ದೇವನ ನೆನೆಯುವೆ

ದೇವನ ನೆನೆಯುವೆ

ಬೆಳಗಾಗಿ ನಾನೆದ್ದು ದೇವನ ನೆನೆಯುವೆ

ಪರಮಸಂಪದದೊಡೆಯ ತೇಜಸ್ವಿಯ |

ಭೂತಾಯಿಯಂತೆ ಮತ್ತೆ ಆಗಸದಂತೆ

ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||

ಬುದ್ಧಿಗೊಡೆಯ ಜಗದೀಶನ ನೆನೆಯುವೆ

ಕರ್ಮಫಲದಾತ ಜ್ಯೋತಿರ್ಮಯನ |

ಮಂಗಳಮಯ ಸಕಲ ಲೋಕಪ್ರಿಯ

ದೇವಾಧಿದೇವನಿಗೆ ಶರಣೆನ್ನುವೆ || ೨ ||

ನಿತ್ಯವಿಜಯಿಯಾದ ಒಡೆಯನ ನೆನೆಯುವೆ 

ಸಕಲ ಲೋಕಾಧಾರ ತೇಜಸ್ವಿಯ |

ಪಾತಕಿಕಂಟಕ ಸತ್‌ಪ್ರಕಾಶ ಈಶ

ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||

ಮನೋಧಿನಾಯಕ ದೇವನ ಬೇಡುವೆ

ಕೊಡು ಮತಿಯ ಕೊಡು ಸಕಲ ಸಂಪತ್ತಿಯ |

ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ

ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||

ಪರಮ ಬೆಳಕಿನೊಡೆಯ ದೇವನ ಬೇಡುವೆ

ಕರುಣಿಸು ರಕ್ಷೆ ಮೇಣ್ ಸಕಲಸುಖವ |

ಸಜ್ಜನರ ಸುಮತಿಯ ಪಾಲಿಸುವ ಮನವ

ನೀಡೆಂದು ಬೇಡುತ ಶರಣೆನ್ನುವೆ || ೫ ||

ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ

ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |

ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು

ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||

-ಕ.ವೆಂ.ನಾಗರಾಜ್.

****************

ಆಧಾರ: ಋಗ್ವೇದದ ಮಂತ್ರಗಳು 7.41.1ರಿಂದ 5 - ಈ ರಚನೆಗೆ ಆಧಾರವಾಗಿದೆ. ಬೆಳಗಿನ ಸಮಯದಲ್ಲಿ ಹೇಳಲಾಗುವ ಈ ಮಂತ್ರಗಳಲ್ಲಿ ದೇವರನ್ನು ಸಂಪತ್ತಿನ ಅಧಿಪತಿ, ತೇಜಸ್ವಿ, ಸರ್ವವ್ಯಾಪಿ, ಪರಮಜ್ಞಾನಿ, ದಿವ್ಯಪ್ರಕಾಶಿ, ಕರ್ಮಫಲದಾತ, ಸರ್ವಜ್ಞ, ಜಗದಂತರಾತ್ಮ, ಇತ್ಯಾದಿ ವಿಶೇಷಣಗಳಿಂದ ನೆನೆಯಲಾಗುತ್ತದೆ. ಸದ್ಬುದ್ಧಿ, ಸುಮತಿ, ಸತ್ಸಂಗ, ಉತ್ಸಮ ಸಂಪತ್ತು, ಇತ್ಯಾದಿಗಳೊಂದಿಗೆ ಉತ್ತಮ ಸತ್ಪ್ರಜೆಯನ್ನಾಗಿ ರೂಪಿಸು ಎಂಬ ಕೋರಿಕೆ ಇದರಲ್ಲಿದೆ.

Rating
No votes yet

Comments

Submitted by nageshamysore Mon, 03/10/2014 - 19:36

ಕವಿಗಳೆ, ಭಕ್ತಿಪೂರ್ಣ ಕವನ, ಸರ್ವಜ್ಞ ಚಿತ್ರದ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ' ನೆನಪಿಸಿತು ! ಧನ್ಯವಾದಗಳು, ನಾಗೇಶ ಮೈಸೂರು