಿಸಲೆಂದೇ ೩-೪ ದಿನದಿಂದ ಹಲ್ಲೂ ಉಜ್ಜಿರಲಿಲ್ಲ ಅವಳು ಗೊತ್ತಾ......ಹೌದು ಮ್ಯಾಚಿಂಗ್ ಆಗೋದು ಬ್ಯಾಡವಾ..??
ತರಬೇತುದಾರ ಕೇಳಿದ್ದ ಹಿಂದೆ ಯಾವ ಗಾಡಿಯಾದರು ಚಲಾಯಿಸಿದ ಅನುಭವ ಇದೆಯೇ
ಹೌದು ತ್ಯಾಂಪಿಯ ಉತ್ತರ ಸಣ್ಣ ಇರುವಾಗ ಸೈಕಲ್ ಓಡಿಸಿದ್ದೆ.
ಸರಿಯಾಗಿ ಬಿಡ್ತಿದ್ರಾ..??
ಹೌದು ಮೊದಲು ಸೆಟ್ಟರ ಬೆನ್ನಿಗೇ ಬಿಟ್ಟಿದ್ದೆ ಅವರು ಒಂದು ವಾರ ಆಸ್ಪತೆಯಲ್ಲಿದ್ದರು...
ಅದಲ್ಲಾ.... ನಾಲ್ಕು ಚಕ್ರದ್ದು?
ಹೌದು!!
ಅವನು ಯಾವುದು ಅಂತ ಕೇಳಲಿಲ್ಲ ಪುಣ್ಯಾತ್ಮ, ಕೇಳಿದ್ದರೆ ಅವಳ ಬುದ್ದಿ ಮತ್ತೆ ಗೊತ್ತಾಗುತ್ತಿತ್ತು ಪಾಪ.
ಸರಿ ಇದು ಕ್ಲಚ್ಚು, ಎಕ್ಸಿಲೇಟರ್, ಬ್ರೇಕ್ ಎಂತೆಲ್ಲಾ ವಿವರಿಸುವಾಗ, ಕಾಲಿಗಾ, ಕಯ್ಯಲ್ಲಿಲ್ಲವಾ ಅಂತ ಕೇಳಿದ್ದಳು ತ್ಯಾಂಪಿ.
ಅಲ್ಲ... ಕಾಲಲ್ಲದೇ ಕೈಯಲ್ಲಿದ್ದರೆ ಒಳ್ಳೆಯದಿತ್ತು ಅಲ್ಲವಾ ",
ಕಯ್ಯಲ್ಲಿ ಬ್ರೇಕ್ ಇರೋ, ನಾಲ್ಕು ಚಕ್ರದ ಗಾಡಿ ಮಾರ್ಕೆಟಿಗೇ ಬಂದಿಲ್ಲ ಇಲ್ಲಿಯವರೆಗೂ.. ಅಂದಿದ್ದನವ.
ಸರಿ ಹೊರಟಿತು ಗಾಡಿ, ಅವಳಿಗೆ ಸರಿಯಾಗಿರಲಿ ಅಂತ ಬೆಳಿಗ್ಗೆ ಬೇಗ ಕಲಿಸಲು ಬಂದಿದ್ದನಾತ. ಹಾಗಲ್ಲಾ ಅಂತ ತರಬೇತುದಾರ ಹೇಳುವುದರೊಳಗೆ ಅ ಸುದರ್ಶನ ಚಕ್ರ ಒಮ್ಮೆಲೇ ಸುಯ್ಯೀ ಅಂತ ತಿರುಗಿಸಿ ಪಕ್ಕದ ನಾಲ್ಕು ನಾಯಿಗಳೂ ಎರಡು ಕರುಗಳೂ, ದಿಗಿಲು ಬಡಿದು ಓಡಿ ಇವಳಿಗೆ ಹಿಡಿಶಾಪದ ಹಾಕಿ ಬೊಗಳಿದರೆ, ಬೆಳಿಗ್ಗೆ ಬೆಳಿಗ್ಗೆ ಗಾಳಿ ಸೇವನೆಗೆ ಮುದುಕರೂ, ಮಕ್ಕಳೂ, ಬಂದಿದ್ದವರೂ, ಜನ್ಮದಲ್ಲೇ ಓಡದಿದ್ದವರೂ ಸಹಾ ಓಡಲು ಕಲಿತರು ಇವಳಿಂದ,
ಅಗಲೇ ಅವನಿಗೆ ಗೊತ್ತಾದದ್ದು ಇವಳು ಬಿಟ್ಟಿದ್ದು ಅಂತ ಮೊದಲು ಹೇಳಿದ್ದು ಸೀನನ ಗದ್ದೆ ಉಳುವ ಟ್ರಾಕ್ಟರ್ ಅಂತ ಇನ್ನು ನನ್ನ ಜನ್ಮದಲ್ಲೆ ಯಾರಿಗೂ ಕಲಿಸಲ್ಲ, ನನ್ನನ್ನು ಮಾತ್ರ ಬಿಡಿ ಅಂತ ಅಲವತ್ತು ಕೊಂಡು ಊರು ಬಿಟ್ಟು ಹೋದವನನ್ನು ಇನ್ನೂ ಹುಡುಕುತ್ತಿದ್ದಾರೆ ಆ ಶಾಲೆಯವರು.
ನಂತರದವ..
ಮಲ್ಲೇಶ್ವರಮ್ ೧೩ ನೇ ಅಡ್ದರಸ್ತೆಯಲ್ಲಿ ಕಾರು ಕಲಿಯುತ್ತಿದ್ದಳಾಕೆ, ತಿರುಪತಿ ಮಂದಿರ ದಾಟಿ ನಂತರದ ಉಬ್ಬಿನಲ್ಲಿ ಒಂದು ಸಂಪಿಗೆ ಮರವಿತ್ತು. ಅದರಲ್ಲಿ ಎರಡು ಸಂಪಿಗೆ ಹೂವುಗಳು ಅರಳಿ ನಗುತ್ತಿದ್ದವು. ತ್ಯಾಂಪಿ ಕಾರು ನಡೆಸುತ್ತಿದ್ದಂತೆಯೇ ಕಿಟಿಕಿಯ ಪಕ್ಕ ಕೈಹಾಕಿ ಹೂ ಕೊಯ್ಯಲು ನೋಡಿದ್ದಳು. ಈ ತಾಕಲಾಟದಲ್ಲಿ ಕಾರು ಎಡಗಡೆ ಮಗುಚಿಕೊಂಡಿತ್ತು. ಕಷ್ಟದಲ್ಲಿ, ತುಂಬಾನೇ ಅಧ್ವಾನವಾಗಿ ಹೋಯ್ತು ಅಲ್ಲಿಂದ ಹೊರ ಬರಲು, ಪಾಪ ತರಬೇತುದಾರನಿಗೆ. ಕಷ್ಟ ಪಟ್ಟು ಹೊರ ಬಂದ ಮೇಲೆ "ಯಾಕ್ರೀ ಕೈ ಹೊರಗೆ ಹಾಕಿದ್ದು" ಗದ್ದರಿಸಿ ಕೇಳಿದ್ದ.
"ನನ್ನ ಡ್ರೆಸ್ ಗೆ ಮ್ಯಾಚಿಂಗ್ ಆದ ಹೂ ಕಂಡಿತ್ತು ಅದಕ್ಕೇ ಕೊಯ್ಯಲ್ಲು ನೋಡಿದ್ದೆ, ಬೆಳಿಗ್ಗೆ ಬೇಗ ಬರುವಾಗ ಹೂ ಮುಡಿದಿರಲಿಲ್ಲವಲ್ಲಾ" ಅಂದಿದ್ದಳುತ್ಯಾಂಪಿ,
ಆದರೆ ಬಿದ್ದ ಕಾರು ಹೊರತೆಗೆಯಲು ಕ್ರೇನೇ ತರಬೇಕಾಯ್ತು. ನಂತರ ಅದು ಹೋದದ್ದು ಗುಜರಿ ಅಂಗಡಿಗೇ.
ನಂತರ ಆ ಶಾಲೆಯವರು ಹಾಜರಿ ಪುಸ್ತಕದಿಂದ ಅವಳ ಹೆಸರನ್ನು ಶಾಶ್ವತವಾಗಿ ತೆಗೆದು ಹಾಕಿದ್ದರು. ಪುನಃ ಇವಳಿಗೆ ಕಲಿಸಲು ಯಾರೂ ಬಾರದ ಹಾಗೆ.
ಮೂರನೆಯವ
ಸಿಗ್ನಲ್ ನಲ್ಲಿ ನಿಂತ ಕಾರನ್ನು ಗೇರ್ ಹಾಕಲು ಹೋಗಿ ಹಿಂದೆ ನಿಂತಿದ್ದ ಕಾರಿಗೆ ತ್ಯಾಂಪಿಯ ಕಾರು ಮುತ್ತಿಕ್ಕಿತ್ತು.ಪರಿಣಾಮ ಇವಳ ಕಾರಿನ ಡಿಕ್ಕಿ ಹಿಂದಿನ ಕಾರಿನ ಬಾನೆಟ್ ಎರಡೂ ಕಾದಲು ನಿಂತ ಟಗರುಗಳಂತೆ ಒಮ್ಮೆಲೇ ಹಣೆಯೆತ್ತಿ ನಿಂತವು, ಕನ್ನಡಿಯಲ್ಲಿ ಈ ವಿಪ್ಲವ ನೋಡಿದ ತ್ಯಾಂಪಿಗೆ ನಗು ತಡೆಯಲಾಗಲಿಲ್ಲ.ಮಾಸ್ಟ್ರು ಹಿಂದಿನಿಂದ ಬರುತ್ತಿರುವ ಕಾರಿನ ಚಾಲಕನನ್ನು ಸಮಾಧಾನಿಸಲೇ ಅಥವಾ ಇವಳನ್ನು ಗದರಿಸಲೆ ಎಂಬ ಸಂಧಿಗ್ದತೆಯಲ್ಲಿದ್ದ........
ಅವನು ಕಾರು ವಾಪಾಸ್ಸು ಕೊಂಡೊಯ್ಯುವಾಗ ಕಾರಿನ ಪರಿಸ್ಥಿತಿ ನೋಡಿದ ಮಾಲೀಕರು ಅವನನ್ನೇ ಕೆಲಸದಿಂದ ತೆಗೆದರೆಂತ ಸುದ್ದಿ ಪಾಪ.
ಮೇಖ್ರೀ ಸರ್ಕಲ್
ಇದ್ದುದರಲ್ಲಿಯೇ ಅತ್ಯಂತ ವಾಹನನಿಬಿಡ ವೃತ್ತವಾಗಿತ್ತದು, ಅವರು ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ.
ವೇಗವಾಗಿ ತಮ್ಮ ತಮ್ಮ ಅಧಿಕಾರಯುತ ವೇಗದಲ್ಲಿ ಚಲಿಸುವ ವಾಹನಗಳು, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದ, ಇಲ್ಲದಂತೆ ಚಲಿಸುತ್ತಿರುವ ತರಹೇವಾರಿ ವಾಹನಗಳು.
ಪ್ರತಿಯೊಂದೂ ಬೇರೆ ಬೇರೆ ಗಾತ್ರ ಬಣ್ಣದವುಗಳು.
ಮುಂದೆ ಸ್ವಲ್ಪ ಇಳಿಜಾರು, ಮಹಾಲಕ್ಷ್ಮೀ ಸರ್ಕಲ್ ವರೆಗೆ ಸಾಮಾನ್ಯವಾಗಿ ಎರಡು ಸಾಲಿನಲ್ಲಿ ಪಕ್ಕ ಪಕ್ಕ ಚಲಿಸುವ ಗಾಡಿಗಳಲ್ಲಿ ಒಂದು ಸ್ವಲ್ಪ ನಿಧಾನವಾದಂತೆ ಅನ್ನಿಸಿತು,
ಆಗಲೇ ಪಕ್ಕನೆ ಒಬ್ಬ ಮುದುಕ ಬಂದಿದ್ದ...ಅಡ್ದಲಾಗಿ
. ಸಾಮಾನ್ಯವಾಗಿ ಇಂತಹ ಸಮಯದಲ್ಲಿ .... ಗಾಡಿಯ ವೇಗ ಇನ್ನೂ ಕಡಿಮೆಯಾಗಬೇಕು,
ಇಲ್ಲ ಬದಲು ಇನ್ನೂ ಜಾಸ್ತಿಯಾಯ್ತು. ಆಶ್ಚರ್ಯವಾಯ್ತು ಮಾಸ್ತರರಿಗೆ,
ಒಂದೇ ಒಂದು ಕ್ಷಣ ಮುದುಕ ಇನ್ನೂ ಹತ್ತಿರಾದ,
"ಬ್ರೇಕ್... ಬ್ರೇಕ್ ಹಾಕಿ..." ಅರಚಿದ ಮಾಸ್ತರು...
ಇನ್ನೇನು ಆ ಮುದುಕನ ಮೇಲೆಯೇ ಹೋಗ ಬೇಕು... ಅರೇರೇ
ಇಂತಹಾ ಸಮಯದಲ್ಲಿಯೂ ಇಲ್ಲ... ಸವಾರ ವಾಹನದ ಬ್ರೇಕ್ ಹಾಕಿದ ಹಾಗೆ ಕಾಣಲಿಲ್ಲ...
ವಾಹನ ಸವಾರ ಒಂದು ಹೆಂಗಸು..
ಬ್ರೇಕ್ ಹಾಕೀ ಬ್ರೇಕ್... ಇನ್ನೊಮ್ಮೆ ಕಿರುಚಿದ ಗಟ್ಟಿಯಾಗೇ...ಮಾಸ್ತರ್
ಈಗ ಚಲಿಸಿದಳವಳು...
"ಬ್ರೇಕ್.. ಎಲ್ಲಿದೆ..?? ಎಲ್ಲಿದೆ ಬ್ರೇಕ್..??"
ಕಲಿಸುವ ಮಾಸ್ತ್ರ ಜಂಗಾಬಲವೇ ಉಡುಗಿತು.
ಕೊನೆಯ ಕ್ಷಣ.... ಬ್ರೇಕ್ ಹಾಕಬೇಕಾದ ಸಮಯದಲ್ಲಿ ಅದನ್ನೇ..... ಅಂದರೆ ಆ ಬ್ರೇಕೇ....ಎಲ್ಲಿದೆ ಅಂತ ಕೇಳ್ತಾ ಇದ್ದಾಳೆ ಈ ಹೊಸ ಕಾರು ಸವಾರಿಣಿ....
ಇದೇನು ಮೊದಲ ದಿನವಾ...???
ಅಲ್ಲ ಎಂಟನೇ ದಿನ ಇವತ್ತಿಗೆ ಇವಳು ಕಲಿಯಲು ಆರಂಭ ಮಾಡಿ....
ಇನ್ನೇನು... ನೂರರಲ್ಲೊಂದು ಕ್ಷಣ,...ದಲ್ಲೇ...
ಎಲ್ಲಾ ಮುಗಿಯುತ್ತೇ.....
........
ಇದೆಲ್ಲಾ ಕ್ಷಣದಲ್ಲಿ ನಡೆದದ್ದು
ಈಗ ತಾನೇ ಮುಂದುವರಿದ ಆ ಮಾಸ್ಟರ್....
ಇಂತಹ ಸಮಯದಲ್ಲಿಯೇ ಗೊತ್ತಾಗುವದು ನುರಿತ ಮಾಸ್ತ್ರರಿಗೂ ಹೊಸದಾಗಿ ಕಲಿಯುವವರಿಗೂ ಇರುವ ವ್ಯತ್ಯಾಸ.
ಕಣ್ಣು ರೆಪ್ಪೆ ಮುಚ್ಚುವ ಸಮಯದಲ್ಲೇ....ಆ ಕಾರಿನ ಸುದರ್ಶನ ಚಕ್ರ ( ತ್ಯಾಂಪಿಯೇ ಇಟ್ಟ ಹೆಸರದು- ಸ್ಟಿಯರಿಂಗ್ ವೀಲ್ ಗೆ) ಒಂದು ಕೈಯ್ಯಲ್ಲೇ ಹಿಡಿದು ಬಲಗಡೆ ತಿರುಗಿಸಿದ.
ಕಾರು ರಿವ್ವನೆ ತಿರುಗಿತು ಬಲಕ್ಕೆ....
ಹಿಂದಿನಿಂದ ಅನೂಚಾನವಾಗಿ ಬರುತ್ತಿರುವ ವಾಹನಗಳೂ ಕಷ್ಟ ಪಟ್ಟು ಅಂತಹಾ ನಿಭಿಡತೆಯಲ್ಲೇ ಸಿಕ್ಕ ಸಿಕ್ಕ ಕಡೆ ತಿರುಗಿಸಿದ
ಪರಿಣಾಮ
ರಸ್ತೆ....ಜಾಮ್
.....
ಬೀಸೋ ದೊಣ್ಣೆ ತಪ್ಪಿಸಿಕೊಂಡಂತಾಯ್ತಲ್ಲಾ....
ಆಗಲೇ ಅಪ್ರಯತ್ನವಾಗಿ ಮಾಸ್ತರರ ಕಣ್ಣು ಆ ಸವಾರಿಣಿಯ ಕಾಲಿನತ್ತ ಹರಿಯಿತು.... .
ಹೇಗೆ ಬ್ರೇಕ್ ಸಿಗಲು ಸಾಧ್ಯ.....
ಅವಳ ಬಲಗಾಲು ಕ್ಲ್ಛ್ ಚ್ ಮೇಲಿದ್ದರೆ ಎಡಗಾಲು ಎಕ್ಸಿಲೇಟರ್ ಮೇಲೆ..
ಇದೇನ್ರಿ... ಹೇಳಿಕೊಟ್ಟದ್ದಲ್ವಾ...ಬಲಗಾಲು ಎಕ್ಸಿಲೇಟರ್ ಮತ್ತು ಎಡಗಾಲು ಕ್ಲಚ್ ಮೇಲೆ ಅಂತ...?
ಜೋರಾದ...ಇನ್ನೂ ಹಿಂದಿನ ಅಪಘಾತದ ಅನಿವಾರ್ಯತೆಯ ಟೆನ್ಷನ್ ನಿಂದ ಹೊರ ಬಂದಿರಲಿಲ್ಲ ಆತ...ಪಾಪ
"ನನ್ನ ಚಪ್ಪಲ್ ಆ ಕಡೆ ಹೋಗಿತ್ತು, ಹುಡುಕುತ್ತಿದ್ದೆ...."
ತನ್ನ ಕೈಯ್ಯ ಉಗುರ ಬಣ್ಣವನ್ನು ಇನ್ನೊಮ್ಮೆ ನೋಡಿಕೊಂಡು ಹೇಳಿದಳು ತ್ಯಾಂಪಿ
ಹೊಸ ನಮೂನೆಯದ್ದು, ನಿನ್ನೆ ತಾನೇ ತಂದದ್ದು ಮಂತ್ರಿ ಮಾಲ್ ನಿಂದ.
ಏನಾಯ್ತೀಗ? ಅಂತಹಾ ದೊಡ್ಡ ತಪ್ಪು, ನಿಮ್ ಹತ್ರಾನೂ ಇದೆಯಲ್ಲಾ ಬ್ರೇಕ್..??
ಅಲ್ಲಾರೀ ನನ್ನ ಹತ್ರ ಇದ್ದರೆ..? ನಿಮ್ ಕಾರು ಬಿಡೋವಾಗ ಅದರಲ್ಲಿ ಹಾಗೇ ಮಾಡ್ತೀರಾ..??
ಅದನ್ನ್ ಆಮೇಲ್ ನೋಡಿದ್ರಾಯ್ತು ಬಿಡಿ.
ತ್ಯಾಂಪಿಯೇ ಹೇಳೋವಂತೆ ಅವಳಿಗೆ ದೊಣ್ಣೇ ತಿರುಗಿಸಲು ಈ ಜನ್ಮದಲ್ಲಿ ಬರಲಿಕ್ಕಿಲ್ಲ ಬಿಡಿ ( ಕಾರಿನ ಗೇರಿಗೆ ತ್ಯಾಂಪಿಯೇ ಇಟ್ಟ ಹೆಸರದು).
ಅವಳ ಗಾಡಿ ನಿಂತ ರಭಸಕ್ಕೆ ಅವಳ ಹಿಂದಿನಿಂದ ಬರುತ್ತಿರುವ ಗಾಡಿಗಳೆಲ್ಲವು ಒಂದರ ಹಿಂದೆ ಮೂತಿ ಚಚ್ಚಿಸಿಕೊಂಡೇ ನಿಂತವು. ಇದು ಮೊದಲ ಸಾರಿಯಲ್ಲ ಬಿಡಿ
ಅವಳಿಗೆ ಮಲ್ಲೇಶ್ವರಮ್ ಸುತ್ತಲಿನ ಯಾವ ವಾಹನ ತರಬೇತು ಶಾಲೆಯೂ ಕಾರು ಕಲಿಸಲು ಮುಂದೆ ಬರುತ್ತಿಲ್ಲ. ಪಾಪ ಇವತ್ತಿನ ಮಾಸ್ತ್ರು ಸಂಜಯನಗರದವ, ಅವನಿಗೆ ಇವಳ ಹಿಂದಿನ ಕರಾಮಾತ್ ಗೊತ್ತಿರದೆ ಬಂದಿದ್ದ,
ಇವತ್ತು ಗೊತ್ತಾಯ್ತಲ್ಲಾ,
ಹೊರಡುವ ಮೊದಲು "ಅಮ್ಮಾ ಮಹಾ ತಾಯೀ, ನಿಮಗೆ ಈ ಜನ್ಮದಲ್ಲಿ ಯಾರೂ ಕಾರು ಕಲಿಸಲು ಸಾಧ್ಯವೇ ಇಲ್ಲ, ಅದೂ ಅಲ್ಲದೆ ಇನ್ನೂ ನಿಮಗೆ ಕಲಿಯಲೇಬೇಕು ಅಂತ ಅನ್ನಿಸಿದರೆ ,ನಿಮ್ಮದೇ ಕಾರು ತರಿಸಿ ನನ್ನನ್ನು ಕರೆಸಿಕೊಳ್ಳಿ" ಅಂತ ಸಲಹೆಯನ್ನೂ ಕೊಟ್ಟು ಹೊರಟೇ ಹೋದ.
ಇನ್ನು ಬರಲಿಕ್ಕಿಲ್ಲ ಬಿಡಿ.
ಅದನ್ನೆ ತ್ಯಾಂಪನಿಗೂ ಸೀನನಿಗೂ ಹೇಳಿದಾಗ
"ಅದಕ್ಕೆಲ್ಲಾ ಬೇಸರಿಸದಿರು, ಹಾಗೇ ಮಾಡೋಣ,( ಅವನೇನೂ ಖರ್ಚು ಮಾಡಬೇಕಾಗಿಲ್ಲವಲ್ಲ, ಅವಳ ಅಣ್ಣಂದಿರಿಲ್ಲವೇ), ಅದಕ್ಕೆ ನೀನು ವಾಹನ ಚಾಲಕನನ್ನೇ ಇಟ್ಟುಕೊಂಡರಾಯ್ತು" ಸಲಹೆಯನ್ನೂ ಕೊಟ್ಟು, ಎಲ್ಲಾ ವಾಹನ ತರಬೇತುದಾರರಿಗೆ ಉಪಕಾರ ಮಾಡಿದ.
Comments
ಗೋಪಿನಾಥರಾಯರೆ ಮುಂದಿನ ಬಾಗ
ಗೋಪಿನಾಥರಾಯರೆ ಮುಂದಿನ ಬಾಗ ಹೀಗಿರಬಹುದೆ?
ಕಡೆಗು ತ್ಯಾಂಪಿ ಹೊಸಕಾರು ಕೊಂಡು, ಯಾವ ಮಾಸ್ತರ್ ಇಲ್ಲದೆಯು ಡ್ರೈವಿಂಗ್ ಕಲಿಯಲು ಹೊರಟಳು, ಅವಳು ಹೋದ ಅರ್ಧಗಂಟೆಯಲ್ಲಿ ತ್ಯಾಂಪನ ಮೊಬೈಲ್ ಗೆ ಕಾಲ್ ತ್ಯಾಂಪಿಯಿಂದ
"ಡಿಯರ್ , ಕಾರಿನ ಕಾರ್ಬೋರೇಟರ್ ಒಳಗೆ ನೀರು ಹೋದರೆ ಏನಾಗುತ್ತೆ"
"ಮತ್ತೆನು ಕಾರು ಸ್ಟಾರ್ಟ್ ಆಗೊಲ್ಲ, ರಿಪೇರಿಗೆ ಬಿಡಬೇಕಾಗುತ್ತೆ, ಅದಿರಲ್ಲಿ ನೀನು ಎಲ್ಲಿದ್ದಿ " ಎಂದ ತ್ಯಾಂಪ
"ನಾನು ಊರ ಹೊರಗಿನ ಕೆರೆಯ ಹತ್ತಿರ ದಡದಲ್ಲಿ ನಿಂತಿದ್ದೇನೆ"
"ಹೌದ ಮತ್ತೆ ಕಾರೆಲ್ಲಿ ಹೋಯ್ತು"
"ಕಾರ್, ಕೆರೆಯಲ್ಲಿ ಮುಳುಗಿ ಹೋಯ್ತು"
ರಾಯರೇ ಮುಸ್ಸಂಜೇಲಿ ಮುದ ನೀಡಿದ
ರಾಯರೇ ಮುಸ್ಸಂಜೇಲಿ ಮುದ ನೀಡಿದ ಬರಹ.. ತ್ಯಾಂಪಿ ಯ ಕಾರು ಕಲಿಕೆ -ಕಲಿಸುವವರಿಗೆನೆ ಸವಾಲು ಆದ್ರೆ ಯಾರೂ ಆ ಸವಾಲು ತೀರಿಸಲು ಆಗಲಿಲ್ಲವೇ?
ಬ್ರೇಕ್ ಎಲ್ಲಿದೆ? ನಗೆ ಉಕ್ಕುವಂತೆ ಮಾಡಿದ ಸಾಲು...
ಕೆಲ ವರ್ಷಗಳ ಹಿಂದೆ ಬೈಕು ಕಲಿಯಲು (ನಮ್ಮಣ್ಣ ಹಿಂದೆ ಕುಳಿತು ಇದು ಬ್ರೇಕು ಅದು ಕ್ಲಚ್ ಅಂತೆಲ್ಲ ಹೇಳಿದ್ದ)ಹೋರಟ ನಾ ಆ ಬ್ರೇಕು (ಮೇಲೆ ಒಂದು , ಕೆಳಗೆ ಒಂದು ) ಕ್ಲಚ್ ಎಕ್ಸ್ಲೇಟರ್ ಬಗ್ಗೆ ಬೇಜಾನ್ ಗೊಂದಲಗೊಂಡು ಯಾವ್ಯಾವ್ದೋ ಹಿಡಿದು ಗಕ್ಕನೆ ಬೈಕು ನಿಂತದ್ದು ನಾ ಅಗಲಿಬಿಲಿ ಆಗಿದ್ದು ನೆನಪಿಗೆ ಬಂತು... ಈಗಲೂ ನಾ ಬೈಕು ಕಲಿತಿಲ್ಲ..ಕಾರು ಅಂತೂ ಮೊದಲೇ ಬರೋಲ್ಲ. ಆದ್ರೆ ರೈಲು ಮಾತ್ರ ಈಜಿಯಾಗಿ ಬರುತ್ತೆ.!!
>>>ತ್ಯಾಮ್ಪಿ ಯ ಚಪ್ಪಲಿ ಬಗ್ಗೆ ನೀವ್ ಹೇಳಿದ ಸಾಲುಗಳು ನಿಜ ಅತ್ಯವಶ್ಯ ಸಮಯದಲ್ಲೂ ಜನಕ್ಕೆ ಆ ತರ್ಹದ್ದೆ ಮುಖ್ಯ ಯೋಚನೆ..!!
ತ್ಯಾಮ್ಪಿಗಾಗಿ ಮತ್ತು ನನಗಾಗಿ ಯಾರಾದರೂ ಕ್ಲಚ್ ಬ್ರೇಕ್ ಎಕ್ಸ್ ಲೆಟರ್ ತಾನಾಗೆ ಬೀಳುವ ಗಾಡಿ ಕಂಡುಹಿಡಿವಿರ?
ಶುಭವಾಗಲಿ..
\|
ವೆಂಕಟೇಶ್ ಅವರೆ ನಿಮ್ಮ ನಗುವೇ
ವೆಂಕಟೇಶ್ ಅವರೆ ನಿಮ್ಮ ನಗುವೇ ಬರೆವವನಿಗೆ ಸಲುವ ಬೋನಸ್
ನಿಮ್ಮಪ್ರೋತ್ಸಾಹಭರಿತ ಪುರಸ್ಕಾರಕ್ಕೆ ನಮನ
ನಿಜ ನಮ್ಮೆಲ್ಲರ ಅನುಭವದ ಕಲಿಕೆಯ ನೆನಪೇ ಈ ಶೀನ ತ್ಯಾಂಪನ ಬರಹಕ್ಕೆ ಆಧಾರ
ಇವೆಲ್ಲ ನಾವೆಷ್ಟು ಬಾರಿ ಚಲಿಸುತ್ತೇವೋ ಅಷ್ಟು ಧೈರ್ಯ ಶೇಖರಿಸುತ್ತೇವೆ ಮನದಲ್ಲಿ ಮುಂದಿನ ನಡೆಗೆ,
ನೀವೇನೂ ಬೇಸರಿಸದಿರಿ ಅಂತಹ ಕಾರು ಮಾರ್ಕೇಟ್ನಲ್ಲಿದೆ ಆದರೆ ಅದರ ಕ್ರಯ ಮಾತ್ರ ಸಾಮಾನ್ಯರಿಗೆಟಕುವಂತಹದ್ದಲ್ಲವಲ್ಲ
ಕಥೆ ಪೂರ್ತಿ ಹಾಸ್ಯಮಯವಾಗಿದೆ.
ಕಥೆ ಪೂರ್ತಿ ಹಾಸ್ಯಮಯವಾಗಿದೆ. ನಾನು ಕಾರ್ ಡ್ರೈವಿಂಗ್ ಕಲಿಯುತ್ತಿದ್ದಾಗಿನ ಅನುಭವವನ್ನು ನೆನಪಿಸಿತು. ಆ ಸುಂದರ ನೆನಪನ್ನು ಪುನರಾವರ್ತಿಸಿದ್ದಕ್ಕಾಗಿ ಗೋಪಿನಾಥರಿಗೆ ಧನ್ಯವಾದಗಳು. ಇಷ್ಟೆಲ್ಲಾ ಆವಾಂತರಗಳಾಗಿರಲಿಲ್ಲ ನನ್ನ ಕಲಿಕೆಯಲ್ಲಿ. ಸೊಗಸಾಗಿದೆ.