ದೇವರು ಮತ್ತು ನಾವು
”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ. ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇಸತ್ತಾಗ ನಿಜವಾಗಲೂ ದೇವರು ಎಲ್ಲಿದ್ದಾನೆ? ದೇವರು ಎಂದರೇನು ಚಿಂತಾಕ್ರಾಂತರಾಗುತ್ತೇವೆ...
ಚನ್ನ ವೀರ ಎಂಬ ಶರಣರೊಬ್ಬರು-
ದೇವರು ಎಲ್ಲಿಲ್ಲ? ದೇವರಲ್ಲಿ ಇದ್ದವರು ಗೆದ್ದವರು ಎಂಬ ಮಾರ್ಮಿಕ ಪ್ರಶ್ನೆಯಿಂದ ನಮ್ಮೊಳಗೇ ನಾವು ದೇವರನ್ನು ಹುಡುಕುವಂತೆ ಮಾಡುತ್ತಾರೆ.
ದೇವರು ಎಲ್ಲರಲ್ಲೂ ಇದ್ದಾನೆ. ಎಲ್ಲಾ ಕಡೆಯೊ ಇದ್ದಾನೆ ಎಂಬ ನಂಬಿಕೆಯೆ ಅನೂಚಾನವಾಗಿ ಬಂದಿದೆ. ಅಲ್ಲದೇ ದೇವರಿಲ್ಲ ಮಾನವೀಯತೆ ಎಂಬುದೇ ಸತ್ತಿದೆ. ದಯಾಮಯನಾದ ದೇವರು ಇದ್ದಿದ್ದರೆ ಯಾಕೆ ಹೀಗೆ ಸುಮ್ಮನಿರುತ್ತಿದ್ದ...? “ಯದಾ ಯದಾಹಿ ಧರ್ಮಸ್ಯ... “ಎಂಬಂತೆ ಅವನೇಕೆ ಇನ್ನೂ ಅವತರಿಸಿಲ್ಲ; ಅವನು ಹಾಗೆ ಅವತರಿಸುವುದೆಂದರೆನು? ಎಂಬುದರ ಮೇಲೇ ಸ್ವತಃ ಆತ್ಮಶೋಧನೆ, ಹೊರಗೂ ಹಿಂದು ಮುಂದಿನ ಸಂಗತಿಗಳಿಂದ ಸಂಶೋಧನೆಗಳನ್ನೇನೂ ಮಾಡಲಾರದೇನೆ ದೇವರಿಗೆ ಎಷ್ಟೋ ರೂಪಗಳು, ಅವನಿಗೆ ಎಷ್ಟೋ ಹೆಸರುಗಳು, ಹೆಂಡತಿಯರು? ಅವನು ಯಾವ ಜಾತಿಯವನು? ಯಾವ ಯಾವ ಜಾತಿಗಳಲ್ಲಿ ಅವನನ್ನು ಹೇಗೆ ಪೂಜಿಸುತ್ತಾರೆ; ಆರಾಧಿಸುತ್ತಾರೆ? ದೇವರೆಂಬುದೇ ಒಂದು ಮೊಢ ನಂಬಿಕೆ. ಅಂಥ ಮೊಢ ನಂಬಿಕೆಯಿಂದಲೇ ನಮ್ಮ ಬಡಪಾಯಿ ಜನ ಬದುಕುತ್ತಿದ್ದಾರೆ;(ನಿಜಕ್ಕೂ ದೇವರ ಹೆಸರಲ್ಲಿ ಶೋಷಣೆ ಮಾಡುವವರಿರಬಹುದು. ಆ ಮಾತು ಬೇರೆಯೆ)ಎಂಬಂತಹ ಸಂಶೋಧನಾತ್ಮಕ ಪ್ರಬಂಧಗಳನ್ನೇ ಬರೆದು ಖ್ಯಾತಿಗಳಿಸುವಂಥ ಗಣ್ಯಾತಿ ಗಣ್ಯರಿದ್ದಾರೆ!
ನಮ್ಮ ಇದೇ ಯುಗದಲ್ಲಿ ಆಗಿ ಹೋದ ಶರಣರು, ಹರಿದಾಸರು, ದಾರ್ಶನಿಕರು, ಕವಿಗಳು ಯಾವೊಂದೂ ಫಲಾಪೇಕ್ಷೇ ಇಲ್ಲದೇನೆ ಹಾಡಿ ಹೊಗಳುತ್ತಾ ನಿರ್ವ್ಯಾಜ ಪ್ರೇಮದಿಂದ ಕಂಡಂಥ ಹಾಗೂ ಜನಸಾಮಾನ್ಯರೆನಿಸಿದ ಕೋಟ್ಯಂತರ ಬಡಪಾಯಿಗಳು ತಮ್ಮ ಭವರೋಗಗಳ ನಿವಾರಣೆಗಾಗಿಯೆ ಕಂಡಂಥ ದೇವರನ್ನು ತಾವು ಕಾಣಲಾರೆವೇಕೆ ಎಂದು ಇಂಥ ಆಧುನಿಕರು ಯೋಚಿಸಲಾರರೇಕೆ? ಜನಸಾಮಾನ್ಯರ ಸಾಹಿತಿಯಾಗಿ ಎಲ್ಲರ ಮನೆ ಮಾತಾಗಿದ್ದ ಅ.ನ.ಕೃಷ್ಣರಾಯರ ನುಡಿಯೊಂದು ಹೀಗಿದೆ-
ವಿಶ್ವ ಸಿಡಿದೊಡೆಯದಂತೆ ಇನ್ನೂ ಹಿಡಿದಿಟ್ಟಿರುವುದು ಮಾನವತೆಯೊಂದೇ
ಕವಿ ಮಾನವತೆಯೆ ಪ್ರವಾದಿ.
ಅಂದರೆ, ವಿಶ್ವ ಸಿಡಿದೊಡೆದು ಛಿದ್ರವಾಗದಿರುವುದಕ್ಕೆ ಕಾರಣ ಇನ್ನೂ ಮಾನವೀಯತೆ ಉಳಿದಿರುವುದೇ ಆಗಿದೆ.(ಇಲ್ಲವೇ ಹಿರೋಷಿಮಾದಂಥ ಅಷ್ಟೇಕೆ ಅದಕ್ಕೂ ಮಿಗಿಲಾದ ಆಧುನಿಕ ತಂತ್ರಜ್ಞಾನದ ಸಹಸ್ರಾರು ಬಾಂಬುಗಳು ಒಮ್ಮೆಲೆ ಎಲ್ಲ ಕಡೆ ಬಿದ್ದಾವು).
ಕೆಲವೊಮ್ಮೆ, ಪ್ರಕೃತಿಯಿಂದಲೋ ದುಷ್ಟ ಮನುಷ್ಯರಿಂದರಲೋ ಆಗಬಾರದಂತಹ ಅನಾಹುತಗಳಿರುವುದರಿಂದಲೇ ಒಳ್ಳೆಯದಕ್ಕೇ, ಸಾತ್ವಿಕತೆಗೇ ದೈವತ್ವಕ್ಕೆ ಇನ್ನೂ ಎಲ್ಲ ಕಾಲಕ್ಕೂ ಬೆಲೆ ಇರುವುದು ಕೂಡ ಎಂಬುದನ್ನೂ ಮರೆಯಬಾರದು.
ಜಗತ್ತು ಎಂದಿಗೂ ತ್ರಿಗುಣಾತ್ಮಕ. ನನ್ನ "ಸಪ್ತಗಿರಿ ಸಂಪದ" ಪುರಾಣ ಕಥಾನಕ ನೋಡಿ.
ಇನ್ನೂ ಮುಂದುವರೆದಿದೆ ಇಲ್ಲಿ-[http://shuunyasannidhya.blogspot.com/2007/07/blog-post_27.html|ಶೂನ್ಯ ಸಾನ್ನಿಧ್ಯ]