ದಶಾವತಾರ - ನಾನು ನೋಡಿದ ಹಳೆಯ ಸಿನಿಮಾ

ದಶಾವತಾರ - ನಾನು ನೋಡಿದ ಹಳೆಯ ಸಿನಿಮಾ

ದಶಾವತಾರ ಎಂದರೆ ವಿಷ್ಣುವಿನ ಹತ್ತು ಅವತಾರಗಳು. ಈ ಬಗ್ಗೆ ಸರಿಯಾಗಿ ತಿಳಿಯಲು ಯೂಟ್ಯೂಬ್ನಲ್ಲಿ ಇರುವ ದಶಾವತಾರ ಚಲನಚಿತ್ರವನ್ನು ಇತ್ತೀಚೆಗೆ ನೋಡಿದೆ.

ವಿಷ್ಣು ದೇವರಿಗೆ ಯಾರೋ ಭೂಮಿಯ ಮೇಲೆ ಹತ್ತು ಜನ್ಮಗಳನ್ನು ಎತ್ತಲು ಶಾಪ ಕೊಡುತ್ತಾರೆ. ಅವನು ಯಾವುದೋ ಕಾರಣಕ್ಕೆ ತನ್ನ ವೈಕುಂಠದ ಬಾಗಿಲು ಕಾಯುವ ಜಯ ವಿಜಯ ರ ಮೇಲೆ ಸಿಟ್ಟು ಮಾಡಿಕೊಂಡು ಭೂಮಿಯ ಮೇಲೆ ಜನ್ಮ ಎತ್ತಲು ಶಾಪ ಕೊಡುತ್ತಾನೆ. ಅವರಿಗೆ ಒಂದು ಆಯ್ಕೆಯನ್ನು ಕೊಡುತ್ತಾನೆ. ಶತ್ರುಗಳಾಗಿ ಮೂರುಜನ್ಮ ಅಥವಾ ಭಕ್ತರಾಗಿ ಹತ್ತು ಜನ್ಮ. ಅವರು ಬೇಗನೆ ವಿಷ್ಣುವಿನ ಸಾನ್ನಿಧ್ಯವನ್ನು ಬಯಸಿ ಶತ್ರುಗಳಾಗಿ ಮೂರು ಜನ್ಮಗಳನ್ನು ಎತ್ತಲು ತಯಾರು ಆಗುತ್ತಾರೆ.
ಮುಂದೊಂದು ಕಡೆ ಆ ರಾಕ್ಷಸರಿಗೆ, ನಿಮಗೇನೋ ಮೂರೇ ಜನ್ಮ , ನಿಮಗಿಂತ ಏಳು  ಹೆಚ್ಚಿಗೆ ಜನ್ಮ ಎತ್ತಬೇಕಲ್ಲಾ ಎಂದು ತನ್ನ ಗೋಳು ತೋಡಿಕೊಳ್ಳುತ್ತಾನೆ!

 ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರು ರಾವಣ, ಶಿಶುಪಾಲ ಮುಂತಾದ ರಕ್ಷಸರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ!

ವಿಷ್ಣುವು ಹಂದಿ, ಆಮೆ,  ಮೀನುಗಳ ರೂಪದಲ್ಲಿ ಹುಟ್ಟಿ ಏನು ಮಾಡಿದನು ಎಂಬುದು  ನಮಗೆ ಈಗಾಗಲೇ ಗೊತ್ತಿರದಿದ್ದರೆ   ಇಲ್ಲಿ     ಗೊತ್ತಾಗುತ್ತದೆ. ಇಲ್ಲಿನ ರಾಮಾಯಣದಲ್ಲಿ  'ವೈದೇಹಿ ಏನಾದಳು '  ಎಂಬ ಸುಪ್ರಸಿದ್ಧ ಹಾಡು ಪಿಬಿ ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಇದೆ. ಇಲ್ಲಿ ಮಂಡೋದರಿ ಮತ್ತು ಸೀತೆ ತಾಯಿ-ಮಗಳ ಹಾಗೆ ಇದ್ದಾರೆ! ಇವರು ರಾಮ-ರಾವಣರ ಯುದ್ಧದ ಮೊದಲು ಜೊತೆಯಾಗಿ  ದೇವಿಯನ್ನು ಉದ್ದೇಶಿಸಿ ಒಂದು ಹಾಡನ್ನು ಕೂಡ ಜೊತೆಯಾಗಿ ಹಾಡುತ್ತಾರೆ! ಯುದ್ಧದ ಮೊದಲು ರಾಮನು ರಾವಣನನ್ನು ಪಂಡಿತ ಹಾಗೂ ದ್ವಿಜೋತ್ತಮ ಎಂದು ಗೌರವಿಸಿ ಅವನ ಕೈಯಿಂದಲೇ ಅವನ ವಿರುದ್ಧ ಯುದ್ಧಕ್ಕೆ ರಣ ಕಂಕಣವನ್ನು ಕಟ್ಟಿಸಿಕೊಳ್ಳುತ್ತಾನೆ!ಇದೇ ಸಮಯದಲ್ಲಿ ರಾವಣನ  10 ತಲೆ ಗಳನ್ನು ಮತ್ತು ಅವು ತಲೆಗೊಂದರಂತೆ ಮಾತನಾಡುವುದನ್ನು ನೋಡಬಹುದು!!

ಇಲ್ಲಿ ಒಂದು ಸಂದರ್ಭದಲ್ಲಿ ' ಆತ್ಮ ಸ್ತುತಿಯು ತಿಳಿಗೇಡಿತನ ದ ಗುರುತು'  ಎಂಬ ಮಾತು ಇದೆ. ಇದೇ ಮಾತು ಇಂಗ್ಲೀಷಿನಲ್ಲಿ nobody can talk about himself and still be wise ಎಂದು ಇದೆ.

ಬಲರಾಮ ಕೃಷ್ಣರು ಕಂಸನ ಆಸ್ಥಾನಕ್ಕೆ ಹೋಗುತ್ತಾರೆ ಅಲ್ಲಿ ಅವರು ಒಂದು ಬಿಲ್ಲನ್ನು ಎತ್ತಬೇಕು ಚಿಕ್ಕವನಾದ ಕೃಷ್ಣನು ಅದಕ್ಕೆ ಮುಂದಾಗುತ್ತಾನೆ.  ಆದರೆ ಅದರ ಮೊದಲು ಏನನ್ನುತ್ತಾನೆ ಗೊತ್ತೇ - 'ಅಣ್ಣ, ನನ್ನ ಕೈಲಾಗದಿದ್ದರೆ ನೀನು ಎತ್ತುವಿಯಂತೆ ' ! ಇಲ್ಲಿ ಸೂಕ್ಷ್ಮವನ್ನು ಗಮನಿಸಿ. ಅಣ್ಣನೇ ಮೊದಲು ಎತ್ತಲು ಹೋಗಿ ಅವನ ಕೈಲಾಗದಿದ್ದರೆ ಅವನಿಗೆ ಅವಮಾನ ಅಲ್ಲವೇ ? ಅವನಿಗಿಂತ ಮೊದಲು ಕಿರಿಯ ನಾದ ತಾನು ಸಾಹಸ ಮಾಡಲು ಮುನ್ನುಗ್ಗುವುದು ವಿನಯವಲ್ಲ.  ಸರಿಯಾದ ನಡವಳಿಕೆಯೂ ಅಲ್ಲ,  ತಾನು ಯಶಸ್ವಿ ಆದರೂ ಕೂಡ ತನ್ನ ಅಣ್ಣನೇ ಹೆಚ್ಚು ಬಲಶಾಲಿ ಎಂದು ಸೂಚಿಸಬೇಕಿದೆ.  ಅದಕ್ಕಾಗಿಯೇ ಈ ಮಾತನ್ನು ಆಡಿದ್ದಾನೆ ಕೃಷ್ಣ, ಜಗತ್ತಿಗೆ ಮಾದರಿಯಾಗುವವನು ಅವನು.

ನರಸಿಂಹರಾಜು ಅವನ ಬಾಲ್ಯದ ಗೆಳೆಯ.  ಒಂದು ಪ್ರಸಂಗದಲ್ಲಿ  ( ಇದು ಯಾವುದು ಅಂತ ಹೇಳುವುದು ಒಳ್ಳೆಯದೇನೋ..  ರಾಧೆಯ ಜೊತೆ ಸರಸದಲ್ಲಿ ಇರುವಾಗ, ಬಲರಾಮ ಬಂದನೇನೋ  ಅಂತ ಗಾಬರಿ ಅವನಿಗೆ, ಅಣ್ಣನಿಗೆ ಗೊತ್ತಾಗುವುದೇನೋ   ಎಂಬ ಅಳುಕು)  'ಯಾಕಯ್ಯ, ಈ ಕಪಟನಾಟಕ ?'  ಅಂತ ಕೇಳಿದರೆ  'ಲೋಕದ ಜನ ನಡೆದುಕೊಳ್ಳುವಂತೆ ನಾವು ನಡೆದುಕೊಳ್ಳಬೇಕು,  ಅದರಲ್ಲಿಯೇ ಆದರ್ಶವನ್ನು ಎತ್ತಿಹಿಡಿಯಬೇಕು' ಅಂತ ಹೇಳುತ್ತಾನೆ ಕೃಷ್ಣ. 

ಗೋಕುಲವನ್ನು ಬಿಟ್ಟು ಹೊರಡುವ ಸಂದರ್ಭದಲ್ಲಿ ಕೃಷ್ಣ ಹೀಗೆ ಹೇಳುತ್ತಾನೆ - ಮನುಷ್ಯನ ಕರ್ತವ್ಯ ಕ್ಷೇತ್ರವು  ಜೀವಿತದಲ್ಲಿ ಆಗಾಗ ವ್ಯತ್ಯಾಸ ಆಗುತ್ತಲೇ ಇರುತ್ತದೆ, 

ಮಹಾಭಾರತದ ಯುದ್ಧದ ಕೊನೆಯಾದಾಗ   ಐವರು  ಪಾಂಡವರು  ಮತ್ತು ಬೆರಳೆಣಿಕೆಯ ಕೆಲವರನ್ನು ಬಿಟ್ಟು ಇನ್ನು ಯಾರೂ ಉಳಿದಿರುವದಿಲ್ಲ. ಇಲ್ಲಿ ಉತ್ತುಂಗ ಋಷಿಯ ಕಥೆ ಬರುತ್ತದೆ. ಇದನ್ನು ಜೋಗಿ ಅವರ ಕತೆಗಳಲ್ಲೆಲ್ಲೋ ಓದಿದ್ದೆ.  ಆ ಋಷಿಯು ಕೃಷ್ಣನ ಸಹಪಾಠಿ - ತಪಸ್ಸಿನಲ್ಲೇ ಮುಳುಗಿರುವ ಅವನಿಗೆ  ಯುದ್ಧದ ಸಂಗತಿಯೇ ಗೊತ್ತಿರುವುದಿಲ್ಲ. ಕೃಷ್ಣ ಅವನನ್ನು ಭೇಟಿಯಾದಾಗ ಎಲ್ಲಾ ಕುಶಲವೇ?  ಕೌರವರು ಪಾಂಡವರು ಈಗ ಹೇಗಿದ್ದಾರೆ? ಎಂದು ಕೇಳುತ್ತಾನೆ!  ಕೃಷ್ಣನು ಸತ್ಯವನ್ನು ತಿಳಿಸಿದಾಗ ಅವನು ಸಿಟ್ಟಿಗೇಳುತ್ತಾನೆ, '  ಸತ್ಯ ಅಹಿಂಸೆಗಳನ್ನು ಪ್ರತಿಪಾದಿಸಬೇಕಾದ ನೀನು ಈ ರಕ್ತಪಾತಕ್ಕೆ ಕಾರಣನಾದೆ' ಎಂದು ಕೃಷ್ಣನಿಗೆ ಶಾಪವನ್ನು ಕೊಡಲು ಮುಂದಾಗುತ್ತಾನೆ. 
"ಸ್ವಲ್ಪ ತಡೆ, ಇರುವ ಶಾಪವನ್ನೇ ಅನುಭವಿಸುವುದು ಸಾಕಾಗಿದೆ. ಹೊಸ ಶಾಪ  ಕೊಡುವುದು ಬೇಡ, ದುಷ್ಟ ಶಿಕ್ಷಣ , ಶಿಷ್ಟ ರಕ್ಷಣಕ್ಕೆ ಶಾಂತಿ ಸ್ಥಾಪನೆಗೆ  ಅನಿವಾರ್ಯವಲ್ಲವೇ " ಎಂದಾಗ ಆ ಋಷಿ " ನೊಂದ ಜೀವಗಳ ನಿಟ್ಟುಸಿರು ನಿನ್ನ ಶಾಂತಿ ಸೌಧದ ತಳಪಾಯವನ್ನು ಅಲುಗಾಡಿಸುವುದಿಲ್ಲವೇ ? ಸೃಷ್ಟಿ ಸ್ಥಿತಿ ಲಯ ಕರ್ತನಾದ ನೀನು ಪ್ರೀತಿ ಶಾಂತಿ ಸ್ಥಾಪನೆ ಮಾಡುವ ಬದಲು ದುಷ್ಟರನ್ನು ಶಿಷ್ಟರನ್ನಾಗಿ ಮಾಡಲಾರೆಯಾ ? ನಿನ್ನೆ ನ್ಯಾಯ, ಧರ್ಮ, ರೀತಿ, ನೀತಿ ಗಳಲ್ಲಿ ಹೊಸತನ ಇಟ್ಟು ಹಿಂಸೆಯಿಂದ ಲೋಕಕಲ್ಯಾಣವನ್ನು ಸಾಧಿಸಲಾರೆಯಾ ? ವಿಶ್ವ ಭ್ರಾತೃತ್ವ ದಿಂದ ಲೋಕವನ್ನು  ವಿಜೃಂಭಿಸುವಂತೆ ಮಾಡಲಾರೆಯಾ" ಎಂದು ಕೇಳುತ್ತಾನೆ. ಆಗ ಕೃಷ್ಣನು  "ಈ ನನ್ನ ಅವತಾರದಲ್ಲಿ ಸಾಕಷ್ಟು ಅನುಭವಿಸಿ ಆಯಿತು.  ಈ ನನ್ನ ಅವತಾರ ಮುಗಿಯಬಂದಿದೆ, ಇನ್ನೆರಡು ಅವತಾರಗಳು ಬಾಕಿ ಇವೆ. ಅಹಿಂಸೆಯಿಂದ ಲೋಕದ ಉದ್ದಾರದ ಪ್ರಯೋಗವನ್ನು ಮುಂದಿನ ಅವತಾರದಲ್ಲಿ ಮಾಡುವೆ " ಎನ್ನುತ್ತಾನೆ. ಎರಡು ಮೂರು ನಿಮಿಷಗಳಲ್ಲಿ  ಬುದ್ಧಾವತಾರದ ಕಥೆ ಬಂದು ಹೋಗುತ್ತದೆ. 

ಇನ್ನೊಂದು ಅವತಾರ ಬಾಕಿ ಇದೆ ಅನ್ನುತ್ತೀರಾ? ಇನ್ನೇನು ಸಿನಿಮಾ ಮುಗಿಯಲು ಎರಡು ನಿಮಿಷ ಸಮಯ ಬಾಕಿ ಇದೆ. ಇಷ್ಟರಲ್ಲಿ ಏನು ಆಗಬಹುದು ? ಏನು ತೋರಿಸಬಹುದು?  

ಇಲ್ಲಿ ನಿಮಗೊಂದು ಆಶ್ಚರ್ಯ ಕಾದಿದೆ. ನಾರದ ವಿಷ್ಣುವಿಗೆ ಕೇಳುತ್ತಾನೆ. "ನಿನ್ನ ಬೌದ್ಧಾವತಾರದಿಂದ ಲೋಕದಲ್ಲಿ ಅಹಿಂಸೆಯ ಪ್ರಚಾರ ಆಯಿತಾದರೂ  ಕಲಿಪ್ರವೇಶದಿಂದಾಗಿ ಆ ತತ್ವ ನೆಲೆಯಾಗಿ ನಿಂತಿಲ್ಲ. ಎಲ್ಲಿ ನೋಡಿದರೂ ಅಧರ್ಮ, ಅನೀತಿ, ಅತ್ಯಾಚಾರ ಹೆಚ್ಚುತ್ತಿವೆ" . ಇದಕ್ಕೆ ಪ್ರತಿಯಾಗಿ ಪರಮಾತ್ಮನು "ಅದಕ್ಕೆ ಭೂಮಾತೆಯು ಅಗ್ನಿಪರ್ವತ, ಭೂಕಂಪ, ಜಲಪ್ರವಾಹ ಮುಂತಾದವನ್ನು ಮಾಡುತ್ತಿದ್ದಾಳಲ್ಲ? " ಅನ್ನುವನು. ನಾರದನು ಅದಕ್ಕೆ ಪ್ರತಿಯಾಗಿ " ಆದರೆ  ಅವೆಲ್ಲ ಮಾನವನ ವಿಜ್ಞಾನ ಶಕ್ತಿಯ ಅಧೀನ ಆಗುತ್ತಿವೆಯಲ್ಲ ?" ಎಂದು ಕೇಳುವನು.  "ಯಾವಾಗ ವಿಜ್ಞಾನ ವಿನಾಶಕಾರಿಯಾಗಿ ಪರಿಣಮಿಸುವುದು ಆಗ ನಾನು ಕಲ್ಕಿಯಾಗಿ ಹತ್ತನೇ ಅವತಾರ ಎತ್ತಿ ಧರ್ಮವನ್ನು ನೆಲೆಗೊಳಿಸುವೆನು'' ಎಂದು ಪರಮಾತ್ಮನು ಹೇಳುತ್ತಾನೆ. 

ವಿಜ್ಞಾನ ಮತ್ತು ವಿಷ್ಣುವಿನ ಕುರಿತಾದ ಒಂದು ಹಾಡಿನೊಂದಿಗೆ ಚಿತ್ರ ಮುಗಿಯುತ್ತದೆ.

 

 

 

Rating
Average: 4.5 (2 votes)