ದೇವ್ ಬಾಗ್ ರೆಸಾರ್ಟ್ ಬಹಳ ವ್ಯವಸ್ಥಿತವಾಗಿತ್ತು !
ವಿದೇಶದಲ್ಲಿರುವ ನಮ್ಮ ಮಗ ಪ್ರಕಾಶ್ ಭಾರತಕ್ಕೆ ಬರುವುದು ಯಾವುದಾದರೂ ಹೊಸ ಊರುಗಳನ್ನು ನಮಗೆ ತೋರಿಸಿ ತಾನು ಅದರ ವಿಶೇಷತೆಗಳನ್ನು ಅರಿಯಲು. ಪ್ರತಿ ಎರಡು ವರ್ಷಕ್ಕೊಮ್ಮೆ ಬರುವ ಏರ್ಪಾಡು ಮಾಡಿಕೊಂಡಿತ್ತು. ಒಮ್ಮೆ ಕೇರಳ, ಪುಣೆ ಮೊದಲಾದ ಸ್ಥಳಗಳನ್ನು ನೋಡಿದ್ದಾಗಿತ್ತು. ಈಬಾರಿ ಕಾರವಾರದ ಕಡಲ ತೀರದ ಬಗ್ಗೆ ಟ್ರಿಪ್ ಅದ್ವೈಸರ್ ನಲ್ಲಿ ಚೆನ್ನಾಗಿ ಪ್ರಸ್ತುತಿಪಡಿಸಿದ ಲೇಖನವನ್ನು ಓದಿದಮೇಲೆ ನಮ್ಮ ಮುಂದೆ ಫೋನಿನಲ್ಲಿ ಪ್ರಸ್ತಾಪಿಸಿದಾಗ, ಈ ಬಾರಿ ಅಲ್ಲಿಗೆ ಹೋಗುವ ತೀರ್ಮಾನವಾಯಿತು. ದೇವ್ ಬಾಗ್ಒಳ್ಳೆಯ ಸ್ಥಳ. ಗೋವಾ ವಿಮಾನನಿಲ್ದಾಣಕ್ಕೆ ತಲುಪಿದಮೇಲೆ ಅಲ್ಲಿಂದ ಸುಮಾರು ೧೨ ಕಿ. ಮೀ ದೂರದಲ್ಲಿ ಈ ರೆಸಾರ್ಟ್ ಇರುವ ಜಾಗಕ್ಕೆ ನಾವು ಟ್ಯಾಕ್ಸಿಯಲ್ಲೇ ಹೋದೆವು. ವಿಮಾನ ನಿಲ್ದಾಣದಿಂದ ದೇವ್ ಬಾಗ್ ರೆಸಾರ್ಟ್ ಗೆ ನಮ್ಮನ್ನು ಕರೆದುಕೊಂಡು ಹೋಗುವ ವ್ಯಾನ್ ಕೆಟ್ಟಿದ್ದರಿಂದ ಅದು ಬರುವವರೆಗೂ ಕಾಯಲು ಇಷ್ಟವಿಲ್ಲದೆ ಟ್ಯಾಕ್ಸಿಯಲ್ಲೇ ಹೋದೆವು. ಅಲ್ಲಿಂದ ದೇವ್ ಬಾಗ್ ಗೆ ತಲುಪಲು ಮೋಟಾರ್ ಬೋಟ್ಬೊ ನಲ್ಲಿ ಹೋದೆವು. ಅಲ್ಲಿ ಬೋಟ್ ನಿಂದ ಇಳಿದಮೇಲೆ ಒಳಗೆ ೧/೧/೨ ಕಿ. ಮೀ. ಕಾಲುದಾರಿಯಲ್ಲಿ ಹೋಗಬೇಕು.
‘ಕಾಪಿಗುಡ್ಡ ರೆಸಾರ್ಟ್’
ಎತ್ತರವಾದ ಮರಗಳು ದಟ್ಟವಾದ ಹುಲ್ಲು ಮತ್ತು ಮರಗಿಡಗಳ ಮಧ್ಯೆ ಇದ್ದ ನಮ್ಮ ಕಾಟೇಜ್ ಬಹಳ ಮುದಕೊಟ್ಟಿತು. ಸುಮಾರು ೧೨ ಕಾಟ್ ಗಳು ಇದ್ದು ಇನ್ನೂ ಕೆಲವನ್ನು ಕಟ್ಟುತ್ತಿದ್ದರು. ಕರ್ನಾಟಕ ಸರ್ಕಾರದ ಈ ರೆಸಾರ್ಟ್ ಬಹಳ ಜನ ಪರ್ಯಟಕರನ್ನು ಆಕರ್ಷಿಸುತ್ತಿದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಾಯಂಕಾಲದ ತಿಂಡಿ ರಾತ್ರಿಯ ಡಿನ್ನರ್ ಎಲ್ಲವು ಬಹಳ ಚೆನ್ನಾಗಿದ್ದವು. ಹಣ್ಣುಗಳು, ಜ್ಯುಸ್, ಮತ್ತು ಬಗೆ ಬಗೆಯ ಖಾದ್ಯಗಳು ಸೊಗಸಾಗಿದ್ದವು ರುಚಿಯಾಗಿಯೂ ಮತ್ತು ಫ್ರೆಶ್ ಆಗಿದ್ದವು.
ಬದಿಯಲ್ಲಿಯೇ ಸಮುದ್ರದ ಭೋರ್ಗರೆಯುವ ನೀರಿನ ಬೀಚ್ ಇತ್ತು. ಮರಳಿನಮೇಲೆ ಕೂಡಲು ಆರಾಮಾಗಿ ಮಲಗಲು ವ್ಯವಸ್ಥೆ ಇತ್ತು. ಬಿಸಿಲು ಇದ್ದರೂ ತಂಗಾಳಿ ಹದವಾಗಿ ಬಿಸುತ್ತಿದ್ದರಿಂದ ಅಲ್ಲಿನ ವಾತಾವರಣ ಮುದಕೊಡುತ್ತಿತ್ತು. ರಾತ್ರಿ ಡಿನ್ನರ್ ಬೀಚ್ ನಲ್ಲಿಯೇ ವ್ಯವಸ್ಥೆ ಮಾಡಿದ್ದರು. ದಿನವೂ ಸೂರ್ಯೋದಯ, ಸೂರ್ಯಾಸ್ಥ ನೋಡುತ್ತಿದ್ದೆವು. ಈ ರೆಸಾರ್ಟ್ ನಲ್ಲಿ ನಾವು ನೋಡಬಹುದಾದ ಸ್ಥಳಗಳಲ್ಲಿ ಹತ್ತಿರದಲ್ಲೇ ಇದ್ದ ‘ವ್ಯೂ ಪಾಯಿಂಟ್’ ಎಂಬ ಸ್ಥಳವಿದೆ. ಎಲ್ಲಿಗೆ ಹೋಗಬೇಕಾದರೂ ಟ್ರೆಕಿಂಗ್ ಮಾಡಬಹುದು ಮತ್ತು ಕಿರಿದಾದ ಅತಿ ಎಡವಟ್ಟು ದಾರಿ ಎನ್ನಬಹುದಾದ ವಕ್ರವಾದ ದಾರಿಯಲ್ಲಿ ಜೀಪು ಮೂಲಕವೇ ಹೋಗಬೇಕು. ನಡೆಯಲು ನನ್ನಂಥವರಿಗೆ ಬಲು ಕಷ್ಟ. ಜೀಪ್ ನಲ್ಲಿ ನಾವು ನಾಲ್ಕು ಜನ ಮತ್ತು ಡ್ರೈವರ್ ಪ್ರಕಾಶ್ ಜೊತೆ ಮಧ್ಯಾನ್ಹದ ಲಂಚ್ ಮುಗಿಸಿ ಹೊರಟೆವು. ಮೊದಲು ಚಿಕ್ಕ ಸೇತುವೆ ಮುಂದೆ ದಾರಿಯೆಂದು ಕರೆಯಬಹುದಾದ ಅಂಕು ಡೊಂಕು ರಸ್ತೆ (?) ಮೈಯೆಲ್ಲಾ ಅಲುಗಾಡುವ ತರಹದ ಕಾಡುದಾರಿಯಲ್ಲಿ ಸುಮಾರು ೩ ಕಿ ಮೀ ಹೋದಮೇಲೆ ‘ಇಲ್ಲಿ ಬದಿಯಲ್ಲಿ ಇಳಿಯಿರಿ’ ಎಂದು ಪ್ರಕಾಶ್ ಹೇಳಿದ. ‘ನಾನು ಆಕಡೆ ಜೀಪ್ ಪಾರ್ಕ್ ಮಾಡುತ್ತೇನೆ. ನಿಮ್ಮಲ್ಲಿ ಯಾರು ಬೆಟ್ಟದ ಮೇಲೆ ಬರುತ್ತೀರಿ ನಿರ್ಧರಿಸಿ, ಬರಲಾಗದಿದ್ದರೆ ಹೆದರಿಕೆಯೇನಿಲ್ಲ. ಜೀಪ್ ನಲ್ಲಿ ಕೂಡಬಹುದು. ‘ಮೊದಮೊದಲು ಇಲ್ಲಿಗೆ ಆನೆಗಳ ಹಿಂಡು ಬಂದು ಬೆಳೆಗಳನ್ನು ನಾಶಮಾಡುತ್ತಿತ್ತಂತೆ. ಈಗ ಅವು ಎಲ್ಲೋ ಕಾಣಿಸುತ್ತಿಲ್ಲ ಆ ಹೆದರಿಕೆ ಇಲ್ಲ. ‘ಆ ಸಮಯದಲ್ಲಿ ನನ್ನ ಮುಖದಲ್ಲಿ ಕಂಡ ಆತಂಕವನ್ನು ಗಮನಿಸಿದ ಪ್ರಕಾಶ್ ಡ್ರೈವರ್, ‘ನೋಡಿ ಅಲ್ಲೇ ಕೆಲವು ಇಲ್ಲಿನ ರೈತರು ಕೆಲಸಮಾಡುತ್ತಿದ್ದಾರೆ’ ಎಂದಾಗ ನನಗೆ ಆಸೆಯಿದ್ದರೂ ಕಾಲುಗಳು ಸಹಕರಿಸದಿದ್ದರಿಂದ ‘ಸರಿ. ನಾನು ಇಲ್ಲೇ ಕುಳಿತಿರುತ್ತೇನೆ ನೀವು ಹೋಗಿ ಬನ್ನಿ ಹುಷಾರು ಬೇಗ ದೀಪಮೂಡಿಸುವ ಮುನ್ನ ಬನ್ನಿ’ ಎಂದಾಗ ನನ್ನ ಮಗ ಪ್ರಕಾಶ, ‘ಇಲ್ಲೆಲ್ಲಿದೆ ದೀಪ’? ಎಂದು ಹೇಳಿದಾಗ, ಎಲ್ಲರಿಗೂ ನಗು.
“ಸರಿ. ಅಪ್ಪ ನೀವು ಇಲ್ಲೇ ಕೂತಿರಿ. ನಾವು ಮುಂದೆ ಹೋಗಿ ಎಲ್ಲಾ ವರದಿ ಮಾಡುತ್ತೇವೆ. ಸೂರ್ಯ ಮುಳುಗುವ ಮೊದಲೇ ಬರುತ್ತೇವೆ. ಬ್ಯಾಟರಿ ಇದೆ. ಯೋಚ್ನೆ ಮಾಡಬೇಡಿ” ಅವರು ನಾಲ್ವರೂ ತುಂಬಾ ಹುರುಪಿನಿಂದ ಹಿಂದೆ ನೋಡದೆ ‘ವ್ಯೂ ಪಾಯಿಂಟ್’ ನೋಡಲು ಹೊರಟರು. ನಾನು ನಿಧಾನವಾಗಿ ಸಾವರಿಸಿಕೊಂಡು ‘ಜೀಪ್’ ಬಳಿ ಹೋದಾಗ, ಅದು ‘ಲಾಕ್’ ಆಗಿತ್ತು. ಒಳಗೆ ಕೂಡುವುದಿರಲಿ ಹತ್ತಿರದಲ್ಲಿ ಎಲ್ಲೂ ಕೂಡಲೂ ಜಾಗವಿರಲಿಲ್ಲ. ಮತ್ತೆ ಜೀಪ್ ಬಾಗಿಲು ತೆರೆಸೋಣವೆಂದರೆ ಆಗಲೇ ಡ್ರೈವರ್ ಪ್ರಕಾಶ್ ದಾಪುಗಾಲು ಹಾಕುತ್ತಲೇ ಅಂಕು ಡೊಂಕಿನ ಗಿಡಮರಗಳ ಸಾಲಿನಲ್ಲಿ ಎಲ್ಲೋ ಮಾಯವಾಗಿ ಹೋದರು.
ನಾನು ಅಲ್ಲಿಯೇ ಒಂದು ‘ ನೀರಿನ ಪೈಪ್ ಲೈನ್’ ಹಾಕಲು ಹವಣಿಸಿ ನೆಲದಲ್ಲಿ ಅಗಿಯುತ್ತಿದ್ದ ರೈತರಿಬ್ಬರ ಜೊತೆ ಮಾತಾಡಲು ಪ್ರಾರಂಭಿಸಿದೆ. ಅವರು ಅಲ್ಲಿಯೇ ತಲೆಮಾರುಗಳಿಂದ ವಾಸಿಸುತ್ತಿದ್ದ ಪರಿವಾರದಲ್ಲಿ ಬೆಳೆದವರು. ಜೈನರು. ಆ ಜಗದಲ್ಲಿ ಹಲವಾರು ಜೈನ ಪರಿವಾರಗಳಿವೆ. ಅವರೆಲ್ಲ ಎಲ್ಲರ ಜೊತೆ ಬೆರೆತು ಭಾಷೆ, ಉಡುಪು ಮತ್ತು ನಡವಳಿಕೆಗಳಿಂದ ಹಿಂದೂಗಳ ತರಹವೇ ಇದ್ದಾರೆ. ಒಬ್ಬರ ಹೆಸರು ಜಿತೇಂದ್ರ ಎಂದು. ಮತ್ತೊಬ್ಬರ ಹೆಸರು ತಿಳಿಯಲಿಲ್ಲ. ಮೊದಲು ಅವರಿಬ್ಬರೂ ನಾವು ಯಾವಕಡೆಯವರೆಂದು ಸೂಕ್ಷ್ಮವಾಗಿ ವಿಚಾರಿಸಿ ತಿಳಿದುಕೊಂಡರು. ನಾನು ಅವರು ಏನು ಮಾಡುತ್ತಿದ್ದಾರೆ ? ಎಂದು ತಿಳಿಯಲು ಪ್ರಶ್ನಿಸಿದ್ದಕ್ಕೆ, ಅವರು ಉತ್ತರವನ್ನು ಅತಿ ಶುದ್ಧ ಕನ್ನಡದಲ್ಲಿ ನೀಡಿದ್ದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು.
ಅವರ ಉಚ್ಚಾರಣೆ ಸ್ಪಷ್ಟ ಮತ್ತು ‘ಅಕಾರ’ ‘ಹ ಕಾರ’ಗಳು ಲೆಖ್ಖಚಾರವಾಗಿದ್ದವು. ನಮ್ಮ ಹಳೆ ಮೈಸೂರು ರಾಜ್ಯದ ರೈತಾಪಿ ಜನರಿಗೆ ಹೋಲಿಸಿದರೆ, ಅವರು ನಿಜಕ್ಕೂ ಬಹಳ ಪ್ರಬುದ್ಧರಂತೆ ಕಂಡರು. ಮೈಸೂರು ಮಂಡ್ಯ, ಮೊದಲಾದ ಸ್ಥಳೀಯ ರೈತರ ತರಹವೇ ಬೇರೆ., ಅವರು ಮುಗ್ಧರು. ತಮ್ಮ ಮೈಸೂರು ರಾಜರ ಬಗ್ಗೆ ಅಪಾರ ಗೌರವಾದರಗಳು ಇರುತ್ತವೆ. ಅದಕ್ಕೆ ತಕ್ಕ ಹಾಗೆ, ನಮ್ಮ ವೊಡೆಯರು ಕನ್ನಂಬಾಡಿ ಕಟ್ಟೆಯನ್ನು ಕಟ್ಟುವ ಮಾತನ್ನು ವಿಶ್ವೇಶ್ವರಯ್ಯನವರು ಪ್ರಸ್ತಾಪಿಸಿದಾಗ, ತಮ್ಮ ಬಳಿ ಅಷ್ಟು ದೊಡ್ಡ ಮೊತ್ತ ಇಲ್ಲದಾಗ್ಯೂ ರಾಣೀವಾಸದವರೆಲ್ಲ ತಮ್ಮ ತಮ್ಮ ಬೆಲೆಬಾಳುವ ಆಭರಣಗಳನ್ನು ಬೊಂಬಾಯಿಯ ಬ್ಯಾಂಕು ಗಳಲ್ಲಿ ಒತ್ತೆಯಿಟ್ಟು ಹಣಪೂರೈಕೆ ಮಾಡಿದ ವರದಿಗಳು ದಾಖಲಾಗಿವೆ.
ಪಕ್ಕದಲ್ಲೇ ಅತಿ ಎತ್ತರದಿಂದ ನಿಧಾನವಾಗಿ ನೀರಿನ ಚಿಕ್ಕ ಜಲಪಾತ ಬೀಳುತ್ತಿತ್ತು. ಅದರ ಬೆಳ್ಳಿಯ ಬಣ್ಣದ ನೀರಿನ ಸುರುಳಿಗಳು ಸುಂದರವಾಗಿ ಕಾಣಿಸುತ್ತಿದ್ದವು. ಅವು ಮುಂದೆ ಅಲ್ಲಿದ್ದ ದೊಡ್ಡ ದೊಡ್ಡ ಕರಿಯ ಬಂಡೆಗಳ ಮೇಲೆ ಬಿದ್ದು ತಿರುಗಿ ನೆಲಕ್ಕೆ ಬಿದ್ದು ಹಸಿರು ಹುಲ್ಲಿನ ಜೊತೆ ಸೇರಿ, ಇಳಿಜಾರಿನಲ್ಲಿ ಎಲ್ಲೋ ಮಾಯವಾದ ತರಹ ಕಾಣಿಸಿದವು. ಆ ಜನರ ಗೆಳೆಯರು ಜಲಪಾತದ ಮೇಲೆ ನಿಂತು ಏನೋ ಸನ್ನೆಮಾಡುತ್ತ ಹೇಳುತ್ತಿದ್ದ ಮಾತುಗಳು ನನಗೆ ಅರ್ಥವಾಗಲಿಲ್ಲ. ಜಲಪಾತ ನೆಲಕ್ಕೆ ಬೀಳುವ ಹಾದಿಯಲ್ಲಿ ಪುಟ್ಟ ಪ್ಲಾಸ್ಟಿಕ್ ಪೈಪ್ ಗಳನ್ನೂ ಜೋಡಿಸಿ, ನೀರಿನ ದಾರಿಯನ್ನು ಬೇರೆಕಡೆ ಅಂದರೆ, ತಮ್ಮ ಜಮೀನಿನ ಕಡೆ ತಿರುಗಿಸಲು ಅವರು ಪ್ರಯತ್ನಿಸುತ್ತಿದ್ದರು. ಈಗಿರುವ ಪೈಪಿಗೆ ಹೊಸ ಪೈಪ್ ಜೋಡಿಸಿ, ಸ್ವಲ್ಪ ನೀರು ಹರಿಯುವ ಜಾಡನ್ನು ನಿಯಂತ್ರಿಸುವುದು ಅವರ ಇಚ್ಛೆಯಾಗಿತ್ತು. ಅದರ ವಿವರಗಳನ್ನು ಅವರಿಬ್ಬರೂ ಹೇಳಿದರು. ಇದಾದ ಬಳಿಕ ನನ್ನ ಕುತೂಹಲ ಕೆರಳಿ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಹಾಕಿದೆ. ಜಿತೇಂದ್ರ ಅವರಿಬ್ಬರಲ್ಲಿ ಸ್ವಲ್ಪ ಹೆಚ್ಚು ಮಾತುಗಾರ. ಅವನು ಹೇಳಿದ ವಿವರಗಳು ಈ ಜಾಡಿನಲ್ಲಿದ್ದವು.
ಅವರಿಬ್ಬರೂ ಅಲ್ಲಿನ ರೈತರು. ಅವರು ಕಾಫಿ, ಮೆಣಸು, ಅಡಿಕೆ ಸ್ವಲ್ಪ ತೆಂಗು ಬೆಳೆಯನ್ನು ಬೆಳೆದು ಹತ್ತಿರದ ‘ಕಳಸ ಮಾರುಕಟ್ಟೆ’ಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ. ಕಳ್ಳಕಾಕರ ಭಯವಿಲ್ಲ. ಹೆಚ್ಚಿನ ಭಾಗದ ಕಾಫಿ ಬೆಳೆ ಅಲ್ಲಿನ ಕೋತಿಗಳ ಕಾಟದಿಂದ ಹಾಳಾದರೂ ತಮ್ಮ ಜೀವನ ನಿರ್ವಹಣೆಗೆ ಸಾಕಷ್ಟು ಬೆಳೆಯಿಂದ, ತಾವು ನೆಮ್ಮದಿಯಾಗಿ ಜೀವನ ಸಾಗಿಸುತ್ತಿರುವುದಾಗಿ ತಿಳಿಸಿದರು.
ಕೆಳಗೆ ತಗ್ಗಾದ ಪ್ರದೇಶದಲ್ಲಿ ಅವರ ಜಮೀನುಗಳಿವೆ.ತಾವು ಹಾಕಿದ ‘ನೀರಿನ ಪೈಪ್ ‘ಗಳಿಂದ ಸುರಿಯುವ ನೀರನ್ನು ಬಳಸಿ ಅವರು ‘ವಿದ್ಯುತ್’ ತಯಾರಿಸುತ್ತಾರಂತೆ ಎಲ್ಲರ ಹತ್ತಿರವೂ ಚಿಕ್ಕ ಮೋಟಾರ್ ಸೈಝಿನ Turbines ಗಳ ತಿರುಗುವಿಕೆಯಿಂದ ದೊರಕಬಹುದಾದ ಸುಮಾರು ೧ ಕಿ. ವ್ಯಾಟ್ ವಿದ್ಯುತ್ ಅವರ ಮನೆಯ ದೀಪ, ರೇಡಿಯೋ, ಟಿವಿ, ವಾಷಿಂಗ್ ಮೆಚಿನ್ ನಡೆಸಲು ಸಾಕಾಗುವಷ್ಟು ಇದೆ, ಎಂದು ಅವರು ಹೇಳುವಾಗ ಅವರ ಕಣ್ಣಿನಲ್ಲಿ ಹೊಳಪು ಗಮನಿಸಿದೆ !
ಅಲ್ಲಿ ವಾಸಿಸುವ ಜನ ತುಂಬಾ ಒಗ್ಗಟ್ಟು ಸೌಹಾರ್ದತೆದಿಂದ ಜೀವನ ನಿರ್ವಹಣೆ ಮಾಡುತ್ತಿರುವ ವಿಷಯ ಕೇಳಿ ಮುದವೆನಿಸಿತು. ಜಿತೇಂದ್ರ ದೂರದಲ್ಲಿ ಎತ್ತರದ ದಿಣ್ಣೆಯ ಮೇಲಿದ್ದ ತನ್ನ ಮನೆಯನ್ನು ತೋರಿಸಿ, “ ಮನೆಗೆ ಬನ್ನಿ ಚಹಾ ಕೊಡುತ್ತೇನೆ” ಎಂದು ಹೇಳಿದ.
ಜಿತೇಂದ್ರ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರು ಇಲ್ಲಿಯೇ ಹತ್ತಿರದ ಶಾಲೆಯಲ್ಲಿ ಓದಿ, ಮುಂದೆ ಕಳಸದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರಂತೆ. ತದನಂತರ ಅವರು ಬೆಂಗಳೂರಿಗೆ ಹೋಗಿ ಅಲ್ಲಿ ‘ಸಾಫ್ಟ್ ವೇರ್ ಕಂಪೆನಿ’ಯಲ್ಲಿ ಒಬ್ಬಳು ಕೆಲಸಮಾಡುತ್ತಿದ್ದಾಳೆ. ಮತ್ತೊಬ್ಬಳು ಅಕೌಂಟೆಂಟ್ ಆಗಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದಾಳೆ. ಆಕೆಯ ಗಂಡ ಪ್ರೈವೇಟ್ Company ಯೊಂದರಲ್ಲಿ ಕೆಲಸಮಾಡುತ್ತಿದ್ದಾನೆ. ಇಬ್ಬರು ಮಕ್ಕಳೂ ತಂದೆಯನ್ನು “ಬೆಂಗಳೂರಿಗೆ ಬನ್ನಿ; ಇಷ್ಟುದಿನ ಪಟ್ಟ ಕಷ್ಟ ಸಾಕು ,ಅಮ್ಮ ನೀವು ನಮ್ಮ ಮನೆಗಳಲ್ಲಿ ನಮಗೆ ಮಾರ್ಗದರ್ಶಿಗಳಾಗಿ ನೆಮ್ಮದಿಯಾಗಿರಿ “ಎನ್ನುತ್ತಾರೆ. “ಸ್ವಲ್ಪ ದಿನ ಬೆಂಗಳೂರಿನಲ್ಲಿ ತಾನು ತನ್ನ ಹೆಂಡತಿ ಹೋಗಿದ್ದರೂ, ಈ ಕಾಡಿನ ವಾತಾವರಣ ಇದರ ಸೆಳೆತ ಅವರನ್ನು ಊರಿಗೆ ಹೋಗಲು ಬಿಡುತ್ತಿಲ್ಲ” ಎನ್ನುತ್ತಾರೆ ಜಿತೇಂದ್ರ ದೋಶಿಯವರು. ಈಗ ಜಿತೇಂದ್ರ ತಮ್ಮ ಕೆಲಸದಲ್ಲಿ ದಣಿವನ್ನು ಅನುಭವಿಸುತ್ತಿದ್ದಾರೆ. ‘ಸಾಕು. ಮಕ್ಕಳ ಜೊತೆ ಇರೋಣ’ ಎಂದನ್ನಿಸುತ್ತಿದೆ, ಎಂದು ನನ್ನ ಜೊತೆ ಅವರ ಅಭಿಪ್ರಾಯವನ್ನು ಹಂಚಿಕೊಂಡರು. ಈ ತರಹದ ಮಾನಸಿಕ ಹೊಯ್ದಾಟ ಅವರದು.
ನಿಧಾನವಾಗಿ ಕತ್ತಲು ಆವರಿಸುತ್ತಾ ಬರುತ್ತಿದೆ. ಪಕ್ಷಿಗಳು ತಮ್ಮ ಗೂಡಿಗೆ ಮರಳುವ ಧ್ವನಿ, ಆಕಾಶದಲ್ಲಿ ತಿಳಿ ಕೆಂಪು ಬಣ್ಣ ಗರಿ ಕೆದರುವುದನ್ನು ಗಮನಿಸಿದೆ. ‘ಇಷ್ಟು ದೊಡ್ಡ ಕಾಡಿನಲ್ಲಿ ನಾವು ಮೂವರೇ ಅಲ್ವಾ’? ಎಂದು ದಿಗಿಲಿನ ಮುಖಮಾಡಿಕೊಂಡು ಅವರಿಬ್ಬರನ್ನು ಕೇಳಿದಾಗ, ಅವರು ‘ಏಗೂ ಭಯವಿಲ್ಲ ಮಾರಾಯ್ರೆ, ನಾವಿದೀವಲ್ಲ ಯೋಚನೆ ಮಾಡಬೇಡಿ’ ಎಂದು ನಗೆಯಾಡಿದರು. ಹಿಂದೆ ಎಂದೋ ಒಂದು ಹುಲಿ ಇಲ್ಲಿಗೆ ಬಂದು ಸೇರಿಕೊಂಡಿತ್ತು. ಒಂದೆರಡು ಆನೆಗಳೂ ಇದ್ದವು. ಈಗ ಅವಿಲ್ಲ. ಎಲ್ಲೋ ಕಾಣೆಯಾಗಿವೆ. ಎಂದು ಹೇಳುತ್ತಾ ಅವರು ನನ್ನ ಕಡೆ ನೋಡಿದಾಗ ಏನಿಲ್ಲ ಅದು ಹಳೆಯಮಾತು. ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಯನ್ನು ಕೊಡ್ಮದು ಆನೆಯನ್ನು ಹಿಡಿದು ಬೆಂಗಳೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಕೊಟ್ಟರಂತೆ. ನೀವು ಹೆದರುವ ಅಗತ್ಯವಿಲ್ಲ. ನಮಗೆ ಇದೆಲ್ಲಾ ಸಾಮಾನ್ಯ ಸ್ವಾಮಿ ಎಂದು ಮುಗುಳುನಗುತ್ತಾ ನನಗೆ ಧಯ್ರ ತುಂಬಲು ಪ್ರಯತ್ನಿಸಿದರು ಆದರೂ ಇಂತಹ ಕಗ್ಗತ್ತಿಲಿನಲ್ಲಿ ಹೂಲ ಹುಳ ಹುಪ್ಪಟೆ ಹಾವುಗಳು ಇದ್ದೇ ಇರುತ್ತವೆ. ಎಲ್ಲೆಲ್ಲಿ ನೋಡದರು, ಮರಗಳು ಪೊದೆ, ಮಣ್ಣಿನ ರಾಶಿ, ಕಲ್ಲು ಗುಡ್ಡ, ಜಾರಿಕೆಯ ನೆಲ ಪುಟ್ಟಪುಟ್ಟ ನೀರಿನ ಝರಿಗಳು. ಕಾಲಿಗೆ ಕಚ್ಚುವ ಕೆಂಜಗ, ಜಿಗಣಿ ಕಾಲಿನ ಬೆರಳಿಗೆ ಕಚ್ಚಿ ಹಿಡಿದಿದೆ. ನಿಜವಾಗಿಯವು ಭಯವಾಗುತ್ತಾ ಇತ್ತು.
ದೂರದಲ್ಲಿ ಜನರ ನಗು, ಮಾತಾಡುತ್ತಾ ಬರುವ ನಮ್ಮ ಪರಿವಾರದವರು, ಮತ್ತು ಏನೋ ಗಟ್ಟಿಯಾಗಿ ಹೇಳುತ್ತಿರುವ ನಮ್ಮ ಜೀಪ್ ಡ್ರೈವರ್ ಪ್ರಕಾಶ್ ಧ್ವನಿ, ಅಷ್ಪಷ್ಟವಾಗಿ ಕೇಳಿಸುತ್ತಿದೆ. ಅಲ್ಲಿನ ಕಟ್ಟೆಯೊಂದರ ಮೇಲೆ ನಾನು ಕುಳಿತಿದ್ದೇನೆ. ‘ನಿಮ್ಮ ಜನ ಬರುವವರೆಗೆ ನಾವಿದ್ದೇವೆ ಭಯ ಪಡುವುದು ಬೇಡ’ ಎಂದು ಜಿತೇಂದ್ರ ಮತ್ತು ಅವರ ಗೆಳೆಯ ಹೇಳಿದ ಮಾತುಗಳು ಮುಗಿಯುತ್ತಿದ್ದಂತೆ “ಅಪ್ಪಾ” ಎಂದು ನನ್ನ ಮಕ್ಕಳು ಅತಿ ಹತ್ತಿರದಲ್ಲಿ ಕೂಗಿ ಹೇಳಿದ್ದು, ನನಗೆ ತುಂಬಾ ಮುದಕೊಟ್ಟಿತು. ‘ವ್ಯೂ ಪಾಯಿಂಟ್’ (View point) ಗೆ ನೀವೂ ಬಂದಿದ್ದಾರೆ ಚೆನ್ನಾಗಿತ್ತು’, ಎಂದು ಹೇಳಿದ ನನ್ನ ಹೆಂಡತಿ, ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ ನಿಸರ್ಗರಮ್ಯ ದೃಶ್ಯಗಳನ್ನು ತೋರಿಸಿ ವಿವರಿಸಿದಾಗ, “ಅಯ್ಯೋ ಎಂಥ ಅವಕಾಶ ತಪ್ಪಿಸಿಕೊಂಡೆನಲ್ಲ ಎಂದೆನಿಸಿ ; ಜೀಪ್ ನಲ್ಲಿ ಬಾಗಿಲು ತೆರೆದಿಡಲು ನೀವು ಮರೆತಿರಿ” ಎಂದು ನಮ್ಮ ಡ್ರೈವರ್ ಗೆ ಹೇಳಲು ಮರೆಯಲಿಲ್ಲ. ಅದಕ್ಕೆ ಅವರು, “ಹೌದು ನೋಡಿ ಸರ್ ನಿಮಗೆ ತೊಂದರೆ ಮಾಡಿಬಿಟ್ಟೆ” ಎಂದು ‘ಸಾರಿ’ ಹೇಳಿದಾಗ, ನನಗೆ ಇಲ್ಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲು ನೆರವಾದ ಜಿತೇಂದ್ರ ಮತ್ತು ಗೆಳೆಯರ ಸ್ನೇಹ ಮತ್ತು ಅವರು ತಯಾರಿಸುವ ವಿದ್ಯುತ್ ಮತ್ತು ಅವರ ಜೀವನಾದರ್ಶ ಮತ್ತು ಸ್ಥರ್ಯದ ಬಗ್ಗೆ ಜೀಪಿನಲ್ಲಿ ಕುಳಿತಾಗಿನಿಂದ ‘ನಮ್ಮ ರೂಮ್’ ತಲುಪುವವರೆಗೂ ಹೇಳಿದ ಮಾತುಗಳು (ಒಂದೇ ಸಮ ಕೊರೆದ ಮಾತುಗಳು) ಮಕ್ಕಳು ಮತ್ತು ನನ್ನ ಹೆಂಡತಿಗೆ ಮುದಕೊಟ್ಟವು. (!?) ದಕ್ಷಿಣ/ಉತ್ತರ ಕನ್ನಡಿಗರ ಜೀವನ ಪ್ರೀತಿ, ಮತ್ತು ಏನಾದರೊಂದು ಹೊಸತನ್ನು ಕಂಡುಕೊಳ್ಳುವ ಪರಿ, ನನಗೆ ಅತಿಯಾದ ಹರ್ಷ ಕೊಟ್ಟಿದೆ.
ಮುಂಬಯಿನಲ್ಲಿ ದಕ್ಷಿಣ/ಉತ್ತರ ಕನ್ನಡಿಗರು ಮಾಡಿರುವ ಸಾಧನೆಗಳು ಅಷ್ಟಿಷ್ಟಲ್ಲ ! ಮುಂಬಯಿನ ೮೦% ಬ್ಯಾಂಕ್ ಗಳು ದಕ್ಷಿಣ ಕನ್ನಡದವು, ಹೋಟೆಲ್ ಉದ್ಯಮವಂತೂ ಅವರಿಲ್ಲದೆ ಸಾಧ್ಯವೇ ? ಎನ್ನುಸುವಷ್ಟು ಮೇಲ್ಮಟ್ಟದಲ್ಲಿವೆ., ರಾಜಕೀಯದಲ್ಲೂ ಅವರು ಅತಿ ಹೆಚ್ಚು ಸಾಧನೆ ಮಾಡಿದ್ದಾರೆ. ಈಬಾರಿ ಕಾರವಾರ ಮತ್ತು ಹತ್ತಿರದ ರೆಸಾರ್ಟ್ ಗಳ ಭೇಟಿ ನನಗೆ ಮತ್ತು ನನ್ನ ಪರಿವಾರದವರಿಗೆ ಹೆಚ್ಚಿನ ತೃಪ್ತಿ ಕೊಟ್ಟಿದೆ. ಆ ಸುಂದರ ಬೀಚ್ ಗಳು ಸ್ವಚ್ಛ ಪರಿಸರ, ಕಡಲಿನ ಮೊರೆತ, ಆಕರ್ಷಕ ಸೂರ್ಯೋದಯ, ಸೂರ್ಯಾಸ್ತ, ಮತ್ತು ಎಲ್ಲಕ್ಕಿಂತ ಅಲ್ಲಿನ ಜನರ ಊಟೋಪಚಾರ, ಅತಿಥಿ ಸತ್ಕಾರಗಳು, ರುಚಿ ರುಚಿಯಾದ ತಿಂಡಿ-ತಿನಸುಗಳನ್ನು ಮರೆಯಲು ಸಾಧ್ಯವೇ ?!