ದೇವನಹಳ್ಳಿ ಕೋಟೆ ಮೇಲೆ

ದೇವನಹಳ್ಳಿ ಕೋಟೆ ಮೇಲೆ

ಚಿತ್ರ

ದೇವನಹಳ್ಳಿ ಕೋಟೆ ( http://sampada.net/blog/%E0%B2%A6%E0%B3%87%E0%B2%B5%E0%B2%A8%E0%B2%B9%E0... ) ಬಗ್ಗೆ ನನ್ನ ವರ್ಣನೆ ಕೇಳಿದ ಮಿತ್ರರೊಬ್ಬರು, ಒಂದು ದಿನ ಬೆಳಗ್ಗೆ ಅಲ್ಲಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದರು. ಎಲ್ಲವನ್ನೂ ವಿವರಿಸಿ ಹೇಳಿ ಮುಕ್ಕಾಲು ಗಂಟೆಯ ನಂತರ ಫೋನ್ ಮಾಡಿದಾಗ, "ಕೋಟೆ ನೋಡಿಯಾಯಿತು,:) ಮಂತ್ರಿ ಮಾಲ್‌ಗೆ ಹೋಗುತ್ತಿದ್ದೇವೆ!" ಎಂದರು. ಅಷ್ಟೇ.. ಕೋಟೆ ನೋಡಲು ಅರ್ಧಗಂಟೆನೂ ಬೇಕಾಗಿಲ್ಲ.
 ನನ್ನ ಸಂಗತಿ ಬಿಡಿ- ಕೋಟೆಯನ್ನು ಹೊರಗಿನಿಂದಲೇ ಕಾಲುಗಂಟೆ ನೋಡುತ್ತಿದ್ದೆ- ಇನ್ನೂರು ವರ್ಷಕ್ಕೂ ಮೀರಿದ ಕೋಟೆಯಾದರೂ, ಮುಪ್ಪಿನ ಲವಲೇಶವೂ ಇಲ್ಲ! ಯಾವ ಏಂಗ್‌ಲ್‌ನಲ್ಲಿ ನೋಡಿದರೂ ಸೌಂದರ್ಯ ತುಂಬಿತುಳುಕುತ್ತಿದೆ. ಕೋಟೆ ಮೇಲಿನ ಚಲುವು ನೀವೇ ನೋಡುವಿರಂತೆ...
ಹೆಬ್ಬಾಗಿಲಿಂದಾಗಿ ಒಳಹೋಗುವಾಗ ಗೋಡೆಯಡಿಯಲ್ಲೇ ಸೈನಿಕರು ಉಳಿಯಲೋ/ ಮದ್ದುಗುಂಡು ಸಂಗ್ರಹಿಸಲೋ/ ಗೇಟಿನಿಂದ ಹಾದು ಹೋಗುವವರ ಎಂಟ್ರಿ ಬರೆದಿಡಲೋ ಏನೋ ಎರಡು ಕಿಂಡಿಗಳಿವೆ. ( ಚಿತ್ರ ೧ ) ಏನೆಂದು ವಿಚಾರಿಸಲು ಯಾರೂ ಸಿಗಲಿಲ್ಲ.
ಎಡಭಾಗದಿಂದ ಕೋಟೆ ಮೇಲೆ ಹೋಗುವ ದಾರಿಯಿದೆ. ದಾರಿಯಲ್ಲಿ ಮೊದಲು ಸಿಗುವುದು "ನೀರು ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ"(ಚಿತ್ರ ೨). ಕೋಟೆಗೆ ಈ ದಾರಿಯಿಂದಲೇ ನೀರು ತೆಗೆದುಕೊಂಡು ಹೋಗುತ್ತಿದ್ದುದರಿಂದ ಈ ಹೆಸರು. (ಟಿಪ್ಪು ಜನ್ಮ ಸ್ಥಳದ ಸಮೀಪ "ಕಛೇರಿ" ಆಂಜನೇಯ ದೇವಸ್ಥಾನವಿದೆ!) ಆಂಜನೇಯ ಸ್ವಾಮಿಯಲ್ಲಿ ಈ ವರ್ಷ ನೀರಿಗೆ ತೊಂದರೆಯಾಗದಿರಲಿ ಎಂದು ಬೇಡಿಕೊಂಡು ಕೋಟೆ ಮೇಲೆ ಹೋಗೋಣ.
 ಆ ಕಾಲಕ್ಕೂ ನಮ್ಮ ಕಾಲಕ್ಕೂ ಸ್ವಲ್ಪ ಹೋಲಿಕೆ ಮಾಡೋಣ- ೨೧ನೇ ಶತಮಾನದ ಮೇಸ್ತ್ರಿಗಳು ಕಟ್ಟುವ "ರಸ್ತೆ ಹಂಪ್"ಗಳೆಂಬ "ಮಿನಿಕೋಟೆ"ಗಳನ್ನೇ ನೋಡಿ. ಆಕ್ಸಿಡೆಂಟ್ ತಪ್ಪಿಸಲೆಂದು ಮಾಡುವ ಈ ಹಂಪ್‌ಗಳಿಂದಾಗಿಯೇ ಅನೇಕ ಆಕ್ಸಿಡೆಂಟ್‌ಗಳು, ಕಾರುಗಳ ಹಿಂಬದಿಗೆ ಡೆಂಟ್‌ಗಳಾಗುತ್ತಿದೆ. ಮಳೆಬಂತೆಂದರೆ ಹಂಪ್‌ನ ಇಕ್ಕೆಲಗಳಲ್ಲಿಯೂ ನೀರು ನಿಂತು ಎಲ್ಲರಿಗೂ ಕೆಸರಿನ ಅಭಿಷೇಕ.
 ಒಂದು ಜೋರಾದ ಮಳೆ ಬಂತೆಂದರೆ ಬೆಂಗಳೂರ ರಸ್ತೆಗಳು ಚರಂಡಿ, ಚರಂಡಿಗಳು ನದಿಯಾಗುತ್ತದೆ. ಪ್ರಚಂಡ ಆರ್ಕಿಟೆಕ್ಟ್/ಇಂಜಿನಿಯರ್‌ಗಳು ಕಟ್ಟಿದ ಬಿಲ್ಡಿಂಗ್‌ನ ಬೇಸ್‌ಮೆಂಟ್‌ನಲ್ಲಿ ಕಾರುಗಳು ಸ್ವಿಮ್ ಮಾಡುತ್ತಿರುತ್ತದೆ. ಅದೇ ಈ ಕೋಟೆ ನೋಡಿ- ಹೆಚ್ಚಿನ ಕಡೆ ಇಟ್ಟಿಗೆಪುಡಿ, ಸುಣ್ಣ (ಸುರ್ಕಿ) ಬಳಸಿ, ಸಾಂಪ್ರದಾಯಿಕ ವಿಧಾನದಲ್ಲಿ ಕಟ್ಟಿದ ಕೋಟೆ ಎಲ್ಲಾ ಹೊಡೆತಗಳನ್ನು ಮೆಟ್ಟಿ ನಿಂತಿದೆ.(ಚಿತ್ರ ೪) ಕೋಟೆಯ ಒಳಗೋಡೆಯ ಉದ್ದಕ್ಕೂ ಸಣ್ಣಸಣ್ಣ ಕಾಲುವೆಗಳು ಪ್ರಾಕಾರದಲ್ಲಿ ನಿಲ್ಲಬಹುದಾದ ನೀರನ್ನು ಹರಿಯುವಂತೆ ಮಾಡಿ, ಕೋಟೆ ಬಿರುಕು ಬಿಡುವುದನ್ನು ತಡೆಗಟ್ಟಿದೆ. ಕೋಟೆಗೋಡೆಯ ಸಣ್ಣ ಮದ್ದಿನಮನೆಗಳಲ್ಲಿ ಇಟ್ಟಿಗೆಗಳನ್ನು ಕೋನಾತ್ಮಕವಾಗಿ ಜೋಡಿಸಲಾಗಿದೆ. ಅಂದರೆ ಪ್ರತಿಯೊಂದು ಕೆಳಪದರದ ಮೇಲೂ ಇಟ್ಟಿಗೆಗಳನ್ನು ಅಡ್ಡವಾಗಿ ಜೋಡಿಸಲಾಗಿದೆ. ಇದೂ ಸಹ ನೀರು ಹೀರುವಿಕೆಯನ್ನು ತಪ್ಪಿಸಿ ಕಟ್ಟಡದ ಸಾಮರ್ಥ್ಯವನ್ನು ಉಳಿಸಿದೆ.
ಈಗ ಕೋಟೆ ಮೇಲಿಂದ ವೈರಿಗಳ ಮೇಲೆ ಗುಂಡು ಹಾರಿಸಲು ಮಾಡಿದ ವ್ಯವಸ್ಥೆ ನೋಡುವ-
ಕೋಟೆ ಗೋಡೆಯಲ್ಲಿ ಅಲ್ಲಲ್ಲಿ ಸಣ್ಣ ಮದ್ದಿನ ಮನೆಗಳಿವೆ. ಮದ್ದುಗುಂಡುಗಳನ್ನು ಬಂದೂಕಿಗೆ ತುಂಬಲು ಸಹಾಯವಾಗುವ ಕಟ್ಟೆ, ಗೋಡೆಯ ಹಿಂದೆ ಇದೆ. ಕೆಲ ಸೈನಿಕರು ದಿಡ್ಡಿಗೋಡೆಯಲ್ಲಿ ಮಾಡಿರುವ ಬುರುಜುಗಳಿಂದ ವೈರಿಗಳನ್ನು ಗಮನಿಸುತ್ತಿದ್ದರೆ,(೬,೭,೯) ಇನ್ನು ಕೆಲವರು ಫಿರಂಗಿಯನ್ನು ಬಳಸಿ ಗೋಡೆಯಲ್ಲಿರುವ ಕಿಂಡಿಗಳಿಂದ ವೈರಿಗಳ ಮೇಲೆ ಗುಂಡು ಹಾರಿಸುತ್ತಿದ್ದರು(ಚಿತ್ರ ೧೦,೧೨). ವೈರಿಗಳು ಸೈನಿಕರ ಕಣ್ಣು ತಪ್ಪಿಸಿ ಕೋಟೆ ನುಗ್ಗಲು ಸಾಧ್ಯವೇ ಇಲ್ಲ.
ಅಯೋಗ್ಯ ಮಂತ್ರಿಗಳ ರಕ್ಷಣೆಗೆ ಹಲವರಿರುವರು. ಅದೇ ಈ ಸುಂದರ ಐತಿಹಾಸಿಕ ಕೋಟೆಯ ರಕ್ಷಣೆಗೆ ಒಬ್ಬನಿದ್ದ! ಕೋಟೆಯ ಮುಂದೆ ಖಾಲಿ ಜಮೀನು ತುಂಬಾ ಇದೆ. ಏರ್‌ಪೋರ್ಟ್‌ಗೆ ಹೋಗಿ ಬರುವ ಪ್ರಯಾಣಿಕರಿಗೆ/ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಅಲ್ಲೊಂದು ಮಾಲ್/ಫೈವ್ ಸ್ಟಾರ್ ಹೋಟೆಲ್ ಏಳಬಹುದು. ಕೋಟೆ ಬೀಳಿಸಿ, ಮೆಟ್ರೋ ರೈಲು ಓಡಿಸಬಹುದು...
ದೇವನಹಳ್ಳಿ ಸುತ್ತಮುತ್ತಲಿನ ಮಣ್ಣು ಬಹಳ ಫಲವತ್ತಾದುದು. ಇಲ್ಲಿನ ಚಕ್ಕೋತ ಹಣ್ಣು ಜಗತ್‌ಪ್ರಸಿದ್ಧ. ಇಲ್ಲಿನ ಕೋಟೆ, ಹಳ್ಳಿ, ಮಣ್ಣು, ಚಕ್ಕೋತವನ್ನು ಉಳಿಸಬೇಕಾದುದು ಇಂದಿನ ಅಗತ್ಯ.
 BMTC ಯವರು ಬೆಂಗಳೂರು ಸುತ್ತಲು- "Hop-On, Hop-Off"   http://www.mybmtc.com/bangalore-rounds  ಬಸ್ಸುಗಳನ್ನು ಪ್ರಾರಂಭಿಸಿದ್ದಾರೆ.  It covers a route connecting about twenty landmarks of great historic, religious and scientific significance!-ಗರುಡ ಮಾಲ್, ಮಂತ್ರಿ ಮಾಲ್, ಒರಿಯನ್ ಮಾಲ್..ಗಳಿವೆ!:)-  great historic, religious and scientific significance ಇರುವ ದೇವನಹಳ್ಳಿ ಕೋಟೆ ಇಲ್ಲ :(

Rating
No votes yet

Comments