ದಿವ್ಯಾಗೆ ಹೆದರಿಕೆ ಆಗೋಲ್ವಾ ?

ದಿವ್ಯಾಗೆ ಹೆದರಿಕೆ ಆಗೋಲ್ವಾ ?

ನನ್ನೊಬ್ಬನ ಜೊತೆ ಮಾತ್ರ ಹಿಂಗಾಗುತ್ತದೊ ಅಥವಾ ಎಲ್ಲರಿಗೂ ಹೀಗಾಗಿದೆಯೋ ಗೊತ್ತಿಲ್ಲ. ಧರ್ಮ ರಾಜ್ಯಗಳ ನಡುವೆ ಜಗಳಗಳು ನಡೆದರೆ ನನ್ನ ವಯಕ್ತಿಕ ಜೀವನದಲ್ಲೂ ಅದರ ಛಾಯೆ ಕಂಡುಬರುತ್ತದೆ. ಕಾವೇರಿ ಗಲಾಟೆ ನಡೆದಾಗ ಸೆಲ್ವಿ, ಸಗಾ(ಸಗದೆವ್), ತೇನ್‍ಮೋಳಿ ಬಗ್ಗೆ ಮನಸ್ಸು ಚಿಂತಿಸುತ್ತದೆ. ಹಿಂದು ಮುಸ್ಲಿಂ ಗಲಾಟೆ ನಡೆದಾಗ ಶಿರಿನ್, ಯುಸುಫ಼್ ಖಾನ್, ಫ಼ಾತಿಮಾ ರ ನೆನಪು ಕಳವಳ ಉಂಟು ಮಾಡುತ್ತದೆ. ಇವರು ಗಲಾಟೆ ಮತ್ತು ನಮ್ಮ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊ ಅಂತ ಅಕಸ್ಮಾತ್ ಕೇಳಿದರೆ ಏನು ಮಾಡಲಿ? ಒಮ್ಮೊಮ್ಮೆ ದಿಗಿಲಾಗುತ್ತದೆ! ಸ್ನೇಹ ಮುಖ್ಯವೋ ಧರ್ಮ ಮುಖ್ಯವೊ? ಸ್ನೇಹ ಮೊದಲೋ ರಾಜ್ಯ ಮೊದಲೋ ? ಸ್ನೇಹ ಮಾಡಿಕೊಳ್ಳುವಾಗ ಇದನ್ಯಾವುದನ್ನೂ ನೋಡಿರುವುದೇ ಇಲ್ಲವಲ್ಲ ನಾವು ???!!!

ಬರೋಬ್ಬರಿ ಹದಿನೇಳು ವರ್ಷಗಳ ನಂತರ ದಿವ್ಯಾಳನ್ನು ಭೇಟಿಯಾಗಲಿದ್ದೆ. ಹದಿನೇಳು ವರ್ಷ ಅಂದರೆ ಕಡಿಮೆ ಸಮಯವೇನಲ್ಲ. ಅವಳ ತಂದೆಗೆ ವರ್ಗವಾಗಿ ದಾವಣಗೆರೆಯಿಂದ ಹೊರಟಾಗ ದಿವ್ಯಾಳಿಗೆ ಐದೊ ಆರೊ ವರ್ಷ ವಯಸ್ಸು. ನಮ್ಮ ಮನೆ ಮತ್ತು ಅವಳ ಮನೆಯ ನಡುವೆ ದಿವ್ಯಾಳಿಗಾಗಲೀ ನನಗಾಗಲೀ ಅಂತಹ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ದಿವ್ಯಾ ಎಲ್ಲರಿಗಿಂತ ವಯಸ್ಸಲ್ಲಿ ಚಿಕ್ಕವಳು ಮತ್ತು ಶಾಂತ ಹುಡುಗಿ. ನನ್ನ ಅಪ್ಪ ಸಾಕ್ಷಾತ್ ದುರ್ವಾಸ ಮುನಿಗಳು. ಅಪ್ಪನಿಗೆ ನಾನು, ಅಪ್ಪನ ಮುದ್ದಿನ ಮಗಳು ನನ್ನ ತಂಗಿ, ನಮ್ಮ ಓರಗೆಯ ಎಲ್ಲರೂ ಹೆದರುತ್ತಿದ್ದೆವು. ದಿವ್ಯಾಳಿಗೆ ಆ ಹೆದರಿಕೆಯೇ ಇರಲಿಲ್ಲ. ಅಪ್ಪನ ಟೇಬಲ್ ಮೇಲೆ ಕುಳಿತು ಅವರು ಟೈಪಿಸುವುದನ್ನೇ ಏಕಚಿತ್ತಳಾಗಿ ನೋಡುತ್ತಾ ಕುಳಿತಿರುತ್ತಿದ್ದಳು.

ದಿವ್ಯಾಳಿಗೆ ಮಕ್ಕಳ ನಡುವೆ ಏನೇ ಬೇಕಿದ್ದರೂ ಹರ್ಷಣ್ಣನ ಹತ್ತಿರ ಬರುತ್ತಿದ್ದಳು. ನನ್ನ ಮೂಲಕ ಹೋದರೆ ನನ್ನ ಪಾಲಿನದಾದರೂ ಅವಳಿಗೆ ಸಿಗುತ್ತದೆ ಎಂಬುದು ಅವಳಿಗೆ ಗೊತ್ತಾಗಿ ಹೋಗಿತ್ತು. ನಾನಾದರೂ ನನ್ನ ಒಡಹುಟ್ಟಿದ ತಂಗಿಗೆ ಕೊಡುವ ಮೊದಲು ಅವಳಿಗೆ ಕೊಡುತ್ತಿದ್ದೆ. ತನ್ನ ಒಡಹುಟ್ಟಿದವನಿಗಿಂತ ಮುಂಚೆ ಅವಳು ನನ್ನ ಬಳಿ ಬರುತ್ತಿದ್ದಳು. ಒಮ್ಮೆ ನನಗೆ ಟೈಫ಼ಾಯಿಡ್ ಆಗಿ ನಲ್ಲಿಕಾಯಿ ತಿನ್ನಬಾರದು ಎಂದು ವೈದ್ಯರ ಅಪ್ಪಣೆಯಾಗಿತ್ತು. ಆಗ ನಾವೆಲ್ಲ ಮರ ಹತ್ತಿ ಕೀಳುತ್ತಿದ್ದ ನೆಲ್ಲಿಕಾಯಿಯ ನನ್ನ ಪಾಲು ದಿವ್ಯಾಳಿಗೆ ಹೋಗುತ್ತಿತ್ತು.(ಡಾಕ್ಟ್ರು ನೆಲ್ಲಿಕಾಯಿ ತಿನ್ನಬೇಡ ಎಂದು ಹೇಳಿದ್ದರೆ ಹೊರತು ಮರ ಹತ್ತಬೇಡ ಎಂದು ಹೇಳಿರಲಿಲ್ಲ.) ಯಾರ ಜೊತೆ ದಿವ್ಯಾಳ ಜಗಳವಾಗಿದ್ದರೂ ನಾನು ದಿವ್ಯಾಳ ಪರವೇ ವಹಿಸುತ್ತಿದ್ದೆ. ಏನಾದರೂ ಪ್ರಶ್ನೆಗಳಿದ್ದರೆ ನನ್ನ ಬಳಿಯೇ ಓಡಿ ಬರುತ್ತಿದ್ದಳು . ದಿವ್ಯಾ ಯಾವ ಜಾತಿ ಎಂಬುದು ನನಗೆ ಇಂದಿಗೂ ಗೊತ್ತಿಲ್ಲ. ನನ್ನ ಭಾಷೆಯೊ ಉತ್ತರ ಕರ್ನಾಟಕದ ಒರಟು ಶೈಲಿ. ಅವಳದು ಶುದ್ಧಾನುಶುದ್ಧ ಮಂಗಳೂರು ಕಡೆಯ ಗ್ರಾಂಥಿಕ ಕನ್ನಡ. ಆಕೆಯ ಮಾತೃಭಾಷೆ ತುಳು. ಹೊಸದಾಗಿ ದಾವಣಗೆರೆಗೆ ಬಂದಾಗ ಒಂದು ಶಬ್ದವೂ ಕನ್ನಡ ಬರುತ್ತಿರಲಿಲ್ಲ ಅವಳಿಗೆ. ನಮ್ಮೆಲ್ಲರೊಡನೆ ಆಡುತ್ತಾ ಬಹಳ ಬೇಗನೆ ಕಲಿತುಕೊಂಡಳು.

ಮಂಗಳೂರು ಬಸ್ ನಿಲ್ದಾಣದಲ್ಲಿ ದಿವ್ಯಾಳಿಗೆ ಕಾಯುತ್ತಿದ್ದೆ. ದಿವ್ಯಾ ಅಂದ ಕೂಡಲೇ ನನಗೆ ನೆನಪಾಗುತ್ತಿದ್ದದ್ದೆ ಐದು ವರ್ಷದ ಚಿಕ್ಕ ಹುಡುಗಿ! ನನ್ನನ್ನು ಎದುರುಗೊಳ್ಳಲು ಐದು ವರ್ಷದ ಮಗುವೇ ಬರುತ್ತದೆ ಎಂದು ನಿರೀಕ್ಷಿಸುತ್ತಾ ನಿಂತಿದ್ದೆ. ಬಿಳಿಯ ಏಪ್ರನ್ ಹಾಕಿಕೊಂಡ ಹುಡುಗಿ ನನ್ನ ಎದುರಿಂದ ಮುಂದೆ ಹೋದಾಗಲೇ ನನ್ನ ಮುಠ್ಠಾಳ ಬುದ್ಧಿಗೆ ದಿವ್ಯಾಳ ವಯಸ್ಸು ಈಗ ಇಪ್ಪತ್ತು ದಾಟಿರುತ್ತದೆ ಎಂದು ಹೊಳೆದದ್ದು. ಎದುರಿಗೆ ಹೋದ ಏಪ್ರನ್ ನ ಹುಡುಗಿಯೇ ಅವಳಿರಬಹುದಾ ಎಂದು ಒಂದು ಕ್ಷಣ ಮನಕ್ಕೆ ಬಂತು. ನೇರವಾಗಿ ಕೇಳುವ ರಿಸ್ಕ್‍ನ ಬದಲು ಅವಳ ಮೊಬೈಲ್ ಗೆ ಕರೆ ಮಾಡಿದೆ. ನನ್ನ ಕರೆ ತೆಗೆದುಕೊಂಡದ್ದು ಆ ಏಪ್ರನ್ ಧರಿಸಿದ ಹುಡುಗಿಯೇ ಎಂದು ಖಾತ್ರಿ ಪಡಿಸಿಕೊಂಡು ಅವಳ ಬಳಿ ಸಾರಿ ಕೈನೀಡಿ "ನಾನೆ ಕಂದಾ ಹರ್ಷಣ್ಣ" ಎಂದೆ.

"ಹಾಂ ! ಎಂತ ಹರ್ಷಣ್ಣ ಎಷ್ಟು ಫ಼್ಯಾಟ್ ಆಗಿಬಿಟ್ಟಿದ್ದೀಯಾ? ಚೆನ್ನಾಗಿದ್ದೀಯಾ? "

ಹದಿನೇಳು ವರ್ಷದ ನಂತರ ಅಷ್ಟೇ ತೆಳ್ಳಗೆ ಇರಲು ಸಾಧ್ಯವೆ ?

"ಛೊಲೊ ಇದಿನಿ ! ನೀನು ?" (ಬೆಂಗಳೂರು, ಮೈಸೂರು, ದಾವಣಗೆರೆ, ನನ್ನ ಮೂಲಭಾಷೆ ಎಲ್ಲಾ ಸೇರಿ ನನ್ನ ಮಾತು ಹೈಬ್ರಿಡ್ ಶೈಲಿ ಪಡೆದುಕೊಂಡುಕೊಂಡುಬಿಟ್ಟಿದೆ!)

ಉಭಯಕುಶಲೋಪರಿ ಆಯಿತು.

"ಅಪ್ಪ ಅಮ್ಮ ಕಾಯ್ತಿರ್ತಾರೆ ಮನೆಗೆ ಹೋಗುವ" ಎಂದು ಕರೆದುಕೊಂಡು ಹೊರಟಳು.

೧೯೯೧ ರಲ್ಲಿ ಹಿಂದು ಮುಸ್ಲಿಂ ಗಲಾಟೆಯಿಂದಾಗಿ ದಾವಣಗೆರೆಯ ಹೆಸರು ಬಿಬಿಸಿ ವಾರ್ತೆಯಲ್ಲೂ ಬಂದಿತ್ತು. ಜನ ಒಬ್ಬರನ್ನೊಬ್ಬರು ಕೊಚ್ಚಿ ಹಾಕುವುದನ್ನು, ಹೆಣಗಳು ಉರುಳುವುದನ್ನು ಕಣ್ಣೆದುರಿಗೇ ಕಂಡಿದ್ದೆ! ದಿವ್ಯಾಳ ಪರಿವಾರ ಈ ಗಲಾಟೆಯ ಸಮಯದಲ್ಲಿ ನಮ್ಮ ಮನೆಯ ಪಕ್ಕದಲ್ಲೇ ಇತ್ತು. ಈ ಬಾರಿ ಅವಳನ್ನು ನೋಡಲು ಹೋದಾಗ ಪುತ್ತೂರಿನಲ್ಲಿ ಗಲಾಟೆಯಾಗಿ ಯಾವುದೊ ದರಿದ್ರ ಸೆಕ್ಷನ್ ಜಾರಿಗೆ ಬಂದಿತ್ತು.

ಆಟೊ ಹತ್ತಿದ ನಂತರ ಕೇಳಿದೆ. "ಏನು ಕಂದಾ! ನಿಮ್ಮೂರ್ನ್ಯಾಗೆ ಈಗೀಗ ಭಾರಿ ಗದ್ದಲ?"

"ಹೌದು! ಬರ್ತಾ ಬರ್ತಾ ಜಾಸ್ತಿ ಆಗ್ತಾ ಉಂಟು!"

"ಹುಡುಗ ಹುಡುಗಿ ಜೊತಿಗೆ ಕಂಡ್ರೆ ಹೊಡೀತಾರಂತೆ?"

"ಹೌದು! ಬೇರೆ ಬೇರೆ ಧರ್ಮದವರಾಗಿದ್ದರೆ"

"ಅವರಿಬ್ಬರೂ ಬೇರೆ ಬೇರೆ ಧರ್ಮ ಅಂತ ಹೆಂಗೆ ಗೊತ್ತಾಗುತ್ತೆ?"

"ಗೊತ್ತಿಲ್ಲ"

"ಅವರಿಬ್ಬರೂ ಅಣ್ಣ ತಂಗಿ ಆಗಿದ್ದರೆ?"

"ಗೊತ್ತಿಲ್ಲ!"

"ನಾವಿಬ್ರೂ ಅಣ್ಣ ತಂಗಿ ಅಂತ ಅವರಿಗೆ ಹೇಗೆ ಗೊತ್ತಾಗುತ್ತೆ?"

ದಿವ್ಯಾ ದಿವ್ಯವಾಗಿ ಒಂದು ಕಿರುನಗೆಯನ್ನು ನೀಡಿ ವಿಷಯ ಬದಲಿಸಿದಳು!

"ಮತ್ತೆ ಹರ್ಷಣ್ಣ! ನಿನ್ನ ನೋಡಿದ್ರೆ ಅಮ್ಮ ಎಷ್ಟು ಖುಶಿ ಪಡ್ತಾರೆ ಗೊತ್ತುಂಟಾ? ಅಣ್ಣ ಇದ್ದಿದ್ರೆ ಅವ್ನಿಗೆ ನಿನ್ನಷ್ಟೇ ವಯಸ್ಸಾಗಿರ್ತಿತ್ತು!"

Rating
No votes yet