ದೇವತೆಗಳ ಮಿಷನ್

ದೇವತೆಗಳ ಮಿಷನ್

ಒಮ್ಮೆ ಸ್ವರ್ಗಲೋಕದಲ್ಲಿನ ಎಲ್ಲ ದೇವತೆಗಳು ಕೈಲಾಸದ ಅಧಿಪತಿ ಶಿವನ ಬಳಿಗೆ  ಹೋದರು.  ಅವರ ಕೋರಿಕೆ ಹೀಗಿತ್ತು "ಹಿಂದೆ, ಮಹಾವಿಷ್ಣುವು ಬುದ್ಧನಾಗಿ ಅವತರಿಸಿ, ಆಧ್ಯಾತ್ಮದ ಹಾದಿಯಲ್ಲಿ ತೊಡಕಾಗಿದ್ದ ಕೆಟ್ಟ ಜನರನ್ನು ನಿವಾರಿಸಲು, ಹೊಸದೊಂದು ಧರ್ಮ (ಬುದ್ಧ) ವನ್ನು ಹುಟ್ಟುಹಾಕಿದನು.  ಆದರೆ ಈಗ ಅದರಿಂದ ಪ್ರೇರೇಪಿತರಾಗಿರುವ ಜನರು, ನಮ್ಮ ವೇದಗಳನ್ನು ತಿರಸ್ಕರಿಸುತ್ತಿದ್ದಾರೆ.  ಯಾವುದೇ ತರಹದ ಧರ್ಮ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ.  ವೇದದಲ್ಲಿರುವುದೆಲ್ಲಾ ಸುಳ್ಳು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.  ತಮ್ಮ ಹೊಟ್ಟೆಪಾಡಿಗಾಗಿ ವೈದೀಕ ಧರ್ಮವನ್ನು ಅನುಸರಿಸುತ್ತಿದ್ದಾರೆ ಎಂದು, ಇರುವ ಅಲ್ಪ ಸ್ವಲ್ಪ ಧರ್ಮ ಶ್ರದ್ಧಾಳುಗಳಿಗೆ ಕಟಕಿಯಾಡುತ್ತಿದ್ದಾರೆ.  ವೇದಗಳಲ್ಲಿರುವ ವರ್ಣ ಹಾಗೂ ಆಶ್ರಮಗಳು ಬರೀಯ ಮೂಢನಂಬಿಕೆ ಎಂದೆನ್ನುತ್ತಿದ್ದಾರೆ. ಮೂಢನಂಬಿಕೆಯಿಂದ ಕೂಡಿರುವ ಹಳೆಯ ಸಂಪ್ರದಾಯವೆಂದು ಹೀಗಳೆಯುತ್ತಾ ‘ಯಜ್ಹ’ ಎಂಬ ಶಬ್ಧ ಕೇಳಿದರೆ ಸಾಕು, ತಮ್ಮ ಕಿವಿ ಮುಚ್ಚಿಕೊಳ್ಳುತ್ತಿದ್ದಾರೆ.  ಹೀಗಾದರೆ  ವೈದೀಕ ಸಂಪ್ರದಾಯಗಳನ್ನು ಪಾಲಿಸುವ, ಸಂಧ್ಯಾವಂದನೆಯನ್ನು ಮಾಡುವ, ತರ್ಪಣವನ್ನು ಬಿಡುವ ಕೆಲಸವನ್ನು ಮಾಡುವವರ್ಯಾರು?  ನಮಗೆ ಸಲ್ಲಬೇಕಾದ ಪೂಜೆ ಪುನಸ್ಕಾರಗಳನ್ನು ಮಾಡುವವರು ಯಾರು? ಕರುಣೆಯೇ ಇಲ್ಲದ ದುಷ್ಟರಂತೆ, ಶೈವರು ಹಾಗೂ ವೈಷ್ಣವರು ತಮ್ಮ ತಮ್ಮ ಚಿನ್ಹೆಗಳನ್ನು ಧರಿಸಿದ್ದಾರೆಯೇ ಹೊರತು, ಯಾವುದೇ ರೀತಿಯ ವೈದೀಕ ಸಂಪ್ರದಾಯಗಳನ್ನು ಪಾಲಿಸುತ್ತಿಲ್ಲ.  ಕಾಪಾಲೀಕರು ಒಳ್ಳೆಯ ಜನರ ಕತ್ತನ್ನು ಕಡಿದು, ತಮ್ಮ ಆರಾಧ್ಯ ದೈವವಾದ ಭೈರವನ ಕಾಲಿಗೆ ಕಮಲವನ್ನು ಅರ್ಪಿಸುವಂತೆ ಅರ್ಪಿಸುತ್ತಿದ್ದಾರೆ! ಇಂತಹ ಹಲವಾರು ವ್ಯತಿರಿಕ್ತವಾದಂತಹ ಹುಚ್ಚು ಆರಾಧನೆಗಳನ್ನು ಆಚರಿಸುತ್ತಿದ್ದಾರೆ.  ಹಾಗಾಗಿ, ಈ ಜಗತ್ತನ್ನು ಇಂತಹವರಿಂದ ಕಾಪಾಡುವುದಕ್ಕಾಗಿ, ಎಲ್ಲರ ಉದ್ಧಾರಕ್ಕಾಗಿ ಹಾಗೂ ವೈದೀಕ ಧರ್ಮವನ್ನು ಪುನರ್ ಸ್ಥಾಪಿಸುವುದಕ್ಕಾಗಿ ಅವತರಿಸು" ಎಂದು ಬೇಡಿಕೊಂಡರು.  

 

ಇದನ್ನೆಲ್ಲಾ ತಾಳ್ಮೆಯಿಂದ ಕೇಳಿದ ಮಹಾಶಿವನು ಹೀಗಂದನು "ಮನುಷ್ಯನ ಅವತಾರವನ್ನೆತ್ತಿ ಎಲ್ಲರಿಗೂ ಒಳ್ಳೆಯದಾಗುವಂತೆ ಮಾಡುವೆನು. ಧರ್ಮವನ್ನು ಪುನರ್ ಸ್ಥಾಪಿಸಿ, ಪುನಃ ಎಲ್ಲರೂ ಧರ್ಮದ ಹಾದಿಗೆ ಬರುವಂತೆ ಮಾಡುವೆನು.  ಬ್ರಹ್ಮಸೂತ್ರ ಹಾಗೂ ವೇದಗಳ ನಿಜವಾದ ಅರ್ಥವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವೆನು.  ಮಹಾವಿಷ್ಣ್ತು ಬುದ್ಧನ ಅವತಾರವನ್ನೆತ್ತಿದ್ದಂತೆ ನಾನೂ ಕೂಡ ‘ಶಂಕರ’ ಎಂಬ ಸನ್ಯಾಸಿಯ ರೂಪದಲ್ಲಿ ನಾಲ್ಕು ಶಿಷ್ಯರೊಂದಿಗೆ, ಕತ್ತಲನ್ನು ಹೊಡೆದೋಡಿಸುವ ಸೂರ್ಯನ ಪ್ರಕಾಶದಂತೆ, ಧರ್ಮಾಂಧತೆಯಲ್ಲಿರುವ ಈ ಜನರ ಉದ್ಧಾರಕ್ಕಾಗಿ ಅವತರಿಸುವೆ.  ನೀವೆಲ್ಲರೂ ಕೂಡ ಈ ಜಗತ್ತಿನಲ್ಲಿ ಅವತರಿಸಿ, ನನಗೆ ಈ ಕಾರ್ಯದಲ್ಲಿ ನೆರವಾಗಿ" ಎಂದನು.

 

(ಭಾವಾನುವಾದದ ಪುಟ್ಟ ಪ್ರಯತ್ನ, ತಪ್ಪಿದ್ದಲ್ಲಿ ಕ್ಷಮಿಸಿ)

Rating
No votes yet

Comments