ದಸರಾ: ಅಂದು ‍‍‍‍ಇಂದು...

ದಸರಾ: ಅಂದು ‍‍‍‍ಇಂದು...

ಅಕ್ಟೋಬರ್ ತಿಂಗಳು ಬರುತ್ತಿದ್ದ ಹಾಗೆಯೇ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಮೈಸೂರಿನಲ್ಲಿ ದಸರಾ ಕಳೆಕಟ್ಟತ್ತದೆ. ಇಡೀ ಮೈಸೂರು ನಗರ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ. ದಸರಾವನ್ನು “ನವರಾತ್ರಿ” ಎಂದೂ ಕರೆಯುತ್ತಾರೆ. ಕಾರಣ, ಒಂಬತ್ತು ರಾತ್ರಿಗಳ ಕಾಲ ಈ ಉತ್ಸವ ನಡೆಯುತ್ತದೆ. ಹತ್ತನೆಯ ರಾತ್ರಿ ಸೇರಿ “ವಿಜಯ ದಶಮಿ” ಆಗುತ್ತದೆ. ಈ ಹತ್ತು ರಾತ್ರಿಗಳ ಉತ್ಸವೇ “ದಶಹರ.” “ದಶ” ಎಂದರೆ ಹತ್ತು, “ಹರ” ಎಂದರೆ ನಾಶಮಾಡುವುದು. ಈಗ ಜನಪ್ರಿಯ ಪರಿಭಾಶೆಯಲ್ಲಿ “ದಸರಾ” ಆಗಿದೆ. ಈ ಹತ್ತೂ ದಿನಗಳ ಕಾಲ ಮಹಿಷಾಸುರ ಮರ್ಧಿನಿ ಅಂದರೆ ತಾಯಿ ಚಾಮುಂಡೇಶ್ವರಿಯನ್ನು ಪೂಜಿಸಲಾಗುತ್ತದೆ. ಮೈಸೂರಿನ ಶ್ರೀ ಚಾಮುಂಡೇಶ್ವರಿ ಬೆಟ್ಟದಲ್ಲಿ ನಡೆಯುವ ಪೂಜೆ ಯಾರಿಗೆ ತಾನೇ ಗೊತ್ತಿಲ್ಲ. ಆಕೆ ಇಂದು ಕರ್ನಾಟಕದ “ನಾಡ ದೇವತೆ” ಕೂಡ ಆಗಿದ್ದಾಳೆ!

ನನಗಂತೂ ದುರ್ಗಾಮಾತೆ ಅಥವಾ ಚಾಮುಂಡೇಶ್ವರಿ ಅಂದರೆ ನೆನಪಾಗುವುದು “ಕವಿರತ್ನ ಕಾಳಿದಾಸ” ಚಿತ್ರದಲ್ಲಿ ಕಾಳಿದಾಸನಾಗಿ ರಾಜ್ಕುಮಾರ್ ಮಾತಾ ಮರಕತ ಶ್ಯಾಮ ಮಾತಂಗಿ ಮಧುಶಾಲಿನಿ... ಎಂದು ಹಾಡಿಹೊಗಳುವ ದುರ್ಗೆಯ ವಿವಿಧ ರೂಪಗಳು! ಆ ಹಾಡು ಅಥವಾ ಶ್ಲೋಕ ನನ್ನ ಮನಸ್ಸಿನಲ್ಲಿ ಎಶ್ಟು ಚೆನ್ನಾಗಿ ನಾಟಿತ್ತೆಂದರೆ ಸಂಸ್ಕೃತದ ಗಂಧಗಾಳಿಯೂ ಇಲ್ಲದ ನನಗೆ ಇಡೀ ಹಾಡು ಬಾಯಿಗೆ ಬರುತ್ತಿತ್ತು. ನಾನು ಮೈಸೂರಿಗನೇ ಆಗಿದ್ದರೂ, ಚಾಮುಂಡಿ ಬೆಟ್ಟವನ್ನು 2-3 ಬಾರಿ ಕಾಲ್ನಡಿಗೆಯಲ್ಲಿ ಹತ್ತಿ ಇಳಿದಿದ್ದರೂ ಈಗ ಯಾವುದೇ ಭಯಭಕ್ತಿಯಾಗಲಿ, ಧಾರ್ಮಿಕ ಶ್ರದ್ಧೆಯಾಗಲಿ ಇಲ್ಲ. ಆದರೆ, ಸಂಸ್ಕೃತಿ ಅಧ್ಯಯನ, ಇತಿಹಾಸ ಇನ್ನೂ ಮುಂತಾದ ವಿಶಯಗಳು ಕುತೂಹಲಿಯಾದ ನನ್ನನ್ನು ಈ ಲೇಖನ ಬರೆಯುವಂತೆ ಮಾಡಿದೆಯಶ್ಟೆ! ಆಸ್ತಿಕರು ಇದನ್ನು ದೇವಿಯೇ ಬರೆಯುವ ಬುದ್ಧಿಯನ್ನು ಕೊಟ್ಟಿರಬೇಕು ಎಂದು ಬೇಕಾದರೂ ಕರೆಯಬಹುದು. ನನ್ನ ತಾಯಿಗೆ ಈ ಬರೆಹ ತೋರಿಸಿದರೂ ಅವರೂ ಅದನ್ನೇ ಹೇಳುವುದು. ನನ್ನ ತಾಯಿ ನಾನು ಬೇರೆ ಊರಿಗೆ ಹೋಗುವಾಗಲೆಲ್ಲ “ತಾಯಿ” ಇದ್ದಾಳೆ, ನಿನ್ನನ್ನು ಕಾಪಾಡುತ್ತಾಳೆ ಎಂದು ಹೇಳುತ್ತಿರುತ್ತಾರೆ. ದುರ್ಗೆಯ ಮೇಲೆ ನನಗೆ ನಂಬಿಕೆಯಿರದಿದ್ದರೂ ನನ್ನ ತಾಯಿಯನ್ನಂತೂ ಖಂಡಿತ ನಂಬುತ್ತೇನೆ.
ಶತಶತಮಾನಗಳಿಂದನಡೆದುಬಂದಿರುವ ತಾಯಿ ಆರಾಧನೆ
“ತಾಯಿ ಆರಾಧನೆ” ಶತಶತಮಾನಗಳಿಂದ ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಇದಕ್ಕೆ ಋಗ್ವೇದದಲ್ಲಿ ಆಧಾರಗಳು ಸಿಗುತ್ತವೆ. ಅದರಲ್ಲಿ ಸರಸ್ವತಿ, ಅಂಭಾರಾಣಿ, ದುರ್ಗ, ಶ್ರೀ ಮುಂತಾದ ಹೆಸರುಗಳಿಂದ ತಾಯಿಯನ್ನು ಹೆಸರಿಸಲಾಗಿತ್ತು ಎಂದು ಹೇಳಲಾಗುತ್ತದೆ. ಇಂದಿನ ಮೈಸೂರಿನ ಮುಖ್ಯ ಅರಮನೆಯ ಹೆಸರು ಬಹುಶಹ ಹೆಚ್ಚಿನವರಿಗೆ ಗೊತ್ತಿರಲಾರದು. ಅದರ ಹೆಸರು “ಅಂಬಾವಿಲಾಸ.” ಈ ತಾಯಿ ಆರಾಧನಗೆ ಅನೇಕ ಐತಿಹಾಸಿಕ ಆಧಾರಗಳೂ ಸಿಗುತ್ತವೆ. ಈಗಲೂ ಹಲವಾರು ಸಮುದಾಯಗಳಲ್ಲಿ “ತಾಯಿ ಆರಾಧನೆ” ನಿರಂತರವಾಗಿ ನಡೆದಿದೆ. “ಶಕ್ತಿ” ಆರಾಧನೆಯನ್ನು ಮಾಡುವವರು “ಶಾಕ್ತರು,” ಇವರು ಕರ್ನಾಟಕದಲ್ಲಿ ಪ್ರಬಲವಾಗಿ ಬೇರೂರಿದ್ದರು ಎಂದು ಓದಿದ್ದೇನೆ. ಶೈವ ಪಂಥ ಕರ್ನಾಟಕದಲ್ಲಿ ಬೇರೂರುವ ಮುನ್ನ ಈ ಶಾಕ್ತ ಮಠಗಳು ಅತ್ಯಂತ ಶ್ರೀಮಂತ ಮಠಗಳಾಗಿದ್ದವಂತೆ. ಇನ್ನು ಶೈವ ಪಂಥದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಕಾಪಾಲಿಕ, ಕಾಳಾಮುಖ, ಪಾಶುಪತ, ನಾಥ ಮುಂತಾದ ಪಂಥಗಳು ಅಂದು ದೇಶದೆಲ್ಲೆಡೆ ನೆಲಸಿದ್ದವಂತೆ. ಇವುಗಳಲ್ಲಿ ಅಂದಿನ ಕಾಲದಲ್ಲಿ ತಲೆಯೆತ್ತಿದ್ದ ಅನಿಶ್ಟ ಆಚರಣೆಗಳನ್ನು ನೀಗಿಸಿ ಶುದ್ಧ ಶೈವ ಪಂಥವೊಂದನ್ನು ಹುಟ್ಟಿಹಾಕುವ ಅಲ್ಲಮನ ಪ್ರಯತ್ನವಾಗಿಯೇ ಹುಟ್ಟಿದ್ದು “ವೀರಶೈವ” ಧರ್ಮ ಎಂದು ಹೇಳಬಹುದು. ಅದು ಬೇರೆಯದೇ ಕತೆ.
ಮತ್ತೆ ದಸರಾ ಬಗ್ಗೆ ಮಾತನಾಡುವುದಾದರೆ. ತ್ರೇತಾಯುಗದ ರಾಮಾಯಣದಲ್ಲಿ ಶ್ರೀರಾಮ ತನ್ನ ಎದುರಾಳಿ ರಾವಣನ ವಿರುದ್ಧ ಯುದ್ಧ ಸಾರುವ ಮುನ್ನ ತಾಯಿ ದುರ್ಗೆಯನ್ನು ಪ್ರಾರ್ಥಿಸಿದ್ದನಂತೆ. ಆನಂತರ, ಪುರಾಣಗಳಲ್ಲಿ ಮಹಿಶನೆಂಬ ಅಸುರನನ್ನು ಮರ್ಧಿಸಿದ್ದಕ್ಕಾಗಿ “ಮಹಿಶಾಸುರ ಮರ್ಧಿನಿ” ಎಂದು ತಾಯಿಯನ್ನು ಕರೆಯಲಾಗುತ್ತದೆ. ಇದರ ಇತಿಹಾಸಕ್ಕೆ ಹೋಗುವುದಾದರೆ. ಏಳನೇ ಶತಮಾನದಲ್ಲಿ ಅಂದರೆ, ಗುಪ್ತರು ಆಳುತ್ತಿದ ಕಾಲದಲ್ಲಿ ಕರ್ನಾಟಕದ ಬದಾಮಿಯಲ್ಲಿ, ತಮಿಳುನಾಡಿನ ಮಹಾಬಲಿಪುರಂನಲ್ಲಿ “ಮಹಿಶಾಸುರ ಮರ್ಧನ”ದ ಚಿತ್ರಗಳು ದೊರೆಯುತ್ತವೆ. ಇಂಡೋನೇಶ್ಯಾದಲ್ಲಿ ಕೂಡ ದೊರೆತಿವೆ. ಹನ್ನೊಂದನೇ ಶತಮಾನದಲ್ಲಿ ಅಂದರೆ ಘಜ್ನಿ ಮಹಮ್ಮದನ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಯಾತ್ರಿಕ ವಿದ್ವಾಂಸ ಅಲ್ ಬರೂನಿ ಕೂಡ ತನ್ನ ಬರೆಹಗಳಲ್ಲಿ ನವರಾತ್ರಿ ಉತ್ಸವದ ಬಗ್ಗೆ ಉಲ್ಲೇಖ ಮಾಡಿದ್ದಾನೆ ಎನ್ನಲಾಗಿದೆ. ಆತ ಹದಿಮೂರು ವರ್ಶಗಳ ಕಾಲ ಅಂದಿನ ಭಾರತವನ್ನು ಸುತ್ತಿದ್ದ. ರೊಮಿಲ ಥಾಪರ್ ರಂತಹ ಆಧುನಿಕ ಇತಿಹಾಸತಜ್ಞರು ಆತನನ್ನು ಮಧ್ಯ ಏಶಿಯಾದ ಅತ್ಯಂತ ಶ್ರೇಷ್ಟ ಬುದ್ಧಿಜೀವಿ ಎಂದು ಕರೆದಿದ್ದಾರೆ. ಆತ ಟರ್ಕಿಶ್, ಪರ್ಶಿಯನ್, ಸಂಸ್ಕೃತ, ಹೀಬ್ರೂ, ಅರೇಬಿಕ್ ಇನ್ನೂ ಮುಂತಾದ ಭಾಶೆಗಳನ್ನು ಬಲ್ಲವನಾಗಿದ್ದನು. ಹಾಗೆಯೇ, ಖಗೋಳಶಾಸ್ತ್ರ, ಗಣಿತ, ಭೌತಶಾಸ್ತ್ರ, ವೈದ್ಯಶಾಸ್ತ್ರ, ಖನಿಜಶಾಸ್ತ್ರ ಹಾಗೂ ಇತಿಹಾಸದಲ್ಲಿ ಪರಿಣತನಾಗಿದ್ದನು. ಇಶ್ಟೆಲ್ಲವನ್ನು ಗಮನಿಸಿದ ಮೇಲೆ ಈತನ ಪಾಂಡಿತ್ಯದ ಬಗ್ಗೆ ಮಾತನಾಡುವಂತಿಲ್ಲ. ಇಂತಹ ದಾಖಲೆಗಳನ್ನು ಗಮನಿಸಿ, ನವರಾತ್ರಿ ಉತ್ಸವಕ್ಕೆ 2,500 ವರ್ಷಗಳ ಇತಿಹಾಸವಿದೆ ಎಂದು ಗುರುತಿಸಲಾಗುತ್ತದೆ.
ವಿಜಯದಶಮಿಯಂದು ಬನ್ನಿಗೆ ನಮಿಸಿ!
ಇದಲ್ಲದೆ, ದ್ವಾಪರಯುಗದ ಮಹಾಭಾರತದಲ್ಲಿ ಪಾಂಡವರು ಚದುರಂಗದ ಜೂಜಿನಲ್ಲಿ ಎಲ್ಲವನ್ನೂ ಸೋತು 12 ವರ್ಶಗಳ ವನವಾಸ ಹಾಗೂ 1 ವರ್ಶ ಅಜ್ಞಾತವಾಸ ಮಾಡಬೇಕಾದ ಪ್ರಸಂಗ ಬಂದಾಗ ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಶಮಿ ವೃಕ್ಶದ ಕೆಳಗೆ ಬಚ್ಚಿಟ್ಟು ತಮ್ಮ ವನವಾಸದ ಪ್ರತಿ ವರ್ಶ ಮುಗಿದ ಬಳಿಕವೂ ಅಲ್ಲಿಗೆ ಬಂದು ಶಸ್ತ್ರಾಸ್ತ್ರಗಳಿಗೆ ಹಾಗೂ ದುರ್ಗಾ ಮಾತೆಗೆಪೂಜೆ ಸಲ್ಲಿಸಿ ತೆರಳುತ್ತಿದ್ದರಂತೆ. ಇತ್ತ ಕಡೆ ಪಾಂಡವರನ್ನು ಹುಡುಕುವ ಎಲ್ಲ ಪ್ರಯತ್ನಗಳನ್ನೂ ಕೌರವರು ಎಡೆಬಿಡದೆ ಮಾಡುತ್ತಿದ್ದರು. ಕಾರಣ. ಹಾಗೊಂದು ವೇಳೆ ಅವರು ಪಾಂಡವರನ್ನು ಪತ್ತೆ ಹಚ್ಚಿದಲ್ಲಿ, ಪಾಂಡವರು ಮತ್ತೆ 12 ವರ್ಶಗಳ ಕಾಲ ಶಿಕ್ಶೆ ಅನುಭವಿಸಬೇಕಿತ್ತು. ಆಮೇಲೆ ನಡೆದಿದ್ದು ಎಲ್ಲರಿಗೂ ತಿಳಿದೇ ಇದೆ. ಕೌರವ ಪಾಂಡವರ ನಡುವೆ  “ಕುರುಕ್ಶೇತ್ರ ಯುದ್ಧ.” ಪಾಂಡವರ ವಿಜಯ. ಅದು ದಕ್ಕಿದ್ದು ದಶಮಿಯಲ್ಲಿ. ಅಂದು ದುಷ್ಟರ ಮೇಲೆ ಶಿಷ್ಟರು ಸಾಧಿಸಿದ ವಿಜಯವನ್ನೇ “ವಿಜಯ ದಶಮಿ”ಯಾಗಿ ಇಂದು ನಾವೆಲ್ಲ ಆಚರಿಸುತ್ತಿದ್ದೇವೆ. ವಿಜಯ ದಶಮಿಯಂದು ಶಮಿ ವೃಕ್ಶ ಅಂದರೆ, ಬನ್ನಿಮರದ ಕೆಳಗೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವುದು ವಾಡಿಕೆ.
 ನವರಾತ್ರಿ ಉತ್ಸವ ಆರಂಭಗೊಂಡಿದ್ದು ಹೇಗೆ?
ಕಲೆ, ಸಾಹಿತ್ಯ, ಸಂಸ್ಕೃತಿಗಳ ತವರೂರಾಗಿ “ಸುವರ್ಣ ಯುಗ”  ಎನಿಸಿಕೊಂಡಿದ್ದ ಅಂದಿನ ವಿಜಯನಗರದ ಕಾಲದ ಅರಸರು ಹಿಂದೂ ಧರ್ಮಾಚಾರಣೆಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ “ನವರಾತ್ರಿ” ಉತ್ಸವವನ್ನು ಆರಂಭಿಸಿದರು. ಈಗಲೂ ಆ ಉತ್ಸವ ನಡೆಯುತ್ತಿದ ಸ್ಥಳವಾದ “ಮಹಾನವಮಿ ದಿಬ್ಬ”ವನ್ನು ನೋಡಬಹುದು. ಆ ಮೂಲಕ ವಿಜಯನಗರದ ಗತವೈಭವವನ್ನು ಕಲ್ಪಿಸಿಕೊಳ್ಳಬಹುದು. ವಿಜಯನಗರದ ಪತನದ ನಂತರ, ಇವರ ಸಾಮಂತರಾದ ಮೈಸೂರು ಅರಸರಾದ ಒಡೆಯರ್ರು ಸ್ವತಂತ್ರರಾಗಿ ವಿಜಯನಗರದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು. ಮೈಸೂರು ಸಾಮ್ರಾಜ್ಯದ ಸಂಸ್ಥಾಪಕ ರಾಜ ಒಡೆಯರ್, ತಾವು ಸ್ವತಂತ್ರರಾಗಿ ರಾಜ್ಯಭಾರ ಮಾಡುತ್ತಿರುವ ಕುರುಹಾಗಿ ನವರಾತ್ರಿ ಉತ್ಸವಾಚರಣೆಗಳನ್ನು ಆರಂಭಿಸಿದರು. ಮೊದಲಿಗೆ ಶ್ರೀರಂಗಪಟ್ಟದಲ್ಲಿ ಈ ಉತ್ಸವಗಳು ನಡೆಯುತ್ತಿದ್ದವು. ಹೈದರಾಲಿ-ಟೀಪೂ ಕಾಲದಲ್ಲೂ ಈ ಉತ್ಸವ ಯಾವುದೇ ಅಡೆತಡೆಯಿಲ್ಲದೆ ಸಾಗಿತ್ತು. 1799ರಲ್ಲಿ ಟೀಪೂವಿನ ಪತನದ ನಂತರ, ಕೃಷ್ಣರಾಜ ಒಡೆಯರ್ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ಉತ್ಸವ ವಿಜಯನಗರದ ಶ್ರೀಕೃಷ್ಣದೇವರಾಯನ ಕಾಲದಂತೆ ತನ್ನ ಪರಾಕಾಷ್ಠೆಯನ್ನು ತಲುಪಿತ್ತು. ವಿಶ್ವಪ್ರಸಿದ್ಧವಾಗಿದ್ದ ಅಂದಿನ ಮೈಸೂರು ಅರಮನೆಯನ್ನು ಮರ, ಅಮೂಲ್ಯ ರತ್ನಗಳು, ನಾಜೂಕಿನ ಕೆತ್ತನೆ, ಚಿನ್ನದ ಲೇಪನಗಳಿದ ನಿರ್ಮಿಸಲಾಗಿತ್ತು. 1897ರ ಬೆಂಕಿ ದುರಂತದಲ್ಲಿ ಆ ಅರಮನೆ ಸುಟ್ಟುಹೋದ ಪರಿಣಾಮ ಇಂದು ಇರುವ ಅರಮನೆಯನ್ನು ನಿರ್ಮಿಸಲಾಯಿತು. ಈ ಅರಮನೆ ಯುರೋಪಿನ ತಂತ್ರಜ್ಢಾನ, ವಿದ್ಯುದ್ಧೀಪಾಲಂಕಾರಗಳಿಂದ ವಿಶ್ವದ ಕಣ್ಮನ ಸೆಳೆಯಲಾರಂಭಿಸಿತು. ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಆನೆ, ಮೈಸೂರು ರಾಜರು ಅಂಬಾರಿಯ ಮೇಲೆ ಕುಳಿತು ಮೈಸೂರಿನ ರಾಜಬೀದಿಯಲ್ಲಿ ಸಾಗುವುದು, ಅದರ ಹಿಂದೆ ಮುಂದೆ ಮಂತ್ರಿಗಳು, ಆಡಳಿತಗಾರರು, ರಾಜಮನೆತನ, ಸೇನೆ ಕಾಲಾಳುಗಳು ಸಾಗುವುದು ದೇಶವಿದೇಶಗಳಿಂದ ಜನರು ಇದನ್ನು ಕಾಣಲು ಇಲ್ಲಿಗೆ ಬರುವಂತೆ ಮಾಡಿತು. ಭಾರತ ಸ್ವತಂತ್ರವಾದ ನಂತರ, ರಾಜಾಡಳಿತ ಕೊನೆಯಾಯಿತಾದರೂ ರಾಜರು ಅಂಬಾರಿಯಲ್ಲಿ ಕೂತು ಮೆರವಣಿಗೆ ಸಾಗುವುದು ನಿಂತಿರಲಿಲ್ಲ. ಜಯಚಾಮರಾಜೇಂದ್ರ ಒಡೆಯರ್ ತಾವಿರುವಶ್ಟು ಕಾಲ ಹಿಂದಿನ ವೈಭವವನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ, 1974ರಲ್ಲಿ ಅವರು ಕಾಲವಾದ ನಂತರ ಇಲ್ಲಿಗೆ ತೆರೆಬಿದ್ದಿತು. 1973ರಲ್ಲಿ ಕರ್ನಾಟಕ  ಎಂದು ನಾಮಕರಣಗೊಂಡ ಮೈಸೂರು ರಾಜ್ಯ, ಜಂಬೂ ಸವಾರಿಯೆಂದೇ ಹೆಸರುವಾಸಿಯಾಗಿದ್ದ ಮೈಸೂರು ದಸರಾವನ್ನು ನಾಡಹಬ್ಬವಾಗಿ ಆಚರಿಸಿಕೊಂಡು ಬಂದಿದೆ. ನಮ್ಮ ತಂದೆತಾಯಿಯರ ಪೀಳಿಗೆಯವರು ತಾವು ನೋಡಿದ ಜಂಬೂಸವಾರಿ ಅಂದರೆ, ಮೈಸೂರು ಒಡೆಯರ್ ಅಂಬಾರಿಯ ಮೇಲೆ ಕೂತು ಸಾಗಿದ್ದನ್ನು ವರ್ಣಿಸುವಾಗ ನಮ್ಮ ಪೀಳಿಗೆಯವರು ಕಳೆದುಕೊಂಡಿದ್ದೇನು ಎಂಬುದು ಮನವರಿಕೆಯಾಗುತ್ತದೆ. ಅದೇ, ಮೈಸೂರು ರಾಜ್ಯದ ವೈಭವ!

 

Rating
No votes yet

Comments