ದಿ. ರಾಜ್‍ ಸಮಾಧಿಗೆ ಹತ್ತು ಲಕ್ಷ ಜನರ ಭೇಟಿ

ದಿ. ರಾಜ್‍ ಸಮಾಧಿಗೆ ಹತ್ತು ಲಕ್ಷ ಜನರ ಭೇಟಿ

ಇತ್ತೀಚಿನ ಓದು , ಸುದ್ದಿ , ಇತ್ಯಾದಿ ಯ ಕಂತನ್ನು ಬಹಳ ದಿನಗಳ ಬಳಿಕ ಕೊಡುತ್ತಿದ್ದೇನೆ.

ದಿ. ರಾಜ್‍ಕುಮಾರ್ ಅವರ ಸಮಾಧಿಗೆ ಒಂದು ತಿಂಗಳಲ್ಲಿ ಹತ್ತು ಲಕ್ಷ ಜನ ಭೇಟಿ ಕೊಟ್ಟಿದ್ದಾರೆ . ಹೆಚ್ಚಿನ ಮಾಹಿತಿಗೆ . ಮೇ ೧೧ ರ ಪ್ರಜಾವಾಣಿ ಯ ಕರ್ನಾಟಕದರ್ಶನ ಪುರವಣಿ ನೋಡಿರಿ . ( ಅಂತರ್ಜಾಲದಲ್ಲೂ ಲಭ್ಯ)

ರಾಜಕುಮಾರ್ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದರು ದೇವರು ನನಗೆ ಶರೀರ , ಶಾರೀರ , ಅಭಿನಯ ಪ್ರತಿಭೆ ಕೊಟ್ಟಿರುವಾಗ ಅವನ್ನು ಬಳಸಿಕೊಳ್ಳದಿರುವದು ತಪ್ಪು ಎಂದು ಹೇಳಿದ್ದರು . ಈ ಮಾತನ್ನು ನೆನೆದು ಮತ್ತು ಟಿ. ವಿ. ಸಂದರ್ಶನವೊಂದರಲ್ಲಿ ಚಿತ್ರ ಸಾಹಿತಿ ಶ್ರೀ ಸಿ.ವಿ.ಶಿವಶಂಕರ್ ಅವರು ( ಅವರು ಬರೆದ 'ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆ ; ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ' ಹಾಡನ್ನು ನೀವೆಲ್ಲ ಕೇಳಿರಬೇಕು . ಚಿತ್ರ ಬಿಡುಗಡೆಯಾಗದಿದ್ದರೂ ಈ ಹಾಡು ಜನಪ್ರಿಯವಾಗಿದೆ .) ' ನಿಮ್ಮ ಹಾಡುಗಳಲ್ಲಿ ಕನ್ನಡ ಅಭಿಮಾನದ ಹಾಡುಗಳು ಜಾಸ್ತಿ . ಏಕೆ?' ಎಂಬ ಪ್ರಶ್ನೆಗೆ ಹೇಳಿದ ಮಾತು - ' ನನ್ನ ಹತ್ತಿರ ಜನ ಹಾಡು ಬರೆಸಿಕೊಳ್ಳಲು ಬರುವಾಗ ನಾನು ನನ್ನಿಂದಾದಷ್ಟು ನಾಡು ನುಡಿಯ ಸೇವೆ ಮಾಡಬಾರದೇ?' - ಇದನ್ನು ನೆನೆದು ' ನನಗೆ ಹೊಟ್ಟೆ ಪಾಡಿಗೆ ಒಳ್ಳೆಯ ಕೆಲಸ ಸಿಕ್ಕಿದೆ . ಅಂತರ್ಜಾಲ ಇದೆ, ಸ್ವಲ್ಪ ಬಿಡುವು ಇದೆ , ಅನೇಕ ವರ್ಷಗಳ ಕನ್ನಡದ ಹವ್ಯಾಸೀ ಓದಿನ ಬೆಂಬಲ ಇದೆ' ಎಂದು ಕನ್ನಡಸಾಹಿತ್ಯ.ಕಾಂ ನವರು ಟೈಪು ಮಾಡಿ ಇಟ್ಟಿರುವ ಕನ್ನಡ ಸಾಹಿತ್ಯವನ್ನು ತಿದ್ದಲು , ಕಾಗುಣಿತ ದೋಷಗಳನ್ನು ಭವಿಷ್ಯದಲ್ಲಿ ಪತ್ತೆ ಮಾಡಲು ಇತರರಿಗೆ ಅನುಕೂಲವಾಗಲು ಶಬ್ದಗಳ ಸಂಗ್ರಹವನ್ನು ಬೆಳೆಸಲು ನನ್ನ ಕೈಲಾದಷ್ಟು ನೆರವಾಗುತ್ತಿದ್ದೇನೆ. ಈವರೆಗೆ ೩೦ ಲೇಖನಗಳನ್ನು ತಿದ್ದಿದ್ದೇನೆ ಮತ್ತು ನನ್ನ ಬಳಿ ಈಗ ನಲವತ್ತು ಸಾವಿರಕ್ಕೂ ಹೆಚ್ಚು ಶಬ್ದಗಳ ಸಂಗ್ರಹ ಇದೆ .

..

ಎರಡು ವಾರದ ಹಿಂದಿನ ಸುಧಾ ದಲ್ಲಿ ಬ್ಲಾಗಿಂಗ್ ಬಗೆಗೆ ಮುಖಪುಟ ಲೇಖನ ಬಂದಿದೆ , ಪವನಜ ಮತ್ತಿತರರ ಬ್ಲಾಗುಗಳ ಕುರಿತೂ ಬಂದಿದೆ . ( ಅದೇಕೋ ಸಂಪದದ ಕುರಿತು ಬಂದಿಲ್ಲ- ಬಹುಶ: ಸಂಪದ ಬ್ಲಾಗಿಂಗನ್ನು ಅನೇಕರು ಉಪಯೋಗಿಸುತ್ತಿಲ್ಲದಿದ್ದುದೇ ಕಾರಣ ಇರಬೇಕು . ಆದರೂ ಸಂಪದ ಬ್ಲಾಗಿಂಗ್ ಸೌಲಭ್ಯ ಕೊಡಮಾಡಿರುವದನ್ನು ಉಲ್ಲೇಖಿಸಬಹುದಿತ್ತು)

..

ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಹಾಡಿದರು . ಅನೇಕ ಗೀತೆಗಳ ಮಧ್ಯೆ ಒಂದು ತಮಿಳು ಗೀತೆಯನ್ನು 'ಶ್ರೋತೃಗಳ ಅನುಮತಿ ಪಡೆದು' ಹಾಡಿದರು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಶ್ರೀಮತಿ ಗಂಗೂಬಾಯಿ ಹಾನಗಲ್ ಸನ್ಮಾನ ಸಮಾರಂಭಕ್ಕೆ ಆಗಮಿಸಿದ ನಟ ನಾನಾ ಪಾಟೇಕರ್ ಅವರು 'ಮರಾಠಿಯಲ್ಲಿ ಮಾತಾಡಿ' ಎಂಬ ಕೂಗನ್ನು ಅಲಕ್ಷಿಸಿ ಹಿಂದಿಯಲ್ಲೇ ಮಾತಾಡಿದರು. ಸ್ಥಳೀಯ ಜನರ ಭಾವನೆಗಳನ್ನು ಈ ಕಲಾವಿದರು ಗೌರವಿಸಿರುವದು ಶ್ಲಾಘನೆಗೆ ಅರ್ಹ ಅಲ್ಲವೇ?

..

ಚಂದಮಾಮವನ್ನು ನಾನು ಮೆಚ್ಚುವ ಕಾರಣವೆಂದರೆ ದೊಡ್ಡ ದೊಡ್ಡ ಸಾಹಿತಿಗಳ ನೂರ್‍ಆರು ಪುಟ ಓದುವದರಿಂದ ಬಂದಿರುವ ಸಂತೋಷ, ತಿಳುವಳಿಕೆಯ ಲಾಭಕ್ಕಿಂತ ಹೆಚ್ಚು ಸಂತೋಷ , ತಿಳುವಳಿಕೆ ಚಂದಮಾಮದ ಒಂದು ಅರ್ಧಪುಟದ್ದೋ ೩-೪ ಪುಟಗಳದ್ದೋ ಕಥೆಯನ್ನು ಓದುವದರಿಂದ ಬರುತ್ತದೆ. ಈ ಸಲದ ಚಂದಮಾಮದಲ್ಲಿ ಒಬ್ಬ ಚಮ್ಮಾರ ತೀರ್ಥಕ್ಷೇತ್ರಕ್ಕೆ ಹೋಗುವಾಗ ತನ್ನ ಉದ್ಯೋಗದ ಸಲಕರಣೆಗಳನ್ನೂ ಒಯ್ಯುತ್ತಾನೆ. ಅವನಿಗೆ ಹಣವಿಲ್ಲದಾಗ ಅದರಿಂದ ಅನುಕೂಲವಾಗುತ್ತದೆ. ವೃತ್ತಿಪ್ರೇಮ ದೈವಭಕ್ತಿಗೆ ಸಮ ಎಂದೂ ಕಥೆಯಲ್ಲಿ ಹೇಳಲಾಗಿದೆ.

ಇನ್ನೊಮ್ಮೆ ಯಾವಾಗಲಾದರೂ ನಾನು ಚಿಕ್ಕಂದಿನಲ್ಲಿ ಓದಿದ ಒಂದೆರಡು ಕಥೆಗಳ ಬಗ್ಗೆ ಬರೆಯುತ್ತೇನೆ.

Rating
No votes yet