ದೀಪಗಳು..

ದೀಪಗಳು..

ಇನ್ನೇನು ಮಳೆ ಬರುವ ಸೂಚನೆಯಲ್ಲಿ ಕಪ್ಪುಗಟ್ಟಿದ ಮೋಡ, ಇನ್ನೆಲ್ಲೋ ಮಳೆಬಿದ್ದ ಕುರುಹಾಗಿ ತೀಡಿ ಬಂದ ತಂಗಾಳಿಯ ಆ ಸಂಜೆ ನಾನು ಮತ್ತು ತಮ್ಮ ಗಾಂಧಿ ಬಜಾರಿಗೆ ಹೊರಟಿದ್ದೆವು. ಊರಿಗೆ ಹೊರಟ ಅವನಿಗೆ ಅಲ್ಲಿರುವ ಪುಟ್ಟ ಮಕ್ಕಳಿಗೆ ಆಟ ಸಾಮಾನು, ಕತೆ ಪುಸ್ತಕ ಕೊಳ್ಳಬೇಕಿತ್ತು. ಗಡಿಬಿಡಿಯಲ್ಲಿ ಪಾರ್ಕ್ ಮಾಡಿ, ಇಳಿದು ಪುಸ್ತಕದಂಗಡಿ ಹೊಕ್ಕರೆ ಅಲ್ಲಿ ಕುರ್ಚಿಯಲ್ಲಿ ಪುಸ್ತಕವೊಂದನ್ನು ಹಿಡಿದು ಏನೋ ಮಾತಾಡುತ್ತ ಕುಳಿತ ನನ್ನ ಪ್ರೀತಿಯ ಕತೆಗಾರ. ಅಲ್ಲಲ್ಲಿ ಜನರಿದ್ದರು. ಹೇಗೆ ಮಾತಾಡುವುದೆಂಬ ಸಂಕೋಚದಲ್ಲಿ, ಆಚೆ ಬದಿಯಾಸಿ ಪುಸ್ತಕ ಆರಿಸಿ, ನಿದಾನವಾಗಿ ಗಲ್ಲೆಯ ಕಡೆ ಬಂದು ಅವರ ಕಣ್ಣೋಟಕ್ಕೆ ಸಿಕ್ಕಿಬಿದ್ದೆ.
ನನ್ನ ಮನದೊಳಗಣ ಖುಷಿ, ಮೈಯೆಲ್ಲ ಆವರಿಸಿ, ಮುಖಮಂಡಲದಲ್ಲಿ ನಗೆಹೂವಿನ ಗೊಂಚಲರಳಿ ತುಂಬ ದಿನಗಳ ಬಳಿಕ ನೋಡಲು ಸಿಕ್ಕಿದ ಅವರನ್ನು ವಿಷ್ ಮಾಡಿತು. ಅವರೋ ಕಡಲತೀರದವರಲ್ಲವಾ, ಪ್ರೀತಿಯ ರಾಶಿ; ಅಲೆಅಲೆಯಾಗಿ ನುಗ್ಗಿಬಂದ ಹಿಗ್ಗು ಅವರ ಮಿಂಚುಕಣ್ಣಿಂದಿಳಿದು, ಕನ್ನಡಕ ತೆಗೆಸಿ, ಹತ್ತಿರ ಬಂದು ಬಳಸಿ ಹಿಡಿಯಿತು.

ನನಗೆ ಟೇಬಲ್ ಮೇಲೆ ಕುಳಿತು ಅಜ್ಜನ ಕತೆ ಕೇಳುತ್ತಾ ಬೇರೆ ಲೋಕಕ್ಕೆ ತೇಲಿ ಹೋದ ಹಾಗೆ, ತುಂಬ ಇಷ್ಟವಾದ ಅಣ್ಣನ ತೋಳತೆಕ್ಕೆಗೆ ಸಿಕ್ಕಿದ ಹಾಗೆ, ತುಂಬದಿನಗಳಿಂದ ದೂರದೂರಲ್ಲಿದ್ದ ಗೆಳತಿ ಅಚಾನಕ್ ಸಿಕ್ಕಿ ಮಾತುಕತೆಯಾಡಿದ ಹಾಗೆ, ಈಗಷ್ಟೇ ಮಳೆ ನಿಂತು, ಬಿಸಿಲು ಹರಡಿ ಕಾಮನ ಬಿಲ್ಲು ಮೂಡಿದ ಹಾಗೆ.. ಎಲ್ಲ ಆಪ್ತ ಅನುಭವಗಳ ಒಟ್ಟಂದದ ಹಾಗೆ... ಮಾತು ಬರದೆ ಬರಿದೆ ನಕ್ಕೆ. ಮಾತ ಬದಲು ಅವರು ನಕ್ಕರು. ಹಾಗೆ ಒಂದಷ್ಟು ಅವರ ತಿಳಿವಿನ ಸವಿ ಸವಿದು, ನಾಲ್ಕೆಂಟು ಹಿತಮಾತನಾಡಿ, ಸುತ್ತರಿದಿದ್ದ ಯಾವ್ಯಾವುದೋ ಸೀರಿಯಸ್ ವಿಷಯಗಳಿಂದ ಕೆಲಕ್ಷಣಗಳ ಮಟ್ಟಿಗೆ ಮರೆಯಾಗಿ ಹಗುರ್‍ಆಗಿ.. ಹೇಗೆ ಹೇಳಲಿ ಆ ಕ್ಷಣಗಳ ಮಾಧುರ್ಯವನ್ನು..

ಇಳಿಸಂಜೆಯಲ್ಲಿ ಪುಟ್ಟ ದೀಪವೊಂದು ದೇವರಗೂಡಿನಲ್ಲಿ ಬೆಳಗಿ ಕತ್ತಲನ್ನ ಇಂಚಿಂಚೇ ತಳ್ಳಿದಂತ ಹಿತವಾದ ಬೆಳಕಲ್ಲಿ ಅದ್ದಿ ಹೋದೆ.

ಅದಾಗಿ ಮಾರನೆಯ ದಿನ, ಮನೆಯಲ್ಲಿ ಗಂಡನೊಡನೆ ಕೂತು ಬಿಸಿಬಿಸಿ ಕಾಫಿ ಕುಡಿಯುತ್ತಾ, ಚಾನಲ್ ತಿರುಗಿಸುತ್ತಿದ್ದಾಗ ಅಚಾನಕ್ ಆಗಿ  ಮನಸು ಗಾಂಧಿ ಬಜಾರು ಅಂತ ಬರೆದ ಪ್ರೀತಿಯ ಕವಿ ನಿಸಾರ್ ಅಹಮದ್ ಕಂಡರು. ಅಲ್ಲೆ ನಿಂತು ಅವರನ್ನು ಸವಿದೆವು. ಅಸ್ಖಲಿತ ಕನ್ನಡ, ಎಲ್ಲೂ ಗ್ರಂಥಸ್ಥವೆನ್ನಿಸದೆ ಆದರೆ ಕವಿತೆಯ ಸೊಗದಿಂದ ಹೊರಬರುವ ಸಹಜ ಮಾತುಗಳು, ಅವರ ಹಲವೆಂಟು ಕವಿತೆಗಳಲ್ಲಿ ಮಿಂದು ಬಂದ ಅನುಭವ. ಆ ಕಾರ್ಯಕ್ರಮ ನಡೆಸಿಕೊಟ್ಟವರು ಯಾರೋ ತಿಳಿಯಲಿಲ್ಲ ಗಬ್ಬಾಗಿ ಮಾತಾಡಿದರು. ನಿಸಾರ್ ಅಂತಹ ಹಿರಿಯ ಚೇತನದ ಮಾತನ್ನು ಅವರು ಅಲ್ಲಲ್ಲಿ ತಡೆಹಿಡಿದು ಪಾತಿ ಮಾಡಿ ಹರಿಯಬಿಡುತ್ತಿದ್ದರು. ತುಂಬ ಇರಿಟೇಟ್ ಆಗುತ್ತಿತ್ತು ನೋಡುತ್ತಿದ್ದ ನನಗೆ.. ಅಷ್ಟರಲ್ಲೆ ಅವರು ಏನೇ ಮಾಡಿದರೂ ಸರಳವಾಗಿ, ನೇರವಾಗಿ ಮಾತಾಡುತ್ತಿದ್ದ ನಿಸಾರರ ಹಿರಿತನದ ಮಾತುಗಳು ಮನಕ್ಕೆ ತಂಪೆರೆಯುತ್ತಿದ್ದವು. ಕಾರ್ಯಕ್ರಮದ ಉದ್ದೇಶ ತುಂಬ ಗೊಂದಲಮಯವಾಗಿತ್ತು, ಆದರೆ ಚಾನಲ್ ತಿರುಗಿಸದೆ ಕೂತು ನೋಡುವಂತೆ ಮಾಡಿದ್ದು ಕವಿವರ್ಯರೇ. ನಿರ್ವಾಹಕ ಎಲ್ಲೂ ಮಧ್ಯದಲ್ಲಿ ಮಾತಾಡದೆ, ಅವರಿಗೇ ಮಾತಾಡಲು ಬಿಟ್ಟಿದ್ದರೆ ಚೆನ್ನಾಗಿತ್ತು ಅನ್ನುವಷ್ಟು ಚೆನ್ನಾಗಿ ನಡೆಸಿಕೊಟ್ಟರು. ನಿಸಾರರು ಹೇಗೆ ಮುಸ್ಲಿಂ ಸಂವೇದನೆ ಎಂಬ ಜಾಡಿಗೆ ಬೀಳದೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕವಿತೆ ಬರೆದರು ಅನ್ನುವುದು ಹಿಗ್ಗಾಡಿ ಜಗ್ಗಾಡಿ ಕೇಳಿದ ಕಾರ್ಯಕ್ರಮ ನಿರ್ವಾಹಕನ ಪ್ರಶ್ನೆಗಳ ಸಾರಾಂಶ.  ಮತ್ತದೇ ಬೇಸರದ ಪ್ರಶ್ನೆಗೆ ನಿಸಾರರು ಬೆಣ್ಣೆ ಕದ್ದ ಕೃಷ್ಣನ ಹಾಡು ಬರೆದಂತೆ ನವಿರಾಗಿ, ಮೇಲೆಸೆದ ಕಲ್ಲು ಮತ್ತೆ ಕೆಳಗೆ ಬೀಳುವಷ್ಟು ಸಹಜವಾಗಿ ಉತ್ತರಿಸಿದರು. ಕುಲವನ್ನಾಧರಿಸಿ ಕವಿಯನ್ನು, ಕವಿತೆಯನ್ನು ಅಳೆಯುವ ಮಾಪನದ ಬಗ್ಗೆ ಅವರಿಗೆ ಕಿರಿಕಿರಿಯಾಗಿತ್ತು. ಬೆಳೆದ ವಾತಾವರಣವನ್ನು ಸಹಜವಾಗಿ ತಂದರೆ ಆ ಬಗ್ಗೆ ಕುಹಕವಾಡುವ ಸಧ್ಯದ ಸಾಹಿತ್ಯ ಪರಿಸ್ಥಿತಿಯ ಬಗ್ಗೆ ನೋವಿತ್ತು. ಹಳೆಯ ದಿನಗಳ ಧೀಮಂತ ಚರ್ಚೆ ವಿಮರ್ಶೆಗಳ ಬಗ್ಗೆ ಪ್ರೀತಿಯಿತ್ತು.

ನಾನು ಏನು ಹೇಳಲು ಹೊರಟೆ ಅಂದರೆ, ಇಲ್ಲಿಯವರೆಗೆ ಒಂದು ದಿನಕ್ಕೂ, ಅವರ ಕವಿತೆ ಓದಿದಾಗ, ಹಾಡು ಕೇಳಿದಾಗ ನಾನು ಅವರನ್ನು ನಿಸಾರ್ ಎಂದು ಅನುಭವಿಸಿದ್ದೆನೇ ಹೊರತು, ಆಹಾ ಎಷ್ಟು ಚಂದ ಕನ್ನಡದಲ್ಲಿ ಬರೆವ ಮುಸ್ಲಿಂ ಕವಿ ಎಂದಲ್ಲ. ಇದು ನಾವು ಬಹುಪಾಲು ಕನ್ನಡಿಗರ ಅನುಭವ ಕೂಡಾ. ಹೀಗಿದ್ದೂ ಮತ್ತೆ ಮತ್ತೆ ಅವರನ್ನು ಈ ಭೂಮಿಕೆಗೆ ಎಳೆತರುವ ಸಣ್ಣತನ ಬೇಸರ ತಂದಿತು.
ಅವರು ಸ್ವಲ್ಪ ಕಿರಿಕಿರಿಯಾಗಿದ್ದರೂ, ಲೋಕವೇ ಹೀರದಿರು ದುಂಬಿಯೊಲು ಹೂವ ಎಂದು ಕೇಳುವ ಒಲವಿನ ಬಳ್ಳಿಯಂತೆ ಮೈದುಂಬಿ ನಮಗಾಗಿ ಮಾತಾಡುತ್ತಿದ್ದರು, ನಿರ್ವಾಹಕರ ಪ್ರಶ್ನೆಯ ರಗಳೆಗೆ ಮತ್ತೆ ಸಿಕ್ಕಿಬೀಳುವ ಅರಿವಿದ್ದೂ, ಗಾಳಿಯಲಿ ಗಂಧದಂತೆ ತೇಲುವ ಚೇತನವಾಗಿ..

ಈ ಎರಡೂ ಭಿನ್ನ ದರ್ಶನಗಳು. ಒಂದು ಮನದ ಕತ್ತಲಲ್ಲಿ ಬೆಚ್ಚಗೆ ಮಿನುಗಿದ ದೀಪ, ಇನ್ನೊಂದು ಬುದ್ಧಿಯ ಕತ್ತಲೆಯಲ್ಲಿ ಹೊಳೆದು ಬೆಳಗಿದ ದೀಪ. ಎರಡೂ ಬೆಳಕುಗಳನ್ನುಂಡು ಇಲ್ಲಿ ಈಗ ಸ್ವಲ್ಪ ಬೆಳಕಿದೆ. ಆರದಂತೆ ಕಾಯುತ್ತ ಆ ಬೆಳಕನ್ನು ಅಕ್ಷರವಾಗಿಸುವ ನಮ್ರ ಪ್ರಯತ್ನ. ಆ ಚೇತನಗಳ ಬೆಳಕು ಸೋಂಕಿ ನನ್ನ ಚೈತನ್ಯ ಪುಳಕಿತಗೊಂಡಿದೆ.

Rating
No votes yet