'ದೇಶಕಾಲ'ಕ್ಕೆ ಮೂರು ವರ್ಷ
ದೇಶ ಕಾಲ - ವಿವೇಕ್ ಶಾನಭಾಗರ ತ್ರೈಮಾಸಿಕ ಪತ್ರಿಕೆಗೆ ಮೂರುವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಸದ್ದಿಲ್ಲದೆ ಅದು ಸಾಧಿಸಿರುವುದು ಬಹಳ. ಅಲ್ಲಿ ಪ್ರಕಟವಾದ ಕತೆ, ಕವನ, ಲೇಖನ, ಪರಿಚಯಿಸಲ್ಪಟ್ಟ ಬರಹಗಾರರು, ವಿಚಾರಗಳು ವೈವಿಧ್ಯಮಯ ಎಂತೋ ಮುಂದಿನ ಸಂಚಿಕೆ ಬರುವ ಮುನ್ನಿನ ಮೂರು ತಿಂಗಳ ಕಾಲ ತಲೆಗೆ ಸಾಕಷ್ಟು ಕೆಲಸ ಕೊಡಬಲ್ಲವು ಕೂಡ ಆಗಿದ್ದವು. ಇಂಥ ಗುಣಮಟ್ಟವನ್ನು ಕಾಯ್ದುಕೊಂಡು ಬರುವ, ಅಂಥ ಬರಹಗಾರರನ್ನು, ಲೇಖನಗಳನ್ನು ಹುಡುಕಿಕೊಂಡು ಹೋಗಿ ಹೆಕ್ಕಿ ತಂದು ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು ಓದುಗರ ಕೈಗಿಡುವ ಕೆಲಸ ಸುಲಭವಲ್ಲದ್ದು. ಆದರೆ ವಿವೇಕ್ ಈ ಬಗ್ಗೆ ಮಾತನಾಡಿದ್ದೇ ಇಲ್ಲವೆನ್ನಬಹುದು. ತಮ್ಮಷ್ಟಕ್ಕೆ ಕೆಲಸ ಮಾಡುತ್ತ ಹೋಗುವುದು ಅವರ ಗುಣ.
ದೇಶಕಾಲ ಸುರುವಾದಾಗ ಕನ್ನಡದ ಉತ್ತಮ ಕತೆಗಾರ ಎಂ.ಎಸ್.ಶ್ರೀರಾಮ್ ತಮ್ಮ ಬ್ಲಾಗ್ ಕನ್ನಡವೇ ನಿತ್ಯದಲ್ಲಿ ಕನ್ನಡದ ಸಣ್ಣಪತ್ರಿಕೆಗಳ ಬಗ್ಗೆ ಬರೆದಿದ್ದರು. ಮಯೂರ(ಜೂನ್ ೨೦೦೬)ದಲ್ಲಿ ಕೂಡ ಅಂತಹುದೇ ಒಂದು ಲೇಖನವನ್ನು ಸಂಪಾದಕ ಜಿ.ಪಿ.ಬಸವರಾಜು ಬರೆದಿದ್ದರು. ಆದರೆ ಈಗ ಬರುತ್ತಿರುವ ಸಂಚಯ, ಸಂಕಲನ, ಸಂಕ್ರಮಣ, ಮಾತುಕತೆ, ಅಭಿನವ, ಕನ್ನಡ ಅಧ್ಯಯನ, ಗಾಂಧಿ ಬಜಾರ್ ಮುಂತಾದ ಇನ್ನೂ ಅನೇಕ ಸಣ್ಣಪತ್ರಿಕೆಗಳ ಕಾಣ್ಕೆ, ಸಮಸ್ಯೆಗಳ ಬಗ್ಗೆ ಹೇಳುವವರಿಲ್ಲ. ಆಸಕ್ತರಿಗೆ ಸರಿಯಾದ ಮಾಹಿತಿ ಕೂಡ ನೀಡುವವರಿಲ್ಲ. ಅವು ನಿಂತು ಹೋದರೆ, ಪುನರಾರಂಭಗೊಂಡರೆ ಸ್ವತಃ ಚಂದಾದಾರರಿಗೂ ತಿಳಿಯುವುದಿಲ್ಲ! ಯಾಕೆಂದರೆ, ಜೀವಂತ ಇರುವಾಗಲೂ ಇವು ನಿಯಮಿತ ಕಾಲಕ್ಕೆ ಮುಖ ತೋರಿಸುವುದು ಸ್ವಲ್ಪ ಅನುಮಾನವೇ! ವಾರದಾಗ ಒಂದು ಸರತಿ ಬಂದು ಹೋಗಾಂವ ಎಂದು ಖಚಿತವಾಗಿ ಹೇಳುವಂತಿಲ್ಲ!
ನಮ್ಮ ನಿಯತಕಾಲಿಕೆಗಳು, ಮಾಧ್ಯಮ ಕೂಡ ಮಾರ್ಕೆಟ್ ಇಲ್ಲದ ಯಾವುದರ ಕುರಿತೂ ಮಾತನಾಡುವ ಉತ್ಸಾಹ ತೋರಿಸುವುದಿಲ್ಲ. ಜಯಂತ ಕಾಯ್ಕಿಣಿ ಮುವ್ವತ್ತು ಕಂತುಗಳಲ್ಲಿ ನಮ್ಮ ನಾಡಿನ ಧೀಮಂತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತರ ಕುರಿತು ಈ ಟಿವಿಯಲ್ಲಿ ಒಂದು ಸ್ತುತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿಯನ್ನು ಆತನ ಪರಿಸರದಿಂದ, ಅವನ ಒಡನಾಡಿಗಳಿಂದ, ಅವನ ಸಾಹಿತ್ಯದಿಂದ, ಅವನ ದೈನಂದಿನ ಬದುಕಿನಿಂದ ಜಯಂತ ಕಟ್ಟುತ್ತ ಹೋದರು. ಅದು ಕನ್ನಡಕ್ಕಂತೂ ತೀರ ಹೊಸದಾಗಿತ್ತು. ಈ ಕಾರ್ಯಕ್ರಮದಿಂದ ಸಾಹಿತಿಯ ಅಸಾಹಿತ್ಯಿಕ ಮುಖವನ್ನು ಪರಿಚಯಿಸುತ್ತಲೇ ಆತನ ಸಾಹಿತ್ಯವನ್ನು ಜನಸಾಮಾನ್ಯರತ್ತ ಒಯ್ದವರು ಜಯಂತ. ಇದು ಸರಿಯಾದ ಪೋಷಣೆ, ಉತ್ತೇಜನವಿಲ್ಲದೆ ಮೂರೇ ಮಂದಿ ಮಹನೀಯರ ಮಟ್ಟಿಗೆ ನಿಂತು ಹೋಯಿತು. ಹೆಚ್ಚೆಂದರೆ ಅಲ್ಲಿನ ಅಳಿದುಳಿದ ನೆನಪುಗಳ ಕುರಿತು ಅವರಿಂದಲೇ ಬರೆಯಿಸಿ ಅಚ್ಚು ಹಾಕುವುದರಾಚೆ ಯಾವುದೇ ಪತ್ರಿಕೆ ಇದನ್ನೆಲ್ಲ ಗಮನಿಸಲಿಲ್ಲ. ಸಂಪಾದಕರುಗಳಿಗೆ ಬರೆದರೂ ಆ ಈಮೇಲುಗಳೇನಾದವೋ ಬಲ್ಲವರಿಲ್ಲ! ಸಂಪಾದಕರುಗಳಿಗೆ ಈ ಜಯಂತ, ವಿವೇಕಗಳೆಲ್ಲ ನೆನಪಾಗುವುದು ದೀಪಾವಳಿ ಸಂಚಿಕೆಗಳ ಹೊಣೆ ಬಿದ್ದಾಗಲೇ ಅನಿಸುತ್ತದೆ!
ಈಗಲೂ ವಿವೇಕರ ಸಂದರ್ಶನವನ್ನು ಕನ್ನಡದವರು ನಡೆಸದಿದ್ದರೂ ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಎನ್ನುವ ಸಂಸ್ಥೆಯ ತ್ರೈಮಾಸಿಕವೊಂದು ಪ್ರಕಟಿಸಿದೆ. (http://www.indiaifa.org/newsletter/July-Sep-2007-IFA-Newsletter.htm) ದೇಶಕಾಲದಲ್ಲಿ ಕಳೆದ ಹನ್ನೊಂದು ಸಂಚಿಕೆಗಳಲ್ಲಿ ಪ್ರಕಟವಾದ ಸಾಹಿತ್ಯ-ಸಂಸ್ಕೃತಿ ಕುರಿತ ಬರಹಗಳ ಒಂದು ಪುಟ್ಟ ಪಟ್ಟಿ ಇಲ್ಲಿದೆ:
ಕತೆಗಳು: ಅಬ್ದುಲ್ ರಶೀದ, ಎಸ್.ದಿವಾಕರ್, ಗೋಪಿನಾಥ ತಾತಾಚಾರ್, ಎಸ್. ಸುರೇಂದ್ರನಾಥ್, ವಿವೇಕ ಶಾನಭಾಗ, ಸಂದೀಪ ನಾಯಕ, ಮೊಗಳ್ಳಿ ಗಣೇಶ್, ಶ್ರೀನಿವಾಸ ವೈದ್ಯ(೨), ಯಶವಂತ ಚಿತ್ತಾಲ, ಪ್ರಹ್ಲಾದ ಅಗಸನಕಟ್ಟೆ, ಸಚ್ಚಿದಾನಂದ ಹೆಗಡೆ, ಜೋಗಿ, ಜಯಂತ ಕಾಯ್ಕಿಣಿ, ಅಶೋಕ ಹೆಗಡೆ(೨), ಸುನಂದಾ ಪ್ರಕಾಶ ಕಡಮೆ, ಸುಕನ್ಯಾ ಕನಾರಳ್ಳಿ, ಶ್ರೀಧರ ಬಳಗಾರ, ನಾಡಿಸೋಜ.
ಅನುವಾದಿತ ಕತೆಗಳು: ರ್ಯುನೊಸುಕೆ ಅಕುತಗವ(ಜಪಾನ್), ಶೆರ್‌ವುಡ್ ಆಂಡರ್‌ಸನ್(ಅಮೆರಿಕ), ಜಯಮೋಹನ್(ಮಲಯಾಳಂ), ಶಿ ತೈಷೆಂಗ್(ಚೀನಾ), ಮೀನಾ ಕಾಕೋಡಕರ್(ಕೊಂಕಣಿ), ಹೈನ್ರಿಚ್ ಬೋಲ್(ಜರ್ಮನ್), ಆಂಟನ್ ಚೆಕಾಫ್(ಉಕ್ರೇನ್), ಶಶಿ ದೇಶಪಾಂಡೆ(ಇಂಗ್ಲೀಷ್), ಹುವಾನ್ ರುಲ್ಫೊ(ಲ್ಯಾಟಿನ್ ಅಮೆರಿಕ), ಡಯೋನ್ ಬ್ರಾಂಡ್(ಟ್ರಿನಿಡಾಡ್), ಮೇಘನಾ ಪೇಠೆ(ಮರಾಠಿ), ಫ್ಲ್ಯಾನೆರಿ ಒಕೋನರ್(ಅಮೆರಿಕ), ಉದಯ ಪ್ರಕಾಶ(ಹಿಂದಿ), ಹುಲಿಯೋ ಕೊರ್ತಾಜಾರ್(ಅರ್ಜೆಂಟೀನಾ), ನಯ್ಯರ್ ಮಸೂದ್(ಉರ್ದು), ಸೊಮರ್‌ಸೆಟ್ ಮಾಮ್(ಇಂಗ್ಲೀಷ್), ಎಸ್.ವೇಣುಗೋಪಾಲ್(ತಮಿಳು), ಕೆಂಜಬುರೊ ಒಎ(ಜಪಾನ್).
ಸಮಯ ಪರೀಕ್ಷೆ:(ಸಂಕಿರಣ ಮಾದರಿಯ ಪ್ರಬಂಧ ಮಂಡನೆ, ಚರ್ಚೆ, ಸಂವಾದ: ದೇಶದ ವಿವಿಧ ಭಾಗದಿಂದ ಆಯಾ ರಂಗದಲ್ಲಿ ನುರಿತವರು, ಅನುಭವಿಗಳು ಮತ್ತು ಬರಹಗಾರರು ಇಲ್ಲಿ ಬರೆಯುತ್ತಾರೆ) ಈ ದೇಶ ಈ ಕಾಲದಲ್ಲಿ ನಾನು, ಧರ್ಮಸಂಕಟ- ಸೆಕ್ಯುಲರ್ ಪ್ರಭುತ್ವ ಮತ್ತು ಧಾರ್ಮಿಕ ಹಿಂಸೆ, ಹಿಂಸೆಯ ಮೀಮಾಂಸೆ, ಕನ್ನಡ ಕಾವ್ಯದ ಹೊಸ ಬೆಳೆ(ಹದಿನೇಳು ಕವಿತೆಗಳ ಕುರಿತು ಹದಿನೇಳು ಮಂದಿ), ಅನಿವಾಸಿ ಕನ್ನಡ, ರಾಜಕೀಯದ ಪತನ, ರಂಗಭೂಮಿಯ ವರ್ತಮಾನ, ದೃಶ್ಯ ಕಲೆಗಳ ಅ-ದೃಶ್ಯ, ಕೃಷಿ ಸಂಸ್ಕೃತಿಯ ಪಲ್ಲಟಗಳು, ಕನ್ನಡಕ್ಕೊಂದು ಪುಸ್ತಕನೀತಿ, ಭೂಸ್ವಾಧೀನದ ಬಿಕ್ಕಟ್ಟುಗಳು.
ಲೇಖನ : ಯು.ಆರ್.ಅನಂತಮೂರ್ತಿ, ಕೆ.ವಿ.ತಿರುಮಲೇಶ್, ನಾಗರಾಜ ವಸ್ತಾರ್‍ಎ, ಡಾ.ಬಿ.ದಾಮೋದರ ರಾವ್, ಕ್ರಿಸ್ಟಫರ್ ವುರ್ಸ್ಟ್, ರಾಘವೇಂದ್ರ ರಾವ್, ಕೆ.ವಿ.ಸುಬ್ಬಣ್ಣ, ವೈದೇಹಿ, ರೊದ್ದಂ ಶ್ರೀನಿವಾಸ, ಸುಂದರ್ ಸಾರುಕ್ಕೈ, ಡೇನಿಯಲ್ ಅಮಿಟ್, ಎ.ಆರ್. ಉಷಾದೇವಿ, ಅಕ್ಷರ ಕೆ.ವಿ., ಜಿಯಾವುದ್ದೀನ್ ಸರದಾರ್, ಶಮೀಕ್ ಬಂದೋಪಾದ್ಯಾಯ, ಅರವಿಂದ ಚೊಕ್ಕಾಡಿ, ಮನು ಚಕ್ರವರ್ತಿ, ಗಿರೀಶ್ ವಿ ವಾಘ್, ಮುರಳೀಧರ ಉಪಾಧ್ಯ, ಟಿ.ಎನ್ ಕೃಷ್ಣರಾಜು, ಫ್ರಿಟ್ಸ್ ಸ್ಟಾಲ್ ಮತ್ತಿತರ.
ಕವಿತೆಗಳು : ಪಿ.ರಾಮನ್(ಮಲಯಾಳಂ), ಮಂದಾಕ್ರಾಂತಾ ಸೇನ್(ಬಂಗಾಲಿ), ಪ್ರತಿಭಾ ನಂದಕುಮಾರ್, ಎಸ್. ಮಂಜುನಾಥ್, ಸಂಧ್ಯಾದೇವಿ, ನಾ.ಮೊಗಸಾಲೆ.
ಹೊಸ ಪುಸ್ತಕದ ಕೆಲವು ಪುಟಗಳು: ಶಿಖರಸೂರ್ಯ(ಕಂಬಾರ), ಬಿಸಿಲ ಕೋಲು(ಉಮಾರಾವ್), ಉಧೋ ಉಧೋ (ಬಾಳಾಸಾಹೇಬ), ಮಿತ್ತಬೈಲ್ ಯಮುನಕ್ಕೆ(ಡಿ.ಕೆ.ಚೌಟ), ಕಾಲಜಿಂಕೆ(ಕೆ.ಸತ್ಯನಾರಾಯಣ), ಸ್ವರಾಧಿರಾಜ ಭೀಮಸೇನ(ಅರವಿಂದ ಮುಳಗುಂದ), ದಿಗಂಬರ(ಯಶವಂತ ಚಿತ್ತಾಲ), ಅಶ್ವಮೇಧ(ಅಶೋಕ ಹೆಗಡೆ), ಮಾರ್ಕ್ವೆಜ್(ಅನುವಾದಿತ-ಕತೆಗಾರನ ಮೊದಲ ದಿನಗಳು), ಬಿಳಿಯ ಚಾದರ(ಗುರುಪ್ರಸಾದ್ ಕಾಗಿನೆಲೆ), ಕಿರೀಟ(ಮೊಗಳ್ಳಿ ಗಣೇಶ್), ಮದುವೆಯ ಆಲ್ಬಂ(ಗಿರೀಶ ಕಾರ್ನಾಡ್), ಸಂಗೀತ ದಿವ್ಯ(ದತ್ತಾತ್ರೇಯ ಸದಾಶಿವ ಗರೂಡರ ಆತ್ಮಕತೆಯ ಆಯ್ದ ಭಾಗಗಳು), ಸ್ವಯಂವರ ಲೋಕ(ಕೆ.ವಿ.ಅಕ್ಷರ), ಎನ್ನ ಭವದ ಕೇಡು(ಎಸ್ ಸುರೇಂದ್ರನಾಥ್).
ವಿಮರ್ಶೆಗೆ ಒಳಗಾದ ಬರಹಗಾರರು: ಸುನಂದಾ ಪ್ರಕಾಶ್, ಎಸ್. ಮಂಜುನಾಥ್, ಸವಿತಾ ನಾಗಭೂಷಣ, ಎಸ್ ಸುರೇಂದ್ರನಾಥ್, ಜಯಂತ ಕಾಯ್ಕಿಣಿ, ಎಸ್. ದಿವಾಕರ್, ಗೋಪಾಲಕೃಷ್ಣ ಅಡಿಗ ಮತ್ತಿತರರು.
ದೇಶ ಕಾಲ ತನ್ನ ಸೀಮಿತ ವಲಯದಲ್ಲಿ ಉಸಿರಾಡುತ್ತಿದ್ದರೂ ತನ್ನದೇ ಆದ ಗುರುತ್ವವನ್ನು ಈಗಾಗಲೇ ರೂಢಿಸಿಕೊಂಡಿದೆ. ಇದು ಇನ್ನೂ ಬಹುಕಾಲ ಕನ್ನಡದ ಸಂವೇದನೆಗಳನ್ನು ಸರಿದಾರಿಯಲ್ಲಿ ಉದ್ದೀಪಿಸುತ್ತ, ಚಿಗುರಿಸುತ್ತ ನಮ್ಮ ಅರಿವಿನ ಬಳ್ಳಿಯನ್ನು ಸದಾ ಹೊಸದರತ್ತ ಹಬ್ಬಿಸುತ್ತದೆ ಎಂದು ನಿರೀಕ್ಷಿಸಬಹುದಾಗಿದೆ.