ದೇವನ ನೆನೆಯುವೆ
ಬೆಳಗಾಗಿ ನಾನೆದ್ದು ದೇವನ ನೆನೆಯುವೆ
ಪರಮಸಂಪದದೊಡೆಯ ತೇಜಸ್ವಿಯ |
ಭೂತಾಯಿಯಂತೆ ಮತ್ತೆ ಆಗಸದಂತೆ
ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||
ಬುದ್ಧಿಗೊಡೆಯ ಜಗದೀಶನ ನೆನೆಯುವೆ
ಕರ್ಮಫಲದಾತ ಜ್ಯೋತಿರ್ಮಯನ |
ಮಂಗಳಮಯ ಸಕಲ ಲೋಕಪ್ರಿಯ
ದೇವಾಧಿದೇವನಿಗೆ ಶರಣೆನ್ನುವೆ || ೨ ||
ನಿತ್ಯವಿಜಯಿಯಾದ ಒಡೆಯನ ನೆನೆಯುವೆ
ಸಕಲ ಲೋಕಾಧಾರ ತೇಜಸ್ವಿಯ |
ಪಾತಕಿಕಂಟಕ ಸತ್ಪ್ರಕಾಶ ಈಶ
ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||
ಮನೋಧಿನಾಯಕ ದೇವನ ಬೇಡುವೆ
ಕೊಡು ಮತಿಯ ಕೊಡು ಸಕಲ ಸಂಪತ್ತಿಯ |
ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ
ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||
ಪರಮ ಬೆಳಕಿನೊಡೆಯ ದೇವನ ಬೇಡುವೆ
ಕರುಣಿಸು ರಕ್ಷೆ ಮೇಣ್ ಸಕಲಸುಖವ |
ಸಜ್ಜನರ ಸುಮತಿಯ ಪಾಲಿಸುವ ಮನವ
ನೀಡೆಂದು ಬೇಡುತ ಶರಣೆನ್ನುವೆ || ೫ ||
ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ
ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |
ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು
ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||
-ಕ.ವೆಂ.ನಾಗರಾಜ್.
****************
ಆಧಾರ: ಋಗ್ವೇದದ ಮಂತ್ರಗಳು 7.41.1ರಿಂದ 5 - ಈ ರಚನೆಗೆ ಆಧಾರವಾಗಿದೆ. ಬೆಳಗಿನ ಸಮಯದಲ್ಲಿ ಹೇಳಲಾಗುವ ಈ ಮಂತ್ರಗಳಲ್ಲಿ ದೇವರನ್ನು ಸಂಪತ್ತಿನ ಅಧಿಪತಿ, ತೇಜಸ್ವಿ, ಸರ್ವವ್ಯಾಪಿ, ಪರಮಜ್ಞಾನಿ, ದಿವ್ಯಪ್ರಕಾಶಿ, ಕರ್ಮಫಲದಾತ, ಸರ್ವಜ್ಞ, ಜಗದಂತರಾತ್ಮ, ಇತ್ಯಾದಿ ವಿಶೇಷಣಗಳಿಂದ ನೆನೆಯಲಾಗುತ್ತದೆ. ಸದ್ಬುದ್ಧಿ, ಸುಮತಿ, ಸತ್ಸಂಗ, ಉತ್ಸಮ ಸಂಪತ್ತು, ಇತ್ಯಾದಿಗಳೊಂದಿಗೆ ಉತ್ತಮ ಸತ್ಪ್ರಜೆಯನ್ನಾಗಿ ರೂಪಿಸು ಎಂಬ ಕೋರಿಕೆ ಇದರಲ್ಲಿದೆ.
Comments
ಉ: ದೇವನ ನೆನೆಯುವೆ
ಕವಿಗಳೆ, ಭಕ್ತಿಪೂರ್ಣ ಕವನ, ಸರ್ವಜ್ಞ ಚಿತ್ರದ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ' ನೆನಪಿಸಿತು ! ಧನ್ಯವಾದಗಳು, ನಾಗೇಶ ಮೈಸೂರು
In reply to ಉ: ದೇವನ ನೆನೆಯುವೆ by nageshamysore
ಉ: ದೇವನ ನೆನೆಯುವೆ
ಧನ್ಯವಾದ, ನಾಗೇಶರೇ. ನೀವು ಹೇಳಿದ ಗೀತೆಯ ಧಾಟಿಯನ್ನೇ ಮನಸ್ಸಿನಲ್ಲಿಟ್ಟುಕೊಂಡು ರಚಿಸಿದ್ದು ಇದು!