ದಿಟ್ಟ ಹೆಜ್ಜೆಗಳನ್ನು ಹಿಂಬಾಲಿಸುತ್ತಾ . . .
ಕಳೆದ ಸುಮಾರು ಒಂದು ವರುಷದಲ್ಲಿ ನನ್ನ ಹತ್ತಿರದ ಸ್ನೇಹಿತರ ಪೈಕಿ ಹಲವರು ಮದುವೆ ಮಾಡಿಕೊಂಡರು.
ಅದರಲ್ಲಿ ವಿಶೇಷವಾಗಿ ನನಗೆ ಖುಷಿ ಅನ್ನಿಸಿದ ಎರಡು ಮದುವೆಗಳ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ.
ಒಂದು ಅಂತರ್ ಜಾತೀಯ ವಿವಾಹವಾದರೆ , ಇನ್ನೊಂದು ಅಂತರ್ ಧರ್ಮೀಯ ವಿವಾಹ .
ಒಂದು ಸರಳ ವಿವಾಹ ; ಇನ್ನೊಂದು ವಿಧಿವತ್ತಾಗಿ ನಡೆದ ವಿವಾಹ.
ಯಾವುದೇ ಧರ್ಮ - ಜಾತಿಯ ಕಟ್ಟುಪಾಡುಗಳನ್ನು ಅನುಸರಿಸದೆ ಸರಳವಾಗಿ ಹಾರ ಬದಲಾಯಿಸಿಕೊಂಡು ಸತಿ-ಪತಿಯಾದ ಒಂದು ಜೋಡಿ;
ಎರಡೂ ಧರ್ಮದ ಕುಟುಂಬ ಸಮೇತ ಆಶೀರ್ವಾದ, ಒಪ್ಪಿಗೆ ಪಡೆದು ಎರಡೂ ರೀತಿಯ ಧಾರ್ಮಿಕ ವಿಧಿಗಳ ಜತೆ ಮದುವೆಯಾದ ಇನ್ನೊಂದು ಜೋಡಿ.
ಎರಡೂ ವಿವಾಹಗಳು ಸಿದ್ಧಕ್ರಮವನ್ನು ಧಿಕ್ಕರಿಸಿ ತಮ್ಮದೇ ಹೊಸ ಹಾದಿಯಲ್ಲಿ ಸಾಗಿದ , ಈ ಹೊತ್ತಿನ ಸಂಘರ್ಷಕರ ಸಂದರ್ಭದಲ್ಲಿ ಇಟ್ಟ ದಿಟ್ಟ ಹೆಜ್ಜೆಗಳು.
ಧಾರ್ಮಿಕ , ಸಾಂಪ್ರದಾಯಿಕ ಬದ್ಧತೆ ಇಲ್ಲದೆ ಇರುವ ವಾತಾವರಣದಲ್ಲಿ ಬೆಳೆದವಳು ನಾನು.
ಆದ್ದರಿಂದ ಈ ರೀತಿಯ ಅನುಕರಣೀಯ ವಿಚಾರಗಳು ಹೆಚ್ಚು ಇಷ್ಟವಾಗಿಬಿಡುತ್ತವೆ.
ಎಷ್ಟೋ ಸಲ ಈ ರೀತಿಯ ಚಿಂತನೆಗಳ ಬಗ್ಗೆ ಎಷ್ಟೋ ಮಂದಿ ಆಕರ್ಷಿತರಾಗುವುದು ಸಹಜ. ಆದರೆ ತಮ್ಮ ವೈಯಕ್ತಿಕ ಬದುಕಲ್ಲಿ ಇಂತಹ ಚಿಂತನೆಗಳನ್ನು ಜಾರಿಗೆ ತರುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ.
ಸರಳ ವಿವಾಹ , ಅಂತರ್ ಜಾತೀಯ - ಅಂತರ್ ಧರ್ಮೀಯ ವಿವಾಹ, ವರದಕ್ಷಿಣೆ ವಿರೋಧ ನಿಲುವು, ಮಗು ದತ್ತು ತೆಗೆದುಕೊಳ್ಳುವ ಆಶಯ - ಹೀಗೆ ಹಲವು ವಿಷಯಗಳಲ್ಲಿ ನಮ್ಮ ನಿಲುವುಗಳನ್ನು ನಾವೇ ನಿರೂಪಿಸಿ, ನಮ್ಮ ಬದುಕನ್ನು ರೂಪಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ಯೋಚಿಸುವಷ್ಟೇ ಸಹಜವಾಗಿ ಅದನ್ನು ಬದುಕಲ್ಲಿ ಜಾರಿಗೆ ತರುವಲ್ಲಿ ಕೆಲವರು ಹಿಂದೆ ಉಳಿಯುತ್ತೇವೆ.
ಕಾರಣ, ಪ್ರಗತಿಪರ ಧೋರಣೆಯುಳ್ಳವರು, ವಿಚಾರವಾದಿಗಳು , ಬುದ್ಧಿಜೀವಿಗಳು ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಆ ಸಾರ್ಥಕತೆಗೇ ಧನ್ಯರಾಗಿಬಿಡುವ ಮನೋಧರ್ಮ . ಅದು ಬಹಳ ಸುಲಭ.
ನಿಜವಾದ ಸಾರ್ಥಕತೆ , ನಮ್ಮ ನಿಲುವುಗಳನ್ನು ನಿಜ ಬದುಕಿಗೆ ಅನ್ವಯಿಸಿ, ಸಂಘರ್ಷ ನಡೆಸಿ ಬಾಳುವುದು.
ಪ್ರಗತಿ ಪರ, ವಿಚಾರವಂತ ಧೋರಣೆಗಳು ಯಶಸ್ಸು ಕಾಣಬೇಕಾದರೆ , ನಮ್ಮ ನೈತಿಕ ಸ್ಥೈರ್ಯ , ಆತ್ಮ ವಿಶ್ವಾಸದ ಜತೆಗೆ ಸಮಾಜವನ್ನು ಎದುರಿಸಿ , ಜನರ ನಡುವೆಯೇ ಬದುಕಿ ಬಾಳುವ ಪ್ರಾಮಾಣಿಕ ಪ್ರಯತ್ನ ಮತ್ತು ಈ ರೀತಿಯ ನಿರ್ಧಾರಗಳನ್ನು ಪ್ರಜ್ಞಾಪೂರ್ವಕವಾಗಿ ಬದುಕಲ್ಲಿ ಅನುಸರಿಸುವ ಸಂಕಲ್ಪ ಅಗತ್ಯ.
ಸಮಾಜವನ್ನು ಧಿಕ್ಕರಿಸಿ ಹೋಗುವ ಮಾರ್ಗ ವಿಫಲವಾಗಬಹುದು. ಒಪ್ಪಿಗೆಯಾಗದಿರಬಹುದು.
ಆದರೆ,
ಸಮಾಜವನ್ನು ನಿರ್ಮಾಣ ಮಾಡುವುದು ನಾವೇ ತಾನೇ ?.
ನಮ್ಮ ಕೈ ಅಳತೆಗೆ ಸಿಗುವ ಮಂದಿಗೆ ನಮ್ಮ ಚಿಂತನೆಯ ಬೀಜ ಬಿತ್ತುವಲ್ಲಿ ನಾವು ಸಫಲರಾದರೆ ಮುಂದೊಂದು ದಿನ ನಾವು ಕನಸು ಕಾಣುವ ಸಮಾಜ ನಮ್ಮಿಂದಲೇ ನಿರ್ಮಾಣವಾಗುವುದಿಲ್ಲವೇ?.
ಈ ರೀತಿಯ ದಿಟ್ಟ ನಿರ್ಧಾರವನ್ನು ಇಟ್ಟ ನನ್ನ ಸ್ನೇಹಿತರ ಬಗ್ಗೆ ಇನ್ನಷ್ಟು ಗೌರವ , ಪ್ರೀತಿ ಹೆಚ್ಚಾಯಿತು.
.....................................................................................................
ಪ್ರೀತಿ ಆದರ್ಶ . . .
ಬದುಕು ವಾಸ್ತವ !
ಆದರ್ಶ ಪ್ರೀತಿಗೆ ,ವಾಸ್ತವ ಬದುಕಲ್ಲಿ ಸೋಲುವ ಆತಂಕ .
ವಾಸ್ತವ ಬದುಕಿಗೆ ತಂದು ಗೆಲುವಿನ ಗುರಿ ತಲುಪಿಸುವ ತವಕ , ಪ್ರೀತಿಗೆ.
ಆದರ್ಶ . . . ಬದುಕು . . . ವಾಸ್ತವ . . . ಪ್ರೀತಿ . . .
ಎಲ್ಲದರ ಜತೆ . . . ಎಲ್ಲದರ ನಡುವೆ . . .
ಬದುಕನ್ನು ಪ್ರೀತಿಸುವ ಕಲೆ ಕಲಿಯಬೇಕು ನಾವೆಲ್ಲಾ.
...................................................................................................